ಎಚ್ಚೆಸ್ವಿ ಅವರಿಗೆ ಶುಭ ಹಾರೈಕೆಗಳು

ಇಂದು ಡಾ ಎಚ್ ಎಸ್ ವೆಂಕಟೇಶ್ ಮೂರ್ತಿಯವರ ಹುಟ್ಟು ಹಬ್ಬ. ಈ ಸಂದರ್ಭದಲ್ಲಿ ಕನ್ನಡ ಬ್ಲಾಗರ್ಸ್ ನಲ್ಲಿ ಬಂದ

ಬೆಳ್ಳಾಲ ಗೋಪಿನಾಥ ರಾವ್ ಅವರ ವಿವರ ಲೇಖನ ನಿಮ್ಮ ಮುಂದೆ

 

ತರುಣಿ ನಾಗರತ್ನಮ್ಮ ಆರು ತಿಂಗಳ ಗರ್ಭಿಣಿಯಾಗಿರುವಾಗಲೇ ತಂದೆಯ ಅಕಾಲ ಮರಣ. ಹೊಟ್ಟೆಯಲ್ಲಿದ್ದ ಪುಟ್ಟಕೂಸಿನ ಕನಸಿನಲ್ಲಿ ಜೀವ ಹಿಡಿದಿಟ್ಟ “ಪುಟ್ಟ ವಿಧವೆ” ತೌರುಮನೆ ಹೋದಿಗ್ಗೆರೆಗೆ ಬಂದರು. ತಂದೆ ಭೀಮರಾಯರು ತಾಯಿ ಸೀತಮ್ಮ ಒಬ್ಬಳೇ ಮಗಳ ಬದುಕಿಗೆ ಭರವಸೆ ತುಂಬಿ ಪ್ರೀತಿಯ ಆಸರೆ ನೀಡಿದರು. ಸಾವಿರದೊಂಬೈನೂರಾ ನಲ್ವತ್ನಾಲ್ಕನೆಯ ಇಸವಿ ಜೂನ್ ೨೩ ರಂದು ನಾಗರತ್ನಮ್ಮ ಗಂಡು ಮಗುವಿಗೆ ಜನ್ಮ ನೀಡಿದರು. ಆ ಮಗುವೇ ಕನ್ನಡದ ಇಂದಿನ ಪ್ರಸಿದ್ಧ ಕವಿ ಎಚ್ ಎಸ್ ವೆಂಕಟೇಶ ಮೂರ್ತಿ.

ಹೋದಿಗೆರೆಯ ಹಳ್ಳಿಯ ಪರಿಸರವೇ ಇವರ ವ್ಯಕ್ತಿತ್ವವನ್ನು ರೂಪಿಸಿ, ಅವರ ಸೃಜನ ಶೀಲತೆಯ ಸ್ವರೂಪದ ಮೇಲೆ ಗಾಢವಾದ ಪ್ರಭಾವ ಬೀರಿದೆ. ಹೊದಿಗೆರೆಯ ಕೆರೆ, ಕೆರೆಕೋಡಿ, ಅದರಾಚೆಯ ಈಚಲುವನ, ನಂತರದ ಜೋಳದಹಾಳು ಕಾಡು, ಕಂತರಂಗಮಟ್ಟಿ ಇವೆಲ್ಲಾ ವೆಂಕಟೇಶ ಮೂರ್ತಿಯವರ ಚಿಕ್ಕಂದಿನ ದಿನಗಳಲ್ಲಿ ಗಾಢಪ್ರಭಾವ ಬೀರಿದಂಥವು. ಊರಿನ ಜನರ ಬದುಕನ್ನೇ ಅವರಿಸಿರುವ ಉತ್ಸವಗಳು ಬದುಕಿನ ಉಲ್ಲಾಸವನ್ನು ಸಹಬಾಳ್ವೆಯ ಪರಿಕಲ್ಪನೆಯನ್ನು ಜೀವಂತವಾಗಿರಿಸುವ ಸಾಧನೆಗಳಾಗಿದ್ದುವೆಂದು ಮೂರ್ತಿಯವರು ನೆನಪಿಸಿಕೊಳ್ಳುತ್ತಾರೆ. ಇವರ ಕಥನ ಕಾವ್ಯದಲ್ಲಿ ನಾವು ಕಣುವ ಜೀವೋಲ್ಲಾಸದ ಅನೇಕ ಅಂಶಗಳ ಬೇರುಗಳು ಈ ಉತ್ಸವಗಳಲ್ಲಿವೆ.ಮೂರ್ತಿಯವರ ಮುತ್ತಜ್ಜ ಕೆಲ್ಲೋಡು ಪುಟ್ಟಪ್ಪ ಪ್ರಸಿದ್ಧ ಗಮಕಿಗಳಾಗಿದ್ದರಂತೆ. ಅಜ್ಜ ಭೀಮರಾಯರು ಮೃದಂಗ ವಾದಕರಾಗಿದ್ದು ನಾಟಕದಲ್ಲಿ ಅವರಿಗೆ ವಿಶೇಷ ಆಸಕ್ತಿ ಇದ್ದಿತಂತೆ. ಈ ಎಲ್ಲವೂ ಅವರನ್ನು ಪ್ರಭಾವಿಸಿವೆ. ಅಲ್ಲಿನ ಭಜನೆ, ನಾಟಕ ,ಗಮಕ ವಾಚನ, ಯಕ್ಷಗಾನ, ಬೊಂಬೆಯಾಟ , ಇವೆಲ್ಲವುಗಳ ಧಾರ್ಮಿಕ ಸ್ಪರ್ಷವೂ ಕೂಡಾ ಕಾವ್ಯ ಸಂಸ್ಕಾರದ ಅವರ ವ್ಯಕ್ತಿತ್ವದ ಅಂಶವೇ ಅಗಿ ಬಿಡುತ್ತಿತ್ತು. ಶ್ಯಾನುಭೋಗರಾಗಿದ್ದ ಭೀಮರಾಯರು ಊರವರ ಕಣ್ಣಲ್ಲಿ ಧರ್ಮಾತ್ಮರು. ತಮಗಿದ್ದ ತಿಳುವಳಿಕೆ ಅಧಿಕಾರಗಳನ್ನು ಜನರಿಗೆ ಉಪಕಾರ ಮಾಡುವುದಕ್ಕೇ ಬಳಸುತ್ತಿದ್ದರಂತೆ. ಇವರ ಪ್ರಭಾವವೂ ಮೂರ್ತಿಯವರ ಮೇಲೆ ಬೀರಿದೆ.

ಮೂರ್ತಿಯವರು ಹತ್ತು ವರುಷದವರಾಗಿರುವಾಗಲೇ ಇವರೂ ತೀರಿಕೊಂಡರು. ಒಬ್ಬಳೇ ಮಗಳಾದ ನಾಗರತ್ನಮ್ಮಗೆ ತನ್ನ ಕಂದನನ್ನು ಸಾಕುವ ಹೊಣೆಯ ಜೊತೆಗೆ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿಯೂ ಹೆಗಲೇರಿತು. ತಾಯಿ ಸೀತಮ್ಮ ನವರ ಅಕ್ಕನೂ – ಇವರು ಭೀಮಜ್ಜಿ ಎಂದೇ ಪರಿಚಿತರು- ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡು ಇದೇ ಕುಟುಂಬ ಸೇರಿಕೊಂಡರು. ಖಾಸಗಿಯಾಗಿ ಎಲ್ ಎಸ್ ಮುಗಿಸಿ ನಾಗರತ್ನಮ್ಮ ಅಧ್ಯಾಪಕಿಯಾಗಿ ಉದ್ಯೋಗ ದೊರಕಿಸಿಕೊಂಡು ಈ ಕುಟುಂಬಕ್ಕೆ ದುಡಿಯುವ ಆಸರೆಯಾದರು.ಮುಂದೆ ಬದುಕಿನುದ್ದಕ್ಕೂ ರತ್ನ ಮೇಡಮ್ ಆಗಿ ಜನಪ್ರಿಯ ಅಧ್ಯಾಪಕಿಯಾಗಿ ದುಡಿಮೆಯನ್ನೇ ಬಾಳ ಉಸಿರಾಗಿಸಿಕೊಂಡರು.

ಭೀಮಜ್ಜಿ ಹುಡುಗನ ಲಾಲನೆ ಪೋಷಣೆ ಶಿಕ್ಷಣದ ಕಡೆ ಗಮನಕೊಟ್ಟರು. ಮೂರ್ತಿಯವರ ವಿದ್ಯಾಭ್ಯಾಸದ ಬಹುಪಾಲುಸಮಯದಲ್ಲಿ ಅವರ ಜೊತೆಗಿದ್ದವರು ಈ ದೊಡ್ಡಜ್ಜಿಯೇ. ಪುಟ್ಟ ಮೂರ್ತಿಯನ್ನು ಕೂರಿಸಿಕೊಂಡುಭೀಮಜ್ಜಿ ನೂರಾರು ಕಥೆಗಳನ್ನು ಹೇಳುತ್ತಿದ್ದರಂತೆ. ಇವರಿಗೆ ಕಥನ ಪ್ರತಿಭೆ ದತ್ತವಾದುದರ ಹಿಂದೆ ಈ ದೊಡ್ಡಜ್ಜಿ ಇರುವಂತೆ ತೋರುತ್ತದೆ ಎನ್ನುತ್ತಾರೆ ಮೂರ್ತಿಯವರ ಸ್ನೇಹಿತ ನರಹಳ್ಳಿಯವರು.ಹೋದಿಗ್ಗೆರೆಯಲ್ಲಿ ಮೂರ್ತಿಯವರ ನೆರೆಮನೆಯೇ ಪ್ರಸಿದ್ಧ ಕತೆಗಾರ ಈಶ್ವರ ಚಂದ್ರರ ಮನೆ. ಈರ್ವರೂ ಬಾಲ್ಯದ ಗೆಳೆಯರು, ಓದಿನ ಗೀಳಿನ ಆಪ್ತ ಒಡನಾಡಿಗಳು. ಮಾಧ್ಯಮಿಕ ಶಾಲೆಯಲ್ಲಿರುವಾಗಲೇ ಇಬ್ಬರೂ ಸೇರಿ ಒಂದು ಪತ್ತೇದಾರಿ ಕಾದಂಬರಿ ಬರೆದದ್ದು ” ಮಾಯವಾದ ಮದು ಮಗಳು” ಈಗ ಇತಿಹಾಸ.

ವೆಂಕಟೇಶ ಮೂರ್ತಿಯವರು ಹೊಳಲ್ಕೆರೆಯ ಪ್ರೌಢ ಶಾಲೆಗೆ ಸೇರಿದರು. ಅಲ್ಲಿಯ ಕನ್ನಡ ಅಧ್ಯಾಪಕರಾಗಿದ್ದ ನರಸಿಂಹ ಶಾಸ್ತ್ರಿಗಳು ಮೂರ್ತಿಯವರ ಸೃಜನ ಶೀಲ ಶಕ್ತಿಗೆ ಒಂದು ಮೂರ್ತ ರೂಪ ನೀಡಿದಂಥವರು.ತಮ್ಮ ಬಳಿಯಿದ್ದ ಕುವೆಂಪು, ಬೇಂದ್ರೆ, ಗೋರೂರು ಮಾಸ್ತಿ, ಕಾರಂತ ಮೊದಲಾದವರ ಕೃತಿಗಳನ್ನು ಮೂರ್ತಿಯವರಿಗೆ ಪರಿಚಯಿಸಿದರು. ತಮ್ಮ ಚಿಂತನಾ ಕ್ರಮವನ್ನೇ ಬದಲಾಯಿಸಿಕೊಂಡು ಮೂರ್ತಿಯವರು ಹೋದಿಗ್ಗೆರೆಯ ಜಗತ್ತಿನಿಂದ ಹೊಸ ವಿಸ್ತಾರ ಪ್ರಪಂಚಕ್ಕೆ ಪ್ರವೇಶ ಪಡೆದರು. ವೆಂಕಟೇಶ ಮೂರ್ತಿಯವರು ತಮ್ಮ ಮೊದಲ ಕವನ ಸಂಕಲನ” ಪರಿವೃತ್ತ ವನ್ನು ನರಸಿಂಹ ಶಾಸ್ತ್ರಿಗಳಿಗೇ ಅರ್ಪಿಸಿದ್ದಾರೆ. ಇಲ್ಲಿಯೇ ಮೂರ್ತಿಯವರ ಬದುಕನ್ನು ಸಹಪಾಠಿ ಶಂಕರ್ ಪ್ರವೇಶಿಸಿದರು. ಮೂರ್ತಿಯವರ ಆಪ್ತ ಗೆಳೆಯರೂ, ಸೂಕ್ಷ್ಮ ಓದುಗರೂ, ಆದ ಶಂಕರ್ ಸಾಹಿತ್ಯಾಸಕ್ತರೂ , ಪ್ರೇರಣಿಗರೂ ಹೌದು.

ಮೂರ್ತಿಯವರ ಕಾಲೇಜು ಶಿಕ್ಷಣ ಚಿತ್ರದುರ್ಗದಲ್ಲಾಯ್ತು. ಇಲ್ಲಿಯೇ ಅವರ ಸಾಹಿತ್ಯಾಸಕ್ತ ಮನಸ್ಸು ಕೋಟೆ ಬೆಟ್ಟ ಪೇಟೆ ಇವುಗಳ ಅಲೆದಾಟದಲ್ಲಿ ಪ್ರಕೃತಿಯ ಸೊಬಗಿನಲ್ಲಿ ಮುದನೀಡತೊಡಗಿ ಮುಂದಿನ ಕಾವ್ಯದಲ್ಲಿ ಅರ್ಥಪೂರ್ಣ ಪ್ರತಿಮೆಗಳಾದುವು.ತನ್ನ ವ್ಯಕ್ತಿತ್ವದ ಆಳದಲ್ಲಿ ಈ ಕೋಟೆ ಬೆಟ್ಟ ಮೂಲಭೂತ ಬದಲಾವಣೆಗೆ ಕಾರಣವಾಯ್ತೆಂದು ಮೂರ್ತಿಯವರು ನೆನಪಿಸಿಕೊಳುತ್ತಾರೆ. ಇಲ್ಲಿಯೇ ಆಗಲೇ ಕವಿಯಾಗಿ ಹೆಸರಾಗಿದ್ದ ನಿಸಾರ್ ಅಹಮದ್ ರವರ ಗಮನಕ್ಕೆ ಬಿದ್ದುದು. ಅವರ ಒಡನಾಟ ಪ್ರೀತಿಯ ಪ್ರೋತ್ಸಾಹ ಮೂರ್ತಿಯವರಲ್ಲಿ ಒಂದು ಬಗೆಯ ವಿಶ್ವಾಸ ಮೂಡಿಸಿತು. ನಿಸಾರ್ ತಮ್ಮ ಮೊದಲ ಕಾವ್ಯ ಗುರು ಎಂದು ಈಗಲೂ ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ.

ಭದ್ರಾವತಿಯ ಪೊಲಿಟೆಕ್ನಿಕ್ ನಲ್ಲಿ ಮೂರ್ತಿಯವರು ಡಿಪ್ಲೊಮ ಓದಲು ಸೇರಿಕೊಂಡರು.ಇಲ್ಲಿಯೂ ಅವರ ಸಾಹಿತ್ಯಾಸಕ್ತ ಮನಸ್ಸು ತನ್ನನ್ನು ಕಾವ್ಯ ಕೃಷಿಯಲ್ಲಿ ತೊಡಗಿಸಿಕೊಂಡಿತ್ತು. ಇಂಜಿನಿಯರಿಂಗ್ ಮೆಟೀರಿಯಲ್ಸ್ ಎಂಬ ವಿಷಯದಲ್ಲಿ ಉತ್ತೀರ್ಣರಾಗಿ ಮಲ್ಲಾಡಿಹಳ್ಳಿಯ ಪ್ರೌಢ ಶಾಲೆಯಲ್ಲಿ ಕ್ರಾಫ್ಟ್ ಟೀಚರ್ ಆಗಿ ಸೇರಿಕೊಂಡರು.ಸಾಹಿತ್ಯಾಸಕ್ತ ಮುಖ್ಯೋಪಾಧ್ಯಾಯರಾಗಿದ್ದರಾಮಚಂದ್ರ ಮೂರ್ತಿಗಳು ಎಚ್ ಎಸ್ ವಿಯವರ ಸಾಹಿತ್ಯ ರಚನೆಯ ಪರಿಚಯವಿದ್ದುದರಿಂದ ಕನ್ನಡ ವಿಷಯವನ್ನು ಮತ್ತು ಅವರಿಗೆ ಅತ್ಯಂತ ಪ್ರಿಯವಾಗಿದ್ದ ಗಣಿತವನ್ನೂ ಭೋಧಿಸಲವಕಾಶ ಮಾಡಿಸಿಕೊಟ್ಟಿದ್ದರು.ಅದರಿಂದಾಗಿ ಮೂರ್ತಿಯವರು ಮಲ್ಲಾಡಿ ಹಳ್ಳಿಯ ಶಾಲೆಯಲ್ಲಿ ಬಹು ಬೇಗ ಜನಪ್ರಿಯರಾದರು. ಇಲ್ಲಿಯೇ ಅವರ ಸಾಹಿತ್ಯದ ಓದಿಗೂ ರಚನೆಗೂ ಉತ್ತಮ ಪರಿಸರವಿತ್ತು. ರಾಮಚಂದ್ರ ಮೂರ್ತಿಯವರ ಆಸಕ್ತಿಯಿಂದಾಗಿ ಕನ್ನಡ ಸಾಹಿತ್ಯದ ಅತ್ಯುತ್ತಮ ಕೃತಿಗಳೆಲ್ಲವೂ ಅಲ್ಲಿಯ ಲೈಬ್ರೆರಿಯಲ್ಲಿ ಸಿಗುತ್ತಿದ್ದವು.ಹಾಗೂ ಹಿರಿಯ ಅಧ್ಯಾಪಕರಾಗಿದ್ದ ಜಿ ಎಲ್ ರಾಮಪ್ಪನವರು ಕಥೆಗಾರ ಎನ್ ಎಸ್ ಚಿದಂಬರ ರಾವ್ ಅವರೂ ಗಂಭೀರ ಸಾಹಿತ್ಯ ಚರ್ಚೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಷ್ಟು ಅಧ್ಯಯನ ಶೀಲರಾಗಿದ್ದರು. ಎಚ್ ಎಸ್ ವಿ ರಚಿಸುತ್ತಿದ್ದ ರಚನೆಗಳನ್ನು ಪ್ರೀತಿಯಿಂದ ಓದಿ ಪ್ರೋತ್ಸಾಹಿಸುತ್ತಿದ್ದರು.

ಈ ಹಂತದಲ್ಲಿಯೆ ಮೂರ್ತಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ ಎ ಪಡೆದದ್ದು. ಇದೊಂದು ರೀತಿ ಇವರ ಬದುಕಿನಲ್ಲೊಂದು ತಿರುವು ನೀಡಿತು. ತಾಂತ್ರಿಕ ಶಿಕ್ಷಣದಿಂದ ಇವರು ಕಲಾ ವಿಭಾಗಕ್ಕೆ ತನಗೆ ಪ್ರಿಯವಾದ ವಿಷಯದ ಕಡೆಗೆ ಹೊರಳುವ ಗಂಭೀರ ಪ್ರಯತ್ನ ಮಾಡಿದರು. ಇದೇ ವೇಳೆಗೆ ಮೂರ್ತಿಯವರು ಪರಿವೃತ್ತ ಸಂಕಲನ ಪ್ರಕಟಿಸಿ ಕವಿಯಾಗಿ ತಮ್ಮನು ಸಾಹಿತ್ಯ ಜಗತ್ತಿನಲ್ಲಿ ಗುರ್ತಿಸಿಕೊಂಡರು. ಮದುವೆಯಾಗಿ ಮಕ್ಕಳ ತಂದೆಯಾಗಿ ಹೆಂಡತಿ ಮಕ್ಕಳೊಂದಿಗೆ ತಾಯಿ ಅಜ್ಜಿಯವರಿಗೆ ನೆಮ್ಮದಿ ನೀಡಿ ಸುಖವಾಗಿಯೇ ಇದ್ದರೂ ಅವರೊಳಗಿನ ಸೃಜನ ಶೀಲ ಕವಿ ಮತ್ತು ಅಧ್ಯಾಪಕ ಚಡಪಡಿಸುತ್ತಲೇ ಇದ್ದ. ಎಮ್ ಎ ಮಾಡಬೇಕೆಂಬ ಅವರ ತುಡಿತ ಬಲವಾಗುತ್ತಲೇ ಇತ್ತು. ಒಮ್ಮೆ ಜಿ ಎಲ್ ರಾಮಪ್ಪನವರು ಬೆಂಗಊರಿಗೆ ಬಂದಿದ್ದಾಗ ತಮ್ಮ ಶಿಷ್ಯ ಕೆ ಮರುಳ ಸಿದ್ದಪ್ಪನವನ್ನು ಕಾಣಲು ಕನ್ನಡ ಅಧ್ಯಯನ ಕೇಂದ್ರಕ್ಕೆ ಹೋಗಿದ್ದರು. ಪ್ರಾಸಂಗಿಕವಾಗಿ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರೊಂದಿಗೆ ಪ್ರಸ್ತಾಪಿಸಿದಾಗ ಭಟ್ಟರು ಪರಿವೃತ್ತ ಸಂಕಲನವನ್ನು ಓದಿರುವುದಾಗಿಯೂ ಒಳ್ಳೆಯ ಕವಿಯಾದ ಮೂರ್ತಿಗೆ ಎಮ್ ಎ ಓದಲು ತೊಂದರೆಯಾಗಬಾರದು ತಾವು ಶಿವರುದ್ರಪ್ಪನವರಿಗೆ ಹೇಳಿ ಸೀಟು ಕೊಡಿಸಲು ಪ್ರಯತ್ನಿಸುವುದಾಗಿಯೂ ಆಶ್ವಾಸನೆ ನೀಡಿ ಅದರಂತೆಯೇ ಮೂರ್ತಿಯವರಿಗೆ ಸೀಟು ದೊರಕಿಸಿಕೊಟ್ಟರು. ಸಂಸಾರವಂದಿಗ ಮೂರ್ತಿಯವರು ಸವಾಲುಗಳನ್ನು ಸದ್ದಿಲ್ಲದೇ ಸ್ವೀಕರಿಸುವ ಮನೋಬಲ ಇರುವಂತವರು. ಎಂತಹ ಇಕ್ಕಟ್ಟಿನ ಸಂದರ್ಭದಲ್ಲೂ ಹಿಂದೆ ಸರಿಯುವವರಲ್ಲ. ಅವರ ಈ ಸಂಕಲ್ಪ ಬಲವೇ ಸಂಸಾರವನ್ನೂ ಉದ್ಯೋಗವನ್ನೂ ತಾತ್ಕಾಲಿಕವಾಗಿ ಬಿಟ್ಟು ಬೆಂಗಳೂರಿಗೆ ಬಂದು ಶಿಕ್ಷಣ ಪಡೆಯಲು ದೃತಿ ನೀಡಿತು. ಎಚ್ ಎಸ್ ವಿಯವರು ತಮ್ಮ ಇಪ್ಪತ್ತೊಂಬತ್ತನೆಯ ವಯಸ್ಸಿನಲ್ಲಿ ಉತ್ತಮ ಶ್ರೇಣಿಯಲ್ಲಿ ಎಮ್ ಎ ಪದವಿ ಪಡೆದು ಬೆಂಗಳೂರಿನ ಸಂತ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇರಿಕೊಂಡರು . ಕುಟುಂಬವನ್ನು ಮಲ್ಲಾಡೀಹಳ್ಳಿಯಿಂದ ತಮ್ಮ ಬದುಕನ್ನು ರಾಜಧಾನಿಗೆ ಸ್ಥಳಾಂತರಿಸಿದರು.

ಮುಂದೆ ಸುಮಾರು ಮೂರು ದಶಕಗಳ ಕಾಲ ಎಚ್ ಎಸ್ ವಿ ಅತ್ಯಂತ ಯಶಸ್ವೀ ಅಧ್ಯಾಪಕರಾಗಿ ವಿದ್ಯಾರ್ಥಿಗಳ ಅಪಾರ ಪ್ರೀತಿಗೆ ಪಾತ್ರರಾಗಿ ಅನೇಕ ಪ್ರತಿಭೆಗಳು ಅರಳಲು ಕಾರಣವಾದದ್ದು ಈಗ ಇತಿಹಾಸ. ಅಧ್ಯಾಪಕರಾಗಿ ಮೂರ್ತಿಯವರು ರೂಪಿಸಿದ ಅನುಷ್ಠಾನಕ್ಕೆ ತಂದ ಅನೇಕ ಯೋಜನೆಗಳು ಯಾವ ಅಧ್ಯಾಪಕರಿಗೂ ಮಾದರಿಯಾಗಬಲ್ಲಂತಹವು. ಕಾಮರ್ಸ್ ಕಾಲೆಜೊಂದರಲ್ಲಿ ಇವರು ಹಮ್ಮಿಕೊಂಡ ಕಾರ್ಯಕ್ರಮಗಳು ನಾಡಿನಾದ್ಯಂತ ಮೆಚ್ಚುಗೆಗೆ ಪಾತ್ರವಾದುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದೆನ್ನುತ್ತಾರೆ ನರಹಳ್ಳಿಯವರು.

ಅಗರ ಬತ್ತಿಯೇ… ! ತೆಪ್ಪಗುರಿಯುತ್ತ ,ಉರಿಯುತ್ತ

ಆಯುಷ್ಯ ಸಮೆಸು. ನಡುಮನೆಯ ಹಂಗೇ ಬೇಡ.

ನಿನ್ನ ಪಾಡಿಗೆ ನೀನು ಮೂಲೆಯಲ್ಲಿ ಸುಟ್ಟುಕೋ.

ಒಮ್ಮೆಗೇ ಹೊತ್ತಿ ಧಗ್ಗನೆ ದಗ್ದವಾಗುವುದು

ವ್ಯರ್ಥ, ಕೊರಗಿರಲಯ್ಯ ಕೊನೆವರೆಗೂ, ನಡುವೆಯೇ

ಆರಿದರೆ ಕರಕು, ಕನಿಕರದ ಕೊರೆ ಉಳಿಯುವುದು.

ವ್ರತದಂತೆ ಒಂದೇ ಹದದಲ್ಲಿ ಎದೆಯಲ್ಲೊಂದು

ಕಿಡಿಗೆಂಡ ಹಿಡಿದು, ಅಂತಸ್ಥ ಚಿತ್ತವನೆತ್ತಿ

ಚಿತ್ತಾರ ಮಾಡಿ ಬಿಡು ಹೊರಗೆ . ಮೂಗುವುಳ್ಳವರು

ಎಲ್ಲೋ ದೂರದಲ್ಲಿದ್ದೂ, ಗಾಳಿಯಲೆಯಲಿ ತೇಲಿ-

ಬಂದ ಕಂಪಿಗೆ , ಕಣ್ಣು ಮುಗಿದು ತಲೆ ದೂಗುವರು.

ನಿನ್ನನ್ನು ಕಣ್ಣಾರೆ ಕಾಣದವರೂ ಕೂಡಾ

ನಿನ್ನ ಗಂಧವ್ರತವ ಮೆಚ್ಚುವರು- ಮನಸೋತು

ಇದ್ದಾಗ ಇಷ್ಟು: ಉಳಿದದ್ದು ನಾಳೆಯ ಮಾತು.

(ಗಂಧವೃತ)

 

ಇವರ ಕಾವ್ಯ ಪ್ರಕ್ರಿಯೆಯಲ್ಲಿ ಕಾವ್ಯ ಕೃಷಿಗೆ ಅಗತ್ಯವಾದ ಎರಡು ತತ್ವಗಳಿವೆ. ಮೊದಲನೆಯದು ಸೃಷ್ಟಿ ಮತ್ತು ಇನ್ನೊಂದು ಪಾಲನೆ.ಇವೆರಡೂ ತತ್ವಗಳನ್ನು ಸಮ್ಮಿಳಿತಗೊಂಡ ಕಾವ್ಯ ಪ್ರಜ್ಞೆ ಮಾತ್ರ ನಮ್ಮ ಹೊಸ ಕಾವ್ಯಕ್ಕೆ ಸ್ವಧರ್ಮವನ್ನು ಕರುಣಿಸಬಲ್ಲುದು. ಕವಿತೆ ಇವರ ಪಾಲಿಗೆ ವೈಯಕ್ತಿಕ ಅನುಭವದ ಅಭಿವ್ಯಕ್ತಿ ಆಗಿರುವಂತೆಯೇ ಕಲೆಯ ಪಾರಂಪರಿಕ ಅನುಸಂಧಾನವೂ ಹೌದು. ಇವರ ಪ್ರಕಾರ ಕವಿತೆಯಲ್ಲಿ ಭಾವ ಮುಖ್ಯ.

ಇವರ ಬಗೆಗಿನ ಸಾಹಿತ್ಯ ಪ್ರಪಂಚದ ಗೌರವಾದರದ ನುಡಿಗಳಿವು:-

ಕೆ ಎಸ್ ನ: ನವೋದಯ ಕಾವ್ಯಗಳ ಖಚಿತತೆ, ಭಾವ ಮಾಧುರ್ಯಗಳನ್ನೂ , ನವ್ಯ ಕಾವ್ಯಗಳ ಜಟಿಲತೆ ಅಸ್ಪಷ್ಟತೆಗಳನ್ನೂ ಒಳಗೊಂಡ ತಮ್ಮದೇ ಆದ ಶೈಲಿಯನ್ನು ರೂಢಿಸಿ ಕೊಳ್ಳುವಲ್ಲಿ ಇವರು ಸಾಕಷ್ಟು ಯಶಸ್ಸನ್ನು ಗಳಿಸಿದ್ದಾರೆ. ವಸ್ತು ವೈವಿದ್ಧ್ಯವೂ ಭಿನ್ನಭಿನ್ನ ಲಯ ಕಲ್ಪನೆಗಳೂ ಇವರ ಕಾವ್ಯದ ವಿಶಿಷ್ಟ ಲಕ್ಷಣಗಳು. ನನಗಿಂತ ಕಿರಿಯರಾದ ಕವಿಗಳಲ್ಲಿ ಅಗ್ರಗಣ್ಯ.

ಜಿ ವೆಂಕಟಸುಬ್ಬಯ್ಯ: ವೆಂಕಟೇಶ್ ಮೂರ್ತಿಯವರ ವ್ಯಕ್ತಿತ್ವದಲ್ಲಿ ಒಂದು ಆಕರ್ಷಣೆ ಇದೆ.ಅವರದ್ದು ಸ್ನೇಹ ಶೀಲ ಸ್ವಭಾವ.ಮಾತಿನಲ್ಲಿರುವ ಒಂದು ಲೋಕಾಭಿರಾಮವಾದ ಸತ್ವದಿಂದ ಅವರು ಬಲು ಬೇಗ ಆತ್ಮೀಯತೆಯನು ಸಂಪಾದಿಸುತ್ತಾರೆ, ಇಂತ ಗುಣಗಳ ಪರಿಣಾಮವಾಗಿ ಅವರು ಜನಪ್ರಿಯ ಕವಿಗಳಾಗಿಯೂ, ವಿದ್ಯಾರ್ಥಿ ಪ್ರಿಯ ಅಧ್ಯಾಪಕರೂ ಆಗಿ ಪ್ರಸಿದ್ಧರಾಗಿದ್ದಾರೆ. ಪುರಾಣ ಪುಣ್ಯ ಕಥೆ ಜಾನಪದ, ರಾಜಕೀಯ,ಇತಿಹಾಸ, ಮಹಾ ಕಾವ್ಯಗಳಿಂದ ಆರಿಸಿಕೊಳ್ಳುವ ವಸ್ತು ವೈಶಿಷ್ಟ್ಯದಲ್ಲೂ ಒಂದು ಆಕರ್ಷಣೆ ಇದೆ. ವ್ಯಂಗ್ಯ ವಿನೋದ, ರಹಸ್ಯ, ಶಾಬ್ದಿಕ ಕ್ರೀಡೆ ಮುಂತಾದ ಸತ್ವಗಳಿಂದ ಅವರ ಕೃತಿಗಳು ಎಲ್ಲರಿಗೂ ಸದಾ ಕಾಲ ಸಂತೋಷವನ್ನು ನೀಡುತ್ತವೆ.

ಎಲ್ ಎಸ್ ಶೇಷಗಿರಿರಾವ್: ಬದುಕಿಗಾಗಿಯೇ ಬದುಕನ್ನು ಪ್ರೀತಿಸುವ, ಅದರ ಸಂಪತ್ತು ಸಮೃದ್ಧಿಗಳಲ್ಲಿಯೇ ಸಂಭ್ರಮಿಸುವ ದನಿ ಇವರ ಕಾವ್ಯಗಳಲ್ಲಿ. ಪೌರಾಣಿಕ ಸಾಮಗ್ರಿಯನ್ನು ವಿವಿಧ ರೀತಿಯಲ್ಲಿ ಬಳಸಿಕೊಂಡು ನೀಡುವ ರೂಪಗಳ ವೈವಿಧ್ಯತೆಯ ಆಗರ ಅವರ ಕವನಗಳು. ಇವರದ್ದು ಪೌರಾಣಿಕ ಪ್ರಜ್ಞೆಯಲ್ಲಿ ಆಳವಾಗಿ ಬೇರು ಬಿಟ್ಟ ಮನಸ್ಸು. ಸಮಕಾಲೀನ ಕವಿಗಳಲ್ಲಿ ಇಂದ್ರಿಯಾನುಭವಗಳಿಗೆ ಸ್ಪಂದಿಸುವವರು ವಿರಳ.

ಜಿ ಎಸ್ ಶಿವರುದ್ರಪ್ಪ: ಇವರದ್ದು ಬಿಡುವಿಲ್ಲದ ಬರವಣಿಗೆ. ಕಳೆದ ಮೂರು ದಶಕದ ಕಾಲಮಾನದಲ್ಲಿ ಹದಿನೇಳು ಕವನ ಸಂಗ್ರಹಗಳನ್ನೂ ಹದಿನೇಳು ನಾಟಕಗಳನ್ನೂ, ಮಕ್ಕಳಿಗಾಗಿ ಮೂರು ಕವನ ಸಂಗೃಹಗಳನ್ನು ಪ್ರಕಟಿಸುತ್ತಾ ತಮ್ಮ ಸೃಜನಶೀಲತೆಯನ್ನುನಿರಂತರವಾಗಿ ಉಳಿಸಿಕೊಂಡು ಬಂದ ಪ್ರತಿಭಾವಂತವಾಗಿದ್ದಾರೆ. ಇವರ ಓರಗೆಯ ಯಾರೂ ಇವರಂತೆ ಬಗೆ ಬಗೆಯ ಸಮೃದ್ಧಿಯನ್ನೂ, ವೈವಿಧ್ಯತೆಯನ್ನೂ ,ಪ್ರಯೋಗ ಶೀಲತೆಯನ್ನೂ, ಇವರಂತೆ ಕಾಯ್ದುಕೊಂಡು ಬಂದಂತೆ ನನಗೆ ತೋರುವುದಿಲ್ಲ, ಕಾವ್ಯ ನಿರ್ಮಿತಿಯು ಒಂದು ಕಲೆಗಾರಿಕೆ ಎಂಬ ಶ್ರದ್ಧೆಯಿಂದ ಸೃಜನ ಶೀಲರಾದ ಕವಿ.

ಚನ್ನವೀರ ಕಣವಿ: ಸಾಂಸ್ಕೃತಿಕ ಲೋಕದ ಮಾಧುರ್ಯ ಹೆಚ್ಚಿಸಿದ ಕವಿ,

ಯು ಆರ್ ಅನಂತ ಮೂರ್ತಿ: ಎಚೆಸ್ವೀಯವರು ಏರು ದನಿಯ ಬಂಡಾಯದಿಂದಲೂ, ತಾತ್ವಿಕ ನಿಷ್ಟೆಯ ಹುಡುಕಾಟ ಬಡಿದಾಟದಿಂದಲೂ ಹೊರಗುಳಿದುಕಾವ್ಯವನ್ನು ಕಥನಕ್ಕೆ ಒಗ್ಗುವಂತೆ ಮಾಡಿರುವ ಇವರು ತೀವ್ರತೆಯಲ್ಲಿ ಮಾತ್ರವಲ್ಲದೇ ತನ್ನ ಧಾರಾಳದಲ್ಲೂ ಕನ್ನಡ ಕಾವ್ಯ ಹಿಗ್ಗುವಂತೆ ಮಾಡಿದವರು. ಕಾವ್ಯದ ಸಂವಹನ ಸುಭಗತೆ, ಶಿಸ್ತಿನ ಧಾಟಿ, ಭಾಷಾ ಪ್ರಯೋಗ, ಚಂದೋವೈವಿಧ್ಯ, ಪರಂಪರೆಯ ದಟ್ಟವಾದ ಪ್ರಜ್ಞೆ, ಸಮಕಾಲೀನ ವಿಮರ್ಶಾ ಧೋರಣೆಗೆ ತಕ್ಕಂತೆತನ್ನ ಕಾವ್ಯವನ್ನು ಬದಲಿಸಿಕೊಳ್ಳದಿರುವವರು..

ಡಾ ಜಿ ಎಸ್ ಆಮೂರ: ಬರವಣಿಗೆ ಅನುಭವಗಳನ್ನು ಚದುರದಂತೆ ಕಟ್ಟಿಡುವ ಒಂದು ಕ್ರಮ ಎಂದು ನಂಬಿರುವ ಮೂರ್ತಿಯವರಿಗೆ ಒಂದು ಕೇಂದ್ರ ವಸ್ತುವಿನ ಅಥವಾ ಕೇಂದ್ರ ದರ್ಶನದ ಅವಶ್ಯಕಥೆ ಕಂಡು ಬಂದಿಲ್ಲ. ಸೃಷ್ಟಿಯ ಪ್ರೀತಿಯೊಂದೇ ಕವಿಗೆ ಮುಖ್ಯ. ಜಗತ್ತನ್ನು ಸಹ್ಯಗೊಳಿಸುವುದು ಕವಿಯ ಕಾರ್ಯ ಎಂಬ ನಂಬುಗೆ ಅವರಲ್ಲಿ ಕಾವ್ಯ ಶ್ರದ್ಧೆಯನ್ನು ಕಾಯ್ದುಕೊಂಡು ಬಂದಿದೆ.

ಡಾಎಚ್ ಎಸ್ ರಾಘವೇಂದ್ರ ರಾವ್: ಬದುಕಿನ ವಿವರಗಳನ್ನು ಮತ್ತು ಅದನ್ನು ಕುರಿತ ಮನುಷ್ಯನ ಧೋರಣೆಗಳಲ್ಲಿ ಕಾವ್ಯವನ್ನು ಕಾಣಬಲ್ಲ ಮತ್ತು ಅದಕ್ಕೆ ಆಕರ್ಷಕವಾದ ಪ್ರತಿಭೆಗೆ ಮಾತ್ರ ಸಾಧ್ಯವಾದ ಭಷಿಕ ರೂಪವನ್ನು ಕೊಡಬಲ್ಲ ಅಗಾಧವಾದ ಕಲ್ಪನಾ ಶಕ್ತಿಯೇ ಇವರ ಸಮಗ್ರ ಕಾವ್ಯದ ಸಾಮಾನ್ಯ ಗುಣ.ಇವರ ಕಾವ್ಯಗಳು ಪು ತಿನ ಮತ್ತು ಕೆ ಎಸ್ ನ ರವರ ಕಾವ್ಯಧರ್ಮಗಳ ಅತಿ ವಿಶಿಷ್ಟವಾದ ಸಂಯೋಗವಾಗಿದೆ.

ಸಿ ಎನ್ ರಾಮಚಂದ್ರನ್: ಪ್ರತಿಯೊಂದೂ ಕವನಸಂಕಲನದಲ್ಲಿಯೂ ಹೊಸ ದಾರಿಯನ್ನು , ಹೊಸ ಅಭಿವ್ಯಕ್ತಿಯನ್ನು ಶೋಧಿಸುತ್ತಾ ಆ ಕಾರಣದಿಂದಾಗಿಯೆ ಯಾವಾಗಲೂ ತಮ್ಮ ಕಾವ್ಯ ಕ್ರಿಯೆಯಲ್ಲಿ ಜೀವಂತಿಕೆಯನ್ನು ಉಳಿಸಿಕೊಂಡಿರುವ ಕವಿ

ಕೆ ಎಸ್ ನಿಸಾರ್ ಅಹಮದ್: ಪರಂಪರೆಯಲ್ಲಿ ಭದ್ರವಾಗಿ ಕಾಲುಗಳನ್ನೂರಿ ಹೊಸತರ ಕಡೆ ಸದಾ ಮೊಗ ಮಾಡಿರುವ ಕವಿ ಇವತ್ತಿನ ಲೇಖಕರಿಗೆ ಮಾದರಿಯಾಗುವಂಥವರು. ಒಲ್ಲೆಯದನ್ನು ಗುರುತಿಸಿ ಶ್ಲಾಘಿಸುವುದರ ಜತೆಗೇ ಲೋಪ ದೋಷಗಳನ್ನೂ ನಯವಂತಿಕೆಯಿಂದ ಸೂಚಿಸುವಸುಸಂಸ್ಕೃತ ಸ್ವಭಾವದ ಇವರಿಗೆ ಓದು ಸ್ವಚಿಂತನೆ ಇತರರೊಂದಿಗಿನ ವಿಚಾರ ವಿನಿಮಯಗಳ ಪ್ರಭಾವದಿಂದ ಲಭ್ಯವಾಗಿರುವಂತಹದ್ದು.ಬೌದ್ಧಿಕ ಕಸರತ್ತು, ತಾತ್ವಿಕ ವಿಚಾರಗಳಲ್ಲಿನದೆಸೆಗೆಟ್ಟ ತೊಳಲಾಟ, ದುರವಗಾಹತೆ ಇವರ ಬರಹಗಳಿಂದ ಹೊರತಾದ ಅಂಶಗಳು.ಸಂವಹನತೆಯಲ್ಲಿ ನೇರತನ ವಿಶದತೆ, ಚೇತೋಹಾರಿತ್ವ ಅವರಿಗೆ ರಕ್ತಗತ.

ಸುಮತೀಂದ್ರ ನಾಡಿಗ: ಚಂದೋ ಬಂಧದ ಬಗ್ಗೆ ಅವರಿಗಿರುವ ಹಿಡಿತ ಮತ್ತು ಅವರು ಸಾಧಿಸಿರುವ ವೈವಿಧ್ಯ ಅಸಾಧಾರಣವಾದದ್ದು. ಕಥನ ಕಾವ್ಯಗಳನ್ನು ಬಗೆ ಬಗೆಯಾದ ಛಂದೋ ವಿನ್ಯಾಸಗಳಲ್ಲಿ ಕೊಡುವ ಅವರ ಕಲಾತ್ಮಕವಾದ ಪದ್ಯಗಾರಿಕೆ ಮತ್ತು ಅವರ ಧಾರಣ ಶಕ್ತಿ ಬೆರಗುಗೊಳಿಸುವಂತಿದೆ. ಭಾವಗೀತಾತ್ಮಕತೆ , ರಹಸ್ಯಮಯತೆಗಳನ್ನು ಇಟ್ಟುಕೊಂಡು ಪೌರಾಣಿಕ ವಸ್ತುವಿಗೆ ಮತ್ತು ಕಲ್ಪನೆಯಲ್ಲಿ ಮಾಡಿದ ಕಥೆಗಳಿಗೆ ಅವರು ಕೊಡುವ ಅನೀರೀಕ್ಷಿತ ತಿರುವುಗಳು ಅವರ ವಿಸ್ತಾರವಾದ ಕಾವ್ಯ ಶ್ರೇಣಿಯನ್ನು ಶ್ರೀಮಂತಗೊಳಿಸಿವೆ.

ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ: ಇವರೊಬ್ಬ ಗಣ್ಯ ಲೇಖಕ. ತಮ್ಮ ಪೀಳಿಗೆಯ ಒಬ್ಬ ಮುಖ್ಯ ಕವಿ. ಸಂಕಲ್ಪ ಶಕ್ತಿಯೇ ಎಚ್ ಎಸ್ ವಿ ವ್ಯಕ್ತಿತ್ವದ ಮುಖ್ಯದ್ರವ್ಯ. ಅತ್ಯಂತ ಪ್ರತಿಕೂಲ ಪರಿಸ್ಥಿತಿಗಳಲ್ಲೂ ಅದನ್ನೆಲ್ಲ ಮರೆತು ಕನ್ನಡ ಅಧ್ಯಯನ ಸಾಹಿತ್ಯ ರಚನೆಗಳಲ್ಲಿ ಮುಳುದ್ದವರು. ತಮ್ಮ ಆರಂಭದ ಜೀವನವನ್ನು ವಿಶೇಷವಾದ ಸಂಕಲ್ಪದ ಬಲದಿಂದ ಈಗಿನ ಎತ್ತರಕ್ಕೆ ಕಟ್ಟಿಕೊಂಡವರು. ಈ ಉನ್ನತಿಗೆ ಕಾರಣ ಅವರ ಸಂಕಲ್ಪ ಶ್ರದ್ಧೆಗಳೇ.

ಜಿ ಎನ್ ರಂಗನಾಥ ರಾವ್: ಹದಿಮೂರರ ಹರಯದಿಂದ ಇಂದಿನವರೆಗೆಅನವರತ ಕಾವ್ಯದೊಂದಿಗೆ ಅಖಂಡವಾದ ಜೀವಂತಿಕೆಯಿಂದ ಅನುಸಂಧಾನ ನಡೆಸಿರುವ ಎಚೆಸ್ವೀ ಭೂಮ್ಯಾಕಾಶಗಳ ಮಧುರ ಮಿಲನದ ಸುಮುಹೂರ್ತಕಾಗಿ ಅಭಿಸಾರಿಕೆಯಂಂತೆ ಕಾದು ನಿಂತಿದ್ದಾರೆ. ಅವರದ್ದು ಒಮ್ಮೆ ಆಕಾಶದತ್ತ, ಮತ್ತೊಮ್ಮೆ ಭೂಮಿಯತ್ತ ಸುಳಿದಾಡುವ ನಿತ್ಯ ನಿರಂತರ ನಿರೀಕ್ಷೆಯ ಕಣ್ಣು.

ಜಿ ಕೆ ಗೋವಿಂದ ರಾವ್ : ಅಧಮ್ಯ ಚೈತನ್ಯ ಮತ್ತು ಆತ್ಮ ವಿಶ್ವಾಸದ ವ್ಯಕ್ತಿ. ಕಾಲೇಜಿನಲ್ಲಿ ಅತ್ಯಂತ ಪ್ರೀತಿಯ ಹಾಗೂ ಸಮರ್ಥ ಅಧ್ಯಾಪಕರೆಂದು ಗುರುತಿಸಲ್ಪಟ್ಟವರು. ವಿದ್ಯಾರ್ಥಿಗಳನ್ನು ನೆಚ್ಚಿದರೆ ಅವರ ಗುಪ್ತ ಪ್ರತಿಭೆಗಳಲ್ಲಿ ನಂಬಿಕೆಯಿಟ್ಟರೆ ಏನನ್ನು ಬೇಕಾದರೂ ಅವರು ಸಾಧಿಸುವಂತೆ ಮಾಡಬಹುದು ಎಂಬ ಬಹು ಆಳವಾದ ವಿಶ್ವಾಸದಲ್ಲಿ ಎಚ್ ಎಸ್ ವಿಕೆಲಸ ಮಾಡುತ್ತಾರೆ ಎಂದೇ ವಿದ್ಯಾರ್ಥಿಗಳಿಗೆ ಅವರೆಂದರೆ ತುಂಬಾ ಪ್ರೀತಿ ಗೌರವ.

ಕೆ. ವಿ ತಿರುಮಲೇಶ್: ಗಂಧವ್ರತವೇ ಎಚ್ ಎಸ್ ವಿಯವರ ಚಿತ್ತವೃತ್ತಿ , ಅದು ಭಗ್ಗನೆ ಉರಿಯುವುದಿಲ್ಲ. ಅದರೆ ಅದರರ್ಥ ಒಳಗೊಂದು ಕೆಂಡವಿಲ್ಲವೆಂದಲ್ಲ. ಆಧುನಿಕ ಕಾವ್ಯ ಕ್ಷೇತ್ರದಲ್ಲಿ ಗೊಂದಲರಹಿತವಾಗಿ ಬರೆಯುವ ಕೆಲವೇ ಮಂದಿಯಲ್ಲಿ ಇವರು ಪ್ರಮುಖರು. ಯಾವುದೇ ಅತಿರೇಕದಿಂದ ದೂರವಿದ್ದುಕೊಂಡು ಸಮಚಿತ್ತದಲ್ಲಿ ಬರೆಯುವುದೇ ಇವರ ಕವನಗಳ ಬಿಗಿ ರಹಸ್ಯ.ಏನು ಮಡಿದರೂ ಅವರ ಸಂವೇದನೆ ಹೊಸತಾಗಿಯೇ ಇರುತ್ತದೆ. ಪೌರಾಣಿಕ ಪಾತ್ರಗಳನ್ನು ಕುರಿತು ಬರೆದಾಗಲೂ ಈ ಪಾತ್ರಗಳು ಕೇವಲ ಪೌರಾಣಿಕೆ ಪ್ರತಿಮೆಗಳಾಗದೇ ನಮ್ಮ ಸಮಕಾಲೀನ ವ್ಯಕ್ತಿಗಳೂ ಆಗಿರುತ್ತಾರೆ. ಇದೇ ಪರಂಪರೆಯ ಜತೆ ಅನುಸಂಧಾನ ನಡೆಸುವ ವ್ಯಕ್ತಿಯಿಂದ ನಾವು ನಿರೀಕ್ಷಿಉವುದು.ಈ ಕಾರಣಗಳಿಂದಲೇ ಇವರ ಪ್ರಯೋಗಗಳು ಇವತ್ತು ಕನ್ನಡ ಕಾವ್ಯಕ್ಕೆ ಬಹು ದೊಡ್ಡ ಕೊಡುಗೆ ಮಾತ್ರವೇ ಆಗಿರದೇ ಅದರ ಆತ್ಮಾವಲೋಕನದ ಕನ್ನಡಿ ಕೂಡಾ ಆಗಿದೆ. ಕವಿಯೊಬ್ಬನ ಶ್ರೇಷ್ಠತೆಗೆ ಇದಕ್ಕಿಂತ ಹೆಚ್ಚಿನದೇನೂ ಬೇಕಿಲ್ಲ.

ಬಿ ಆರ್ ಲಕ್ಶ್ಮಣ ರಾವ್: ಮೂರ್ತಿ ಬಾಳಿನ ಜಂಝಡಗಳಿಂದ ಕಹಿಯಾಗದೇ ಬಾಳನ್ನು ಪ್ರೀತಿಸುವ ಕವಿ.ತನ್ನ ಸುತ್ತಲಿನ ಕಪಟ ಕ್ರೌರ್ಯ ಭ್ರಷ್ಟತೆ ವಿಕಾರಗಳಿಗೆ ರೋಸಿ ಕಟು ವ್ಯಂಗ್ಯದ ಸಿನಿಕನಾಗದೇ ಇಂಥ ಪರಿಸರದಲ್ಲೂ ಉಳಿದಿರ ಬಹುದಾದ ಚೆಲುವು ಗೆಲುವುಗಳನ್ನು ಪ್ರೀತಿ ಅಂತಃಕರಣಗಳನ್ನು ಗುರುತಿಸಿ ಅವುಗಳನ್ನು ಬೆಳಸ ಬಯಸುವ ಜೀವನೀತ್ಸಾಹದ ಆಶಾವಾದಿ ಕವಿ. ವಿನಯದ ಸೌಮ್ಯತೆಯ ಮೆಲುದನಿಯೇ ಇವರ ಶೈಲಿ. ಸಂಕೀರ್ಣವಾದ ಬಿಗಿ ಬಂಧದಲ್ಲೂ ಅದು ಸಾಧಿಸುವ ಸ್ಪಷ್ಟತೆ ಮತ್ತು ಸರಳತೆಯೇ ಅದರ ವೈಶಿಷ್ಟ್ಯ.

ಎಸ್ ಜಿ ಸಿದ್ಧರಾಮಯ್ಯ: ಪುರಾಣ ಪ್ರಪಂಚಕ್ಕೆ ದೇಸೀ ಸಂವೇದನೆಯ ಆರ್ದ್ರತೆ. ಇವರ ಕಾವ್ಯದ ನರ ನಾಡಿಗಳಲ್ಲಿ ರಾಮಾಯಣ ಮಹಭಾರತದ ಪುರಾಣ ಪ್ರಪಂಚ ದೇಸೀ ಸಂವೇದನೆಯ ಆರ್ದ್ರತೆಯೊಂದಿಗೆ ಪರಿಮಿಡಿದಿದೆ.ಜನಪರ ಪುರಾಣಗಳ ಆಪ್ತತೆಯನ್ನು ಅನುಭವಕ್ಕೆ ತಂದು ಕೊಡುವ ಭಾವ ವಿಶೇಷ ಇಲ್ಲಿಯದ್ದು.ಜನಪದ ಕಥನ ಗುಣದ ಜೊತೆಗಿನ ಇಲ್ಲಿಯ ಅನುಸಂಧಾನ ಇವರ ಭಾಷೆಗೆ ಇನ್ನಿಲ್ಲದ ಸುಭಗತೆಯನ್ನು ಪ್ರಧಾನಿಸಿದೆ.

ವೈದೇಹಿ: ಹೃದಯಕ್ಕೇ ತಲುಪುವ ಕಾವ್ಯ

ಸವಿತಾ ನಾಗ ಭೂಷಣ: ಸ್ಥಿತಪ್ರಜ್ಞ ಸಂವೇದನೆ

ಚಿಂತಾಮಣಿ ಕೊಡ್ಲೆಕೆರೆ: ಕಾವ್ಯಕ್ಕೆ ತನ್ನ ಮೂಲ ಸ್ರೋತದ ನೆನಪು ದಕ್ಕಿಸಿದ ಕವಿ

ಕೀರ್ತಿನಾಥ ಕುರ್ತಕೋಟಿ-“ಕಾವ್ಯವೆಂದರೆ ಏನು ಎಂದು ಮತ್ತೆ ಆಲೋಚಿಸಲು ಹಚ್ಚುವ ಕಾವ್ಯ ನಿಜವಾಗಿಯೂ ದೊಡ್ಡ ಕಾವ್ಯವೆಂದು ನಾನು ತಿಳಿದಿದ್ದೇನೆ. ಅಂಥ ಕವಿತೆಯನ್ನು ನಿರ್ಮಿಸಿದ್ದಕ್ಕಾಗಿ ಮೂರ್ತಿಯವರನ್ನು ನಾನು ಅಭಿನಂದಿಸುತ್ತೇನೆ”-

ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು-“ಹೊಸಗನ್ನಡ ಕಾವ್ಯಸಂದರ್ಭದ ನವ್ಯೋತ್ತರ ಕಾಲಮಾನದಲ್ಲಿ ಕನ್ನಡ ಕಾವ್ಯಲೋಕವನ್ನು ಪ್ರವೇಶಿಸಿದ ಡಾ|ಎಚ್.ಎಸ್.ವೆಂಕಟೇಶಮೂರ್ತಿಯವರ ಕವಿತೆ ಈ ಮೂವತ್ತು ಮಳೆಗಾಲದಲ್ಲಿ ಪಡೆದುಕೊಂಡ ಸಮೃದ್ಧಿಯನ್ನೂ, ವೈವಿಧ್ಯವನ್ನೂ, ಪ್ರಯೋಗಶೀಲತೆಯನ್ನೂ, ಮತ್ತು ನಾವೀನ್ಯತೆಯನ್ನು ಅವರ ಸಮಕಾಲೀನರಾದ ಇನ್ನಿತರ ಯಾವ ಕವಿಗಳೂ ಇಷ್ಟರ ಮಟ್ಟಿಗೆ ಪಡೆದುಕೊಳ್ಳಲಿಲ್ಲ ಎಂದರೆ ಅದು ಉತ್ಪ್ರೇಕ್ಷೆಯ ಮಾತೇನೂ ಅಲ್ಲ

ಡಾ|ಕಂಬಾರರು-“ಆಧುನಿಕ ಭಾವನೆಗಳನ್ನು ಪುರಾಣಗಳ ಅನುಭವದಲ್ಲಿ ಕರಗಿಸಿ ಅಭಿವ್ಯಕ್ತಿಸುವಲ್ಲಿ ಎಚ್ಚೆಸ್ವಿ ಅವರ ಸಾಧನೆ ಅಸಾಧಾರಣವಾದುದು

 

ಬರೆಹ-ಬದುಕು:

 

೧ ೧೯೬೬ರಿಂದ ೧೯೭೧ರ ವರೆಗೆ ಮಲ್ಲಾಡಿಹಳ್ಳಿಯ ಪ್ರೌಢಶಾಲೆಯಲ್ಲಿ ಅಧ್ಯಾಪಕ ವೃತ್ತಿ

೨ ೧೯೭೧ರಿಂದ ೧೯೭೩-ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಎಂ.ಎ. ಅಧ್ಯಯನ

೩ ೧೯೭೩ರಿಂದ ೨೦೦೦ದ ವರೆಗೆ ಬೆಂಗಳೂರಿನ ಸೇಂಟ್ ಜೋಸೆಫ್ ಕಾಮರ್ಸ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕ, ಅಲ್ಲೇ ಪ್ರಾಧ್ಯಾಪಕನಾಗಿ ನಿವೃತ್ತಿ.

೪ ೨೦೦೦ದಿಂದ ಬೆಂಗಳೂರಿನಲ್ಲಿ ನಿವೃತ್ತ ಜೀವನ.

 

ಮುಖ್ಯ ಕೃತಿಗಳು:

ಕಾವ್ಯ

೧ ಸಿಂದಾಬಾದನ ಆತ್ಮಕಥೆ

೨ ಕ್ರಿಯಾಪರ್ವ

೩ ಒಣಮರದ ಗಿಳಿಗಳು

೪ ನದೀತೀರದಲ್ಲಿ

೫ ಉತ್ತರಾಯಣ ಮತ್ತು…

 

ನಾಟಕಗಳು

೧ ಹೆಜ್ಜೆಗಳು

೨ ಚಿತ್ರಪಟ

೩ ಅಗ್ನಿವರ್ಣ

೪ ಮಂಥರ

೫ ಉರಿಯ ಉಯ್ಯಾಲೆ

 

ಮಕ್ಕಳ ಕವಿತೆಗಳು

೧ ಹಕ್ಕಿ ಸಾಲು

೨ ಸೋನಿ ಪದ್ಯಗಳು

೩ ಅಜ್ಜೀ ಕಥೆ ಹೇಳು

೪ ಬಾರೋ ಬಾರೋ ಮಳೆರಾಯ

೫ ಅಳಿಲು ರಾಮಾಯಣ

 

ವಿಮರ್ಶೆ

೧ ಕೀರ್ತನಕಾರರು

೨ ಆಕಾಶದ ಹಕ್ಕು

೩ ಈ ಮುಖೇನ

೪ ಮೇಘದೂತ -ಬೇಂದ್ರೆ ಮತ್ತು ಕಾಳಿದಾಸ

೫ ಕಥನ ಕವನ

ಆತ್ಮಕಥೆ

೧ ಎಚ್ಚೆಸ್ವಿ ಅನಾತ್ಮಕಥನ

 

ಪ್ರಶಸ್ತಿ-ಪುರಸ್ಕಾರಗಳು

೧ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ

೨ ಐದು ಬಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

೩ ಋತುವಿಲಾಸ ಅನುವಾದಕ್ಕೆ ಕೇಂದ್ರ ಸಾಹಿತ್ಯ ಅಕಾದಮಿ ಪುರಸ್ಕಾರ

೪ ಅಖಿಲ ಭಾರತ ಆಕಾಶವಾಣಿ ಪ್ರಶಸ್ತಿ(ಮೂರು ಬಾರಿ)

೫ ದೇವರಾಜ್ ಬಹದ್ದೂರ್ ಪ್ರಶಸ್ತಿ

೬ ಶಿವರಾಮಕಾರಂತ ಪ್ರಶಸ್ತಿ.

೭ ದಿನಕರದೇಸಾಯಿ ಪ್ರತಿಷ್ಠಾನ ಪ್ರಶಸ್ತಿ.

೮ ಜೀವಮಾನದ ಸಾಧನೆಗೆ ಮಕ್ಕಳ ಸಾಹಿತ್ಯ ಅಕಾಡೆಮಿಯ ಗೌರವ ಪುರಸ್ಕಾರ.

೯ ಡಿ.ವಿ.ಜಿ ಪುರಸ್ಕಾರ

೧೦ ಮೈಸೂರು ಅನಂತಸ್ವಾಮಿ ಪುರಸ್ಕಾರ-ಇತ್ಯಾದಿ

 

ಸಮೂಹ ಮಾಧ್ಯಮಗಳಲ್ಲಿ

೧ ರಾಷ್ಟ್ರ ಪ್ರಶಸ್ತಿ ಪಡೆದ ಚಿನ್ನಾರಿಮುತ್ತ ಚಲನಚಿತ್ರದ ಕಥೆ, ಸಂಭಾಷಣೆ, ಹಾಡುಗಳು

೨ ಕಾಸರವಳ್ಳಿ ಅವರ ಕ್ರೌರ್ಯ ಚಿತ್ರಕ್ಕೆ ಸಂಭಾಷಣೆ

೩ ಟಿ.ಎನ್.ಸೀತಾರಾಮ್ ಅವರ ಮುಕ್ತ, ಮುಕ್ತ-ಮುಕ್ತ ಧಾರಾವಾಹಿಗಳಿಗೆ ಶೀರ್ಷಿಕೆ ಗೀತೆ

೪ ಬಿ.ವಿ.ಕಾರಂತ, ಬಿ ಜಯಶ್ರೀ, ಪ್ರೇಮಾ ಕಾರಂತ, ಕವತ್ತಾರ್ ಅವರಿಂದ ಎಚ್ಚೆಸ್ವಿ ಅವರ ನಾಟಕಗಳ ಜನಪ್ರಿಯ ಪ್ರಯೋಗಗಳು

೫ ಸಿ.ಅಶ್ವಥ್, ಮೈಸೂರು ಅನಂತಸ್ವಾಮಿ, ಉಪಾಸನ ಮೋಹನ್ ಅವರಿಂದ ಎಚ್ಚೆಸ್ವಿ ಅವರ ಭಾವಗೀತೆಗಳ ಜನಪ್ರಿಯ ಧ್ವನಿ ಸುರುಳಿಗಳು.

೬. ಒಂದೂರಲ್ಲಿ … ವಿಶೇಷ ಮಕ್ಕಳ ಚಲನ ಚಿತ್ರದಲ್ಲಿ ಕಥೆ ಸಂಭಾಷಣೆ ಹಾಡುಗಳು

 

 

‍ಲೇಖಕರು G

June 23, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

18 ಪ್ರತಿಕ್ರಿಯೆಗಳು

  1. Prasanna Kulkarni

    ಹುಟ್ಟುಹಬ್ಬದ ಶುಭಾಶಯಗಳು ಸರ್..

    ಪ್ರತಿಕ್ರಿಯೆ
  2. ಚಂದಿನ

    ಪ್ರೀತಿಯ ಮಾಸ್ಟರಿಗೆ,

    ಜನ್ಮದಿನದ ಶುಭಾಶಯಗಳು.
    ನೀವು ಹೀಗೆ ನೂರುಕಾಲ ನಿಮ್ಮ ಕಾವ್ಯ ಪ್ರಭಾವದಿಂದ ನಮಗೆ ಪ್ರೇರಣೆ, ಪ್ರೋತ್ಸಾಹ ನೀಡುವಿರೆಂದು ಬಯಸುವ…

    – ಚಂದಿನ

    ಪ್ರತಿಕ್ರಿಯೆ
  3. ರಾಕೇಶ ಜೋಷಿ

    ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಸರ್. ನೂರ್ಕಾಲ ನಮಗೆ ಮನ ಮಿಡಿಯುವ ಪದ್ಯಗಳನ್ನ ಭಾವ ತುಂಬಿ ಕೊಡ್ತಾ ಇರಿ ಸರ್.

    ಪ್ರತಿಕ್ರಿಯೆ
  4. subbanna mattihalli

    sir saahityada muulaka maatra parichaya
    vaagidda neevu ee lekhanadinda sreshta kutumbiyaagi saamaajikaraagi mattu
    nadedaaduva kaavyavaagi kandiri.tamma
    maatu saha kaavyadante muttaagi manadalli uliyuttade. tamage haardika
    shubhaashayagalu.

    ಪ್ರತಿಕ್ರಿಯೆ
  5. srinivas deshpande

    muvvatthu malgalada kaviya keerthi apaar,

    saagarada hridaya , soujanyada shikhara

    yella samvatsaraglannu kanda kaviya

    manasoo, maathu yellavoo balu madhura

    ariyaballeve naavu nimma keerthiya mahime, sannavaru naavu

    ashirvaadada rakshe needi harasiri neevu……- huttu habbada shubhaashayagalu-shreya, sudha,srinivas deshpande

    ಪ್ರತಿಕ್ರಿಯೆ
    • hsv

      ಆತ್ಮೀಯ ಬಂಧುಗಳೇ, ನಿಮ್ಮ ಸದ್ಭಾವ ನನ್ನನ್ನು ಮೂಕನನ್ನಾಗಿಸಿದೆ. ವಂದನೆಗಳು. ಎಚ್.ಎಸ್.ವಿ. ೨೪.೬.೨೦೧೧, ಬೆಳಿಗ್ಗೆ ೬ .

      ಪ್ರತಿಕ್ರಿಯೆ
  6. shobhavenkatesh

    sri hsv sir ge, sahitya jagattige nimma atyamoola koduge heegee munduvariyutirali namgoo olleya sahitya nimminda endinanate dorokutirali endu ashisi huttuhabbada shubhashyaalu namma vijayanagarabimbada padadaikarigalu hagoo makkala paravagi.

    ಪ್ರತಿಕ್ರಿಯೆ
  7. ರಾಮಚಂದ್ರ ನಾಡಿಗ್, ಕದರನಹಳ್ಳಿ

    ನಿಮಗೆ ಹುಟ್ಟುಹಬ್ಬದ ಶುಭಾಷಯಗಳು….

    ಪ್ರತಿಕ್ರಿಯೆ
  8. hsv

    ಆಪ್ತರ ಅಭಿನಂದನೆಗಳಿಗೆ ತುಂಬ ಆಭಾರಿ.

    ಪ್ರತಿಕ್ರಿಯೆ
  9. vijayaraghavan

    ಎಚ್‌ ಎಸ್‌ ವಿ ನನ್ನ ಮನಸ್ಸನ್ನು ಬರೆವ ಕವಿ
    ವಿಜಯರಾಘವನ್‌

    ಪ್ರತಿಕ್ರಿಯೆ
  10. suresha deshkulkarni

    Dr.H.S.Venkatesha Murthy ravarige huttu habbada shubhashayagalu. Kannadada kavya dhare nimminda chirakala hariyuthiraliendu aashisuva kannadada abhimaani.

    ಪ್ರತಿಕ್ರಿಯೆ
    • h s v murthy

      ಪ್ರಿಯರೇ
      ಎಷ್ಟು ಬೇಗ ಇನ್ನೊಂದು ವರ್ಷ ಕಳೆದೇ ಹೋಯಿತು!
      ಎಚ್ಚೆಸ್ವಿ

      ಪ್ರತಿಕ್ರಿಯೆ
  11. Dr. GNM Kumar

    I have to contact Dr. Venkatesha Murthy. I would like to have his email, if possible. Thanks

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: