ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಚ್.ಎಸ್. ಸತ್ಯನಾರಾಯಣ ಓದಿದ ‘ಸೂರ್ಯನ ಚೂರುಗಳು’

ಕುಂ ವೀರಭದ್ರಪ್ಪನವ ಹೊಸ ಕೃತಿ ‘ಸೂರ್ಯನ ಚೂರುಗಳು’

ಆ ಕೃತಿಗೆ ಖ್ಯಾತ ವಿಮರ್ಶಕರಾದ ಎಚ್.ಎಸ್. ಸತ್ಯನಾರಾಯಣ ಬರೆದಿರುವ ಮುನ್ನುಡಿ ಇಲ್ಲಿದೆ-

*

‘ರವಿಯು ಮುನ್ನುಡಿಯೊಳಡಗಿರುವಂತೆ

-ಎಚ್.ಎಸ್. ಸತ್ಯನಾರಾಯಣ

*

‘ಸೂರ್ಯನ ಚೂರುಗಳು’ ಕುಂವೀಯವರ ಇದುವರೆಗಿನ ಬರಹದ ಜಾಡಿಗಿಂತ ಭಿನ್ನವೂ ವಿಶಿಷ್ಟವೂ ಆದ ಬರಹಗಳ ಕಟ್ಟು. ಕಥೆ-ಕಾದಂಬರಿ, ಆತ್ಮಕಥೆ, ಕವಿತೆ, ಜೀವನ ಚರಿತ್ರೆ, ವಿಮರ್ಶೆ, ಅನುವಾದ ಪ್ರಕಾರಗಳಲ್ಲಿ ಕೃಷಿ ಮಾಡಿದ ಬಳಿಕ ಇದೇ ಮೊದಲಬಾರಿಗೆ ಹೊಸ ಬಗೆಯ ಕೃತಿ ರಚನೆಗೆ ಕುಂವೀಯವರು ಮುಂದಾಗಿರುವುದು ವಿಶೇಷ. ಸೃಜನಶೀಲ ಲೇಖಕರಾದವರು ತಮ್ಮ ಮೂಲ ಪ್ರಕಾರದಿಂದ ಹೊರಬಂದು ಹೀಗೆ ಬೇರೆ ಬೇರೆ ಪ್ರಕಾರಗಳಿಗೆ ಪ್ರವೇಶಿಸಿ, ಮರಳಿ ಮೂಲ ಪ್ರಕಾರಕ್ಕೆ ಬರುವುದರಿಂದ ಅವರ ಸೃಜನಶಕ್ತಿಗೆ ಹೊಸ ಆಯಾಮ ಮತ್ತು ಚೈತನ್ಯಶಕ್ತಿ ಪ್ರಾಪ್ತವಾಗುವುದು ಸಹಜ. ಕುಂವೀಯವರು ಕಥನದಿಂದ ಈಚೆ ಬಂದು ವ್ಯಕ್ತಿಚಿತ್ರಗಳನ್ನು ರಚಿಸಲು ಮುಂದಾಗಿರುವುದರಿಂದ ಅವರ ಬರಹಕ್ಕೊಂದು ಲಾಲಿತ್ಯಗುಣ ದೊರೆತಂತಾಗಿದೆ.

ಪ್ರಸ್ತುತ ಕೃತಿಯು  ನಮ್ಮ ಕಾಲದ ಸಾರಸ್ವತ ಲೋಕದ ತಾರೆಗಳ ನಿಜಮುಖವನ್ನು ಅನಾವರಣಗೊಳಿಸುವ ದರ್ಪಣದಂತಿದೆ. ಕನ್ನಡದಲ್ಲಿ ಪ್ರಕಟವಾಗಿರುವ ವ್ಯಕ್ತಿಚಿತ್ರಗಳಿಗಿಂತ ಭಿನ್ನವೂ ಅನನ್ಯವೂ ಸ್ವೊಪಜ್ಞವೂ ಆದ ಬರಹಗಳಿವು.  ಎಪ್ಪತ್ತರ ದಶಕದಿಂದೀಚೆಗಿನ ಸಾಂಸ್ಕೃತಿಕ ಚಲನೆಗಳ ಹಿಂದಣ ಶಕ್ತಿ ಕೇಂದ್ರವಾಗಿದ್ದ ಜಿ.ಎಸ್. ಶಿವರುದ್ರಪ್ಪ, ಯು.ಆರ್. ಅನಂತಮೂರ್ತಿ, ಪಿ. ಲಂಕೇಶ್, ಕಂಬಾರ, ಸಿದ್ಧಲಿಂಗಯ್ಯ, ಚೆನ್ನಣ್ಣ ವಾಲೀಕಾರ, ಮಲ್ಲೇಪುರಂ ಮುಂತಾದ ದೊಡ್ಡ ಲೇಖಕರ ವ್ಯಕ್ತಿತ್ವಗಳನ್ನು ಅನನ್ಯವಾಗಿ ಹಿಡಿದಿಡುವ, ತಮ್ಮ ವ್ಯಾಪಕವಾದ ಜೀವನಾನುಭವ ಮತ್ತು ಆಳವಾದ ಅಧ್ಯಯನಗಳ ಫಲಿತದಿಂದ ಪಕ್ಷಾತೀತವಾಗಿ ಚರ್ಚಿಸುವ, ವಿಶ್ಲೇಷಿಸುವ ಪ್ರಯತ್ನವನ್ನು ಈ ಬರಹದಲ್ಲಿ ಕಾಣಬಲ್ಲೆವು. ತಮ್ಮ ಅನುಭವಗಳನ್ನು ದಾಖಲಿಸುವಾಗ ಕುಂ.ವೀ.ಯವರು ಕಾಪಾಡಿಕೊಂಡಿರುವ ಖಚಿತತೆ, ನಿರ್ದಾಕ್ಷಿಣ್ಯಪರತೆ, ನಿರ್ಭೀತಿ, ಧೈರ್ಯ ಮತ್ತು ಪ್ರಾಮಾಣಿಕತೆಗಳು ಈ ಬರಹಗಳ ಹಿಂದಿರುವ ದೊಡ್ಡಶಕ್ತಿ. ಸತ್ಯ ನಿಷ್ಠುರತೆಗಳು ಮೈದುಂಬಿಕೊಂಡಿರುವ ಇಲ್ಲಿನ ಚಿತ್ರಗಳಲ್ಲಿ ದೊಡ್ಡವರೆನ್ನಿಸಿಕೊಂಡವರ ಸಣ್ಣತನಗಳು, ಪ್ರತಿಭೆಯನ್ನು ಸಹಿಸದ ಹೊಟ್ಟೆಕಿಚ್ಚು, ಅವಜ್ಞತೆಯ ಜಾಣತನ, ಅಸಹಿಷ್ಣುತೆ, ಅವಕಾಶವಾದಿತನ ಮುಂತಾದ ಗುಣಗಳು ಮುನ್ನೆಲೆಗೆ ಬಂದು, ನಮ್ಮ ಸಾರಸ್ವತ ಲೋಕದ ಅನೇಕ ತಾರೆಗಳ ಬಣ್ಣ ಕಳಚುತ್ತವೆ. ಹೀಗೆ ಮಾಡುವಾಗ ಆಯಾ ಲೇಖಕರ ಬರಹದ ಶಕ್ತಿಯನ್ನು ಮೆಚ್ಚುವ ಉದಾರತೆಯನ್ನು ಲೇಖಕರು  ಕಾಪಾಡಿಕೊಂಡಿರುವುದು ಗಮನಾರ್ಹ.

ಇಪ್ಪತ್ತನೆಯ ಶತಮಾನದ ಕೊನೆಯ ಮೂರು ದಶಕಗಳಿಂದ ಮೊದಲುಗೊಳ್ಳುವ ಈ ಬರಹಗಳು ಅಗೋಚರವಾಗಿರುವ ಹಲವು ಸಂಗತಿಗಳತ್ತ ಬೆಳಕು ಬೀರುತ್ತಲೇ ಲೇಖಕರ ವೈಯಕ್ತಿಕ ಬದುಕಿನ ಚಿತ್ರಗಳನ್ನೂ ಕಾಣಿಸುತ್ತ ಸಾಗುತ್ತದೆ. ಹುಲಿಯ ಹಾಗೆ ಇದ್ದ, ಹುಲಿಯಂತೆ ಬದುಕಿದ ಅಪ್ಪನ ಚಿತ್ರವನ್ನು ಬರೆಯುವಾಗ ಕುಂವೀಯವರು ನಿಜವಾದ ಚಿತ್ರ ಕಲಾವಿದರಾಗಿದ್ದಾರೆ. ಜೈಲಿನಲ್ಲಿದ್ದ ಜೀವಾವಧಿ ಶಿಕ್ಷೆಯನುಭವಿಸುತ್ತಿದ್ದ ಖೈದಿಯ ನೆನಪಿನಲ್ಲಿ ಬರುವ ಅಪ್ಪ ಕುಂಬಾರ ಹಾಲಪ್ಪನವರದು ಎಲ್ಲ ಅರ್ಥದಲ್ಲಿಯೂ ಅತ್ಯಂತ ವರ್ಣರಂಜಿತವಾದ ವ್ಯಕ್ತಿತ್ವ. ಈ ಅಪ್ಪನೆಂಬ ಆಗಸವೇ ಲೇಖಕರ ಬದುಕಿನುದ್ದಕ್ಕೂ ಆವರಿಸಿದ ಹೀರೋ! ಮಗ ತಪ್ಪು ಲೆಕ್ಕ ಮಾಡಿದಾಗ ಮೇಸ್ಟ್ರಿಗೆ ಹೇಳಿ ಮಗನನ್ನು ಒತ್ತಾಯಪೂರ್ವಕವಾಗಿ ಫೇಲು ಮಾಡಿಸಿದ ಬಹುಶಃ ಜಗತ್ತಿನ ಮೊದಲ ತಂದೆ ಹಾಲಪ್ಪನವರಿರಬೇಕು. ಈ ತಂದೆಯ ಬಗ್ಗೆ ಬರೆಯುವಾಗ ಲೇಖಕರ ಹೃದಯ ತುಂಬಿ ಬಂದಿದೆ. ಮೆಚ್ಚುಗೆ-ಅಭಿಮಾನಗಳು ಈ ಲೇಖನದ ಹಿಂದಿರುವ ಸ್ಥಾಯಿಭಾವಗಳು. ಕುಂ.ವೀಯವರ ಬದುಕಿನಲ್ಲಿ ಅನ್ನದೇವರಂತೆ ಬಂದು ಕಾಪಾಡಿದ ‘ದುರುಗ್ಯಾ ನಾಯಕ’ ಎಂಬ ಅತಿ ಸಾಮಾನ್ಯ ಜೀವಿಯ ಚಿತ್ರಣವಂತೂ ಉಳಿದೆಲ್ಲ ಮಹಾತಾರೆಯರ ಚಿತ್ರಗಳನ್ನು ಮಸುಕಾಗಿಸುವಂತೆ ಬೆಳಗಿದೆ. ಎಷ್ಟೋ ವರುಷಗಳ ಹಿಂದೆ ಅನ್ನದ ಆಸರೆಯೊದಗಿಸಿದ್ದ ಈ ವೃದ್ಧನನ್ನು ಅಚಾನಕ್ಕಾಗಿ ಭೇಟಿಯಾದಾಗ ತೋರುವ ಕೃತಜ್ಞತಾ ಭಾವ ಅನುಕರಣೀಯವಾದುದು. ಮಾಡಿದ ಉಪಕಾರವನ್ನು ಮರೆತ ಕೃತಘ್ನರಿಗೆ ಕುಂವೀಯವರ ಈ ನಡೆವಳಿಕೆಯೊಂದು ಪಾಠದಂತಿದೆ. ಮಾತ್ರವಲ್ಲ, ಲೇಖಕರು ಬದುಕಿನ ಈ ಬಗೆಯ ಅನುಭವಗಳಿಗೆ ಮುಖಾಮುಖಿಯಾಗುವ ಬಗೆ ಮತ್ತು ಅದನ್ನು ಕಟ್ಟಿಕೊಡುವ ಕ್ರಮದಲ್ಲಿ ಓದುಗರ ಭಾವಲೋಕವನ್ನು ಜಾಗೃತಗೊಳಿಸುವ, ಆ ಮೂಲಕ ಹೊಸ ಎಚ್ಚರವೊಂದನ್ನು ಮೂಡಿಸುವ ಬಗೆ ನಮ್ಮ ಗಮನ ಸೆಳೆಯುತ್ತದೆ.

 ಈ ಕೃತಿಯಲ್ಲಿ ನಮ್ಮ ಮನವನ್ನು ಕ್ಷಣಕಾಲ ಕಲಕಿ ಬಿಡುವ, ಮತ್ತೆ ಮತ್ತೆ ಕಾಡುವ ಪ್ರಸಂಗವೊಂದಿದೆ. ಕನ್ನಡ ರಂಗಭೂಮಿಯಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ರಂಗಭೂಮಿ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರಾದ ಪಿ.ಬಿ. ದುತ್ತರಗಿಯವರು ಒಂದು ಹೊತ್ತಿನ ಊಟಕ್ಕಾಗಿ ಪೇಚಾಡುವ ಪರಿಸ್ಥಿತಿ. ರಂಗಭೂಮಿಯ ಸಾರ್ವಭೌಮನಂತಿದ್ದ ಈ ಹಿರಿಯ ಜೀವ ಲೇಖಕರನ್ನರಸಿ ಬಂದು ಊಟ ಕೊಡಿಸುವಂತೆ ಬೇಡುವುದು, ಅವರ ಆ ಸ್ಥಿತಿಗೆ ಕಾರಣರಾದ 'ದೊಡ್ಡವರು' ಎನಿಸಿಕೊಂಡವರ ಸಣ್ಣತನ, ಮರಳಿ ಬದುಕನ್ನು ನೇರ್ಪಡಿಸಿಕೊಳ್ಳಲು ಆ ಹಿರಿಯಜೀವ ಪಟ್ಟ ಪಾಡನ್ನು ಕುಂ ವೀಯವರು ಮನೋಜ್ಞವಾಗಿ ಚಿತ್ರಿಸಿದ್ದಾರೆ. ದುತ್ತರಗಿಯವರೊಡನಿನ ಅವರ ಒಡನಾಟ-ಬಾಂಧವ್ಯ ಕರುಳಬಳ್ಳಿಯ ಸಂಬಂಧವನ್ನು ಮೀರಿದ್ದು. ನಮ್ಮ ಸಾಂಸ್ಕೃತಿಕ ಲೋಕದೊಡನೆ ಕುಂವೀ ಸಾಧಿಸಿಕೊಂಡಿರುವ ಸಾತತ್ಯಕ್ಕೆ ದುತ್ತರಗಿಯವರ ಬಗೆಗಿನ ಲೇಖನವು ಉತ್ತಮ ನಿದರ್ಶನವಾಗಿದೆ.

  ಎಷ್ಟೋ ಜನರು ನಮ್ಮ ಬದುಕಿನ ಪಯಣದಲ್ಲಿ ಸ್ನೇಹ‌ದ ಪಾಲು ಪಡೆಯುತ್ತಾರೆ. ಅವರಲ್ಲಿ ಕೆಲವರನ್ನು ಅದೆಷ್ಟು ಸ್ನೇಹದಿಂದ ಕಾಣುತ್ತಿರುತ್ತೇವೆಂದರೆ, ಅವರ ಎಲ್ಲ ಅವಗುಣಗಳನ್ನೂ ತಾಳಿಕೊಂಡು ಸ್ನೇಹ ತಂತು ಬೆಸೆದಿರುತ್ತದೆ. ವ್ಯಕ್ತಿಯ ದೌರ್ಬಲ್ಯಗಳ ಸಹಿತವಾಗಿಯೇ ಆತನನ್ನು ಸ್ವೀಕರಿಸುವ ಶಕ್ತಿ ನಿಜವಾದ ಪ್ರೀತಿಗಿರುತ್ತದೆ ಎಂಬ ಮಾತಿಗೆ ಪೂರಕವಾಗಿ 'ಮಾಬಲಿ ಎಂಬ ನನ್ನ ಪಾಲಿನ ಅವಧೂತ' ಎಂಬ ಲೇಖನವಿಲ್ಲಿದೆ. ಅಸಹ್ಯಗಳನ್ನು ಸಹ್ಯವಾಗಿಸಿಕೊಳ್ಳುತ್ತಿದ್ದ, ಬೈಗುಳಗಳನ್ನೇ ರೂಪಕವಾಗಿಸಿಕೊಳ್ಳುತ್ತಿದ್ದ ಈ ಮಾಬಲಿ ಎಂಬ ಗೆಳೆಯ ಲೇಖಕರ ಪಾಲಿಗೆ ದೊಡ್ಡ ವಿಸ್ಮಯ! ಇವರ ಪಾಲಿಗೆ ಆತನೇ ನೀಷೇ! ಸೇಂಟ್ ಜೇನ್ ಸಾರ್ತ್ರೆಗೆ ಹೇಗೋ ಹಾಗೇ ಕುಂವೀಗೆ ಮಾಬಲಿ. 'ಮದುವೆಗೂ ಮೊದಲು ಪರಸ್ತ್ರೀ ಸಹವಾಸ ಮಾಡು' ಎಂದು ಬೋಧಿಸಿದ ಆ ಪರಮಜ್ಞಾನಿಯ ಅವಾಂತರಗಳನ್ನು ಕುಂವೀ ಮನಸ್ಸು ಮಾಡಿದರೆ ಕಾದಂಬರಿಯಾಗಿಸಬಲ್ಲರು. ಅತ್ಯಂತ ಪ್ರತಿಭಾವಂತ ಪತ್ರಕರ್ತರಾಗಿ ಎತ್ತರಕ್ಕೆ ಬೆಳೆಯಬಹುದಾಗಿದ್ದ ಈ ವ್ಯಕ್ತಿ ತನ್ನ ವಿಲಕ್ಷಣ ವಿಕ್ಷಿಪ್ತ ಗುಣದಿಂದಾಗಿ ಅವಸಾನ ಹೊಂದಿದ, ಕೊಳೆತು ನಾರುತ್ತಿದ್ದ ಸ್ಥಿತಿಗೆ ತಲುಪಿದ ಬಗೆಯನ್ನು ಸ್ನೇಹ-ಗೌರವದ ಅಂತರವಿಟ್ಟುಕೊಂಡೇ ಕುಂವೀಯವರು ದಾಖಲಿಸಿದ್ದಾರೆ.

ಈ ಕೃತಿಯಲ್ಲಿ ಅನೇಕ ಹಿರಿಯ ಲೇಖಕರ ಸೋಗಲಾಡಿತನವನ್ನು ಬಿಚ್ಚಿಡುವ ಕುಂವೀಯವರು ಎಲ್ಲಿಯೂ ತಮ್ಮ ವ್ಯಂಗ್ಯ, ವಿಡಂಬನೆ, ವಿನೋದ ಶೈಲಿಯನ್ನು ಬಿಟ್ಟುಕೊಟ್ಟಿಲ್ಲ. ಕುವೆಂಪು ಅವರ ‘ದರುಶ’ನದ ಸನ್ನಿವೇಶ, ಶಿವರುದ್ರಪ್ಪನವರ ಕಾರ್ ಡ್ರೈವಿಂಗ್, ಹೆಸರಿನಿಂದ ಸಿದ್ಧಲಿಂಗಯ್ಯನವರು ಲಿಂಗಾಯತರಿರಬಹುದೆಂದು ಭಾವಿಸಿದ ಪ್ರಸಂಗದ ಪೇಚಾಟಗಳನ್ನು ಓದಿದವರು ನಗದಿರಲು ಸಾಧ್ಯವಾಗದು. ನಮ್ಮ ನಡುವಿನ ಸಂಸ್ಕೃತ-ಕನ್ನಡ ಭಾಷೆಗಳ ಪಾಂಡಿತ್ಯದ ಗೊಮ್ಮಟರಂತಿರುವ ಮಲ್ಲೇಪುರಂ ಜಿ. ವೆಂಕಟೇಶ್ ಅವರ ಬಗೆಗಿನ ಬರಹವಂತೂ ಅತ್ಯಂತ ಸೊಗಸಾದ ಲೇಖನ. ವಿದ್ಯಾರ್ಥಿ ದೆಸೆಯಿಂದಲೂ ಮಲ್ಲೇಪುರಂ ಅವರ ವ್ಯಕ್ತಿತ್ವದ ಹಲವು ಮಾದರಿಗಳನ್ನು ಹತ್ತಿರದಿಂದ ಬಲ್ಲ ಕುಂ ವೀಯವರು ತಮ್ಮ ನೆನಪುಗಳನ್ನು ದಾಖಲಿಸಿರುವ ಪರಿ ಅನನ್ಯವಾಗಿದೆ. ಹೊಟ್ಟೆಪಾಡಿಗಾಗಿ ಸಂಸ್ಕೃತವನ್ನು ಮುಖಾಬಿಲ್ಲೆ ಮಾಡಿಕೊಂಡು ಹಳ್ಳಿಯ ಜನರನ್ನು ಯಾಮಾರಿಸುತ್ತಿದ್ದ ಬಗೆ ನಗೆ ತರಿಸಬಹುದಾದರೂ ಆ ದಿನಗಳಲ್ಲಿ ಮಲ್ಲೇಪುರಂ ಅವರ ಆರ್ಥಿಕ ಸ್ಥಿತಿಗತಿಗಳು ಅಂತಹ ಅನಿವಾರ್ಯ ಸಂದರ್ಭಗಳನ್ನು ಸೃಷ್ಟಿಸಿರುವ ಬಗೆಗೆ ಕುಂವೀಯವರಲ್ಲಿ ಅನುಪಮವಾದ ಸಹಾನುಭೂತಿ ಮಡುಗಟ್ಟಿದೆ. ಮಲ್ಲೇಪುರಂ ಅವರ ಸ್ಕಾಲರ್‌ಶಿಪ್ ಬಗೆಗೆ ಅಪಾರವಾದ ಗೌರವವಿಟ್ಟುಕೊಂಡೇ ಆಪ್ತವಾಗಿ ಅವರ ವ್ಯಕ್ತಿತ್ವದ ನೀಲನಕಾಶೆಯೊಂದನ್ನು ಓದುಗರಿಗೆ ಒದಗಿಸುವಲ್ಲಿ ಕುಂವೀಯವರು ಸಫಲರಾಗಿದ್ದಾರೆ. ಇಷ್ಟೇ ಆಕರ್ಷಕವಾಗಿ ಚಿತ್ರಣಗೊಂಡಿರುವ ಮತ್ತೋರ್ವರೆಂದರೆ ಕವಿ ಚೆನ್ನಣ್ಣ ವಾಲೀಕಾರ. ವಾಲೀಕಾರರ ಅಶಿಸ್ತಿನ ಬದುಕು, ಮಹಾ ಹಸಿವು, ಕಾಸು ಖರ್ಚು ಮಾಡಲೊಪ್ಪದ ಕೃಪಣತೆ ಮುಂತಾದವುಗಳ ಜೊತೆಜೊತೆಯಲ್ಲೇ ಅವರ ಸಾಮಾಜಿಕ ಕಾಳಜಿಯನ್ನು ಮುನ್ನೆಲೆಗೆ ತರುವ ಲೇಖಕರು, ವೇಶ್ಯೆಯರ ಬಗ್ಗೆ ಬರೆಯಲು ವಸ್ತುವನ್ನರಸಿ, ಅವರ ಸಂದರ್ಶನಕ್ಕೆ ತೆರಳಿ, ಅವರಿಂದ ತಪ್ಪಿಸಿಕೊಂಡು ಬಂದ ಸಂದರ್ಭವನ್ನು ವಿನೋದ-ವಿಷಾದಗಳು ಬೆರೆತ ವಿಡಂಬನೆಯೊಂದಿಗೆ ಚಿತ್ರಿಸಿದ್ದಾರೆ. ಚೆನ್ನಣ್ಣನವರು ತಮ್ಮ ಕೃತಿಗಳಿಗಿಡುತ್ತಿದ್ದ ಮೈಲಿಯುದ್ದದ ಶೀರ್ಷಿಕೆಗಳು, ಅವರ ಮಹತ್ತ್ವಾಕಾಂಕ್ಷೆಯ ಕೃತಿ ‘ವ್ಯೋಮಾ ವ್ಯೋಮ’ ದ ಬಗೆಗಿನ ನಿಲುವು, ಜಗತ್ತಿನಲ್ಲಿರುವವರನ್ನೆಲ್ಲ ತಮ್ಮ, ತಂಗಿ ಎಂದು ಮಹಾಪ್ರಾಣೋಚ್ಚಾರದಲ್ಲಿ ಸಂಬೋಧಿಸುತ್ತಿದ್ದ ಬಗೆ -ಎಲ್ಲವನ್ನೂ ಕುಂವೀಯವರು ಕಾಣಿಸಿರುವ ಬಗೆ ಸೊಗಸಾಗಿದೆ. ಅಗ್ರಹಾರ ಕೃಷ್ಣಮೂರ್ತಿಯವರು ದೆಹಲಿ ಕೇಂದ್ರಿತವಾಗಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯವ್ಯಾಪ್ತಿಯನ್ನು ಬೆಂಗಳೂರಿಗೆ ತಂದ, ಗೋಷ್ಠಿಗಳನ್ನು ಕೊಟ್ಟೂರಿನಂತಹ ಪುಟ್ಟ ಪಟ್ಟಣದವರೆಗೆ ವಿಸ್ತರಿಸಿದ ಬಗ್ಗೆ ತುಂಬು ಹೃದಯದಿಂದ ಮೆಚ್ಚಿ ಕುಂವೀ ಅಗ್ರಹಾರ ಅವರ ಕಾರ್ಯವೈಖರಿ, ಕರ್ತೃತ್ವಶಕ್ತಿಗಳನ್ನು ದಾಖಲಿಸಿದ್ದಾರೆ. ಈ ಹೊತ್ತು ನಮ್ಮ ಸಾರಸ್ವತ ಲೋಕವನ್ನು ಆಳುತ್ತಿರುವ ‘ಪ್ರಶಸ್ತಿ’ಗಳನ್ನು ಪಡೆದುಕೊಳ್ಳುವ, ಹೊಡೆದುಕೊಳ್ಳುವ ಮತ್ತು ಕೊಡುವವರ ‘ರಾಜಕಾರಣ’ ನಡೆಯನ್ನು ಮುಲಾಜಿಲ್ಲದೆ ಬೆತ್ತಲೆಗೊಳಿಸುವಾಗ ಕುಂವೀಯವರಿಗೆ ಮಾತ್ರ ಸಾಧ್ಯವಾಗಬಹುದಾದ ದಿಟ್ಟತನವನ್ನು ಈ ಕೃತಿಯಲ್ಲಿ ನಾವು ಮನಗಾಣಬಹುದು. ವಚನ ಸಾಹಿತ್ಯದ ಸತ್ವದ ಬಗ್ಗೆ ಸೊಲ್ಲೆತ್ತದ ಅನಂತಮೂರ್ತಿಯವರು ಕರ್ನಾಟಕ ಸರ್ಕಾರ ಕೊಡಮಾಡುವ ಬಸವಶ್ರೀ ಪ್ರಶಸ್ತಿಯನ್ನು ಪಡೆದ ಅನೈತಿಕತೆಯಿಂದ ಮೊದಲ್ಗೊಂಡು ಜ್ಞಾನಪೀಠ, ಕೇಂದ್ರ ಸಾಹಿತ್ಯ ಅಕಾಡೆಮಿಗಳಂತಹ ಮಹತ್ತ್ವದ ಪ್ರಶಸ್ತಿಗಳು ತೀರ್ಮಾನವಾಗುವ ಹಿಂದಿನ ರಾಜಕೀಯಗಳವರೆಗೆ ಈ ಕೃತಿಯ ಹರಹಿದೆ. ಪ್ರಶಸ್ತಿಗಳ ಹಪಾಹಪಿಯನ್ನು ತೊರೆದು, ತಮ್ಮ ಪಾಡಿಗೆ ತಾವು ಬೇಕೆನಿಸಿದ್ದನ್ನು ಬರೆದುಕೊಂಡಿರುವುದು ಹಿತಕರವೆಂಬ ಸಂದೇಶವನ್ನು ನಮ್ಮ ಹೊಸ ತಲೆಮಾರಿನ ಬರಹಗಾರರಿಗೆ ಪರೋಕ್ಷವಾಗಿ ಈ ಕೃತಿ ದಾಟಿಸುತ್ತದೆ.

ಸ್ವಾನುಭವ ಮತ್ತು ವೈನೋದಿಕ ದರ್ಶನದೊಂದಿಗೆ ವ್ಯಂಗ್ಯವನ್ನು ಮಿಳಿತಗೊಳಿಸಿಕೊಂಡು ರಚಿತಗೊಂಡಿರುವ ಇಲ್ಲಿನ ವ್ಯಕ್ತಿಚಿತ್ರಗಳು ಕನ್ನಡ ಸಾಹಿತ್ಯದಲ್ಲಿ ಅನನ್ಯ ಸ್ಥಾನವನ್ನು ಹೊಂದಿವೆ. ಇವು ಸಾಮಾನ್ಯ ವ್ಯಕ್ತಿಚಿತ್ರಗಳ ಕ್ಯಾರಿಕೇಚರ್ ಸ್ವರೂಪಕ್ಕಿಂತ ಭಿನ್ನವಾಗಿವೆ. ವ್ಯಕ್ತಿತ್ವದ ಮೇಲ್ಮೈ ಗುಣಗಳನ್ನು ಮಾತ್ರವಲ್ಲದೆ ಅದರ ಮೂಲಗುಣವನ್ನು ಶೋಧಿಸುವಲ್ಲಿ ಈ ಬರಹಗಳು ವಿಶೇಷ ಸಫಲತೆ ಸಾಧಿಸಿವೆ. ಇಲ್ಲಿನ ಲೇಖನಗಳು ವ್ಯಕ್ತಿಯ ಒಳಗಿನ ಸ್ವಭಾವ, ಚೇತನ ಮತ್ತು ಜೀವನಾನುಭವವನ್ನು ಆಳವಾಗಿ ಸ್ಪರ್ಶಿಸುತ್ತವೆ. ಸಾಮಾನ್ಯ ಮತ್ತು ಅಸಾಮಾನ್ಯ ಚೇತನಗಳ ಸುತ್ತ ಹರಡಿಕೊಂಡಿರುವ ಈ ಕಟ್ಟಗಳು ಓದುಗರನ್ನು ಚಿಂತನೆಗೆ ಪ್ರೇರೇಪಿಸುತ್ತವೆ. ಪ್ರತಿ ವ್ಯಕ್ತಿಚಿತ್ರವೂ ವಿಶಿಷ್ಟ ಅನುಭವದ ನೆಲೆಯಲ್ಲಿ ರೂಪುಗೊಂಡಿದೆ. ವ್ಯಂಗ್ಯ ಮತ್ತು ವೈನೋದಿಕತೆಯ ಸಮತೋಲನ ಈ ಬರಹಗಳಿಗೆ ವಿಭಿನ್ನ ಮೆರಗು ನೀಡುತ್ತದೆ. ಓದುವಾಗ ಓದುಗರಿಗೆ ಕುಂವೀಯವರ ಅನುಭವ ಜಗತ್ತು ಕನ್ನಡದ ಮುಖೇನ ಭಾರತೀಯ ಸಮಾಜದ ವೈವಿಧ್ಯಮಯ ಮುಖಗಳನ್ನು ಪರಿಚಯಿಸುತ್ತಿರುವಂತೆ ಅನಿಸುತ್ತದೆ. ಹೀಗಾಗಿ, ಈ ವ್ಯಕ್ತಿಚಿತ್ರಗಳು ಕೇವಲ ಚಿತ್ರಣಗಳಾಗಿಯೇ ಉಳಿಯದೆ, ವ್ಯಕ್ತಿತ್ವದ ಆಂತರಿಕ ಸತ್ಯವನ್ನು ಅನಾವರಣಗೊಳಿಸುವ ಪ್ರಯತ್ನಗಳಾಗಿ ಕಾಣಿಸುತ್ತವೆ. ಕನ್ನಡದಲ್ಲಿ ವಿಭಿನ್ನ ಧಾಟಿಯ ವ್ಯಕ್ತಿಚಿತ್ರ ಸಾಹಿತ್ಯಕ್ಕೆ ಇವು ಮಹತ್ವದ ಕೊಡುಗೆಯಾಗಿವೆ.

   ಕುಂವೀಯವರ ಗದ್ಯದ ಮೋಹಕಶೈಲಿ, ಹರಿತವೂ ತೀಕ್ಷ್ಣವೂ ಆದ ವಿಡಂಬನೆಯ ಬರಹದ ಶೈಲಿ, ಸಾಹಿತ್ಯದ ಬಗ್ಗೆ, ಬದುಕಿನ ಬಗ್ಗೆ ಅವರಿಗಿರುವ ಅಪಾರವಾದ ಕಾಳಜಿ, ಆಸಕ್ತಿಯ ಹರಹು ಇಲ್ಲಿನ ವ್ಯಕ್ತಿಚಿತ್ರಗಳಲ್ಲಿ ಮಿಂಚಿದೆ. ಜನಸಾಮಾನ್ಯರ ದೃಷ್ಟಿಕೋನದ ಮೂಲಕ ಬಿತ್ತರಗೊಂಡಿರುವ ಒಂದು ಕಾಲದ ಸಾಹಿತ್ಯ ಚರಿತ್ರೆಯಾಗಿಯೂ ಈ ಕೃತಿಯನ್ನು ನಾವು ಪರಿಭಾವಿಸಬೇಕು ಎಂಬುದಕ್ಕೆ ಕುಂವೀಯವರ ಚಿಂತನಾಕ್ರಮ ಮತ್ತು ಸಂವೇದನಾಶೀಲ ವಿಚಾರಧಾರೆಗಳು ಆಧಾರವಾಗಿವೆ. ಸಾಹಿತ್ಯವೆಂಬ ಸಂಸ್ಥೆಯನ್ನು ಅದರ ಎಲ್ಲ ಅವತಾರಗಳಲ್ಲಿ ಕಾಣಿಸುವ ಕಲಾಸೂಕ್ಷ್ಮತೆ ಮತ್ತು ಜವಾಬ್ದಾರಿಗಳು ಈ ಬರಹಗಳ ಹಿಂದಿರುವ ದೊಡ್ಡಶಕ್ತಿಯಾಗಿದೆ. ಕುಂವೀಯವರ ಕ್ಯಾಮರಾ ಕಣ್ಣು ಲೇಖಕರು, ಕಲಾವಿದರು, ಕಾರ್ಪಣ್ಯದ ಬದುಕಿನ ಬಡಜೀವಗಳನ್ನು ಸೆರೆಹಿಡಿದಿದೆ. ಇಂತಹ ಎಚ್ಚರಗಣ್ಣಿನ ಬರಹಗಳೇ ನಮ್ಮ ನಿಜದ ಸಾಂಸ್ಕೃತಿಕ ಚರಿತ್ರೆಯನ್ನು ಅರ್ಥ ಮಾಡಿಸುವಂಥವು. ಕುಂವೀಯವರ ಬತ್ತಳಿಕೆಯಲ್ಲಿ  ಇಂತಹ ವ್ಯಕ್ತಿಚಿತ್ರಗಳು ಅಗಾಧವಾಗಿವೆ. ವಿಸ್ತಾರವಾದ ಜೀವನಾನುಭವದ, ಓಡಾಟವನ್ನು ಪ್ರೀತಿಸುವ, ಸ್ನೇಹವನ್ನು ಬದುಕಿನ ಮುಖ್ಯಮೌಲ್ಯದಂತೆ ಪರಿಭಾವಿಸುವ ಅವರು ಮತ್ತಷ್ಟು ಚಿತ್ರಗಳನ್ನು ಖಂಡಿತ ಬರೆಯುತ್ತಾರೆ ಎಂದು ನಾವು ನಿರೀಕ್ಷಿಸಬಹುದು.

‍ಲೇಖಕರು avadhi

23 February, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading