ಎಚ್ ಎಸ್ ವಿ ಕಾಲಂ: ನಿಮ್ಮ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ!

ತಾವರೆಯ ಬಾಗಿಲು-೧೧

ಎಚ್ ಎಸ್  ವೆಂಕಟೇಶಮೂರ್ತಿ 

ತಾನು ವರ್ಣಿಸುತ್ತಿರುವ ವಸ್ತುವನ್ನು ಅಂಥದೇ ಇನ್ನೊಂದು ವಸ್ತುವಿನೊಂದಿಗೆ ಹೋಲಿಸುವ ಮೂಲಕ ತಾನು ಹೇಳುತ್ತಿರುವ ವಸ್ತುವನ್ನು ಮತ್ತಷ್ಟು ನಿಖರವಾಗಿ ಕಣ್ಣಿಗೆ ಕಟ್ಟಿಸುವುದು ಕಾವ್ಯದ ಒಂದು ಬಹುಮಾನ್ಯ ತಂತ್ರ.

ಸರಳವಾದ ಮತ್ತು ಚಿರಪರಿಚಿತವಾದ ಒಂದು ಉದಾಹರಣೆಯನ್ನು ಮೊದಲು ಎತ್ತಿಕೊಳ್ಳುತ್ತೇನೆ.

hsv1-2ಕೆ.ಎಸ್.ನರಸಿಂಹಸ್ವಾಮಿಯವರು ತಮ್ಮ ಒಂದು ಕವಿತೆಯಲ್ಲಿ ತಮ್ಮ ಕಾವ್ಯನಾಯಕಿಯನ್ನು ಚಂದ್ರಮುಖಿ ಎಂದು ಯಾಕೆ ಕರೆಯಬಾರದು ಎಂದು ಪ್ರಶ್ನಿಸುತ್ತಾರೆ. ಚಂದ್ರಮುಖಿ ಎಂದರೆ ಚಂದ್ರನಂತೆ ಮುಖವುಳ್ಳವಳು ಎಂಬುದು ಸಾಮಾನ್ಯ ಅರ್ಥ. ಯಾಕೆ ಹೆಣ್ಣಿನ ಮುಖವನ್ನು ಚಂದ್ರಬಿಂಬಕ್ಕೆ ಕವಿಗಳು ಹೋಲಿಸುತ್ತಾರೆ? ಆಕಾರದಲ್ಲಿ, ಬಣ್ಣದಲ್ಲಿ, ಗುಣಧರ್ಮದಲ್ಲಿ ಅವುಗಳಲ್ಲಿ ಒಂದು ಸಮಾನತೆ ಇದೆ ಎಂಬುದು ಅದಕ್ಕೆ ಕಾರಣ. ಚಂದ್ರಬಿಂಬದಂತೆ ಹೆಣ್ಣಿನ ಮುಖವು ದುಂಡಾಗಿದೆ. ಚಂದ್ರಬಿಂಬದಂತೆ ಹೆಣ್ಣಿನ ಮುಖವೂ ಗೌರವರ್ಣದಿಂದ ಕೂಡಿದ್ದಾಗಿದೆ. ಚಂದ್ರಬಿಂಬದಿಂದ ಬೆಳದಿಂಗಳು ಸೂಸುವಂತೆ ಹೆಣ್ಣಿನ ಮುಖದಿಂದಲೂ ತಂಪಾದ ಬೆಳಕು ಹೊಮ್ಮುತ್ತಾ ಇದೆ. ಹೀಗೆ ರೂಪ, ಆಕಾರ, ಗುಣಧರ್ಮದ ದೃಷ್ಟಿಯಿಂದ ಚಂದ್ರಬಿಂಬ ಮತ್ತು ಹೆಣ್ಣಿನ ಮುಖದಲ್ಲಿ ಸಾದೃಶ್ಯವಿದೆ. ಹಾಗಾಗಿ ಹೆಣ್ಣಿನ ಮುಖವನ್ನು ಚಂದ್ರನಿಗೆ ಹೋಲಿಸಲಾಗಿದೆ!

ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು
ಚಂದ್ರಮುಖಿ ನೀನೆನಲು ತಪ್ಪೇನು?
ನಿನ್ನ ಸೌಜನ್ಯವೇ ದಾರಿ ನೆರಳಾಗಿರಲು
ನಿತ್ಯ ಸುಖಿ ನೀನೆನಲು ಒಪ್ಪೇನೆ?
(ನಿನ್ನೊಲುಮೆ-ಕೆ ಎಸ್ ನ)

ಬಹಳ ಸರಳವಾಗಿ ತೋರುವ ಮೇಲಿನ ಸಾಲುಗಳು ಕಾವ್ಯಪ್ರೇಮಿಗಳು ಕವಿಸಮಯ, ಕ್ಲೀಷೆ ಎಂದು ಮಾಡುವ ಆರೋಪಕ್ಕೇ ದಿಟ್ಟವಾಗಿ ಉತ್ತರುಸುವ ಕಾವ್ಯಮೀಮಾಂಸೆಯ ಕೆಲಸವನ್ನೂ ಮಾಡುತ್ತಾ ಇವೆ.

ಹೆಣ್ಣಿನ ಮುಖವನ್ನು ಮೊಟ್ಟ ಮೊದಲು ಕವಿಯೊಬ್ಬ ಚಂದ್ರಬಿಂಬಕ್ಕೆ ಹೋಲಿಸಿದಾಗ ಕೇಳುಗರು ರೋಮಾಂಚಗೊಂಡಿರಬೇಕು. ಆದರೆ ಮತ್ತೆ ಮತ್ತೆ ಅದನ್ನೇ ಗತಾನುಗತಿಕವಾಗಿ ಕವಿಗಳು ಬಳಸತೊಡಗಿದಾಗ ಅತಿಬಳಕೆಯಿಂದ ಆ ಹೋಲಿಕೆಯು ತನ್ನ ನಾವೀಣ್ಯವನ್ನು ಕಳೆದುಕೊಂಡು ಸವಕಲಾಗಿರಬೇಕು. ಆಗ ಚಂದ್ರಮುಖಿಯೆಂಬುದು ಒಂದು ಕ್ಲೀಷೆ! ಆದರೆ ಯಾವುದು ಕ್ಲೀಷೆಯೆಂದು ತಿರಸ್ಕೃತವಾಗಿತ್ತೋ ಅದೇ ಹೋಲಿಕೆಯನ್ನು ಹೊಸ ಅರ್ಥದಲ್ಲಿ ಕೆ ಎಸ್ ನ ಮತ್ತೆ ಕಾವ್ಯಕ್ಕೆ ಹೂಡುತ್ತಾರೆ.

ಸೂಕ್ಷ್ಮವಾಗಿ ಗಮನಿಸಿದಾಗ ಕಾವ್ಯನಾಯಕನ ಬಾಳು ಬೆಳಕಾಗಿರುವುದು ಚಂದ್ರನ ಬೆಳಕಿನಿಂದಲ್ಲ. ಕಾವ್ಯನಾಯಕಿಯ ಒಲುಮೆಯಿಂದ. ಅಂದರೆ ಹೋಲಿಕೆಯೊಳಗೆ ಇನ್ನೊಂದು ಹೋಲಿಕೆ ಅವಿತಿಟ್ಟುಕೊಂಡಿದೆ. ಆ ಪ್ರಚ್ಛನ್ನ ಹೋಲಿಕೆ ಹೆಣ್ಣಿನ ಒಲುಮೆಯನ್ನು ಬೆಳದಿಂಗಳಿಗೆ ಹೋಲಿಸುತ್ತಾ ಇದೆ. ನಾಯಕನ ಬಾಳು ಬೆಳಕಾಗಿರಲು ನಿಜವಾದ ಕಾರಣ ಬೆಳುದಿಗಳಂಥ ನಾಯಕಿಯ ಪ್ರೀತಿಯೆಂದಾಯಿತು! ಹೋಲಿಕೆಯ ಈ ಕಾವ್ಯಾತ್ಮಕ ಲಂಘನದಿಂದಲೇ ಕವಿಗೆ ತನ್ನ ನಲ್ಲೆಯನ್ನು ಚಂದ್ರಮುಖಿಯೆಂದು ಕರೆಯುವಲ್ಲಿ ಮುಜುಗರ ಇಲ್ಲದಾಗಿರುವುದು!

ಭಾವಕ್ಕೆ ತಕ್ಕ ರೂಪಗಳನ್ನು ಕವಿಗಳು ಅರಸುತ್ತಲೇ ಬಂದಿದ್ದಾರೆ. ಅವರು ಕಣ್ಣುಬಿಟ್ಟರೆ ಕಾಣುವುದೇನು? ಅದೇ ಆಕಾಶ; ಅದೇ ಭೂಮಿ; ಅದೇ ಸೂರ್ಯ; ಅದೇ ಚಂದ್ರ; ಅದೇ ಕಾಡು; ಅದೇ ಬೆಟ್ಟ; ಅದೇ ನದಿ; ಅದೇ ಸಾಗರ. ಮತ್ತೆ ಮತ್ತೆ ಅದೇ ಅದೇ. ಆದರೂ ಅವುಗಳನ್ನು ವಸ್ತುಪ್ರತಿರೂಪಗಳಾಗಿ ಬಳಸುವಲ್ಲಿ ಕವಿಗಳು ಉತ್ಸಾಹ ಕಳೆದುಕೊಂಡಿಲ್ಲ. ಕಂಡದ್ದನ್ನೇ ಹೊಸ ಹೊಸ ದೃಷ್ಟಿಯಿಂದ ಹೊಸವೆಂಬಂತೆ ಕಾಣಿಸುವುದೇ ವಸ್ತುಜಗತ್ತನ್ನು ನವೀಕರಿಸುವ ಕಾವ್ಯೋದ್ಯಮ. ಕಾಳಿದಾಸ ರಾಜ ದಿಲೀಪನನ್ನು ಸಮುದ್ರಕ್ಕೆ ಹೋಲಿಸುತ್ತಾನೆ.

ಶಾಂತಸಾಗರದಂತೆ ಸೌಮ್ಯ ಭೀಕರನಾತ
ಹಾಗೆ ಇರಬೇಕಷ್ಟೆ ರಾಜವೃಂದ?
ಮುತ್ತು ರತ್ನಗಳಿಂದ ಮೋಹಿಸುವ ಜಲಧಿ
ಎದೆಗೆಡಿಸದೇ ಕ್ರೂರಜಲಚರಗಳಿಂದ?
(ಅನುವಾದ: ಎಚ್.ಎಸ್.ವಿ)

ರಾಜ ದಿಲೀಪನ ಸೌಮ್ಯಭೀಕರತೆಯನ್ನು ಸಮುದ್ರದ ಹೋಲಿಕೆ ಎಷ್ಟು ಚೆನ್ನಾಗಿ ಗ್ರಹಿಸುತ್ತಾ ಇದೆ!

ಕವಿ ನಾಗಚಂದ್ರನೂ ತನ್ನ ರಾಮಚಂದ್ರಚರಿತಪುರಾಣದಲ್ಲಿ ರಾವಣನನ್ನು ಕಡಲಿಗೆ ಹೋಲಿಸಿದ್ದಾನೆ! ರಾವಣನ ವ್ಯಕ್ತಿತ್ವದ ಗಾಂಭೀರ್ಯ ವಿಸ್ತಾರ ಈ ಹೋಲಿಕೆಯಿಂದ ತನಗೆ ತಾನೇ ಧ್ವನಿತವಾಗಿದೆ. ಜೊತೆಗೆ ಅಂಥ ಮಹಾ ಸಾಗರವೂ ಒಮ್ಮೊಮ್ಮೆ ತನ್ನ ಮರ್ಯಾದೆಯನ್ನು ಮೀರಿ ನಡೆಯುವುದಿಲ್ಲವೇ ಎಂದು ಕವಿ ಉದ್ಗಾರ ತೆಗೆಯುತ್ತಾನೆ.

ವಾರ್ಧಿಯುಂ ಒರ್ಮೊಮ್ಮೆ ಮೇರೆಯಂ ದಾಂಟದೆ?
(ಸಮುದ್ರವೂ ಒಮ್ಮೊಮ್ಮೆ ಮೇರೆ ದಾಟುವುದಿಲ್ಲವೇ?)

ಸೀತೆಯನ್ನು ಕಂಡು ಅವನು ಆಕೆಗಾಗಿ ಆಸೆಪಟ್ಟಿದ್ದು ಹೀಗೆ ವಾರ್ಧಿಯ ಮರ್ಯಾದೆಗೇಡು! ಎಲ್ಲವನ್ನೂ ಸದ್ಧರ್ಮದಲ್ಲಿ ನಿಯಾಮಿಸುವ ದೊರೆಯೇ ದಾರಿ ತಪ್ಪಿದರೆ ಅವನಿಗೆ ಬುದ್ಧಿ ಹೇಳುವವರು ಯಾರು? ಅದೇ ಸಾಗರದ ಹೋಲಿಕೆಯನ್ನು ಕವಿ ಮುಂದುವರೆಸುತ್ತಾನೆ!

ಮುನ್ನೀರ್ ಬೆನ್ನೀರಪ್ಪೊಡೆ ಬೆರೆಸಲ್ಕೆ ತಣ್ಣೀರುಂ ಒಳವೇ?
(ಸಮುದ್ರವೇ ಬಿಸಿನೀರಾದರೆ ಬೆರಕೆಗೆ ತಣ್ಣೀರು ಎಲ್ಲಿಂದ ತರುವುದು?)

ದಿಲೀಪನಿಗೂ ಸಮುದ್ರದ ಹೋಲಿಕೆ; ರಾವಣನಿಗೂ ಸಮುದ್ರದ ಹೋಲಿಕೆ. ಆದರೆ ಕಡಲಿನ ಬೇರೆ ಬೇರೆ ಧರ್ಮಗಳನ್ನು ಮುನ್ನೆಲೆಗೆ ತರುವ ಮೂಲಕ ಕವಿಗಳು ಹೋಲಿಕೆಯ ವಿಭಿನ್ನ ಸಾದೃಶ್ಯವನ್ನು ಸಾಧಿಸುತ್ತಾರೆ! ಅಂದರೆ ವಸ್ತು ಜಗತ್ತು ಅದೇ! ಆದರೆ ಅವನ್ನು ಕಾಣುವ ಕ್ರಮ ಭಿನ್ನ ಭಿನ್ನ. ಈ ಭಿನ್ನತೆಯಿಂದಲೇ ಕಾಣುವ ನೋಟಗಳೂ ಭಿನ್ನ ಭಿನ್ನ. ಇದು ಕಾವ್ಯ ಜಗತ್ತಿನಲ್ಲಿ ಆಗುವ ವಸ್ತುಜಗತ್ತಿನ ನವೀಕರಣ ಉದ್ಯಮ. ಇನ್ನೊಂದು ಗಮನಿಸಬೇಕಾದ ಅಂಶ ಜಡಜಗತ್ತನ್ನು ಅದರ ಕ್ರಿಯಾಶೀಲತೆಯಲ್ಲೇ ಕವಿಗಳು ಉಪಮಾನಗಳಾಗಿ ಹೊಂಚುತ್ತಾರೆ.

design11ಬೆಟ್ಟ ತಲೆ ಬಾಗಿ ನಮಸ್ಕರಿಸುತ್ತಾ ಇದೆ. ಅಥವಾ ತನ್ನ ಕೋಡುಗಲ್ಲಿನ ಕೋರೆಯಿಂದ ವರಾಹರೂಪಿಯಾಗಿ ಪಾತಾಳಕ್ಕೆ ಮುಳುಗಿದ್ದ ಭೂಮಿಯನ್ನು ಉದ್ಧರಿಸಿ ತರುತ್ತಾ ಇದೆ. ನದಿ ಹರಿಯುತ್ತಾ ಇದೆ. ಕೃಷ್ಣನ ಮುರಲೀನಾದಕ್ಕೆ ಅದು ಹರಿಯುವುದನ್ನು ಮರೆತು ಒಂದು ಮುಹೂರ್ತ ಸ್ಥಗಿತಗೊಳ್ಳುತ್ತದೆ! ಅಥವಾ ನದಿಯು (ಸರಯೂ) ರಾಮನನ್ನು ಕಾಡಿಗೆ ಹೋಗಬೇಡ ಎಂದು ತಡೆಯುವ ಕಡೆಯ ಪ್ರಯತ್ನದಂತೆ ದಾರಿಯನ್ನು ಅಡ್ಡಗಟ್ಟುತ್ತದೆ!(ರಾಮಾಯಣದಲ್ಲಿ ಆಗುವಂತೆ). ಅಥವಾ ಕಾಣದ ಕಡಲನ್ನು ಕಾಣುವ ಆತುರದಿಂದ ನದಿಯೊಂದು ಕಾತರಿಸಿ ಹರಿಯುತ್ತದೆ(ಜಿ.ಎಸ್.ಎಸ್.ಪದ್ಯ). ಅಥವಾ ಅಚಲಗಿರಿಯ ಚಲನೆಯ ಆಸೆಯಂತೆ ಬೆಟ್ಟದಿಂದಿಳಿದು ಬಯಲಿನತ್ತ ಹೊನಲೊಂದು ಹರಿಯುತ್ತದೆ(ಪುತಿನ ಪದ್ಯ).
ಮುಗಿಲು ಮತ್ತು ಇಳೆಯ ನಡುವಿನ ಎಳೆತ ಸೆಳೆತಗಳನ್ನು ಅದೆಷ್ಟು ಬಗೆಯಾಗಿ ನಮ್ಮ ಕವಿಗಳು ವರ್ಣಿಸಿದ್ದಾರೆ!

ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ ನಾಕು ಹನಿಯ ಚೆಲ್ಲಿ-ಎಂದು ಕವಿ ಜಿ ಎಸ್ ಎಸ್ ಗೋಗರೆಯುತ್ತಾರೆ. ಇಳೆಗೆ ಮತ್ತು ಮಳೆಗೆ ಆಗ್ಯಾದ ಲಗ್ನ; ಅದರಾಗೆ ಭೂಮಿ ಮಗ್ನ!-ಎಂದು ಅಂಬಿಕಾತನಯದತ್ತ ಸೃಷ್ಟಿ ನಿರ್ಮಾಣದ ಕನಸನ್ನು ಕೈವಾರಿಸುತ್ತಾರೆ. ರಾಮಾಯಣದಲ್ಲಿ ರಾಮ ಸೀತೆ ಲಕ್ಷ್ಮಣರು ವನವಾಸಕ್ಕೆ ಹೋದ ಮೇಲೆ, ಅಳುತ್ತಿರುವ ಕೌಸಲ್ಯೆಯನ್ನು ಸುಮಿತ್ರೆ ಸಮಾಧಾನಪಡಿಸುತ್ತಿದ್ದಾಳೆ.

ಪುತ್ರಸ್ತೇ ವರದಃ ಕ್ಷಿಪ್ರಂ ಅಯೋಧ್ಯಾಂ ಪುನರಾಗತಂ
ಪಾಣಿಭ್ಯಾಃ ಮೃದು ಪೀನಾಭ್ಯಾಂ ಚರಣೌ ಪೀಡಯಿಷ್ಯತಿ
ಅಭಿವಾದ್ಯ ನಮಸ್ಯಂತಂ ಶೂರಂ ಸಸಹೃದಂ ಸುತಂ
ಮುದಾಸ್ರೈಃ ಪ್ರೋಕ್ಷಸಿ ಪುನಃ ಮೇಘರಾಜಿರಿವಾಚಲಂ

(ವನವಾಸವನ್ನು ಮುಗಿಸಿ ಹಿಂತಿರುಗಿ ಬಂದ ಮಗನನ್ನು ನೀನು ನೋಡಿ ಆಯ್ತು ಎಂದು ಇಟ್ಟುಕೊ. ಎಲ್ಲರಿಗೂ ಒಳ್ಳೆಯದನ್ನು ಮಾಡುವ ನಿನ್ನ ಕುಮಾರ ಕ್ಷಿಪ್ರದಲ್ಲಿ ಅಯೋಧ್ಯೆಗೆ ಮರಳಿ ಬಂದವನು ಮೆದುವಾದ ತುಂಬಿದ ತನ್ನ ಕೈಗಳಿಂದ ನಿನ್ನ ಪಾದವನ್ನು ಅವುಕುತ್ತಾನೆ. ಅಭಿವಾದನ ಮಾಡಿ ನಮಸ್ಕಾರ ಸಲ್ಲಿಸುವ ಸೋದರ ಸಮೇತನಾದ ನಿನ್ನ ಶೂರ ಕುಮಾರನ ಮೇಲೆ ನೀನು ಒಂದು ಮೇಘರಾಜಿ ಒಂದು ಮಲೆಯ ಮೇಲೆ ಹನಿಗಳನ್ನು ಸುರಿಸುವ ರೀತಿ ಕಣ್ಣೀರನ್ನು ಸುರಿಸುವೆ- ಗದ್ಯಾನುವಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್.)

ವನವಾಸ ಮುಗಿಸಿ ಬಂದನು ಎಂದೆ ಭಾವಿಸು!
ಸರ್ವಜನಪ್ರಿಯ ರಾಮ ನಗರಕ್ಕೆ ಬಂದು
ಮೃದುಹಸ್ತದಿಂದ ಪಾದವನೊತ್ತಿ ನಮಿಸೆ
ಬೆಟ್ಟಕ್ಕೆ ಮುಗಿಲಂತೆ ಬಾಷ್ಪಗಳ ಕರೆವೆ||
(ಪದ್ಯಾನುವಾದ: ಎಚ್.ಎಸ್.ವಿ)

ಕೌಸಲ್ಯೆಯ ಪಾದಾಭಿವಂದನ ಮಾಡುತ್ತಿರುವ ರಾಮನ ಕುಳಿತ ಭಂಗಿಯನ್ನು ಬೆಟ್ಟಕ್ಕೆ ಹೋಲಿಸಲಾಗಿದೆ. ಮಳೆಮುಗಿಲೊಂದು ಆ ಬೆಟ್ಟದ ಮೇಲೆ ಹರ್ಷಬಾಷ್ಪವನ್ನು ಸುರಿಸುತ್ತಾ ಇದೆ. ಮಳೆಗರೆಯುವ ಮೋಡಕ್ಕೆ ಕವಿ ಕೌಸಲ್ಯೆಯ ಹೋಲಿಕೆ ನೀಡಿದ್ದಾರೆ. ಮಗ ಪರ್ವತವಾದರೆ ತಾಯಿ ಮಳೆಮುಗಿಲಾಗುತ್ತಾಳೆ. ಆಕೆಯ ಆನಂದಬಾಷ್ಪ ಮಳೆಯಾಗುತ್ತದೆ. ಒಂದು ಪ್ರಾಕೃತ ಕ್ರಿಯೆ ಒಂದು ಮಾನುಷ ನಾಟಕಕ್ಕೆ ಎಷ್ಟು ಅದ್ಭುತವಾಗಿ ಅನ್ವಯವಾಗುತ್ತಿದೆ ನೋಡಿರಿ! ಕೌಸಲ್ಯೆ ಮಳೆಮುಗಿಲಾಗುವುದಕ್ಕಿಂತ ಚೆಲುವಾದ ಪ್ರಸಕ್ತಿ ಮಳೆಮುಗಿಲು ಮಾತೃತ್ವದ ಧಾರಣೆ ಮಾಡುವುದು. ಹಿಂದೆ ಕೌಸಲ್ಯೆಯನ್ನು ಕಂಡಾಗ ಮುಗಿಲು ಕಣ್ಮುಂದೆ ಬರುತ್ತಾ ಇತ್ತು. ಈಗ ಮಳೆಗರೆವ ಮುಗಿಲು ನೋಡಿದಾಗೆಲ್ಲಾ ತಾಯ್ತನದ ನೆನಪಾಗುವುದು. ಹೀಗೆ ವಿಶ್ವವೇ ಒಂದು ಭಾವ ನಾಟಕವಾಗಿ ಪರಿವರ್ತಿತವಾಗುವುದು ಮಹಾಕವಿಗಳ ಕಾವ್ಯ ಚಮತ್ಕಾರ.

ಇದೇ ಚಿತ್ರ ಅದ್ಭುತವಾದ ಲಿಂಗಾಭಿಷೇಚನಕ್ಕೆ ಪ್ರತೀಕವಾಗಿ ನಿಲ್ಲುವ ಮಹಾಕವಿ ಬೇಂದ್ರೆಯವರ ಈ ಸಾಲುಗಳನ್ನು ಗಮನಿಸಿ:

ಗುಡ್ಡ ಗುಡ್ಡ ಸ್ಥಾವರ ಲಿಂಗ
ಅವಕ ಅಭ್ಯಂಗ
ಎರಿತಾವನ್ನೊ ಹಾಂಗ
ಕೂಡ್ಯಾವ ಮೋಡ! ಸುತ್ತೆಲ್ಲ ನೋಡ ನೋಡ||

ಶ್ರಾವಣ ಬಂತು ಕಾಡಿಗೆ ಎಂಬ ಬೇಂದ್ರೆಯವರ ಪದ್ಯದಲ್ಲಿ ತಾಯ್ತನದ ರಾಮಾಯಣದ ನೆನಪುಗಳಿವೆ(ಹಸುರುಟ್ಟ ಬಸರಿಯ ಹಾಂಗ-ನೆಲ ಹೊಲಾ ಹ್ಯಾಂಗ-ಅರಿಷಿಣ ಒಡೆಧಾಂಗ-ಹೊಮ್ಮತಾವ-ಬಂಗಾರ ಚಿಮ್ಮತಾವ); ನಾಗಚಂದ್ರನ ರಾವಣನ ನೆನಪುಗಳೂ ಇವೆ(ಕಡಲಿಗೆ ಬಂತು ಶ್ರಾವಣಾ-ಕುಣಿಧಾಂಗ ರಾವಣಾ); ಶ್ರೀರಾಮನ ಪುನರ್ಸಂಭವವಾದ ಕೃಷ್ಣಾವತಾರದ ನೆನಪುಗಳೂ ಇವೆ(ಜಗದ್ಗುರು ಹುಟ್ಟಿದ ಮಾಸಾ-ಕಟ್ಟಿ ನೂರು ವೇಷಾ).ಕಾವ್ಯಂ ಭವತಿ ನವ್ಯಂ ದರ್ಶನ ಕೌಶಲಾತ್!ಅದಕ್ಕೇ ಕವಿಗಳು ಹೇಳುವುದು-ಸಮುದ್ರದ ಹಾಗೆ ಕಾವ್ಯವೆಂಬುದು ಅನುಕ್ಷಣ ನವೀನ.

‍ಲೇಖಕರು Admin

December 3, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

6 ಪ್ರತಿಕ್ರಿಯೆಗಳು

  1. Beesu Suresha

    ಚಂದದ ಲೇಖನ.
    ಸಿಮಿಯಾಟಿಷಿಯನ್ನರು ಇದನ್ನು Pragmatic ಎಂದು ಗುರುತಿಸುತ್ತಾರೆ.
    ದೃಷ್ಟಾಂತದ ಮೂಲಕ ಸೋದಾಹರಣವಾಗಿ ಅನುಭವ ದಾಟಿಸುವುದು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: