ಕನಸುಗಣ್ಣಿನ ಕಸೂತಿ
–ಅಪರ್ಣಾ ಹೆಗಡೆ
ಮಬ್ಬುಗತ್ತಲ ಮಧ್ಯಾಹ್ನ ಕವಿದ ದಟ್ಟ ಮೋಡ
ಅಂಗಳದಲ್ಲಿ ಹನಿ ಕೊರೆದ ಕಸೂತಿ
ಅರೆಮುಚ್ಚಿದ ಕಣ್ಣಡಿಯೊಳಗೊಂದು ನೆರಳು
ನೀಲಿ ಬೆರಳು
ಕೇಸರಿ ಹೂವಿನ ಘಮ
ಹರಿಯುವ ನದಿಯ ನಾದ
ಅಂಗುಷ್ಟದಲ್ಲಿ ಮಿಂಚು
ನವಿಲುಗರಿಯೊಂದು ತುಸು ಸೋಕಿ
ಕೃಷ್ಣ ಅವನು
ಬಿಳಿಲು ಹಿಡಿದು ಜೀಕಿ ಸುತ್ತ ಸುತ್ತಿ
ಕೆಣಕು ನೋಟ ಅಣಕು ನಗು
ತಂದಿರುವನೇ ಪಾರಿಜಾತ
ದನದ ಹಿಂಡಿಲ್ಲ ಕೊಳಲ ನಾದವಿಲ್ಲ
-ದ ಗೋಪಿಲೋಲ ಕಾಡುತ್ತಾನಲ್ಲ!
ಚಾಚಿಸಿದ ನಾಲಿಗೆಯ ಮೇಲೆ
ಮುತ್ತುಗದೆಲೆಯ ತುದಿಗುಂಟ ಜಾರಿಸಿ
ಜೇನುತುಪ್ಪವ ಹನಿಸಿ
ಕಣ್ಣು ಮಿಟುಕಿಸಿ
ನಕ್ಕು ಮಾಯ!
ನೀಲಿ ಕೆಂಪಾಗಿ ಕೆಂಪು ಹಾಲ್ದಿಂಗಳಾಗಿ
ಕರೆಯಿತು ಮುರಳಿ ಮರಳಿ ಮರಳಿ
ಅಲೆಯಲೆಯ ನಡುವೆ
ಹೆರಳು ನಲಿದು ಅರಳಿ ಹರಡಿ
ಮುಂಗುರುಳ ಬಿಸಿಯುಸಿರು
ಎದೆಯ ಕದ ತಟ್ಟಿದೆ
ನೀಲ ನಿನಾದ ಬೆನ್ನ ಸ್ಪರ್ಶಿಸಿಹುದು
ಮನವರಸುತಿದೆ ಅವನ ಕನಸ
ತೆರೆಯಲೇಕೆ ಕಣ್ಣ






0 Comments