ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎದೆಯೊಳಗೊಂದು ಕೂಸು ಮಲಗಿದೆ

ಬಿದಲೋಟಿ ರಂಗನಾಥ್
ಶ್ ! ಸದ್ದು ಮಾಡಬೇಡಿ
ಎದೆಯೊಳಗೊಂದು ಕೂಸು ಮಲಗಿದೆ
ಭಾವ ಚಿತ್ತಾರ ಬಿಡಿಸುತ್ತ..
ಕತ್ತಲಕಣ್ಣಿಗೆ ಬೆಳಕು ಬಿತ್ತುವ ಚಂದ್ರನದು
ಚಾದರವಿಲ್ಲ
ಕಂಬಳಿಯಿಲ್ಲ
ಕಾಲನ ಕಣ್ಣಿಗೆ ಕಲ್ಪನೆ ಬುತ್ತಿಯ ಹಸಿವು
ನಿರಾಕಾರ ಗುರುತು
ನೊಂದು ಬೇಯುವ ಮನಸು
 
ಎದೆಯೊಳಗೇ ರಂಗೋಲಿ ಬಿಡಿಸಿ
ಬಣ್ಣ ಹಚ್ಚುವ ಏಕತಾರಿ ತಂತಿ
ರಾಗ ಬಿತ್ತರಿಸಿ ಸ್ವರವಾಗುವ ಒಲವ ಉಸಿರು
ಮೋಡದ ಮಡಿಲ ಅಪ್ಪಿ
ಭಾವದ ಕೊಂಬೆಯ ಜೀಕುತ್ತಿದೆ
 
ಎದೆಯೊಳಗಿನ ಕಚಗುಳಿ
ರಕ್ತಕೆ ಬೆರೆವಾಗ ಅದು ಮುಲುಗುಡುವ ಸದ್ದು
ಅದು  ಮಿಡಿಯಲೋಗಿ ಬೆರಳ ಅಪ್ಪುಗೆ
ಜಿಂಕೆ ಜಿಗಿತದ ಶಬ್ಧ
ನರಳುವ ಎದೆಯೊಳಗಿನ ಕೂಸು

ಉಸಿರು ಎದೆಯ ತುಂಬಿ
ನಡೆವ ದಾರಿ ಮೇಲೆ
ಆಸೆಯ ಕಾಲುಗಳು ಚಿಗುರಿ
ಬಳ್ಳಿ ಹರಡಿ ಕರುಳ ತಬ್ಬಿ
ಮಡಿಲ ಕಡಲ ಅರಸಿದೆ
 
ಕನಸಲ್ಲ ಇದು
ಕೀ ಕೊಡುವ  ಮೆದು ಗೊಂಬೆ
ಸಿಗದೆ ನೋಯಿಸುವ
ಕಾಡಿ ಬೇಡಿಸುವ
ಚಿತ್ರವಿದೆ ಚಿತ್ರವಿಲ್ಲ
ನೆರಳಿದೆ ನಿಜದ ಬೆರಗಿಲ್ಲ
ಎಲ್ಲವೂ ಇದೆ
ಏನೂ ಇಲ್ಲ
ಮಗು ಮಲಗಿದೆ
 
ಅಯ್ಯೋ
ಮಗುವೆಂದು ಹೇಗೆ ಹೇಳಲಿ
ಆಕಾರವಿಲ್ಲದ ಹೆಜ್ಜೆ ಶಬ್ಧವದು
ಮೆತ್ತನೆ ಹಾಸಿಗೆಯ ಭಾವ
ಕೊರಗುವ ಮನಸಗನ್ನಡಿ
ಜೋತು ಬಿದ್ದ ಜೋತ್ನೆಯ ಒಳ ಮನಸು
ಹೆಜ್ಜೆ ಊರಿದ ಗೆಜ್ಜೆಯ ತೂಕ
ಸದ್ದು  ಮಾಡುವ ಮುಗ್ಧ ನಗು
ಇಷ್ಟಾದರೂ ಅದು
ಪ್ರೀತಿಯೆಂಬ ಮಗುವಲ್ಲದೆ ಮತ್ತಿನ್ನೇನು
ಸುಮ್ಮನಿರಿ ಶಬ್ಧ ಮಾಡದೆ
ಎದ್ದು ಹೊರಟರೆ ದಿಕ್ಕಿಲ್ಲದ ದಾರಿ ಅದು.

‍ಲೇಖಕರು AdminS

14 August, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading