(ಕಥೆಯ ಮೊದಲ ಭಾಗ)
ಶ್ರಾವಣನಿಗೂ ಈ ಕೋರ್ಟು ಇತ್ಯಾದಿಗಳು ತನ್ನ ಖಾಸಗೀ ಸಮಯವನ್ನು ಕಬಳಿಸುತ್ತಿರುವುದು ಚಡಪಡಿಕೆಯುಂಟು ಮಾಡಿದೆ. ಅವನಿಗೂ ಆಗಾಗ ಅನ್ನಿಸುತ್ತದೆ – ಮನೆ ಮಾರಲು ನಿಶ್ಚಯಿಸಿರುವಾಗ ಸುಮ್ಮಸುಮ್ಮನೆ ತಾನೇಕೆ ಹುಚ್ಚನಂತೆ ಕೂರ್ಟು ಕಛೇರಿಗಳೆಂದು ಅಲೆಯುತ್ತಿರುವುದು? ಆದರೂ ಹಿಡಿದ ಪಟ್ಟನ್ನು ಬಿಡಲು ಅವನ ಮನಸ್ಸೊಪ್ಪದು. ಜತೆಗೆ ಈಗ ಈ ಮನೆ ಮಾರಾಟವಾಗುವ ಖಾತ್ರಿಯಿದೆಯೇ? ಇದೂ ಸಾಲದೆಂಬಂತೆ, ರಂಗಾರೆಡ್ಡಿಯ ಮೇಲೆ ತಾನೀಗ ಹೂಡಿರುವ ಸಮರ ನೋಟೀಸುಗಳನ್ನು ಹಂಚುವ ಪೋಸ್ಟ್ ಮೆನ್ ನಿಂದಾಗಿ ಇಡೀ ಏರಿಯಾಕ್ಕೇ ತಿಳಿದಿರುವಾಗ, ಇದೊಂದು ಹಮ್ಮಿನ ಪ್ರಶ್ನೆಯೂ ಆಗಿಬಿಟ್ಟಿರುವುದು ಸಹಜ. ಸಮೀರ್ ಕುಮಾರ್ ಬಾಜಾ ಬಜಂತ್ರಿಗಳ ಸಮೇತ ತನ್ನ ಮನೆಗೆ ಬಂದದ್ದು, ಈ ಎಲ್ಲಕ್ಕೂ ಒಂದು ಹೊಸ ಆಯಾಮ ಸೇರಿಸಿ ಇನ್ನೂ ವಿಸ್ತ್ರುತ ರೂಪ ಕೊಟ್ಟುಬಿಟ್ಟಿದೆ. ಈಗ ಹಿಂಜರಿದರೆ ಮಾನ ಹರಾಜಾದಂತೆಯೇ ಲೆಕ್ಕ. ತಿರುಮಲಗಿರಿಯಲ್ಲೊಂದು ಮನೆ ಕಟ್ಟಿ ಅಲ್ಲಿಗೆ ಹೊರಟುಬಿಟ್ಟಿದ್ದರೆ, ಈ ಎಲ್ಲಕ್ಕೂ ಒಂದು ಮಂಗಳ ಹಾಡಿಬಿಡಬಹುದಿತ್ತು. ಆದರೂ ತಾನೀಗಿರುವ ವರ್ತುಲದಲ್ಲಿ ಮನೆ ಮಾರಾಟವಾದ ಹೊರತು ತಿರುಮಲಗಿರಿಯ ಮನೆ ಕಟ್ಟುವುದಕ್ಕಾಗುವುದಿಲ್ಲ – ಹುಚ್ಚು ಬಿಡುವವರೆಗೂ ಮದುವೆಯಾಗುವುದಿಲ್ಲ.
******
ಹೀಗೊಂದು ದಿನ ರಾತ್ರೆ ಎಲ್ಲರೂ ನಿದ್ರೆಯಲ್ಲಿದ್ದಾಗ ಭಾಸ್ಕರರಾಯರು ಇದ್ದಕ್ಕಿದ್ದಂತೆ ಧಿಗ್ಗನೆದ್ದು ಕುಳಿತರು. ಹಾಗೆ ಇದ್ದಕ್ಕಿದ್ದಂತೆ ಎಂದೂ ಅವರು ಬೆಚ್ಚಿಬಿದ್ದು ಎದ್ದವರಲ್ಲ. ಕಳೆದೆರಡು ದಿನಗಳಿಂದಲೂ ಹೈದರಾಬಾದು ಹತ್ತಿ ಉರಿಯುತ್ತಿತ್ತು. ಅರ್ಥಾತ್: ಹಿಂದೂಗಳಿಗೂ ಮುಸಲ್ಮಾನರಿಗೂ ಜೋರು ಕಾಳಗ ನಡೆಯುತ್ತಿತ್ತು. ಯಾವುದೋ ರಾಜಕೀಯ ಕಾರಣಕ್ಕೆ ಇದು ನಡೆಯುತ್ತಿದೆ, ಇದರ ಬಿಸಿ ಜನಸಾಮಾನ್ಯರಿಗೆ ತಟ್ಟುವುದಿಲ್ಲ ಎಂಬ ಮಾತನ್ನು ರಾಯರು ನಂಬಲಿಲ್ಲ. ಅವರಿಡೀ ದೇಹವನ್ನು ಭಯವೇ ಆವರಿಸಿತ್ತು. ಬದುಕಿನಷ್ಟೇ ಅಸಂಗತವಾಗಿ ಕಂಡ ಈ ಘಟನಾವಳಿಯನ್ನು ನೋಡಿ, ಭಾಸ್ಕರರಾಯರು ಏನು ಮಾಡಲೂ ತೋಚದವರಾಗಿ ಚಿಂತೆಗೊಳಗಾದರು. ಯಾವುದೋ ಆಸ್ತಿಯ ವಿಷಯಕ್ಕೆ ನಡೆಯಿತೆನ್ನಲಾದ ಒಂದು ಸಣ್ಣ ಘಟನೆ ಹಿಂದೂ ಮುಸಲ್ಮನರ ನಡುವಿನ ಜಟಾಪಟಿಯಾಗಿ ಈ ವಿಸ್ತೃತ ವಿಕರಾಳ ರೂಪ ಪಡೆದಿತ್ತು. ಇಲ್ಲಿಯೂ, ಅಂದರೆ, ರಂಗಾರೆಡ್ಡಿಯ ವಿಷಯದಲ್ಲಿಯೂ ಆಸ್ತಿಗೆ ಸಂಬಂಧಿಸಿದ ಜಟಾಪಟಿಯೇ ನಡೆಯುತ್ತಿದೆ ಎಂಬುದಕ್ಕೆ ಭಾಸ್ಕರರಾಯರು ಅವಶ್ಯಕತೆಗಿಂತ ಹೆಚ್ಚಿನ ಅರ್ಥ ಕಲ್ಪಿಸಿದರೆನ್ನಿಸುತ್ತದೆ. ಅರ್ಥರಹಿತವಾಗಿ, ನಿಷ್ಕಾರಣವಾಗಿ ಪ್ರೀತಿಗೂ ಅಲ್ಲದೇ, ದ್ವೇಷಕ್ಕೂ ಅಲ್ಲದೆ ಜನರನ್ನು ಕೊಲ್ಲುವ ಈ ಪ್ರಕ್ರಿಯೆ ಭಾಸ್ಕರರಾಯರಿಗೆ ಆಘಾತ ಉಂಟುಮಾಡಿತ್ತು.
ಶ್ರಾವಣನಂತೂ, ರಂಗಾರೆಡ್ಡಿಯ ಕೂದಲನ್ನೂ ಕೊಂಕಿಸಲಾಗದ ತನ್ನ ಅಸಹಾಯಕತೆಯನ್ನು ಒಂದು ಹಠವಾಗಿಸಿಕೊಂಡು, ಮನೆಯವರ ಮೇಲೆಲ್ಲಾ ಕೆಂಡಕಾರುತ್ತಾ, ಕಟ್ಟಿರುವ ಕಟ್ಟಡವನ್ನು ಉರುಳಿಸುವ ಶಪಥಂಗೈದು ಓಡಾಡುತ್ತಿದ್ದ. ಇದನ್ನವನು ಒಂದು ತಾತ್ವಿಕ ಪ್ರಶ್ನೆಯನ್ನಾಗಿ ಮಾಡಿಕೊಂಡು ಹೋರಾಡಬೇಕೆಂಬ ಛಲ ಹಿಡಿದು ಮುಂದುವರೆದದ್ದು – ರಾಯರಿಗೆ – ಈಗ ಈ ಕೊಲೆಸುಲಿಗೆ ನಡೆಯುತ್ತಿರುವ ಇಂಥ ಸಮಯದಲ್ಲಿ ತತ್ವಕ್ಕಾಗಿ, ದಬ್ಬಾಳಿಕೆಯ ವಿರುದ್ಧ ಹೋರಾಡುತ್ತೇನೆಂಬ ಶ್ರಾವಣನ ಹಠದಷ್ಟೇ ಅರ್ಥರಹಿತವಾಗಿ ಜಾತಿಗನುಸಾರವಾಗಿ ಜನರನ್ನು ಕೊಲ್ಲುವುದೂ ಭಾಸ್ಕರರಾಯರಿಗೆ ಅರ್ಥಹೀನವಾಗಿ ಕಂಡಿತ್ತು. ಎರಡು ದಿನದ ಹಿಂದಿನಿಂದಲೂ, ಸುಪ್ತ ಜಾಗೃತ ಅವಸ್ಥೆಗಳ ಮಧ್ಯೆ ಓಲಾಡುತ್ತಾ, ಸಮಯದ ಪ್ರಜ್ಞೆಯೇ ಇಲ್ಲದೆ ಭಾಂಗ್ ಸೇವಿಸಿದವರ ರೀತಿಯಲ್ಲಿ ಭಾಸ್ಕರರಾಯರು ಬಿದ್ದುಕೊಂಡಿದ್ದರು.
ಸಣ್ಣಂದಿನಿಂದಲೂ ಶ್ರಾವಣ ಸ್ವಲ್ಪ ಹಠಮಾರಿಯೇ. ಅವನ ಹಠ ಎಷ್ಟರ ಮಟ್ಟಿಗೆಂದರೆ, ಮಕ್ಕಳು ಯಾವ ಬಟ್ಟೆ ತೊಡಬೇಕು ಎಂಬುದರಿಂದ ಹಿಡಿದು ಯಾವ ಸಮಯಕ್ಕೆ ಉಚ್ಚೆ ಹುಯ್ಯಬೇಕು ಎಂಬುದರವರೆಗೆ ನಿರ್ಧರಿಸಿ, ಕಾರ್ಯಗತವಾಗುವಂತೆ ನೋಡಿಕೊಳ್ಳುವವ ಮತ್ತು ಇದಕ್ಕೆ ಸರಿಯಾದ ಇಂಧನ ಒದಗಿಸುವವನು ಸುಬ್ಬಾರಾವು. ಇಬ್ಬರೂ ಸೇರಿ ರಂಗಾರೆಡ್ಡಿಯ ಹಮ್ಮಿನ ಸಂಕೇತವಾಗಿದ್ದ ಆ ಕಟ್ಟವನ್ನಿಳಿಸಲು, ಗಾಳಿ, ಬೆಳಕು ಸಾಕಾಗುವುದಿಲ್ಲ ಎಂಬ ಕಾರಣದಿಂದ ಹಿಡಿದು ಕಾರ್ಪೊರೇಷನ್ ರೂಲ್ಸಿನವರೆಗೆ ಎಲ್ಲವನ್ನೂ ಉಪಯೋಗಿಸ ಹೊರಟ ಹಠದ ಫಲವಾಗಿ ಮನೆಗೆ ಮ್ಯುನಿಸಿಪಾಲಿಟಿಯವರು, ಕೋರ್ಟಿನವರು, ಷಫೀಕನ ಎಂದಿನ ಗಿರಾಕಿಗಳು – ಹೀಗೆ ಕ್ಷಣಕ್ಕೊಮ್ಮೆ ಜನ ಬರುವ ಹಾಗಾಗಿತ್ತು.
ಹೀಗೆ ಬಂದವರೆಲ್ಲಾ ಶ್ರಾವಣನ ಮನೆಯ ಆತಿಥ್ಯ ಸ್ವೀಕರಿಸಿ, ಇಡೀಮನೆಯನ್ನು, ಹಿಂದಿನ ರಂಗಾರೆಡ್ಡಿಯ ಹೊಸ ಪೋರ್ಷನ್ನನ್ನೂ ಪರಿಶೀಲಿಸಿ ಹೊರಡುವವರೇ. ಹೀಗೆ ಬಂದವರನ್ನೆಲ್ಲಾ ರಂಗಾರೆಡ್ಡಿಯೂ ಯಾವ ತರಲೆಯಿಲ್ಲದೇ ಬರಮಾಡಿಕೊಂಡು ಪ್ರೀತಿಯಿಂದ ಸಹಕರಿಸಿದನಂತೆ!!
*****
ಶ್ರಾವಣನಿಗೆ ಈಗ ಈ ಎರಡು ದಿನದಿಂದ ದೂರದರ್ಶನವನ್ನು ಹಚ್ಚಲೂ ಭಯವಾಗುತ್ತಿದೆ. ಅದಕ್ಕೆ ಕಾರಣವಿಲ್ಲದಿಲ್ಲ. ಇನ್ನು ಅನವಶ್ಯಕವಾಗಿ ತನ್ನ ಮಗ ಕೋಮು ಸಂಬಂಧಿತ ಚರ್ಚೆ ಪ್ರಾರಂಭಿಸಿಬಿಡುತ್ತಾನೆ. ಮನೆಯಲ್ಲಿ – ಅದರಲ್ಲೂ ಸುತ್ತಮುತ್ತೆಲ್ಲಾ ಭಯವೇ ಆವರಿಸಿರುವಾಗ ಈ ವಿಷಯ ಚರ್ಚಿಸುವುದು ತನಗೆ ಹಿಡಿಸುವುದಿಲ್ಲ. ಇದರ ಜತೆಗೇ ಅಪ್ಪನ ಭಯವೂ ಉಂಟು. ಈಗ ನಡೆಯುತ್ತಿರುವ ಈ ಸಾವುನೋವುಗಳ ವಿಷಯ ಚರ್ಚೆಗೊಳಗಾದರೆ, ಅಪ್ಪ ತನಗೆ ಆಫೀಸಿಗೂ ಹೋಗಲು ಬಿಡದಂತೆ ವರಾತ ಹಚ್ಚುತ್ತಾರೆ. ಮೊದಲೇ ಮುಸಲ್ಮಾನರು ತುಂಬಿರುವ ಏರಿಯಾ ಎಂದು ಅಪ್ಪನಿಗೆ ಇಲ್ಲದ ಭಯವಿದೆ. ಈ ಎರಡು ದಿನಗಳಿಂದ ಪತ್ರಿಕೆಯವನೂ ಕೈಕೊಟ್ಟದ್ದು – ಈ ಕಾರಣದಿಂದಲೇ – ಶ್ರಾವಣನಿಗೊಂದು ನಿರಾಳ ಭಾವ ತಂದಿತ್ತು.
ಆದರೂ ಈ ಎಲ್ಲ ವಿಷಯಗಳೂ ಅಪ್ಪನಿಗೆ ತಿಳಿದೇ ಇಲ್ಲವೆಂದೇನೂ ಶ್ರಾವಣ ಭಾವಿಸಿಲ್ಲ. ಅವರಿಗೆ ಖಂಡಿತವಾಗಿಯೂ ತಿಳಿದಿರುತ್ತದೆ. ಆದ್ದರಿಂದಲೇ ಆಗಾಗ ತಾನು ಅಪ್ಪನೊಂದಿಗೆ ಮಾತನಾಡಿ, ಇದೆಲ್ಲಾ ಹೈದರಾಬಾದಿನಲ್ಲಿ ಮಾಮೂಲಿ ವಿಷಯ ಎಂದೆಲ್ಲಾ ಹೇಳಿ ಸ್ವಲ್ಪ ಸಮಾಧಾನ ಮಾಡಬೇಕು ಎಂತಲೂ ಅನ್ನಿಸುವುದು. ಆದರೂ ಆ ಅನಿಸಿಕೆಯನ್ನು ಹತ್ತಿಕ್ಕಲು ಒಂದೇ ಒಂದು ಕಾರಣವಿದೆ. ಈ ವಿಷಯ ಚರ್ಚೆಯಾಗುತ್ತಿದ್ದಂತೆಯೇ ಅಪ್ಪ – ಎಲ್ಲರೂ ಮೈಸೂರಿಗೆ ಹೋಗೋಣವೆಂದು ಪ್ರಾರಂಭಿಸಿಬಿಡುತ್ತಾರೆ. ಈಗ ಈ ಎಲ್ಲ ಗೊಂದಲಗಳ ನಡುವೆ ಆ ವಿಷಯವನ್ನು ಚರ್ಚಿಸುವ ತಾಳ್ಮೆಯಂತೂ ತನ್ನಲ್ಲಿಲ್ಲ. ಸೇತುವೆಯಾಚೆ, ತಿರುಮಲಗಿರಿಯಲ್ಲಿ ಹೀಗಲ್ಲಾ ನಡೆಯುವುದಿಲ್ಲ ಎಂದು ಹೇಳಬಯಸಿದರೂ, ಅಪ್ಪನ ದೃಷ್ಟಿಯಲ್ಲಿ ಹೈದರಾಬಾದು ಹೈದರಾಬಾದಾಗಿಯೇ ಉಳಿಯುವುದರಿಂದಾಗಿ ಅವರಿಗೆ ಸಮಾಧಾನ ಹೇಳುವುದೂ ತನ್ನ ಮನಶ್ಶಾಂತಿಗೇ ಕುತ್ತು ಎಂದು ಹೆದರಿ ತನ್ನ ಪಾಡಿಗೆ ತಾನಿದ್ದುಬಿಟ್ಟಿದ್ದಾನೆ.
*****
ಇದೀಗ ರಾತ್ರೋರಾತ್ರಿ ಧಿಗ್ಗನೆದ್ದು ಕುಳಿತ ರಾಯರಿಗೆ ದಿನವೂ ಬಂದು ಹೋಗುತ್ತಿದ್ದ ಜನರ ನೆನಪು ಬಂದದ್ದೇಕೆಂದು ತಿಳಿಯಲಿಲ್ಲ. ಅಥವಾ ಇದು ತಮ್ಮ ಎಂದಿನ ಮಂಪರಿನ ಸ್ಥಿತಿ ಇರಬಹುದೇ ಎಂಬುದೂ ಅರ್ಥವಾಗದೇ ದಿಗ್ಭ್ರಾಂತರಾದರು. ಮೊನ್ನೆ ನಡೆದದ್ದೂ ಹೀಗೆಯೇ – ಮನೆ ಮಾರಾಟಕ್ಕೆಂದು ಮನೆ ನೋಡಲು ಷಫೀಕ್ ಕರೆತರುವ ಜನ, ರಂಗಾರೆಡ್ಡಿಯ ಕಟ್ಟಡದಿಂದ ಇನ್ಸ್ ಪೆಕ್ಷನ್ಗಾಗಿ ಬರುವ ಜನ…. ಹೀಗೆ ಜನಾರಣ್ಯದ ಅಭ್ಯಾಸವಾಗಿಬಿಟ್ಟಿದ್ದ ರಾಯರು ತಾವು ಮಧ್ಯಾಹ್ನ ಮಲಗಿದ್ದಾಗ ಲಯಬದ್ಧವಾಗಿ ಗೇಟ್ ತಟ್ಟಿದ ಶಬ್ದ ಕೇಳಿಸಿತ್ತು. ಅಂದೇಕೋ, ಯಾರೂ ಮನೆಯಲ್ಲಿ ಇರಲಿಲ್ಲ. ರಾಯರು ಬಾಗಿಲು ತೆರೆದು ಹೊರಬಂದು ನೋಡಿದರೆ, ಉರ್ದುವಿನಲ್ಲಿ ಮಾತಾಡುತ್ತಿದ್ದ ದೊಡ್ಡ ಗುಂಪೊಂದು ಹೊರಗೆ ನಿಂತಿತ್ತು. ರಾಯರು ಏನೂ ತೋಚದವರಾಗಿ ಬಯಲಿನಲ್ಲಿ ನಿಂತಿದ್ದರು. ನಂತರ ಕುತೂಹಲದಿಂದ ಗೇಟಿನ ಬಳಗ ಹೋಗಿ ಗೇಟನ್ನೂ ತೆರೆದರು. ಸಮೀಪ ಹೋದಕೂಡಲೇ, ಗುಂಪಿನ ಪ್ರತಿ ವ್ಯಕ್ತಿಯ ಕೈಯಲ್ಲೂ ಕತ್ತಿ, ಖಡ್ಗ, ಸೈಕಲ್ ಚೇನು ಇತ್ಯಾದಿಯಾಗಿ ಆಯುಧಗಳನ್ನು ಕಂಡ ರಾಯರು ಏನೂ ತೋರದೇ ಕಂಬವಾದರು. ಆ ಗುಂಪಿನಲ್ಲಿ ಷಫೀಕ್ ಅಲಿಯೂ ಇದ್ದಹಾಗಿತ್ತು. .. ಅಥವಾ ಅದು ಕೇವಲ ರಾಯರ ಭ್ರಮೆಯಿದ್ದಿರಲೂ ಬಹುದು.
ಗುಂಪಿಗೆ ಏನನ್ನಿಸಿತೋ.. ಯಾರೂ ಮುಂದುವರೆಯಲಿಲ್ಲ. ಭಾಸ್ಕರರಾಯರು ಷಫೀಕ್ ಅಲಿ ಎಂದು ಭಾವಿಸಿದ್ದ ವ್ಯಕ್ತಿ “ಬುಡ್ಡಾ ಛೋಡೋ ಮಿಯಾ..” ಎಂದಂತಾಗಿ, ಗುಂಪು ರಸ್ತೆಯಂಚಿಗೆ ಕರಗಿ ಹೋಯಿತು. ಮುದುಕನಾದದ್ದಕ್ಕೆ ರಾಯರಿಗೆ ಜೀವನದಲ್ಲಿ ಮೊದಲಬಾರಿಗೆ ನಿರಾಳವಾದಂತೆ ಅನ್ನಿಸಿದರೂ, ಏನೂ ತೋಚದೇ ಭಾರ ಹೃದಯದಿಂದ ಬಾಗಿಲು ಹಾಕಿ ಬಂದರು. ಸಂಜೆಗೆ ಶ್ರಾವಣ ಬಂದು ಬಾಗಿಲನ್ನು ಲಯಬದ್ಧವಾಗಿ ಬಡಿದಾಗ, ರಾಯರಿಗೆ ಬಾಗಿಲಬಳಿ ಹೋಗಲೂ ಭಯವಾಯಿತು. ಕಡೆಗೆ ಕನ್ನಡದಲ್ಲಿ ಮಗ ಸೊಸೆ ಮಾತಾಡಿದಾಗಲೇ ರಾಯರು ಬಾಗಿಲು ತೆರೆದದ್ದು.
ಪ್ರಸ್ತುತ ಹೀಗೆ ಧಿಗ್ಗನೆದ್ದು ಕುಳಿತುಕೊಳ್ಳುವುದಕ್ಕೆ ಕಾರಣ ಕನಸೋ ನನಸೋ ತಿಳಿಯದು. ಅಂದು ನಡೆದ ಈ ಘಟನೆಯನ್ನು ರಾಯರು ಯಾಕೋ, ರಾಯರು ಯಾರಿಗೂ ಹೇಳಲಿಲ್ಲ. ಹೇಳದಿರುವುದಕ್ಕೆ ಕಾರಣ ಅದು ನಿಜವಾಗಿ ನಡೆದದ್ದರ ಬಗ್ಗೆ ರಾಯರಿಗಿದ್ದ ಮೂಲಭೂತ ಅನುಮಾನವೇ ಇರಬಹುದು. ಸುತ್ತಲೂ ಮುಸಲರು ತುಂಬಿದ್ದ ಆ ಜಾಗದಲ್ಲಿ ರಾತ್ರೋರಾತ್ರಿ ಜೆಹಾದಿನ ಕರೆ ಬಂತಂತಾಗಿ ರಾಯರು ಬೆಚ್ಚಿದರು. ರಾಯರಿಗೆ ಮೊಮ್ಮಗನ ನೆನಪಾಯಿತು. ಸಮಯ ನೋಡಿದರೆ ಆಗಲೇ ಬೆಳಗಾಗಲಿಕ್ಕೆ ಬಂದಿತ್ತು. ಮುಂಜಾನೆ ಐದೂವರೆಗೇ ಮೊಮ್ಮಗ ಏಂಸೆಟ್ ಶಿಕ್ಷಣಕ್ಕೆಂದು ನಾಂಪಲ್ಲಿಗೆ ಹೋಗಬೇಕು. ಹೊರಗೆಲ್ಲಾ ಗಲಾಟೆ. ಎದ್ದು ನೋಡಿದರೆ ಹಾಸಿಗೆ ಬರಿದಾಗಿತ್ತು. ರಾಯರಿಗೆ ಮಂಪರಿನಲ್ಲಿ ಏನೂ ತೋಚದಾಗಿ ಒಂದು ಕ್ಷಣ ನಿಂತರು.
ಅವರ ಮೈಯಿಂದ ಬೆವರು ಧಾರಾಕಾರ ಹರಿಯಿತು. ಮೇಲೆ ಗಡಿಯಾರದ ಶಬ್ದ ಟಿಕ್ ಟಿಕ್ ಎಂದು ಕಿವಿಗಪ್ಪಳಿಸುವಂತೆ ಹೊಡೆದುಕೊಳ್ಳುತ್ತಿತ್ತು. ಅದರ ಲಯಬದ್ಧತೆಯಿಂದ ರಾಯರು ವಿಚಲಿತರಾದರು. ಕಳೆದೆರಡು ದಿನಗಳಿಂದಲೂ ಅಂದು ಗೇಟ್ ಬಡಿವ ಶಬ್ದ ಕೇಳಿದಂತೆನಿಸಿದಾಗಿನಿಂದಲೂ ರಾಯರಿಗೆ ಯಾವುದೇ ಲಯಬದ್ಧ ಶಬ್ದವನ್ನು ತಡೆದುಕೊಳ್ಳಲು ಕೈಲಾಗುತ್ತಿರಲಿಲ್ಲ. ರಾಯರು ಮೂತ್ರ ವಿಸರ್ಜಿಸಲೆಂದು ಬಾತ್-ರೂಮು ಹೊಕ್ಕರೆ – ಅಲ್ಲಿಯೂ ನಲ್ಲಿಯಿಂದ ತೊಟ್ಟಿಕ್ಕುತ್ತಿದ್ದ ನೀರಿನ ಶಬ್ದ ಕೇಳಿಸಿತು. ಇದನ್ನು ತಡೆಯಲಾಗದ ರಾಯರು ಮೂತ್ರ ವಿಸರ್ಜಿಸುವುದನ್ನೂ, ಮುಖ ತೊಳೆಯುವುದನ್ನೂ ಮರೆತು ನಲ್ಲಿಯನ್ನು ಗಟ್ಟಿಯಾಗಿ ತಿರುಗಿಸಿದರು. ಆದರೂ ಅದು ತೊಟ್ಟಿಕ್ಕುವುದು ನಿಲ್ಲಲಿಲ್ಲ. ಬೇಸರ ಬಂದಂತಾಗಿ ಅದಕ್ಕೊಂದು ಬಟ್ಟೆ ತುರುಕಿದರು. ತುರುಕಿದಾಗ ಆವರಿಸಿದ ಮೌನ ಅಸಹನೀಯವಾದರೂ, ಅದು ಶಬ್ದಕ್ಕಿಂತ ವಾಸಿ ಅನ್ನಿಸಿತು. ಹೊರಬಂದು ನಿರಾಳ ಉಸಿರುಬಿಡುವಷ್ಟರಲ್ಲಿ ಮತ್ತೆ ಶಬ್ದ ಪ್ರಾರಂಭವಾಯಿತು. ಈಗ ಕಟ್ಟಿದ್ದ ಬಟ್ಟೆಯನ್ನೂ ದಾಟಿ ನೀರು ತೊಟ್ಟಿಕ್ಕುತ್ತಿತ್ತು. ಈ ಬಾರಿ ಭಾಸ್ಕರರಾಯರು ತಮ್ಮೆಲ್ಲ ಬಲವನ್ನೂ ಪ್ರಯೋಗಿಸಿ ನಲ್ಲಿಯನ್ನು ಮತ್ತಷ್ಟು ಗಟ್ಟಿಯಾಗಿ ತಿರುಗಿಸಿದಾಗ ವಾಷರ್ ಕಿತ್ತುಬಂದು ನೀರು ಧಾರಾಕಾರವಾಗಿ ಹರಿಯತೊಡಗಿತು. ಶಬ್ದದ ಲಯಬದ್ಧತೆಯನ್ನು ಒಂದೆರಡು ಕ್ಷಣ ಅವರ ಮನಸ್ಸು ಮರೆತರೂ, ಈಗಿನ ಅಸಹಾಯಕ ಪರಿಸ್ಥಿತಿಗೆ ಅವರಿಗೆ ತಮ್ಮ ಮೇಲೆ ತೀವ್ರ ತಿರಸ್ಕಾರ ಉಂಟಾಗಿ, ಕಟ್ಟೆ ಕಟ್ಟಿದ್ದ ಕಣ್ಣೀರ ಮಹಾಪೂರ ಬಂದಂತಾಗಿ, ಹಣೆ ಚಚ್ಚಿಕೊಂಡು ಗೊಳೋ ಎಂದು ಅತ್ತರು. ಅಷ್ಟರಲ್ಲಿ ಶ್ರಾವಣ, ಅವನ ಹೆಂಡತಿ, ಇಬ್ಬರೂ ಎದ್ದರು. ಶ್ರಾವಣ ಅಪ್ಪನ ಮೇಲೆ ವಿಪರೀತ ರೇಗಾಡಿದ. ಮೊಮ್ಮಗನ ಶೋಧದಲ್ಲಿ ಬಂದಿದ್ದ ರಾಯರಿಗೆ, ಅವನು ಅವರಪ್ಪ ಅಮ್ಮನ ಹಾಸಿಗೆಯ ಮೇಲೆ ಮಲಗಿದ್ದಾನೆಂದು ತಿಳಿದಾಗ, ಯಾವುದು ಭ್ರಮೆ ಎಂದು ಅರ್ಥವಾಗದೆ, ಏನೊಂದನ್ನೂ ಕಿವಿಗೆ ಹಾಕಿಕೊಳ್ಳದೆಯೇ ತಮ್ಮ ಹಾಸಿಗೆಗೆ ಹೋಗಿ, ಮುಖದ ಮೇಲೆ ದಿಂಬನ್ನೆಳೆದು ಮಲಗಿಬಿಟ್ಟರು.
ಅವರು ದುಃಖಿಸಿ ದುಃಖಿಸಿ ಯಾವಾಗ ನಿದ್ರೆಗೊಳಗಾದರೋ ತಿಳಿಯದು.
****
ವಿಪರೀತ ಜನರಾಗಮನ, ಹಾಗೂ ಅದೂ ನಡೆಯುತ್ತಿರುವಾಗಲೇ ಎಂದಿಗಿಂತ ಭೀಕರವಾಗಿ ಘಟಿಸಿದ ಈ ಕೋಮುಗಲಭೆ – ನಿಜಕ್ಕೂ ಶ್ರಾವಣನನ್ನು ಹೈರಾಣಾಗಿಸಿಬಿಟ್ಟಿತು. ಒಂದೆಡೆ ಮಗನ ಓಡಾಟಕ್ಕೆ, ವಿದ್ಯಾಭ್ಯಾಸಕ್ಕೆ ಅಡ್ಡಿಯಾಗುವಂತಹ ಏರಿಯಾದಲ್ಲಿ ಮನೆಮಾಡಿದ ಚಡಪಡಿಕೆ, ಮತ್ತೊಂದೆಡೆ ಈ ಮನೆಯೇ ಮಾರಾಟವಾಗದಂತಹ ಚಡಪಡಿಕೆ ಮತ್ತು ಇವೆರಡನ್ನೂ ಮೀರಿ ನಿಂತದ್ದು – ರಂಗಾರೆಡ್ಡಿಯ ವಿಜಯಭಾವನೆಯ ಬೀಗುವಿಕೆಯಿಂದ ಉಂಟಾದ ಚಡಪಡಿಕೆ. ತಾನು ಮನೆ ಮಾರಲಿರುವ ವಿಚಾರ ತಿಳಿದ ರಂಗಾರೆಡ್ಡಿ , ಈಗ ಇಡೀ ಅಕಬರಬಾಗಿನಲ್ಲೇ ಬೀಗತೊಡಗಿದ್ದ – ಅವನಿಂದಾಗಿಯೇ ತಾನು ಮನೆ ಮಾರುತ್ತಿದ್ದೇನೆಂದು. ಅದೂ ಸಾಲದೆಂಬಂತೆ ಅವನೇ ಈ ಮನೆಯನ್ನು ಕೊಳ್ಳುತ್ತಿರುವುದಾಗಿಯೂ ವದಂತಿಗಳನ್ನು ಹಬ್ಬಿಸಿದ್ದ. ಈ ವದಂತಿಗಳೇ ಸಾಲದೆಂಬಂತೆ, ಕೋಮುಗಲಭೆಯ ಸಂದರ್ಭದಲ್ಲಿ ಎಂದಿನಂತೆ ವಿನಾಕಾರಣವಾಗಿ ಕಾಡ್ಗಚ್ಚಿನಂತೆ ಹಬ್ಬುತ್ತಿದ್ದ ಕೋಮು ಸಂಬಂಧಿ ವದಂತಿಗಳು. ಆ ವದಂತಿಗಳಲ್ಲಿ ಸೇರಿಹೋಗಿದ್ದ ಷಫೀಕ್ ಸಾಬರ ಹೆಸರು – ಒಟ್ಟಾರೆ ಆವರಿಸಿದ್ದ ಈ ಇಂಥ ವಾತಾವರಣದಲ್ಲಿ ಅಪ್ಪ ಕಿತ್ತ ನಲ್ಲಿಗೆ ಪ್ಲಂಬರನ್ನು ಎಲ್ಲಂದ ಹಿಡಿದುತರುವುದೆಂದು ತಿಳಿಯಲಿಲ್ಲ. ಮನೆಯಲ್ಲಿಲ್ಲದಾಗ ಮೂರನೆಯ ವ್ಯಕ್ತಿ ಮನೆ ಪ್ರವೇಶಿಸುವುದು – ಅದೂ ಈ ಸಂದರ್ಭದಲ್ಲಿ – ಶ್ರಾವಣನಿಗೆ ಸಮಾಧಾನ ನೀಡುವ ಭಾವನೆಯೇನೂ ಆಗಿರಲಿಲ್ಲ. ಕಡೆಗೂ, ಆ ಗಲಭೆಗಳು ನಿಂತು ಪರಿಸ್ಥಿತಿ ಶಾಂತವಾದಾಗ ಈ ಮನೆಗೆ ಬೀಗ ಜಡಿದಾದರೂ ಸರಿ, ಸೇತುವೆಯಾಚೆಗೆ ಹೋಗಲೇಬೇಕೆಂದು ಶ್ರಾವಣ ನಿರ್ಧರಿಸಿದ. ಒಮ್ಮೊಮ್ಮೆ ಅಪ್ಪ ಹೇಳಿದ್ದೂ ಸರಿಯೆನ್ನಿಸುವುದುಂಟು – ಶಾಂತವಾಗಿ ಮೈಸೂರಿಗೆ ಹೋಗಿ ನೆಲೆಸುವ ಬದಲು ಸುಮ್ಮನೆ ಹೀಗೆ ಮಾನಸಿಕ ಆಯಾಸ ಮಾಡಿಕೊಂಡು ಈ ಹೈದರಾಬಾದಿನಲ್ಲೇ ಮುಂದುವರೆಯುವಂಥದ್ದು ಏನಿದೆ
ಆದರೆ ಇಷ್ಟೆಲ್ಲಾ ಆಲೋಚನೆ ಮಾಡಿದಾಗ್ಯೂ, ಕಡೆಗೆ ಈ ಊರು ಬಿಡುವುದಕ್ಕೆ ಅಂತಃಕರಣ ಒಪ್ಪುವುದೇ ಇಲ್ಲ. ಮತ್ತು ಅಂತಃಕರಣ ಒಪ್ಪದಿರುವ ಈ ಪೂರ್ವ ನಿರ್ಧಾರಕ್ಕೆ ತರ್ಕವೂ ದಕ್ಕುತ್ತದೆ – ಅಕಸ್ಮಾತ್ ತಿರುಮಲಗಿರಿಯಲ್ಲಿ ಇದ್ದಿದ್ದರೆ – ಇಷ್ಟೆಲ್ಲಾ ಕಷ್ಟಕಾರ್ಪಣ್ಯಗಳೇ ಇರುತ್ತಿರಲಿಲ್ಲವಲ್ಲಾ ಎಂದು.
ಈ ಕಾರ್ಪಣ್ಯಗಳ ನಡುವೆ ಅಪ್ಪನನ್ನು ಒದ್ದಾಡಲು ಬಿಟ್ಟಿರುವ ಬಗ್ಗೆಯೂ ಶ್ರಾವಣನಿಗೆ ತೀವ್ರ ಪಾಪಭಾವನೆ ಕಾಡುವುದು. ಪರಿಸ್ಥಿತಿ ಶಾಂತವಾದೊಡನೆ ಅವರನ್ನು ಮೈಸೂರಿಗೆ ಕಳಿಸಿಬಿಡಬೇಕು ಎನ್ನಿಸಿದರೂ, ಮತ್ತೆ ತರ್ಕವೇ ವಿಜಯ ಸಾಧಿಸುವುದು – ಶಾಂತಪರಿಸ್ಥಿತಿಯಲ್ಲಿ ಅಪ್ಪ ಇಲ್ಲಿದ್ದರೇನು – ಮೈಸೂರಿನಲ್ಲಿದ್ದರೇನು?
****
ರಂಗಾರೆಡ್ಡಿಯ ವಿಷಯಕ್ಕೆ ಬಂದಾಗಲೆಲ್ಲಾ ಭಾಸ್ಕರರಾಯರಿಗೆ ಹೊಸ ಗೊಂದಲಗಳು ಉದ್ಭವವಾಗುತ್ತವೆ. ಉದಾಹರಣೆಗೆ ಶ್ರಾವಣ ಮನೆ ಮಾರಲಿರುವ ವಿಷಯ ಅವನಿಗೆ ತಿಳಿದು
ಬಂದಂದಿನಿಂದಲೂ, ವಿಶೇಷ ಪ್ರೀತಿ ವಿನಯಗಳನ್ನು ಅವನು ತೋರುತ್ತಿದ್ದಾನೆ. ಇದೆಲ್ಲಾ ಕಂಡಾಗ ಭಾಸ್ಕರರಾಯರಿಗೆ ಈ ಆಧುನಿಕ ಯುಗವೇ ಆಗುವುದಿಲ್ಲ ಅನ್ನಿಸುತ್ತದೆ. ಹಿಂದೆಲ್ಲಾ ಪ್ರೀತಿಯೆಂದರೆ, ಪ್ರೀತಿ – ಮಾತು ಕೃತಿ, ಚಿತ್ತ, ಮನಸ್ಸು, ಆತ್ಮಗಳಲ್ಲಿ ಪ್ರೀತಿ. ದ್ವೇಷವೆಂದರೆ ಮಾತೇ ಆಡಲಾರದಷ್ಟು ದ್ವೇಷ. ಅವರು ಶಾಲೆಯಲ್ಲಿದ್ದಾಗಿನಿಂದಲೂ ಹೀಗೇ. ಎಂದೂ ಲವ್-ಹೇಟ್ ರಿಲೇಷನ್ ಎಂದರೇನೆಂದೇ ಅರ್ಥವಾಗಿರಲಿಲ್ಲ. ಈಗ ಈ ಶ್ರಾವಣನನ್ನು ರಂಗಾರೆಡ್ಡಿ ಎಷ್ಟು ನಯದಿಂದ ಮಾತನಾಡಿಸುತ್ತಾನೆಂದರೆ, ಯಾವುದು ಸತ್ಯ ಯಾವುದು ಮಿಥ್ಯೆ ಎಂಬಂತಹ ಜೀವನದರ್ಶನದ ಪ್ರಶ್ನೆಗಳು ಉದ್ಭವವಾಗಿ ನಿಲ್ಲುತ್ತವೆ. “ಪ್ರೀತಿ ನಿಷ್ಕಾರಣವಾಗಿರಬೇಕು, ದ್ವೇಷ ಸಕಾರಣವಾಗಿರಬೇಕು” ಎಂದು ಜಯಂತ ಕಾಯ್ಕಿಣಿ ಹೇಳಿದ್ದು ಭಾಸ್ಕರರಾಯರಿಗೆ ನೆನಪಾಗುವುದು. ಈಗೀಗ ಪ್ರೀತಿಗೂ ದ್ವೇಷಕ್ಕೂ ಕಾರಣಗಳೇ ಕಾಣುತ್ತಿಲ್ಲ. ರಂಗಾರೆಡ್ಡಿಯೊಂದಿಗಿನ ಒಡನಾಟವೂ ಅಂಥದ್ದೇ ಎಂದು ರಾಯರಿಗನ್ನಿಸುವುದು. ಮಕ್ಕಳು ಪಕ್ಕದ ಕಾಂಪೌಂಡಿಗೆ ಗೋಡೆ ಹಾರಿ ಜಿಗಿದಾಗ ಎಂದೂ ಶ್ರಾವಣ ಬೈದದ್ದಿಲ್ಲ. ಹಾಗೆ ನೋಡಿದರೆ ಈ ರಂಗಾರೆಡ್ಡಿಯ ವೃತ್ತಾಂತ ಮಗನ ಮೇಲೆ ಯಾವುದೇ ಪ್ರಭಾವ ಬೀರದಂತೆ ನೋಡಿಕೊಂಡಿದ್ದಾನೆ. ಈಗ ಮಧ್ಯೆ ಎಬ್ಬಿಸಿರುವ ಗೋಡೆ ಮಕ್ಕಳ ಆಟಕ್ಕೆ ಅಡ್ಡಿಯಾಗುವುದರಿಂದಲೇ ಶ್ರಾವಣ ಇಷ್ಟೆಲ್ಲಾ ರಂಪ ಮಾಡುತ್ತಿರಬಹುದೆಂದು ಒಮ್ಮೊಮ್ಮೆ ಭಾಸ್ಕರರಾಯರಿಗೆ ಅನ್ನಿಸುವುದುಂಟು.
ಈ ನಡುವೆ, ಈಚೆಗೆ ನಡೆದ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ರಂಗಾರೆಡ್ಡಿ ಮಾತುಕತೆಗಾಗಿ ಬಂದ. ಹೇಗಿದ್ದರೂ ಮನೆ ಮಾರುವ ಯೋಚನೆಯಲ್ಲಿದ್ದೀರಿ – ಮಾರುವವರೇ ಆದರೆ, ಸುಮ್ಮನೆ ಯಾಕೆ ಈ ಕೋರ್ಟು ಕಛೇರಿಗಳ ಧಂಧೆಗೆ ಹೋಗುತ್ತೀರಿ ಎಂಬುದು ಒಂದು ಸ್ಥರದ ವಾದವಾದರೆ – ಮತ್ತೊಂದು ಸ್ಥರದಲ್ಲಿ, ಮನೆ ಮಾರುವುದೆಂದು ನಿಶ್ಚಯಿಸಿದ್ದರೆ, ದಯವಿಟ್ಟು ಮುಸಲ್ಮಾನರಿಗೆ ಮಾರಬೇಡಿ ಎಂಬ ಕೋರಿಕೆ ಬೇರೆ. ತನ್ನವರಿಗೇ ಯಾರಿಗಾದರೂ ಮಾರಬಹುದಲ್ಲಾ ಎನ್ನುವ ಸಲಹೆಯನ್ನೂ ರಂಗಾರೆಡ್ಡಿ ಅಟ್ಟಿದ. ಬೇಕಿದ್ದರೆ, ನಿಜಾಮಾಬಾದ್ ಕಡೆಯ ಯಾವುದಾದರೂ ರೆಡ್ಡಿಯನ್ನು ಕರೆತಂದು ಒಳ್ಳೆಯ ಬೆಲೆ ಕೊಡಿಸುವುದಾಗಿಯೂ ಹೇಳಿದ. ಮತಕ್ಷೋಭೆಯಿಂದ ಪೀಡಿತವಾದ ಈ ಅಕಬರಬಾಗಿನ ಮನೆಗೆ ಮುಸಲ್ಮಾನರು ಬಂದರೆ ಸಾಮಾನ್ಯರು ಹೆದರಬೇಕಾದ್ದು ಸಹಜವೆನ್ನಿಸಿದರೂ ಪೋಲೀಸು ನೌಕರಿಯಲ್ಲಿರುವ ರಂಗಾರೆಡ್ಡಿ ಹೆದರುವುದು ಏಕೆಂದು ಭಾಸ್ಕರರಾಯರಿಗೆ ಅರ್ಥವಾಗಲಿಲ್ಲ. ಅಥವಾ ಆಯಿತೋ?
ರಂಗಾರೆಡ್ಡಿ ತಾನೀಗಾಗಲೇ ಎಬ್ಬಿಸಿರು ಗೋಡೆಯನ್ನು ಉಳಿಸಿಕೊಳ್ಳಲೂ ಇದೇ ವಾದವನ್ನು ಬಳಸಿದ. “ಮೊನ್ನೆ ನೋಡಿ ಏನಾಯಿತೆಂದು ನಿಮಗೆ ಗೊತ್ತೇ ಇದೆ. ಈ ಮುಸಲ್ಮಾನರೆಲ್ಲಾ ಬಂದು ನಮ್ಮನ್ನು ಮುಗಿಸಿಬಿಡುವುದರಲ್ಲಿದ್ದರು. ಈಗ ನಾವು ಹಿಂದೂಗಳೆಲ್ಲಾ ಸೇರಿ, ಹೆದರಿ ಮನೆ ಮಾರಿಕೊಂಡು ಹೋಗುವುದು ಸರಿಯಾದ ಮಾತಲ್ಲ. ಹಾಗೆಂದು ನಾವು ನಮ್ಮಲ್ಲೇ ಕಾದಾಡುತ್ತಾ ಇಲ್ಲಿ ಮುಂದುವರೆಯುವುದೂ ಸರಿಯಲ್ಲ. ನಾನೀಗ ಕಟ್ಟಿಸಿರುವ ಔಟ್ಹೌನಸಿನಲ್ಲಿ ಕಟ್ಟುಮಸ್ತಾದ ಹಿಂದೂ ಕಿರಾಯಿದಾರರನ್ನೇ ಇಟ್ಟುಕೊಳ್ಳುತ್ತೇನೆ. ಅವರುಗಳು ಧೈರ್ಯಸ್ಥರು… ಏನಾದರೂ ಅಪಾಯವಾದಲ್ಲಿ ಪ್ರಾಣ ಕೊಡುವುದಕ್ಕೂ ತೆಗೆಯುವುದಕ್ಕೂ ಹೇಸುವವರಲ್ಲ…”
ಹೀಗೆ ಗೂಂಡಾಗಳ ಮರೆಯಲ್ಲಿ ಅಡಗುವ, ಕೇರಿಯನ್ನೇ ರಣಭೂಮಿ ಮಾಡಹೊರಟ ಪೋಲೀಸು ರಂಗಾರೆಡ್ಡಿಗೆ ಸೊಪ್ಪು ಹಾಕದ ಶ್ರಾವಣನನ್ನು ಕಂಡು ಹೆಮ್ಮೆಯಾದಂತೆನ್ನಿಸಿದರೂ, ಭಾಸ್ಕರರಾಯರ ಚಿಂತೆಯೇನೂ ಕಡಿಮೆಯಾಗಲಿಲ್ಲ. ಒಂದು ಕ್ಷಣ ಈ ಮಾತುಗಳು ರಂಗಾರೆಡ್ಡಿ ಕೊಡುತ್ತಿರುವ ಆಮಿಷವೋ ಬೆದರಿಕೆಯೋ ಅದೂ ತಿಳಿಯಲಿಲ್ಲ. ಕಡೆಗೆ ಮುದುಕನೆಂದು ತಮ್ಮನ್ನು ಬಿಟ್ಟ ಆ ಮುಸಲ್ಮಾನರ ಗುಂಪು ಸಂಭಾವಿತರೋ, ಸಾಮಾನ್ಯ ಜನರೋ, ರೌಡಿಗಳೋ, ಅಥವಾ ಮಫ್ತಿಯಲ್ಲಿದ್ದ ಪೋಲೀಸರ ಗುಂಪೋ ಎಂದೂ ಅನುಮಾನ ಬಂತು. ಏನೇ ಆದರೂ ಭಾಸ್ಕರರಾಯರ ಕನಸಿನ ರಾಜ್ಯದಲ್ಲಂತೂ ಪೋಲೀಸರವನು ಈ ರೀತಿಯ ವಿಚಾರಗಳನ್ನು ವ್ಯಕ್ತಪಡಿಸುವುದಿಲ್ಲ. ರಂಗಾರೆಡ್ಡಿ ತನ್ನ ಜೆಲ್ಲೆಯಾದ ನಿಜಾಮಾಬಾದಿಗೇ ವಾಪಸ್ಸಾಗಬಾರದೇಕೆ ಎಂದೂ ಒಂದು ಕ್ಷಣ ರಾಯರಿಗೆ ಅನ್ನಿಸಿತು. ಅದರ ಜತೆಗೇ ನಕ್ಸಲೀಯರ ಕೋಪಕ್ಕೆ ಕಾರಣವಿಲ್ಲದಿಲ್ಲ ಎಂದೂ ಅನ್ನಿಸಿತು.
ಈ ಎಲ್ಲ ಗಲಭೆಯನಂತರ ಶ್ರಾವಣ ಈ ಮನೆಯನ್ನು ಬೇರಾರಿಗಾದರೂ ಬಾಡಿಗೆಗೆ ಕೊಟ್ಟು, ಅಶೋಕನಗರಕ್ಕೆ ಹೋಗಬೇಕೆಂದು ಶ್ರಾವಣನ ಮನಸ್ಸು ಆಲೋಚಿಸುತ್ತದೆ ಎಂಬುದೂ ರಾಯರ ಪ್ರಜ್ಞೆಗೆ ಬಂತು. ಆದರೂ ಈ ಎಲ್ಲ ಗೊಂದಲಕ್ಕೂ ರಾಯರ ಬಳಿ ಸರಳವಾದ ಉಪಾಯವಿತ್ತು – ಅದೆಂದರೆ ಎಲ್ಲರೂ ಮೈಸೂರಿಗೆ ಹೊರಟುನಿಲ್ಲುವುದು. ಆದರೆ ಅವರು ಏನನ್ನೂ ಹೇಳಲಾರರು. ತಾವಾದರೂ ಈ ಚಿತ್ರಹಿಂಸೆಯಿಂದ ಪಾರಾಗಬೇಕೆಂದು ಪ್ರತಿದಿನ ಸೂಟ್ಕೇಂಸ್ ಕಟ್ಟಿದರೂ ಅದು ಕನಸಾಗಿಯೇ ಉಳಿದು, ಭಾಸ್ಕರರಾಯರು ಭ್ರಮೆಯಲ್ಲೇ ಕಾಲಹಾಕಬೇಕಾಯಿತು.
******
ಪರಿಸ್ಥಿತಿ ಸ್ವಲ್ಪ ಶಾಂತವಾಗುತ್ತಿದೆ ಎನ್ನವಾಗಲೇ, ಸರಕಾರದಿಂದ ಬಂದ ಹಳೇ ನಗರದ ಪ್ರಾಂತದ ಆಸ್ತಿ ಪಾಸ್ತಿ ಸಂಬಂಧಿತ ಯಾವುದೇ ವ್ಯವಹಾರವನ್ನು ರಿಜಿಸ್ತ್ರಿ ಮಾಡಬಾರದೆಂಬ ಸರಕಾರೀ ಸುಗ್ರೀವಾಜ್ಞೆ ಶ್ರಾವಣನನ್ನು ಕಲಕಿಬಿಟ್ಟಿತು. ಈ ನಡುವೆ ಕೋಮುಗಲಭೆ ನಡೆಯುವುದಕ್ಕೆ ಮುನ್ನವೇ ಬಂದು – ಒಂದೇ ಧರ್ಮಕ್ಕೆ ಸೇರಿದ ತಾನು, ರಂಗಾರೆಡ್ಡಿ ಶಾಂತಿಯಿಂದ ಸಹಬಾಳ್ವೆ ನಡೆಸಬೇಕಾದ ಅವಶ್ಯಕತೆಯನ್ನು ಒತ್ತಿಹೇಳಿದ್ದ ಸಮೀರ್ ಕುಮಾರನ ಮಾತುಗಳಿಗೆ ಈ ಹಿನ್ನೋಟದಿಂದ ವಿಶೇಷ ಮಹತ್ವ ಬಂದಂತಾಗಿ, ಅದರ ಆಯಾಮಗಳನ್ನು ಊಹಿಸಿಕೊಳ್ಳಲಾಗದೇ ಶ್ರಾವಣ ನಡುಗಿದ.
ಷಫಾಕ್ ಸಾಬರಂತೂ ತನಗೆ ಸಹಾಯ ಮಾಡಲೋ ಎಂಬಂತೆ, ಈ ಮನೆ ಸದ್ಯಕ್ಕೆ ಮಾರಾಟವಾಗುವುದಿಲ್ಲವಾದ್ದರಿಂದ, ತಾನು ಸೇತುವೆ ದಾಟಿ ಅಶೊಕನಗರದಲ್ಲಿ ಮನೆ ಬಾಡಿಗೆಗೆ ಹಿಡಿಯುವುದಾದರೆ, ಅವರು ಈ ಮನೆಗೆ ಯಾವುದಾದರೂ ಮುಸ್ಲಿಂ ಬಾಡಿಗೆದಾರರನ್ನು ಹಿಡಿದುಕೊಡುವುದಾಗಿ ಹೇಳಿದರು. ತಮಗೆ ಗೊತ್ತಿರುವ ನಂಬುಗಸ್ಥ ಮುಸ್ಲಿಂ ಒಬ್ಬನಿದ್ದಾನೆಂದು ಷಫೀಕ್ ಹೇಳಿದಾಗ ಗಲಭೆಯ ಸಮಯದಲ್ಲಿ ಹಬ್ಬಿದ್ದ ವದಂತಿಗಳಲ್ಲಿ ಸಿಲುಕಿಬಿಟ್ಟಿದ್ದ ಅವರ ಹೆಸರು ಮತ್ತೆ ಮರುಕಳಿಸಿದಂತಾಗಿ, ಶ್ರಾವಣ ಅವರನ್ನು ನಂಬಬೇಕೋ ಬೇಡವೋ ಎಂಬ ಗೊಂದಲದಲ್ಲಿ – ನಂಬಿದ್ದೇ ಆದರೆ ಅವರ ಋಣ ಹೇಗೆ ತೀರಿಸುವುದೆಂಬ ಗೋಜಲಿನಲ್ಲಿ ಯಾವೊಂದು ನಿರ್ಧಾರವೂ ಮಾಡಲು ಕೈಲಾಗದವನಾಗಿ, ಇದ್ದಂತಿದ್ದುಬಿಡುವುದೆಂದು ಸುಮ್ಮನಾದ. ಜೊತೆಗೇ ನುಣ್ಣಗಿದ್ದ ದೂರದ ತಿರುಮಲಗಿರಿಯ ಕನಸು ಕಾಣುತ್ತಾ – ಬಂದದ್ದೆಲ್ಲಾ ಬರಲೆಂಬ ವಿಧಿವಿಲಾಸವಾದಿಯಾಗಿ ಕೂತುಬಿಟ್ಟ.
******
ಪಕ್ಕದ ಮನೆಯ ಷಫೀಕ್ ಸಾಬರು ಬಂದಾಗ ಭಾಸ್ಕರರಾಯರು ಹೆದರಲಿಲ್ಲ. ಎಂದೂ ಇಲ್ಲದವನು ಇಂದು ಮಾತ್ರ ಬಂದು ರಾಯರನ್ನು ಮೃದುವಾಗಿ ಮಾತನಾಡಿಸಿದಾಗ ಸ್ವಲ್ಪ ಸಂತೋಷವೇ ಆಯಿತು. ಷಫೀಕರು ಅನೇಕ ಸಂದರ್ಭಗಳಲ್ಲಿ ತನಗೆ ಸಹಾಯ ಮಾಡಿದ್ದಾನೆಂದು ಹಿಂದೆ ಶ್ರಾವಣ ಹೇಳಿದ್ದ ಮಾತನ್ನು ನಂಬಬೇಕು ಎಂದು ರಾಯರಿಗೇಕೋ ಅನ್ನಿಸಿತು.
ಅಂದು ಬಂದಿದ್ದ ಗುಂಪಿನಲ್ಲಿ ಷಫೀಕ್ ಸಾಬರು ಇದ್ದೇ ಇದ್ದರೆಂಬ ಹಾಗೂ “ಬುಡ್ಡಾ ಉನೇ ಕ್ಯಾಕರ್ತೇ ಛೋಡೋ ಮಿಯಾ” ಎಂದು ಹೇಳಿ ತಮ್ಮನ್ನು ರಕ್ಷಿಸಲೆಂದೇ ಬಂದಿದ್ದರು ಎಂಬ ಆಲೋಚನೆ ಗಟ್ಟಿರೂಪ ಪಡೆಯುತ್ತಾ ಹೋಯಿತು. ಇದ್ದಕ್ಕಿದ್ದ ಹಾಗೆ ಹೀಗೆ ಷಫೀಕ ಸಾಬರ ಮೇಲೆ ಹುಟ್ಟಿದ ಅಕಾರಣ ನಂಬಿಕೆ, ಹಾಗೂ ಪ್ರೀತಿ ಪಡೆದ ರೂಪವೇ ಬೇರಾಯಿತು. ಈ ಮನೆ ಬಿಟ್ಟರೆ, ಮೈಸೂರಿಗೆ ಮಾತ್ರ ಹೋಗಬೇಕು, ಇನ್ನೆಲ್ಲಿಗೂ ಅಲ್ಲವೆಂಬ ಭಾವನೆಯನ್ನು ತಮ್ಮೊಳಗೇ ಇರಿಸಿಕೊಂಡು ರಾಯರು ತಮ್ಮ ಮೌನ ಮುಂದುವರೆಸಿದರು.
ಶ್ರಾವಣ ಎಂದಾದರೊಂದು ದಿನ ಮೈಸೂರಿನ ಮಹತ್ವ ಅರಿಯಲಾರನೇ ಮತ್ತು ಅದಕ್ಕೂ ಮೊದಲು ತಮ್ಮನ್ನು ಕಳುಹಿಸಿಕೊಡಲಾರನೇ ಎಂಬ ದೂರದ ಭ್ರಮೆ ರಾಯರನ್ನು ಕಾಡದೇ ಇರಲಿಲ್ಲ. ಹೀಗಾಗಿ ಆ ಭ್ರಮೆ ವರ್ತಮಾನಕ್ಕೂ ಆವರಿಸಿ, ಎಂದಿನ ಅಭ್ಯಾಸದಂತೆ ಇಂದೂ ಬಟ್ಟೆ ಮಡಚಿ ಪೆಟ್ಟಿಗೆಯಲ್ಲಿಟ್ಟು ಸೂಟ್ಕೇೆಸ್ ಮುಚ್ಚಿದರು.
ಇದೇ ಮೊದಲಬಾರಿಗೆ ಈ ಪ್ಯಾಕಿಂಗ್ ಕ್ರಿಯೆಯನ್ನು ಕಂಡ ಶ್ರಾವಣ ತಾವೀಗ ಎಲ್ಲೂ ಹೋಗುವುದಿಲ್ಲವೆಂದೂ, ಇಲ್ಲೇ ಇರುವ ನಿರ್ಧಾರ ಮಾಡಿರುವುದಾಗಿಯೂ ತಿಳಿಸಿದ. ಷಫೀಕ್ ಸಾಬರು ಅಕಬರಬಾಗಿಗೊಂದು ಶಾಂತಿ ಸಮಿತಿ ಏರ್ಪಾಡು ಮಾಡುವ ಸನ್ನಹದಲ್ಲಿದ್ದಾರೆಂದೂ ಭಾಸ್ಕರರಾಯರಿಗೆ ಕೇಳಿಬಂತು.
ಹೀಗೆ ಶ್ರಾವಣ ಬಂದು ತಮ್ಮೊಂದಿಗೆ ಮಾತನಾಡಿದಾಗ, ಭಾಸ್ಕರರಾಯರು ಬಾಯಿಂದ ಏನೂ ಹೊರಡಿಸದೇ ನಕ್ಕು ಬಿಟ್ಟರು. ಕಳೆದ ಹದಿನೈದು ದಿನಗಳಿಂದ ಅವರು ಒಂದಕ್ಷರವನ್ನೂ ಮಾತನಾಡಿರಲಿಲ್ಲವೆಂಬುದನ್ನು ಯಾರೂ ಗಮನಿಸಿಯೇ ಇರಲಿಲ್ಲ. ಭಾಸ್ಕರರಾಯರು ಮಲಗಬೇಕೆನ್ನುವಾಗಲೇ ರಂಗಾರೆಡ್ಡಿಯ ಮನೆಯ ಸೂರಿಗೆ ಸುರಕಿ ಹಾಕುವ ತಯಾರಿಯಲ್ಲಿ ಧಮ್ಮಸ್ಸು ಮಾಡುವ ಲಯಬದ್ಧ ಶಬ್ದ ಕೇಳಿಸಿತು. ಆ ಶಬ್ದದೊಂದಿಗೇ ಗೇಟು ಬಡಿದ, ಕೈಯಲ್ಲಿ ಕತ್ತಿ ಹಿಡಿದ ಷಫೀಕನ ಚಿತ್ರ. ರಾಯರ ಹೃದಯಬಡಿತ ಜೋರಾಗಿ ಅದೂ ಅವರ ಕಿವಿಯನ್ನು ಲಯಬದ್ಧವಾಗಿ ಅಪ್ಪಳಿಸಿತು. ಸೂರು ನೋಡುತ್ತಾ ಕಣ್ತೆರೆದೇ ಮಲಗಿದ್ದ ರಾಯರಿಗೆ ತಮ್ಮ ಅಸ್ತಿತ್ವವೇ ಕನಸೋ ನನಸೋ ತಿಳಿಯಂದಂತಾಗಿ —-
ಭಾಸ್ಕರರಾಯರು ಚಿಂತಿತರಾದರು.
ಅದೇನೂ ಹೊಸ ವಿಷಯವಾಗಿರಲಿಲ್ಲ. ಮೈಸೂರು ಬೆಂಗಳೂರುಗಳ ನಡುವೆ ಎಡತಾಕುವಾಗಲೂ, ಹಾಗೂ ಈಗಲೂ ಮಕ್ಕಳ ನಡುವೆ ಹಂಚಿಹೋದ ಭಾಸ್ಕರರಾಯರು ಈಗೀಗ ಎಲ್ಲಕ್ಕೂ ಮೂಕ ಪ್ರೇಕ್ಷಕರು. ಸದಾನಿರಂತರ ಚಿಂತಿತರು. ಎಪ್ಪತ್ತೈದರ ವಯಸ್ಸು ಸಾಮಾನ್ಯದ್ದೇನೂ ಅಲ್ಲ. ಅದು ಚಿಂತಿಸುವ ಚಿಂತೆಯುಂಟುಮಾಡುವ ವಯಸ್ಸು…………







0 Comments