ಎಂ ಎಸ್ ಶ್ರೀರಾಮ್ ಹೊಸ ಪುಸ್ತಕ ಮತ್ತು ಒಂದು ಲೇಖನ

ಎಂ ಎಸ್ ಶ್ರೀರಾಮ್ ಹೊಸ ಪುಸ್ತಕ ’ಅರ್ಥಾರ್ಥ’ ದ ಒಂದು ಲೇಖನ ’ಅವಧಿ’ ಓದುಗರಿಗಾಗಿ

***

ಎಂ ಎಸ್ ಶ್ರೀರಾಮ್


ಮಾರಿಕೊಂಡವರು

ಮೈಕಲ್ ಸ್ಯಾಂಡಲ್ ಹಾರ್ವಡ್ ವಿಶ್ವವಿದ್ಯಾ ನಿಲಯದಲ್ಲಿ ಪ್ರಾಧ್ಯಾಪಕರು. ಜಸ್ಟಿಸ್ (ನ್ಯಾಯ) ಎನ್ನುವ ಒಂದು ಕೋರ್ಸನ್ನು ಆತ ಕಲಿಸುತ್ತಾರೆ. ಅದೇ ಹೆಸರಿನ ಒಂದು ಪುಸ್ತಕವನ್ನೂ ಆತ ರಚಿಸಿದ್ದಾರೆ. ಸ್ಯಾಂಡಲ್ ಅವರ ತರಗತಿಗಳ ಪ್ರವಚನಗಳು ಮುಫತ್ತಾಗಿ ಯಾರಿಗೆ ಬೇಕಾದರೂ ದೊರೆಯುವಂತೆ ಅಂತರ್ಜಾಲದಲ್ಲಿ ಹಾಕಲಾಗಿದೆ. ಯಾವುದು ನ್ಯಾಯ ಎನ್ನುವುದೇ ಸ್ಯಾಂಡಲ್ ಕೇಳುವ ಮೂಲಭೂತ ಪ್ರಶ್ನೆ. ಇದೇ ಪ್ರಶ್ನೆಯನ್ನು ಮುಂದುವರೆಸಿ ಆತ ಮಾರುಕಟ್ಟೆಯ ನೈತಿಕ ಮಿತಿಗಳೇನು ಎಂಬುದನ್ನು ಇತ್ತೀಚಿನ What Money Can’t Buy: The Moral Limits of Markets ಪುಸ್ತಕದಲ್ಲಿ ದೀರ್ಘವಾಗಿ ಚರ್ಚಿಸುತ್ತದೆ.
ನಾವು ನಮ್ಮನ್ನು ಎಷ್ಟರ ಮಟ್ಟಿಗೆ ಮಾರುಕಟ್ಟೆಯ ನಿಯಮಗಳಿಗೆ ಒಪ್ಪಿಸಿಕೊಳ್ಳಬೇಕು, ಯಾವುದನ್ನು ಮಾರುಕಟ್ಟೆಯ ನಿಯಮಗಳಿಗೆ ಒದಗಿಸುವುದು ಸೂಕ್ತ ಎನ್ನುವ ನೈತಿಕ ಪ್ರಶ್ನೆಗಳನ್ನು ಅವರು ವಿಸ್ತಾರವಾಗಿ ಚರ್ಚಿಸುತ್ತಾರೆ. ವ್ಯಾಪರದ ಜಗತ್ತಿನಲ್ಲಿ ಬದುಕುತ್ತ, ನಮಗೆ ತಿಳಿಯದೆಯೇ ಹಲವಾರು ವಸ್ತುಗಳನ್ನು ನಾವು ವ್ಯಾಪಾರಕ್ಕೊಡ್ಡಿಬಿಡುತ್ತೇವೆ. ಅವರು ಮಾರುಕಟ್ಟೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ –ಮಾರುಕಟ್ಟೆಯೇ ಮಹಾದೇವ ಎನ್ನುವ ನಂಬುಗೆಯನ್ನು ಪ್ರಶ್ನಿಸುತ್ತಾ  ಹೋಗುತ್ತಾರೆ. ಹಾಗೆ ಪ್ರಶ್ನಿಸುತ್ತಲೇ, ತಮ್ಮದೇ ವಿಶ್ವವಿದ್ಯಾನಿಲಯದ ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞರ ವಾದಗಳನ್ನೂ ಪ್ರಶ್ನಿಸುತ್ತಾರೆ.
ಎರಡು ವರ್ಷಗಳ ಹಿಂದೆ, 24 ತಾಸುಗಳೊಳಗಾಗಿಮೂರುಬಾರಿ ನನಗೂ, ನನ್ನ ಪತ್ನಿಗೂ ತಿರುಪತಿ ತಿಮ್ಮಪ್ಪನದರ್ಶನವಾಗಿತ್ತು. ದೇವರನ್ನು ನಂಬದ, ಪೂಜಿಸದ ನಮ್ಮಿಬ್ಬರಿಗೂ ಯಾವುದೋ ಪುಣ್ಯಕ್ಕಲ್ಲದೇ, ಬ್ಯಾಂಕೊಂದರ ನಿರ್ದೇಶಕ ಮಂಡಲಿಯಲ್ಲಿದ್ದ ನನ್ನ ಸ್ಥಾನಮಾನದ ಫಲವಾಗಿ ಈ ಭಾಗ್ಯ ನಸೀಬಾಗಿತ್ತು. ತಿರುಪತಿಯಲ್ಲಿ ಬ್ಯಾಂಕಿನ ಸಭೆಯನ್ನು ನಿರ್ದೇಶಕ ಮಂಡಲಿಯ ಒಟ್ಟಾರೆ ಭಕ್ತಿಯ ಪ್ರಮೇಯವಾಗಿ ಇಡಲಾಗಿತ್ತು. ತಿರುಪತಿಯ ದರ್ಶನ ಪದ್ಧತಿಯನ್ನುಗಮನಿಸಿದಾಗ ದೇವರ ಮುಂದೂ ಕಾಂಚಾಣದ-ಅಧಿಕಾರದ ನೃತ್ಯ ನನಗೆ ಕಂಡಿತು. ಸಾಮಾನ್ಯರಿಗೊಂದು ಸಾಲು. ಸ್ಪೆಷಲ್ದರ್ಶನದ ಟಿಕೇಟು ಪಡೆದವರಿಗೆ ಒಂದು ಬಿಂದುವಿನಲ್ಲಿ ಈ ಸಾಮಾನ್ಯರ ಸಾಲನ್ನು ಭೇದಿಸಿ ಮುಂದುವರೆವ ದರ್ಶನ ಭಾಗ್ಯ.  ಹಾಗೂ ಈ ಎರಡೂ ಸಾಲುಗಳನ್ನು ಸಂಪೂರ್ಣವಾಗಿ ನಿಲ್ಲಿಸಿ ವಿ.ಐ.ಪಿಗಳಿಗೆ ನೀಡುವ ಬ್ರೇಕ್  ದರ್ಶನ. ಬ್ರೇಕ್ ದರ್ಶನ ಪ್ರಾಪ್ತಿಯಾದವರಿಗೆ ಡೈರೆಕ್ಟಾಗಿ ದೇವರ ಪಾದಾರವಿಂದಗಳ ಬಳಿಗೆ ರಾಜಮಾರ್ಗವಿದ್ದದ್ದಲ್ಲದೇ ಒಂದೆರಡು ಕ್ಷಣ ಹೆಚ್ಚು ಭಗವಂತನ ಎದುರಿಗೆ ನಿಲ್ಲಲೂ ಪರವಾನಗಿಯಿತ್ತು. ಇದು ಹೆಚ್ಚು ಭಕ್ತಿಯಿದ್ದವರಿಗೆ ಲಭ್ಯವಿದ್ದ ಸವಲತ್ತಲ್ಲ, ಬದಲಿಗೆ ಹೆಚ್ಚು ಹಣ –ವಶೀಲಿಯಿದ್ದವರಿಗುಂಟು ಮಾಡಿದ್ದ ಸವಲತ್ತಾಗಿತ್ತು.
ನನ್ನ ವಿರೋಧಾಭಾಸ ನೋಡಿ. ನಾನು ಇದನ್ನು ಬಯಸಿದವನಲ್ಲ. ಆದರೆ ಹೀಗೆ ಸಿಕ್ಕ ಪ್ರಾಮುಖ್ಯತೆಗೆ ನನಗೆ ಸಂತೋಷವಂತೂ ಆಯಿತು. ಹೀಗೆ ಹಿಗ್ಗುತ್ತಲೇ ಇದ್ದಾಗ ದರ್ಶನಕ್ಕಿದ್ದ ಭಕ್ತಾದಿಗಳ ಭಿನ್ನ ಸಾಲುಗಳ ವಿಪರ್ಯಾಸ ನಮ್ಮನ್ನು ತಟ್ಟದಿರಲಿಲ್ಲ. ಇದರಲ್ಲಿ ಯಾವುದೇ ನಿಯಮದ ಉಲ್ಲಂಘನೆಯಿರಲಿಲ್ಲ. ದಿನದ ಕೆಲವು ಘಳಿಗೆಗಳನ್ನು ಹೀಗೆ ಆರಕ್ಷಿಸಿ ಇಟ್ಟಿರುವ ನಿಯಮವನ್ನು ದೇವಸ್ಥಾನದವರು ರೂಪಿಸಿದ್ದಾರೆ. ಆದರೆ ಹೀಗೆ ಕೆಲವು ಘಳಿಗೆಗಳನ್ನು ಮಾರಾಟ ಮಾಡುವ/ಹರಾಜು ಹಾಕುವ ನೈತಿಕತೆಯನ್ನು ನಾವು ಒಪ್ಪಬೇಕೇ, ಪ್ರಶ್ನಿಸಬೇಕೇ? ದೇವರೇ ವ್ಯಾಪಾರದ ವಸ್ತುವಾಗಬಹುದೇ? ಪೂಜ್ಯ ಅನ್ನುವ ವ್ಯಾಪಾರಾತೀತವಾದ ವಿಷಯಗಳು ಈ ಜಗತ್ತಿನಲ್ಲಿರುವುದು ಯಾವುದು? ಅವನ್ನು ವ್ಯಾಪಾರಾತೀತವಾಗಿಯೇ ಕಾಪಾಡುವುದು ಸಾಧ್ಯವೇ. ಸಾಧ್ಯವಾದರೆ ಹೇಗೆ?
ವರ್ಷಗಳ  ಹಿಂದೆಯೇ ಅಮುಲ್ ಸಂಸ್ಥೆಯ ಸಹಕಾರ ಮಂಡಲಿಗಳಲ್ಲಿ ಹಾಲು ಸರಬರಾಜು ಮಾಡುವ ಹೈನುಗಾರರಿಗೆ ಪುರುಷ-ಮಹಿಳೆಯರನ್ನದೇ ಒಂದೇ ಸಾಲು. ಆ ಸಂಸ್ಥೆಯ ಮುಖ್ಯಸ್ಥರಾಗಿದ್ದ ಕುರಿಯನ್ ಇದನ್ನು ಜಾತಿಪದ್ಧತಿಗೇ ಕಪಾಳಮೋಕ್ಷದ ಪ್ರತೀಕ ಎಂದು ಒಂದೆಡೆ ವಿವರಿಸಿದ್ದರು.”ಹಾಲು ಸುರಿಯಲು ಮೊದಲು ಬಂದ ದಲಿತ, ಅವನ ನಂತರ ತಡವಾಗಿ ಬಂದ ಬ್ರಾಹ್ಮಣ. ಸಾಲಿನಲ್ಲಿ ದಲಿತನ ಹಿಂದೆ ತಡವಾಗಿ ಬಂದ ಏಕಕಾರಣಕ್ಕೆ ನಿಂತ ಬ್ರಾಹ್ಮಣ. ಈ ಏರ್ಪಾಟನ್ನು ಅನುಭವಿಸಿದ ದಲಿತನ ಆತ್ಮ ಸಮ್ಮಾನಕ್ಕೂ, ಬ್ರಾಹ್ಮಣನ ಅಹಂಕಾರಕ್ಕೂ ಆಗಬಹುದಾದ ವ್ಯತ್ಯಾಸವನ್ನು ಊಹಿಸಿಕೊಂಡರೆ ಅಮುಲ್ ಪದ್ಧತಿಯ ಹೈನುಗಾರಿಕೆಯ ಮಹತ್ವ ನಿಮಗೆ ತಿಳಿಯುತ್ತದೆ.” ಎಂದು ಕುರಿಯನ್ ಹೇಳಿದ್ದರು. ದೊಡ್ಡವರು-ಸಣ್ಣವರು, ಶ್ರೀಮಂತರು-ಬಡವರು, ಸಾಲಿಗೆ ನಿಂತ ಕೂಡಲೇ ಎಲ್ಲರಿಗೂ ಸಮಾನತೆ ಪ್ರಾಪ್ತವಾಗಿಬಿಡುತ್ತದೆ ಅನ್ನುವುದನ್ನು ಮಾರುಕಟ್ಟೆಯ ನಿಯಮವನ್ನು ನಂಬಿ ನಡೆದ ಕುರಿಯನ್  ಪ್ರತಿಪಾದಿಸಿದ್ದರು. ಈ ಹಾಲಿನ ಸರಬರಾಜಿಗಿರುವ ವ್ಯಾಪಾರೀ ಪದ್ಧತಿಯು ಪಾಲಿಸುತ್ತಿರುವ ಸಾಲಿನ ಶಿಸ್ತನ್ನು ದೇವರ ಸಮ್ಮುಖದಲ್ಲಿ ವ್ಯಾಪಾರಕ್ಕೆ ಒಡ್ಡುವುದರ ಔಚಿತ್ಯವೇನಿರಬಹುದು?
ನಾನು ಶಾಲೆಯಲ್ಲಿ ಕಲಿಯುತ್ತಿದ್ದಾಗ ವರ್ಷಕ್ಕೊಂದೆರಡು ಬಾರಿ ನಡೆಯುತ್ತಿದ್ದ ಮಹತ್ವದ ಸಂಗತಿಯೆಂದರೆ ವರನಟ ರಾಜಕುಮಾರ್ ನಟಿಸಿದ ಚಿತ್ರದ ಬಿಡುಗಡೆ. ಆ ಚಿತ್ರ ನೋಡುವುದು ಒಂದು ಅನುಭವವಾದರೆ, ಅದಕ್ಕೆ ಟಿಕೇಟು ಪಡೆಯುವುದೂ ಅಷ್ಟೇ ಮಹತ್ವದ ಅನುಭವವಾಗಿತ್ತು. ಚಿತ್ರ ಬಿಡುಗಡೆಯಾದ ದಿನದಂದೇ, ಅಥವಾ ಮೊದಲ ವಾರದಲ್ಲೇ ಘಂಟೆಗಟ್ಟಲೆ ಸಾಲಿನಲ್ಲಿ ನಿಂತು ಟಿಕೇಟು ಪಡೆದಾಗಿನ ಪುಳಕ ಸಿನೇಮಾ ಮಂದಿರದ ಒಳಕ್ಕೆ ಹೋದಾಗಿನ ಸಾಫಲ್ಯವನ್ನು ಈಗಿನ ಪರಿಸ್ಥಿತಿಯಲ್ಲಿ ವಿವರಿಸುವುದು ಕಷ್ಟ. ಇಷ್ಟು ಕಷ್ಟದಿಂದ ಟಿಕೇಟು ಪ್ರಾಪ್ತಿಯಾಗುತ್ತಿದ್ದುದರಿಂದ, ಪ್ರಾಪ್ತಿಯಾದ ಮೇಲೂ ಟಿವಿ, ವಿಸಿಡಿ, ಡಿವಿಡಿ ಎನ್ನದೇ ಬರೇ ಬೆಳ್ಳಿಯ ತೆರೆಯಮೇಲೆ ಮಾತ್ರವೇ ದರ್ಶನ ಭಾಗ್ಯ ಲಭಿಸುತ್ತಿದ್ದುದರಿಂಲೇ ಬಹುಶಃ ನಾವುಗಳು ರಾಜಕುಮಾರ್ ಅವರನ್ನು ದೇವರ ಸ್ಥಾನಕ್ಕೆ ಏರಿಸಿಬಿಟ್ಟಿದ್ದೆವೇನೋ.
ಹಾಗೆ ನೋಡಿದರೆ ಸಾಲಿನಲ್ಲಿ ನಿಲ್ಲದವರೂ, ನಿಂತ ಮೇಲೂ ಟಿಕೇಟುಪಡೆಯಲಾಗದವರೂ ಆ ಸಿನೇಮಾವನ್ನುನೋಡುತ್ತಿದ್ದುದುಂಟು. ಧೈರ್ಯವಿದ್ದ ಕೆಲವರು ನಿಗೂಢವಾಗಿ ಹೆಚ್ಚಿನ ಹಣ ಕೊಟ್ಟು ಬ್ಲಾಕಿನಲ್ಲಿ ಟಿಕೇಟು ಪಡೆದು ಬರುತ್ತಿದ್ದರು. ಮಾರುಕಟ್ಟೆಯ ಬೇಡಿಕೆ-ಸರಬರಾಜಿನ ನಿಯಮಾನುಸಾರ ಥಿಯೆಟರಿಗೆ ಪ್ರಾಪ್ತವಾಗಬೇಕಿದ್ದ ಹಣ – ಮಧ್ಯವರ್ತಿಯೊಬ್ಬನಿಗೆ ಪ್ರಾಪ್ತವಾಗಿ ಆತನಿಗೂ ಉದ್ಯೋಗಾವಕಾಶವನ್ನು ಆ ವ್ಯವಸ್ಥೆ ಉಂಟುಮಾಡಿತ್ತು. ಈ ಮೂಲಕ ಸಂಪತ್ತನ್ನು ಇನ್ನಷ್ಟು ಸಮಾನವಾಗಿ ಹಂಚುವ ಅರ್ಥಪದ್ಧತಿಯಲ್ಲಿ ನಾವು ಬದುಕುತ್ತಿದ್ದೆವು! ಮಧ್ಯವರ್ತಿಯ ಮಾತು ಹಾಗಿರಲಿ, ಹೀಗೆ ಹೆಚ್ಚು ಹಣ ಕೊಟ್ಟು ಬ್ಲಾಕಿನಲ್ಲಿ ಕೊಂಡ ಅಭಿಮಾನಿ ಸಿನೇಮಾವನ್ನು ಆನಂದಿಸುವಾಗಲೂ ಬ್ಲಾಕಿನಲ್ಲಿ ಟಿಕೇಟು ಕೊಂಡ, ಸಾಲಿನಲ್ಲಿ ನಿಂತು ಟಿಕೇಟನ್ನು ಸಂಪಾದಿಸಲಾಗದ ಪಾಪ ಭಾವನೆಯನ್ನು ಹೊತ್ತೇ ಅಣ್ಣಾವ್ರ ಆಗಮನವನ್ನು ಬೆಳ್ಳಿತೆರೆಯ ಮೇಲೆ ನಿರೀಕ್ಷಿಸಬೇಕಿತ್ತು.
ಈಗ ಬಂದಿರುವ ಮಲ್ಟಿಪ್ಲೆಕ್ಸ್ಸಂಸ್ಕೃತಿಯಲ್ಲಿ ಯಾವ ಪಾಪಭಾವನೆಯೂ ಇಲ್ಲ. ಹೆಚ್ಚಿನ ಹಣ ಕೂಟ್ಟು ಟಿಕೇಟು ಖರೀದಿಸುವುದೂ ಒಂದು ಹಕ್ಕೇ. ಒಂದೇ ವಾರಾಂತ್ಯದಲ್ಲಿ ಒಂದು ಸಿನೇಮಾವನ್ನು”ಹಿಟ್” ಎಂದು ಘೋಷಿಸುವ ಪರಿಸ್ಥಿತಿಯಲ್ಲಿ ನಾವಿದ್ದೇವೆ.ವ್ಯಾಪಾರ ಜಗತ್ತಿನ ಬೇಡಿಕೆ-ಸರಬರಾಜಿನನಿಯಮಗಳು ಬೆಲೆಯನ್ನು ನಿರ್ಧರಿಸುತ್ತದೆ, ಇಲ್ಲಿ ಮಧ್ಯವರ್ತಿಗೆ ಕೆಲಸವಿಲ್ಲ. ಯಾವುದೇ ವಸ್ತುವಿನ ಸರಬರಾಜು ಒಂದು ಮಿತಿಯಲ್ಲಿ ಇರುತ್ತದಾದ್ದರಿಂದ ಅದರ ಬೇಡಿಕೆಯ ನಿಯಮಾನುಸಾರ ಮಾರುಕಟ್ಟೆ ಬೆಲೆ ಕಟ್ಟುತ್ತದೆ. ಈ ನಿಯಮಾನುಸಾರ ಚಿತ್ರ ಬಿಡುಗಡೆಯಾದ ಮೊದಲವಾರದ ಪ್ರದರ್ಶನಕ್ಕೆ, ರಜಾದಿನದಂದು ಹೆಚ್ಚು ಬೇಡಿಕೆ, ತಿಮ್ಮಪ್ಪನ ಸುಪ್ರಭಾತ ದರ್ಶನವೂ ಹೀಗೇ ಒಂದು ಮಿತಿಯಲ್ಲಿ, ದಿನಕ್ಕೊಂದುಬಾರಿ ಮಾತ್ರ ಕಾಣುವ ಅನುಭವ. ಅದಕ್ಕೂ ಬೇಡಿಕೆ. ಮಾರುಕಟ್ಟೆಯ ನಿಯಮಾನುಸಾರ ಈ ಎಲ್ಲಕ್ಕೂ ಹೆಚ್ಚಿನ ಬೆಲೆ. ವ್ಯಾಪಾರ ಜಗತ್ತಿನಲ್ಲಿ ದುಡ್ಡೇ ದೊಡ್ಡಪ್ಪ.
ಆದರೆ ವ್ಯಾಪಾರ ಜಗತ್ತಿನವರೂ ಇಲ್ಲದವರನ್ನು ಒಳಗೊಳ್ಳುವ ಮಾತಾಡುತ್ತಾರೆ. ಆ ವಾದಸರಣಿ ಇಂತಿರಬಹುದು: ತಿಮ್ಮಪ್ಪನ ದರ್ಶನದಿಂದ ಬರುವ ಹೆಚ್ಚುವರಿ ರೊಕ್ಕದಿಂದಾಗಿ ಟಿಟಿಡಿಗೆ ಆದಾಯ ಹೆಚ್ಚುತ್ತದೆ. ಶ್ರೀಮಂತರು ಹೆಚ್ಚು ಸುಲಭವಾಗಿ ದರ್ಶನ ಪ್ರಾಪ್ತಿ  ಮಾಡುಕೊಂಡು ಆ ಖುಷಿಯಲ್ಲಿ ಹೆಚ್ಚೆಚ್ಚು ದಕ್ಷಿಣೆ ಹಾಕಬಹುದು. ಆ ಆದಾಯವನ್ನೆಲ್ಲಾ ಟಿಟಿಡಿ ಸಮಾಜ ಕಲ್ಯಾಣಕ್ಕಾಗಿ ತಾನೇ ಉಪಯೋಗಿಸುವುದು? ಇಂಥ ಕಾವ್ಯನ್ಯಾಯವಿರುವಾಗ ಶ್ರೀಮಂತರಿಂದ ಹೆಚ್ಚಿನ ಹಣ ಪಡೆದು ಅವರಿಗೆ ಸವಲತ್ತುಗಳನ್ನುನೀಡುವುದರಲ್ಲಿ ತಪ್ಪೇನು?ಮೇಲಾಗಿ ಬಡ ಭಕ್ತರಿಗೂ ಸಾಲಿನಲ್ಲಿ ಹಚ್ಚು ಸಮಯ ಪೋಲಾಗದಂತೆ ಹೆಚ್ಚಿನ ಸವಲತ್ತುಗಳನ್ನು ಒದಗಿಸಲೂ ಈ ಹಣದಿಂದ ಸಾಧ್ಯವಾಗಿದೆ– ಸುದರ್ಶನ ಚಕ್ರದ ಟೋಕನ್ನು ಕಂಪ್ಯೂಟರೀಕರಣದ ಲಾಭದಿಂದ ಬಂದದ್ದಲ್ಲವೇ? ಸಾಲಿನಲ್ಲಿ ನಿಂತಿದ್ದಷ್ಟೂ ಕಾಲ ಅಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಪಡೆವ ಭಕ್ತಿ ರಂಜನೆಯೂ ಶ್ರೀಮಂತರು ನೀಡಿದ ಹೆಚ್ಚುವರಿ ಆದಾಯದಿಂದಲೇ ನೀಡಲು ಸಾಧ್ಯವಾಯಿತೇ?
ಹೊಸ ಸಿನೇಮಾ ಎರಡು ವಾರಗಳಲ್ಲಿ ತನ್ನ ದುಡ್ಡನ್ನು ಮಲ್ಟಿಪ್ಲೆಕ್ಸ್ನೋಡುಗರ ಮೂಲಕ ವಸೂಲು ಮಾಡಿಕೊಂಡರೆ ಅತಿ ಬೇಗನೇ ಆ ಚಿತ್ರವನ್ನು ಕೇಬಲ್-ಟಿವಿಯ ಮೂಲಕ ಮುಫತ್ತಾಗಿ ಪ್ರಸಾರ ಮಾಡಬಹುದು, ಅಥವಾ ಸುಲಭ ಧರದಲ್ಲಿ ಡಿವಿಡಿ/ವಿಸಿಡಿಗಳನ್ನು ಮಾರಾಟ ಮಾಡಬಹುದು. ವ್ಯಾಪಾರ ಜಗತ್ತಿನ ಮರುವಾದಗಳು ಹೀಗೆ ಅನಂತ.
ದೇವರನ್ನೇ ನಂಬದ ನನಗೆ ತಿಮ್ಮಪ್ಪನ ದರ್ಶನ ಈ ರೀತಿಯಾಗಿ ಆದ ವಿಪರ್ಯಾಸವನ್ನು ನಾನು ಹಂಚಿಕೊಂಡಾಗ ನನ್ನ ಗೆಳೆಯ ಹೇಳಿದ ಮಾತುಗಳು ಹೀಗಿತ್ತು”ನೀನು ತಿರುಪತಿಯಲ್ಲಿ ಪಡೆದ ದರ್ಶನ ನಿನ್ನ ಶ್ರೀಮಂತಿಕೆಯ ಫಲವಂತೂ ಆಗಿರಲಿಕ್ಕೆ ಸಾಧ್ಯವಿಲ್ಲ, ಅದು ಅಧಿಕಾರದ ವಿಷಯವೂ ಅಲ್ಲ. ಇದು ಪ್ರಾಪ್ತಿಯ ವಿಷಯ. ತಿಮ್ಮಪ್ಪನಿಗೆ ನಿಮ್ಮಿಬ್ಬರನ್ನೂ ತಿರುಪತಿಗೆ ಕರೆಯಿಸಿಕೊಂಡು ದರ್ಶನ ನೀಡಬೇಕು ಅನ್ನಿಸಿದರೆ ನೀನು ನಾಸ್ತಿಕನಾಗಿದ್ದರೂ ಅದನ್ನು ತಡೆಯುವ ಶಕ್ತಿ ನಿನಗಿಲ್ಲ ಅನ್ನುವುದಕ್ಕೆ ಇದೇ ಪುರಾವೆ. ದೇವರಿದ್ದಾನೆ– ಹಾಗೂ ತಿಮ್ಮಪ್ಪನ ಕಟಾಕ್ಷ ನಿನ್ನ ಮೇಲಿದೆ ಅನ್ನುವುದಕ್ಕೆ ನಿಮ್ಮಿಬ್ಬರಿಗೂ ಬೇರೇನಾದರೂ ಪುರಾವೆ ಬೇಕೇನು?”
ಅಮುಲ್ ಸಂಸ್ಥೆಯ ಮಂಡಲಿಗಳಲ್ಲಿ ಇಂದಿಗೂ ಸಾಲಿನ ನಿಯಮ ಮುಂದುವರೆದಿದೆ. ಹೀಗೆಂದು ಆ ಹಳ್ಳಿಗಳಲ್ಲಿ ಜಾತಿವಾದ ಕಡಿಮಯೇನೂ ಆಗಿಲ್ಲ. ಆದರೆ ಸಹಕಾರ ಮಂಡಲಿಯಲ್ಲಿ ಸಾಲಿನ ನಿಯಮವನ್ನು ಇಂದಿಗೂ ಬದಲಾಯಿಸಿಲ್ಲ. ಹೆಚ್ಚು ಹಾಲು ಸುರಿಯುವವರಿಗೆ ಬೇರೆ ಸಾಲನ್ನುಮಾಡಬಹುದಾದರೂ ಆ ವ್ಯಾಪಾರಕ್ಕೆ ಮಂಡಲಿಗಳುಇಳಿದಿಲ್ಲ.
ಬಿಡುಗಡೆಯ ಮೊದಲ ದಿನ ನೋಡಿದ “ಪ್ರೇಮದ ಕಾಣಿಕೆ” ಸಿನೇಮಾದಲ್ಲಿ ರೈಲಿನ ಬಾಗಿಲು ತೆಗೆದು ಮೊದಲಿಗೆ ಬೂಟು, ಅಲ್ಲಿಂದ ಮೇಲಕ್ಕೆ ಕಾಲು, ಸೊಂಟ… ಹೀಗೆ ಕ್ಯಾಮರಾ ಪ್ಯಾನ್ ಆಗುತ್ತಾ ರಾಜಕುಮಾರ್ ಮುಖದ ಮೇಲೆ ಕೇಂದ್ರೀಕೃತವಾಗಿದ್ದಾಗ ಆಗಿದ್ದ ಪುಳಕ, ತೆರೆಯ ಮೇಲಕ್ಕೆ ಯಾರೋ ಚಿಮ್ಮಿದ್ದ ಚಿಲ್ಲರೆ ಕಾಸಿನ ಚಿಲ್ಚಿಲ್ಶಬ್ದದ ಅನುಭವವನ್ನು ಖರೀದಿಸುವ ಪರಿ ಹೇಗೆ? ಕಷ್ಟವೇ ಪಡದೆ ಖರೀದಿಸಿದ ಟಿಕೇಟಿನ ಕಿಮ್ಮತ್ತೆಷ್ಟು?
ನಾನು ಕೊಟ್ಟ ಮೇಲಿನ ಉದಾಹರಣೆಗಳು ನಮ್ಮ ದಿನನಿತ್ಯದ ದ್ವಂದ್ವಗಳಷ್ಟೇ. ಆದರೆ ಸ್ಯಾಂಡಲ್ ಈ ದ್ವಂದ್ವಗಳ ವಿಸ್ತಾರವನ್ನು ಹೆಚ್ಚಿಸಿ ಆ ಬಗ್ಗೆ ಹೆಚ್ಚು ಚರ್ಚಿಸುತ್ತಾರೆ. ಅವರು ಕೊಡುವ ಉದಾಹರಣೆಗಳ ಬಗೆಗೂ ನಾವು ಯೋಚಿಸಬೇಕಾಗಿದೆ ಎಲ್ಲವನ್ನೂ ಮಾರುಕಟ್ಟೆಯ ಧರ್ಮಕ್ಕೆ ಒಳಪಡಿಸುತ್ತಿರುವ ಈಚಿನ ವಿದ್ಯಮಾನಗಳನ್ನು ಪ್ರಶ್ನಿಸುತ್ತಾರೆ. ಕೆಲವಾದರೂ ವ್ಯಾಪಾರಾತೀತವಾದ ಹಕ್ಕುಗಳನ್ನು ನಾವು ಜೀವಂತವಾಗಿಡುವುದು ಸಾಧ್ಯವೇ? ಹಣದಿಂದ ಕೊಳ್ಳಲಾಗದ ವಸ್ತುಗಳೇನು. ಅಥವಾ ಕೇವಲ ಹಣದಿಂದಲ್ಲದೇ ಬೇರೆ ರೀತಿಯಲ್ಲಿ ಪಡೆಯಬಹುದಾದ ಸೇವೆಗಳೇನಾದರೂ ಇರಬಹುದೇ? ಮಾರುಕಟ್ಟೆಯ ವ್ಯಾಪಾರಕ್ಕೆ ಯಾವುದಾದರೂ ವಸ್ತು ಅಥವಾ ಸೇವೆ ಇಳಿದ ಕೂಡಲೇ ಪಾಪಭಾವನೆ ಮತ್ತು ನೈತಿಕತೆಯ ಮೌಲ್ಯಗಳನ್ನು ತಕ್ಷಣಕ್ಕೆ ನಾವು ಕಳೆದುಕೊಳ್ಳುತ್ತೇವೆ.
ಸ್ಯಾಂಡಲ್ ಕೊಡುವ ಒಂದು ಸೂಕ್ಷ್ಮ ಉದಾಹರಣೆಯನ್ನು ಗಮನಿಸೋಣ. ಇಸ್ರೇಲ್ ದೇಶದ ಒಂದು ಡೇ ಕೇರ್ ಸೆಂಟರ್ (ಮಕ್ಕಳ ಆರೈಕೆ ಕೇಂದ್ರ)ದಲ್ಲಿ ಒಂದು ಪ್ರಯೋಗ ಮಾಡಲಾಯಿತು. (ಇದೇ ರೀತಿಯ ಒಂದು ಪ್ರಯೋಗದ ಪ್ರಸ್ತಾಪ ಡಬ್ನರ್ ಮತ್ತು ಲೆವಿಟ್ ಬರೆದ ಫ್ರೀಕನಾಮಿಕ್ಸ್ ಎನ್ನುವ ಪುಸ್ತಕದಲ್ಲೂ ಇದೆ). ಮಕ್ಕಳ ಆರೈಕೆ ಕೇಂದ್ರ ಮುಚ್ಚುವ ಸಮಯಕ್ಕೆ ಸರಿಯಾಗಿ ಕೆಲವು ತಂದೆ-ತಾಯಿಗಳು ಬರುತ್ತಿರಲಿಲ್ಲ. ಇದನ್ನು ತಡೆಗಟ್ಟಲು ತಡವಾಗಿ ಬಂದ ತಂದೆ-ತಾಯಿಯರಿಗೆ ಆರೈಕೆ ಕೇಂದ್ರದವರು ದಂಡ ವಿಧಿಸಿದರಂತೆ. ದಂಡ ವಿಧಿಸಿದ್ದೇ ತಡವಾಗಿ ಬರುವವರ ಸಂಖ್ಯೆ ಕಡಿಮೆಯಾಗುವ ಬದಲು ಹೆಚ್ಚಿತು. ಅಧಿಕ ಅವಧಿ ಮಕ್ಕಳ ಆರೈಕೆಗೆ ದಂಡವನ್ನುನೀಡುತ್ತಿದ್ದುದರಿಂದ ಯಾರಿಗೂ ತಮ್ಮ ಮಕ್ಕಳ ಆರೈಕೆಯಲ್ಲಿ ಆ ಕೇಂದ್ರದವರು ಕಾಯುತ್ತಿರಬಹುದು ಎನ್ನುವ ಪಾಪ ಭಾವನೆಯೂ ವಿಷಾದವೂ ಈ ದಂಡದಿಂದ ಮರೆಯಾಗಿ ಹೋಯಿತು! ಡಬ್ನರ್ ಮತ್ತು ಲೆವಿಟ್ ಇದನ್ನು ಮಾರುಕಟ್ಟೆಯ ದೃಷ್ಟಿಯಿಂದ ನೋಡಿದರೆ, ಸ್ಯಾಂಡಲ್ ಇದನ್ನು ನೈತಿಕತೆಯ ದೃಷ್ಟಿಯಿಂದ ನೋಡುತ್ತಾರೆ.
ಸ್ಯಾಂಡಲ್ ನೀಡುವ ಅನೇಕ ಉದಾಹರಣೆಗಳು ನೈತಿಕ ದ್ವಂದ್ವದ ಸರಿ-ತಪ್ಪುಗಳ ನಡುವಿನ ತೆಳುಗೆರೆಯ ಮೇಲೆ ನಿಂತು ನಮ್ಮನ್ನು ಚರ್ಚೆಗೆ ಆಹ್ವಾನಿಸುತ್ತವಾದರೂ, ಕೆಲವು ಉದಾಹರಣೆಗಳಂತೂ ಮಾರುಕಟ್ಟೆಯ ಹೃದಯಹೀನತೆಯನ್ನುತೋರಿಸಿಕೊಡುತ್ತದೆ. ಸಾವು ಬದುಕುಗಳ ವಿಷಯದ ಮಾರುಕಟ್ಟೆಗಳು ಮತ್ತು ಹೆಸರಿಸುವ ಹಕ್ಕುಗಳು ಎನ್ನುವ ಎರಡು ಅಧ್ಯಾಯಗಳಲ್ಲಿ ಮಾರುಕಟ್ಟೆಗಳ ಕರಾಳ ಮುಖ ನಮಗೆ ಕಾಣಸಿಗುತ್ತದೆ. ಉದಾಹರಣೆಗೆ ಯಾರಾದರೂ ಸಾಯಬಹುದೆಂದು – ಯಾವಾಗ ಸಾಯಬಹುದೆಂದು ಪಂದ್ಯ ಕಟ್ಟುವುದು ಎಷ್ಟರ ಮಟ್ಟಿಗೆ ಸಮರ್ಪಕ? ಹಣೆಯ ಮೇಲೆ ಜೀವಾವಧಿ ನಿಲ್ಲುವಂತಹ ಮಾರಾಟ ವಸ್ತುವಿನ ಹಚ್ಚೆ ಹಚ್ಚಿಕೊಳ್ಳುವುದು ಎಷ್ಟು ಸಮರ್ಪಕ? ಈ ರೀತಿಯ ಪ್ರಶ್ನೆಗಳನ್ನು ಸ್ಯಾಂಡಲ್ ಎತ್ತುತ್ತಾರೆ.
ಸ್ಯಾಂಡಲ್ ಕೊಡುವ ಭಿನ್ನ ಉದಾಹರಣೆಗಳಲ್ಲಿ ನಮ್ಮ ನೈತಿಕತೆ ಪೂರ್ಣವಾಗಿ ನಾಶವಾಗಿ ನಾವು ಮಾರುಕಟ್ಟೆಗಳನ್ನು ಹೇಗೆ ಒಪ್ಪಕೊಂಡು ಬಿಟ್ಟಿದ್ದೇವೆನ್ನುವುದು ವೇದ್ಯವಾಗುತ್ತದೆ. Carbon Trading (ಇಂಗಾಲ ವ್ಯಾಪಾರ)ದ ಹೆಸರಿನಲ್ಲಿ ಜಗದೊಳಕ್ಕೆಇಂಗಾಲಾಮ್ಲವನ್ನು ಬಿಟ್ಟು ಆ ಮಾಲಿನ್ಯಕ್ಕೆ ರೊಕ್ಕ ಕಟ್ಟುವ ಮಾರುಕಟ್ಟೆಯಿರುವುದು ನೈತಿಕತೆಗೂ ಒಂದು ಸಮಜಾಯಿಷಿಯನ್ನು ಕೊಡುವ ಹಕ್ಕನ್ನುನೀಡಿಬಿಟ್ಟಿದೆ. ಹೀಗೆಯೇ ಕಾನೂನು ಬದ್ಧವಾಗಿ ವನ್ಯಜೀವಿಗಳ ಬೇಟೆ ಮತ್ತು ಅದರಿಂದ ಬಂದ ಹಣದಿಂದ ವನ್ಯಜೀವಗಳ ಸಂರಕ್ಷಣೆ ಮಾಡುವ ವಿರೋಧಾಭಾಸದಂತಹ ಉದಾಹರಣೆಗಳು ಯಾವುದಕ್ಕೂ ಮಾರುಕಟ್ಟೆಯಿರುವುದನ್ನು ಮಾರುಕಟ್ಟೆ ಎಲ್ಲಕ್ಕೂ ಒಂದು ಬೆಲೆ ನಿಗದಿಪಡಿಸುವ ತಾಕತ್ತು ತೋರಿಸುತ್ತದೆಂಬುದನ್ನೂನಿರೂಪಿಸುತ್ತದೆ. ಇಂಥ ಮಾರುಕಟ್ಟೆಗಳು ಅಸ್ತಿತ್ವಕ್ಕೆ ಬಂದಾಗ ಕೆಲವಾದರೂ ಪ್ರಶ್ನೆಗಳನ್ನು ಕೇಳಲು ಸ್ಯಾಂಡಲ್ ಥರದ ಜನ ಬೇಕು.
ಹಾಗೆಯೇ ಮಾರುಕಟ್ಟೆಗೆ ಬರಲೇ ಬಾರದ ಅನೇಕ ವಸ್ತುಗಳೂ ಇಂದು ಯಾವುದೇ ಚರ್ಚೆಯಿಲ್ಲದೆ ನಮ್ಮ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿವೆ. ನೀರಿನ ವ್ಯಾಪಾರ (ಅದು ಟ್ಯಾಂಕರ್ ಮೂಲಕವೇ ಇರಲೀ ಅಥವಾ ಬಾಟಲಿಯಲ್ಲಿ ಮಾರುವ ನೀರೇ ಇರಲಿ) ಅನೈತಿಕವಾದ ವ್ಯಾಪಾರವೇ. ರಸ್ತೆಗೊಂದು ಟೋಲ್ಬೂತ್ ಕಟ್ಟಿ ಪರ್ಯಾಯ ಮುಫತ್ತು ಮಾರ್ಗ ನೀಡದೇ ರಸೀದಿ ಕತ್ತರಿಸುವ ಸುಲಿಗೆಯೂ ಈ ಅನೈತಿಕ ಮಾರುಕಟ್ಟೆಗೆ ಸಂದದ್ದೇ. ಅಕ್ರಮ-ಸಕ್ರಮ, ಪೋಲೀಸ್ ಠಾಣೆಗಳನ್ನು ಪ್ರಾಯೋಜಿಸಿ ಅದರ ಮೇಲೆ ತಮ್ಮ ಜಾಹೀರಾತನ್ನು ಹಾಕಿದಾಕ್ಷಣ ನಾವು ನೈತಿಕತೆಯ ಲಕ್ಷ್ಮಣ ರೇಖೆಯನ್ನು ದಾಟಿದ್ದೇವೆ ಎಂಬುದು ಮಂದಟ್ಟಾಗುತ್ತದೆ. ವಾರ್ತೆಗಳಂತೆ ಕಾಣುವ ಜಾಹೀರಾತು, ದುಡ್ಡು ಕೊಟ್ಟು ಹಾಕಿಸುವ ವಾರ್ತೆಗಳೂ ಹಿಂದೆ ಭ್ರಷ್ಟತೆಯೆಂದು ಪರಿಗಣಿಸಲಾಗುತ್ತಿತ್ತು. ಆದರಿಂದು ಅವು ಹಕ್ಕೇ ಅಲ್ಲ – ಹೊಸತನ ಸೃಜನಶೀಲತೆಯಿಂದ ಕೂಡಿದ ಕ್ರಾಂತಿಕಾರಿ ಆಲೋಚನಾಲಹರಿಯಾಗಿಬಿಟ್ಟಿದೆ.
ಸ್ಯಾಂಡಲ್ ಕೇಳುವ ಪ್ರಶ್ನೆಗಳನ್ನು ಗಮನದಲ್ಲಿಟ್ಟುಕೊಂಡೇ ನಾವು ಸ್ಪೆಕ್ಟ್ರಂ ಹರಾಜು ಹಾಕುವ ಸಂದರ್ಭದಲ್ಲಿ ಅತ್ಯವಶ್ಯಕವಾಗಿ ಉಪಯೋಗಿಸುವ ಬಡವನಮೊಬೈಲನ್ನೂ, ಕಲ್ಲಿದ್ದಿಲಗಣಿಯ ಗುತ್ತಿಗೆ ನೀಡುವ ಸಮಯಕ್ಕೆ ಕ್ಷೀಣಕಾಂತಿಯ ಮಿಣುಕು ಬಲ್ಬಿನಡಿಯಲ್ಲಿ ಓದುತ್ತಿರುವ ಬಡವಿದ್ಯಾರ್ಥಿಯನ್ನುಮರೆಯದಿರುವ ಉತ್ತಮ ಅರ್ಥನೀತಿಯನ್ನು ಪಾಲಿಸುವ, ಉತ್ತಮ ಸಮಾಜವನ್ನು ನಿರ್ಮಿಸುವ, ಉತ್ತಮ ಸರಕಾರವನ್ನು ಸ್ಥಾಪಿಸುವ ಪ್ರಯತ್ನಗಳ ಬಗೆಗೂಯೋಚಿಸಬೇಕು. ಎಲ್ಲವನ್ನೂ ಹರಾಜು-ಲಾಭದ ಹೆಚ್ಚಳದ ದೃಷ್ಟಿಯಿಂದ ನೋಡದೇ ವಿಶಾಲವಾದ ದೂರದೃಷ್ಟಿಯಿಂದ ನೋಡುವ ತಾಳ್ಮೆ ನಮಗಿದೆಯೇ, ಅಥವಾ ವ್ಯಾಪಾರದತುರ್ತಿಗೆ ನಾವು ಎಲ್ಲವನ್ನೂ ಮಾರಿಕೊಂಡವರೇ? ಎಂಬ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕಾಗಿದೆ.
ಮೂಲ ಲೇಖನ – ಜೂನ್ 25, 2012. ಪರಿಷ್ಕರಣೆಫಬ್ರವರಿ 16, 2014.

‍ಲೇಖಕರು G

October 20, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Kiran

    Sir, thank you for a fabulous article (as usual!). From Sandel to Sandalwood!!
    Michael Sandel is a very interesting economist.
    Some of his hypotheses were prevalent in India in days of yore; lost in time and getting rejuvenated elsewhere!
    The wheel of time and Karma!! What poet Bhasa called “CHAKRAARA PANKTHI”
    Please watch Michael Sandel’s TED talk on the same issue: very hard hitting!

    ಪ್ರತಿಕ್ರಿಯೆ
  2. Anil Talikoti

    ಅರ್ಥದ ಬಗ್ಗೆ ಅರ್ಥವಾಗಂತೆ ಬರೆಯಬಲ್ಲ ನಿಸ್ಸೀಮರಲ್ಲಿ ನೀವೊಬ್ಬರು. ಎಲ್ಲದಕ್ಕೂ, ಎಲ್ಲವನ್ನು ಜಸ್ಟಿಫೈ ಮಾಡಬಲ್ಲ ಯುಗದಲ್ಲಿದ್ದೇವೆ ಈಗ -ಯಾವುದನ್ನು ತಪ್ಪೆಂದು ಅರ್ಥೈಸಲು ಅಸಮರ್ಥರಾಗುತ್ತಿದ್ದೇವೆನೋ ಅನಿಸುತ್ತದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: