ಇದೇನೂ ನೀವು ನಿಮ್ಮ ಲೇಖನದಲ್ಲಿ ಎತ್ತಿದ ಸಮಸ್ಯೆಗೆ ಪರಿಹಾರ ಎಂದು ಹೇಳುತ್ತಿಲ್ಲ..

ಜಿ ಎನ್ ಅಶೋಕವರ್ಧನ ಅವರು ತಮ್ಮ ಅತ್ರಿ ಬುಕ್ ಸೆಂಟರ್ ನಲ್ಲಿ ಪುಸ್ತಕ ಮಾರಾಟಗಾರನ ತಲ್ಲಣಗಳ ಬಗ್ಗೆ ಬರೆದಿದ್ದರು

ಇದಕ್ಕೆ ನರೇಂದ್ರ  ಪೈ ಅವರು ನೀಡಿದ ಪ್ರತಿಕ್ರಿಯೆ ಇಲ್ಲಿದೆ.

ಇಂದಿನ ಪುಸ್ತಕೋದ್ಯಮದ ಬಗ್ಗ್ಗೆ ಚರ್ಚೆ ಆರಂಭವಾಗಿದೆ. ಬನ್ನಿ, ನೀವೂ ಬರೆಯಿರಿ..

ಓದುವ ಮಂದಿ ಕಡಿಮೆಯಾಗುತ್ತಿರುವುದು ಒಂದು ನೆಲೆಯ ನಿಜವಾಗಿರುತ್ತಲೇ ಓದಲು ಸಿಗುತ್ತಿರುವ ಸರಕು ಕೂಡಾ ವಿಪರೀತವೆನ್ನುವಷ್ಟು ಹೆಚ್ಚುತ್ತಲೂ ಇದೆ ಮತ್ತು ಗುಣಾತ್ಮಕವಾಗಿ ಈ ಲಭ್ಯ ಸರಕಿನ ಮೌಲ್ಯ ಗಣನೀಯವಾಗಿ ಇಳಿದು ಹೋಗುತ್ತಲೂ ಇದೆ ಎನ್ನುವುದು ನನ್ನ ಅನುಭವ. ಹಿಂದೊಮ್ಮೆ ಹೇಳಿದ್ದಂತೆ ನಮ್ಮಲ್ಲಿ ಒಬ್ಬ ಚಿತ್ರಕಾರ, ಸಂಗೀತಪಟು, ಚಿತ್ರ ನಿರ್ದೇಶಕ, ನೃತ್ಯಪಟು, ಆಟಗಾರ ಏನೇ ಆಗುವುದಿದ್ದರೂ ಅದಕ್ಕೆಲ್ಲ ತರಬೇತಿ, ಶಿಕ್ಷಣ, ಸಾಮರ್ಥ್ಯವನ್ನು ಪರೀಕ್ಷೆಗೊಡ್ಡುವ ಮತ್ತು ಪ್ರಮಾಣೀಕರಿಸುವ ವ್ಯವಸ್ಥೆ, ಅಗತ್ಯ ಎಲ್ಲ ಇದೆ. ಆದರೆ ಬರಹಗಾರನಾಗುವುದಕ್ಕೆ ನಿಮ್ಮ ಬಳಿ ಒಂದು ಪೆನ್ನು-ಕಾಗದ ಇದ್ದರೆ ಸಾಕು, ಭಾಷೆ ಕೂಡಾ ಸ್ಪಷ್ಟವಾಗಿರಬೇಕಾದ ಅನಿವಾರ್ಯವೇನಿಲ್ಲ. ಕೆಲವೇ ವರ್ಷಗಳ ಹಿಂದೆ ಬರೆದಿದ್ದನ್ನು ಸಂಪಾದಕ ಮಹಾಶಯರೆನ್ನಿಸಿಕೊಂಡವರು ಮನ್ನಿಸಿದರೇ ನೊಬೆಲ್ ಪ್ರಶಸ್ತಿ ಬಂದಷ್ಟು ಸಂಭ್ರಮಿಸುವ ಪರಿಸ್ಥಿತಿಯಲ್ಲಿದ್ದ ನನ್ನಂಥವರು ಆಗ ಒಂದು ಪುಸ್ತಕವನ್ನೇ ನಮ್ಮ ಹೆಸರಿನಲ್ಲಿ ಪ್ರಕಟಿಸುವುದು ಜನ್ಮದಲ್ಲಿ ಸಾಧ್ಯವಾದೀತೆಂಬ ಕನಸು ಕಾಣಲೂ ಹೆದರುತ್ತಿದ್ದೆವು.

ಇವತ್ತು ಸಂಪಾದಕನದ್ದು ಕಾರಕೂನಿ ಕೆಲಸವೆಂಬುದು ಎಲ್ಲರಿಗೂ ಗೊತ್ತಿದೆ. ಅವರ ಮರ್ಜಿ ಕಾಯುವವರು ಯಾರೂ ಇಲ್ಲ ಇವತ್ತು. ಬದಲಿಗೆ ಬ್ಲಾಗುಗಳಿವೆ, ಸೋಶಿಯಲ್ ವೆಬ್ ಸೈಟುಗಳಿವೆ, ಆನ್‌ಲೈನ್ ಪತ್ರಿಕೆಗಳೂ ಇವೆ. ಪುಸ್ತಕ ಪ್ರಕಟನೆಗೆ ಯಾರ ಹಂಗೂ ಅಗತ್ಯವಿಲ್ಲ. ಬರೆದಿದ್ದನ್ನೆಲ್ಲ ನೇರ ಪುಸ್ತಕ ಮಾಡಿ ಮಾರುಕಟ್ಟೆಗೆ ತೇಲಿ ಬಿಡಬಹುದು, ಅದು ಎಷ್ಟೆಂದರೆ ಅಷ್ಟೂ ಸುಲಭ ಎನ್ನುವ ಅನುಭವ ನನಗೇ ಆಗಿದೆ. ಸ್ವಲ್ಪ ಅವರಿವರ ಸಂಪರ್ಕ ಇದ್ದರೆ ಸಗಟು ಖರೀದಿಗೆಂದೇ ಅಚ್ಚು ಹಾಕುವ ಪ್ರಕಾಶಕರಿದ್ದಾರೆ, ಏನಿಲ್ಲವೆಂದರೆ ಇವರು ಬರಹಗಾರನಿಗೆ ಐದಾರು ಸಾವಿರ ಖಂಡಿತ ಕೊಡುತ್ತಾರೆ, ಐವತ್ತು ಉಚಿತ ಪ್ರತಿಗಳ ಸಮೇತ. ಬರೆದವನಿಗೆ ಲೇಖಕ ಅನಿಸಿಕೊಳ್ಳುವ ಸುಲಭದ ದಾರಿ ಇಷ್ಟಗಲಕ್ಕೆ ತೆರೆದಿದೆ ಇವತ್ತು. ಪ್ರಕಾಶಕ ನೀವೇನು ಬರೆದಿದ್ದೀರಿ ಎಂದು ಓದಿ ನೋಡುವ ಕಷ್ಟ ಕೂಡ ತೆಗೆದುಕೊಳ್ಳುವುದಿಲ್ಲ! ಇನ್ನೇನು ಬೇಕು ನಿಮಗೆ? ಐವತ್ತು ಅರವತ್ತು ವರ್ಷ ಪತ್ರಿಕೆ ನಡೆಸಿದ ಸಾಹಿತಿ ಸಂಪಾದಕರು ಎರಡೋ ಮೂರೋ ಪುಸ್ತಕ ತಂದಿದ್ದರೆ ಇವತ್ತು ಎರಡು ವರ್ಷ ಸಂಪಾದಕನಾಗಿದ್ದವನು ಇಪ್ಪತ್ತೈದು ಪುಸ್ತಕ ತಂದಿರುತ್ತಾನೆ. ಇವತ್ತು ನಾವು ಬರೆದಿದ್ದೆಲ್ಲ ಪುಸ್ತಕವಾಗಲು ಯೋಗ್ಯವಾದದ್ದೇ ಎನ್ನುವ ನಂಬಿಕೆ ಎಲ್ಲರಿಗೂ ಇದೆ, ಅವೇ ಪುಸ್ತಕಗಳನ್ನು ಮಾರಲು ಹೊರಟವರನ್ನು ಬಿಟ್ಟು!

ಇದು ಸಂಭ್ರಮಿಸಬಹುದಾದ ವಿದ್ಯಮಾನವೇ ಆಗಬಹುದಿತ್ತೇನೊ. ಆದರೆ ವಾಸ್ತವ ಹೇಗಿದೆ ಎಂದರೆ, ನೋಡಿದರೆ ಕೊಳ್ಳಬೇಕೆನಿಸುವ ಮುಖಪುಟ, ಮುದ್ರಣ, ಕಾಗದ ಎಲ್ಲ ಇದ್ದೂ ಕೊಂಡರೆ ಮೂರ್ಖರಾಗುವುದು ನಿಶ್ಚಿತ ಎನಿಸುವ ಮಟ್ಟಿಗೆ ಇರುತ್ತವೆ ಇವೆಲ್ಲ! ಯಾರ ಮುನ್ನುಡಿ, ಬೆನ್ನುಡಿಯನ್ನೂ ನಂಬುವಂತಿಲ್ಲ! ಆವತ್ತು ಬಸಲಿಂಗಪ್ಪ ಕನ್ನಡ ಸಾಹಿತ್ಯವನ್ನು ಬೂಸಾ ಸಾಹಿತ್ಯ ಎಂದಿದ್ದಕ್ಕೆ ರಾಜೀನಾಮೆ ಕೊಡಬೇಕಾಯಿತು. ಇವತ್ತಿನ ಸಾಹಿತ್ಯವನ್ನು ಏನೆಂದು ಕರೆಯಬಹುದೋ ಗೊತ್ತಿಲ್ಲ!

ನಡುವೆ ಇದುವರೆಗಿನ ಸಮಗ್ರಗಳು, ಒಬ್ಬರೇ ಬರೆದ ಅವೇ ಲೇಖನಗಳಲ್ಲನ್ನು ವಿಭಿನ್ನ ಪ್ರಕಾರಗಳಲ್ಲಿ ವಿಂಗಡಿಸಿ ಪ್ರಕಟಿಸಿದ ಸಂಕಲನಗಳು ಬರುತ್ತಿವೆ. ಮೂಲ ಸಂಕಲನಗಳು, ಕೃತಿಗಳು ಇನ್ನೂ ಕಪಾಟಿನಲ್ಲಿರುವಾಗಲೇ ಇವು ಬಂದರೆ ವ್ಯಾಪಾರ ಯಾವುದರದ್ದು ಸಾಗಬೇಕೆನ್ನುವ ಪ್ರಶ್ನೆಯೂ ಇದೆಯಲ್ಲವೆ.

ನಾನು ಓದುವುದನ್ನು ಒಂದು obsessionಎನ್ನುವ ಮಟ್ಟಿಗೆ ಹಚ್ಚಿಕೊಂಡವನು. ಕಛೇರಿಯ ಕೆಲಸ ಬಿಟ್ಟರೆ ಉಳಿದಂತೆಲ್ಲ ನಾನು ಓದುವುದು, ಒಳ್ಳೆಯ ಸಿನಿಮಾ ಇತ್ಯಾದಿ ನೋಡುವುದರಲ್ಲಿ ವ್ಯಯಿಸುತ್ತೇನೆ. ಆದರೂ ನನಗೆ ಓದಲು ಸಾಧ್ಯವಾಗುವುದು ವರ್ಷಕ್ಕೆ ಸುಮಾರು ಇನ್ನೂರೈವತ್ತು ಪುಟಗಳ ಅರವತ್ತು ಪುಸ್ತಕಗಳನ್ನಷ್ಟೇ. ತಿಂಗಳಿಗೆ ಅರವತ್ತು ಪುಸ್ತಕಗಳು ಬರುತ್ತಿದ್ದರೆ ಅವುಗಳನ್ನು ಓದುವಲ್ಲಿ – ಕೊಂಡುಕೊಳ್ಳುವಲ್ಲಿ ಚೂಸಿಯಾಗಿರಲೇ ಬೇಕಾಗುತ್ತದೆ. ಈ ಚೂಸಿತನ ಮೌಲ್ಯ, ಡಿಸ್ಕೌಂಟ್ ಇತ್ಯಾದಿಗಳಿಗೆ ಸಂಬಂಧಿಸಿ ಅಲ್ಲ ಎನ್ನುವುದು ನಿಮಗೆ ಹೇಳಬೇಕಿಲ್ಲ. ಆದರೆ ನಮ್ಮ ಹಣ, ಸಮಯ ಮತ್ತು ಶ್ರಮಕ್ಕೆ ತಕ್ಕ ಪ್ರತಿಫಲ ಈ ಕೃತಿಗಳು ಕೊಡುತ್ತಿವೆಯೆ? ಬರವಣಿಗೆ ಮತ್ತು ಪ್ರಕಟಣೆ ನಮ್ಮಲ್ಲಿ ಜವಾಬ್ದಾರಿಯ ಕಾಯಕ ಎನ್ನುವ ಮೌಲ್ಯವನ್ನೇ ಬಿಟ್ಟುಕೊಟ್ಟಂತೆ ನನಗಂತೂ ಅನಿಸಿದೆ. ಕೊನೆ ಕೊನೆಗೆ ನನಗೆ ಏನಾಯಿತೆಂದರೆ ನಾನು ಕನ್ನಡ ಪುಸ್ತಕಗಳನ್ನು ಕೊಳ್ಳುವುದನ್ನೇ ಬಿಟ್ಟು ಬಿಟ್ಟೆ. ಹಿಂದೆ ಅನುವಾದಿತ ಕನ್ನಡ ಪುಸ್ತಕಗಳ ಮೇಲಾದರೂ ವಿಶ್ವಾಸವಿತ್ತು. ಈಚೆಗೆ ಅದೂ ಕುಸಿಯುತ್ತಿದೆ. ಅಂಕಿತ, ಪ್ರಿಸಂ, ಅಕ್ಷರ, ಪುಸ್ತಕ ಪ್ರಕಾಶನ, ಲಂಕೇಶ್ ಪ್ರಕಾಶನ, ಛಂದ, ಮನೋಹರ, ಲೋಹಿಯಾ, ಅಭಿನವ ಎಂದೆಲ್ಲ ಪ್ರಕಾಶಕರನ್ನು ನಂಬಿ ಪುಸ್ತಕ ಕೊಳ್ಳುತ್ತಿದ್ದ ಕಾಲವಿತ್ತು. ಈ ಪಟ್ಟಿ ಈಗ ಅಕ್ಷರ, ಅಭಿನವದಂಥ ಒಂದೆರಡು ಹೆಸರುಗಳಿಗೆ ಸೀಮಿತವಾಗಿರುವುದು ಕೂಡ ನಿಜ. ಸ್ನೇಹ ಸಂಬಂಧಗಳ ದಾಕ್ಷಿಣ್ಯಕ್ಕೆ, ಇನ್ನೇನೋ ಅನಿವಾರ್ಯಕ್ಕೆ ಎಂದೆಲ್ಲ ಕೆಲವೊಮ್ಮೆ ಖ್ಯಾತರು ಬರೆದ ಕಸವನ್ನು ಕೂಡ ಅಚ್ಚು ಹಾಕುವ compromise policy ಗೆ ಓದುಗರು ಬಲಿಯಾಗಲು ಎಲ್ಲಿಯವರೆಗೆ ಸಿದ್ಧರಿರುತ್ತಾರೆ? ಒಂದೆರಡು ಬಾರಿ ಮೂರ್ಖರಾಗಲು ನಾವೂ ಸಿದ್ಧರಿರುತ್ತೇವೆ, ಆದರೆ ಸದಾಕಾಲ ಅಲ್ಲ! ನನ್ನ ಕಟುವಾದ ಮಾತಿಗೆ ಹೀಗಾಗಿದೆಯಲ್ಲ ಎನ್ನುವ ನನ್ನ ನೋವು ಮಾತ್ರ ಕಾರಣ, ಇನ್ಯಾವ ಪೂರ್ವಾಗ್ರಹಗಳೂ ನನಗಿಲ್ಲ.

ಇದೆಲ್ಲದರಿಂದಾಗಿ ಏನಾಗುತ್ತದೆ, ಎಲ್ಲ ಪುಸ್ತಕಗಳೂ ಒಂದೇ, ಎಲ್ಲ ಸಾಹಿತಿಗಳು, ಪ್ರಕಾಶಕರು ಒಂದೇ, ಇವರದ್ದೆಲ್ಲ ಇಷ್ಟೇ ಎನ್ನುವ ಅಸಡ್ಡೆ ಹೊಸ ಮತ್ತು ಹಳೆಯ ಓದುಗರಲ್ಲಿ ಬಂದು ಬಿಡುತ್ತದೆ. ಮೊದಲೇ ಓದುವುದೆಂದರೆ ಅಷ್ಟಕ್ಕಷ್ಟೇ ಇರುವವರಿಗೆ ಇದೆಲ್ಲ ಸಮರ್ಥನೆಯನ್ನು ಒದಗಿಸಿದಂತೆ ಆಗುತ್ತದೆ. ವಿಪುಲವಾದ ಬೆಳೆ ಎಲ್ಲರಿಗೂ ಸಂತಸ, ಸಮೃದ್ಧಿ, ಸಂಭ್ರಮ ತರುವಂತೆ ವಿಪುಲವಾದ ಕಳೆ ಮಾರಕವಾಗುತ್ತದೆ ಎನ್ನುವುದು ನಿಜವಲ್ಲವೆ.

ಈ ಸ್ಥಿತಿಯಲ್ಲಿ ಡಿಸ್ಕೌಂಟು, ಸರಕಾರೀ ವ್ಯವಸ್ಥೆ ಏನಾದರೂ ಪರಿಣಾಮ ಬೀರುತ್ತದೆಯೇ ಎಂದರೆ ಸಾಂಸ್ಥಿಕ ಖರೀದಿಗೆ ಮತ್ತು ವ್ಯಕ್ತಿಗತ ಖರೀದಿಗೆ ಸಂಬಂಧಿಸಿದಂತೆ ವಿಭಿನ್ನ ಉತ್ತರಗಳು ಸಿಗುತ್ತವೆ. ಒಬ್ಬ ಪ್ರಾದೇಶಿಕ ಮಿತಿಗಳ ಸಣ್ಣ ಪುಸ್ತಕವ್ಯಾಪಾರಿಯಾಗಿ ನಿಮಗೆ ಇದೆಲ್ಲ ಎಷ್ಟು ಒತ್ತಡ, ಸಂಕಟ ಮತ್ತು ಸಂದಿಗ್ಧಗಳನ್ನೊಡ್ಡುತ್ತ ಅಸ್ತಿತ್ವದ ಪ್ರಶ್ನೆಯೇ ಆಗಿ ಬಿಡುತ್ತದೆ ಎನ್ನುವುದು ನನಗೆ ಅರ್ಥವಾಗುತ್ತದೆ ಮತ್ತು ಆ ಬಗ್ಗೆ ನನ್ನಲ್ಲಿ ಪ್ರಾಮಾಣಿಕವಾದ ನೋವಿದೆ. ಆ ಕಾಲದ ಇಂಗ್ಲೀಷ್ ‘ಎಮ್ಮೆ’ಯಾಗಿಯೂ ಪುಸ್ತಕ ಹೊತ್ತು ಮಾರುವ ಆದರ್ಶಕ್ಕೆ ಬಿದ್ದು (ಬಿದ್ದ ಬಗ್ಗೆ ಯಾವತ್ತೂ ವಿಷಾದವಾಗಿದ್ದಿಲ್ಲವೇ ಎಂದು ಅಚ್ಚರಿಯಿಂದ ನಿಮ್ಮನ್ನು ಕೇಳಿದವನು ನಾನು) ನೀವು ಸಾಗಿ ಬಂದ ಹಾದಿ ಎಷ್ಟು ಎಡರು ತೊಡರುಗಳನ್ನು ಕಂಡಿರಬಹುದೋ ಅದನ್ನೆಲ್ಲ ನೀವು ವೈಯಕ್ತಿಕವಾಗಿ ಎಂದೂ ಹೇಳಿಕೊಂಡವರಲ್ಲ ಕೂಡ. ನಿಮ್ಮ ಕೃತಿ ‘ಪುಸ್ತಕ ಮಾರಾಟ-ಹೋರಾಟ’ ಕೂಡ ವಸ್ತುನಿಷ್ಠವಾಗಿದೆಯೇ ಹೊರತು ಎಲ್ಲೂ ವ್ಯಕ್ತಿನಿಷ್ಠ ಪ್ರಚಾರ-ಹೆಗ್ಗಳಿಕೆಯ ಧಾಟಿಯನ್ನು ಪಡೆದಿದ್ದಿಲ್ಲ ಎನ್ನುವುದನ್ನು ಬಲ್ಲೆ.

ಗ್ರಂಥಾಲಯಗಳ, ಶಾಲಾ ಕಾಲೇಜುಗಳ ಪುಸ್ತಕ ಖರೀದಿಯ ವಿದ್ಯಮಾನದ ಬಗ್ಗೆ ನನಗೇನೂ ಹೇಳುವುದಕ್ಕಿಲ್ಲ. ಗ್ರಂಥಾಧಿಕಾರಿಗಳು, ಶಿಕ್ಷಕರು, ಶಾಲೆಯ ಶಿಕ್ಷಕ-ಪೋಷಕ ಸಂಘಟನೆಗಳು ಕೂಡ ಈ ಬಗ್ಗೆ ಅಗತ್ಯ ಆಸಕ್ತಿವಹಿಸುವ ಮನಸ್ಥಿತಿಯಲ್ಲಿರುವಂತೆ ಕಾಣಿಸದ ಈ ದಿನಗಳಲ್ಲಿ ಪುಸ್ತಕಗಳು ಯಾರಿಗೂ ಬೇಡವಾದ ಸರಕಾಗಿಬಿಟ್ಟಂತಿದೆ. ಯಾವುದೇ ಶಾಲೆ-ಕಾಲೇಜುಗಳು ಪಠ್ಯೇತರ ಓದನ್ನು ಒಂದು ಶಿಸ್ತಾಗಿ ಉತ್ತೇಜಿಸಿದ, ಅನಿವಾರ್ಯವಾಗಿಸಿದ ಉದಾಹರಣೆ ನನಗೆ ಸಿಕ್ಕಿಲ್ಲ. ಇಂಥ ಕಾರ್ಯಕ್ರಮ ವಿದೇಶಗಳಲ್ಲಿ ಪ್ರಾಥಮಿಕ ಹಂತದಿಂದಲೇ ಇದೆ ಎಂಬುದನ್ನು ನಾನು ವಿವೇಕ ಶಾನಭಾಗರಿಂದಲೇ ತಿಳಿದಿದ್ದೆ. (ಅನೇಕ ವರ್ಷಗಳ ಹಿಂದೆ ಅವರು ವಿಜಯಕರ್ನಾಟಕದ ಸಾಪ್ತಾಹಿಕದಲ್ಲಿ ಕೆ.ವಿ.ತಿರುಮಲೇಶರ ‘ಎಲ್ಲಿದ್ದಾನೆ ಪ್ರಿಯ ಓದುಗ’ ಲೇಖನಕ್ಕೆ ಪ್ರತಿಕ್ರಿಯಿಸುತ್ತಾ ಇದನ್ನೆಲ್ಲ ಪ್ರಸ್ತಾಪಿಸಿದ್ದರು.)

ಇನ್ನು ವಿದ್ಯಾರ್ಥಿಗಳು ತಮಗೆ ಇಂಥ ಪುಸ್ತಕಗಳು ಬೇಕು ಎಂದಾಗಲೀ, ಗ್ರಂಥಾಲಯದ ಬಳಕೆದಾರರು ತಮಗೆ ಇಂಥ ಕೃತಿಗಳನ್ನು ತರಿಸಿಕೊಡಿ ಎಂದಾಗಲೀ ತಾವಾಗಿಯೇ ಕೇಳುವ ಸ್ಥಿತಿ ಇದೆಯೆ ನಮ್ಮಲ್ಲಿ? ಮಧ್ಯಾಹ್ನದ ಬಿಸಿಲಿಗೆ ಸ್ವಲ್ಪ ಸುಧಾರಿಸಿಕೊಳ್ಳುವುದಕ್ಕೆ ಬಳಕೆಯಾಗುತ್ತಿರುವ ನಮ್ಮ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲೇ ಅಲ್ಲಿರುವ ಕೃತಿಗಳ ಇಂಡೆಕ್ಸಿಂಗ್ ಇಲ್ಲ. ಅವುಗಳನ್ನು ಜೋಡಿಸಿಟ್ಟ ಕ್ರಮದಲ್ಲಿ ಯಾವುದೇ ಶಿಸ್ತಿಲ್ಲ. ಕಾದಂಬರಿ ಪ್ರಕಾರದಲ್ಲಿ ಅಡುಗೆ ಪುಸ್ತಕ, ಇತಿಹಾಸ ಪುಸ್ತಕಗಳ ನಡುವೆ ಕವನ ಸಂಕಲನ ಇರುವುದು ಸಾಮಾನ್ಯವಾಗಿ ಬಿಟ್ಟಿದೆ. ಸಿಬ್ಬಂದಿಗಳ ಬಳಿ ಕಾರಂತರ ಅಥವಾ ಕುವೆಂಪುರವರ ಒಂದಾದರೂ ಕಾದಂಬರಿ ಇಲ್ಲಿದೆಯೆ ತೋರಿಸಿ ಎಂದರೆ ಅಲ್ಲೇ ಎಲ್ಲೋ ಇರುತ್ತೆ ಸಾರ್ ಎನ್ನುವ ತಮಾಷೆಯ ಉತ್ತರ. ಕಾರಂತರು ನಲವತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿರುವ ಬಗ್ಗೆ ಇಲ್ಲಿನ ಸಿಬ್ಬಂದಿಗೆ ಇನ್ನೂ ಸುತ್ತೋಲೆ ಬಂದಿಲ್ಲವಾದ್ದರಿಂದ ಆ ಬಗ್ಗೆ ಅವರಿಗೆ ತಿಳಿದಿಲ್ಲ. ಈ ಗ್ರಂಥಾಲಯಕ್ಕೆ ರಾಜ್ಯಮಟ್ಟದ ಪ್ರಶಸ್ತಿ ಸಿಕ್ಕಿದೆ ಎಂದ ಮೇಲೆ ಇನ್ನುಳಿದವು ಹೇಗಿರಬಹುದು! ಈ ಇಲಾಖೆಯಲ್ಲಿ ಹುದ್ದೆಗಳ ಭರ್ತಿ, ಸಂದರ್ಶನ, ಆಯ್ಕೆ ಪ್ರಕ್ರಿಯೆ ಎಲ್ಲ ಹೇಗೆ ನಡೆಯುತ್ತಿರಬಹುದೆಂಬುದು ನನಗೆ ಜಾಗತಿಕ ವಿಸ್ಮಯಗಳಲ್ಲೊಂದಾಗಿ ಕಾಣಿಸುತ್ತದೆ. ಇವರಿಗಿಂತ ನಮ್ಮ ಶಾಲೆಗಳ ಸ್ಥಿತಿ ತುಂಬ ಭಿನ್ನವಾಗಿಲ್ಲ ಎನ್ನುವುದು ನಿಮಗೇ ಗೊತ್ತಿದೆ. ಇಲ್ಲಿ ಏನನ್ನು ನಿರೀಕ್ಷಿಸಬಹುದು!

ವ್ಯಕ್ತಿಗತ ನೆಲೆಯ ಖರೀದಿಯಲ್ಲಿ ನಿಶ್ಚಯವಾಗಿಯೂ ಈ ಮಾಲ್‌ಗಳು ಒಡ್ಡುವ ಆಮಿಷ, ಆನ್‌ಲೈನ್ ಖರೀದಿಯ ಅನುಕೂಲತೆಗಳು ಮತ್ತು ಕ್ರೆಡಿಟ್ ಕಾರ್ಡ್ ತರದ ವ್ಯವಸ್ಥೆ ಸಣ್ಣ ಪುಟ್ಟ ಮಟ್ಟದ ಬೇಡಿಕೆಗಳಿರುವ ಪುಸ್ತಕವ್ಯಾಪಾರಿಗಳಿಗೆ ದೊಡ್ಡ ಹೊಡೆತವನ್ನೇ ನೀಡುತ್ತಿರುವುದು ನಿಜ. ಆದರೆ ಈ ಸಮಸ್ಯೆಯನ್ನು ಎದುರಿಸಬೇಕು ಹೇಗೆ?

ಹೆಚ್ಚಾಗಿ ಕನ್ನಡೇತರ, ಇಂಗ್ಲೀಷ್ ಕೃತಿಗಳ ಸಂದರ್ಭದಲ್ಲಷ್ಟೇ ಇವರ ಮೇಲ್ಗೈ ಇದೆ ಎನ್ನುವುದು ನನ್ನ ನಂಬಿಕೆ. ಕನ್ನಡ ಪುಸ್ತಕಗಳನ್ನು ಮಾಲ್‌ಗಳಲ್ಲಿ (ಭೈರಪ್ಪ ಬಿಡಿ, ಎಲ್ಲಿಟ್ಟರೂ ಕೊಳ್ಳುಗರಿರುತ್ತಾರೆ) ಕನ್ನಡ ಪುಸ್ತಕಗಳು ಹೋಗುವುದು ಅಷ್ಟರಲ್ಲೇ ಇದೆ. ಮತ್ತೆ ಕನ್ನಡ ಪುಸ್ತಕಗಳನ್ನು ಕೊಳ್ಳುವ ಅಭಿರುಚಿಯುಳ್ಳವರು ಊರಿನ ಆಯ್ದ ಅಂಗಡಿಗಳ ಜೊತೆ ಒಂದು ಅನುಬಂಧವನ್ನು ಕೂಡ ಹೊಂದಿರುತ್ತಾರೆ ಎನ್ನುವುದು ನನ್ನ ನಂಬಿಕೆ. ಅವರು ಮಾಲ್‌ಗಳಲ್ಲಿ ವಿಶೇಷ ರಿಯಾಯಿತಿ ದಕ್ಕಿದರೆ ಕೊಂಡಾರೆಯೇ ವಿನಃ ಯಾವತ್ತಿನ ಹತ್ತು ಹದಿನೈದು ಶೇಕಡಾ ರಿಯಾಯಿತಿಗೆ ಅಲ್ಲಿಗೆ ಹೋಗಲಾರರು. ಅಂಥ ರಿಯಾಯಿತಿ ಅವರಿಗೆ ಯಾವತ್ತೂ ಕೊಳ್ಳುವಲ್ಲಿಯೇ ಸಿಗುತ್ತದೆ ಕೂಡ. ಆದರೆ ಇಂಗ್ಲೀಷ್ ಕೃತಿಗಳ ಬೆಲೆ ಮತ್ತು ಅವುಗಳಿಗಿರುವ ಮಾರುಕಟ್ಟೆಯನ್ನು ಗಮನಿಸಿ ಹೇಳುವುದಾದರೂ ಪೆಟ್ಟು ಸಣ್ಣದಲ್ಲ. ಉದಾಹರಣೆಗೆ ಈಗಿನ್ನೂ ವಿದೇಶೀ ಮಾರುಕಟ್ಟೆಯಲ್ಲಿ ಮಾತ್ರ ಸಿಗುತ್ತಿರುವ ಅಮಿತಾವ ಘೋಷ್‌ರ ಹೊಸ ಕೃತಿ “ರಿವರ್ ಆಫ್ ಸ್ಮೋಕ್” ಭಾರತದಲ್ಲೂ ಪ್ರಕಟವಾಗುತ್ತಿದೆ. ಇದರ ಪ್ರಕಟನಾಪೂರ್ವ ರಿಯಾಯಿತಿ 40% ಎಂದು ಕೇಳಿದೆ. ಈಚೆಗೆ ಬಂದ ಖುಷ್‌ವಂತ್ ಸಿಂಗರ ಕೃತಿಗೂ ಇದೇ ರೀತಿಯ ಸ್ವಾಗತ ಸಿಕ್ಕಿತ್ತು. ನೈಪಾಲರ ದಕ್ಷಿಣ ಆಫ್ರಿಕಾ ಕುರಿತ ಕೃತಿಗೆ ಈಗಲೂ 26% ರಿಯಾಯಿತಿ ಆನ್‌ಲೈನ್‌ನಲ್ಲಿ ಸಿಗುತ್ತಿದೆ. ಪಮುಖ್‌ನ ದ ಮ್ಯೂಸಿಯಮ್ ಆಫ್ ಇನ್ನೊಸೆನ್ಸ್ ಕೃತಿಗೂ ಈ ತರದ ರಿಯಾಯಿತಿ, ಪುಕ್ಕಟೆಯಾಗಿ ಮನೆಗೆ ತಲುಪಿಸುವ ಸವಲತ್ತು, ಕ್ರೆಡಿಟ್ ಕಾರ್ಡ್ ಮುಖೇನ ಪಾವತಿ (ಕನಿಷ್ಠ 50 ದಿನ ಹಣ ಪಾವತಿಸದೇ ಪುಸ್ತಕ ಕೊಳ್ಳುವ, ಓದುವ ಅನುಕೂಲ) ಎಲ್ಲ ಇತ್ತು. ಹೀಗಿರುತ್ತ ಅಂಗಡಿಗಳಲ್ಲಿ ಯಾರು ಕೊಳ್ಳುತ್ತಾರೆ ಎನ್ನುವುದು ಪ್ರಶ್ನೆ. ಕೆಲವೊಂದು ಆನ್‌ಲೈನ್ ಮಾರಾಟಗಾರರಂತೂ ವರ್ಷದ ಕೊನೆಯ ಕೆಲವೇ ದಿನ, ರಾತ್ರಿ ಹನ್ನೊಂದರಿಂದ ಎರಡು ಗಂಟೆಯ ಒಳಗೆ ಏನು ಖರೀದಿಸಿದರೂ ಶೇಕಡಾ ಐವತ್ತು ರಿಯಾಯಿತಿ ಘೋಷಿಸಿ ನನ್ನಂಥವರಿಗೆ ಈ ಮೇಲ್ ಕಳಿಸಿದ್ದೂ ಇದೆ! ಇಂಥ ಯಾವತ್ತೂ ಸವಲತ್ತುಗಳನ್ನು ನಾನು ಬಳಸಿಕೊಂಡಿದ್ದೇನೆ. ಒಬ್ಬ ಪುಸ್ತಕಪ್ರೇಮಿಯಾಗಿ ನಾನು ಅಥವಾ ಇನ್ಯಾರೇ ಆದರೂ ಹೀಗೆಯೇ ಮಾಡುತ್ತಾರೆ ಎಂದೂ ಭಾವಿಸುತ್ತೇನೆ. ಹಾಗೆಯೇ ಕೆಲವೊಮ್ಮೆ ಇಲ್ಲಿ ನಾನು ಮೂರ್ಖನಾಗಿದ್ದೂ ಇದೆ. ಒಂದೇ ಕೃತಿ ಹಲವು ಬೆಲೆಗಳಲ್ಲಿ ಲಭ್ಯವಿರುವುದನ್ನು ಕಂಡು ಬೆಪ್ಪನಂತೆ ‘ಚೀಪ್ ರೇಟ್ – ಹಾಫ್ ರೇಟ್’ ಅಂತ ಮುನ್ನುಗ್ಗಿ ನನ್ನ ಕಣ್ಣಲ್ಲಂತೂ (ದಪ್ಪ ಗಾಜಿನ ನನ್ನ ಇತ್ತೀಚಿನ ಕನ್ನಡಕ ಸಹಿತ ನೇತ್ರಗಳು ನನ್ನವು) ಓದಲಾಗದ ಪುಟ್ಟ ಫಾಂಟ್ನ್ ರೀಸೈಕಲ್ಡ್ ಹಾಳೆಯ ಕೆಟ್ಟ ಮುದ್ರಣದ ಪ್ರತಿ ಕಂಡು ಮೂರ್ಖನಾಗಿದ್ದು ಹಲವು ಬಾರಿ. ಹಾಗೆಂದು ಧಾರಾಳಿಯಾಗಿ ಹೆಚ್ಚು ಬೆಲೆಯ ಪ್ರತಿ ತರಿಸಿದರೂ ಯಾವುದು ಕೈ ಸೇರುತ್ತದೆ ಎನ್ನುವ ಬಗ್ಗೆ ಯಾವ ಗ್ಯಾರಂಟಿಯೂ ಇಲ್ಲ ಎನ್ನುವುದು ಅನುಭವಸಿದ್ಧ ವಾಸ್ತವ. ಹಾಗೆಯೇ ನಿಶ್ಚಯವಾಗಿಯೂ ಇವರು ಇನ್ನೆಲ್ಲೊ ಹಿಡಿದು ಇಲ್ಲೆಲ್ಲೊ ಬಿಟ್ಟು ವ್ಯಾಪಾರ ನಡೆಸುತ್ತಿರಬಹುದು. ಅಥವಾ ಪ್ರಕಾಶಕರ ಜೊತೆ ಈ ತರದ ಒಳಒಪ್ಪಂದ ಏನಾದರೂ ಮಾಡಿಕೊಂಡಿರಲೂ ಬಹುದು. ಆದರೆ ರಸ್ತೆ ಬದಿ ಮಾರುವ ಪೈರೇಟೆಡ್ ಕೃತಿಗಳನ್ನು ಕೊಳ್ಳುವುದಕ್ಕಿಂತ ಇದು ನೈತಿಕ ಎಂಬ ಭಾವನೆ ನನ್ನಲ್ಲಿತ್ತು. ಆದರೆ ಇದರೊಳಗಿನ ಮರ್ಮವೆಲ್ಲ ತಿಳಿಯುತ್ತಿರುವುದು ಈಗಲೇ, ನಿಮ್ಮ ಲೇಖನವನ್ನೋದಿದ ಮೇಲೆಯೆ.

ಹಿಂದೆಲ್ಲ ನನಗೆ ನೀವೂ ಯಾಕೆ ಆನ್‌ಲೈನ್ ಆರ್ಡರ್ ಪಡೆಯುವ, ವಿತರಿಸುವ ವ್ಯವಸ್ಥೆಯನ್ನು, ಕ್ರೆಡಿಟ್ ಕಾರ್ಡ್ ವ್ಯವಸ್ಥೆಯನ್ನು, ಸ್ವತಃ ಹೆಚ್ಚಿನ ರಿಯಾಯಿತಿ ಗಿಟ್ಟಿಸುವ ಉಪಾಯಗಳನ್ನೆಲ್ಲ ಮಾಡಬಾರದು ಎಂದೇ ಅನಿಸಿತ್ತು. ನೀವು ಆಧುನಿಕತೆಗೆ, ಅದರ ಓಘಕ್ಕೆ ಸ್ವಲ್ಪ ನಿಧಾನವಾಗಿಯೇ ತೆರೆದುಕೊಳ್ಳುತ್ತಿದ್ದೀರಿ ಎಂತಲೂ ಅನಿಸಿತ್ತು. ಆದರೆ ಅದು ನಿಮ್ಮ ಅನುಭವ, ಕ್ಷಮತೆ ಮತ್ತು ಮುಖ್ಯವಾಗಿ ಒಗ್ಗುವಿಕೆಗೆ ಬಿಟ್ಟ ವಿಚಾರವಾಗಿದ್ದು ಅವು ನಿಮಗೆ – ನೀವು ಅವುಗಳಿಗೆ ಒಲಿದಂತೆ ಒಲಿಯಲಿ ಎಂದೇ ಸುಮ್ಮನಿದ್ದೆ, ನನ್ನ ಸ್ವಭಾವತಃ ಅಧಿಕಪ್ರಸಂಗಿತನವನ್ನು ಅದುಮಿಕೊಂಡು! ಮೊದಲಿಗೆ ನೀವು ಬ್ಲಾಗ್ ಆರಂಭಿಸಿದಾಗ, ಅದರಲ್ಲಿ ಪುಸ್ತಕ ಪಟ್ಟಿ ಪ್ರಕಟಿಸುತ್ತೇವೆ ಎಂದಾಗ ನಾನು ಇದನ್ನೇ ಮಾಡುತ್ತಿದ್ದೀರಿ ಎಂದೇ ಭಾವಿಸಿದ್ದೆ. ಆಮೇಲೆ ಅದು ಅತ್ರಿ ಪ್ರಕಾಶನದ ಕೃತಿಗಳ ಪಟ್ಟಿಗೇ ನಿಂತಾಗ ಮತ್ತು ಅಲ್ಲಿ ಯಾವುದೇ ಚಿತ್ರಮಯ ವಿವರ, ವ್ಯಾಪಾರೀ ಉದ್ದೇಶ ಕಾಣದಾದಾಗ ಸ್ವಲ್ಪ ನಿರಾಶನಾಗಿದ್ದೂ ಇದೆ. ನೀವೇನು, ಮನೋಹರ ಗ್ರಂಥಮಾಲಾದ ವೆಬ್‌ಸೈಟ್ ಕೂಡ ಆನ್‌ಲೈನ್ ಆರ್ಡರ್ ಎನ್ನುತ್ತ ಪಾವತಿಗೆ ಡಿಡಿ/ಚೆಕ್‌ಗಳನ್ನೇ ಅವಲಂಬಿಸಿದ್ದು ಈ ಬಗ್ಗೆ ರಮಾಕಾಂತ ಜೋಶಿಯವರಿಗೆ ಬರೆದರೂ ಅದನ್ನೆಲ್ಲ ಮುಂದೆ ಮಾಡುವ ಉದ್ದೇಶವಿದೆ ಎನ್ನುವ ಉತ್ತರವಷ್ಟೇ ಸಿಕ್ಕಿದ್ದು. ಮುಂದೆ ಕ್ರೆಡಿಟ್ ಕಾರ್ಡ್ ಸಂಬಂಧ ನಿಮಗಾದ ಕಹಿ ಅನುಭವವನ್ನೂ ಕೇಳಿದ ಮೇಲೆ ಅಂಥ ಸಲಹೆ ನೀಡುವ ನನ್ನ ಉತ್ಸಾಹ ಕೂಡ ಇಳಿಯಿತು.

ಅಕ್ಷರ ಪ್ರಕಾಶನಕ್ಕೂ ವೆಬ್‌ಸೈಟ್ ಒಂದನ್ನು ಮಾಡುವ ಉದ್ದೇಶವಿತ್ತು ಎಂದು ಕೇಳಿದ್ದೆ. ಆದರೆ ಅದೇನೂ ಕಾರ್ಯಗತವಾಗಲಿಲ್ಲ.

ನನಗನಿಸುವುದೇನೆಂದರೆ, ನೀವೆಲ್ಲ ಸಮಾನ ಮನಸ್ಕರು ಸೇರಿ ಕನ್ನಡ ಪುಸ್ತಕಗಳ ಖರೀದಿ -ಮಾರಾಟಕ್ಕೆ ಯಾಕೆ ಒಂದು ವೆಬ್‌ಸೈಟ್ ನಿಯೋಜಿಸಬಾರದು? ಪೇ ಪಾಲ್‌ನಂಥ ಪಾವತಿ ವ್ಯವಸ್ಥೆಯ ಸವಲತ್ತನ್ನು ಬಳಸಿಕೊಂಡು ಯಾವುದಾದರೂ ನಿಷ್ಠ-ಸಭ್ಯ-ಯೋಗ್ಯ ಕೊರಿಯರ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಇದನ್ನು ನಿರ್ವಹಿಸುವುದು ಅಷ್ಟೇನೂ ಕಷ್ಟವಾಗಲಾರದು. ಆಯಾ ಪ್ರಕಾಶಕರೇ ನೇರವಾಗಿ ವಿಳಾಸಕ್ಕೆ ಪುಸ್ತಕಗಳನ್ನು ಕಳಿಸಿಕೊಡುವ ಹೊಣೆ ಹೊತ್ತಲ್ಲಿ ಪುಸ್ತಕಗಳನ್ನು ಶೇಖರಿಸಿಡುವ ಗೋಳು ಕೂಡ ಒಬ್ಬರ ಮೇಲೇ ಬೀಳುವುದಿಲ್ಲ. ಪ್ರದರ್ಶನಗಳಿಗೆ ಪುಸ್ತಕಗಳನ್ನು ಹೊತ್ತೊಯ್ಯುವ, ಮಾರಾಟವಾಗದೆ ಅಂದಗೆಟ್ಟ ಪುಸ್ತಕಗಳನ್ನೇನು ಮಾಡಬೇಕೆನ್ನುವ ಸಮಸ್ಯೆಗೂ ಇದರಿಂದ ಪರಿಹಾರ ಸಾಧ್ಯ. ಹೇಗೂ ಅಲ್ಲಿ ಇದ್ದಕ್ಕಿದ್ದಂತೆ ಭಾರೀ ವ್ಯವಹಾರ ಸುರುವಾಗಲಿಕ್ಕಿಲ್ಲ. ಹಾಗಿರುತ್ತ ಕ್ರಮೇಣ ಬೆಳೆದು ಬರಬಹುದಾದ, ಸದ್ಯಕ್ಕೆ ಪ್ರಸ್ತುತ ವ್ಯಾಪಾರದೊಂದಿಗೇ ನಿರ್ವಹಿಸಬಹುದಾದ ಹೊಸ ವ್ಯವಸ್ಥೆಗೆ ಯಾಕೆ ತೆರೆದುಕೊಳ್ಳಬಾರದು?

ಪುಸ್ತಕಗಳ ಮಾರಾಟದಲ್ಲಿಯೂ ಅದೂ ಒಂದು ವ್ಯಾಪಾರ ಎಂದುಕೊಳ್ಳದೆ ಒಂದು ಆದರ್ಶ, ಮೌಲ್ಯ ಇತ್ಯಾದಿಗಳನ್ನಿಟ್ಟುಕೊಂಡು ನೀವದನ್ನು ಕರ್ತವ್ಯವೆಂಬಂತೆ, ಸೇವೆ ಎಂಬಂತೆ ನಡೆಸಿದ್ದೀರಿ, ಒಪ್ಪುತ್ತೇನೆ. ಆದರೆ ಆಧುನಿಕತೆಯೇ ಒಂದು ಕೆಡುಕು (evil) ಅಲ್ಲ. ಮುಂದಿನ ತಲೆಮಾರು ಮೊನ್ನೆ ಮೊನ್ನೆ ತನಕ ನೌಕರಿಗಾಗಿ ಕಛೇರಿಗಳಿಗೆ ಧಾವಿಸುವ, ಶಿಕ್ಷಣಕ್ಕಾಗಿ ಶಾಲೆ-ಕಾಲೇಜು ಎಂಬ ಕಟ್ಟಡಗಳತ್ತ ಓಡುವ ಮಂದಿ ಇದ್ದರಂತೆ, ಹಾಜರಿ ತೆಗೆಯುತ್ತಿದ್ದರಂತೆ, ತಡವಾದರೆ ಮೆಮೊ ಕೊಡುತ್ತಿದ್ದರಂತೆ ಎಂದೆಲ್ಲ ಹೇಳಿಕೊಂಡು ನಗುವ ದಿನಗಳು ದೂರವಿಲ್ಲ. ಇವತ್ತು ಎಲ್ಲವನ್ನೂ ಕುಳಿತಲ್ಲಿಂದಲೇ ಮಾಡಲು, ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಅದರ ಸಾಧಕ-ಬಾಧಕಗಳೇನೇ ಇರಲಿ, ಜಗತ್ತು ಚಲಿಸುತ್ತಿರುವುದು ಅತ್ತಲೇ. ವ್ಯಾಪಾರ ಗ್ರಾಹಕನನ್ನು ಕೇಂದ್ರದಲ್ಲಿಟ್ಟುಕೊಂಡೇ ನಡೆಯಬೇಕಾಗಿರುವುದರಿಂದ ಕಾಲಕ್ಕೆ ತಕ್ಕಂತೆ ವ್ಯಾಪಾರದ ಶೈಲಿ ಕೂಡಾ ಅಷ್ಟಿಷ್ಟು ಬದಲಾವಣೆಗಳಿಗೆ ತೆರೆದುಕೊಂಡಿದ್ದರೆ ತಪ್ಪಿಲ್ಲ. ವಸುಧೇಂದ್ರರಂಥವರು ತಮ್ಮ ಛಂದ ಪ್ರಕಾಶನದ ಪುಸ್ತಕಗಳು ಫ್ಲಿಪ್ ಕಾರ್ಟ್ ನವರ ವೆಬ್‌ಸೈಟಿನಲ್ಲಿ ಸಿಗುವಂತೆ ಮಾಡಿರುವುದು ಇಂಥದೇ ಒಂದು ಹೆಜ್ಜೆ ಎಂದು ತಿಳಿಯುತ್ತೇನೆ. ಬಹುಷಃ ಕನ್ನಡ ಪುಸ್ತಕಗಳದ್ದೇ ಅಂಥ ಒಂದು ವೆಬ್‌ಸೈಟ್ ಇದ್ದಿದ್ದರೆ ಅವರು ಇನ್ನೂ ಹೆಚ್ಚಿನ ಉತ್ಸಾಹದಿಂದ ಇನ್ನಷ್ಟು ಆಕರ್ಷಣೆಯನ್ನು ಒದಗಿಸಲು ಮುಂದಾಗುತ್ತಿದ್ದರು ಮತ್ತು ನಮ್ಮ ಪ್ರಕಾಶಕರಿಗೆ ಇಲ್ಲೂ ಒಂದು ಮಾದರಿಯಾಗುತ್ತಿದ್ದರೆಂದೇ ನನ್ನ ವಿಶ್ವಾಸ.

ನಾನು ಕಂಡಂತೆ ವ್ಯಾಪಾರೀ ಧೋರಣೆಯಿಟ್ಟುಕೊಂಡು ಮುಂದುವರಿದರೆ ಆನ್‌ಲೈನ್ ವ್ಯಾಪಾರಿಗಳು ನೀಡುವ ರಿಯಾಯಿತಿಯನ್ನು ಯಾವುದೇ ಊರಿನ ಸಣ್ಣಪುಟ್ಟ ವ್ಯಾಪಾರಿ ಕೂಡ ಉಪಯೋಗಿಸಿಕೊಳ್ಳುವುದು ಸಾಧ್ಯವಿದೆ. ಒಂದು ಪ್ರತಿಕೊಳ್ಳುವ ಗ್ರಾಹಕನಿಗೇ ಸಾಧ್ಯವಾಗುವುದು ವ್ಯಾಪಾರಿಗಳಿಗೇಕೆ ಸಾಧ್ಯವಾಗದು? ಒಂದು ಸಣ್ಣ ಉದಾಹರಣೆ ನೀಡುತ್ತೇನೆ. ಮೊನ್ನೆ ಮೊನ್ನೆ ನನ್ನ ಒಬ್ಬ ಸಹೋದ್ಯೋಗಿಗೆ ಸುಹಾನಿ ಶಾಹ ಬರೆದ “ಅನ್‌ಲೀಶ್ ಯುವರ್ ಹಿಡನ್ ಪವರ್ಸ್” ಕೃತಿ ತುರ್ತಾಗಿ ಬೇಕನಿಸಿತು. (ಪುಸ್ತಕಗಳು ತುರ್ತಾದ ಓದಿಗೆ ತುತ್ತಾಗದಿದ್ದರೂ ಬೇಕನಿಸುವುದೆಲ್ಲ ತುರ್ತಾಗಿಯೇ ಎನ್ನುವುದೊಂದು ವಿಶೇಷ!) ಈ ಕೃತಿಯ ಅಧಿಕೃತ ಬೆಲೆ ರೂ.150.00. ಒಂದು ವೆಬ್‌ಸೈಟ್ನುಲ್ಲಿ ಈ ಕೃತಿ ನೂರ ಮುವ್ವತ್ತೈದಕ್ಕೆ ಲಭ್ಯವಿತ್ತು, ಸಾಗಾಟ ಖರ್ಚು ಉಚಿತ. ಇನ್ನೊಂದರಲ್ಲಿ ತೊಂಬತ್ತೆಂಟು ರೂಪಾಯಿಗಳಿಗೆ ಇತ್ತು. ಮಂಗಳೂರಿನ ಯಾವ ಪುಸ್ತಕ ವ್ಯಾಪಾರಿಗಳಲ್ಲೂ ಈ ಕೃತಿಯ ಪ್ರತಿ ಲಭ್ಯವಿರಲಿಲ್ಲ. ಕೊನೆಗೆ ಆತ ಒಂದೆರಡು ದಿನ ತಡವಾದರೆ ಅಡ್ಡಿಯಿಲ್ಲ ಎನ್ನುತ್ತ ಆನ್‌ಲೈನ್ ಮೊರೆ ಹೋದ. ಹದಿನೆಂಟನೆಯ ತಾರೀಕಿಗೆ ಆರ್ಡರ್ ಮಾಡಿದರೆ ಇಪ್ಪತ್ತೊಂದರಂದು ಪೂರ್ವಾಹ್ನ ಹನ್ನೊಂದರ ಹೊತ್ತಿಗೆ ಪುಸ್ತಕ ಕೈ ತಲುಪಿತು. ಇನ್ನೂ ಹಣ ಪಾವತಿ ಮಾಡಿಲ್ಲ, ಅಂದರೆ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದ್ದು ಪಾವತಿ ಜೂನ್ ಇಪ್ಪತ್ತಕ್ಕೆ ಮಾಡಬೇಕಿದೆ. ಇದನ್ನು ಒಬ್ಬ ವ್ಯಾಪಾರಿ ಮಾಡುವುದು ಕಷ್ಟವಿತ್ತೆ ಎನ್ನುವುದು ನನ್ನ ಪ್ರಶ್ನೆ. ಗ್ರಾಹಕ ಬಯಸಿದ್ದು ಹೆಚ್ಚೆಂದರೆ ಶೇಕಡಾ ಹತ್ತು ರಿಯಾಯಿತಿ ಎನ್ನುವುದನ್ನು ಗಮನಿಸಿ ಇದನ್ನು ಹೇಳುತ್ತಿದ್ದೇನೆ.

ಇದೇನೂ ನೀವು ನಿಮ್ಮ ಲೇಖನದಲ್ಲಿ ಎತ್ತಿದ ಸಮಸ್ಯೆಗೆ ಪರಿಹಾರ ಎಂದು ಹೇಳುತ್ತಿಲ್ಲ. ಅದಕ್ಕೆ ಅಗತ್ಯವಾದ ಅನುಭವ, ಅದರ ಗಂಭೀರತೆಯ ಅರಿವು ನನಗಿಲ್ಲ. ವ್ಯಾಪಾರ ಮಾಡಿ ಹೇಳುತ್ತಿರುವುದಲ್ಲ ನಾನು, ಹೊರಗೆ ನಿಂತು ದೂರದ ಬೆಟ್ಟ ನುಣ್ಣಗೆ ಎನ್ನುವವನು ಎಂಬ ಅರಿವಿದೆ. ನನಗಿರುವುದೆಲ್ಲ ಪ್ರಾಮಾಣಿಕವಾದ ಕಳಕಳಿ ಅಷ್ಟೇ. ನನಗೆ ಗೊತ್ತು, ಇದು ಯಾವ ರೀತಿಯಲ್ಲೂ ವ್ಯವಸ್ಥೆಯನ್ನು ಸರಿಪಡಿಸಲಾರದು ಮತ್ತು ನಿಮ್ಮ concern ಇದ್ದಿದ್ದು ಸಣ್ಣಪುಟ್ಟ ಊರುಗಳ ಪುಸ್ತಕ ಮಾರಾಟಗಾರರ ಮೇಲೆ ಹೆಚ್ಚುತ್ತಿರುವ ಒತ್ತಡಗಳ ಬಗ್ಗೆ ಎಂದು. ತಿಮಿಂಗಿಲಗಳ ಮುಂದೆ ಸಣ್ಣಪುಟ್ಟ ಮೀನುಗಳ ಗೋಳು ಕೇಳುವವರಿಲ್ಲ ಎನ್ನುವುದು ನಿಜ. ಹಾಗೇನೆ ನಮ್ಮ ಸರಕಾರೀ ವ್ಯವಸ್ಥೆ ಸದಾ ಕಾಲ ಉಳ್ಳವರ ಮತ್ತು ಅವಕಾಶವಾದಿಗಳ ಅನುಕೂಲಕ್ಕೆ ತಕ್ಕಂತೆಯೇ ಇರುತ್ತವೆ ಅಥವಾ ಇರುವಂತೆ ಇವರ ಗುಂಪು ನೋಡಿಕೊಳ್ಳುತ್ತದೆ ಎನ್ನುವುದು ಕೂಡ ನಿಜ. ಆದರೂ ಸಣ್ಣ ಪುಟ್ಟ ಕನ್ನಡ ಪುಸ್ತಕ ವ್ಯಾಪಾರಿಗಳು, ಮಾಧ್ಯಮಿಕ-ಪ್ರೌಢಶಾಲೆಗಳು ಎಲ್ಲ ಒಂದಾಗಿ ಒಂದು ವ್ಯವಸ್ಥೆಯನ್ನು ರೂಪಿಸಿಕೊಳ್ಳುವುದು ಸಾಧ್ಯವಾದರೆ ಅದರಿಂದ ಪುಸ್ತಕಪ್ರಿಯರಿಗೂ ಪುಸ್ತಕ ಮಾರಾಟವನ್ನೇ ನೆಚ್ಚಿಕೊಂಡವರಿಗೂ ಅನುಕೂಲವಾದೀತು. ಇಂಥ ಒಂದು ಹೆಜ್ಜೆ ಪ್ರಸ್ತುತ ಸಂದರ್ಭದಲ್ಲಿ ತೀರ ಅನಿವಾರ್ಯವೂ ಹೌದು ಅನಿಸುತ್ತದೆ ನನಗೆ.

 

LEAVE A REPLY

 

‍ಲೇಖಕರು G

May 22, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಅಶೋಕವರ್ಧನ ಜಿ.ಎನ್

    ಪ್ರಿಯ ನರೇಂದ್ರ ಪೈ
    ಸಣ್ಣದು ಸುಂದರ, ವಿಕೇಂದ್ರೀಕರಣ, ವೃತ್ತಿಯಷ್ಟೇ ಪ್ರವೃತ್ತಿಪೋಷಣೆಗೆ ಬಿಡುವು ಇತ್ಯಾದಿಗಳನ್ನು ಬುದ್ಧಿಪೂರ್ವಕವಾಗಿ ನೆನಪಿಸಿಕೊಳ್ಳುತ್ತಾ ಆ ಕಾಲದಲ್ಲಿ, ಅಂದರೆ ಗಣಕ ಅಂತರ್ಜಾಲಗಳ ಬಳಕೆ ಇರದ ಕಾಲದಲ್ಲಿ, ನನಗೆ ವಿಪಿಪಿ ಮೂಲಕ ಅರ್ಥಾತ್ mail order business ಎಂದೇ ತೊಡಗಬಹುದಾಗಿದ್ದ ವ್ಯಾಪಾರ ವಿಸ್ತರಣೆಯನ್ನು ನಾಜೂಕಾಗಿ ನಿರಾಕರಿಸಿದವನು ನಾನು. ಬೆಂಗಳೂರಿನಿಂದ ನನ್ನ ಪ್ರಕಟಣೆಗೆ ಬೇಡಿಕೆ ಬಂದರೆ ನವಕರ್ನಾಟಕ, ಸಪ್ನಾ ನೋಡಿ ಎಂದೇ ತಳ್ಳುವಾಗ ನನಗೆ ಒಂದು ಪ್ರತಿಗಿಂತ ಒಂದು ಸಾರ್ವಕಾಲಿಕ ಪ್ರತಿನಿಧಿ ಮುಖ್ಯನಾಗಿ ಕಾಣುತ್ತಾನೆ. ಡಿವಿಕೆ ಮೂರ್ತಿಯವರಿಗೆ ಕನ್ನಡ ಪ್ರಪಂಚದಲ್ಲಿ ಇನ್ನೂರಕ್ಕೂ ಮಿಕ್ಕು ವಿತರಣಾ ಕೇಂದ್ರಗಳಿದ್ದರೆ ನನಗಿಂದು ಉಜಿರೆ, ಸುಳ್ಯ, ಪುತ್ತೂರು, ಉಡುಪಿ, ಕಾಸರಗೋಡು, ಮೂಡಬಿದ್ರೆ, ಉಪ್ಪಿನಂಗಡಿ, ಸುರತ್ಕಲ್, ಕುಂದಾಪುರ ಮಾತ್ರವೇಕೆ ಮಂಗಳೂರಿನಲ್ಲೂ (ಸರ್ವಾಧಿಪತ್ಯವನ್ನೇ ಬಯಸುವ ಭಾರೀ, ಹಿರಿಯ ಪುಸ್ತಕ ಮಳಿಗೆಗಳವರೂ ಸೇರಿದಂತೆ) ಎಲ್ಲ ಪುಸ್ತಕ ವ್ಯಾಪಾರಿಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬೆಂಬಲವನ್ನೇ ಕೊಡುತ್ತಿದ್ದಾರೆ. ಅವರು ನನ್ನನ್ನು ಒಪ್ಪಿಕೊಂಡದ್ದಕ್ಕಿಂಥ ಎಷ್ಟೆಷ್ಟೋ ಪಾಲು ದೊಡ್ಡದಾಗಿ ಸ್ವತಂತ್ರರೂ ಹೌದು ಎನ್ನುವುದೇ ಈ ವಿಶ್ವಾಸದ ಗುಟ್ಟು.

    ಅಂತರ್ಜಾಲದಲ್ಲಿ ಪಟ್ಟಿ, ಪ್ರಚಾರಸಾಹಿತ್ಯ, ಕಾರ್ಡುಗಳ ಮೂಲಕ ಪಾವತಿ, ಕೊರಿಯರ್ ಮೂಲಕ ಸಾಗಣೆ ವ್ಯವಸ್ಥೆಗಳೆಲ್ಲಾ ಅಷ್ಟಷ್ಟು ಜನವಿರೋಧೀ ಓದು ವಿರೋಧೀ (ವ್ಯಾಯಾಮ ವಿರೋಧೀ ಕೂಡಾ 🙂 ) ವ್ಯವಸ್ಥೆಯೆಂದೇ ನನ್ನ ಅಭಿಪ್ರಾಯ. ಪುಸ್ತಕ ಪ್ರಕಾಶನದ ಶ್ರೀರಾಮ್ ಮೊನ್ನೆ ಭೇಟಿಯಾಗಿದ್ದಾಗ “ತೇಜಸ್ವಿ ಬೆಂಗಳೂರಿನಲ್ಲಿ ಚಿಕಿತ್ಸೆಪಡೆಯುತ್ತಿದ್ದ ಕಾಲದಲ್ಲಿ ಈ ಅಕ್ಷರ, ಅಶೋಕ್, (ನವಕರ್ನಾಟಕದ) ರಾಜಾರಾಮ್ ಇಂಥವರನ್ನೆಲ್ಲಾ ಸೇರಿಸಿ ನಾವೊಂದು ಜಾಲ ಮಾಡಬೇಕ್ರೀ” ಎನ್ನುತ್ತಿದ್ದರೆಂದು ನನಗೆ ತಿಳಿಸಿದರು. ಬಹುಶಃ ಅವರ ಕಲ್ಪನೆ ನನ್ನ ಯೋಚನೆಯ ಆಸುಪಾಸಿನಲ್ಲೇ ಇದ್ದಿರಬಹುದು. ಇಂದು ಕನ್ನಡದಲ್ಲಿ ಪುಸ್ತಕದ ಯೋಗ್ಯತೆ, ರಿಯಾಯ್ತಿ, ಸುಲಭ ಪರಿಚಯ ಮತ್ತು ಸಂಗ್ರಹ ವ್ಯವಸ್ಥೆಯ ಅಚ್ಚುಕಟ್ಟುತನ ಯಾವುದೂ ಮುಖ್ಯ ಅಲ್ಲ. ಕನ್ನಡ ಓದುವ ಮನಸ್ಸು ಮತ್ತದನ್ನು ಉತ್ತೇಜಿಸುವ ಪರಿಸರದ್ದೇ ನಿಜವಾದ ಕೊರತೆ.

    ಆಧುನಿಕತೆ ಇರುವುದನ್ನು ಬಲಪಡಿಸುವುದಾದರೆ ಸಂತೋಷ. (ಉದಾಹರಣೆಗೆ ಈ ಬ್ಲಾಗ್!) ಕುಟ್ಟಿ ಹೊಸತನ್ನೇ ಸ್ಥಾಪಿಸುವುದಾದರೆ ನಾನಿಲ್ಲ. ನೀವು ಕೊಟ್ಟ ಜೈಕೋ ಪ್ರಕಟಣೆಯ ಉದಾಹರಣೆ: ನಿಮ್ಮವರು ತರಿಸಿಕೊಂಡದ್ದು, ರಿಯಾಯ್ತಿ ಪಡೆದದ್ದು ಖಂಡಿತಾ ಸರಿ. ಆದರೆ ಬೆಂಗಳೂರಿನಲ್ಲೇ ಸ್ವಂತ ಶಾಖೆ ಇರುವ ಜೈಕೋದವರು ಕನಿಷ್ಠ ಇಂಥದ್ದರ ಮಾಹಿತಿಯಾದರೂ ನಮ್ಮಲ್ಲಿ ಸುಲಭ ಲಭ್ಯವಾಗುವಂತೆ ಮಾಡಬೇಡವಿತ್ತೇ? ತಿಂಗಳು ತಿಂಗಳು ಮಂಗಳೂರಿಗೆ ಪ್ರತಿನಿಧಿ ಅಟ್ಟಿ (ನಾನೇ ಆಗಬೇಕೆಂದಿಲ್ಲ. ಇನ್ಯಾರೇ ಮಂಗಳೂರ ಪುಸ್ತಕ ವ್ಯಾಪಾರಿಯಲ್ಲಿಗೆ), ಬೇಡಿಕೆ ಪಡೆದು, ವಹಿವಾಟು ಗಟ್ಟಿ ಮಾಡಿಕೊಂಡ ನೆನಪು ಸರಿಯಿದ್ದರೆ ಆ ಒಂದು ಪುಸ್ತಕವನ್ನು ಅವರ ಮೂಲಕ ದಾಟಿಸುವ ವ್ಯವಸ್ಥೆ ಮಾಡಬೇಕಿತ್ತು.

    ಸರಿಯಾಗಿ ಇರುವುದಕ್ಕೆ ಅಭಿನಂದನೆ ಯಾಕೆ? ಆದರೂ ನಿಮ್ಮ ಒಳ್ಳೆಯ ಭಾವನೆಗಳಿಗೆ ಕೃತಜ್ಞ.
    ಅಶೋಕವರ್ಧನ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: