ಎಚ್ಚೆಸ್ವಿ ಬರೆಯುತ್ತಾರೆ: ಕಂಬಾರರ ಲೋಕಸೃಷ್ಟಿ

-ಎಚ್.ಎಸ್.ವೆಂಕಟೇಶಮೂರ್ತಿ

ವಾಸ್ತವ ಜಗತ್ತನ್ನು ನಮ್ಮ ಜಾನಪದ ಮತ್ತು ಮಾರ್ಗ ಕಾವ್ಯ ಲೋಕದ ಕಲ್ಪನಾವೈದೃಶ್ಯಕ್ಕೆ ಪ್ರತಿನಿಧಾನಮಾಡಿ ನಿಲ್ಲಿಸುವ ಯತ್ನ ಆಧುನಿಕ ಸಂದರ್ಭದಲ್ಲಿ ಮತ್ತೆ ಮತ್ತೆ ನಡೆಯುತ್ತಲೇ ಬಂದಿದೆ. ಆಧುನಿಕ ಕಥನ ಜಗತ್ತಲ್ಲಂತೂ ಆ ಪ್ರಯತ್ನ ನಿರಂತರವಾಗಿ ನಡೆದಿದೆ. ನಮ್ಮ ಕಾದಂಬರೀಯುಗದ ಆರಂಭಿಕ ಕಾಲದಲ್ಲಿ ಸೃಷ್ಟಿಯಾಗಿದ್ದ ಮಿಥಿಕ ಜಗತ್ತು ನಿಧಾನವಾಗಿ ಮಸಳಿಸಿಹೋಗಿ ಬಹು ದೊಡ್ಡ ಕಥಕವೃತ್ತಿಯೊಂದನ್ನು ನಾವು ಕಳೆದುಕೊಂಡು ಪತಿತರಾಗಿದ್ದೇವೆ. ರಾಮಾಯಣ, ಮಹಾಭಾರತ, ಜೈನಪುರಾಣಗಳು, ಬೌದ್ಧಜಾತಕ ಕಥೆಗಳು, ದ್ರವಿಡಮೂಲದ ಜಾನಪದ ಕಥಾವೃತ್ತಿಗಳು, ಇವೆಲ್ಲಕ್ಕೂ ಹೊಯ್ಕಯ್ ಆದ ಅತ್ಯದ್ಭುತ ಜಾನಪದ ಕಥಾಲೋಕ-ಈ ಎಲ್ಲವೂ ನಮ್ಮ ಕೈಜಾರಿಹೋಗಿವೆ.  ಕಳೆದದ್ದು ಕಥೆ ಮಾತ್ರವಲ್ಲ; ಅತ್ಯಂತ ಸಮೃದ್ಧವೂ ಅರ್ಥ ನಿಬಿಡವೂ ಆಗಿದ್ದ ಒಂದು ಭಾಷಾ ಪರಂಪರೆ. ಆ ನಷ್ಟದ ಅರಿವೇ ನಮಗಿದ್ದಂತಿಲ್ಲ. ಈ ಭಾಷೆಯ ಮೂಲಕ ಹೊಸದನ್ನು ಕಟ್ಟುವುದು ಹಾಗಿರಲಿ, ಈಗಾಗಲೇ ಕಟ್ಟಲಾಗಿರುವ ಶಿಷ್ಟ, ಜಾನಪದೀಯ ಮಿಥಿಕ ಜಗತ್ತನ್ನು ಈವತ್ತಿಗೆ ಅನುವಾದಿಸುವ ಪೇಲವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಾ ಇದೆ. ಮಿತ್ತುಗಳನ್ನು ಒಡೆಯುವ ವೃತ್ತಿಯೇ ಈಗ ಕಥಕಜಗತ್ತಿನ ಒಂದು ಉದ್ಯಮವಾಗಿ ಬಿಟ್ಟಿದೆ. ಈ ಶಿಥಿಲೀಕರಣಕ್ಕೆ ಎದುರುಹಾಕಿ ನಿಂತ ಒಬ್ಬ ಕವಿಯಾಗಿ ನನಗೆ ಚಂದ್ರಶೇಖರ ಕಂಬಾರರು ಮುಖ್ಯರಾಗಿದ್ದಾರೆ. ಅವರ ಶಿವಾಪುರ ಏನನ್ನೂ ಒಳಗೊಳ್ಳಬಲ್ಲ ಪ್ರತಿವಿಶ್ವವೊಂದರ ಕೀಲುಕಂಬಿಯಾಗಿದೆ. ಆ ಪ್ರಾಂತದಲ್ಲಿ ಆಳುವ, ಆಳಿಸಿಕೊಳ್ಳುವ, ಪ್ರತಿಭಟಿಸುವವ, ಹೊಸದೊಂದನ್ನು ಕಟ್ಟಲು ಹಪಹಪಿಸುವ-ಅನಂತ ಕ್ರಿಯಾಮುಖಗಳಿವೆ. ಸಮುದಾಯ ಪ್ರಜ್ಞೆ ಹುಟ್ಟಿಸಿದ ಅನೇಕ ಬಗೆಯ ಆರ್ಕಿಟೈಪುಗಳು ಮತ್ತೆ ಮತ್ತೆ ಇಲ್ಲಿ ಪುನಾರಚನೆಗೆ ಒಳಗಾಗುತ್ತವೆ. ಕಂಬಾರರ ಜಾನಪದ ವಸ್ತುಜಗತ್ತು ಅತ್ಯಂತ ಸಮೃದ್ಧವಾಗಿದೆ. ಅದರ ಮಹತ್ವ ಕಥೆಯಲ್ಲಿಲ್ಲ; ಕಥನದ ಅನಂತ ಸಾಧ್ಯತೆಗಳಲ್ಲಿ ಇದೆ. ಹೇಳತೇನ ಕೇಳ, ಋಶ್ಯಶೃಂಗ, ಕುದುರೀಸಿದ್ಧ, ನವಿಲೇ ನವಿಲೇ, ಜೋಕುಮಾರಸ್ವಾಮಿ, ಚಕೋರಿ, ಶಿಖರಸೂರ್ಯ, ಶಿವರಾತ್ರಿ-ಹೀಗೆ ಸದೃಢವಾದ ಅರ್ಥಪ್ರಪಂಚದಲ್ಲಿ ಕಂಬಾರರ ಸೃಷ್ಟಿಶೀಲತೆ ಬಹು ಹಿಂದಿನಿಂದಲೂ ನಿರಂತರವಾಗಿ ವ್ಯವಹರಿಸುತ್ತಾ ಬಂದಿದೆ.

ಕವಿತೆಯಾಗಲಿ, ನಾಟಕವಾಗಲಿ, ಕಾದಂಬರಿಯಾಗಲಿ ಇದು ಮೂಲಭೂತವಾಗಿ ನಿಗೂಢವಾದ ಬೆಳ್ದಿಂಗಳಿನ ಮತ್ತು ಕಲಸಿಹೋಗಿರುವ ಅರ್ಥಪುಷ್ಟಿಯ ಮಾಯಾಲೋಕವಾಗಿದೆ. ಸಮಕಾಲೀನವೂ ಪ್ರಸ್ತುತವೂ ಎನ್ನಿಸಬಹುದಾದ ಅನೇಕ ಅರ್ಥಗಳು ಈ ಮಾಯಾಲೋಕದಲ್ಲಿ ಮಿಂಚಿಮರೆಯಾಗಿ ಹೋಗುತ್ತವೆ. ಅವು ಅದೃಷ್ಟವಶಾತ್ ಸದ್ಯದ ಗೂಟಕ್ಕೆ ಕಟ್ಟಿಬೀಳುವುದಿಲ್ಲ ಎನ್ನುವುದೇ ಅಚ್ಚರಿಯ ಮಾತಾಗಿದೆ. ಹೇಳತೇನ ಕೇಳ ಎಂಬ ಕಂಬಾರರ ಆರಂಭಿಕ ಕಥನವನ್ನೇ ನೋಡಿರಿ. ಶಿವಾಪುರದ  ಗೌಡ ತೀರಿಹೋಗಿ ಅವನ ವೇಷದಲ್ಲಿ ಒಬ್ಬ ರಾಕ್ಷಸ ಗೌಡತಿಯನ್ನು ಫಲವತಿಯನ್ನಾಗಿ ಮಾಡುತ್ತಾನೆ. ಅವಳ ಬಸುರಿನ ಬಯಕೆ ತೀರಿಸಲು ಹಿರಿಯ ಮಗ ಬಾಳಗೊಂಡ ಪ್ರಾಣವನ್ನೇ ಫಣವಾಗಿಟ್ಟು ಇನ್ನಿಲ್ಲದ ಸಾಹಸ ಮಾಡಬೇಕಾಗುತ್ತದೆ. ಈ ಪ್ರಯತ್ನದಲ್ಲಿರುವಾಗ ಅವನಿಗೆ ತಂದೆಯ ಮರಣ ರಹಸ್ಯ ತಿಳಿಯುತ್ತದೆ. ಆಸ್ತಿ ತನ್ನದು; ಅದರ ನಿರ್ವಾಹಕ ಪರಕೀಯ-ಇದು ರಾಮಗೊಂಡ ಎದುರಿಸುವ ವಿಷಮ ಸಂದರ್ಭ. ಗೌಡತಿ ಹಡೆಯುವ ಬಾಳಗೊಂಡ ಮುಂದೆ ಋಶ್ಯಶೃಂಗದ ನಾಯಕನಾಗಿ ಕಾಣಿಸಿಕೊಳ್ಳುತ್ತಾನೆ. ಅವನು ದ್ವೇಶಿಸುವುದು ತಾಯಿಯನ್ನ. ರಾಕ್ಷಸನ ಸಂಸರ್ಗದಿಂದ ಅಸ್ಮಿತೆಯನ್ನು ನಾಶಪಡಿಸಿಕೊಂಡಿರುವ ತಾಯಿ ಬಾಳಗೊಂಡನ ಎದೆಗುದಿಗೆ ಕಾರಣಳಾಗುತ್ತಾಳೆ. ಕಾಮ ಇಲ್ಲಿ ಅನುಭವವನ್ನು ಬೆಲೆಕಟ್ಟುವ ಸಾಮಗ್ರಿಯಾಗಿ ಬಳಕೆಗೊಳ್ಳುತ್ತದೆ. ನಿಜವಾದ ಫಲವಂತಿಕೆ ಯಾವುದು? ಜನಾಂಗೀಯ, ಅಧ್ಯಾತ್ಮಿಕ ಅರ್ಥಗಳನ್ನು ಜತೆಗೆ ಕಟ್ಟಿಕೊಂಡೇ ಈ ಫಲವಂತಿಕೆಯ ಶೋಧ ನಡೆಯುತ್ತದೆ. ನವಿಲೇ ನವಿಲೇ ಕವಿತೆಯಲ್ಲಿ ಶಿವಪುರದ ಗೌಡ ಶಿವದೇವ ನಾಯಕ. ಅವನ ಮಕ್ಕಳಿಲ್ಲದ ರಾಣಿ ಮಹಾದೇವಿ, ನೀರಿಗಾಗಿ ನದಿಗೆ ಹೋದವಳು ನವಿಲೊಂದರ ನೃತ್ಯಕ್ಕೆ ಮನಸೋತು ಅದರ ಸಾಂಕೇತಿಕ ಸಂಪರ್ಕದಿಂದ ಧಾರಾಕಾರ ಮಳೆಗೆ ಕಾರಣಳಾಗುತ್ತಾಳೆ. ಅವಳು ಮಳೆಯಲ್ಲಿ ತೊಪ್ಪನೆ ತೊಯ್ದುಕೊಂಡು ಮನೆಗೆ ಬಂದರೆ ರಾಜ ಶಿವದೇವ ನಾಯಕ ಅವಳಿಗೆ ನವಿಲುಗರಿಯಿಂದ ನೇಯ್ದ, ನವಿಲಿನ ರಕ್ತಸಿಂಪಡಿಸಿದ ಹೊಸ ಸೀರೆಯೊಂದನ್ನು ಕಾಣಿಕೆಯಾಗಿ ಕೊಡುತ್ತಾನೆ. ಮಹಾದೇವಿ ಆ ಸೀರೆಯನ್ನು ತಿರಸ್ಕರಿಸಿ ಬರೀ ಬೆತ್ತಲಲ್ಲಿ ಅರಮನೆಯನ್ನು ತ್ಯಜಿಸಿ ಕತ್ತಲಲ್ಲಿ ಕರಗಿಹೋಗುತ್ತಾಳೆ. ಮತ್ತೆ ಇದು ಇನ್ನೊಂದು ಫಲವಂತಿಕೆಯ ಕಥೆಯಾಗಿದೆ. ಅಕ್ಕಮಹಾದೇವಿಯ ಅಧ್ಯಾತ್ಮದ ಅಭೀಪ್ಸೆಯನ್ನೂ ಒಳಗೊಂಡು ಫಲವಂತಿಕೆಯ ಆಶಯವನ್ನು ಒಂದು ರಿಚುವಲ್ಲಿನ ತೀವ್ರತೆಯಲ್ಲಿ ಇಲ್ಲಿ ಕಥಿಸಲಾಗಿದೆ. ಸುಲಭದ ತರ್ಕಕ್ಕೆ ಯಾವುದೂ ಸಿಕ್ಕುವಂತಿಲ್ಲ. ಹಾಗಾಗಿಯೇ ಇದೊಂದು ಅರ್ಥಸಾಂದ್ರವಾದ ಕಲಸುಮೇಲೋಗರದ ಪ್ರಪಂಚವಾಗಿದೆ. ಸಾಮಾಜಿಕ ನೆಲೆಯಲ್ಲಿ ಯಾವುದು ತಥ್ಯ, ಯಾವುದು ಅಲ್ಲ ಎಂಬುದು ಸುಲಭಕ್ಕೆ ತೀರ್ಮಾನಗೊಳ್ಳುವಂಥದಲ್ಲ. ಲೌಕಿಕ, ಅಲೌಕಿಕ, ಸಾಮಾಜಿಕ, ಅಸಮಾಜಿಕ, ನೈತಿಕ, ಅನೈತಿಕ ಸಂಗತಿಗಳು ಹೀಗೆ ತೊಡಕು ಹಾಕಿಕೊಳ್ಳುವುದರಿಂದ ಬದುಕಿನ ನಿಬಿಡತ್ವವನ್ನು ಸಮಕಾಲೀನ ಸಂಘರ್ಷವನ್ನು ಸೂಚಿಸುತ್ತಲೇ ನಿರ್ಮಿಸಿಬಿಡುವುದು ಕವಿಗೆ ಸಾಧ್ಯವಾಗುತ್ತದೆ. ಕಂಬಾರರ ಬಹು ಪ್ರಸಿದ್ಧವಾದ ಜೋಕುಮಾರಸ್ವಾಮಿ ನಾಟಕವಾದರೂ ಅಷ್ಟೆ. ಕೀರ್ತಿಯವರು ಹೇಳುವಂತೆ ಜಾನಪದವನ್ನು ಒಂದು ಭಾಷೆಯಂತೆ ಸಮಕಾಲೀನ ಜಗತ್ತನ್ನು ಅರ್ಥವಿಸಲು ಕಂಬಾರರು ಉಪಯೋಗಿಸುತ್ತಾರೆ. ವಾಚೀಪುರುಷನಾದ ಗೌಡ ವಾಸ್ತವವಾಗಿ ನಪುಂಸಕನಾಗಿದ್ದಾನೆ. ಅವನ ಹೊಲವನ್ನು ಗೇಯುತ್ತಿರುವ ಬಸಣ್ಯ ನಿಜವಾದ ಅರ್ಥದಲ್ಲಿ ಪುರುಷನಾಗಿದ್ದಾನೆ. ಗೌಡನ ಹುಸಿ ಬಂದೂಕಿಗೆ ಎದುರು ನಿಲ್ಲುವ ಬಸಣ್ಯನ ನೇಗಿಲು ಫಲವಂತಿಕೆಯ ಪ್ರತೀಕವೇ ಆಗಿದೆ. (ಪುರಾಣದ ಗೌತಮ-ಅಹಲ್ಯೆ-ಇಂದ್ರರ ವೃತ್ತಾಂತ ಇಲ್ಲಿ ನೆನಪಾದರೆ ಆಶ್ಚರ್ಯವಿಲ್ಲ. ಹಾಗೆ ನೋಡಿದರೆ ನಮ್ಮ ಮಹಾಕಾವ್ಯದ ವೃತ್ತಾಂತಗಳೆಷ್ಟೋ ಅಚ್ಚರಿಹುಟ್ಟಿಸುವಂತೆ ಜಾನಪದದಲ್ಲಿ ಮರುಹುಟ್ಟು ಪಡೆಯುತ್ತವೆ-ಅಥವಾ ಇದೊಂದು ವಿಲೋಮ ವೃತ್ತಿಯೂ ಆಗಿರಬಹುದು). ಗೌಡ ಮತ್ತು ಬಸಣ್ಯ ಇವರ ಸಂದರ್ಭದಲ್ಲಿ ನಿಜವಾದ ಫಲವಂತಿಕೆ ಯಾವುದು ಎನ್ನುವುದು ಗಣನೆಗೆ ಬರಬೇಕಾದ ಸಂಗತಿಯಾಗಿದೆ.(ರೈತನ ಹೆಸರು ಬಸಣ್ಯ ಎಂದಿರುವುದು ಕೂಡ ಕೇವಲ ಕಾಕತಾಳೀಯವಾಗಿರಲಿಕ್ಕಿಲ್ಲ). ಒಬ್ಬ ಕವಿ ಜಾನಪದಕ್ಕೆ ಪ್ರತಿಭೆಯನ್ನು ತೆತ್ತುಕೊಂಡಾಗ ಸಮಕಾಲೀನ ಜಗತ್ತಿನ ರಹಸ್ಯಗಳೆಲ್ಲಾ ಜಾನಪದ ಭಾಷೆಯಾ ಮೂಲಕ ಅರುಣೋದಯದಲ್ಲಿ ಮೂಡುವ ಕ್ಷಿತಿಜದ ಹಾಗೆ ಒಡಮೂಡುತ್ತಾ ಹೋಗುತ್ತವೆ. ಕಂಬಾರರ ಈಚಿನ ಕೃತಿಗಳಲ್ಲಿ ಚಕೋರಿ ಎಂಬ ದೀರ್ಘಕಾವ್ಯ(ಕಂಬಾರರು ಈಗದನ್ನು ವಚನ ಕಥಾನಕ ಎಂದು ಕರೆಯುತ್ತಿದ್ದಾರೆ)ಮತ್ತು ಶಿಖರ ಸೂರ್ಯ ಎಂಬ ಕಾದಂಬರಿಯು ಯಾವುದನ್ನು ನಾವು ಕಾದಂಬರೀಯುಗದ ಆರಂಭಿಕ ಕಾಲದಲ್ಲಿ ನಾವು ಕಳೆದುಕೊಂಡಿದ್ದೆವೋ ಆ ಮಿಥಿಕ ಜಗತ್ತಿನ ಪುನಾಸೃಷ್ಟಿಯಾಗಿದೆ. ಈ ಎರಡೂ ಕೃತಿಗಳು ಪರಸ್ಪರ ಪೂರಕ ಕೃತಿಗಳಾಗಿವೆ ಎಂಬುದನ್ನು ಕಂಬಾರರರೇ ಒಪ್ಪಿಕೊಂಡಿದ್ದಾರೆ.ಜಾನಪದ ಮಹಾಕಾವ್ಯಗಳೂ ಕಂಬಾರರ ಈ ಮಿಥಿಕ ಜಗತ್ತಿನ ಸೃಷ್ಟಿಯಲ್ಲಿ ಕಂಬಾರರ ಹಿಂದೆ ಇವೆ ಎಂಬುದನ್ನು ನಾವು ಮಾನ್ಯ ಮಾಡಲೇ ಬೇಕು. ಈ ಹಿನ್ನೆಲೆಯನ್ನು ಎಚ್.ಎಸ್.ಶಿವಪ್ರಕಾಶ ತಮ್ಮ ಮೊದಲ ಮಾತಲ್ಲಿ ಇನ್ನಷ್ಟು ವಿಸ್ತರಿಸಿದ್ದಾರೆ. ಕಂಬಾರರು ವ್ಯಾಸ, ವಾಲ್ಮೀಕಿ, ಪಂಪ-ರನ್ನಾದಿಗಳ ಮೇರು ಕೃತಿಗಳ ಬದಲಿಗೆ ದ್ರಾವಿಡ ಸಂಸ್ಕೃತಿಯ ಮೂಲ ಮಾತೃಕೆಯಂತಿರುವ ಇಳಂಗೋ ಅಡಿಗಳ ಕೃತಿಯನ್ನು ತಮ್ಮ ಮಾದರಿಯಾಗಿ ಹೊಂದಿದ್ದಾರೆ. ಶಿವಪ್ರಕಾಶ ಹೇಳುವಂತೆ ಅವರ ಸ್ಫೂರ್ತಿಯ ಜಲಕಣ್ಣಿರುವುದು ಬಹುಪಾಲು ಮಂದಿ ಯಾವುದನ್ನು ಭಾರತೀಯ ಅಥವಾ ಕನ್ನಡ ಸಂಸ್ಕ್ರುತಿಯ ಪ್ರಧಾನ ಧಾರೆಯೆಂದು ತಿಳಿದಿದ್ದಾರೋ ಅದರಲ್ಲಲ್ಲ. ರಾಷ್ಟ್ರೀಯವಾದಿ ಸಾಂಸ್ಕೃತಿಕ ಚೌಕಟ್ಟಿನ ಹೊರಗೆ ದೂಡಲ್ಪಟ್ಟಿರುವ ಮಹಾನ್ ಆರ್ಯೇತರ ಪರಂಪರೆಗಳ ಸ್ಮೃತಿಕೋಶದಿಂದ ಅವರು ಸ್ಫೂರ್ತಿ ಮತ್ತು ದ್ರವ್ಯಗಳನ್ನು ಪಡೆದುಕೊಳ್ಳುತ್ತಾರೆಂಬುದು ಇದರಿಂದ ಸೂಚಿತವಾಗುತ್ತದೆ”. ಇಷ್ಟಾದರೂ ಕಂಬಾರರ ಸೂರ್ಯಶಿಖಾರಿ ಶಿಲಪ್ಪದಿಗಾರಂಗಿಂತ ಭಿನ್ನವಾದುದು ಎಂಬುದನ್ನು ಮುನ್ನುಡಿ ಗುರುತಿಸಿದೆ. ಶಿಖರಸೂರ್ಯದಲ್ಲಿ ಹಾಸುಹೊಕ್ಕಾಗಿ ವ್ಯಾಪಿಸಿರುವುದು ಲೋಕಮುಖಿಯಾದ ತಾಯಿ ಧರ್ಮದ ನೋಟ ಎಂಬುದು ಮುನ್ನುಡಿಯಿಂದ ಕಾದಂಬರಿಯ ಅಭ್ಯಾಸಕ್ಕೆ ಒದಗುವ ಮಹತ್ವದ ಒಳನೊಟವಾಗಿದೆ.  ಶಿಖರಸೂರ್ಯದ ಮೂಲಕ ಕಂಬಾರರು ಆಧುನಿಕ ಕಾದಂಬರಿಯ ವ್ಯಾಖ್ಯೆಯನ್ನು ವಿಸ್ತರಿಸಿದ್ದಾರೆ; ಜೊತೆಗೆ ಜಾನಪದ ಕಥಕ ಜಗತ್ತಿನ ಅಂತಸ್ಥೀಕರಣಶಕ್ತಿಯನ್ನೂ.

****
ಕನ್ನಡಕ್ಕೆ ಎಂಟನೇ ಬಾರಿ ಜ್ಞಾನಪೀಠ ಪುರಸ್ಕಾರ ದೊರೆತ ಕಾರಣ ಕಂಬಾರರ ಮೂಲಕ ಮತ್ತೆ ಕನ್ನಡ ಸಾಹಿತ್ಯ ಸಂದರ್ಭವು ವಿಸ್ತಾರವಾದ ವಿವೇಚನಾ ಕಕ್ಷೆಗೆ ಒಳಪಟ್ಟಿದೆ. ಅದು ಸಂತೋಷದ ವಿಷಯ. ಜೊತೆಗೆ, ಅಚ್ಚರಿಯ ಸಂಗತಿಯೆಂದರೆ ಕಂಬಾರ ಈವತ್ತೂ ಹಳೆಯ ಬಂಡುವಳದಲ್ಲಿ ವ್ಯವಹರಿಸುವ ಲೇಖಕರಲ್ಲ. ಮೊನ್ನೆಮೊನ್ನೆಯಷ್ಟೇ ಅವರ ಶಿವರಾತ್ರಿ ನಾಟಕ ಬಂದಿದೆ. ಜ್ಞಾನಪೀಠದ ಸದ್ದುಗದ್ದಲ ಮುಗಿದು ಈಗ ಮತ್ತೆ ಅವರು ಹೊಸ ಹೊಳಹೊಂದನ್ನು ಧ್ಯಾನಿಸುವ ಜೂಬರಿಕೆಯಲ್ಲಿ ಮಗ್ನರಾಗಿದ್ದರೆ ನನಗಂತೂ ಆಶ್ಚರ್ಯವಾಗುವುದಿಲ್ಲ.
****

‍ಲೇಖಕರು avadhi

September 28, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. subbanna mattihalli

    sir VK dalli oodidde. eega illu kuda.
    kambararannu arthapurnavaagi hididirisiddeera. kaviya bagege kaavyaatmakavaagi mudi bandide.
    dhanyavaadagalu.

    ಪ್ರತಿಕ್ರಿಯೆ
  2. Sarala

    ಕಂಬಾರರ ಕನ್ನಡದ ಕಾಯಕದ ಮೇಲ್ನೋಟ ಕಾಣಿಸಿದ ಹೆಚ್ ಎಸ್ ವಿ ಯವರಿಗೆ ಅನೇಕಾನೇಕ ವಂದನೆಗಳು.

    ಪ್ರತಿಕ್ರಿಯೆ
  3. vijayaraghavan

    ಜ್ಞಾನಪೀಠದ ಸದ್ದುಗದ್ದಲ ಮುಗಿದು ಈಗ ಮತ್ತೆ ಅವರು ಹೊಸ ಹೊಳಹೊಂದನ್ನು ಧ್ಯಾನಿಸುವ ಜೂಬರಿಕೆಯಲ್ಲಿ ಮಗ್ನರಾಗಿದ್ದರೆ ನನಗಂತೂ ಆಶ್ಚರ್ಯವಾಗುವುದಿಲ್ಲ true, hsv. i endorse you

    ಪ್ರತಿಕ್ರಿಯೆ
  4. h. r. laxmivenkatesh

    ಸದ್ದು ಗದ್ದಲ ಮುಗಿದು ಮತ್ತೆ ಹೊಸ ಕಾವ್ಯವೊಂದು ಹೊರಹೊಮ್ಮಲಿ.
    ಎಚ್. ಆರ್. ಲಕ್ಷ್ಮೀವೆಂಕಟೇಶ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: