ಎಚ್ಚೆಸ್ವಿ ಅನಾತ್ಮ ಕಥನ: ಅಂಗೈ ಗದ್ದೆಯೊಳಗೊಂದು ಮುಂಗೈ ಅರಗಿಳಿ….

(ಅನಾತ್ಮಕಥನ-ಎಂಟು)

ಉದ್ದಂಡಿಯ ಹೆಸರು ಬೇರೇನೇ ಇದೆ. ಆದರೆ ಆರೂವರೆ ಅಡಿ ಎತ್ತರ ಇದ್ದ ಆ ಆಸಾಮಿಯನ್ನು ಚಿಕ್ಕಂದಿನಲ್ಲಿ ನಾವೆಲ್ಲಾ ಉದ್ದಂಡಿಯೆಂದೇ ಕರೆಯುತ್ತಿದ್ದೆವು. ಉದ್ದಂಡಿ ನಮಗೆ ದೂರದ ಸಂಬಂಧಿಯೂ ಆಗಬೇಕಾದುದರಿಂದ ಆಗಾಗ ನಮ್ಮ ಊರಿಗೆ ಬಂದು ಮಾತಾಡಿಸಿಕೊಂಡು ಹೋಗುತ್ತಾ ಇದ್ದರು. ನನಗೆ ಗೊತ್ತಿರುವಂತೆ ಉದ್ದಂಡಿಗೆ ಇಂಥದೇ ಎಂದು ಹೇಳಿಕೊಳ್ಳಬಹುದಾದ ಯಾವ ಕೆಲಸವೂ ಇರಲಿಲ್ಲ. ಯಾರು ಏನೇ ಹೇಳಿದರೂ ಅವರು ಆ ಕೆಲಸ ಮಾಡಿಸಿಕೊಡುತ್ತಿದ್ದರು. ಬೇರೆಯವರ ಕೆಲಸವನ್ನು ಮುಗಿಸಿಕೊಡುವುದೇ ಅವರ ಕೆಲಸ ಎಂದು ಬೇಕಾದರೆ ಇಟ್ಟುಕೊಳ್ಳಿ. ನಮ್ಮ ಅಜ್ಜ ತೀರಿಹೋದ ಮೇಲೆ ಅವರ ಶಾನುಭೋಕೆ ಇನಾಮತಿ ಹೊಲಗಳನ್ನು ನನ್ನ ಹೆಸರಿಗೆ ಮಾಡಿಸಿಕೊಡುತ್ತೇನೆ ಎಂದು ಉದ್ದಂಡಿ ತಿಂಗಳುಗಟ್ಟಲೆ ನಮ್ಮ ಮನೆಯಲ್ಲೇ ಉಳಿದಿದ್ದು ಕೊನೆಗೆ ಆ ಕೆಲಸ ಮಾಡಿಕೊಟ್ಟ ವಿಷಯ ಇಲ್ಲಿ ನೆನಪಾಗುತ್ತಿದೆ. ತಾಲ್ಲೂಕು ಕಚೇರಿಗೆ ಹೋಗಿ ಅಲ್ಲಿ ಯಾರು ಐನಾತಿ ಗುಮಾಸ್ತ ಎಂಬುದನ್ನು ಪತ್ತೆ ಮಾಡಿ ಅವರನ್ನು ಬುಟ್ಟಿಗೆ ಹಾಕಿಕೊಳ್ಳುವುದರಲ್ಲಿ ಅವರು ಪರಿಣತರಾಗಿದ್ದರು. ಹೀಗೆ ಅವರ ಇವರ ಅದೂ ಇದು ಕೆಲಸ ಮಾಡಿಸಿಕೊಡುತ್ತಾ ತಮ್ಮ ದೊಡ್ಡ ಸಂಸಾರವನ್ನು ಉದ್ದಂಡಿ ನಿರಾಯಾಸವಾಗಿ ನಿಭಾಯಿಸುತ್ತಾ ಇದ್ದರು.

ನಮ್ಮ ಈ ಉದ್ದಂಡಿಯವರ ಮಹಾನ್ ಸಾಹಸವೊಂದನ್ನು ತಮ್ಮಲ್ಲಿ ಅರಿಕೆ ಮಾಡಿಕೊಳ್ಳುವ ಉದ್ದೇಶದಿಂದಲೇ ನಾನೀಗ ಈ ಬರವಣಿಗೆ ಪ್ರಾರಂಭಿಸಿದ್ದೇನೆ. ಅದೆಲ್ಲಾ ಒಂದು ಆಕಸ್ಮಿಕದ ಹಾಗೇ ಸಂಭವಿಸಿದ ಘಟನಾವಳಿ. ಆವತ್ತು ಮಧ್ಯಾಹ್ನ ಉದ್ದಂಡಿ ಉಷ್ಷಪ್ಪಾ ಎಂದು ನಿಟ್ಟುಸಿರಿಡುತ್ತಾ ನಮ್ಮ ಮನೆಗೆ ಬಂದಾಗ ಮಧ್ಯಾಹ್ನ ಮೂರುಗಂಟೆಯ ಸಮಯ. ಅತ್ತೇ…ಒಲೆಯ ಮುಂದೆ ಏನಾದರೂ ಇದೆಯಾ…ಮೊದಲು ಹೊಟ್ಟೆಗೆ ಏನಾದರೂ ಹಾಕಿದರೆ ಬದುಕಿಕೊಳ್ಳುತ್ತೇನೆ…ಎನ್ನುತ್ತಲೇ ಉದ್ದಂಡಿ ಮಾತು ಶುರುಮಾಡಿದ್ದು. ಮಧ್ಯಾಹ್ನದ ಹೊತ್ತಲ್ಲಿ ಹಸಿದ ಬ್ರಾಹ್ಮಣ ಮನೆಗೆ ಬಂದಾಗ ಊಟಕ್ಕೆ ಆತನನ್ನು ಏಳಿಸದಿರುವುದು ಸಾಧ್ಯವೇ? ನಮ್ಮ ಅಜ್ಜಿ ಹತ್ತೇ ನಿಮಿಷದಲ್ಲಿ ಅನ್ನ ಮಾಡಿಬಿಡ್ತೇನೆ…ಕೂತ್ಕಾ…ಎಂದು ಹೇಳಿ ಲಗುಬಗೆಯಿಂದ ಮತ್ತೆ ಒಲೆ ಹಚ್ಚಿ ಒಂದು ತಪ್ಪಲೆ ಅನ್ನ ಬೇಯಿಸಲಿಕ್ಕೆ ಇಟ್ಟೇಬಿಟ್ಟರು. ಅವಸರದಲ್ಲಿ ನೀರು ಸ್ವಲ್ಪ ಜಾಸ್ತಿ ಆಗಿ ಅನ್ನ ಕೊತ ಕೊತ ಕುದಿಯುತ್ತಾ ಇದೆ. ಅಜ್ಜಿ ಧಾವಂತದಿಂದ ಯಾರಾದರೂ ಬಂದಾಗಲೇ ಹಾಳಾದದ್ದು ಹೀಗಾಗೋದು ಎಂದು ಗೊಣಗುತ್ತಾ, ಗಂಜಿ ಸೋಸಿ, ಅನ್ನದ ಮೇಲೆ ನೀರು ಚುಮುಕಿಸಿಸಿ, ಸಣ್ಣುರಿಯ ಮೇಲೆ ಸ್ವಲ್ಪ ಹೊತ್ತು ಉಂಗೈಯಲಿಕ್ಕೆ ಬಿಟ್ಟು, ಅಂತೂ ಅನ್ನ ಅನ್ನೋದು ಆಯಿತು ಎಂದು ನಿಟ್ಟುಸಿರುಬಿಡುತ್ತಾ ಒಲೆಯಿಂದ ಕೆಳಗಿಳಿಸಿ, ಉದ್ದಂಡಿ…ಕಾಲು ತೊಳಕೊಂಡು ಊಟಕ್ಕೆ ಬಾರಪ್ಪಾ…ಅಂತ ಕೂಗು ಹಾಕಿದರು.

ಉದ್ದಂಡಿಗೆ ಅಡುಗೇ ಮನೆಯಲ್ಲೇ ಎಲೆ ಹಾಕಿದ್ದರು. ಉದ್ದಂಡಿ ನನಗೆ ಕಿತ್ತಲೆತೊಳೆ ಪೆಪ್ಪರುಮೆಂಟು ಕೊಟ್ಟಿದ್ದರಿಂದ ಇನ್ನೂ ಅವರ ಬಳಿ ಅವು ಇರಬಹುದು ಎಂಬ ಆಸೆಯಿಂದ ನಾನೂ ಅವರ ಪಕ್ಕ ಕೂತಿದ್ದೆ. ಉದ್ದಂಡಿ ಬಹಾಳ ಎತ್ತರ ಇದ್ದುದ್ದರಿಂದ ಅವರ ಬೆನ್ನು ಕೊಷ್ಚನ್ ಮಾರ್ಕ್ ಥರ ಬಾಗಿತ್ತು. ಎಣ್ಣೆಗೆಂಪು ಬಣ್ಣದ ಮನುಷ್ಯ. ಊಟಮಾಡುವಾಗ ಅವರು ತುಂಬ ಬೆವರುತ್ತಿದ್ದುದರಿಂದ ಒಂದು ಟವೆಲ್ಲು ತೊಡೆಯ ಮೇಲೆ ಹಾಕಿಕೊಂಡೇ ಕುಳಿತುಕೊಳ್ಳುತ್ತಿದ್ದರು.ಅವರು ಆ ಕಾಲದಲ್ಲಿ ಹೆಂಗಸರು ಕುಳಿತುಕೊಳ್ಳುತ್ತಿದ್ದ ಹಾಗೆ ಒಂದು ಕಾಲು ಮಡಿಸಿ ನೆಲಕ್ಕೆ ತಾಗಿಸಿ, ಇನ್ನೊಂದು ಕಾಲನ್ನು ಮಡಿಸಿ ತಮ್ಮ ದೇಹಕ್ಕೆ ಸಮಾನಾಂತರವಾಗಿ ಇಟ್ಟುಕೊಂಡು ಕುಳಿತುಕೊಳ್ಳುತ್ತಾ ಇದ್ದರು. ಜೊತೆಗೆ ಎಡಗೈಯನ್ನು ನೆಲದಮೇಲೆ ಊರಿಕೊಂಡು ಬಲಗೈಯಲ್ಲಿ ಅನ್ನ ಹುಳಿ ಉಂಡೆ ಮಾಡಿಕೊಂಡು ಗಪ ಗಪ ಗಪ ತಿನ್ನುತ್ತಾ ಇದ್ದರು. ಲೋಟದಲ್ಲಿ ನೀರು ಕುಡಿಯದೆ ಚೊಂಬನ್ನೇ ಎತ್ತಿ ಗಟ ಗಟ ಬಾಯಿಗೆ ಹೊಯ್ದುಕೊಳ್ಳುವುದು ಅವರ ಅಭ್ಯಾಸವಾಗಿತ್ತು. ಹಾಗೆ ನೀರು ಕುಡಿಯುವಾಗ ಅವರ ಗಂಟಲಲ್ಲಿ ಇಷ್ಟು ಉದ್ದಕ್ಕೆ ಚಾಚಿಕೊಂಡಿದ್ದ ಗಂಟು ಮೇಲಕ್ಕೆ ಕೆಳಕ್ಕೆ ಆಡುತ್ತಾ ಗಳ ಗಳ ಸದ್ದಾಗುತ್ತಿತ್ತು.

ಉದ್ದಂಡಿ ಊಟಮಾಡುತ್ತಾ ಮಾಡುತ್ತಾ -ಅತ್ತೇ ನೀವೇನು ಅಕ್ಕಿಯನ್ನು ಕೊಂಡು ತಿನ್ನೋದೋ, ಗದ್ದೆಯಲ್ಲಿ ಬರತ್ತೋ? ಕೇಳಿದರು. ನಮ್ಮ ಅಜ್ಜಿ, ಎಲ್ಲಿ ಗದ್ದೆಯಪ್ಪಾ…? ನಿಮ್ಮ ಮಾವ ಬದುಕಿದ್ದಾಗ ಗದ್ದೆಯನ್ನು ರೈತರಿಗೆ ಹದಿನೈದು ವರ್ಷಕ್ಕೆ ಬರೆದುಕೊಟ್ಟು ಐದು ನೂರು ರೂಪಾಯಿ ಇಸ್ಕೊಂಡಿದ್ದರಂತೆ. ಅದು ಬಿಡುಗಡೆ ಆಗೋಕೆ ಇನ್ನೂ ಹತ್ತು ವರ್ಷ ಆಗಬೇಕು…ನಾಗರಕಲ್ಲಲ್ಲಿ ರಾಗಿ ಬೆಳೆಯತ್ತೆ ಅಷ್ಟೆ…ಅದೂ ಮೂರು ಪಲ್ಲ ಕಟ್ ಕಾಳಿಗೆ ಕೊಟ್ಟಿದ್ದೀವಿ…ಮನೆ ಪೂರ್ತಾ ಆಗತ್ತೆ…ಅಕ್ಕಿ ಕೊಂಡು ತಿನ್ನದೆ…ಎಂದು ಉದ್ಗಾರ ತೆಗೆದರು. ಕೊಂಡು ತಿನ್ನದು ಅಂದರೆ ಕಷ್ಟ ಕಣತ್ತೆ…ಎಷ್ಟೂ ಅಂತ ಕೊಳ್ಳುತ್ತೀರಿ…ಜನ ಬಂದು ಹೋಗೋ ಮನೆ…ಇದಕ್ಕೆ ಏನಾರಾ ಖಾಯಂ ವ್ಯವಸ್ಥೆ ಮಾಡಿಕೊಳ್ಳೋದು ಒಳ್ಳೇದು…

ಅಲ್ಲಿಗೆ ಮಾತು ಮುಗಿಯಿತು. ಚನ್ನಗಿರಿ ಕಚೇರಿಯಲ್ಲಿ ಕೆಪಿ ರಾಯರ ಕೆಲಸ ಇದೆ ಹೋಗಿ ಬರ್ತೀನಿ…ರಾತ್ರಿ ಊಟಕ್ಕೆ ಇಲ್ಲಿಗೇ ಬರ್ತೀನಿ…ನಿಮ್ಮ ಕೈಯಲ್ಲಿ ಮುದ್ದೆ ಕಡ್ಳೇಕಾಯಿ ಗೊಜ್ಜು ಚೆನ್ನಾಗಾಗತ್ತೆ…ಅದನ್ನೇ ಮಾಡಿಬಿಡಿ…ಅಂತ ಉದ್ದಂಡಿ ತಾಖೀತು ಮಾಡಿ ಆ ಉರಿಬಿಸಿಲಲ್ಲಿ ನಡಕೊಂಡೇ ಚನ್ನಗಿರಿಗೆ ಹೋಗಿಬಿಟ್ಟರು. ಪಾಪ! ಭಾಳ ಕಷ್ಟವಾನಿ ಅಂತ ಅಜ್ಜಿ ಅವ ಹೋಗುತ್ತಿದ್ದುದ ನೋಡುತ್ತಾ ನಿಟ್ಟುಸಿರುಬಿಟ್ಟರು. ರಾತ್ರಿ ಉದ್ದಂಡಿ ಮುದ್ದೆ ಗೊಜ್ಜಿನ ಊಟ ಮುಗಿಸಿ, ನಾನು ಜಗಲೀ ಮ್ಯಾಲೇ ಮಲಗತೀನಿ ಅಂದರು. ಅವರ ಉದ್ದಕ್ಕೆ ಸಾಕಾಗುವಂಥ ಕಡ್ಡೀಚಾಪೆ ಇರಲಿಲ್ಲ. ಇನ್ನೊಂದು ತುಂಡು ಚಾಪೆ ಕೊಡಿ..ಎರಡೂ ಸೇರಿಸಿ ಹಾಸಿಕೊಳ್ತೀನಿ ಎಂದು ಉದ್ದಂಡಿ ನಗುತ್ತಾ ಹೇಳಿದರು. ಅತ್ತೇ ನನ್ನ ಜೋಡು ಮಾತ್ರ ಒಳಗೇ ಇರಲಿ…ಯಾಕಂದ್ರೆ, ನನ್ನ ಸೈಜುದು ಅಂಗಡಿಲಿ ಸಿಗಲ್ಲ…ನಾನು ನಮ್ಮೂರಲ್ಲಿ ಆರ್ಡರ್ ಕೊಟ್ಟೇ ಮಾಡಿಸದು…

ನಾನು ಉದ್ದಂಡಿಯ ಚಪ್ಪಲಿಗಳನ್ನ ಆಶ್ಚರ್ಯಭರಿತನಾಗಿ ನೋಡಿದೆ. ಅದನ್ನು ಭರ್ತಿ ಮಾಡಬೇಕೆಂದರೆ ನನ್ನ ಪಾದ ಮೂರು ಸಾರಿ ತೂರಿಸ ಬೇಕಿತ್ತು! ಅಷ್ಟೇ! ಅತ್ತೇ ನಿಮ್ಮ ಊಟ ಆದ ಮೇಲೆ ಇಲ್ಲೇ ಎಲೆ ಅಡಕೆ ತಗಂಡು ಬನ್ನಿ…ಎಲೆ ಅಡಕೆ ಹಾಕಮಣ ಅಂದರು ಉದ್ದಂಡಿ. ಉದ್ದಂಡಿ ಮತ್ತು ಅಜ್ಜಿ ಎಲೆ ಅಡಕೆ ಹಾಕಿಕೊಳ್ಳುತ್ತಾ ಕೂತಾಗ ಉದ್ದಂಡಿ, ಅತ್ತೇ ನಿಮ್ಮ ಅಕ್ಕಿ ಸಮಸ್ಯೆ ನನ್ನ ತಲೆ ಕೊರೀತಾ ಇದೆ…ನೀವಿದಕ್ಕೆ ಏನಾರ ಖಾಯಮ್ ಉಪಾಯ ಮಾಡಿಕೊಳ್ಳಲೇ ಬೇಕು….ನೋಡ್ರಿ…ನಮ್ಮೂರಲ್ಲಿ ಸೋವಿ ದರದ ಮ್ಯಾಲೆ ಗದ್ದೆ ಸಿಕ್ತಾವೆ…ಒಂದು ಎಕರೆ ತಗಳ್ಳಿ ಅಷ್ಟೆ…ಇಪ್ಪತ್ತು ಪಲ್ಲ ದಿವಿನಾದ ಭತ್ತ ಬರ್ತವೆ…ಒಂದು ವರ್ಷ ನಿಶ್ಚಿಂತೆಯಿಂದ ಊಟ ಮಾಡಬಹುದು…ನಮ್ಮಂಥ ಬ್ರಾಹ್ಮಣರು ಬಂದ್ರೆ ಅವರಿಗೂ ಹೊಟ್ಟೆ ತುಂಬ ಅನ್ನ ಹಾಕಬಹುದು…ಒಬ್ಬನೇ ಮೊಮ್ಮಗ ನಿಮಗೆ…ಅವನು ಮುದ್ದೆ ತಿಂದು ಯಾಕೆ ಬೆಳೀಬೇಕು ಹೇಳ್ರಿ? ದಿನಾ ಮುದ್ದೆ ತಿಂದರೆ ಅವನ ತಲೆಗೆ ಇಂಗ್ಲಿಷ್ ಹತ್ತೀತಾ…? ಎಂದಾಗ ನಮ್ಮ ಅಜ್ಜಿ ಆಶ್ಚರ್ಯ ಪಡತ್ತಾ, ಅದೆಲ್ಲಾ ಆಗಿ ಹೋಗೋ ಮಾತೇನಪ್ಪಾ…ಒಂದು ಎಕರೆ ಅಂದರೂ ಸಾವಿರಾರು ರುಪಾಯಿ ಮಾತು…ಸುಮ್ಮನೆ ಆಗತ್ತಾ..?ಅಂದರು. ಅದೇ ಅದೇ ಮತ್ತೆ ನಾನು ಬ್ಯಾಡ ಅನ್ನದು…ಎಲ್ಲಾ ದುಡ್ಡು ಕೈಯಲ್ಲಿ ಇಟಕಂಡೇ ವ್ಯವಹಾರ ಮಾಡ್ತಾರಾ? ಚಾಟಿ ಇಲ್ಲದೆ ಬುಗುರಿ ಆಡಿಸದ ಕಲೀ ಬೇಕತ್ತೆ…ಅಡ್ವಾನ್ಸ್ ಅಂತ ಒಂದು ಐದು ಸಾವಿರ ಕೊಡದಪ್ಪ…ಉಳಿದಿದ್ದು ಕಂತಿನ ಮ್ಯಾಲೆ ಕಟ್ಟದು…

ಕಂತಿನ ಮ್ಯಾಲೆ ಕಟ್ಟಕ್ಕಾದರೂ ದುಡ್ಡು ಬೇಕಲ್ಲಪ್ಪಾ…?

ನಾನದಕ್ಕೆಲ್ಲಾ ಪ್ಲಾನ್ ಮಾಡಿದೀನಿ…ನಿಮಗೆ ಇಪ್ಪತ್ತು ಪಲ್ಲ ಭತ್ತ ಅಂತ ಕಟ್ಕಾಳು ಮಾಡಿಕೊಳ್ಳದು…ಅದರಲ್ಲಿ ಹತ್ತು ಪಲ್ಲ ಮಾತ್ರ ತಗಂಡು, ಇನ್ನು ಹತ್ತುಪಲ್ಲದ ರೊಕ್ಕ ಬಾಕಿ ಕಡೆ ಕಟ್ಕಳಪ್ಪಾ ಅನ್ನದು…ಐದು ವರ್ಷದಾಗೆ ನಿಮ್ಮ ಬಾಕಿ ತೀರೇ ಹೋಗ್ತದೆ….

“ಅಡ್ವಾನ್ಸ್ಗೆ ಐದು ಸಾವಿರ ನೀನು ಕೊಡ್ತೀಯಾ?”-ಎಂದರು ಅಜ್ಜಿ ನಗುತ್ತಾ.

ನೀವು ಕೇಳಿದರೆ ಇಲ್ಲಾ ಅಂತೀನಾ…ಆದರೆ ನಿಮಗಂಥ ದುಸ್ಥಿತಿ ಏನದೆ ಅತ್ತೇ? ನಿಮ್ಮ ನಾಗರಕಲ್ಲು ಹೊಲ ಹತ್ತು ವರ್ಷಕ್ಕೆ ಯಾರಿಗಾರ ಬರ್ಕೊಡದು…ಐದು ಸಾವಿರ ಇಸ್ಕಳ್ಳದು….ನೀವು ರಾಗಿ ತಿನ್ನದು ತಪ್ತದೆ…ಐದು ವರ್ಷಕ್ಕೆ ಗದ್ದೇನೂ ಕೈಗೆ ಬರತ್ತೆ…ಹತ್ತು ವರ್ಷಕ್ಕೆ ಹೊಲಾನು ನಿಮ್ದಾಗತ್ತೆ….ವರ್ಷಾ ವರ್ಷಾ ಹೊಟ್ಟೆತುಂಬ ಅನ್ನ ತಿಂದಕಂಡು ರಾಮ ಕೃಷ್ಣ ಅಂತ ಆರಾಮಾಗಿರಬಹುದಲ್ಲಾ? ಯೋಚನೇ ಮಾಡ್ರಿ…ಎಂದು ಅಜ್ಜಿಗೆ ಯೋಚನೆ ಮಾಡಲು ಹಚ್ಚಿ ಉದ್ದಂಡಿ ತಲೆ ತುಂಬ ಮುಸುಕು ಹಾಕಿಕೊಂಡು ಕಾಲ ಮೇಲೆ ಕಾಲು ಹಾಕಿ, ಹೆಜ್ಜೆ ಅಲ್ಲಾಡಿಸುತ್ತಾ ಅರಾಮಾಗಿ ಮಲಗಿಬಿಟ್ಟರು. ಅಜ್ಜಿ ಅಮ್ಮ ರಾತ್ರಿ ಎಲ್ಲಾ ಅಳೆದು ಸುರಿದು ಮಾಡಿ ಒಂದು ಕೈ ನೋಡೇಬಿಡೋದು ಅಂದುಕೊಂಡು ಮಲಗಿದ್ದಾಯಿತು.

ಉದ್ದಂಡಿ ಬೆಳಿಗ್ಗೆ ಊರಿಗೆ ಹೊರಟೋನು, ನೋಡಿ…ನಾನು ಹೇಳಿದ್ದ ಮರೀ ಬೇಡಿ ಎಂದು ಮತ್ತೆ ತಾಖೀತು ಮಾಡೋದು ಮರೀಲಿಲ್ಲ.

ನೋಡು…ಸೋವಿ ರೇಟಲ್ಲಿ ಒಂದು ಎಕರೆ ಗದ್ದೆ ಸಿಕ್ಕೊಹಂಗಿದ್ರೆ…ಯಾವುದಕ್ಕೂ ಕಾಗದ ಬರೀ ಅಂದರು ನಮ್ಮಜ್ಜಿ. ಭತ್ತದ ಗದ್ದೆ ವಿಷಯ ನಮಗೆ ಮರೆತೇ ಹೋಗಿತ್ತು. ಉದ್ದಂಡಿ ನಮ್ಮಲ್ಲಿಗೆ ಬಂದು ಹೋಗಿ ಸುಮಾರು ಮೂರು ತಿಂಗಳು ಕಳೆದು ಹೋಗಿವೆ. ಒಂದು ದಿನ ಇದ್ದಕ್ಕಿದ್ದಂತೆ ಒಂದು ಕಾಗದ ಬಂತು ಅವರಿಂದ. ಗದ್ದೆ ಸಿಕ್ಕೊಹಂಗಿದೆ. ತಕ್ಷಣ ನೋಡಕ್ಕೆ ಬನ್ನಿ ಅಂತ. ಬರೀ ನೋಡದು ತಾನೇ…ಅದಕ್ಕೇನು ದುಡ್ಡುಕೊಡಬೇಕಾಗಿಲ್ಲವಲ್ಲ…ನಾನು ನೋಡ್ಕಂಡು ಬರ್ತೀನಿ ಅಂದರು ಅಜ್ಜಿ. ಬಸವನ ಹಿಂದೆ ಬಾಲದ ಹಂಗೆ ಜತೆಗೆ ನಾನೂ ಹೊರಟೆ. ವಿಷಯ ಯಾರ ಮುಂದೂ ಬಾಯಿಬಿಡಬೇಡ ಅಂತ ಅಜ್ಜಿ ಅಮ್ಮನಿಗೆ ಹೇಳಿದ್ದಾದ ಮ್ಯಾಲೆ ನಾನೂ ಅಜ್ಜಿ ಹೊಸದುರ್ಗದ ಬಸ್ಸು ಹತ್ತಿದೆವು.

ಅಲಸಂದ್ರ ಅಂತ ಉದ್ದಂಡಿ ಇದ್ದ ಊರು. ಹೊಸದುರ್ಗದಿಂದ ಒಂದು ಲಟೂರಿ ಬಸ್ಸು ಹಿಡಿದು ನಾವು ಅಲಸಂದ್ರ ತಲಪಿದಾಗ ಸೂರ್ಯ ಇಳಿಮುಖಿಯಾಗಿದ್ದ. ಹಿಂದೆ ಯಾವಾಗಲೋ ಬಂದಿದ್ದ ನೆನಪು. ಅಜ್ಜಿ ಉದ್ದಂಡಿ ಮನೆಗೆ ನನ್ನನ್ನೂ ಕಟ್ಟಿಕೊಂಡು ಬಂದಾಗ ಉದ್ದಂಡಿ ಜಗಲೀಮ್ಯಾಲೆ ಬೀಡಿ ಸೇದುತ್ತಾ ಕೂತಿದ್ದ. ಎಲ…ಎಲ…ಎಲಾ….ಅತ್ತೆ ಬಂದ್ರಲ್ಲಪ್ಪಾ…ಲೇ ಶಂಕ್ರೀ…ಅತ್ತೆ ಬಂದಿದಾರೆ ಕಣೇ ಅಂತ ಉದ್ದಂಡಿ ಜೋರಾಗಿ ಕೂಗು ಹಾಕಿದ್ದೂ ಆಯಿತು…

ಉದ್ದಂಡಿಯದು ಚಿಕ್ಕ ಮನೆ. ಆದರೆ ಅವರ ಹೆಂಡತಿ ತುಂಬ ಅಭಿಮಾನದ ಹೆಣ್ಣುಮಗಳು. ರಾತ್ರಿ ಒಳ್ಳೇ ಹೂವಿನಂಥ ಅನ್ನ ಮಾಡಿ ಹೊಟ್ಟೆ ತುಂಬ ಬಡಿಸಿದಳು. ಕೊಯ್ಮತ್ತೂರು ಸಣ್ಣ ಅತ್ತೇ…ನಮ್ಮ ಗದ್ದೇದೆ ಅಂತ ಉದ್ದಂಡಿ ಹುಬ್ಬು ಎಗರಿಸಿದಾಗ , ಎಷ್ಟು ಎಕರೆ ಗದ್ದೆ ಇದೆಯಪ್ಪಾ ನಿಂದು ಅಂದಳು ನಮ್ಮ ಅಜ್ಜಿ. ಅಯ್ಯೋ ನೀವೊಬ್ರು…ನಿಮ್ಮ ಅಳಿಯ ಏನ್ ಜಮೀನ್ದಾರ ಅಂದುಕೊಂಡಿರಾ…ಒಂದು ಎಕರೆ ಕೂಡ ಇಲ್ಲ…ಮನೀ ಪೂರ್ತ ಆಗತದೆ ಬಿಡಿ…ನಿಮ್ಮಂಥೋರು ಹತ್ತು ಜನ ಬಂದ್ರೂ ಅಡ್ಡಿಯಿಲ್ಲಾ…

ಚುಮು ಚುಮು ಬೆಳಿಗ್ಗೆ ಉದ್ದಂಡಿ ಅಜ್ಜಿಯನ್ನು ಎಬ್ಬಿಸಿ, ಗದ್ದೆ ತೋರ್ಸ್ತೀನಿ ಬನ್ನಿ…ಆಮೇಲೆ ಬಿಸಿಲು ಏರ್ಬಿಡ್ತದೆ…ಅಂದರು. ನಾವು ಮುಖ ಗಲಬರಸಿಕೊಂಡು, ಕಾಫಿ ಕುಡದು ಉದ್ದಂಡಿ ಜತೆ ಗದ್ದೆ ನೋಡಕ್ಕೆ ಹೊರಟೆವು. ಹೊಲಗಳ ಬದುವಿನ ಮೇಲೆ ಸುಮಾರು ದೂರ ನಡೆದು ಕೊನೆಗೆ ಗದ್ದೆಯ ಸಮೀಪ ಬಂದೆವು. ಎರಡೂ ಪಕ್ಕ ತೆಂಗು ಅಡಕೆ ತೋಟ. ಮಧ್ಯೆ ಒಂದು ಸೀಳು ಗದ್ದೆ. ನೋಡಿ ಅತ್ತೆ..ಇದೇ ನಾನು ಹೇಳಿದ್ದು…ಈ ರೈತ ಮಗಳ ಮದುವೆ ಹಚ್ಚಿಕೊಂಡಿದಾನೆ…ಅರ್ಜೆಂಟು ಅವನಿಗೆ ಕಾಸು ಬೇಕಾಗಿದೆ…ಇಂಥಾ ಚಾನ್ಸ್ ಮತ್ತೆ ಸಿಗಲ್ಲ…ಹೆಂಗಾರ ಮಾಡಿ ಐದು ಸಾವಿರ ಜೋಡ್ಸಿ…ಕಾರಾರು ಪತ್ರ ಮಾಡಿಕಂಡು ಬಿಡಣ….ಅಂತ ಉದ್ದಂಡಿ ಹೇಳಿದ. ಗದ್ದೆ ಅಜ್ಜಿಗೆ ತುಂಬ ಇಷ್ಟವಾಯಿತು. ಮುಂದೆ ಅನುಕೂಲ ಆದರೆ ತೋಟಾನೂ ಮಾಡಬಹುದು…ಅಂತ ಉದ್ಗಾರ ತೆಗೆದಳು. ಉದ್ದಂಡಿ, “ತೀರ ಆಸೆ ಹಚ್ಕ ಬೇಡಿ ನಮಗೆ ಅಕ್ಕೀದು ಒಂದು ಏರ್ಪಾಡಾದರೆ ಸಾಕಪ್ಪಾ…ಆಸೆಗೆ ಮಿತಿ ಇರತ್ತಾ ಅತ್ತೆ?”- ಅಂದರು.

ನಾವು ಊರಿಗೆ ಬಂದ ಮೇಲೆ ಲಕ್ಷ್ಮೀಸಾಗರದ ಬೆದ್ದಲು ಹೊಲ ವಡ್ಡರಿಗೆ ಬರೆದುಕೊಟ್ಟು, ಐದು ಸಾವಿರ ರೂಪಾಯಿ ಜೋಡಿಸಿದ್ದೂ ಆಯಿತು. ಅಜ್ಜಿ ಐದು ಸಾವಿರ ಉದ್ದಂಡಿಯ ಕೈಗೆ ಹಾಕುವಾಗ “ನಮ್ಮೂರಾಗೆ ಯಾರ ಮುಂದೂ ಬಾಯಿ ಬಿಡಬ್ಯಾಡಪ್ಪಾ…ಹೊಟ್ಟೇ ಉರಕಂಡು ಸಾಯ್ತವೆ…”ಅಂದಳು. ನಂಗೊತ್ತಿಲ್ವಾ ಅದು ಎಂದರು ಉದ್ದಂಡಿ.

ಮುಂದಿನ ವರ್ಷ ಸುಗ್ಗಿ ಬಂದಾಗ ಗಾಡಿಮಾಡಿಕೊಂಡು ಹತ್ತು ಪಲ್ಲ ದಬ್ಬಣಸಾಲೆ ಭತ್ತ ಉದ್ದಂಡಿ ತಗಂಡು ಬಂದರು. ಅವತ್ತು ನಮ್ಮ ಮನ್ಗೆ ಭಾಗ್ಯಲಕ್ಷ್ಮೀನೇ ಬಂದಂಗಾತು. ಅಜ್ಜಿ ಕದಲಾರತಿ ಮಾಡಿಸಿ ಭತ್ತ ಒಳಗೆ ಇಳಿಸಿಕೊಂಡರು. ಆಮೇಲೆ ಉದ್ದಂಡಿ ಆಗಾಗ ಪತ್ರ ಬರೀತಾನೇ ಇರೋರು. ಈ ಸಾರಿ ನಿಮ್ಮ ಗದ್ದೆಗೆ ರತ್ನಚೂಡಿ ಹಾಕಿಸಬೇಕು ಅಂತ ಇದೀನಿ…ಅದಕ್ಕೆ ಗದ್ದೆಗೆ ಸಪ್ಪು ತುಳಿಸ ಬೇಕು…ಒಂದು ಇನ್ನೂರು ಹೆಂಗಾರ ಮಾಡಿ ಜೋಡಿಸಿ ಕಳಿಸಿ….ಅಜ್ಜಿ ಸಾಲ ಸೋಲ ಮಾಡಿ ಹಣ ಕಳಿಸೋರು. ಮತ್ತೆ ತಿಂಗಳಿಗೆ ಉದ್ದಂಡಿಯ ಪತ್ರ. ಅತ್ತೇ ಗದ್ದೆ ನೋಡಕ್ಕೆ ಎರಡು ಕಣ್ಣೂ ಸಾಲ್ದು!….ಒಳ್ಳೇ ನಂದನವನ ಇದ್ದಂಗಿದೆ….ಬೆಳಿಗಿನ ಹೊತ್ತು ಗಾಳಿ ಬೀಸೋವಾಗ ಇಡೀ ಗದ್ದೆ ತೊಟ್ಟಿಲು ತೂಗಿದಂಗೆ ತೂಗದ ನೀವು ನೋಡ ಬೇಕು…ಬಂದುಬಿಡಿ…ಮಗಳು ಮೊಮ್ಮಗನ್ನೂ ಕರಕಂಡು…ಗದ್ದೇಲೇ ಬೆಳ್ದಿಂಗಳು ಊಟ ಮಾಡಣಂತೆ…..

ಎರಡು ವರ್ಷ ಬತ್ತ ಮನೆಗೆ ಬಂದು ಬಿತ್ತು ನಿಜ. ಮೂರನೆ ವರ್ಷ ಬೆಂಕಿ ರೋಗ ಬಂದು ಬೆಳೆಯೆಲ್ಲಾ ಹಾಳಾಗಿ, ಸೊಪ್ಪು, ಗೊಬ್ಬರಕ್ಕೆ ಹಾಕಿದ್ದೆಲ್ಲಾ ದಂಡ ಆಯ್ತು. ಅದರ ಮಾರನೇ ವರ್ಷವೂ ಭತ್ತ ಕೈ ಸೇರಲಿಲ್ಲ. ಕೆರೇಲಿ ನೀರು ನಿಲ್ಲದೆ ಭತ್ತ ಒಣಗಿ ಹೋತು ಅಂತ ಉದ್ದಂಡಿ ಪತ್ರ ಬಂತು! ಆಗ ಅಜ್ಜಿಗೆ ಜ್ಞಾನೋದಯ ಆದಂಗೆ ಆಗಿ ಸತ್ತೆನೋ ಕೆಟ್ಟೆನೋ ಅಂತ ನನ್ನನ್ನೂ ಕಟ್ಟಿಕೊಂಡು ಅಲ್ಲಸಂದ್ರಕ್ಕೆ ಓಡಿದರು. ಉದ್ದಂಡಿ ಊರಲ್ಲಿ ಇರಲಿಲ್ಲ. ಸಂಸಾರ ಸಮೇತ ಅವರು ಊರು ಬಿಟ್ಟು ತಿಂಗಳೇ ಆಗಿತ್ತು. ಅಜ್ಜಿ ಗಾಭರಿಯಾಗಿ ಗದ್ದೆಗೆ ಓಟಕಿತ್ತರು.

ಅಲ್ಲಿ ಯಾರೋ ರೈತ ಭತ್ತಕ್ಕೆ ನೀರು ಕಟ್ಟುತ್ತಾ ನಿಂತಿದ್ದ. ಅಂದರೆ ಕೆರೆಯಲ್ಲಿ ನೀರಿಲ್ಲ ಅಂತ ಉದ್ದಂಡಿ ಬರೆದದ್ದು ಸುಳ್ಳೆ? ಯಾವೂರಮ್ಮಾ…ಯಾರು ಬೇಕಾಗಿತ್ತು ಅಂದ ರೈತ. ನಾವು ಈ ಗದ್ದೆ ಮಾಲೀಕರಪ್ಪಾ ಅಂದರು ಅಜ್ಜಿ. ರೈತ ತಲೆ ಕೊಡವಿ…ನಿಮ್ಗೆಲ್ಲೋ ನದರಿದ್ದಂಗಿಲ್ಲ…ನಮ್ಮ ತಾತ ಮುತ್ತಾತನ ಕಾಲದಿಂದ ತಲೆತಲಾಂತರ ಬಂದ ಜಮೀನು ಇದು…ನಿಮ್ಮದು ಹೆಂಗೆ ಆಗ್ತದೆ? ಅಜ್ಜಿ ಧಸಕ್ಕನೆ ಗದ್ದೆಯ ಬದಿಯಲ್ಲೇ ಕುಸಿದುಕೂತರು. ನಾನು “ಅಜ್ಜೀ…ಬಾ ಊರಿಗೆ ಹೋಗಣ… ನಂಗೆ ಹೆದರಿಕೆ ಆಗತ್ತೆ”- ಅಂತ ಅಳಲಿಕ್ಕೆ ಶುರುಹಚ್ಚಿದೆ…

 

‍ಲೇಖಕರು G

March 21, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. subbanna mattihalli

    sir nimma anubhavada kanajadalli
    Akshayada Bhandarave ide. halliya mugdha jagattinalli ondondu chanaaksha
    jana ella kaladalliyuu iruttaarallave ?
    kathana saaguttale irali

    ಪ್ರತಿಕ್ರಿಯೆ
  2. rAjashEkhar mAlUr

    mEShTrE… yeMteMtha anubhavagaLu sAr nimmadu… ee rIti AgalikkU sAdhyavA…? adu hege nibhAyisidiri…? adu hEge nIvu nIvAdri…? ondu nAlku dina niMjote yellAru dUra hOgi nimma kathegaLannu kELuttalE kuLitiirONa ansatte…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: