ಎಚ್ಹೆಸ್ವಿ ಬರೆವ ಅನಾತ್ಮ ಕಥನ: ನೀನಿಲ್ಲದೆ …

ಅಳಿಯಲಾರದ ನೆನಹು-೨೧

ಎಚ್ ಎಸ್ ವೆಂಕಟೇಶಮೂರ್ತಿ

೧೯೬೮. ಹೊಳಲಕೆರೆಯ ಒಂದು ಪುಟಾಣಿ ಛತ್ರದಲ್ಲಿ ಈ ಹುಡುಗ ಮತ್ತು ಆ ಹುಡುಗಿಯ ಮದುವೆಯ ಸಂಭ್ರಮ. ಛತ್ರ ವಾಸ್ತವವಾಗಿ ಒಂದು ಗೋಡೌನು. ಕಿಟಕಿಗಳು ಎಲ್ಲೋ ಆಕಾಶದಲ್ಲಿ ಇದ್ದವು. ಸಂಜೆ ಬೀಗರು ಬಂದಾಗ ಹುಡುಗಿಗೆ ಹುಡುಗನನ್ನು ನೋಡಬೇಕೆಂಬ ಆಸೆ.

ಅದಕ್ಕಾಗಿ ಅವಳು ಮಂಚದ ಮೇಲೆ ಇಟ್ಟಿದ್ದ ಕುರ್ಚಿಯನ್ನು ಹತ್ತಿ ಗವಾಕ್ಷಿಯಲ್ಲಿ ಅರ್ಧ ಮುಖ ಮಾತ್ರ ಕಾಣಿಸುತ್ತಾ ಹುಡುಗನನ್ನು ನೋಡಲಿಕ್ಕಾಗಿ ನಿಂತಿದ್ದಳು. ಬೀಗರು ಬಂದರು ಬಂದರು ಅಂತ ಯಾರೋ ಕೂಗಿದರು. ಎಲ್ಲಿ ಹೋದರು ಹಾಳಾದ ಆ ವಾಲಗದವರು ಎಂತ ಹಿರಿಯಣ್ಣ ಹಾರಾಡುತ್ತಿದ್ದ.

ವಾಲಗದವರು ಬೀಡಿ ಸೇದುತ್ತಾ ಛತ್ರದ ಹಿಂದೆ ನಿಂತಿದ್ದವರು ಗಡಿಬಿಡಿಯಿಂದ ಬಂದು ಓ ಓ ಓ ವಸಂತಮಾಸ ಓಡಿಬಂದಿದೆ ಎಂದು ಸಿನಿಮಾ ಹಾಡನ್ನು ಪಲುಕುವ ವೇಳೆಗೆ ಬೀಗರು ವೆಂಕಟೇಶ್ವರ ಸರ್ವೀಸಿಂದ ದುಬು ದುಬು ಇಳಿದು ತಲೆಗೂದಲು ಒಪ್ಪಮಾಡಿಕೊಳ್ಳುತ್ತಾ ನಿಂತಿದ್ದರು.

ಹುಡುಗಿ ಒಬ್ಬಳನ್ನೇ ಗೋಡೌನಿನಲ್ಲಿ ಬಿಟ್ಟು ಹೆಣ್ಣಿನ ಕಡೆಯವರೆಲ್ಲಾ ಬೀಗರನ್ನು ಸ್ವಾಗತಿಸಲು ಛತ್ರದ ಮುಂಭಾಗಕ್ಕೆ ಓಡಿದರು. ಹುಡುಗಿ ಹುಡುಗನನ್ನು ನೋಡುವ ಆಸೆಯಿಂದ ಕಿಟಕಿಯಲ್ಲಿ ಅರ್ಧಮುಖವಿರಿಸಿ ಮೆಟ್ಟುಗಾಲಲ್ಲಿ ನಿಂತಿದ್ದಳು. ಬೀಗರು ಬಂದರು. ಹುಡುಗಿಗೆ ಕಂಡದ್ದು ಹುಡುಗನ ಟೋಪಿ ಹಾಕಿದ ತಲೆ ಮಾತ್ರ. ಹತ್ತಾರು ತಲೆಗಳ ಮಧ್ಯೆ ಈ ಟೊಪ್ಪಿಗೆ ತಲೆ ತೇಲಿಹೋಗುವುದನ್ನು ನೋಡಿ ಹುಡುಗಿ, ಪಾಪ, ಮುಖ ಕಿವುಚಿಕೊಂಡಳು.

ಹುಡುಗಿಯ ದರ್ಶನಕ್ಕಾಗಿ ಹುಡುಗನೂ ಕಾತರಿಸುತ್ತಾ ಇದ್ದ. ಆದರೆ ಅವಳನ್ನು ನೋಡುವ ಯಾವ ಉಪಾಯವೂ ಅವನಿಗೆ ಹೊಳೆಯಲಿಲ್ಲ. ಮದುವೆಗೆ ಬಂದಿದ್ದ ಅವನ ಗೆಳೆಯರು ಕೂಡಾ ಗೋಡೌನಿಗೆ ಹೋಗಿ ಹುಡುಗಿಯನ್ನು ನೋಡಿಕೊಂಡು ಬಂದರು.

ಬಹಾಳ ಚೆಲುವೆಕಣಯ್ಯ ನಿನ್ನ ಹುಡುಗಿ ಎಂದು ಹಾಸ್ಯ ಮಾಡಿದರು. ಅದು ಹಾಸ್ಯವೋ ಹೊಗಳಿಕೆಯೋ ಹುಡುಗನಿಗೆ ತಿಳಿಯಲಿಲ್ಲ. ನಾನು ಹುಡುಗಿಯನ್ನು ನೋಡೋದು ಯಾವಾಗ? ಎಂದು ಹುಡುಗ ಭೀಮಜ್ಜಿಯ ಕಿವಿಯಲ್ಲಿ ಪಿಸುಗುಟ್ಟಿದ. ಏನಿದ್ದರೂ ಅಂತರ ಪಠ ಜಾರಿದ ಮೇಲೆಯೇ ಎಂದು ಅಜ್ಜಿ ಹುಡುಗನ ಮೂತಿ ತಿವಿದರು.

ಭಾವಿ ಮಾವ, ಭಾವೀ ಭಾವ ಮೈದುನರು, ಅತ್ತಿಗೆ ನಾದಿನಿಯರು ಬಂದು ಹುಡುಗನನ್ನು ಮಾತಾಡಿಸಿಕೊಂಡು ಹೋದರು. ಹುಡುಗಿಯನ್ನು ನಾನು ಬಂದು ನೋಡಬಹುದೇ ಎಂದು ಅವರನ್ನು ಹೇಗೆ ಕೇಳುವುದು. ಆ ರಾತ್ರಿ ಹುಡುಗನಿಗೆ ಊಟ ಉಪಚಾರ ಯಾವುದೂ ರುಚಿಸಲಿಲ್ಲ. ರಾತ್ರಿ ಊಟ ಆಗಿ ಬಿಡದಿಯಲ್ಲಿ ಬೀಗರಲ್ಲಿ ಮುಖ್ಯರಿಗೆ ಮಾತ್ರ ಹಾಸಿಗೆ ಹಾಸಿಕೊಟ್ಟರು. ಉಳಿದವರಿಗೆ ಈ ವರೆಗೆ ಎಷ್ಟೋ ಮದುವೆಗಳಲ್ಲಿ ಕಾಫಿ ಟೀ ಚೆಲ್ಲಿ ಮೈ ತುಂಬ ಕಲೆ ಮಾಡಿಕೊಂಡಿದ್ದ ಜಿಡ್ಡು ಜಮಖಾನದ ಮೇಲೇ ಶಯನೋತ್ಸವ. ಹುಡುಗ ಬಹಳ ಹೊತ್ತು ನಿದ್ದೆಯಿಲ್ಲದೆ ಹೊರಳಾಡಿದ. ರಾತ್ರಿ ಬಹಳವಾಗಿದ್ದರೂ ಹೆಂಗಸರ ಮಾತು ಮುಗಿದಿರಲಿಲ್ಲ. ದೀಪ ಆರಿಸಿ ಮಲಗಿ ಇನ್ನೂ ಎಂದು ಒಂದು ಗಂಡು ಧ್ವನಿ ಮುಸುಕಿನ ಮರೆಯಲ್ಲೇ ಗರ್ಜಿಸಿತು. ಪರಿಣಾಮ ಒಂದು ನಿಮಿಷದ ಗಾಢ ಮೌನ.

ಮತ್ತೆ ಪಿಸುಪಿಸು ಶುರುವಾಗಿ ನಿಧಾನಕ್ಕೆ ಅದು ಗಟ್ಟಿಗೊಳ್ಳುತ್ತಾ ರಾಜಾರೋಷಾಗಿ ಅಬ್ಬರದ ಹಾದಿ ಹಿಡಿದ ಮೇಲೆ, ಮುಸುಕಿನ ಒಳಗಿದ್ದ ಗಂಡು ಮುಸುಕಿನ ಸಮೇತವೇ ಜಾಗ ಖಾಲಿ ಮಾಡಿ ಪಕ್ಕದಲ್ಲಿದ್ದ ಕನ್ಯಾಕುಮಾರಿ ದೇವಸ್ಥಾನದ ಜಗಲಿಗೆ ಗುಳೆ ಹೊರಟಿತು.

ಜಂಗಮ ಲತಾ ಲತಾಂಗಿಯರ ನಗೆ ಮಾತುಗಳಿಂದ ಮತ್ತೆ ಸಂಸಾರ ಸರಸಮಯವಾಗಿ, ಹುಡುಗ ಮುಸುಕುಹಾಕಿಕೊಂಡು ತನ್ನ(ಇನ್ನಾ ಆಗಿಲ್ಲದ) ಹುಡುಗಿಯ ಮಾತು ಮೂತಿಗಳನ್ನು ಕಲ್ಪಿಸುತ್ತಾ ಮೆಲ್ಲಗೆ ಬೆಳಗಿನ ಜಾವ ನಿದ್ದೆಗೆ ಜಾರಿಕೊಂಡ. ಮತ್ತೆ ಅವನು ಥಟ್ಟನೆ ಕಣ್ಣು ಬಿಟ್ಟಾಗ ಹಾಲಿನಲ್ಲಿ ಬಿಡಿಸಿದ್ದ ಹಾಸಿಗೆಗಳೆಲ್ಲಾ ಅದ್ಯಾವ ಮಾಯದಲ್ಲೋ ಮಾಯವಾಗಿದ್ದವು. ಜಮಖಾನವನ್ನೂ ಯಾರೋ ಸುತ್ತಿ ಮೂಲೆಯಲ್ಲಿ ನೀನೂ ಸ್ವಲ್ಪ ಮಲಗು ಅಂತ ಉರುಡುಬಿಟ್ಟಿದ್ದರು.

ಯಾರೋ ತಾಯಿ ಇವನ ಹಾಸಿಗೆಯ ತುದಿಯಲ್ಲಿ ತನ್ನ ಕೈಗೂಸನ್ನ ಮಲಗಿಸಿ ಎಲ್ಲಿಹೋಗಿದ್ದಳೋ..ಮಗು ಹಾಸಿಗೆ ಒದ್ದೆ ಮಾಡಿ ಅಳಲಿಕ್ಕೆ ಶುರುಹಚ್ಚಿತು. ಸಾಕಪ್ಪ ದೇವರೆ ಎಂದು ಹುಡುಗ ಧಡಕ್ಕನೆ ಎದ್ದುಕೂತ. ವರನದು ನಿದ್ದೆ ಆಯಿತೋ? ಎಂದು ಕೂಗುತ್ತಾ ಹಾಲಿನಲ್ಲಿ ಈಗ ಪ್ರವೇಶ ಮಾಡಿದವರು ಗೊಗ್ಗರು ಕಂಠದ ರಾಮಭಟ್ಟರು. ಯಾಕೋ ಸರಿಯಾಗಿ ನಿದ್ದೆ ಬರಲಿಲ್ಲ…ಅಂದ ವರಮಹಾಶಯ.

ಕಷ್ಟವಾಗತ್ತಪ್ಪ…ಈವತ್ತು ರಾತ್ರಿ ಬೇರೆ ನೀನು ನಿದ್ದೆ ಮಾಡೋಹಾಗಿಲ್ಲ..ಎಂದು ಮೈಲಿಮುಖದ ಪುರೋಹಿತರು ವಕ್ರವಾಗಿ ನಕ್ಕರು. ಅವರಿಗೆ ಪಾಪ ಅವರ ಮೊದಲ ರಾತ್ರಿ ನೆನಪಾಯಿತೋ ಏನು ಸುಡುಗಾಡೋ?!

ಬೆಂಗಳೂರಿಂದ ಮದುವೆಗೆ ಬಂದಿದ್ದ ಹುಡುಗನ ಬಾಲ್ಯದ ಗೆಳೆಯರು ಬೇರೇನೂ ಕೆಲಸವೇ ಇಲ್ಲ ಅನ್ನುವಂತೆ ಇವನಿಗೆ ಆ ಹೊತ್ತಿಗೇ ಅಮರಿಕೊಂಡು ಕನಸಲ್ಲಿ ಯಾರು ಬಂದಿದ್ರಯ್ಯಾ? ಇನ್ನೇನೂ ರಾಜಲಕ್ಷ್ಮೀನೇ ಬಂದಿರ್ತಾಳೆ? ಕನಸಲ್ಲೂ ಆ ಹುಡುಗಿಗೆ ಯಾಕಯ್ಯ ಕಾಟಕೊಡ್ತೀ? ಇತ್ಯಾದಿ ತಮ್ಮ ಹುಡಿಗಾಟಿಕೆ ಶುರು ಮಾಡಿದರು! ಆ ಹುಡುಗರು ಇವನಿಗೆ ಸರಿಯಾಗಿ ಇಡ್ಲಿ ತಿನ್ನಲೂ ಬಿಡಲಿಲ್ಲ. ನಂಟರು ಇಷ್ಟರು ಧುಮು ಧುಮು ಇಳಿಯುತ್ತಲೇ ಇದ್ದರು.

ಅವರನ್ನೆಲ್ಲಾ ನಗು ನಗುತ್ತಾ ಮಾತಾಡಿಸುವಲ್ಲಿ ಹುಡುಗ ಹೈರಾಣಾಗಿ ಹೋದ. ಬೇಗ ಅರಿಸಿನ ಎಣ್ಣೆ ಶಾಸ್ತ್ರ ಮಾಡಿ ಹುಡುಗನಿಗೆ ತಲೆಯ ಮೇಲೆ ಎರಡು ಚೊಂಬು ನೀರು ಹಾಕಿ ಎಂದು ಗೊಗ್ಗರ ಧ್ವನಿ ಮೊಳಗುತ್ತಾ ಇತ್ತು. ವಾಲಗದವ ಬೇರೆ ಒಂದೇ ಸಮನೆ ಓ..ಓ..ಓ ಎಂದು ವಸಂತಮಾಸದ ಕೋಗಿಲೆ ಹಾಡು ಬಾರಿಸುತ್ತಲೇ ಇದ್ದ. ಆಮೇಲೆ ಶುರುವಾಯಿತು ನೋಡಿ ಶಾಸ್ತ್ರ.

ಪುರೋಹಿತರು ತಮಗೆ ಗೊತ್ತಿರುವ ಶಾಸ್ತ್ರಗಳನ್ನೆಲ್ಲಾ ಚಾಚೂ ತಪ್ಪದೆ ಈ ಮದುವೆಯಲ್ಲಿ ಪ್ರಯೋಗಿಸಲೇ ಬೇಕು ಅಂತ ಹಟ ತೊಟ್ಟವರ ಹಾಗೆ ಕಂಡರು. ಆ ಪುರೋಹಿತರೋ…? ಅವರ ಬಾಯಲ್ಲಿ ಮಂತ್ರಕ್ಕಿಂತ ಉಗುಳೇ ಜಾಸ್ತಿ ಅಂತ ನಮ್ಮ ಕಡೆಯವರು ಯಾರೋ ನಗೆಚಾಟಿಕೆ ಮಾಡಿದ್ದರಂತೆ.

ಅದು ಹೇಗೋ ಪುರೋಹಿತರ ಕಿವಿಗೆ ಬಿದ್ದು ಪಾಪ ಬಡಪಾಯಿ ಹುಡುಗ ಬಲಿಪಶುವಾಗಬೇಕಾಯಿತು. ಸಂಸ್ಕೃತದಲ್ಲಿ ಹೇಳಿದ್ದನ್ನು ಕನ್ನಡದಲ್ಲಿ ಅನುವಾದಿಸುತ್ತಾ ಇವರು ಪುರೋಹಿತರೋ ಅನುವಾದ ಪ್ರಾಧಿಕಾರದ ಅಧ್ಯಕ್ಷರೋ ಎನ್ನುವಂತೆ ಪುರೋಹಿತರು ವಿಜೃಂಭಿಸಹತ್ತಿದ್ದರು.

ಕಾಶೀಯಾತ್ರೆಯಲ್ಲಿ ಹುಡುಗನಿಗೆ ಕಿವಿಗೆ ಕೋಡುಬಳೆ ಹಾಕಬೇಕಂತೆ. ಹುಡುಗನ ಅತ್ತೆ ಹಳೇ ಕಾಲದವರಾದ ಕಾರಣ ಮಜಭೂತು ಸೈಜಿನ ಬಂಡಿಗಾಲಿಗಳಂಥ ಎರಡು ಕೋಡುಬಳೆ ತಾವೇ ಖುದ್ದಾಗಿ ಮಾಡಿಕೊಂಡುಬಂದಿದ್ದರು. ಅವನ್ನು ಕಿವಿಗೆ ನೇತು ಹಾಕಿದಾಗ ಕರ್ಣನ ಕರ್ಣಕುಂಡಲಗಳಂತೆ ಕಂಗೊಳಿಸುತ್ತಿದ್ದ ಅವು ಹುಡುಗನ ಹೆಗಲಿಗೆ ಢಣಾ ಢಣಾ ದೇವಸ್ಥಾನ ಜಾಗಟೆಯ ಹಾಗೆ ಬಾರಿಸುತ್ತಾ ಇದ್ದವು. ಹಿಂದೆ ಕೊಡೆ ಹಿಡಿದುಕೊಂಡ ಫೋಟೋಕ್ಕೆ ಹಲ್ಲು ಕಿರಿಯುತ್ತ ಹುಡುಗನ ಹೆಗಲಮೇಲೆ ತನ್ನ ಮುಖಮಂಡಲವೂರುತ್ತಿದ್ದ ಭಾವಮೈದ.

ಕಾಶೀಯಾತ್ರೆಗೆ ಹೋಗುವುದಕ್ಕೆ ಹುಡುಗನಿಗೇನು ಹುಚ್ಚಾ? ಹುಡುಗಿಯ ವದನಾರವಿಂದ ಕಂಡರೆ ಸಾಕು ಶಿವನೇ ಅಂತ ಅವನು ರಾತ್ರಿಯೆಲ್ಲಾ ಜಾಗರಣೆ ಮಾಡಿ ಯಾಗಿದೆ. ನೀವು ಕಾಶೀಯಾತ್ರೆಗೆ ಹೋಗ ಬೇಡಿ. ನಿಮಗೆ ನಮ್ಮ ಮಗಳು ಕೊಡುತ್ತೇವೆ. ಮದುವೆಯಾಗಿ ಗೃಹಸ್ಥಾಶ್ರಮ ಸ್ವೀಕರಿಸಿ ಎಂದು ಮಾವ ಹೇಳೀದಾಗ ಹುಡುಗ ಖುಷಿಗೆ ಎರಡಡಿ ಮೇಲಕ್ಕೆ ಚಿಮ್ಮಬೇಕು. ಆಗ ಅವನ ಕಿವಿಗೆ ತೂಗು ಹಾಕಿದ್ದ ಕೋಡಬಳೆ ತಾವಾಗಿಯೇ ಕಳಚಿಬೀಳಬೇಕು.

ಇದು ನಮ್ಮ ಪುರೋಹಿತರ ನಿರ್ದೇಶನ. ಹುಡುಗನಿಗೆ ಇದೇ ಅರಂಗೇಟ್ರಂ. ಅವನು ಎಷ್ಟು ಹಾರಿಕುಪ್ಪಳಿಸಿದರೂ ಕೋಡಬಳೆ ಕೆಳಕ್ಕೆ ಬೀಳಲೊಲ್ಲವು. ಸುತ್ತಾ ನೆರೆದಿದ್ದ ಮಂದಿ ಹೋ ಎಂದು ನಗತೊಡಗಿದ್ದಾರೆ. ಹಿರಿಯ ಮುತ್ತೈದೆಯರೂ ತಮ್ಮ ವಯಸ್ಸಿನ ಮರ್ಯಾದೆ ಮರೆತು ಸೆರಗು ಬಾಯಲ್ಲಿ ಸಿಕ್ಕಿಸಿಕೊಂಡು ಕೊಕ್ ಕೊಕ್ ಎಂದು ಕಿಸಿಯಲಿಕ್ಕೆ ಹತ್ತಿದ್ದಾರೆ. ಆಗ ಮತ್ತೆ ಕೇಳಿದ್ದು(ನೆನ್ನೆ ರಾತ್ರಿ ಮುಸುಕಿನ ಮರೆಯಿಂದ ಕೇಳಿತ್ತಲ್ಲಾ)ಹುಣಿಸೇಕಟ್ಟೆ ಹುಲಿಯ ಸಿಂಹ ಗರ್ಜನೆ. ( ಹುಲಿಗರ್ಜನೆ ಅರಿಸಮಾಸ ಎಂಬ ಕಾರಣಕ್ಕೆ ಸಿಂಹ ಗರ್ಜನೆ ಎಂದು ಅರ್ಥಾರೋಪ ಮಾಡಲಾಗಿದೆ). ಸಿಂಹ ಗರ್ಜನೆ ಕನ್ನಡ ಭಾಷೆಯಲ್ಲಿ ವಡೆದುಕೊಂಡಿದ್ದು ಹೀಗೆ: “ಯಾಕಿಂಗೆ ಕಿಸೀತೀರಿ..? ಇಲ್ಲಿ ಕೋತಿ ಕುಣಿತಾ ಇದೆಯಾ?”

ಅಂತೂ ಮಧ್ಯಾಹ್ನದ ವೇಳೆಗೆ ವಧುವನ್ನ ಕರ್ಕೊಂಬನ್ನಿ ಅಂತ ಪುರೋಹಿತರು ಕೂಗಿದರು. ಆ ವೇಳೆಗೆ ಬೆಂಕಿಯ ಮುಂದೆ ಕೂತು, ಎದ್ದು, ಕೂತು, ಎದ್ದು ಹುಡುಗ ಸುಸ್ತಾಗಿಹೋಗಿದ್ದ. ಹುಡುಗಿಯ ಗೌರಿಪೂಜೆ ಸಾಂಗೋಪಾಂಗವಾಗಿ ನಡೆಯುತ್ತಾ ಇತ್ತಂತೆ. ಅದರ ಜವಾಬುದಾರಿ ವಹಿಸಿಕೊಂಡಿದ್ದವರು ಶಾಸ್ತ್ರ ಸಾಂಗತ್ಯ ಸಮ್ರಕ್ಷಕಿ ಎಂದು ಬಿರುದಾಂಕಿತೆಯಾಗಿದ್ದ ಹೊಳಲಕೆರೆಯ ಗಂಗಜ್ಜಿ.

ಅವರು ಕೂತರೆ ಒಂದು ಹಾಡು, ನಿಂತರೆ ಒಂದು ಹಾಡು, ಸೀತರೆ ಒಂದು ಹಾಡು ಹೇಳುತ್ತಾ ಸಾಂಗತ್ಯದಲ್ಲಿ ಚೂರು ಲೋಪವಾಗದ ಹಾಗೆ ಮೌಖಿಕವನ್ನು ಮುಗಿಸುವಲ್ಲಿ ವಿಶ್ವಖ್ಯಾತಿಯನ್ನು ಪಡೆದವರಾಗಿದ್ದೇ ಫಜೀತಿಗೆ ಕಾರಣ. ಪುರೋಹಿತರು ಹುಡುಗೀ ಕರ್ಕಂಬನ್ನಿ ಕರ್ಕಂಬನ್ನಿ ಎಂದು ಕೂಗೇ ಕೂಗಿದರೂ, ಸುಲಭಕ್ಕೆ ಹುಡುಗಿಯನ್ನು ಕರೆ ತಂದರೆ ತಾನು ಪುರೋಹಿತರಿಗಿಂತ ತೂಕದಲ್ಲಿ ಕಡಿಮೆ ಯಾಗುತ್ತೇನೆ ಎಂದುಕೊಂಡಳೋ ಏನೋ ನಮ್ಮ ಗಂಗಜ್ಜಿ.

ಅಂತೂ ಮಟಮಟ ಮಧ್ಯಾಹ್ನ ಎರಡುಗಂಟೆಗೆ ಮೂತಿ ತುಂಬ ಅರಿಸಿನ ಬಳಿದ, ಹಣೆಯ ತುಂಬ ಕುಂಕುಮ ಧರಿಸಿದ, ತಲೆತುಂಬ ಹೂ ಮುಡಿದ ಹೋದಿಗ್ಗೆರೆಯ ಕೆರೆಕೋಡಿಕೆಂಚಮ್ಮನ ತದ್ರೂಪಿಯಂತೆ ಕಂಗೊಳಿಸುತ್ತಿದ್ದ ಹುಡುಗಿಯನ್ನ ಅನಾಮತ್ತಾಗಿ ಸೋದರಮಾವ ಎತ್ತಿಕೊಂಡು ಧಾರೆ ಮಂಟಪಕ್ಕೆ ಕರೆತಂದದ್ದಾಯಿತು. ಕಿರಾತಕರಂಥ ಇಬ್ಬರು ನಕ್ಷತ್ರಿಕರು ಅಂತರಪಠದ ಎರಡೂ ಚುಂಗು ಹಿಡಿದುಕೊಂಡು ಹುಡುಗ ಒಂದೇ ಒಂದು ಇಂಚಿನಷ್ಟಾದರೂ ಹುಡುಗಿಯನ್ನು ನೋಡಲಾಗದಂತೆ ಗೌಪ್ಯವನ್ನು ಕಾಪಾಡುತ್ತಿದ್ದರು.

ಇತ್ತ ಹುಡುಗನ ಸೋದರತ್ತೆ ಅವನ ಪಕ್ಕೆಗೆ ತನ್ನ ಮೂಳೆಕೈಯಿಂದ ಒಂದೇ ಸಮನೆ ತಿವಿಯುತ್ತಾ ತೆಪರುಮುಂಡೇದೇ ನೀನೇ ಮೊದಲು ಜೀರ್ಗೆಬೆಲ್ಲ ಹಾಕು ಎಂದು ಗುರುಗುಟ್ಟುತ್ತಾ ಇದ್ದಳು. ಅಂತರಪಠ ಸರಕ್ಕನೆ ಸರಿದಾಗ ಒಂದು ಪವಾಡವೇ ಸಂಭವಿಸಿಬಿಟ್ಟಿತು. ತೆಳ್ಳಗೆ ಬಳ್ಳಿಯಂತೆ ಬಳುಕುತ್ತಿದ್ದ ಪುಟ್ಟ ಹುಡುಗಿಯನ್ನು ಧಡಿಯ ಸೋದರ ಮಾವ ಅನಾಮತ್ತು ಮೇಲಕ್ಕೆ ಎತ್ತಿದ್ದರಿಂದ ಹುಡುಗಿ ಅರಾಮಾಗಿ ತಟ್ಟೆ ತಟ್ಟೆ ಅಕ್ಷತೆ ಹುಡುಗನ ಭಾಷಿಂಗ ಭೂಷಿತ ಜರೀರುಮಾಲಿನ ಮೇಲೆ ಸುರಿದು ಈ ಪಂದ್ಯದಲ್ಲಿ ಜಯಶಾಲಿಯಾದಳು. ನಮ್ಮ ಹುಡುಗಿಯೇ ಮೊದಲು ಅಕ್ಷತೆ ಹಾಕಿದ್ದು ಎಂದು ಪುರೋಹಿತರು ಗೊಗ್ಗರುಗೊರಳಲ್ಲಿ ತೀರ್ಪು ಉದ್ಘೋಷಿಸಿದ್ದೂ ಆಯಿತು.

ಹುಡುಗಿಗೆ ಧಾರೆಗಾಗಿ ಬಿಳೀಸೀರೆ ಉಡಿಸಿದ್ದರು. ಮೇಲೊಂದು ರೇಷ್ಮೆ ಸೀರೆ ಹೊದಿಸಿದ್ದರು. ಗಾಭರಿ, ನಾಚಿಕೆಗಳಿಂದ ಕಂಗಾಲಾಗಿದ್ದ ಪುಟ್ಟ ಹುಡುಗಿ ಹುಡುಗನನ್ನು ತಲೆಯೆತ್ತಿ ನೋಡಲಿಲ್ಲ ಕೂಡ! ಹುಡುಗನಿಗೆ ತುಂಬ ನಿರಾಶೆಯಾಯಿತು. ಲಕ್ಷಣವಾಗಿ ಡ್ರೆಸ್ಸ್ ಮಾಡಿಕೊಂಡು ಕರಕೊಂಡು ಬರಬಾರದೆ ಹುಡುಗೀನಾ? ಇದೇನಪ್ಪಾ ಫ್ಯಾನ್ಸೀ ಡ್ರೆಸ್ಸು ಎಂದು ಹುಡುಗ ಮುಖ ಸಣ್ಣದು ಮಾಡಿಕೊಂಡ.

ಮಧ್ಯಾಹ್ನ ಭೂಮ ಅಂತ ಎಲೆಯ ಮೇಲೆ ಎಲೆ ಹಾಕಿ ಹುಡುಗ ಹುಡುಗಿಗೆ ಭೂಮದೂಟ ಬಡಿಸಿದರು. ಹುಡುಗನಿಗೆ ಒಂದು ತುತ್ತೂ ತಿನ್ನಲಾಗಲಿಲ್ಲ. ಹುಡುಗಿಯಂತೂ ಬಿಡಿ ದೇವರೇ ಗತಿ! ಚಕ್ಕುಲಿ ತಗೋ..ಅದನ್ನು ಹುಡುಗಿಯ ಬಾಯಲ್ಲಿ ತುರುಕು ಎಂದು ಡೈರೆಕ್ಟರ್ ನಂಬರ್ ಒನ್. ಬೇಡ ಬೇಡ ಸೀ ತಿನ್ನಿಸಬೇಕು. ಆ ಕಡುಬು ತಗೋ…ಮುರೀಬೇಡ..ಇಡಿಯಾಗಿ ಅವಳ ಬಾಯಲ್ಲಿ ತುರುಕು ಅಂತ ಡೈರೆಕ್ಟರ್ ನಂಬರ್ ಟು. ಕೈ ಮುಂದಿಂದ ತರೋದಲ್ಲಪ್ಪ. ಹುಡುಗಿಯ ತಲೆಯಹಿಂದಿಂದ ಕೈ ಬಂದು ಅವಳ ಬಾಯಿಗೆ ಒಡ್ಡಬೇಕುಅಂತ ಡೈರೆಕ್ಟರ್ ನಂಬರ್ ತ್ರೀ.

ಇಷ್ಟರ ಮಧ್ಯೆ ಹುಡುಗಿ ಅದೇನು ಧೈರ್ಯಮಾಡಿದಳೋ ಒಂದು ಮಜಭೂತು ಲಾಡನ್ನು ಹುಡುಗನ ಬಾಯಿಗೆ ತುರುಕಿಯೇ ಬಿಟ್ಟಳು. ನುಂಗುವ ಹಾಗಿಲ್ಲ; ಉಗುಳುವ ಹಾಗಿಲ್ಲ. ಮೊಹರಮ್ಮಿನಲ್ಲಿ ಹುಲಿವೇಷ ಹಾಕಿದವ ನಿಂಬೆ ಹಣ್ಣು ಕಚ್ಚಿಕೊಂಡ ಹಾಗೆ ಕಾಣುತಾ ಇತ್ತು ಲಾಡು ಬಾಯಲ್ಲಿ ಹುಡುಗ ಕಚ್ಚಿಕೊಂಡದ್ದು. ಹೀಗೆ ಹುಡುಗಿ ಹುಡುಗನ ಭೂಮದೂಟ ಮಾಡದೆಯೇ ಮುಗಿದುಹೋಯಿತು!

ಊಟವಾದ ಮೇಲೆ ಒಂದು ಕ್ಷಣ ಕಣ್ಣು ಮುಚ್ಚುವುದಕ್ಕೂ ಪುರೋಹಿತರು ಬಿಡಲಿಲ್ಲ. ಆ ಅಂದರೆ ಠೋ ಅನ್ನಲಿಕ್ಕೆ ಬರದ ಗಂಗಜ್ಜಿಯೆದುರು ತಾವು ಎಷ್ಟು ಮಾತ್ರಕ್ಕೂ ಹಗುರಾಗಬಾರದೆಂದು ಅವರು ಭೋಂ ಭೋಂ ಎಂದು ಜೋರಾಗಿ ಸಂಸ್ಕೃತ ಊದಲಿಕ್ಕೆ ಶುರು ಮಾಡಿದರು.

ನಾಗೋಲಿ ಶಾಸ್ತ್ರ ಶುರುವಾಯಿತು. ಅವರ ಮುಖದಿಂದ ಸಂಸ್ಕೃತ ಹೇಗೆ ಬರುತ್ತಾ ಇತ್ತು ಎಂದರೆ ಮುಂಗಾರಲ್ಲಿ ತುಂತುರು ಮಳೆ ಸಮೇತ ಗುಡುಗು ಬರುತ್ತಲ್ಲ ಹಾಗೆ. ಉಪ್ಪಿನ ಆನೆಯ ಮೇಲೆ ಹುಡುಗಿಯನ್ನು ಕೂರಿಸಿದರು.

ಅಕ್ಕಿ ಆನೆಯ ಮೇಲೆ ಹುಡುಗನನ್ನ. ಇಬ್ಬರೂ ತಮ್ಮ ತಮ ಆನೆ ಹತ್ತಿ ಸಂಸಾರವೆಂಬ ಹೊಳೆ ದಾಟಬೇಕಾಗಿದೆ. ಹುಡುಗಿಯ ಉಪ್ಪಿನ ಆನೆ ನೀರಲ್ಲಿ ಕರಗಿಹೋಗುತ್ತೆ. ಆಗ ಹುಡುಗ ಅವಳನ್ನು ತನ್ನ ಅಕ್ಕಿ ಆನೆಯಮೇಲೆ ಕೂರಿಸಿಕೊಳ್ಳುತ್ತಾನೆ.

ಅಂತೂ ಇಂತೂ ಹುಡುಗ ಹುಡುಗಿ ಹೊಳೆ ದಾಟಿ ದಂಡೆಗೆ ಬೀಳುತ್ತಾರೆ. ಈ ಶಾಸ್ತ್ರ ಇಷ್ಟು ಉದ್ದಕ್ಕೆ ಎಳೆಯಬೇಕಾದ್ದಿಲ್ಲ ಎಂದು ಗಂಗಜ್ಜಿ ಮೂತಿಮುರಿಯುತ್ತಾ ಕುಳಿತಿತ್ತು. ಇವತ್ತೇ ಎರಡನೇ ಶಾಸ್ತ್ರ ಬೇರೆ ಇಟ್ಟುಕೊಂಡಿದ್ದಾರೆ. ಈ ಪುರೋಹಿತರು ತಾವೇ ಇಷ್ಟು ಹೊತ್ತು ತಗೊಂಡುಬಿಟ್ಟರೆ ನಾನೇನು ಸಾಂಗತ್ಯ ಮಾಡೋದು ಮಣ್ಣು ಎಂದು ಅವಳು ರೇಗೆ ರೇಗಿ ಬೀಳುತ್ತಾ ಇದ್ದಳು.

ಬಾಣಲಿಯಿಂದ ಬೆಂಕಿಗೆ ಬಿದ್ದಂತೆ ಪುರೋಹಿತರ ಕೈಯಿಂದ ಪಾರಾದ ಹುಡುಗ ಹುಡುಗಿ ಗಂಗಜ್ಜಿಯ ಕಕ್ಷೆಗೆ ಬಂದರು. ಶುರುವಾಯಿತು ನೋಡಿ ಸಾಂಗತ್ಯ. ಹುಡುಗ ಹುಡುಗಿಯನ್ನ ಅಲಂಕಾರ ಮಾಡಿಕೊಂಡು ಪ್ರಸ್ತದ ಕೋಣೆಗೆ ಕರೆದುಕೊಂಡು ಬರುವ ವೇಳೆಗೆ ಢಾಣಾ ಢಣಾ ಅಂತ ಹನ್ನೆರಡು ಸಾರಿ ಗಡಿಯಾರ ಬಾಯಿಬಡಿದುಕೊಂಡದ್ದಾಯಿತು. ಹುಡುಗಿಯಂತೂ ಮೈತುಂಬ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ವಡವೆ ಧರಿಸಿ ಸಾಕ್ಷಾತ್ ರಾಜಲಕ್ಷ್ಮಿಯೇ ಆಗಿಹೋಗಿದ್ದಳು.

ಚಿಳ್ಳೆ ಪಳ್ಳೆ ಹುಡುಗರನ್ನೆಲ್ಲಾ ಓಡಿಸಿ ಹುಡುಗ ಹುಡುಗಿಯನ್ನ ಯಕ್ಷಗಾನದ ಮಂತನ್ನು ಅಲಂಕರಿಸಿದಂತೆ ಹೂವು ಮಾವಿನ ಸೊಪ್ಪು ಕಟ್ಟಿ ಅಲಂಕರಿಸಿದ್ದ ಪ್ರಸ್ತದ ಕೋಣೆಗೆ ಕರೆದುಕೊಂಡು ಬಂದಾಗ ಮಂಚದ ಮೇಲೆ ಒಬ್ಬ ಹುಡುಗ ಮುಸುಕುಹಾಕಿಕೊಂಡು ಮಲಗಿ ನಿಜಕ್ಕೂ ಗೊರಕೆ ಹೊಡೆಯುವುದಕ್ಕೇ ಪ್ರಾರಂಭಿಸಿದ್ದಾನೆ. ಗಂಗಜ್ಜಿ ಅವನಿಗೆ ಹೇಳಿದ್ದು ಸುಮ್ಮಗೆ ನಿದ್ದೆ ಬಂದಂಗೆ ನೀನು ಮಲಕ್ಕ..ಅಷ್ಟೆ ಅಂತ.

ಬಡಪಾಯಿ ಹುಡುಗ ಇನ್ನೂ ಚಿಕ್ಕವ. ಅವನಿಗೆ ಈಗ ಜೋರಾಗಿ ನಿದ್ದೆಯೇ ಬಂದುಬಿಟ್ಟಿದೆ. ಅವನು ಹುಡುಗಿಯ ತಮ್ಮ. ಆ ಖೋಡಿಯನ್ನು ಎಚ್ಚರಿಸುವಲ್ಲಿ ಸಾಕು ಸಾಕಾಗಿ ಹೋಯಿತು. ಕಣ್ಣುಮುಚ್ಚಿಕೊಂಡೇ ಹುಡುಗ ಹಾಸಿಗೆಯ ಮೇಲೆ ಚಕ್ಕಳ ಬಕ್ಕಳ ಹಾಕಿಕೊಂಡು ಕೂತಿದ್ದ. ಗಂಗಜ್ಜಿ ಡಯಲಾಗುಗಳನ್ನು ಹೇಳಿಕೊಟ್ಟಿತು: “ಎಲಾ ಭಾವನೇ…ನಮ್ಮ ಅಕ್ಕ ಏನು ಬಿಟ್ಟಿ ಬಿದ್ದಿಲ್ಲ… ಲಂಚ ಕೊಟ್ಟು ಮಂಚ ಏರುವಂಥವನಾಗು”. ನಿದ್ದೆಗಣ್ಣಲ್ಲಿ ಹುಡುಗ ಏನು ಹೇಳಿದನೋ..ವರಮಹಾಶಯನು ಕೊಟ್ಟ ಲಂಚವ್ಚನ್ನ ಹುಡುಗನ ಜೋಬಿಗೆ ತುರುಕಿ ಅವನನ್ನು ಅನಾಮತ್ತಾಗಿ ಎತ್ತಿಕೊಂಡು ರಂಗಮಂಟಪವನ್ನ ಖಾಲಿ ಮಾಡಿಸಲಾಯಿತು. ಆಮೇಲೆ ಗಂಗಜ್ಜಿ ಹುಡುಗಿಯ ಕಿವಿಯಲ್ಲಿ ತುಟಿಯಿಟ್ಟು ಏನೇನೋ ಪಿಸುಗುಟ್ಟಿದ್ದಾಯಿತು!

ಸದ್ಯ ಎಲ್ಲಾ ತೊಲಗಿದರು ಎಂದು ನಿಟ್ಟುಸಿರುಬಿಡುತ್ತಾ ಹುಡುಗ ಬಾಗಿಲು ಭದ್ರಪಡಿಸಿ ಎರಡೂ ಬೊಗಸೆಯಲ್ಲಿ ಹುಡುಗಿಯ ಮುಖ ಹಿಡಿದೆತ್ತಿ ಹತ್ತಿರ ಎಳೆದುಕೊಳ್ಳಬೇಕು ಎಂದಿರುವಾಗ ಹುಡುಗಿ ಕೊಸರಿಕೊಂಡು ಮೆಲುದನಿಯಲ್ಲಿ ನುಡಿದಳು. ಈ ವಡವೆಗಳೆಲ್ಲಾ ಯಾರ್ಯಾರೋ ನನಗೆ ತೊಡಿಸಿದವು. ಇವನ್ನೆಲ್ಲಾ ಜೋಪಾನವಾಗಿ ತೆಗೆದಿಟ್ಟು ಆಮೇಲೆ ಮಲಗಿ ಅಂದಿದ್ದಾರೆ ನಮ್ಮ ಅಮ್ಮ! ಶುರುವಾಯಿತು ವಡವೆ ತೆಗೆಯುವ ಕೈಂಕರ್ಯ.

ಮೊದಲು ರುಂಡ: ನೆತ್ತಿಯಿಂದ ನೇತಾಡುತ್ತಿದ್ದ ಬೈತಲೆಮುತ್ತು. ಅದು ಜೋಯಿಸರ ವೆಂಕಮ್ಮನದು. ಆಮೇಲೆ ಹಿಂದಲೆಗೆ ತಿರುಪು ಹಾಕಿ ತಿರುವಿದ್ದ ನಾಗರಬಿಲ್ಲೆ. ಆಮೇಲೆ ತವರಿನವರು ಕೊಟ್ಟಿದ್ದ ಝುಮ್ಕಿ. ಸವಕಾರರ ಈರಮ್ಮಜ್ಜಿಯ ಕೆನ್ನೆಸರಪಳಿ. ಬುಲಾಕು. ಕಿವಿಯ ತುಂಬ ಸಿಕ್ಕಿಸಿಕೊಂಡಿದ್ದ ಕರ್ಣಾಭರಣಗಳು. ಕೆಲವು ಎರವಲು, ಒಂದೆರಡು ಸ್ವಂತದ್ದು. ರುಂಡವನ್ನು ಮುಗಿಸಿ ಉಶ್ಷಪ್ಪಾ ಅನ್ನುವಲ್ಲಿ ಹನ್ನೆರಡುವರೆ.

ಮುಂದೆ ಮುಂಡಕ್ಕೆ ಬಂದದ್ದಾಯಿತು. ಮೊಹಾನಮುರಲೀ ಹಾರ, ಬೋರ್ಮಳಸರ, ಡಾಬು, ವಡ್ಯಾಣ, ಗುಂಡಿನ ಟೀಕಿ, …ಇದು ರಂಗಮ್ನೋರದ್ದು…ಇದು ಸಂಕ್ರಜ್ಜೀದು, ಇದು ಹಸೀನ್ಬೀಬಿದು ಎಂದು ಹುಡುಗಿಯು ಮೆಲುದನಿಯಲ್ಲಿ ನೀಡುವ ರನ್ನಿಂಗ ಕಾಮೆಂಟ್ರಿ ಬೇರೆ!

ಈಗ ಕೈಕಾಲಿಗೆ ಬಂದದ್ದಾಯಿತು. ಗೆಜ್ಜೆಕಡಗ, ಕಾಲ್ಚೈನು, ಗೋಟು, ಗುಂಡಿನ ಬೀಕಿ, ಬಾಜೂಬಂದಿ, ತೋಡೆ, ಬಿಲ್ವಾರ, ಪಾಟ್ಳಿ……ಮಂಚದ ಕೆಳಗೆ ಹುಡುಗಿಯ ಅಮ್ಮ ಇಟ್ಟಿದ್ದ ವಡವೆ ಡಬ್ಬಿಯಲ್ಲಿ ಎಲ್ಲ ಜೋಪಾನವಾಗಿ ಇರಿಸಿ , ಇಬ್ಬರೂ ಆಕಳಿಸುತ್ತಾ, ಹುಚ್ಚುಚ್ಚಾಗಿ ಮಳ್ಳಿ ನಗೆ ನಗುತ್ತಾ ಇನ್ನೇನು ದಿಂಬಿಗೆ ತಲೆಯಿಡಬೇಕು…..ಟಪ ಟಪ ಅಂತ ಹುಡುಗಿಯ ಚಿಕ್ಕಮ್ಮ ಬಾಗಿಲು ಬಡಿದಳು. ರಾಜೀ ಆಗಲೇ ನಾಲಕ್ಕಾಯಿತು…ಸ್ನಾನ ಮಾಡಬೇಕು ನೀನು …ಬಾ…ಎಂದು ಪಿಸುಧ್ವನಿ ಕೇಳಿತು.

ಹುಡುಗಿ ತನ್ನ ತುಟಿ ತಾನೇ ಕಚ್ಚಿಕೊಂಡು ಕಿಸಕ್ಕನೆ ನಕ್ಕಳು. ದೀಪ ಆರಿಸಿ, “ಪಾಪ! ಸ್ವಲ್ಪ ಮಲಗಿ” ಎನ್ನುತ್ತಾ ಪುಟ್ಟಹುಡುಗಿ ಜಾರಿಕೊಂಡಾಗ ಹೊಳಲಕೆರೆಯೆಂಬ ಪುಣ್ಯ ನಗರಿಯಲ್ಲಿ ಚುಮು ಚುಮು ಬೆಳಗು…..

೨೦೦೬ ಡಿಸೆಂಬರ್ ೨೭ನೇ ತಾರೀಖು. ಪುಟ್ಟ ಹುಡುಗಿಯ ಮದುವೆಯಾಗಿ ನಲವತ್ತು ವರ್ಷ ಕಳೆದು ಈಗವಳು ಮುದುಕಿ. ಇತ್ತೀಚೆಗೆ ಅವಳ ಆರೋಗ್ಯ ಏನೇನೂ ಚೆನ್ನಾಗಿರಲಿಲ್ಲ.

ಲಿವರ್ಸೆರೋಸಿಸ್ ಎನ್ನುವ ಭಯಾನಕ ಕಾಯಿಲೆ. ಅವಳನ್ನು ನೋಡಿಕೊಳ್ಳುತ್ತಿದ್ದ ಡಾಕ್ಟರ್ ಮೂರ್ತಿ(ನನ್ನ ಹಳೆಯ ವಿದ್ಯಾರ್ಥಿಯೂ ಹೌದು) ಹೆಚ್ಚೆಂದರೆ ಇನ್ನು ಒಂದೆರಡು ತಿಂಗಳು ಮಾತ್ರ ನಿಮ್ಮ ಮನೆಯವರು ಬದುಕಿರಬಹುದು ಎಂದಿದ್ದ.ಅವಳ ಪಿತ್ತಜನಕಾಂಗ ಸಂಪೂರ್ಣವಾಗಿ ನಿಷ್ಕ್ರಿಯವಾಗುವ ಹಂತ ತಲಪಿತ್ತು. ಆಗ ಅಮೋನಿಯಂ ಎಂಬ ರಾಸಾಯನಿಕ ಲಿವರ್ ನಲ್ಲಿ ಉತ್ಪತ್ತಿ ಯಾಗುವುದಂತೆ.

ಅದು ಹೋಗಿ ಮಿದುಳಿಗೆ ತಲಪಿದಾಗ ರೋಗಿಗೆ ಬುದ್ಧಿಭ್ರಮಣೆ ಉಂಟಾಗುವುದಂತೆ. ಹೀಗೆ ಈಚಿನ ದಿನಗಳಲ್ಲಿ ಎರಡು ಮೂರು ಬಾರಿ ಅವಳಿಗೆ ಆಗಿತ್ತು. ಆ ಸ್ಥಿತಿಯಲ್ಲಿ ಅವಳಿಗೆ ಏನೂ ಗೊತ್ತಾಗುತ್ತಿರಲಿಲ್ಲ. ಮಲಗುವಕೋಣೆಯೇ ಬಚ್ಚಲಮನೆಯೆಂದು ಭ್ರಮಿಸುತ್ತಿದ್ದಳು.

ಒಂದು ರಾತ್ರಿ ತನ್ನ ಕೋಣೆಯ ತುಂಬ ಬಟ್ಟೆಗಳನ್ನೆಲ್ಲಾ ಹರಡಿಕೊಂಡು ಕೂತಿದ್ದಳು. ಕೆಲವು ಬಾರಿ ಮೈಮೇಲೆ ಬಟ್ಟೆ ಇದೆಯೋಇಲ್ಲವೋ ಎಂಬುದೇ ಅರಿವಿಗೆ ಬರುತ್ತಾ ಇರಲಿಲ್ಲ. ಒಮ್ಮೆ ಡಾಕ್ಟರ್ ಬಾಳಿಗ ಅವರನ್ನು ನೋಡಿ ಎಂದು ಮೂರ್ತಿ ಫೋನ್ ಮಾಡಿದ. ಸಂಜೆ ನಾನು ಮತ್ತು ರಾಜಲಕ್ಷ್ಮಿ ಬಾಳಿಗ ಅವರನ್ನು ನೋಡಲು ಹೊರಟೆವು.

ಬೇಗ ಸೀರೆ ಬದಲಿಸಿಕೊಂಡು ಬಾ ಎಂದು ರಾಜಲಕ್ಷ್ಮಿಗೆ ಹೇಳಿದೆ. ಅರ್ಧ ಗಂಟೆಯಾದರೂ ಹೊರಗೆ ಬರಲಿಲ್ಲ. ಹೊತ್ತಾಯಿತು ಎಂದು ನಾನು ಕೂಗಿದಾಗ ಬಂದೆ ಬಂದೆ ಎಂಬ ಉತ್ತರ ಬಂತು. ಬಾಗಿಲು ತೆರೆದು ನಿಧಾನಕ್ಕೆ ಅವಳು ಹೊರಗೆ ಬಂದಾಗ ನೋಡುತ್ತೇನೆ: ಮೈತುಂಬ ತನ್ನ ಎಲ್ಲ ಆಭರಣಗಳನ್ನೂ ಹೇರಿಕೊಂಡುಬಿಟ್ಟಿದ್ದಾಳೆ. ಯಾವುದೇ ಮದುವೆಗೆ ಹೋಗುವಾಗ ಕೂಡ ಇಷ್ಟು ಗಾಡಿಯಾಗಿ ಅವಳು ಹೊರಟಿದ್ದಿಲ್ಲ. ಅವಳಿಗೆ ಬೇಸರವಾಗಬಾರದೆಂದು ನಾನೂ ಏನೂ ಹೇಳಲಿಲ್ಲ.

ಸೊಸೆ ಕೂಡ ಅಚ್ಚರಿಯಿಂದ ಅತ್ತೆಯನ್ನು ಒಮ್ಮೆ ನೋಡಿದಳು ಅಷ್ಟೆ. ನನ್ನ ಕಿವಿಯಲ್ಲಿ ಅವರಿಗೆ ಏನೂ ಅನ್ನಬೇಡಿ…ಅವರಿಗೆ ಬೇಕಾದ ಹಾಗೆ ಅವರು ಇರಲಿ ಎಂದು ಪಿಸುಗುಟ್ಟಿದಳು. ಡಾಕ್ಟರ್ ಕೂಡ ಇವಳನ್ನು ಒಮ್ಮೆ ಬೆರಗುಗಣ್ಣಿನಿಂದಲೇ ನೋಡಿದರು. ಯಾವುದೋ ಮದುವೆಗೆ ಹೋಗಿದ್ದವರು, ಹಾಗೇ ಇಲ್ಲೆಗೆ ಬಂದೆವು ಎಂದು ನಾನು ಸುಳ್ಳು ಬೊಂಕಬೇಕಾಯಿತು. ಡಾಕ್ಟರ್ ನೋಡಿಕೊಂಡು ನಾವು ಹಿಂದಿರುಗುವಾಗ ಜಯನಗರದ ನಾಕನೇ ಬ್ಲಾಕಲ್ಲಿ ಅವಳು ಯಾವಾಗಲೂ ಆಭರಣ ಮಾಡಿಸುತ್ತಾ ಇದ್ದ ಆಭರಣದ ಅಂಗಡಿಗೆ ಹೋಗಬೇಕು ಎಂದಳು. ಯಾಕೀಗ ಎಂದೆ. ನೀವು ಅಮೆರಿಕಾದಿಂದ ತಂದ ಮುತ್ತುಗಳಿವೆ. ಸರ ಮಾಡಲಿಕ್ಕೆ ಹಾಕಬೇಕು ಎಂದಳು.

ಆ ದಿನಗಳಲ್ಲಿ ನನ್ನ ಮನಸ್ಸಿಗೆ ಎಂಥ ಮಂಕು ಕವಿದಿತ್ತೆಂದರೆ, ಎಷ್ಟು ಅಲೆದರೂ ಆಭರಣದ ಅಂಗಡಿ ಸಿಗಲೇ ಇಲ್ಲ. ಹೋಗಲಿ ಬಿಡಿ..ಇನ್ನೊಮ್ಮೆ ಬಂದರಾಯ್ತು ಎಂದು ಅವಳೇ ನನ್ನನ್ನು ಸಮಾಧಾನ ಪಡಿಸಿದಳು.

ರಾತ್ರಿ ಒಂಭತ್ತು ಗಂಟೆಗೆ ಮನೆಗೆ ಬಂದಾಗ ಊಟವನ್ನೂ ಮಾಡದೆ ನನಗೆ ವಿಪರೀತ ನಿದ್ದೆ ಬರ್ತಿದೆ ಮಲಗ್ತೀನಿಎನ್ನುತ್ತಾ ನಿಧಾನಕ್ಕೆ ಹೆಜ್ಜೆ ಎಳೆಯುತ್ತಾ ಮಲಗುವ ಕೋಣೆಗೆ ಹೋದಳು. ಒಡವೆಗಳನ್ನಾದರೂ ಬಿಚ್ಚಿಡಿ ಅಮ್ಮ ಎಂದು ಸೊಸೆ ಕೂಗಿದರೂ ಅವಳ ಮಾತು ರಾಜಲಕ್ಶ್ಮಿಯ ಕಿವಿಗೇ ಬೀಳಲಿಲ್ಲ.

ನಾನು ಊಟಮಾಡಿ ಮೇಲೆ ಹೋದಾಗ ದೀಪವನ್ನೂ ಆರಿಸದೆ ನನ್ನ ಪತ್ನಿ ಮಲಗಿ ನಿದ್ರಿಸುತ್ತಾ ಇದ್ದಳು. ನನಗೆ ಯಾಕೋ ಕಾಣೆ ನಮ್ಮ ಮೊದಲ ರಾತ್ರಿಯ ನೆನಪಾಗಿ ಕಣ್ಣಿಂದ ಒಮ್ಮೆಗೇ ನೀರು ಉಕ್ಕತೊಡಗಿತು. ನಿಧಾನವಾಗಿ ಒಂದೊಂದಾಗಿ ಅವಳ ಆಭರಣಗಳನ್ನು ಕಳಚ ತೊಡಗಿದೆ.

ಮಂಜು ಮಂಜಾಗಿ ಹೆಂಡತಿ ಕಲಸಿಹೋಗಿದ್ದಳು. ಇನ್ನು ನೀವು ಮಲಗಿ ಎಂದು ಎಷ್ಟೋ ವರ್ಷಗಳ ಹಿಂದೆ ಅವಳು ಹೇಳಿದ ಮಾತು ನೆನಪಾಗಿ ನಾನು ಕಣ್ಣು ಮುಚ್ಚಿಕೊಂಡು ಕತ್ತು ಹಿಸುಕುತ್ತಿದ್ದ ಕೊರಳ ನರಗಳನ್ನು ತಿಕ್ಕಿಕೊಳ್ಳುತ್ತಾ ತೆಪ್ಪಗೆ ಕೂತೆ…

‍ಲೇಖಕರು avadhi

July 29, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

12 ಪ್ರತಿಕ್ರಿಯೆಗಳು

  1. ರಾಧಿಕಾ

    ಮುಂದೇನು, ಮುಂದೇನು ಅನ್ನುವ ಕುತೂಹಲ ಮೂಡಿಸಿ, ಹಾಸ್ಯಪೂರಿತ ಪ್ರಸಂಗಗಳು ಕಣ್ಕಟ್ಟುವಂತೆ ಆರಂಭವಾದ ಲೇಖನ, ಕೊನೆಯಲ್ಲಿ ಕಣ್ಣೀರು ತರಿಸಿತು.

    ಪ್ರತಿಕ್ರಿಯೆ
  2. Pramod

    ತು೦ಬಾನೇ ಚೆನ್ನಾಗಿದೆ. ಹತ್ತು ಸಾರಿ ಕೂಡ ಓದಿಸಿಕೊ೦ಡು ಹೋಗ್ತದೆ.

    ಪ್ರತಿಕ್ರಿಯೆ
  3. ಬೆಳ್ಳಾಲ ಗೋಪಿನಾಥ ರಾವ್

    ತೆಳು ಹಾಸ್ಯದಿಂದ ಆರಂಭವಾಗಿ ನವಿರು ಹಾಸ್ಯ ತಾರಕಕ್ಕೇರಿ ಮುಗಿಯುವಾಗ ಕರುಣಾರಸಕ್ಕೆ ಇಳಿಯಿತು.
    ಸರ್ ಇದು ನಿಮ್ಮ ಜೀವನದ ಘಟನೆ , ಸಲೀಸಾಗಿ ಕ್ತೂಹಲದಿಂದ ಓದಿಸಿಕೊಂಡು ಹೋದರೂ ಕದೆಯಲ್ಲಿ ಗಕ್ಕನೆ ನಿಂತು
    ಎದೆಯಿಂದ ಗಂಟಲಿಗೆ ಹತ್ತಿಕೊಂಡ ಅನುಭವ

    ಪ್ರತಿಕ್ರಿಯೆ
  4. shau

    ಕಥಾನಕ ಓದಿ ಮುಗಿಸಿದಾಗ ಕರುಳುಕುಯ್ಯುವ ಅನುಭವವಾಯಿತು

    ಪ್ರತಿಕ್ರಿಯೆ
  5. ಪೂರ್ಣಪ್ರಜ್ಞ

    ಆಗಿನ ಕಾಲದ innocence ಅನ್ನು ಹಾಸ್ಯದ ಪದರದಲ್ಲಿ ಸುತ್ತಿ ನಮಗೆ ಮೇಷ್ಟ್ರು ಉಣಬಡಿಸಿದ್ದಾರೆ.
    ಈಗಿನ ಮದುವೆಗಳ ಆಡಂಬರದಲ್ಲಿ ಈ ರೀತಿಯ ಚಿಕ್ಕ ಪುಟ್ಟ ಸಂತೋಷಗಳೇ ಕಾಣೆಯಾಗ್ತಾ ಇದೆಯೇನೋ ಅಂತ ಅನ್ನಿಸುತ್ತೆ.

    ಹಾಗೆಯೇ ಲೇಖನ ಕೊನೆಯಲ್ಲಿ poignant ಆಗುತ್ತೆ. ನಲವತ್ತು ವರ್ಷದ ದಾಂಪತ್ಯದ ನಂತರ ತಮ್ಮ ಮಡದಿಯ ಸ್ಥಿತಿಯನ್ನು ನೋಡಿದ ಗಂಡನ ಅಸಹಾಯಕತೆ ಕಣ್ಣಿಗೆ ಕಟ್ಟಿದಂತಿದೆ.

    ಮೇಷ್ಟ್ರ “ಉತ್ತರಾಯಣ” – ಕನ್ನಡದ ಶ್ರೇಷ್ಠ eulegy – ಕವಿತೆಯನ್ನು ಓದಿದ ಮೇಲೆ ಆದಂತಹ ಒಂದು ಅನುಭವ ಲೇಖನ ಓದಿದ ನಂತರ ಆಯಿತು.

    ಪ್ರತಿಕ್ರಿಯೆ
  6. armanikanth

    Akkareya Sir,
    ee manassu meetuva barahakke hege pratikriyisabeku antaane gottaagtaa illa…
    kone ya saalu odida balika yaako sankata…
    naanu kooda aa amma na kai na coffee kudida punyavantha…

    ಪ್ರತಿಕ್ರಿಯೆ
  7. Jyoti Sheegepal

    ತುಂಬ ಸಂಕಟವಾಯಿತು.. ಏನಾದರೂ ಪವಾಡವಾಗಿ ಮತ್ತೊಮ್ಮೆ ಬಾಳು ಆರಂಭವಾಗಲಿ ಮತ್ತು ಸುಖವಾಗಿ ಕೊನೆಗೊಳ್ಳಲಿ ಎನಿಸಿತು.. ಕರುಳು ಹಿಂಡಿದಂತಾಯಿತು..

    ಪ್ರತಿಕ್ರಿಯೆ
  8. rAjashEkhara mALUru

    ಯಾಕ್ಸಾರ್ ಇಷ್ಟು ಕಾಡುಸ್ತೀರಾ….?

    ಕಣ್ಣಿದೆ; ಕಾಣಿಸುತ್ತಿಲ್ಲ. ಕಿವಿಯಿದೆ; ಕೇಳಿಸುತ್ತಿಲ್ಲ.
    ನಾಲಗೆಯಿದೆ; ನುಡಿಯುತ್ತಿಲ್ಲ. ನೀನಿದ್ದೀಯ – ಇಲ್ಲದ ಹಾಗೆ.
    ಕ್ರಿಯಾಹೀನ ಕಾರ್ಯವ್ಯವಸ್ಥೆಯ ಮುಚ್ಚಿಟ್ಟ ಸಂಪುಟವೇ…
    ನೀನು ತೆರೆದ ಕಣ್ಣಿಂದ ಮತ್ತೆ ನೋಡಬಹುದೆಂದು ಕಾಯುತ್ತಿರುವೆ.

    ಯಾಕ್ಸಾರ್ ಇಷ್ಟು ಕಾಡುಸ್ತೀರ…
    ಇನ್ನಾಕೆ ನಿಮಗೆಷ್ಟು…
    ದೇವರೇ ಬಲ್ಲ.

    ಮಾಳೂರು ರಾಜಶೇಖರ

    ಪ್ರತಿಕ್ರಿಯೆ
  9. Manjula

    Sir prathisala nimma Anmatha kathana odokke shuru maadidre, musi musi nagu ninda shuruvaagutthe, nanthara kannindha neeru. Thumba bejaaraythu sir. Rajalakshmi andre mathyaaro antha andukondidde, konele gotthagiddu avru namma Meshtra maneyavru antha.

    ಪ್ರತಿಕ್ರಿಯೆ
  10. srinivasdeshpande

    dear sir,
    “Aliyalaarada Nenahu”
    mouna haagu vishaadagalannu ukkisuva garaladantaha sathyavannu neelakantharaagi neediddiri- srinivas deshpande

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: