ಕಡಮೆ ನೆನಪು: ಕಡಲ ವಿಸ್ತಾರದ ಒಡಲು ವಿಭಾ

-ಸುನಂದಾ ಪ್ರಕಾಶ ಕಡಮೆ

ವಿಭಾ ನನಗಿಂತ ವಯಸ್ಸಿನಲ್ಲಿ ಹತ್ತು ವರ್ಷ ಚಿಕ್ಕವಳಾದರೂ ಕಾವ್ಯಗುಣಗಳನ್ನು ಅಪರೂಪವೆಂಬಂತೆ ಮೈಗೂಡಿಸಿಕೊಂಡವಳಾಗಿ ನನಗಿಂತ ಹಿರಿಯಳು. ಬೌಗೋಲಿಕವಾಗಿ ಇಷ್ಟು ಸನಿಹದಲ್ಲಿದ್ದೂ ಮುಖತಃ ಅವಳನ್ನು ನೋಡಲಾಗದಿದ್ದರೂ ದೂರವಾಣಿಯಲ್ಲಿ ಕೆಲವು ಸಲ ಮಾತನಾಡುವ ಮೂಲಕವೇ ವಿಭಾ ಮನಸ್ಸಿಗೆ ಹತ್ತಿರವಿದ್ದವಳು. ಅವಳ ಕೊರಳ ಇನಿದನಿಯಿಂದಲೇ ಕರುಳಿನ ಮಿಡಿತ ಆಲಿಸಿದ್ದೆ. ಅವಳಿಂದ ಬರೆಸಿಕೊಳ್ಳಬೇಕಾಗಿದ್ದ ಕವಿತೆಗಳೀಗ ಚಡಪಡಿಸುತ್ತಿರುವಂತಿವೆ. ನಿತ್ಯ ಸೂರ್ಯನ ಪ್ರಭೆಯಂತೆ ಈಗ ವಿಭಾ ನೆನಪು ಮತ್ತು ಎಚ್ಚರ. ಅವಳ ಪ್ರತಿ ಸಾಲಿನಲ್ಲೂ ಪ್ರೀತಿಯ ಅನೇಕ ಬಣ್ಣಗಳಿವೆ, ಅಲ್ಲಲ್ಲಿ ಹಸಿರಿನಂಗಣ ಕೈಚಾಚಿದೆ ಮತ್ತು ತೀಕ್ಷ್ಣ ಬೆಳಕು ಎಲ್ಲೆಲ್ಲಿಂದಲೋ ತೂರಿಕೊಂಡು ಒಳಬಂದು ಸಹೃದಯರ ಮನಸಿನ ಹಲವಾರು ಬಣ್ಣಗಳನ್ನು ತೆರೆದು ತೋರುತ್ತವೆ.

ಸಮುದ್ರದಲ್ಲಿ ತೆರೆಗಳಿರುವಂತೆ ವಿಭಾನ ಒಳಗೂ ಅನೇಕ ತೆರೆಗಳಿದ್ದವು. ಅವು ವಿಸ್ತಾರಕ್ಕೆ ಹರಡಿದ ತನ್ನದೇ ತೀರವನ್ನು ತಲುಪಲು ಬಂದಂತೆ ಒಮ್ಮೆಲೇ ಧಾವಿಸಿದ್ದವು. ತೀರದ ಮರಳಿನ ಕಣಗಳಲ್ಲಿ ಅಲೆಗಳು ತನ್ನ ನೊರೆಯ ಆಹ್ಲಾದವನ್ನು ಉಣ್ಣಿಸಿದವು. ವಿಭಾ ಕಾವ್ಯ ಅವಳ ಮಾನಸದ ಬಿಂಬದಿಂದಲೂ ಅದರ ಪ್ರತಿಬಿಂಬದ ಸತ್ವದಿಂದಲೂ ಹುಟ್ಟಿಬಂದಿದೆ. ಅವಳ ಹೃದಯದೊಳಗಿದ್ದ ಅಪಾರ ಬಯಲು, ಭಾವನೆ ಚಿಂತನೆ ಗಳಿಂದ ಪ್ರಕ್ಷುಬ್ಧವಾಗಿತ್ತು. ವಿಭಾ ಕಾವ್ಯದ ಪ್ರತಿಯೊಂದು ಪದವೂ ಅಷ್ಟು ಶಕ್ತಿಯುತವಾಗಿ ಅರಳಿ ನಿಂತಿರುವುದಕ್ಕೆ ಅವಳೊಳಗಿರುವ ಸುವರ್ಣದ ಮಾನಸ ಕಡಲೇ ಕಾರಣ. ಆ ಕಡಲಿನಿಂದ ಎದ್ದ ಹೊಳೆವ ತೆರೆಗಳು ಕನ್ನಡ ಓದುಗರ ಮನಸ್ಸನ್ನು ತೊಳೆಯುತ್ತಿದೆ. ಅವರ ಮೆಚ್ಚಿಗೆಯ ತೀರಗಳ ತಲುಪಿವೆ.

ವಿಭಾ ‘ಜೀವ ಮಿಡಿತದ ಸದ್ದು’ ಅವಳ ಪ್ರತಿರೂಪದಂತೆ ಶಾಂತ ಸ್ನಿಗ್ಧ. ಪಾರಿವಾಳಗಳ ಹಾಗೆ ಅವು ಅಪಾರಕ್ಕೆ ನೆಗೆಯುತ್ತವೆ. ಅವಳ ಕಾವ್ಯ ಸರೋವರದ ದಂಡೆಯಲ್ಲಿ ಶುಭ್ರ ಸುಂದರ ಬೆಳ್ಳಗೆ ಹಾಗೂ ಭಾವಪೂರ್ಣತೆಯಿಂದ ಕೂಡಿದ ಒಂದು ಕಥನವಿದೆ. ಅದಕ್ಕೆ ಕೊನೆಯಿಲ್ಲದ ಅಪಾರದ ದಾಹವೇ ನಮ್ಮನ್ನು ಈ ಕಾವ್ಯದ ಮಾಯಾಲೋಕಕ್ಕೂ ಕರೆದೊಯ್ಯುತ್ತದೆ. ಅವಳ ಭಾವದ ಕೊಂಡಿ ಪುನಃ ಪುನಃ ಚೌಕ ಕಿಟಕಿಯಿಂದಾಚೆ ನೋಡುತ್ತ ಅಲ್ಲಿಯ ವಿಶಾಲ ವಿಶ್ವಕ್ಕೆ ಕೈನೀಡುತ್ತವೆ, ಪರಿಣಾಮವೆಂಬಂತೆ ಇಂತೆಲ್ಲ ಹಾಡು ಮೂಡಿಸುವ ಸಹಜ ಕ್ರಿಯೆಗೆ ಶರಣಾಗುತ್ತದೆ. ಕರಗುವ ಕೊರಗುವ ಕನವರಿಸುವ ಹಲವಾರು ಜೀವದ ಆಶಾಭಾವವಾಗಿ ಇಲ್ಲಿಯ ಅಮೂರ್ತಭಾವ ಕೆಲಸ ಮಾಡುತ್ತದೆ.

/ಎಷ್ಟಾದರೂ ಕವಿತೆಯಲ್ಲವೇ ಅವಳು?/ ಮಾಗದ ಹುಡುಗನ ಗೆಳತಿ/ ಸ್ವತಃ ವಿಭಾನೇ ಇಲ್ಲಿ ಒಂದು ಒಳ್ಳೆಯ ಕವಿತೆ. ತನ್ನೊಡಲಲ್ಲಿ ಏನೇನನ್ನೋ ಬಚ್ಚಿಟ್ಟುಕೊಳ್ಳಲು ಹೋಗಿ ವಿಭಾ ಕವಿತೆಗಳು ಸಹೃದಯಿಯ ಮನಸ್ಸನ್ನು ಬೆತ್ತಲೆಗೊಳಿಸಿ ಒಳಗನ್ನು ಕಾಣಿಸ ತೊಡಗುತ್ತವೆ. ಈ ಅಪ್ಪಟ ಕವಿಯ ಕನಸು ಮತ್ತು ಕನವರಿಕೆಗಳಲ್ಲಿ ಕವಿತೆಯ ಬೀಜಗಳಿದ್ದವು. ಅದನ್ನು ನಮಗೆಲ್ಲ ವರ್ಗಾಯಿಸುವ ಅವಳ ಅಕ್ಷರಗಳು ಅಂತರಗಂಗೆ ದಾಟಿಸುವ ಸೇತುವೆಯಂತೆ ಸುಭದ್ರವೂ ಸುಲಲಿತವೂ ಆಗಿವೆ. ಒದ್ದೆಗಣ್ಣಿನಲ್ಲಿ ಬಿಂಬವಾಗುವ ಇಲ್ಲಿಯ ಭಾವೋತ್ಕರ್ಷ ಉತ್ಕಟವಾದದ್ದು. ವಿಭಾ ಕವಿತೆಗಳು ಇಡೀ ಜಗತ್ತಿನ ಕಣ್ಣೀರಿಗೆ ಬೊಗಸೆಯಾಗಹೊರಟಿತ್ತು. ಅವಳ ಕವಿತೆಗಳು ಅವಳದೇ ಕವಿತೆಯ ಸಾಲಲ್ಲಿ ಕಾಣುವಂತೆ, ಎಲ್ಲ ಕಲ್ಮಶವನ್ನೂ ತಳ್ಳಿ ಅಬ್ಬರವಿಲ್ಲದೇ ಹರಿದು ಹೋಗುವ ಶಾಂತ ನದಿ.

ನಮ್ಮ ನಮ್ಮ ದೌರ್ಬಲ್ಯಗಳನ್ನು ಪಟ್ಟಿ ಮಾಡಿಸುವ ಇಲ್ಲಿಯ ಮೌನಗಳು ಶಬ್ದಗಳ ಹಂಗಿಗೆ ಒಳಪಡುವಂಥದ್ದಲ್ಲ. ಹೆಣ್ಣಿನ ಅಂತಃಕರಣದ ಬೊಗಸೆಯಲ್ಲಿ ಇಡೀ ಬೃಹ್ಮಾಂಡವಿದೆ ಎಂಬುದನ್ನು ವಿಭಾ ಹೇಳಿದ ಬಗೆ ಹೀಗಿದೆ. /ನಾವು/ ಎದೆಯೊಳಗೆ ಬಯಲು/ ತುಂಬಿಕೊಂಡು / ಅನಂತ ಅವಕಾಶಕ್ಕೆ/ ಸವಾಲೊಡ್ಡಿದವರು/ ನಮ್ಮ ಬೊಗಸೆಯಲ್ಲಿದೆ ಭೂಮಿ/ ಹೀಗೆ ಈ ಕವಿತೆಗಳ ಸನಿಹವಿಲ್ಲದೇ ಅವಳಿಗೆ ಬದುಕಲು ಗೊತ್ತಿರಲಿಲ್ಲ ಎಂಬಷ್ಟರ ಮಟ್ಟಿಗೆ ವಿಭಾಳ ಕಾವ್ಯದಲ್ಲಿ ಅವಳದೇ ಆದ ವಿಶಿಷ್ಟ ಉಸಿರನ್ನು ನಾವು ಕಾಣುತ್ತೇವೆ.

ಸಂಯಮದ ನೆಲೆಯಲ್ಲಿ ಹುಡುಕುವ ಸತ್ಯದ ಹುಡುಕಾಟದಂತಿದೆ ವಿಭಾ ಪದ್ಯಗಳು. ಕವಿತೆ ತೀಡುವಾಗ ಅವಳ ಮನಸ್ಸು, ಬಣ್ಣದ ಚಿಟ್ಟೆಯಂತೆ ಸಂಭ್ರಮಿಸುವುದು ನಮ್ಮ ನೋಟಕ್ಕೆ ದಕ್ಕುತ್ತದೆ. ಆ ಚಿಟ್ಟೆಯ ಬಣ್ಣಗಳನ್ನೆಲ್ಲ ತನ್ನ ನಾಜೂಕಿನ ಕಣ್ಣುಗಳಿಂದ ಕವಿತೆಗೆ ಭಟ್ಟಿ ಇಳಿಸಿ, ಅವನ್ನು ನಮ್ಮಗಳ ಎದೆಗೆ ದಾಟಿಸುವ ವಿನೀತ ಕಲಾತ್ಮಕತೆಯೊಂದು ಅವಳ ಸೊತ್ತೇ ಆಗಿತ್ತು. ಹೀಗೆ ವಿಭಾ ಮತ್ತು ಅವಳ ಕಾವ್ಯ ಎರಡೂ ಕಾವ್ಯಪ್ರಿಯರ ಹೃದಯಗಳ ಗೆದ್ದುಕೊಂಡಿವೆ.

ಅಂಗೈಲಿ ಹೃದಯ ಹಿಡಿದು/ ಕಣ್ಣಗಲಿಸಿ ನೋಡುತ್ತೇನೆ/ ತಣ್ಣಗೆ ಮಲಗಿದ ಕೆಂಪು/ ದೇಹದ ಪುಟ್ಟ ಜೀವವನ್ನು/ ಇದೋ ನಿರಾಳ ನಿಟ್ಟುಸಿರು/ ಸದ್ಯ ಇದು ನನಂದುಕೊಂಡ ಮಗುವಲ್ಲ/ ಯಾರದೋ ಜೀವವಾಗಿದ್ದದ್ದು ಎಲ್ಲರ ಒಳ ಮಿಡಿತಗಳಾಗಿ ತಲ್ಲಣಿಸುವಾಗ, ಇಡೀ ಜಗವೇ ತಂತಮ್ಮ ನಿರಾಳತೆ ಹುಡುಕುತ್ತ ದೂರ ಉಳಿದ ಮಾನವೀಯ ದುರಂತವನ್ನು ವಿಭಾ ಹೃದಯಂಗಮವಾಗಿ ಹಿಡಿಯುವ ಛಾತಿ ತೋರಿದವಳು. ಆ ಮೂಲಕ ಬದುಕು ಮತ್ತು ಬರಹದ ನಡುವಿನ ಲಕ್ಷ್ಮಣ ರೇಖೆಯನ್ನು ಕಿಂಚಿತ್ತಾದರೂ ಕಡಿಮೆ ಮಾಡಿಕೊಳ್ಳುವತ್ತ ನಡೆಯುತ್ತಿದ್ದವಳು. ವಿಭಾ ತೆರೆದಿಟ್ಟ ಕಕ್ಕುಲಾತಿಯ ಕವಿತೆಗಳ ಲೋಕ ಕನ್ನಡ ಜನ ಮಾನಸದಲ್ಲಿ ಈಗಾಗಲೇ ನೆಲೆ ನಿಂತಿದೆ.

ವಿಭಾ, ನಿನ್ನ ಕವಿತೆಗಳ ಭಾವ ಸ್ಪುರಣ, ಸದಾ ಸುರಿವ ಮೋಡಗಳ ಹಾಗೆ. ಇದು ಕಡಲ ವಿಸ್ತಾರದ ಒಡಲೇ ಸರಿ. ಲ್ಯಾವಿಗಂಟಿನಲ್ಲಿರುವ ನಿನ್ನ ಪಾಲಿನ ಅಕ್ಷರಗಳನ್ನು ನಾವೆಲ್ಲ ಅಕ್ಕರೆಯಿಂದ ಹಂಚಿಕೊಳ್ಳುತ್ತಿದ್ದೇವೆ. ನೀನು ನಕ್ಷತ್ರವಾಗಿ ಜೊತೆಗಿದ್ದೀ. ಆ ವಿಧಿ ನಿಯಮದ ಏದುರು ನಾವುಗಳೂ ನಿನ್ನಷ್ಟೇ ನಿರುಪಾಯರು. ಜಗತ್ತಿನ ಯಾವ ಮನಸುಗಳೂ ಅನಾಥವಾಗದಂತೆ ನಿನ್ನ ಕನಸುಗಳ ಮೇಲೆ ಗಿಡ ನೆಡಲು ಯತ್ನಿಸುತ್ತೇವೆ.

‍ಲೇಖಕರು G

March 20, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: