
ಮಹಾಂತೇಶ್ ಎನ್ ಎಸ್
ಕನ್ನಡದ ಮಹತ್ವದ ಸಂಶೋಧಕರಲ್ಲಿ ಡಾ.ಎಂ.ಎಂ.ಕಲಬುರ್ಗಿ ಅವರು ಅಗ್ರಮಾನ್ಯರು. ಶರಣರ ಬದುಕನ್ನು ಮರಣದಲ್ಲಿ ನೋಡು ಎಂಬ ಲೋಕರೂಢಿಗೆ ಭಾಷ್ಯವಾಗಿ ಬದುಕಿದವರು ಡಾ.ಎಂ.ಎಂ.ಕಲಬುರ್ಗಿ ಅವರು. ಶರಣ ಸಾಹಿತ್ಯ ಕುರಿತು ಅಧಿಕೃತವಾಗಿ ಮಾತನಾಡಬಲ್ಲವರಾಗಿದ್ದ ಅವರು ‘ಲೋಕವಿರೋಧಿ ಶರಣ ಆರಿಗೂ ಅಂಜುವವನಲ್ಲ’ ಎಂಬಂತೆ ಶರಣರಾಗಿಯೇ ಬದುಕಿದವರು. ಫ.ಗು.ಹಳಕಟ್ಟಿಯವರ ನಂತರ ವಚನ ಸಾಹಿತ್ಯದ ಪರಿಷ್ಕರಣೆ-ಪ್ರಕಟಣೆಯನ್ನು ಶಾಸ್ತ್ರೀಯವಾಗಿ ನಡೆಸಿಕೊಂಡು ಬಂದ ವಿದ್ವಾಂಸರಲ್ಲಿ ಡಾ.ಎಂ.ಎಂ.ಕಲಬುರ್ಗಿ ಅವರು ಪ್ರಮುಖರು.
ಸಮಗ್ರ ಕನ್ನಡ ಸಾಹಿತ್ಯ ಅಧ್ಯಯನದ ಎಲ್ಲಾ ಸಾಧ್ಯತೆಗಳನ್ನು ಗುರುತಿಸಿ ಅಧ್ಯಯನಕ್ಕೆ ತೊಡಗಿಸುವಲ್ಲಿ, ಸಮಗ್ರ ಕರ್ನಾಟಕ ಚರಿತ್ರೆಯನ್ನು ದೇಸಿಸಾಹಿತ್ಯ ನೆಲೆಯಲ್ಲಿ ನಿರೂಪಿಸುವಲ್ಲಿ ಅವರ ಬದುಕಿನ ಒಂದು ಉದ್ದೇಶವಾದ ‘ ಕನ್ನಡತ್ವ ‘ ಕಾಣಿಸುತ್ತದೆ. ವರ್ಗ-ವರ್ಣ-ಲಿಂಗಬೇಧವಿಲ್ಲದ ಸಮಾಜ ನಿರ್ಮಾಣದ ಕನಸನ್ನು ಕಂಡ ಬಸವಾದಿ ಪ್ರಮಥರ ಮತ್ತು ಕಾಯಕ ಜೀವಿಗಳ ತತ್ವ-ಸಿದ್ಧಾತ-ಸಾಹಿತ್ಯವನ್ನು ಕುರಿತು ಹಿಂದೆ ಅನೇಕ ವಿದ್ವಾಂಸರು ತಮ್ಮ ತಮ್ಮ ನೆಲೆಯಲ್ಲಿ ಅಧ್ಯಯನ ಮಾಡಿರುವುದು ತಿಳಿದಿದೆ. ಅವರೆಲ್ಲರ ಕಾರ್ಯವನ್ನು ಸಮೀಕ್ಷಿಸಿ, ಅಪ್ರಕಟಿತ ವಚನ ಕೃತಿಗಳನ್ನು ಪ್ರಕಟಿಸಿ, ಪರಿಶೋಧಿಸಿ ತಮ್ಮ ವಚನ ವ್ಯವಸಾಯದ ಹುಲುಸಾದ ಫಸಲನ್ನು ಈ ನಾಡಿಗೆ ಡಾ.ಎಂ.ಎಂ.ಕಲಬುರ್ಗಿಯವರು ನೀಡಿದ್ದಾರೆ.
ಹೀಗೆ ಅವರ ಕನ್ನಡ ಮತ್ತು ವಚನಸಾಹಿತ್ಯ ಅಧ್ಯಯನದ ಸ್ವರೂಪ ಮತ್ತು ವಿಶೇಷತೆಯನ್ನು ಶೋಧಿಸುವ ಉದ್ದೇಶವನ್ನಿಟ್ಪುಕೊಂಡು ಡಾ.ಹೆಚ್.ಬಿ.ಶ್ವೇತಾ ಅವರು ಈ ಕೃತಿಯನ್ನು ಸಿದ್ಧಪಡಿಸಿದ್ದಾರೆ. ಡಾ.ಎಂ.ಎಂ.ಕಲಬುರ್ಗಿಯವರ ವಚನಸಾಹಿತ್ಯದ ಕೃಷಿ ತುಂಬಾ ವ್ಯಾಪಕವಾಗಿದೆ.

ವಚನಗಳು ಸ್ವರವಚನಗಳು, ಸೃಷ್ಟಿಯ ವಚನಗಳು, ಟೀಕಿನವಚನಗಳು, ಷಟ್ಸ್ಥಲದ ವಚನಗಳು, ಬೆಡಗಿನ ವಚನಗಳು, ಸಕಲಪುರಾತನರ ವಚನಗಳು, ಶೂನ್ಯಸಂಪಾದನೆಗಳು, ಪ್ರಕ್ಷಿಪ್ತ ವಚನಗಳು, ವಚನಕಾರರು, ಅಂಕಿತಗಳ ಸಮಸ್ಯೆ, ಭಾಷಿಕ ಅಧ್ಯಯನ, ವಚನಗಳ ಭಿನ್ನ ಆಕರಗಳ ಹುಡುಕಾಟ, ವಚನಗಳು ಮಿಶ್ರಗೊಂಡ ರೀತಿ, ವಚನಗಳ ಪಾಠಾಂತರ ಸಮಸ್ಯೆ, ವಚನ ಪರಿಷ್ಕರಣೆಗೆ ಅನುಸರಿಸಬೇಕಾದ ವಿಧಾನ ಮುಂತಾದ ಅನೇಕ ಹೊಸ ಹೊಸ ಆಯಾಮಗಳಿಂದ ವಚನಸಾಹಿತ್ಯವನ್ನು ಡಾ.ಎಂ.ಎಂ.ಕಲಬುರ್ಗಿಯವರು ಅಧ್ಯಯನಕ್ಕೆ ಒಳಪಡಿಸಿದ ಬಗೆಯನ್ನು ಈ ಕೃತಿಯು ಆಧಾರಪೂರ್ವಕವಾಗಿ ನಿರೂಪಿಸಿದೆ. ಇಂತಹ ಕೃತಿಯನ್ನು ರೂಪಿಸಿದ ಡಾ.ಹೆಚ್.ಬಿ.ಶ್ವೇತಾ ಅವರಿಗೆಇದಕ್ಕೆ ಮಾರ್ಗದರ್ಶನ ನೀಡಿರುವ ವಿದ್ವಾಂಸರಾದ ಡಾ.ಕೆ.ರವೀಂದ್ರನಾಥ ಅವರುಗಳಿಗೆ ಅಭಿನಂದನೆಗಳು






0 Comments