ಎಚ್ ಎಸ್ ವಿ ಕಾಲಂ: ಅಡಿಗರ ಅಭ್ಯಾಸದ ಕೋಣೆಯಲ್ಲಿ ಕಿಟೆಲ್ ಡಿಕ್ಷ್ನರಿ..

ತಾವರೆಯ ಬಾಗಿಲು-೧೪

ಕೆಲವಂ ಬಲ್ಲವರಿಂದ ಕಲ್ತು-ಎಂಬ ಕಾವ್ಯ ವಾಕ್ಯ ನನಗೆ ಬಹು ಪ್ರಿಯವಾದದ್ದು.

ಒಂದು ಮುಂಜಾನೆ ಹಿರಿಯಕವಿ ಗೋಪಾಲಕೃಷ್ಣ ಅಡಿಗರ ಮನೆಗೆ ಹೋಗಿದ್ದೆ. ಅವರನ್ನು ನೋಡುವುದು, ಅವರೊಂದಿಗೆ ಮಾತಾಡುವುದು ಯಾವಾಗಲೂ ಲಾಭಪ್ರದ ಎಂಬುದು ನನ್ನ ನಂಬಿಕೆಯಾಗಿತ್ತು. ಅಡಿಗರು ವರಾಂಡಕ್ಕೆ ಅಂಟಿಕೊಂಡಿದ್ದ ತಮ್ಮ ಬರವಣಿಗೆಯ ಕೋಣೆಯಲ್ಲಿದ್ದರು. ನನ್ನನ್ನು ನೋಡಿ ಬಾರಯ್ಯ..ಬಾ… ಎಂದು ಸ್ವಾಗತಿಸಿದರು. ಏನೋ ಓದುತ್ತಿದ್ದಿರಿ… ತೊಂದರೆ ಆಯಿತೇನೋ ಎಂದು ಸಂಕೋಚದಿಂದ ನುಡಿದೆ.

avadhi-hsv-columnಅಡಿಗರು ಅಂಥದೇನಿಲ್ಲವಯ್ಯ…ಕಿಟ್ಟೆಲ್ ಓದುತ್ತಿದ್ದೆ..ಅಷ್ಟೆ! ಎಂದರು.

ನನಗೆ ಇದು ಸ್ವಲ್ಪ ವಿಚಿತ್ರವಾಗಿ ಕಂಡಿತು. ಡಿಕ್ಷ್ನರಿ ಓದುವುದೆ? ಯಾವುದಾದರೂ ಶಬ್ದದ ಬಗ್ಗೆ ಸಂದೇಹ ಬಂದಾಗ ಮಾತ್ರ ನಾನು ಕಿಟೆಲ್ ತೆರೆಯುತ್ತಿದ್ದೆ. ಆದರೆ ಅಡಿಗರು ಕಿಟೆಲ್ ಸುಮ್ಮನೆ ಓದುತ್ತಿದ್ದಾರೆ! ದಿನವೂ ನಾನು ಸ್ವಲ್ಪ ಹೊತ್ತು ಕಿಟೆಲ್ ಓದುತ್ತೇನೆ ಎಂದು ಅಡಿಗರು ಹೇಳಿದರು. ನಾನು ಅಡಿಗರಿಂದ ಆ ಬೆಳಿಗ್ಗೆ ಕಲಿತ ಹೊಸ ಪಾಠವಾಗಿತ್ತು ಅದು. ಕವಿಗಳ ಶಬ್ದ ಭಂಡಾರ ವಿಸ್ತೃತವಾಗಬೇಕಾದರೆ ಹೀಗೆ ಡಿಕ್ಷ್ನರಿ ಕೂಡ ಓದುವುದು ಅಗತ್ಯ ಎಂಬುದು ಅಡಿಗರ ದೃಢ ವಿಶ್ವಾಸವಾಗಿತ್ತು.

ನಮ್ಮ ಶಬ್ದ ಭಂಡಾರ ಎಷ್ಟು ಹಿಗ್ಗುತ್ತದೋ ನಮ್ಮ ಆಯ್ಕೆಯ ಸ್ವಾತಂತ್ರ್ಯ ಅಷ್ಟು ಹಿಗ್ಗುತ್ತದೆ. ಶಬ್ದಗಳ ಬಗ್ಗೆ, ಅವುಗಳ ಶುದ್ಧ ಪಾಠದ ಬಗ್ಗೆ ಅಧ್ಯಯನ ಮಾಡುವುದು ಅಡಿಗರ ಅಭ್ಯಾಸವಾಗಿತ್ತು. ಅವರ ಶಬ್ದ ಸಂಪತ್ತು ಯಾವ ಯಾವ ಮೂಲದಿಂದ ಒದಗಿ ಬರುತ್ತದೆ ಎಂಬುದನ್ನು ಯೋಚಿಸಿದರೆ ನನಗೆ ಅಚ್ಚರಿಯಾಗುತಿತ್ತು. ಒಂದು ಸಾರಿ ಅವರು ಸವಾಲು ಎಸೆಯುವಂತೆ ಮಾಕಂದ ಅಂದರೆ ಏನು? ಗೊತ್ತಾ ನಿನಗೆ? ಎಂದು ಕೇಳಿದ್ದರು.

ಮಾಕಂದ ಎಂದರೆ ಮಾವಿನಮರ ಎಂದು ಅರ್ಥ. ತನ್ನ ಕಂದ ಪದ್ಯವು ಮಾಕಂದದಂತೆ ಎಂದು ಪಂಪ ಒಂದು ಕಡೆ ಹೇಳುತ್ತಾನೆ. ರಾಮನವಮಿಯ ದಿವಸ ಪದ್ಯದಲ್ಲಿ ವ್ಯಕ್ತಮಧ್ಯಕ್ಕೆ ಬಂದುರಿವ ಶಬರಿ-ಎಂದು ಅಡಿಗರು ಬರೆಯುತ್ತಾರೆ. ಆ ಬಳಿಕ ವ್ಯಕ್ತಮಧ್ಯ ಎಂಬ ಪದ ಬರೆಹಗಾರರಲ್ಲಿ ಹೆಚ್ಚಾಗಿ ಚಾಲ್ತಿಗೆ ಬಂತು. ವ್ಯಕ್ತಮದ್ಯ ಎಂಬ ಪ್ರಯೋಗ ಭಗವದ್ಗೀತೆಯಲ್ಲಿ ಬಂದಿರುವುದನ್ನು ನಾನು ಆಮೇಲೆ ಗಮನಿಸಿದೆ. ಹಾಗೇ ಆತತಾಯಿ ಎಂಬ ಪದ. ಆತತಾಯಿ ಎಂದರೆ ವೈರಿ. ಆ ಪದವೂ ನನಗೆ ಗೀತೆಯಲ್ಲಿ ಸಿಕ್ಕಿತು.

ತಮ್ಮ ಕೊನೆ ಕೊನೆಯ ದಿನಗಳಲ್ಲಿ ಅಡಿಗರು ನನ್ನನ್ನು ತುಂಬ ಹಚ್ಚಿಕೊಂಡಿದ್ದರು. ನನಗೆ ಉಪನಿಷತ್ ಬಗ್ಗೆ ಇದ್ದ ಒಂದು ಪುಸ್ತಕವನ್ನು ಸಹಿ ಮಾಡಿ ಕೊಟ್ಟು ಇದನ್ನು ಆಳವಾಗಿ ಅಭ್ಯಾಸ ಮಾಡು ಎಂದು ಆದೇಶಿಸಿದರು. ಅವರ ಭಾಷಾಕೋಶ, ವಿಷಯ ಕೋಶಗಳು ಬಹುಮೂಲಗಳಿಂದ ಬಂದೊದಗಿದವಾಗಿದ್ದವು. ನಪ್ರಮದಿತವ್ಯ ಎಂಬ ಮಾತು ಅಡಿಗರ ಕಾವ್ಯದಲ್ಲಿ ಮೊಟ್ಟಮೊದಲು ಎದುರಾದಾಗ ನಾನು ಕಿಟೆಲ್ ಗೆ ಓಡಬೇಕಾಯಿತು. (ಆಮೇಲೆ ನಾನು ಆ ಪದವನ್ನು ಗೀತೆಯಲ್ಲಿ ಕಂಡೆ).

ರಾಮಾಯಣ, ಭಾರತ, ಕಾಳಿದಾಸ, ವೇದ, ಉಪನಿಷತ್-ಹೀಗೆ ಅನೇಕ ಸಂಸ್ಕೃತ ಮೂಲಗಳಿಂದ ಒರತೆಯ ನೀರಿನ ಹಾಗೆ ಅಡಿಗರ ಶಬ್ದ ಭಂಡಾರಕ್ಕೆ ಶಬ್ದಗಳು ಜಿನುಗಿಕೊಳ್ಳುತ್ತಿದ್ದವು. ಹಾಗೇ ಬೇರೆ ಬೇರೆ ಭಾಷೆಗಳ ಸಾಹಿತ್ಯ ಮತ್ತು ಶಾಸ್ತ್ರ ಗ್ರಂಥಗಳಿಂದ ಅರ್ಥ ಮತ್ತು ಶಬ್ದ ಎರಡಕ್ಕೂ ಅವರು ಖನನದಲ್ಲಿ ತೊಡಗಿರುತ್ತಿದ್ದರು!

ಪಂಪ, ರನ್ನ, ಕುಮಾರವ್ಯಾಸ ಅಪಾರ ಶಬ್ದ ಶ್ರೀಮಂತಿಕೆ ಉಳ್ಳವರು. ಚೋಟುದ್ದ ಚಾವಟಿಯಲ್ಲಿ ಬದುಕಿನುದ್ದಕ್ಕೂ ಬುಗುರಿ ಆಡಿಸುವವರಲ್ಲ! ಹೊಸ ಕವಿಗಳಲ್ಲಿ ಬೇಂದ್ರೆ, ಕುವೆಂಪು, ಪುತಿನ, ಅಡಿಗ ಶಬ್ದಸಂಪದ್ಭರಿತರು. ಅವರ ಕಾವ್ಯಗಳನ್ನು ಓದುವಾಗ ಪ್ರತಿಸಲವೂ ಬೀದಿಯಲ್ಲೆದುರಾಗುವ ಅಪರಿಚಿತರಂತೆ ಅಪರೂಪದ ಪದಗಳನ್ನು ನಾನು ಎದುರಿಸುತ್ತೇನೆ.

ನಾನು ಪ್ರೌಢಶಾಲೆಯಲ್ಲಿ ಓದುವಾಗ ಧೃತಗತಿ ಎಂಬ ಪದವೊಂದು ಕುವೆಂಪು ಅವರ ಮಲೆನಾಡಿನ ಚಿತ್ರಗಳೂ ಪ್ರಬಂಧ ಸಂಕಲನದಲ್ಲಿ ನನಗೆ ಎದುರಾಯಿತು. ಆವತ್ತು ನನ್ನ ಎದೆಹೊಕ್ಕ ಆ ಪದ ಈಗಲೂ ನನ್ನ ಶಬ್ದಾಕಾಶದಲ್ಲಿ ಮಿನುಗುತ್ತಾಇದೆ. ನಿಸ್ತರಂಗಕಾಸಾರ ಎಂಬ ಪದವೊಂದು ಹೈಸ್ಕೂಲಲ್ಲಿ ಜಿಎಸ್ಸೆಸ್ ಪದ್ಯವೊಂದರಿಂದ ನನ್ನೊಳಗೆ ಬಂತು. ಹಾಗೇ ಪುತಿನ ಅವರ ಕಾವ್ಯದಲ್ಲಿ ಬಂದ ಹೃತ ಎಂಬ ಪದ! ಇದು ಪಿಯುಸಿ ಓದುವಾಗ ನನ್ನ ಭಾಷಾಕಾಶವನ್ನು ಹೊಕ್ಕಿದ್ದು.

ಯು.ಆರ್.ಅನಂತಮೂರ್ತಿಯವರ ಸಂಸ್ಕಾರ ಕಾದಂಬರಿಯ ಬ್ಲರ್ಬಿನಲ್ಲಿ ನನಗೆ ಓವರಿ ಎಂಬ ಅಪರೂಪದ ಪದ ಎದುರಾಯಿತು. ಆಮೇಲೆ ಅದನ್ನು ನಾನು ಕುಮಾರವ್ಯಾಸ ಭಾರತದಲ್ಲಿ ಕಂಡೆ! ಅಪರೂಪದ ಪದಗಳು ಎದುರಾದಾಗ ಈಗಲೂ ನಾನು ರೋಮಾಂಚವನ್ನು ಅನುಭವಿಸುತ್ತೇನೆ.

ಹೋದವರ್ಷ ಕುಮಟೆಗೆ ಹೋಗಿದ್ದಾಗ ಆದ ಒಂದು ಅನುಭವ ಹೇಳುತ್ತೇನೆ. ನಾನೂ ಶ್ರೀಧರ ಬಳಗಾರರೂ ಮುಂಜಾವಿನ ಹವಾಸೇವನೆಗೆ ಹೋಗಿದ್ದಾಗ ಒಂದು ಬಸ್ ಸ್ಟಾಪ್ ಬಳಿ ಏರುವ ಮತ್ತು ಇಳಿಯುವ ಜಾಗ ಎಂಬ ಬೋರ್ಡು ಕಾಣಿಸಿತು. ತಕ್ಷಣ ಆ ಪ್ರಯೋಗ ನನಗೆ ಬೆರಗು ಉಂಟು ಮಾಡಿತು. ಕೆ ಎಸ್ ನ ತಮ್ಮ ರಾಯರು ಬಂದರು ಪದ್ಯದಲ್ಲಿ ಏರುತ ಇಳಿಯುತ ರಾಯರು ಬಂದರು ದೂರದ ಊರಿಂದ ಎಂದು ಬರೆದಿದ್ದಾರೆ. ಗುಡ್ಡ ಏರುತ್ತಾ, ಕಣಿವೆ ಇಳಿಯುತ್ತಾ ರಾಯರು ಬಹು ಶ್ರಮಪಟ್ಟು ಮಾವನ ಮನೆಗೆ ಬಂದಿರಬೇಕು ಎಂಬುದು ಆವರೆಗಿನ ನನ್ನ ಗ್ರಹಿಕೆ ಆಗಿತ್ತು. ಕುಮಟೆಯ ಬಸ್ ನಿಲ್ದಾಣದ ಬಳಿ ಏರುವ ಮತ್ತು ಇಳಿಯುವ ಜಾಗ ಎಂಬ ಬೋರ್ಡು ನೋಡಿದಾಗ, ಓಹೋ…ನಮ್ಮ ರಾಯರು ಅನೇಕ ಬಸ್ಸುಗಳನ್ನು ಬದಲಾಯಿಸಿ ಮಾವನ ಮನೆಗೆ ಬಂದಿರಬೇಕು ಎಂದು ಥಟ್ಟನೆ ಬೋಧೆಯಾಯಿತು! ಹೀಗೆ ನಿತ್ಯ ವ್ಯವಸಾಯದಲ್ಲಿ ನಾವು ಕಲಿಯಬೇಕಾದ ಹೊಸ ಹೊಸ ಪಾಠಗಳು ಅದೆಷ್ಟೋ!

ರನ್ನ ತನ್ನ ಬಗ್ಗೆಯೇ ಹೇಳುವ ಒಂದು ಮಾತಿದೆ! ವಾಗ್ದೇವಿಯ ಭಂಡಾರದ ಮುದ್ರೆಯನ್ನೊಡೆದನ್ ಸಾರಸ್ವತಮೆಂಬ ಕವಿತೆಯೊಳ್ ಕವಿ ರನ್ನಂ! ಅನುಭವಗಳ ಒದವಣೆ ಎಷ್ಟು ಮುಖ್ಯವೋ ಶಬ್ದಗಳ ಭಂಡಾರವನ್ನು ಸೂರೆ ಮಾಡುವುದೂ ಕವಿಗಳಿಗೆ ಅಷ್ಟೇ ಅಗತ್ಯ. ಕವಿಗಳಿಗೆ ಮಾತಿನ ಬಡತನ ಯಾವತ್ತೂ ಬರಬಾರದು!

ಆದರೆ ಎಷ್ಟು ಶಬ್ದ ಭಂಡಾರ ಸಂಪದ್ಭರಿತವಾಗಿದ್ದರೂ ನಮ್ಮ ಅನುಭದ ಎಲ್ಲ ಸೂಕ್ಷ್ಮಗಳನ್ನು ಅಭಿವ್ಯಕ್ತಿಸುವಲ್ಲಿ ನಮ್ಮ ಭಾಷೆ ಸೋಲುವುದೆಂಬುದೇ ಕವಿಗಳ ದೊಡ್ಡ ದುರಂತ. ಒಂದು ಯುಕ್ತವಾದ ಪದಕ್ಕಾಗಿ ನಮ್ಮ ಹಿರಿಯರು ತಿಂಗಳುಗಟ್ಟಲೆ ಕಾದಿರುವುದುಂಟು. ನನಗೆ ಬಳಕೆ ಇದ್ದ ಕವಿಗಳ ವಿಷಯವನ್ನೇ ಹೇಳುತ್ತೇನೆ.

ಶ್ರೀರಾಮ ನವಮಿಯ ದಿವಸ ಎಂಬ ಪದ್ಯದಲ್ಲಿ ಸುಟ್ಟಲ್ಲದೆ ಮುಟ್ಟೆನೆಂಬುಡಾಫೆ ಎಂಬ ಪ್ರಯೋಗ ಬರುತ್ತದೆ. ಸೀತೆಯ ಬಗ್ಗೆ ರಾಮನ ಧೋರಣೆಯನ್ನು ಯುಕ್ತವಾಗಿ ಅಭಿವ್ಯಂಜಿಸುವ ಈ ಉಡಾಫೆ ಎಂಬ ಪದಕ್ಕಾಗಿ ತಾವು ತಿಂಗಳುಗಟ್ಟಲೆ ಕಾಯಬೇಕಾಯಿತೆಂದು ಅಡಿಗರು ಒಮ್ಮೆ ಹೇಳಿದ್ದುಂಟು. ರೈಟ್ ವರ್ಡ್ ಇನ್ ರೈಟ್ ಪ್ಲೇಸ್ ಎಂಬ ಸೂತ್ರದ ಅಂತರಾರ್ಥವೇ ಇದು. ಕವಿಗಳಷ್ಟು ಪ್ರಜಾಪ್ರಭುತ್ವವಾದಿಗಳೂ ಆಯ್ಕೆಯ ಸ್ವಾತಂತ್ರ್ಯವನ್ನು ಅಳೆದು ತೂಗಿ ನಿರ್ವಹಿಸುವವರು ಇನ್ನ್ಯಾರು?

ಕುಮಾರವ್ಯಾಸನ ಒಂದು ಪದ್ಯವನ್ನು ನೋಡಿ:

ವಿನುತ ಸಂಜಯ ಸಹಿತ ಕೌರವ
ಜನಪ ಬಂದನು ತತ್ಸರೋವರ
ಕನಿಲನೆದಿರಾದನು ಸುಗಂಧದ ಶೈತ್ಯಪೂರದಲಿ|
ತನುವಿಗಪ್ಯಾಯನದಿನಂತ
ರ್ಮನಕೆ ಪಲ್ಲಟವಾಯ್ತು ಭೀಮನ
ಜನಕನರಿದನು ತನ್ನ ಗುಪ್ತ ಸ್ಥಾನ ಸಂಗತಿಯ||

gopala-krishna-adigaಸಂಜಯನ ಜೊತೆಗೆ ದುರ್ಯೋಧನನು ಕಾಲವಂಚನೆಗಾಗಿ ವೈಶಂಪಾಯನ ಸರೋವರದ ಬಳಿಗೆ ಬರುತ್ತಿದ್ದಾನೆ. ಆ ಸರೋವರದ ಕಡೆಯಿಂದ ತಣ್ಣನೆಯ ಸೌರಭಭರಿತ ಗಾಳಿ ಬೀಸುತ್ತಾ ದುರ್ಯೋಧನನ ಶರೀರಕ್ಕೆ ಆಪ್ಯಾಯಮಾನವಾಗುತ್ತದೆ. ಇದೊಂದ ಸಹಜ ದೈಹಿಕಾನುಭವ. ಸರೋವರ ಬಳಿಗೆ ಮುಸ್ಸಂಜೆ ಹೋಗುವ ಯಾರಿಗೂ, ಯಾವಾಗಲೂ ಆಗುವಂಥದ್ದು. ಆದರೆ ಆವತ್ತು ವೈಶಂಪಾಯನ ಸರೋವರವನ್ನು ಸಮೀಪಿಸುತ್ತಿರುವವನು ಯಾರೋ ಅಲ್ಲ. ಅವನೇನು ಸಂಜೆಯ ವಾಯುವಿಹಾರಕ್ಕೆ ಬಂದವನೂ ಅಲ್ಲ. ಯುದ್ಧದಲ್ಲಿ ತನ್ನ ಸಮಸ್ತ ಸೈನ್ಯಬಲವನ್ನೂ ಕಳೆದುಕೊಂಡು ತ್ರಸ್ತನಾಗಿರುವ ಕೌರವ ಸಾರ್ವಭೌಮ!

ಬರುತ್ತಿರುವುದು, ಆ ರಾತ್ರಿ ತಾನು ಪಾಂಡವರಿಗೆ ಸಿಕ್ಕ ಬಾರದು, ಹೇಗಾದರೂ ಕಾಲವಂಚನೆ ಮಾಡಬೇಕು, ಮಾರನೆಯ ಬೆಳಿಗ್ಗೆ ಅವರೊಂದಿಗೆ ಯುದ್ಧಹೂಡಬೇಕು ಎಂಬ ಸಂಕಲ್ಪದ ಛಲಗಾರ ದುರ್ಯೋಧನ! ಅವನು ಜಲಸ್ತಂಭನದಿಂದ ಆ ಇರುಳು ಆ ಸರೋವರದಾಳದಲ್ಲಿ ಮೈಮರೆಸಿಕೊಂಡಿರುವುದು ಯಾರಿಗೂ ತಿಳಿಯಬಾರದು. ಪಾಂಡವ ಪಕ್ಷದವರಿಗಂತೂ ತಿಳಿಯಲೇ ಬಾರದು. ಹೀಗಿರುವಾಗ ಅವನಿಗೆ ಎದುರಾದವನು ಭೀಮನ ಜನಕ! ಕವಿ ತಂಗಾಳಿ ಎನ್ನದೆ ಇಲ್ಲಿ ಗಾಳಿಯನ್ನು ವ್ಯಕ್ತಿರೂಪಕ್ಕೆ ತಂದು ಭೀಮನ ಜನಕ ಎನ್ನುತ್ತಾನೆ.

ಭೀಮನ ಜನಕ ಎಂಬ ಮಾತು ಇಲ್ಲಿ ಎಷ್ಟೊಂದು ಉಚಿತವಾಗಿದೆ ಗಮನಿಸಿ. ಭೀಮನ ಜನಕ ಎಂಬ ಒಂದು ಪ್ರಯೋಗದಿಂದ ತಂಗಾಳಿಯು ಭೀಮನ ಕಡೆಯವನು ಎಂಬುದನ್ನು ಸೂಚಿಸಿದಂತಾಯಿತು! ಆದುದರಿಂದಲೇ ದುರ್ಯೋಧನನ ಶರೀರಕ್ಕೆ ತಾಗಿದ ತಂಗಾಳಿ ಆಪ್ಯಾಯಮಾನವಾದರೂ ಅವನ ಒಳಮನಕ್ಕೆ ಅದು ದುಸ್ಸಹವಾಯಿತು! ಅನುಭವದ ವಿರುದ್ಧ ಕವಲುಗಳನ್ನು ಕವಿ ಹೇಗೆ ಅಭಿವ್ಯಕ್ತಿಸಿದ್ದಾನೆ ಗಮನಿಸಿ! ಭೀಮನ ಜನಕ ಎಂಬ ಒಂದು ಪ್ರಯೋಗ ಈ ಪದ್ಯದಲ್ಲಿ ಅದೆಷ್ಟು ಸಾರ್ಥಕವಾಗಿ ಬಳಕೆಯಾಗಿದೆ ನೋಡಿ! ಯುಕ್ತ ಪದಗಳಿಂದ ಗುರಿಯಿಟ್ಟು ಹೊಡೆಯುವುದು ಎಂದರೆ ಹೀಗೆ. ಹಾಗೆ ಗುರಿಯಿಟ್ಟು ಹೊಡೆಯುವುದರಲ್ಲಿ ಮಹಾಕವಿಗಳು ಪರಿಣತರಾಗಿರುತ್ತಾರೆ.

ಇಂಥದೇ ಭೌತಿಕಾನುಭವವೊಂದು ಅರ್ಜುನನಿಗೆ ಆಪ್ಯಾಯಮಾನವಾದ ಸಂದರ್ಭವನ್ನು ಈಗ ಗಮನಿಸೋಣ:

ಗಿಳಿಯ ಮೃದು ಮಾತುಗಳ ಮರಿಕೋ
ಗಿಲೆಯ ಮಧುರ ಧ್ವನಿಯ ಹಂಸೆಯ
ಕಳರವದ ಮರಿ ನವಿಲ ಕೇಕಾರವದ ನಯಸರದ|
ಮೆಲು ದನಿಯ ಪಾರಿವದ ತುಂಬಿಯ
ಲಲಿತ ಗೀತದ ವನವನದ ಸಿರಿ ಬಗೆ
ಗೊಳಿಸಿತೈ ಪೂರ್ವಾಭಿಭಾಷಣದಲಿ ಧನಂಜಯನ||

ಮಾತು, ಧ್ವನಿ, ಕಲರವ, ನಯಸರ, ಗೀತ-ಇವೆಲ್ಲವೂ ಜೀವಧ್ವನಿಯ ವಿವಿಧ ಸ್ವರೂಪವನ್ನು ಸೂಚಿಸುವ ಪದಗಳಾಗಿವೆ. ಮಾತಿನ ವಿಕಾಸವನ್ನೋ, ವಿನ್ಯಾಸವನ್ನೋ ಸೂಚಿಸುವ ಪದಗಳಿವು. ಆಯಾ ಪ್ರಾಣಿಪಕ್ಷಿಗಳಿಗೆ ಉಚಿತವಾದ ಪದಗಳನ್ನೇ ಕವಿ ನಿಯೋಜಿಸಿದ್ದಾನೆ. ಧ್ವನಿಯ ಬಹುಳತೆ ನಮಗೆ ಬೆರಗುಪಡಿಸುವ ಮೊದಲ ಅಂಶ. ಇದೆಲ್ಲವೂ ವನವನದ ಸಿರಿ! ಜೀವ ವೈವಿಧ್ಯ ಮತ್ತು ಅವುಗಳು ಉತ್ಪಾದಿಸುವ ಧ್ವನಿ ವೈವಿಧ್ಯ ಕಾಡಿನ ಐಶ್ವರ್ಯ ಎಂಬ ಕಲ್ಪನೆ ಜೀವ ನಾಶದ ಈ ಸಂದರ್ಭದಲ್ಲಿ ಎಷ್ಟು ಅರ್ಥಪೂರ್ಣವಾಗುತ್ತದೆ. ವನಸಿರಿ ಎಂಬ ಮಾತು ಇವತ್ತು ಕೇವಲ ಅಣಕವಾಗಿಬಿಟ್ಟಿದೆಯಲ್ಲವೇ?

ಪದ್ಯವನ್ನು ಮತ್ತೊಮ್ಮೆ ಓದಿದಾಗ ಪೂರ್ವಾಭಿಭಾಷಣ ಎಂಬ ಪದಸಮುಚ್ಚಯ ನಮ್ಮನ್ನು ಆಕರ್ಷಿಸುತ್ತದೆ. ಈ ಪ್ರಯೋಗಕ್ಕೆ ಪ್ರೇರಣೆ ರಾಮಾಯಣದಿಂದ ಕವಿಗೆ ಒದಗಿದ ಹಾಗಿದೆ. ವಾಲ್ಮೀಕಿ ರಾಮನನ್ನು ವರ್ಣಿಸುವಾಗ ಅವನನ್ನು ಸ್ಮಿತಪೂರ್ವಭಾಷಿ ಎಂದು ಬಣ್ಣಿಸುತ್ತಾನೆ. ಬೇರೆಯವರು ತನ್ನನ್ನು ಮಾತಾಡಿಸುವ ಮೊದಲೇ ತಾನೇ ಮುಂದಾಗಿ ಇತರರೊಂದಿಗೆ ನಗುನಗುತ್ತಾ ಮಾತಾಡುವವನು ಸ್ಮಿತಪೂರ್ವಭಾಷಿ!

ರಾಮನ ವಿನಯವನ್ನು ಸೂಚಿಸುವ ವರ್ಣನೆ ಇದು. ಪಾಶುಪತಾಸ್ತ್ರಪ್ರಾಪ್ತಿಗಾಗಿ ಇಂದ್ರಕೀಲ ಎಂಬ ಪರ್ವತಕ್ಕೆ ಏಕಾಂಗಿಯಾಗಿ ಬಂದಿರುವ ಅರ್ಜುನನ್ನು ಆ ವನಗಳ ಹಕ್ಕಿಪಕ್ಕಿಗಳೂ ತಾವೇ ಮುಂದೆ ಬಿದ್ದು ಮಾತಾಡಿಸುತ್ತಿವೆ. ಅದನ್ನೇ ಕವಿ ಪೂರ್ವಾಭಿಭಾಷಣ ಎಂಬ ಪದಗುಚ್ಚದಲ್ಲಿ ಸೂಚಿಸಿರುವುದು. ಅರ್ಜುನನಿಗೆ ಈ ಪೂರ್ವಾಭಿಭಾಷಿತ ಸಂತೋಷಪಡಿಸಿದೆ.

ರಾಮಾಯಣದ ಒಂದು ಉಕ್ತಿಯನ್ನು ಕವಿ ಕುಮಾರವ್ಯಾಸ ಹೇಗೆ ಪುನರ್ಯೋಜಿಸಿದ್ದಾನೆ ನೋಡಿರಿ! ಮೂಲದ ಭಾವಸಂಪತ್ತಿನ ಸ್ಮರಣೆ ಈ ಪ್ರಯೋಗದಿಂದ ಪ್ರಸ್ತುತ ಸಂದರ್ಭಕ್ಕೆ ಆಖಂಡವಾಗಿ ಆಮದುಗೊಳ್ಳುತ್ತದೆ. ಕವಿಗಳು ಪೂರ್ವಶಬ್ದಸ್ಮರಣೆಗಳನ್ನು ಉಜ್ಜೀವಿಸುವುದು ಹೀಗೆ. ಅರ್ಜುನನ ಅನುಭವ ರಾಮಾಯಣದ ನೆನಪಿನಿಂದ ಮತ್ತಷ್ಟು ಸಂಪದ್ಭರಿತವಾಯಿತು.

ನಾವು ಈವತ್ತು ಕಾವ್ಯ ಬರೆಯುತ್ತಿರುವಾಗ ಹೀಗೆ ಭಾಷಾನುಸಂಧಾನವನ್ನು ನಡೆಸುತ್ತಿದ್ದೇವೆಯೇ? ನಡೆಸುತ್ತಿಲ್ಲವಾದರೆ ನಡೆಸಬೇಕಲ್ಲವೇ? ನಡೆಸಬೇಕು ಎಂಬುದನ್ನು ಮಾನ್ಯಮಾಡುವಿರಾದರೆ ಕಾವ್ಯದಲ್ಲಿ ನಾವು ನಡೆಸುವುದು ಕೇವಲ ಶಬ್ದ ಪ್ರಯೋಗವಲ್ಲ; ಶಬ್ದ ನಿಯೋಗವಲ್ಲ; ಶಬ್ದದ ರಸಯೋಗ. ಮೂರಕ್ಕೆ ಮುಕ್ತಾಯ ಎನ್ನುವಂತೆ ಕುಮಾರವ್ಯಾಸನ ಇನ್ನೊಂದು ಪದ್ಯದ ಭಾಷಾಯೋಗದ ಚೆಲುವನ್ನು ಓದುಗರ ಗಮನಕ್ಕೆ ತಂದು ನಾನು ನೇಪಥ್ಯಕ್ಕೆ ಸರಿಯುತ್ತೇನೆ.

ಕುರುಳ ನೇವರಿಸಿದನು| ಗಲ್ಲವ
ನೊರಸಿ ಮುಂಡಾಡಿದನು| ಮಂಚದ
ಹೊರೆಯ ಗಿಂಡಿಯ ನೀರಿನಲಿ ತೊಳೆದನು ಮುಖಾಂಬುಜವ|
ಅರಸಿ ಬಿಡು ಬಿಡು ಖಾತಿಯನು| ವಿ
ಸ್ತರಿಸಲೇಕೆಮ್ಮಣ್ಣನಾಜ್ಞೆಯ
ಗೆರೆಯ| ದಾಂಟಿದೆ ದಾಂಟಿದೆನು| ಹೋಗೆಂದನಾ ಭೀಮ||

ಕುಮಾರವ್ಯಾಸನ ಅದ್ಭುತ ರಚನೆಗಳಲ್ಲಿ ಈ ಪದ್ಯವೂ ಒಂದೆಂದು ಕೀರ್ತಿಸಲ್ಪಟ್ಟಿದೆ. ಆರು ಸಾಲುಗಳಲ್ಲಿ ಕವಿ ಕಟ್ಟಿಕೊಡುವ ದಾಂಪತ್ಯದ ಈ ಸುಂದರ ಕ್ರಿಯಾಚಿತ್ರವನ್ನು ಗಮನಿಸಿ. ಒಂದು ಮಾತಿಲ್ಲ. ಒಂದು ಕತೆಯಿಲ್ಲ. ಆಕೆಯ ಕುರುಳು (ಮುಡಿ) ನೇವರಿಸುತ್ತಾನೆ. ಗಲ್ಲವನ್ನೊರೆಸಿ ಮುದ್ದಾಡುತ್ತಾನೆ. ಮಂಚದ ಪಕ್ಕದಲ್ಲಿದ್ದ (ಹೊರೆಯಲ್ಲಿದ್ದ) ಗಿಂಡಿಯ ನೀರಿನಿಂದ ಅವಳ ಮುಖವನ್ನು ತೊಳೆಯುತ್ತಾನೆ. ಆಮೇಲಷ್ಟೇ ಅವನು ಮಾತಾಡಿದ್ದು.

mahabharath charactersಅರಸೀ! ಕೋಪವನ್ನಿನ್ನು ಬಿಡು! ಬಿಡು! (ದ್ವಿರುಕ್ತಿಯನ್ನು ಗಮನಿಸಿ). ಹೆಚ್ಚು ಮಾತಾಡಲೇಕೆ? ನಮ್ಮ ಅಣ್ಣನ ಆಜ್ಞೆಯ ಗೆರೆಯನ್ನು ದಾಂಟಿದೆನು! ದಾಂಟಿದೆನು! (ಮತ್ತೆ ದ್ವಿರುಕ್ತಿ). ದಾಟುವ ಕ್ರಿಯೆಯನ್ನು ದಾಂಟು ಎಂಬ ಪದ ಅಭಿನಯಿಸಿ ತೋರಿಸುವಂತಿದೆ. ನಮ್ಮ ಹಳ್ಳಿಗಳಲ್ಲಿ ಅವನು ಹಾಕಿದ ಗೆರೆ ದಾಟುವುದಿಲ್ಲ ಎಂಬುದು ಈಗಲೂ ಬಳಕೆಯಲ್ಲಿರುವ ಆಡುನುಡಿ!

ಭೀಮ ದ್ರೌಪದಿಯರ ಈ ಸಂದರ್ಭಕ್ಕೆ ಈ ರೂಢಿಯ ಮಾತನ್ನು ಕುಮಾರವ್ಯಾಸ ಎಷ್ಟು ಚೆನ್ನಾಗಿ ಹೂಡಿದ್ದಾನೆ! ಕೀಚಕನನ್ನು ನಾನು ಕೊಲ್ಲುತ್ತೇನೆ ಎಂದು ಭೀಮನು ದ್ರೌಪದಿಯನ್ನು ಸಾಂತ್ವನ ಪಡಿಸುವ ಈ ಸಂದರ್ಭ ಅದೆಷ್ಟು ಸ್ವಾಭಾವಿಕ! ಅದೆಷ್ಟು ಮುಗ್ಧ! ಒಂದು ಮಗು ಮತ್ತೊಂದು ಮಗುವನ್ನು ಸಮಾಧಾನಪಡಿಸುವಂತೆ! ಅಷ್ಟು ಶುದ್ಧ, ಅಷ್ಟು ನಿರ್ಮಲ ಈ ಸಾಂತ್ವನ ಕ್ರಿಯೆ. ಭೀಮನ ಅದೆಷ್ಟೋ ಅತಿಮಾನುಷ ಸಾಹಸಗಳಿಗಿಂತ ಪ್ರಿಯವಾಗುವಂತಿದೆಯಲ್ಲವೇ ಈ ಮನುಷ್ಯ ಸಹಜವಾದ ಪ್ರೀತಿಯ ಅಭಿವ್ಯಕ್ತಿ?

ಪ್ರತಿಯೊಂದು ದಾಂಪತ್ಯದಲ್ಲೂ ಒಮ್ಮೆಯಲ್ಲ ಒಮ್ಮೆ ಇಂಥ ಘಟನೆ ಸಂಭವಿಸಿಯೇ ಇರುತ್ತದೆಯಲ್ಲವೇ? ದ್ವಾಪರದ ಮಹಾಮಾನವರ ಕಥೆ ಆಧುನಿಕರಾದ ನಮ್ಮ ಬದುಕಿಗೆ ಹತ್ತಿರವಾಗುವುದು ಹೀಗೆ. ಆ ಹಳಬರು ನಮ್ಮ ಈವತ್ತಿನ ನುಡಿಯಲ್ಲಿ ಪಲುಕುತ್ತಿರುವಂತೆಯೇ ಈವತ್ತಿನವರಾಗಿ ಬಿಡುತ್ತಾರೆ.

ನಾನು ಈ ಕೆಲಸ ಮಾಡುತ್ತೇನೆ ಹೋಗು ಎನ್ನುವ ಮಾತಿನಲ್ಲಿ ಬರುವ ಈ ಹೋಗು ಶಬ್ದದ ಅರ್ಥವೇನು? ಆ ಮಾತಿಗೆ “ಹೋಗು” ಎಂಬುದು ಅರ್ಥವಲ್ಲ. ಅದೊಂದು ಮಾತಿನ ರೂಢಿ. ಅದು ಅರ್ಥಕ್ಕೆ ಮೀರಿದ ಕನ್ನಡ ಮಾತಿನ ಸಹಜ ಜಾಯಮಾನ; ಮಾತಿನ ವರಸೆ! ಹೋಗು ಎಂಬುದು ಒಂದು ಭರವಸೆಯ ಧ್ವನಿ. ಜವಾಬುದಾರಿಯನ್ನು ಹೆಗಲ ಮೇಲೆ ಹೊತ್ತ ಭೀಮನ ಭೀಮಸಂಕಲ್ಪ. ಪ್ರಾಯಃ ಈ ಮಹಾನ್ ರಚನೆಯ ಅತ್ತ್ಯುತ್ತಮ ಶಬ್ದಾತ್ಮಯೋಗ ಈ “ಹೋಗು” ಎಂಬ, ಭೀಮನ ಅರ್ಥಾತೀತ ಅಗ್ನಿನುಡಿ!

‍ಲೇಖಕರು Admin

December 24, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. S.p.vijaya Lakshmi

    ಅಬ್ಬಾ, ಎಷ್ಟೊಂದು ಸಂಗತಿಗಳು ಅನಾವರಣವಾಗುತ್ತವೆ ಈ ” ತಾವರೆಯ ಬಾಗಿಲು ” ತೆರೆದೊಡನೆ. ಬೆಳಗಿನ ಓದಿಗೆ ಈ ಅಂಕಣಕ್ಕೆ ಸಾಟಿ ನನಗಂತೂ ಬೇರಿಲ್ಲ. ಶಬ್ದಕೋಶ ಓದಬೇಕು….ಹೌದಲ್ಲ, ಎಷ್ಟು ಸತ್ಯದ ಮಾತು. ಇಲ್ಲವಾದರೆ ಮೊಳದುದ್ದದ ದಾರದ ಬುಗುರಿಯಾಟವೇ ಗತಿ .
    ಎಷ್ಟೆಲ್ಲಾ ಮಹಾಕವಿಗಳಿಲ್ಲಿ ತೆರೆದುಕೊಳ್ಳುತ್ತಾರೆ, ಎಷ್ಟೆಲ್ಲ ಕವಿತೆಗಳ ರಸಗ್ರಹಣ ನಮಗಾಗುತ್ತದೆ ನಿಜಕ್ಕೂ ನಾನು ಈ ಓದಿನಲ್ಲಿ ಮೈಮರೆತುಬಿಡುವೆ. ಶಬ್ದಭಂಡಾರ ಸಂಪದ್ಭರಿತರ ಲಿಸ್ಟಿನಲ್ಲಿ ನಿರ್ವಿವಾದವಾಗಿ ಎಚ್ಚೆಸ್ವಿ ಅವರೂ ಅಗ್ರಗಣ್ಯರೇ…ಸರ್, ನಿಮ್ಮ ಪ್ರತಿಭೆಗೆ ನನ್ನ ಸಾಸಿರ ಪ್ರಣಾಮಗಳು. ನೀವು ಹೀಗೇ ಬರೆಯುತ್ತಿರಿ, ನಾವು ಓದಿನಲ್ಲಿ ಧನ್ಯರಾಗುತ್ತೇವೆ…ಇಂಥ ಲೇಖನಮಾಲೆ ಪ್ರಕಟಿಸುತ್ತಿರುವ ಅವಧಿಗೆ ಧನ್ಯವಾದಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: