ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಚ್ಚೆಸ್ವಿ ಅನಾತ್ಮ ಕಥನ: ವ್ಯಾಘ್ರಗಿರಿಯಲ್ಲಿ…

ಅನಾತ್ಮಕಥನ-ಹದಿನಾಲಕ್ಕು

ನಾನು ನಿನಗೆ ಮೊದಲೇ ಹೇಳಿದ್ದೇನೆ. ನೀನು ಯಾವುದು ನೀನು ಅಂದುಕೊಂಡಿದ್ದೇಯೋ ಅದಷ್ಟೇ ನೀನಲ್ಲ. ನಿನ್ನೊಳಗೇ ಇನ್ನೂ ಅನ್ವೇಷಿಸಬೇಕಾದ ಅನೇಕ ಅಪರಿಚಿತ ಭೂಭಾಗಗಳಿವೆ. ಹಾಗೇನೇ ನಾನು ಯಾವುದು ನಾನು ಅಂದುಕೊಂಡಿದ್ದೇನೋ ಅದಷ್ಟೇ ನಾನಲ್ಲ. ನೀನಾಗಲೀ ನಾನಾಗಲೀ ಕಂಡೇ ಇರದ ಅನೇಕ ನಿಗೂಢನಿರ್ಮಿತಿಗಳು ನಮ್ಮೊಳಗೇ ಹುದುಗಿದ್ದಾವೆ. ಚಿತ್ರರಥ ಇದನ್ನು ಬಿಡಿಸಿಬಿಡಿಸಿ ನನಗೆ ಹೇಳಿದ್ದಾನೆ. ನಿಜಕ್ಕೂ ಒಂದರ್ಥದಲ್ಲಿ ಅವನು ನನ್ನ ಗುರುವೇ. ಈವತ್ತು ನಸುಕಿನಲ್ಲೇ ಎದ್ದು ವ್ಯಾಘ್ರಗಿರಿಯ ತಪ್ಪಲಿನ ಬಳಿಗೆ ಬಾ. ನಾನು ನಿನಗೆ ನೀನೆಂದೂ ಕಾಣಿರದ ಅದ್ಭುತ ಲೋಕವೊಂದನ್ನು ತೋರಿಸುತ್ತೇನೆ. ಹೀಗೆಂದು ಪಂಚಾಲಿಯ ಕಿವಿಯಲ್ಲಿ ಪಿಸುಗುಟ್ಟಿ ಪಾರ್ಥ ತನ್ನ ಮಲಗುವ ಕೋಣೆಗೆ ನಿರ್ಗಮಿಸಿದ. ಪಶ್ಚಿಮ ಹಿಮಾಲಯದ ಆ ಎತ್ತರದಲ್ಲಿ ಉಸಿರು ಹತ್ತಿಕೊಂಡು ಬರುತ್ತಾ ಇತ್ತು. ಮೈ ಕೊರೆವ ಕುಳಿರ್ಗಾಳಿ. ತಾನು ಮಲಗಿದಷ್ಟು ಹಾಸಿಗೆ ಮಾತ್ರ ಬೆಚ್ಚಗೆ. ಉಳಿದುದೆಲ್ಲಾ ತಣ್ಣಗೆ ಕೊರೆಯುತ್ತಾ ಇದೆ. ಹಾಗಾಗಿ ಪಾರ್ಥ ಆ ರಾತ್ರಿ ಪಕ್ಕಕ್ಕೆ ಹೊರಳಲೂ ಮನಸ್ಸಿಲ್ಲದೆ ಪಾಂಚಾಲಿಯನ್ನು, ತನ್ನ ಹನ್ನೆರಡು ವರ್ಷಗಳ ದೀರ್ಘ ಅಗಲಿಕೆಯನ್ನೂ ನೆನೆಯುತ್ತಾ ಬಿಸುಸುಯ್ದ. ಛತ್ರದವ ಕೊಟ್ಟ ರಜಾಯಿಗೆ ಮೆಲ್ಲಗೆ ಛಳಿ ಹತ್ತುತ್ತಾ ಇತ್ತು. ಕಣ್ಣು ಬಿಟ್ಟರೆ ರೆಪ್ಪೆಯ ಸುತ್ತ ಒಂದು ಶೀತ ವರ್ತುಲ ಅನುಭವಕ್ಕೆ ಬರುತ್ತಾ ಇತ್ತು. ಇಲ್ಲಿ ಹೇಗಪ್ಪಾ ಜನ ಬದುಕಿರುತ್ತಾರೆ ಎಂದು ಒಂದು ಕ್ಷಣ ಪಾರ್ಥ ಅಚ್ಚರಿಪಟ್ಟ. ಇಲ್ಲಿ ಗಂಡೂ ಹೆಣ್ಣೂ ಸಂಭೋಗ ಹೇಗೆ ನಡೆಸುವರು, ಮಕ್ಕಳು ಮರಿ ಹೇಗೆ ಪಡೆಯುವರು ಎಂದು ತನ್ನಲ್ಲೇ ಅಂದುಕೊಳ್ಳುತ್ತಾ ಪಾರ್ಥ ನೆನ್ನೆ ರಾತ್ರಿಯ ಅನುಭವ ನೆನೆಯುತ್ತಾ ಪುಸಕ್ಕನೆ ನಕ್ಕ. ಮಲಗುವ ಮುನ್ನ ಮೂತ್ರವಿಸರ್ಜನೆಗೆ ಹೋಗಬೇಕು ಅನ್ನಿಸಿತ್ತು ಅವನಿಗೆ. ವಿಸರ್ಜನಕೋಣೆಗೆ ಹೋಗಿ ತಾನು ಉಟ್ಟ ಬಟ್ಟೆ ಒಂದೊಂದಾಗಿ ಅರಗು ಮಾಡುತ್ತಾ ವಿಸರ್ಜನೇಂದ್ರಿಯವನ್ನು ಹುಡುಕುತ್ತಾ ಇದ್ದಾನೆ ಪಾಪ…ಹಾಳಾದದ್ದು ಇವನ ಕೈಗೇ ಹತ್ತುತ್ತಾ ಇಲ್ಲ. ಥಂಡಿಗೆ ಮುರುಟಿಕೊಂಡು ರಾವಣ ಧಾರಿಣಿಯಲ್ಲಿ ಇಟ್ಟ ಆತ್ಮ ಲಿಂಗದಂತೆ ಮೈಯಲ್ಲೇ ಹಾಳಾದದ್ದು ಹುದುಗಿಹೋಗಿದೆ.

ಕ್ಲುಪ್ತ ಸಮಯಕ್ಕೆ ಪಾರ್ಥ ವ್ಯಾಘ್ರಗಿರಿಯ ಆರೋಹಣದ ಆರಂಭ ಸ್ಥಳಕ್ಕೆ ಬಂದಾಗ ಉಸಿರಾಡಿದರೆ ಭುಸು ಭುಸು ಹಬೆ ಉಕ್ಕುತ್ತಿದೆ ಅವನ ಬಾಯಿಂದ. ಕಡಿದಾದ ಕಣಿವೆಯ ಹಾದಿ ಅದು. ಛಳಿ ಅಂದರೆ ಅಂತಿಂಥ ಛಳಿಯಲ್ಲ. ಮೈತುಂಬ ರಜಾಯಿ ಮುಕುರಿಕೊಂಡಿದ್ದಾನೆ ಪಾರ್ಥ. ಎರಡು ಕಣ್ಣು ಬಿಟ್ಟು ಉಳಿದೆಲ್ಲ ದೇಹದ ಭಾಗ ರಜಾಯಿಯಲ್ಲಿ ಮುಳುಗಿಹೋಗಿವೆ. ಒಂದಲ್ಲ. ಎರಡಲ್ಲ. ಮೂರು ರಜಾಯಿ. ಮೂರಡಿ ಮುಂದೆ ಏನೂ ಕಾಣುವಂತಿಲ್ಲ. ಅಂಥಾ ಮಂಜು ಮಳೆ. ಆಗ ದೂರದಲ್ಲಿ ಕಾಲ್ಗೆಜ್ಜೆಯ ಘಲ್ ಘಲ್ ಕೇಳುತಾ ಇದೆ. ಓ…ಬಂದಳೂ ಅಂತ ಕಾಣುತ್ತೆ ಪಾಂಚಾಲಿ. ಹೌದು ಮಿಸ್ಟಿನಿಂದ ಈಗ ಒಂದು ಕಪ್ಪನೆ ಆಕೃತಿ ಇವನ ಕಡೆ ಬರುತ್ತಾ ಇದೆ. ಮೈ ತುಂಬ ಕಪ್ಪು ರಜಾಯಿ ಹೊದ್ದಿರುವ ಪಾಂಚಾಲಿ. ಅವಳು ಬಂದದ್ದೇ ಅವಳನ್ನು ತಬ್ಬಿ ಹಿಡಿಯುತ್ತಾನೆ ಪಾರ್ಥ. ಸೊಂಟದಲ್ಲಿ ಅವಿಸಿಟ್ಟುಕೊಂಡಿದ್ದ ತೀರ್ಥಗಿಂಡಿ ತೆಗೆದು ಅದರ ಎರಡು ಹನಿ ಪಾಂಚಾಲಿಯ ಬಾಯಿಗೆ ಹಾಕಿ, ತಗೋ..ಈ ಅಮೃತ ದೇವ ಲೋಕದ್ದು… ಒಂದು ಕ್ಷಣದಲ್ಲಿ ನಿನ್ನ ಮೈಯಲ್ಲಿ ಹೇಗೆ ಕಾವೇರುತ್ತೆ ನೋಡು ಎನ್ನುತ್ತಾನೆ. ಪಾಂಚಾಲಿ ರಜಾಯಿ ಮುಸುಕಿನ ಮುಖ ಅರ್ಜುನನಿಗೆ ಒಡ್ಡಿ ದೀರ್ಘ ಚುಂಬನಕ್ಕೆ ಆಹ್ವಾನ ನೀಡುತ್ತಾಳೆ. ಪಾರ್ಥ ನಿಧಾನ ಮೈ ಕಾವು ಏರುತ್ತಾ ಇರಲು ಮತ್ತೆ ಬಾಯಲ್ಲಿ ಮಧುಮೈರೇಯವೆಂಬ ಆ ದೇವ ಲೋಕದ ಮಧುವನ್ನು ಮುಕ್ಕುಳಿಸಿ ಪಾಂಚಾಲಿಯ ಬಾಯಿಗದನ್ನು ದಾಟಿಸುತ್ತಾನೆ.ಇಬ್ಬರೂ ಒಬ್ಬರನ್ನೊಬ್ಬರು ಗಟ್ಟಿಯಾಗಿ ಅವಚಿಕೊಂಡು ತಮ್ಮನ್ನು ತಾವೇ ಹುಡುಕಲಿಕ್ಕೆ ಶುರು ಮಾಡುತ್ತಾರೆ. ಇಲ್ಲಲ್ಲ…ಇನ್ನೂ ಮೇಲೆ ..ಇನ್ನೂ ಮೇಲೆ ಎನ್ನುತ್ತಾ ಪಾರ್ಥ ಪಾಂಚಾಲಿಯನ್ನು ತಬ್ಬಿಕೊಂಡಿರುವಂತೆಯೇ ಎಳೆದುಕೊಂಡು ಶೀಘ್ರಗತಿಯಲ್ಲಿ ವ್ಯಾಘ್ರಶಿಖರಿಯ ಆರೋಹಣ ಪ್ರಾರಂಭಿಸುತ್ತಾನೆ.

ಪಶ್ಚಿಮದ ಗಾಳಿ ಭೋರೆಂದು ಬೀಸುತಾ ಇದೆ. ಈಗ ಪಾಣಿಗ್ರಹಣ ಮಾಡಿದಷ್ಟು ಭಾಗ ಮಾತ್ರ ಬೆಚ್ಚಗೆ. ಉಳಿದ ಕೈ ತಣ್ಣಗೆ. ಹತ್ತುತ್ತಾ ಹತ್ತುತ್ತಾ ರಜಾಯಿ ವ್ಯರ್ಥಭಾರ ಅನ್ನಿಸುತ್ತಾ ಇದೆ. ಇಬ್ಬರೂ ಒಂದೊಂದು ರಜಾಯಿ ಕಳಚಿ ದಾರಿಯ ಬದಿಯಲ್ಲೇ ಇಟ್ಟು ಶೀಘ್ರಗತಿಯಲ್ಲಿ ಶಿಖರದ ಕಡೆ ಧಾವಿಸುತ್ತಾರೆ. ಆರುಗಂಟೆಯ ಒಳಗೆ ನಾವು ಶಿಖರಿಯನ್ನು ಮುಟ್ಟಬೇಕು ಎಂದು ಪಾರ್ಥ ಧಾವಂತಮಾಡುತ್ತಾನೆ. ಇನ್ನೆರಡು ಹನಿ ಸಿಕ್ಕಬಹುದೋ ಎಂದು ಪಾಂಚಾಲಿ ಕಿಲಿ ಕಿಲಿ ನಗುತ್ತಾಳೆ. ಹಾಗೆ ಸಶಬ್ದವಾಗಿ ಎಂದೂ ಅವಳು ನಕ್ಕವಳಲ್ಲ. ಮಧುಮೈರೇಯದ ಪ್ರಭಾವ ಎಂದುಕೊಳ್ಳುತ್ತಾನೆ ಪಾರ್ಥ. ಮತ್ತೆ ಅವಳ ಬಾಯಿಗೆ ಇನ್ನಷ್ಟು ಮಧುವನ್ನು ಸುರಿಯುತ್ತಾನೆ. ಮತ್ತೆ ತಾನೂ ಸ್ವಲ್ಪ ಬಾಯಿಗೆ ಸುರಿದುಕೊಂಡು ಬೆಂಕಿಯುಂಡೆಯೋ ಎಂಬಂತೆ ಗುಳಕ್ಕನೆ ಬಿಸಿದ್ರಾವಣವನ್ನು ನುಂಗುತ್ತಾನೆ. ಇಬ್ಬರ ಮೈಯಿಂದಲೂ ಮತ್ತೆರಡು ರಜಾಯಿ ನೆಲಕ್ಕೆ ಜಾರುತ್ತವೆ. ಬಗಲಲ್ಲಿ ಬೆವರು ಉಕ್ಕುತ್ತಿದೆ ಅನ್ನುತ್ತಾಳೆ ಪಾಂಚಾಲಿ. ಬೇಗ ಬೇಗ…ಸೂರ್ಯೋದಯವಾಗಿಬಿಡತ್ತೆ ಎನ್ನುತ್ತ ಈಗ ಪಾರ್ಥ ಓಡುವಂತೆಯೇ ಪರ್ವತವನ್ನು ಆರೋಹಿಸತೊಡಗುತ್ತಾನೆ. ಏದುಸಿರುಬಿಡುತ್ತಾ ಹಿಂದೆ ಹಿಂದೇ ಪಾಂಚಾಲಿ. ಈಗವರು ತಾವು ಹೊದ್ದ ಕೊನೆಯ ರಜಾಯಿಯನ್ನೂ ಕೆಳಕ್ಕೆ ಜಾರಿಸಿಬಿಟ್ಟಿದ್ದಾರೆ. ವ್ಯಾಘ್ರಗಿರಿಯ ಶಿಖರಿಯ ಬಳಿ ಇರುವ ನಾಗರ ಹೆಡೆಯಾಕಾರದ ಕೋಡುಗಲ್ಲಿನ ಕೆಳಗೆ ಪಾರ್ಥ ಮತ್ತು ಪಾಂಚಾಲಿ ನಿಂತಿದ್ದಾರೆ. ದೂರದಲ್ಲಿ ಕಾಂಚನಗಂಗ ಪರ್ವತ ಶಿಖರ. ಆ ಪಕ್ಕ ಈ ಪಕ್ಕ ಮಾಲೆ ಮಾಲೆಯಾಗಿ ಹಿಮಲಾಯದ ಪರ್ವತಾವಳಿಗಳು. ಪೂರ್ವದಲ್ಲಿ ಸೂರ್ಯ ಮೆಲ್ಲಗೆ ಮೇಲೇರುತ್ತಾ ಇದ್ದಾನೆ. ಕಾಂಚನಗಂಗದ ತುಟ್ಟ ತುದಿ ಈಗ ಬೆಂಕಿ ಹತ್ತಿಕೊಂಡಂತೆ ನಿಗಿನಿಗಿ ಹೊಳೆಯುತ್ತಾ ಇದೆ. ಕಡುಗೆಂಪು ಬಣ್ಣ ನಿಧಾನಕ್ಕೆ ಬಂಗಾರ ವರ್ಣವಾಗುತ್ತಾ ಕಾಂಚನಗಂಗಶಿಖರವು ಸ್ವರ್ಣಮುಕುಟ ಧರಿಸಿದ ಹಾಗೆ ಕಾಣುತ್ತಾ ಇದೆ. ನಿಧಾನಕ್ಕೆ ಆ ಮುಕುಟ ವಿಸ್ತೃತವಾಗುತ್ತಾ ಇಡೀ ಶಿಖರ ಬಂಗಾರದ ಶಿಖರವಾಗಿ ಮಾರ್ಪಡುತ್ತದೆ. ಓ ಇದು ನಿಜಕ್ಕೂ ಶಿವನ ಬಂಗಾರದ ಜುಟ್ಟು ಎಂದು ಪಾಂಚಾಲಿ ಉದ್ಗರಿಸುತ್ತಾಳೆ. ಪಶ್ಚಿಮದಲ್ಲಿ ಆಕಾಶಕ್ಕೆ ಆನುಕೊಟ್ಟಂತೆ ಬಂಗಾರದ ಕಾಚನಗಂಗಶಿಖರ. ಗಟ್ಟಿಯಾಗಿ ಉಸಿರಾಡುತ್ತಾ ಪಾಂಚಾಲಿ ಸಿಂಹಿಣಿಯಂತೆ ಪಾರ್ಥನನ್ನು ಆಕ್ರಮಿಸುತ್ತಾಳೆ. ಸೆಟೆದು ನಿಂತ ಕಾಂಚನಗಂಗ ಮೆಲ್ಲಮೆಲ್ಲಗೆ ನೀಲಿಯಾಗುತ್ತಾ ಇದೆ. ಸೂರ್ಯರಷ್ಮಿಗೆ ಮಂಜು ನಿಧನಿಧಾನಕ್ಕೆ ಕರಗುತ್ತಿರುವುದರ ಪರಿಣಾಮವಿರಬೇಕು ಅದು. ಅರೆನಗ್ನವಾಗಿದ್ದ ಅವರಿಬ್ಬರ ದೇಹಗಳಿಗೆ ಉಗುರುಬೆಚ್ಚನೆ ಮುತ್ತುಕೊಡುವಂತೆ ಎಳೆಬಿಸಿಲು ಚೆಲ್ಲಾಡುತ್ತಾ ಇದೆ. ಅದೆಂಥ ಅದ್ಭುತವಾದ ಗಗನಚುಂಬಿ ಶಿಖರ. ಅದೆಂಥ ಮೈಜುಮ್ಮೆನಿಸುವ ಪಾತಾಳದಾಳದ ನೀಲಿಕಣಿವೆ. ಅದೆಷ್ಟುಹವಳವರ್ಣದ ಹೂಗಳು ಆ ಕಣಿವೆಯ ತುಂಬ. ಇದೇನಾ ಹೂವಿನ ಕಣಿವೆ ಎಂದರೆ? ಭೀಮ ಸೌಗಂಧಿಕಾ ಪುಷ್ಪವನ್ನ ತಂದಿದ್ದು ಇಲ್ಲಿಂದಲೇನಾ ಪಾರ್ಥ? ಪಾರ್ಥನಿಗೆ ಮಾತಾಡಲಿಕ್ಕೆಲ್ಲಿದೆ ವ್ಯವಧಾನ. ಸಾರಸಗಳು ವಿಚಿತ್ರ ಲಯಗತಿಯಲ್ಲಿ ನೀಲಿ ಭೂಮಿಕೆಯಲ್ಲಿ ಉಡ್ಡಯಣಪ್ರಾರಂಭಿಸಿವೆ. ಅದಿನ್ನೇನು ನೆಲಕ್ಕುರುಳಿತು ಎಂದರೆ ಉರುಳುವಿದಿಲ್ಲ. ಇದಿನ್ನೇನು ಕಣಿವೆಗೆ ಜಾರಿತು ಎಂದರೆ ಜಾರುವುದಿಲ್ಲ. ರೆಕ್ಕೆಯಲ್ಲಿ ರೆಕ್ಕೆ ಹೊಕ್ಕವು. ಕೊಕ್ಕನ್ನು ಕೊಕ್ಕು ಮುಕ್ಕಿದವು. ನೀಳವಾದ ಅದರ ಕೊರಳನ್ನು ಇದರ ಕೊರಳು ಬಳಸಿ ನುಲಿದುಕೊಂಡವು. ಪಾದಗಳು ಹೊಟ್ಟೆಯಲ್ಲಿ ಬಚ್ಚಿಟ್ಟುಕೊಂಡವು. ಓಕುಳಿ ಮೆತ್ತಿಕೊಂಡ ತಿಳಿಮುಗಿಲುಗಳು ಯಾದೃಚ್ಛಿಕವಾಗಿ ಹಕ್ಕಿಗಳ ನಗ್ನತೆಯನ್ನು ಭಂಗಗೊಳಿಸುತ್ತಿವೆ. ಅಮೃತ ಬಿಂದುಗಳು ಕೊಕ್ಕಿಂದ ಕೊಕ್ಕಿಗೆ ಜುಣುಗುವ ಸಮಯವದು. ಯಾರಿರಿಸಿಹರು ಮುಗಿಲ ಮೇಲಿಂದಿಲ್ಲಿಗಿವ ತಂದು?

ಬಣ್ಣಬಣ್ಣದ ಮೇಘಗಳು ಸಾವಧಾನ ನೀಲಿಪರ್ವತವನ್ನು ಆಚ್ಛಾದಿಸುತ್ತಾ ಇವೆ. ಬಟ್ಟಂಬಯಲದು. ಬೆಟ್ಟ ಬಯಲು. ಕಣಿವೆ ಬಯಲು. ಗಿರಿಶಿಖರಾರಣ್ಯಗಳು ಬಯಲು. ಹೆಬ್ಬಾನ ಯೋನಿಯಲ್ಲಿ ಈಗ ಉರಿಯುತ್ತಿರುವುದು ಕೆಂಪಗೆ ಗಿಮಿದಿರುಗುತ್ತಿರುವ ಒಂದೇ ವಿಸ್ಫುರಿತಾತ್ಮಲಿಂಗ. ಅನಾತ್ಮನಿಗೂ ಒಂದು ಆತ್ಮವಿತ್ತೆಂಬುದು ಅವತ್ತೇ ಅರ್ಜುನನಿಗೆ ಗೊತ್ತಾದದ್ದು…

 

******

 

‍ಲೇಖಕರು G

1 May, 2011

5 Comments

  1. Guruprasad

    ಸರ್,
    ತುಂಬಾ ಚೆನ್ನಾಗಿದೆ. ಮಧುಮೈರೇಯದ ಪ್ರಭಾವ ಓದಿದವರಿಗೂ ಆಗುತ್ತದೆ. ಅನಾತ್ಮನಿಗೂ ಆತ್ಮವಿದೆ ಎಂದು ಗೊತ್ತಾಗುತ್ತದೆ.
    ಗುರುಪ್ರಸಾದ ಕಾಗಿನೆಲೆ

  2. sritri

    ಅನಾತ್ಮನಿಗೂ ಒಂದು ಆತ್ಮವಿತ್ತೆಂಬುದು ಅವತ್ತೇ ಅರ್ಜುನನಿಗೆ ಗೊತ್ತಾದದ್ದು… ಓದುಗರಿಗೂ ಇವತ್ತೇ ಗೊತ್ತಾಗಿದ್ದು!

  3. subbanna mattihalli

    sir himalayadallondu bisi neera bugge
    ie leekhana. Atmada odanaatadalli Anaatmada Anveeshane. Loukikateyalli
    Aloukikateya anveeshanege todagiddiri.
    Himada tandiyalli kaamada bisi. adara
    jwaaleyalli kaama suttu nishkaama
    srustiyaaguva sandarbha beragu moodisuttade. BEEGA pustakavaagi barali.

  4. HSV

    ಅನಾತ್ಮಕಥನದ ಇನ್ನೊಂದು ಹದದ ಬರವಣಿಗೆ ಸೂಕ್ಷ್ಮಗ್ರಾಹಿಗಳಾದ ಗೆಳೆಯರಿಂದ ಪಡೆದ ಸ್ಪಂದನ ನನ್ನಲ್ಲಿ ಹೊಸ ಹುಮ್ಮಸ್ಸು ಹುಟ್ಟಿಸಿದೆ. ಪ್ರತಿಕ್ರಿಯೆಗೆ ವಂದನೆಗಳು.
    ಎಚ್ಚೆಸ್ವಿ.

  5. rAjashEkhar mAlUr

    simply superb sir…. I read this only today at Howrah railway station.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading