ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಡವಿ ಬಿದ್ದ ಚರಕ

ಬಿದಲೋಟಿ ರಂಗನಾಥ್

ಬೊಚ್ಚು ಬಾಯನು ಹೊತ್ತು
ಕಚ್ಚಲಾರದ ನ್ಯಾಯದ ಚರ್ಮವ
ಹೊತ್ತು ಮೀರಿದ ಕೋಲು
ಕೊನರಲಿಲ್ಲ

ಶಾಂತಿ ಮಂತ್ರದ ದಾರಿಯ ಮೇಲೆ
ಮಚ್ಚು ಕೊಡಲಿಗಳು ಮಾತಾಡಿ
ಮಡುಗಟ್ಟಿದ ದುಃಖದ ಸಂತೆಯಲಿ
ತೊಟ್ಟಬಟ್ಟೆಯ ನೇಯ್ದ ಚರಕವೇ
ಎಡವಿ ಬಿದ್ದಿದೆ

ಎತ್ತಿ ನಿಲ್ಲಿಸಿ
ಮುರಿದ ಕಾಲಿಗೆ ಪಟ್ಟನು ಹಾಕಿ
ಬಟ್ಟೆ ನೇಯುವ ಚಾಲಾಕಿ ಹುಟ್ಟಲೇ ಇಲ್ಲ !
ಎದೆಯ ಗೂಡಲಿ ವಿಲವಿಲನೇ ಒದ್ದಾಡುವ
ಸಮತೆಯ ಹಕ್ಕಿಗೆ
ಗುಟುಕು ಗುಕ್ಕು ನೀರನು ಯಾರೂ ಕುಡಿಸಲಿಲ್ಲ.

ಬಿಡಿಸಿದ ಸಂಕೋಲೆಯಲಿ
ಕರುಣೆ ಮಾತಾಡದೆ
ದೇಶ ಮುಕ್ತವಾದರೂ
ಒಳಗಿನ ಬೇಗುದಿಯು ನಿಲ್ಲದೆ
ಸುಡುತ್ತಿದೆ

ನೆತ್ತರು ಮುಕ್ಕಿದ ನೆಲಕೆ
ಪ್ರೀತಿಯ ಮೆತ್ತಿದ ನೀನು
ಜಾತಿ ಮುಕ್ತ ಭಾರತದ ಭಾವುಟ ಹಾರಿಸಲಿಲ್ಲ

ನೊಂದ ಜೀವ
ಅವಮಾನದ ಬಟ್ಟೆ ತೊಡಲಾರದೆ
ನಿಂತಿದೆ ಬೆತ್ತಲೆಯಾಗಿ ಬೀದಿಯ ಮೇಲೆ
ತೊಟ್ಟು ಕಳಚಲು ನಿಂತ ಹಣ್ಣಿನ ರೀತಿ.!

ಬೊಗಸೆ ತುಂಬಿದ ಮತ ಪ್ರತ್ಯೆಕತೆಯ ಕೂಗು
ದುಂಡುಮೇಜಿನ ಸಮ್ಮೇಳನದ ಮೇಜಿನ ಮೇಲೆ ಜಾರಿ ಪುಡಿಯಾಗಿ
ಅಂಬೇಡ್ಕರ್ ಕಂಡ ಕಣ್ಣ ಬೆಳಕಿನ
ಕನಸಿನ ಕೂಸಿಗೆ ಕತ್ತಲಾಯಿತು.

ನೀನು ನಡೆವ ಹಾದಿಯ
ಮಬ್ಬು ಬೆಳಕಿನಲಿ ಸ್ವತಂತ್ರ ಸಿಕ್ಕ ಹಕ್ಕಿಗೆ
ಬೇಲಿ ಹಾಕಿ ಬಾರ್ಡರ್ ನಿರ್ಮಿಸಲಾಗಿದೆ
ತೆರವುಗೊಳಿಸಿ
ರೆಕ್ಕೆ ಬಿಚ್ಚಿ ಹಕ್ಕಿ ಆರಿಸಬೇಕಾಗಿದೆ.!
ಪುಕ್ಕವಿಲ್ಲದ ಹಕ್ಕಿಗಳಿಗೆ
ರೆಕ್ಕೆಕಟ್ಟಬೇಕಿದೆ.

‍ಲೇಖಕರು Avadhi

4 October, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading