ಎಚ್ಚೆಸ್ವಿ ಅನಾತ್ಮ ಕಥನ: ರಾಯಬಿಡದಿಯ ನಿಗೂಢ ನಕಾಷೆ…

ಅನಾತ್ಮಕಥನ-ಹದಿನೈದು

ಅಲ್ಲಾಡಿ ರುದ್ರಣ್ಣನವರ ಬಗ್ಗೆ ನಾನು ಈಗಾಗಲೇ ಪ್ರಸ್ತಾಪಿಸಿದ್ದೇನೆ. ರುದ್ರಣ್ಣನವರ ಮರಣಾನಂತರ ಅವರ ರಾಯಬಿಡದಿಗೆ ಯಾವ ಗತಿ ಬಂತು ಎಂಬುದನ್ನು ಸಮಾಧಾನದ ಮನಃಸ್ಥಿಯಲ್ಲಿ ವಿವರಿಸೋದು ತುಂಬ ಕಷ್ಟ. ರುದ್ರಣ್ಣನವರದ್ದು ಬಾಳಿ ಬದುಕಿದ ಸ್ಥಿತಿವಂತರ ಮನೆತನ. ಅವರ ಮುತ್ತಾತನ ಕಾಲಕ್ಕೆ ಅವರೇ ನಮ್ಮೂರಿನ ಬಹಳ ದೊಡ್ಡಕುಳ. ಆಗರ್ಭಶ್ರೀಮಂತರು. ಲಕ್ಷ್ಮಿ ಅವರ ಮನೆಯಲ್ಲಿ ಕಾಲು ಮುರಿದುಕೊಂಡು ಬಿದ್ದಿದ್ದಾಳೆ ಎಂದೇ ನಮ್ಮ ಹಿರಿಯರು ನಾನು ಚಿಕ್ಕವನಾಗಿದ್ದಾಗ ಮಾತಾಡಿಕೊಳ್ಳುತ್ತಾ ಇದ್ದರು.ನಾನು ಹುಡುಗನಾಗಿದ್ದಾಗ ರುದ್ರಣ್ಣ ಏರುಯೌವನದ ಯುವಕರಾಗಿದ್ದರು. ಅವರ ತಂದೆ ಇರುಪಣ್ಣ ಭಾರೀಗಾತ್ರದ ವಜನ್ ದಾರ ಮನುಷ್ಯರಾಗಿದ್ದರು. ನಮ್ಮೂರಲ್ಲಿ ಬಂಗಾರದ ಕರಡಿಗೆ ಧರಿಸಿದ್ದವರು ಅವರೊಬ್ಬರೇ. ಊರಿನ ಬಹು ದೊಡ್ಡ ಮನೆ ರುದ್ರಣ್ಣನವರದ್ದೇ. ಸುತ್ತಲೂ ಅಗಾಧವಾದ ಪೌಳಿ. ಮುಂದೆ ಒಂದು ದಿಡ್ಡಿ ಬಾಗಿಲು. ಅದಕ್ಕೆ ಕಬ್ಬಿಣದ ಬುಗುಟಿದ್ದ ಅತ್ತಿಮರದ ಬಾಗಿಲು. ಆ ದೊಡ್ಡ ಬಾಗಿಲ ಬಲ ಮೂಲೆಯಲ್ಲಿ ಒಂದು ಚಿಕ್ಕ ಬಾಗಿಲಿತ್ತು. ಅದನ್ನು ಮಾತ್ರ ತೆರೆಯುತ್ತಿದ್ದರು. ದೊಡ್ಡ ಬಾಗಿಲನ್ನು ಬೆಳಿಗ್ಗೆ ಐದುಗಂಟೆಗೆ ಒಮ್ಮೆ ತೆರೆದು ಪೂಜೆಯ ನಂತರ ಮತ್ತೆ ಮುಚ್ಚಿಬಿಡುತ್ತಿದ್ದರು. ಬಹಳ ಬೃಹತ್ ಗಾತ್ರದ ಅತ್ತಿಯ ಬಾಗಿಲು.ಇರಚಲು ಹೊಡೆದು ಮರ ಲಡ್ಡಾಗದಿರಲೆಂದು ಅದಕ್ಕೆ ತಗಡು ಹೊಡೆಸಿದ್ದರು. ಅದರ ಕೀಲುಗಳು ಕಸಕಟ್ಟಿದ್ದರಿಂದ ಐದು ಗಂಟೆಗೆ ಬಾಗಿಲು ತೆರೆಯುವಾಗ ಕುಯ್ಯೋ ಎಂದು ಗಟ್ಟಿಯಾಗಿ ಸದ್ದಾಗುತ್ತಿತ್ತು. ಬೆಳಗಿನ ನಿಶ್ಶಬ್ದದ ಹೊತ್ತಲ್ಲಿ ಆ ಸದ್ದು ಇಡೀ ಊರಿಗೇ ಕೇಳುತಾ ಇತ್ತು.

ರಾಯಬಿಡದಿ ಬಾಗಿಲು ತೆರೆದರು. ಐದು ಗಂಟೆ ಆಯಿತು. ಓದೋದಕ್ಕೆ ಏಳೋ ಎಂದು ಅಜ್ಜಿ ನನ್ನನ್ನು ಮೈ ಅಲುಗಿಸಿ ಎಬ್ಬಿಸಿ ಕೂಡಿಸುತ್ತಾ ಇದ್ದರು. ಲಾಟೀನು ಬೆಳಕಲ್ಲಿ ನಾನು ಅರ್ಧ ತೂಗಡಿಕೆ ಅರ್ಧ ಓದಲ್ಲಿ ಹೇಗೋ ಬೆಳಕು ಹರಿಸುತ್ತಾ ಇದ್ದೆ. ರೈತರು ದನಗಳನ್ನು ಜಂಗ್ಲಿಗೆ ಹೊಡೆಯುವುದಕ್ಕೂ ದಿಡ್ಡಿಬಾಗಿಲ ಕೂಗು ಎಚ್ಚರ ಕೊಡುತ್ತಾ ಇತ್ತು. ಬೇಗ ಬೇಗ ಕರುಬಿಟ್ಟು, ಹಾಲು ಕರೆದು, ದನವನ್ನ ತಾಳಾಸಿನಿಂದ ರೈತರು ಕೆರೆ ಬಯಲಿಗೆ ತರುಬಿಕೊಂಡು ಹೋಗುತ್ತಾ ಇದ್ದರು. ದನಕಾಯುವ ಹುಡುಗರು ಅಲ್ಲಾಗಲೇ ಹಾಜರಾಗಿರುತ್ತಿದ್ದರು. ಕೆರೆ ಬಯಲಲ್ಲಿ ಆ ಹೊತ್ತಿಗಾಗಲೇ ನೂರಾರು ದನ ಜಮಾಯಿಸಿರುತ್ತಿದ್ದವು. ಅವುಗಳಲ್ಲಿ ಕೆಲವು ಹಚ್ಚಗೆ ಮತ್ತು ಅಳ್ಳಕೆ ಉಚ್ಚಿಕೊಳ್ಳುತ್ತಿದ್ದರೆ, ಸೆಗಣಿಬುಟ್ಟಿ ಸಮೇತ ದನ ಕಾಯೋ ಹುಡುಗರು ಅವುಗಳ ಹಿಂದೇ ಓಡಿ ಪಿಚಕಾರಿಯಂತೆ ಚಿಮ್ಮುವ ಸೆಗಣಿರಾಡಿ ಸಂಗ್ರಹಿಸುವ ಚುರುಕು ಚಟುವಟಿಕೆ ಅಲ್ಲಿ ನಡೆಯುತ್ತಾ ಇತ್ತು. ನಮ್ಮ ಮನೆಯಲ್ಲಿ ಆಗ ಯಮುನೆ ಅಂತ ಒಂದು ಎಮ್ಮೆ ಇತ್ತು. ಅದು ಗಬ್ಬ ಕಟ್ಟಿ ಈಗ ಈಯಲಿಕ್ಕೆ ಬಂದಿತ್ತು. ನಾನು ನನ್ನ ಓದಿನ ಶಾಸ್ತ್ರ ಮುಗಿಸಿ ಕೆಲವೊಮ್ಮೆ ಅಜ್ಜನ ಜತೆ ಕೆರೆ ಕೋಡಿ ಬಳಿಗೆ ದನ ಹೊಡೆಯುವುದಕ್ಕೆ ಹೋಗುತ್ತಾ ಇದ್ದೆ. ಆರುಗಂಟೆಗೆಲ್ಲಾ ದನಗಳನ್ನು ದನಕಾಯೋ ಹುಡುಗರು ಮಟ್ಟಿಯ ಕಡೆ ಹೊಡೆದುಕೊಂಡು ಹೋಗುತ್ತಾ ಇದ್ದರು. ಅಲ್ಲಿ ಆಗ ಭರ್ದಂಡು ಈಚಲ ತೋಪಿತ್ತು. ಅಲ್ಲೆಲ್ಲಾ ಹುಲ್ಲು ಮೇಯಿಸಿಕೊಂಡು ಸಂಜೆ ಸೂರ್ಯಾಸ್ತಮ ಆಗೋವಾಗ ದನಗಳನ್ನು ಹುಡುಗರು ಕೋಡಿಯ ಬಳಿಗೆ ಇಳಿಸಿಕೊಂಡು ಬರೋರು. ಅಭ್ಯಾಸ ಬಲದಿಂದ ನಮ್ಮ ದನ ತಮಗೆ ತಾವೇ ಕೋಡಿ ಬಯಲಿಂದ ಮನೆಗೆ ಬರುತ್ತಾ ಇದ್ದವು.ಯಮುನೆ ಮನೆಗೆ ಬರುವ ಹೊತ್ತಲ್ಲಿ ನಾನು ಪಡಸಾಲೆಯಲ್ಲಿ ಅವರೇ ಬಳ್ಳಿ ಕಡಿಯುತ್ತಾ ಕೂತಿರುತ್ತಿದ್ದೆ. ಅವರೇ ಬಳ್ಳಿ ಅಂದರೆ ನಮ್ಮ ಯಮುನೆಗೆ ಎರಡು ಹೊಟ್ಟೆ. ಡೊಂಕು ಡೊಂಕಾಗಿರುತ್ತಿದ್ದ ಅವರೇ ಬಳ್ಳಿಯನ್ನು ಮೆಲುಕಾಡಲಿಕ್ಕೆ ತಕ್ಕುದಾಗಿ ಸಣ್ಣ ಸಣ್ಣ ಚೂರಾಗಿ ಮಚ್ಚಿನಿಂದ ಕೊರಡಿನ ಮೇಲೆ ಹೊರಳಾಡಿಸುತ್ತಾ ಸಣ್ಣಗೆ ತುಂಡು ಮಾಡೋದೆಂದರೆ ನನಗೆ ಖುಷಿಯೋ ಖುಷಿ.

ಬೆಳಗಿನ ಬಾಗಿಲ ಪೂಜೆ ಆದ ಮೇಲೆ ರಾಯಬಿಡದಿಯ ದಿಡ್ಡಿಬಾಗಿಲು ಮುಚ್ಚಿಬಿಡೋರು. ಸಣ್ಣ ಬಾಗಿಲು ಮಾತ್ರ ತೆರೆದಿಡೋರು. ಅದರಲ್ಲಿ ತಲೆ ಬಗ್ಗಿಸಿ ತೂರಿಕೊಳ್ಳಬೇಕು. ಭಾರಿ ಗಾತ್ರದ ಇರುಪಣ್ಣನವರಿಗೆ ಅದು ಸಾಧ್ಯವೇ ಇರಲಿಲ್ಲ. ಅವರು ಹೊರಗೆ ಬಂದು ಒಳಗೆ ಹೋಗುವಾಗ ಮಾತ್ರ ದೊಡ್ಡ ಬಾಗಿಲು ತೆರೆಯುತ್ತಾ ಇದ್ದರು. ಪೌಳಿಯ ಒಳಗೆ ಒಂದು ಮಣಕದ ಎತ್ತರದ ಜಾತಿ ನಾಯಿ ಇತ್ತು. ಅದನ್ನು ರುದ್ರಣ್ಣ ಬೆಳಿಗ್ಗೆ ತಿರುಗಾಡಿಸಲಿಕ್ಕೆ ಅಂತ ಹೊರಕ್ಕೆ ತರುತ್ತಾ ಇದ್ದರು. ಅದು ರುದ್ರಣ್ಣನವರನ್ನ ತಾನೇ ದರ ದರ ಎಳೆದುಕೊಂಡು, ಗಸ ಗಸ ತೇಗುತ್ತಾ ಮುನ್ನುಗ್ಗುತ್ತಾ ಇತ್ತು. ಇಡೀ ಊರಿನಲ್ಲಿ ರಾಯಬಿಡದಿಯ ನಾಯಿ ಮತ್ತು ಹಸುಗಳ ಮಂದೆಯೊಂದಿಗೆ ಬರೋ ಬೀಜದ ಹೋರಿ ಇವೆರಡೂ ನಮ್ಮ ಭಯದ ಕೇಂದ್ರಗಳಾಗಿದ್ದವು. ಬೀಜದ ಹೋರಿ ಬಹಳ ಎತ್ತರವಿದ್ದ ಡಾಗಿನ ಹೋರಿ. ಅದು ಪುಟ್ಟ ಗಾತ್ರದ ಹಸುವನ್ನ ಕೆಲವೊಮ್ಮೆ ಅಟ್ಟಿಸಿಕೊಂಡು ಹೋಗುವಾಗ ನಮಗೆ ಭಯವಾಗುತ್ತಿತ್ತು. ಅದು ಆ ಬಡ ಹಸುವಿನ ಮೇಲೆ ಹಾರಿದರೆ ಹಸುವಿನ ಸೊಂಟ ಮುರಿಯೋದು ಗ್ಯಾರಂಟಿ ಅಂತ ನಾವು ಹುಡುಗರು ಮಾತಾಡಿಕೊಳ್ಳುತ್ತಾ ಇದ್ದೆವು. ಬೀಜದ ಹೋರಿ ಹಸುವನ್ನ ಅಟ್ಟಿಸಿಕೊಂಡು ಹೋಗುವುದು ಆ ಕಾಲದಲ್ಲಿ ನಮ್ಮ ಭಯ ಕೌತಕಗಳನ್ನ ಜಾಗರಗೊಳಿಸುವ ದೃಶ್ಯವಾಗಿತ್ತು. ಈ ಬೀಜದ ಹೋರಿ ಬಿಟ್ಟರೆ ನಾವು ತುಂಬಾ ಹೆದರುತ್ತಿದ್ದುದು ರಾಯಬಿಡದಿಯ ಜಾತಿ ನಾಯಿಗೆ.

ರಾಯಬಿಡದಿಯಲ್ಲಿ ಬಿಳೀಬಣ್ಣದ ಕಾರಿತ್ತು. ಆಗ ಬಿಳೀ ಕಾರಿದ್ದದ್ದು ಇಡೀ ರಾಜ್ಯದಲ್ಲಿ ಮೂರು ಜನದ ಹತ್ತಿರ ಮಾತ್ರ. ಮೈಸೂರು ಮಹಾರಾಜರ ಕಾರು ಒಂದು. ರಾಜಕುಮಾರ್ ಕಾರು ಇನ್ನೊಂದು. ನಮ್ಮ ಇರುಪಜ್ಜನವರ ಕಾರು ಮೂರನೇದು. ಸಾಮಾನ್ಯವಾಗಿ ರಾಯಬಿಡದಿಯ ಒಳಗೆ ಸುಲಭವಾಗಿ ಯಾರೂ ಪ್ರವೇಶಿಸುವಂತಿರಲಿಲ್ಲ. ಪ್ರತಿ ವರ್ಷ ನವರಾತ್ರಿಯಲ್ಲಿ ರಾಯಬಿಡದಿಯಿಂದ ಬ್ರಾಹ್ಮಣರ ಮನೆಗಳಿಗೆಲ್ಲಾ ಆಹ್ವಾನ ಬರುತ್ತಾ ಇತ್ತು. ಅವತ್ತು ನಾಯಿಯನ್ನು ನಾಯಿ ಮನೆಯಲ್ಲಿ ಕೂಡಿ ಹಾಕಿರೋರು. ನಾವು ಸಣ್ಣ ಬಾಗಿಲಲ್ಲಿ ರಾಯಬಿಡದಿಗೆ ಹೋಗುತ್ತಾ ಇದ್ದೆವು. ಆ ಚಿಕ್ಕವಯಸ್ಸಲ್ಲಿ ಅದರ ವೈಶಾಲ್ಯದ ಹಿಡಿತವೇ ನನ್ನ ಕಲ್ಪನೆಗೆ ಬರುತ್ತಾ ಇರಲಿಲ್ಲ. ಆರಂಭದಲ್ಲೇ ಎಡ ಭಾಗಕ್ಕೆ ಕನ್ನಿಕೇರ ಬಾವಿ ಇತ್ತು. ಆ ಬಾವಿಯಲ್ಲಿ ಯಕ್ಷಕನ್ನಿಕೆಯರು ಹುಣ್ಣಿಮೆಯ ನಡು ರಾತ್ರಿ ಜಲಕ್ರೀಡೆಯಾಡುತ್ತಾರೆ ಎಂದು ನಮ್ಮ ಊರಲ್ಲಿ ಎಲ್ಲರೂ ಮಾತಾಡಿಕೊಳ್ಳುತ್ತಾ ಇದ್ದರು. ಮದುವೆಯಾಗದ ಹೆಣ್ಣು ಮಕ್ಕಳು ನಡೂ ರಾತ್ರಿ ಕನ್ನಿಕೆಯರ ಬಾವಿಗೆ ಬಂದು ಜಕ್ಕಿಣಿಯರ ಪೂಜೆ ಮಾಡುತಾ ಇದ್ದರು. ಬಿಳೀ ಸೀರೆ, ಬಿಳೀ ಕುಬುಸ ಹಾಕಿಕೊಂಡ ಹುಡುಗಿಯರು ಕನ್ನಿಕೆಯರ ಪೂಜೆ ಮಾಡಿದರೆ ಒಳ್ಳೆ ವರ ಸಿಕ್ಕು ವರುಷೊಪ್ಪತ್ತರಲ್ಲಿ ಅವರು ಕಂಕಣಕಟ್ಟುತ್ತಾರೆ ಎಂಬುದು ನಮ್ಮೂರಲ್ಲಿ ಪ್ರಚಲಿತವಿದ್ದ ವಿಷಯವಾಗಿತ್ತು. ಹುಣ್ಣಿಮೆ ದಿನ ಮೊದಲೇ ಹೇಳಿದರೆ, ರಾಯಬಿಡದಿಯ ಪೂಜಾರಿ ಬಸಣ್ಣ ಸಣ್ಣ ಬಾಗಿಲು ತೆರೆದು ಹುಡುಗಿಯರನ್ನು ಒಳಗೆ ಬಿಡುತ್ತಾ ಇದ್ದ. ಕನ್ನಿಕೆಯರ ಬಾವಿಯಲ್ಲಿ ಬಗ್ಗಿ ನೋಡಿದರೆ ಬಾವಿಯ ಆಳದಲ್ಲಿ ಅದರ ಪೂರ್ವದ ಗೋಡೆಯಲ್ಲಿ ಒಂದು ಸಣ್ಣ ಬಾಗಿಲು ಕಾಣುತಾ ಇತ್ತು. ಆ ಬಾಗಿಲ ಮೂಲಕ ಯಕ್ಷಿಣಿಯರು ಬರುತ್ತಾರೆ ಎಂದು ಬಸಣ್ಣ ಹೇಳುತ್ತಿದ್ದ. ಎಲ್ಲೆಲ್ಲೂ ಬಾಗಿಲು. ಎಲ್ಲೆಲ್ಲೂ ತಾಳಸು. ಸಣ್ಣಪುಟ್ಟ ತಿರುವುಗಳು. ಒಳಕ್ಕೆ ಹೋದರೆ ವಿಶಾಲವಾದ ಕಲ್ಲು ಹಾಸಿನ ಪ್ರಾಂಗಣ. ಅದು ಚೌಕಿ ಮನೆ. ಚೌಕಿಯ ಉದ್ದಕ್ಕೂ ಬೀಟೆ ಮರದ ಕೆತ್ತನೆ ಕಂಭಗಳು. ನಮ್ಮ ನಡುಮನೆಯ ಕಂಭಗಳಿಗಿಂತ ದೊಡ್ಡವು ಅವು. ಆ ಕಂಭಗಳ ಮೇಲೆ ಬಳ್ಳಿ, ಹೂವು, ತಳುಕುಹಾಕಿಕೊಂಡ ಜೋಡಿನಾಗರ ಹೀಗೆ ನಾನಾ ಬಗೆಯ ಕುಸುರಿ ಕೆಲಸಗಳು. ಮೇಲೆ ನಾಕು ತೊಲೆಗೆ ಆನಿಸಿಕೊಂಡ ಮರಚಾಚು. ಅವುಗಳ ಮೇಲೆ ಆನೆ ಸೊಂಡಿಲ ಕೆತ್ತನೆ. ಮರಚಾಚಿನ ಮೇಲೆ ನಾಕು ಕಂಭದ ಕಿವಿಗಳು. ಆ ಕಂಭದ ಕಿವಿಗಳ ಮೇಲೆ ಗೊಂಬೆಗಳನ್ನು ಇಟ್ಟಿರುತ್ತಾ ಇದ್ದರು. ಜಗಲಿ ದಾಟಿ ಒಳಕ್ಕೆ ಹೋದರೆ ತೂಗುಮಂಚದಲ್ಲಿ ಕೂತು ತೂಗಿಕೊಳ್ಳುತ್ತಾ ಇದ್ದ ವಿರುಪಜ್ಜ ಕಾಣೋರು. ಅವರು ನಮ್ಮನ್ನು ನೋಡಿಯೂ ನೋಡದವರಂತೆ ಅರೆಗಣ್ಣಲ್ಲಿ ಡೋಲಿಗೆ ವರಗಿ ಕೂತಿರೋರು. ಅದಪ್ಪ ಮತ್ತೆ ಶ್ರೀಮಂತಿಕೆಯ ಧಿಮಾಕು ಅಂದರೆ. (ವಿರುಪಜ್ಜನ ತಂದೆ ಸಾಂಶಿವಜ್ಜ ಮೈಸೂರು ಅರಸರಿಗೆ ಮಗಳ ಮದುವೆ ಕಾಲದಲ್ಲಿ ಸಾಲ ಕೊಟ್ಟಿದ್ದರಂತೆ!). ಬರೀ ಕಣ್ಸನ್ನೆಯಲ್ಲಿ ನಮ್ಮ ಅಜ್ಜಿಯರಿಗೆ ಒಳಗೆ ಹೋಗಿರಿ ಅಂತ ವಿರುಪಜ್ಜ ಸೂಚಿಸುತ್ತಾ ಇದ್ದರು.

ಒಳಮನೆಯಲ್ಲಿ ಒಂದು ಅಂಕಣದ ಪೂರಾ ದಸರಾ ಬೊಂಬೆ ಇಟ್ಟಿರುತ್ತಾ ಇದ್ದರು. ಪಟ್ಟದ ಗೊಂಬೆಗಳು ಏನಿಲ್ಲ ಅಂದರೂ ಎರಡಡಿ ಎತ್ತರ. ಅವಕ್ಕೆ ಭವ್ಯವಾದ ಜರಿಯಂಚಿನ ಧಿರಿಸು. ರಾಣಿಗೆ ಕಲಾಬತ್ತಿನ ಸೀರೆ. ರಾಜನಿಗೆ ಕರೀಶರಾಯಿ, ಕೆಂಪು ಕೋಟು. ಹಳೂದಿ ಬಣ್ಣದ ಕೋರೆ ರುಮಾಲು. ರಾಣಿಯ ಕಿವಿ ಮತ್ತು ಮೂಗಿನಲ್ಲಿ ಚಿನ್ನದ ಆಭರಣಗಳು. ಕೊರಳಲ್ಲಿ ಕಾಸಿನ ಸರ. ರಾಜ ರಾಣಿಯ ಆ ಪಕ್ಕ ಈ ಪಕ್ಕ ರಾಯಬಿಡದಿಯಲ್ಲಿ ಮದುವೆಯಾದಾಗೆಲ್ಲಾ ಹೊಸ ವಧೂವರರಿಗೆ ತವರಿನವರು ಕೊಟ್ಟಿದ್ದ ಪಟ್ಟದ ಬೊಂಬೆಗಳ ಸಾಲು ಸಾಲೇ ಕಂಗೊಳಿಸುತ್ತಾ ಇದ್ದವು. ಕೆಳ ಅಂತಸ್ತುಗಳಲ್ಲಿ ನೂರಾರು ಥರಾವರಿ ಬೊಂಬೆಗಳು. ಗಾಜಿನವು, ಪಿಂಗಾಣಿಯವು, ಮರದವು, ಲೋಹದವು. ರಾಮಾಯಣ ಭಾರತದ ಎಲ್ಲ ಪಾತ್ರಗಳೂ ಅಲ್ಲಿ ನೆರೆದಿರುತ್ತ ಇದ್ದವು. ಜೊತೆಗೆ ಮಹಾತ್ಮ ಗಾಂಧಿ, ನೆಹರು, ಸುಭಾಷ್ ಮೊದಲಾದ ರಾಷ್ಟ್ರ ಪುರುಷರು. ಇನ್ನೂ ಕೆಳಗೆ ನಾನಾ ಬಗೆಯ ಪಕ್ಷಿ ಪ್ರಾಣಿಗಳು. ಕೆಲವು ನಮ್ಮ ದೇಶದವು; ಕೆಲವು ಪರದೇಶದವು. ನನಗೆ ಈವತ್ತೂ ನೆನಪಿರುವುದು ಗೊಂಬೆ ಸಾಲಲ್ಲಿ ಕೂಡಿಸಿದ್ದ ಎರಡಡಿ ಎತ್ತರದ ಕರ್ಪೂರದ ಬೊಂಬೆ. ಕರ್ಪೂರದ ಬೊಂಬೆಯನ್ನು ಅಲ್ಲೇ ನಾನು ಮೊದಲು ನೋಡಿದ್ದು. ಅಷ್ಟು ಮುದ್ದಾದ ಬೊಂಬೆಯನ್ನು ಬೇರೆಲ್ಲೂ ನಾನು ನೋಡಿರಲಿಲ್ಲ. ಇರುಪಜ್ಜ ಎಷ್ಟು ಗಂಭೀರವೋ ರುದ್ರಣ್ಣ ಅಷ್ಟೇ ತಮಾಷೆಯ ಮನುಷ್ಯ. ಏನೋ..ಯಂಟೇಶು … ಹಂಗೇ ನೋಡ್ತೀ ನಮ್ಮ ಹುಡುಗೀನಾ…? ಮದುವೆ ಮಾಡಿಕೊಡೋಣೇನೋ?- ಅನ್ನುತ್ತಾ ರುದ್ರಣ್ಣ ನನಗೆ ಹಾಸ್ಯ ಮಾಡುತ್ತಿದ್ದರು.

ಗೊಂಬೆಗಳಿಗೆ ಆರತಿ ಮಾಡಿ ಮಕ್ಕಳಿಗೆಲ್ಲಾ ಬೊಂಬೆ ಬಾಗಿನ ಕೊಡುತ್ತಾ ಇದ್ದರು. ದೊಡ್ಡವರಿಗೆ ಎಲೆ ಅಡಕೆ ತೆಂಗಿನ ಕಾಯಿ. ನಾವು ರಾಯಬಿಡದಿಯಿಂದ ಹಿಂದಿರುಗುವ ವೇಳೆಗೆ ಆಗಲೇ ಕತ್ತಲಾಗಿರೋದು. ಆ ಒಂದು ದಿನದ ಅನುಭವ ನಮಗೆ ಇಡೀ ಒಂದು ವರ್ಷಕ್ಕೆ ಸಾಕಾಗುತ್ತಾ ಇತ್ತು. ಇರುಪಜ್ಜ ತೀರಿಕೊಂಡು, ರುದ್ರಣ್ಣ ಮನೆಯ ಯಜಮಾನರಾದ ಮೇಲೆ ಮೊದಲಿನ ನಿಗೂಢತೆಯನ್ನ ರಾಯಬಿಡದಿ ಸ್ವಲ್ಪಮಟ್ಟಿಗೆ ಕಳೆದುಕೊಂಡಿತು ಎನ್ನಬಹುದು. ಈಗ ನಾನು ಕಾಲೇಜಲ್ಲಿ ಓದುತ್ತಾ ಇದ್ದೆ. ರುದ್ರಣ್ಣ ಸಾಹಿತ್ಯದ ಹುಚ್ಚರಾಗಿದ್ದುದರಿಂದ ನನ್ನನ್ನು ರಾಯಬಿಡದಿಗೆ ತಾವೇ ಬಂದು ಕರೆದುಕೊಂಡು ಹೋಗೋರು. ಕುಮಾರವ್ಯಾಸಭಾರತ , ಜೈಮಿನೀ ಭಾರತ ನನ್ನಿಂದ ಓದಿಸಿ, ತಪ್ಪು ತಿದ್ದಿ, ಅದ ಹಿಂಗೆ ಬಿಡಿಸಬೇಕು ಕಣಪ್ಪಾ ಅಂತ ಮಾರ್ಗದರ್ಶನ ಮಾಡುತಾ ಇದ್ದರು. ಅವರಿಗೆ ನನ್ನ ಮೇಲೆ ತುಂಬ ಪ್ರೀತಿಯಿತ್ತು. ನಮ್ಮ ಯಂಟೇಶಣ್ಣನ ಹಂಗೆ ಭಾರತ ಬೇರೆ ಹುಡುಗರ ಕೈಯಲ್ಲಿ ಓದಿಸಿ ನೋಡೋಣ ಅಂತ ನನ್ನನ್ನು ಹೊಗಳಿ ಅಟ್ಟಕ್ಕೆ ಏರಿಸುತ್ತಾ ಇದ್ದರು. ಲಕ್ಷ್ಮೀಶನ ಕೆಲವು ಸಮಸ್ಯೆ ಪದ್ಯಗಳನ್ನು ಹೇಗೆ ಬಿಡಿಸಬೇಕು ಅಂತ ನನಗೆ ವಿವರಿಸಿ, ಯಾವನಾದರೂ ತಲೆಹರಟೆ ಮಾಡಿದರೆ ಈ ಪದ್ಯ ಅವನ ಮುಂದೆ ಒಗೀ ಅಷ್ಟೆ! ಎನ್ನುತ್ತಾ ನನ್ನ ಬೆನ್ನು ಚಪ್ಪರಿಸುತ್ತಾ ಇದ್ದರು!

ಅಲ್ಲಾಡಿರುದ್ರಣ್ಣ ನನ್ನ ಬಾಲ್ಯದ ಐಕಾನು ಎಂದೇ ಹೇಳಬೇಕು. ರುದ್ರಣ್ಣನನ್ನು ಬಿಟ್ಟರೆ ನಾನು ಹೆಚ್ಚು ಆಕರ್ಷಿತನಾಗಿದ್ದುದು ಭದ್ರಕ್ಕನಿಂದ. ಗೊಂಬೆ ಮೇಳ ಅಂದರೆ ಈ ಭದ್ರಕ್ಕನಿಗೆ ಜೀವ. ನಮ್ಮೂರಲ್ಲಿ ಪ್ರತಿವರ್ಷವೂ ಹರಕೆ ಆಟ ಆಡಿಸುತ್ತಾ ನನ್ನ ಎಳೆ ಮನಸ್ಸಲ್ಲಿ ಭಾರತ ರಾಮಾಯಣದ ಕಥೆಗಳನ್ನು ಬಿತ್ತಿದವಳು ಭದ್ರಕ್ಕ. ಆಕೆಯ ಬಗ್ಗೆ ಈಗಾಗಲೇ ಒಮ್ಮೆ ವಿವರವಾಗಿ ಬರೆದುದಾಗಿದೆ. ಅಲ್ಲಾಡಿ ರುದ್ರಣ್ಣನವರು ತೀರಿಕೊಂಡ ಮೇಲೆ ರಾಯ ಬಿಡದಿಯನ್ನು ಕೇಳುವವರಿಲ್ಲವಾಯಿತು. ಅವರ ಇಬ್ಬರು ಮಕ್ಕಳೂ ಅಮೆರಿಕಾ ಸೇರಿದ್ದರು. ಅವರು ವಾಪಸ್ಸು ಬರುವುದಿಲ್ಲ ಎಂಬ ಸುದ್ದಿ ಹಳ್ಳಿಯಲ್ಲಿ ಜನಜನಿತವಾಗಿತ್ತು. ಇಡೀ ರಾಯಬಿಡದಿ ಈಗ ಖಾಲಿ ಹೊಡೆಯುತ್ತಾ ಇತ್ತು. ಆದರೆ ಆ ಪ್ರಾಚೀನ ಮನೆಯ ಬಾಗಿಲು ಹಾಕುವಂತಿರಲಿಲ್ಲ. ಮೊದಲಿಂದಲೂ ರಾಯಬಿಡದಿಯಲ್ಲಿ ಪೂಜೆ ಮಾಡಿಕೊಂಡು ಒಬ್ಬ ಮುದುಕ ಇದ್ದ. ಅವನ ಹೆಸರು ಹೆಣ್ಣುಬಸಣ್ಣ. ಅವನ ಮಾತು, ನಡಿಗೆ, ಕೈತಿರುವು ಸ್ವಲ್ಪ ಹೆಣ್ಣುಗಳನ್ನು ಹೋಲುತ್ತಿದ್ದುದರಿಂದ ಅವನಿಗೆ ಎಲ್ಲರೂ ಹೆಣ್ಣುಬಸಣ್ಣ ಎಂದು ಕರೆಯುತ್ತಿದ್ದರು. ಆ ದೊಡ್ಡ ಬಿಡದಿಯಲ್ಲಿ ಈ ಹೆಣ್ಣುಬಸಣ್ಣ ಒಬ್ಬನೇ ಕೊನೆಯವರೆಗೂ ಕಾಲತಳ್ಳುತ್ತಾ ಇದ್ದ. ಒಂದು ದಿನ ಅವನು ದೇವರ ಪೂಜೆ ತಪ್ಪಿಸಲಿಲ್ಲ. ಅದನ್ನು ಊರ ಜನರಿಗೆ ಹೇಗಾದರೂ ತಿಳಿಸಬೇಕೆಂಬ ಆಸೆ ಅವನದ್ದು. ಪ್ರತೀ ಸೋಮವಾರ ಅವನು ಊರಿನ ಯಾರಾದರು ಒಬ್ಬರು ಹಿರೀ ತಲೆಯವರನ್ನು ಕರೆದು…ಪೂಜೇ ನೋಡಕಂಡು ಬರೋರಂತೆ ಬರ್ರಿ ಎಂದು ಸ್ವಾಗತಿಸೋನು. ಬಿಡದಿಯಲ್ಲಿ ಅದಕ್ಕೆ ಹತ್ತಿಕೊಂಡಂತೇ ಸಣ್ಣ ಕೈದೋಟ ಇತ್ತು. ಬಸಣ್ಣ ಅಲ್ಲಿ ಕಣಗಿಲೆ, ದಾಸವಾಳ ಗಿಡಗಳನ್ನು ದಂಡಿಯಾಗಿ ಬೆಳೆಸಿದ್ದ. ಅವುಗಳ ಹೂ ಬೆಳಗಾತ ಹೂಬಟ್ಟಿಯಲ್ಲಿ ಬಿಡಿಸಿ, ದೇವರೇ ಕಾಣದಂತೆ ಪೂಜಾಗೃಹದಲ್ಲಿ ಹೂವಿನ ಅಟ್ಟ ಏರಿಸಿಬಿಟ್ಟಿರೋನು.

ರಾಯಬಿಡದಿಯಲ್ಲಿ ಹೆಣ್ಣುಬಸಣ್ಣ ಒಬ್ಬನೇ ಯಾವ ಮೂಲೆಯಲ್ಲಿ ಮಲಗಿರೋನೋ ಪಾಪ! ಅವನು ರಾತ್ರಿ ನಿದ್ದೆಗೆಟ್ಟು ಇಡೀ ಬಿಡದಿ ಸುತ್ತು ಹಾಕೋದು ಸಾಧ್ಯಾನೆ? ನಿಧಾನಕ್ಕೆ ರಾಯಬಿಡದಿಯಲ್ಲಿ ಕಳ್ಳತನ ಶುರುವಾಯಿತು. ಈವತ್ತು ಕಿಟಕಿ ಮಾಯ. ನಾಳೆ ಬಾಗಿಲುವಾಡ ಮಾಯ. ಮತ್ತೊಂದು ದಿನ ಕೆತ್ತನೆ ಕಂಭವೇ ಮಾಯ! ಕಟಾಂಜನದ ತೊಲೆಗಳು,ರೀಪರುಗಳು, ನೆಲದ ಹಾಸುಗಲ್ಲುಗಳು, ಕುರ್ಚಿ, ಮೇಜುಗಳು ಕೂಡ ಮಾಯವಾಗಲಿಕ್ಕೆ ಹತ್ತಿದವು! ಬೆಳಗಾಗತ ಬಸಣ್ಣ ಬಂದು ಶಾನುಭೋಗರೇ ಇವತ್ತು ಕೆತ್ತನೆ ಮೇಜ ಕದ್ದೊಯ್ದವ್ರೆ ನೋಡಿ ಬನ್ನಿ ಎಂದು ಕರೆದುಕೊಂಡು ಹೋಗಿ ನಮ್ಮ ಅಜ್ಜನಿಗೆ ತೋರಿಸೋನು. ಮತ್ತು ಕದ್ದ ಮಾಲುಗಳ ಪಟ್ಟಿ ಬರೆಸಿ ಇಡೋನು. ನಾಳೆ ರುದ್ರಣ್ಣನವರ ಮಕ್ಕಳು ಬಂದು ಕೇಳಿದರೆ ನಾನು ಜವಾಬು ಹೇಳ ಬೇಕಾಗತ್ತೆ ಅಂತ ಹೇಳೋನು. ನಮ್ಮ ಊರ ಕೆಲವರು ಚೇಷ್ಟೆ ಜನ ಈ ಬಸಣ್ಣನೇ ಬಾಗಿಲು ಕಿಟಕಿ ಎಲ್ಲಾ ಮಾರಿಕೊಳ್ಳುತ್ತಾ ಇದಾನ್ರೀ..ಎಂದು ಹೇಳೋರು. ಈಗೀಗ ಹಳ್ಳಿಯ ಹಳೇ ಕಾಲದ ಮನೆಗಳ ಬಾಗಿಲು, ಕಿಟಕಿ, ಕಂಭಗಳನ್ನು ನಗರದ ತಮ್ಮ ಆಧುನಿಕ ಮನೆಯೊಳಗೆ ಅಳವಡಿಸುವ ಫ್ಯಾಷನ್ನು ಶುರುವಾಗಿತ್ತಲ್ಲ! ಒಂದು ಕೆತ್ತನೆ ಬಾಗಿಲಿಗೆ ಹತ್ತಾರು ಸಾವಿರ ಕೊಟ್ಟು ನಗರಕ್ಕೆ ಸಾಗಿಸುವ ಮಂದಿ ಕಮ್ಮಿ ಇರಲಿಲ್ಲ. ರಾಯ ಬಿಡದಿಯ ಮರಮುಟ್ಟುಗಳನ್ನು ಬಸಣ್ಣ ಹೀಗೆ ಲಾಭಕ್ಕೆ ಮಾರಿ ಕಾಸುಮಾಡಿಕೊಳ್ಳುತ್ತಿದ್ದಾನೆ ಎಂಬ ಪುಕಾರು ಹಳ್ಳಿಯಲ್ಲೆಲ್ಲಾ ಹಬ್ಬಿತು. ಯಾರೋ ಈ ಬಗ್ಗೆ ಚನ್ನಗಿರಿ ಪೋಲೀಸರಿಗೆ ಮೂಗರ್ಜಿ ಬರೆದರು. ಒಂದು ದಿನ ಜೀಪಲ್ಲಿ ಪೋಲೀಸರು ಬಂದು ಬಸಣ್ಣನನ್ನು ಹಣ್ಣು ಗಾಯಿ ನೀರುಗಾಯಿ ಆಗುವಂತೆ ಒದ್ದು ಹೋದರು. ಮಾರನೆ ಬೆಳಿಗ್ಗೆಯಿಂದ ಬಸಣ್ಣ ಹೊರಗೆ ಸುಳಿದಾಡಿದ್ದರೆ ಕೇಳಿ. ಮೂರು ದಿನವಾದ್ರೂ ಬಸಣ್ಣ ಹೊರಗೆ ಬರದೆ ಅವನು ಹಳ್ಳಿ ಬಿಟ್ಟು ಓಡಿ ಹೋಗಿದಾನೆ ಅಂತಲೇ ಎಲ್ಲ ಮಾತಾಡಿಕೊಂಡರು. ಆದರೆ ಆಗಿದ್ದ ಕಥೆಯೇ ಬೇರೆ. ಬಸಣ್ಣ ರಾಯ ಬಿಡದಿಯ ಚೌಕಿಮನೆಯಲ್ಲಿ ತೊಲೆಗೆ ನೇತುಹಾಕಿಕೊಂಡು ಪ್ರಾಣ ಬಿಟ್ಟಿದ್ದು ಗೊತ್ತಾದಾಗ ಅವನು ತೀರಿ ಮೂರು ದಿನಗಳೇ ಆಗಿ ಹೋಗಿತ್ತು.

 

 

 

‍ಲೇಖಕರು G

May 22, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. HSV

    ಸಹೃದಯ ಸಾಹಿತ್ಯಾಸಕ್ತ ಬಂಧುಗಳೇ,
    ಅನಾತ್ಮಕಥನದ ಕೊನೆಯ ಪ್ರಕರಣ ಈ ಮೂಲಕ ತಮ್ಮ ಗಮನಕ್ಕೆ ತರುತ್ತಾ ಇದ್ದೇನೆ. ಈ ವರೆಗೆ ಬರೆದ ಎಲ್ಲ ಪ್ರಬಂಧಗಳೂ ಈಗ ಅಂಕಿತಾ ಮೂಲಕ ಪುಸ್ತಕ ರೂಪದಲ್ಲಿ ಬರುತ್ತಾ ಇವೆ-ಅಕ್ಕಚ್ಚುವಿನ ಅರಣ್ಯಪರ್ವ-ಎಂಬ ಹೆಸರಲ್ಲಿ. ಈ ವರೆಗೆ ತಾವು ನೀಡಿದ ಸ್ಪಂದನಕ್ಕೆ ತಮಗೆಲ್ಲಾ ಪ್ರೀತಿಪೂರ್ವಕ ವಂದನೆಗಳು. ಹಾಗೇ ಈ ಲೇಖನಗಳನ್ನು ನನ್ನಿಂದ ಬರೆಸಿದ ಅವಧಿಗೂ ಆಭಾರಿಯಾಗಿದ್ದೇನೆ.
    ವಂದನೆಗಳು
    ನಿಮ್ಮ
    ಎಚ್ಚೆಸ್ವಿ.

    ಪ್ರತಿಕ್ರಿಯೆ
  2. subbanna mattihalli

    sir Adeeke mugisabeku ? Anaatma kathana
    saahityada hosadondu Aayamavannu teredi
    ttide.Asankhyaata abhimaanigalannu
    galisikottide.Tamma balyada kaalavannu
    vartamaanakke artha poornavaagi punaha
    srushtisiddeeraa.Dayavittu munduvaresi

    ಪ್ರತಿಕ್ರಿಯೆ
  3. rAjashEkhar mAlUr

    Sir… adyAke sir iShTu bEga mugisuttiddIri…? rAyabiDadi bahaLa sogasAgide.

    ಪ್ರತಿಕ್ರಿಯೆ
  4. HSV

    ಆತ್ಮೀಯರೇ,
    ಅಭಿಮಾನಕ್ಕೆ thanks. ಸ್ವಲ್ಪ ಬಿಡುವು ತೆಗೆದುಕೊಳ್ಳುತ್ತಿದ್ದೇನೆ. ಮುಂದೆ ಮತ್ತೆ ಬರೆಯಬಹುದು. ಸದ್ಯಕ್ಕಷ್ಟೇ ವಿರಾಮ.
    ನಿಮ್ಮ
    ಎಚ್ಚೆಸ್ವಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: