ಎಂ ಆರ್ ಗಿರಿಜಾ ಪ್ರವಾಸ ಕಥನ : ಐನೂರು ರೂಪಾಯಿಗೆ ಚಿಲ್ಲರೆ ಪ್ಲೀಸ್!

(ಇಲ್ಲಿಯವರೆಗೆ…)

ಮಗಳ ಧ್ಯಾನದಲ್ಲಿರುವಾಗ ಅದ್ಯಾವ ಮಾಯದಲ್ಲಿ ಜೊಂಪು ಹತ್ತಿತೋ ಗೊತ್ತಿಲ್ಲ. ಕಣ್ಣು ಬಿಟ್ಟರೆ ಅಷ್ಟೊತ್ತಿಗಾಗಲೇ ಏರ್ಪೋರ್ಟ್ ಕೌಂಟರ್ಗಳಿಗೆ ಜೀವ ಬಂದುಬಿಟ್ಟಿತ್ತು. ಒಂದೊಂದು ಕೌಂಟರ್ ಮುಂದೆ ಸುಂದರಿಯರು ಬಂದಂತೆ ಮಾನಿಟರ್ಗಳು ವೇಳಾಪಟ್ಟಿ ತೋರಿಸತೊಡಗಿದವು.
ಡ್ರುಕ್ ಏರ್ವೇಸ್ ಕೌಂಟರ್ಗೆ ಹುಡುಕಾಡಿದ್ರೆ ಅವರ ಕೌಂಟರ್ ಎಲ್ಲೂ ಕಾಣಿಸಲೇ ಇಲ್ಲ.ಕಡೆಗೆ ಒಂದು ಮೂಲೆಯಲ್ಲಿ ಕುಳಿತಿದ್ದ ಒಬ್ಬಾತನ ಜಾಕೆಟ್ ಮೇಲಿರುವ ಲೇಬಲ್ ನೋಡಿ ಅಲ್ಲಿಗೆ ಹೋಗಿ ವಿಚಾರಿಸಿದ್ರೆ 5 ನಿಮಿಷ ಇಲ್ಲೇ ವೈಟ್ ಮಾಡಿ ಬರ್ತಾರೆ ಅಂದ್ರು. ಹತ್ತು ನಿಮಿಷ ಕಳೆದ ಮೇಲೆ ಬಂದಾಕೆ ಕೌಂಟರ್ ಚಾಲು ಮಾಡಿದರು. ಇವರಿನ್ನು ಓಬಿರಾಯನ ಕಾಲದ ಪದ್ಧತಿ ಅನುಸರಿಸುತ್ತಾರೆ.ಬೋರ್ಡಿಂಗ್ ಪಾಸ್ ಪ್ರಿಂಟ್ ತಂದು ನಮ್ಮ ಹೆಸರು, ಗೇಟು ಸೀಟು ನಂಬರ್ಗಳನ್ನೆಲ್ಲಾ ಕೈಯಲ್ಲಿ ಬರೆದು ಕೊಟ್ರು.  ಪರ್ವತದ ಮೇಲೆ ಹಾರಾಡುವ ವಿಮಾನಗಳಲ್ಲೆಲ್ಲ ಭೂತಾನ್ ಫ್ಳೈಟ್ ಅತ್ಯಂತ ರಮಣೀಯವಾದ್ದು ಅಂತ ಕೇಳಿದ್ದೆ. ಅದನ್ನು ಮಿಸ್ ಮಾಡಿಕೊಳ್ಳೋ ಹಾಗೇ ಇಲ್ಲಾ.ಅದಕ್ಕೆ ಕೌಂಟರಿನಲ್ಲಿದ್ದ ಸಹಾಯಕಿಗೆ ಕಿರಿಕಿರಿ ಆದ್ರೂ ಪರವಾಗಿಲ್ಲ ಅಂತ ಎಡ ಕಿಟಕಿ ಸೀಟನ್ನೇ ಕೇಳಿ ಪಡೆದೆ!
ಸೆೆಕ್ಯುರಿಟಿ ಚೆಕ್ ಮುಗಿಸಿ ಒಳಹೋದ ಮೇಲೆ ಹೊಳೀತು ಅರೇ ನಾನು ತಂದಿರೋದೆಲ್ಲಾ 500 ರೂ.ಗಳ ನೋಟ್ಗಳಲ್ಲ ಅಂತ. ಭೂತಾನ್ ಕರೆನ್ಸಿ ‘ನು’ ಆದರೂ ಭಾರತದ ರೂಪಾಯಿ ಕೂಡ ಒಪ್ಪಿತ. ಆದರೆ ಎಲ್ಲಾ ಮಾಹಿತಿ ವೆಬ್ಸೈಟ್ಗಳೆಲ್ಲೆಲ್ಲಾ 1000 ರೂಪಾಯಿ ಮತ್ತು 500 ರೂಪಾಯಿ ನೋಟುಗಳು ನಾಟ್ ಅಕ್ಸೆಪ್ಟಬಲ್ ಅಂತ್ಲೇ ಇತ್ತು. ಹೊರಡೋ ಗಡಿಬಿಡೀಲಿ ಅದು ಮರೆತು ಹೋಗಿತ್ತು.
ಈಗ ಧುತ್ತಂತ ನೆನಪಿಗೆ ಬಂತು. ಏನಪ್ಪಾ ಮಾಡೋದು ಅಂತ ಒಂದೆರಡು ಅಂಗಡಿಗಳಲ್ಲಿ ಚಿಲ್ಲರೆ ಸಿಗತ್ತಾ ಅಂತ ನೋಡಿದೆ. ಬೆಳಂಬೆಳಗ್ಗೆ ಆದ್ದರಿಂದ ಸಿಗಲಿಲ್ಲ. ಒಂದು ಕಡೆ 500 ರೂಪಾಯಿ ನೋಟು ಕೊಟ್ಟು 30 ರೂಪಾಯಿ ನೀರು ಕೇಳಿದೆ. ಅವನು ಕೊಡಲ್ಲ ಅಂದ. ಮತ್ತೆ ಹತ್ತು ನಿಮಿಷ ಬಿಟ್ಟು ಹೋಗಿ ಈಗ ಚಿಲ್ಲರೆ ಇದೆಯಾ ಅಂತ ಕೇಳಿದೆ. ಸ್ವಲ್ಪ ಹೊತ್ತು ಅವನ ಅಂಗಡಿ ಮುಂದೆ ನಿಂತೇ ಇದ್ದೆ, ಸದ್ಯ ಪೀಡೆ ತೊಲಗಲಿ ಅಂತ ಅವನು 500 ಕ್ಕೆ ಚಿಲ್ಲರೆ ಕೊಟ್ಟ. ಎಲ್ಲಾ ಸೇರಿ 2000ಕ್ಕಿಂತ ಹೆಚ್ಚು ಚಿಲ್ಲರೆ ಸಿಗಲಿಲ್ಲ. ಹಾಳಾಗಿ ಹೋಗಲಿ ಅಲ್ಲಿಗೆ ಹೋದ ಮೇಲೆ ನೋಡೋಣ ಅಂದ್ಕೊಂಡೆ.
ಲೌಂಜ್ಗೆ ಹೋಗಿ ತಿಂಡಿ ತಿಂದು ಅಲ್ಲಿಯ ಸೋಫ ಮೇಲೆ ಸ್ವಲ್ಪ ಒರಗಿ ರೆಸ್ಟ್ ತಗೊಂಡೆ.ವಿಮಾನ ಸರಿಯಾದ ಸಮಯಕ್ಕೆ ಹೊರಟಿತು.ಡ್ರುಕ್ ಏರ್ವೇಸ್ನ ಕೊಲ್ಕತಾ ಕಚೇರಿಯಲ್ಲಿ ಇರೋರೆ ಸ್ವಲ್ಪ ಜನ ಅನಿಸುತ್ತೆ. ವಿಮಾನಕ್ಕೆ ಹೋಗೋ ಗೇಟು ತೆಗೆದವರೆ ಈ ಮೊದಲು ಕೌಂಟರಿನಲ್ಲಿ ಇದ್ದವರು.ಅವರಲ್ಲಿ ಕೆಲಸಗಾರರ ಕೊರತೆ ಇದ್ದದ್ದು ಕಣ್ಣಿಗೆ ಹೊಡೀತಿತ್ತು. ವಿಮಾನ ತುಂಬಿತ್ತು. ಕಣ್ಣಲ್ಲಿ ನಿದ್ದೆ ತೊಟ್ಟಿಕ್ಕುತ್ತಿದ್ದರೂ ಈ ವಿಮಾನ ತೆರೆತಿಡಲಿರೋ ಹಿಮಾಲಯದ ದೃಶ್ಯಾವಳಿಗಳಿಗೆ ಇಷ್ಟಗಲ ಕಣ್ಣು ತೆರೆದುಕೊಂಡು ಕಾಯ್ತಾ ಇದ್ದೆ.
ವಿಮಾನದಲ್ಲಿ ನನ್ನ ಪಕ್ಕ ಕುಳಿತಿದ್ದ ದಂಪತಿಗಳನ್ನು ನಾನು ಭೂತಾನಿಯರು ಎಂದೇ ಭಾವಿಸಿಬಿಟ್ಟಿದ್ದೆ. ನಾನು ಸುಮಾರ 35 ವರ್ಷವಿರಬಹುದಾದ ಅವಳನ್ನು ನೀವು ಭೂತಾನಿನವರೇ ಎಂದು ಕೇಳಿದೆ. ಆಕೆ ಯೆಸ್ ಅಂದಳು.ಆಗ ನಾನು ಆ ಹೊತ್ತಿನ ನನ್ನ ಮಿಲಿಯನ್ ಡಾಲರ್ ಪ್ರಶ್ನೆಯಾಗಿದ್ದ 500 ರೂಪಾಯಿ ನಿಮ್ಮ ದೇಶದಲ್ಲಿ ತೊಗೋತಾರೋ ಇಲ್ವೋ ಅಂತ ಕೇಳ್ದೆ. ಅವಳು ಗಂಡನ ಕಡೆ ಕೈ ಮಾಡಿದಳು. ಆ ಭೂಪ ಏನು ಅಂತ ಕೇಳ್ದ , ನಾನು ಅದೇ ಪ್ರಶ್ನೆ ಮತ್ತೆ ರಿಪೀಟ್ ಮಾಡ್ಡೆ. ಅವನು ಯೇಸ್ ಯೇಸ್ ಅಂದ.ಇದು ಯಾಕೋ ಸರಿ ಹೋಗಲಿಲ್ಲವಲ್ಲ ಅಂತ ಯೋಚಿಸೋದರಲ್ಲಿ ನನ್ನ ಟ್ಯೂಬ್ ಲೈಟ್ ತಲೆಗೆ ಹೊಳೀತು ಇವರು ಭೂತಾನಿನವರಲ್ಲ, ಅಸಲಿಗೆ ನೆಟ್ಟಗೆ ಇಂಗ್ಲಿಷ್ ಬರದ ಚೀನಾ ಅಥವಾ ಆಸು ಪಾಸಿನ ದೇಶದವರಿರಬೇಕು ಅಂತ ಗೆಸ್ ಮಾಡಿದೆ.
ಹಿಂದೆ ನಾನು ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲಿ ಏಷ್ಯಾದ ಎಲ್ಲಾ ದೇಶಗಳವರೊಡನೆ ಕೆಲಸ ಮಾಡಿದ ಅನುಭವವಿದ್ದದ್ದರಿಂದ ಇವ ಚೀನಿ, ಇವ ಕೋರಿಯನ್, ಇವ ಥೈವಾನಿ, ಇವ ಫಿಲಿಪೀನಿ ಎಂದು ಪತ್ತೆ ಮಾಡುವ ಕಲೆ ಸಿದ್ಧಸಿಬಿಟ್ಟಿತ್ತು. ಅದು ನನ್ನ ಪಾಲಿಗೆ ಒಂದು ಆಟ.ಇವರು ಯಾವ ದೇಶದವರು ಎಂಬ ಆಟಕ್ಕೆ ತೊಡಗಿದೆ.ನನಗೆ ಈಕೆ ಫಿಲಿಪೀನಿಯಳು ಅನಿಸಿತು, ಅವಳ ಗಂಡನ ಬಗ್ಗೆ ಗೆಸ್ ಮಾಡಕ್ಕೆ ಆಗಲಿಲ್ಲ. ನಿಧಾನವಾಗಿ ಅವರು ಅವರ ಇಮಿಗ್ರೇಷನ್ ಫಾರಂ ತುಂಬಿಸುವಾಗ ಆ ಫಾರಂ ಕಡೆ ಇಣುಕಿ ನೋಡಿದೆ, ಅವಳು ಫಿಲಿಪೀನ್ಸ್ನವಳೇ ಆಗಿಬಿಟ್ಟಿದ್ದಳು.ಗೆಸ್ ಗುರಿ ಮುಟ್ಟಿತ್ತು ಅಂತ ನಂಗೆ ಭಾರಿ ಖುಷಿ ಆಯ್ತು.

ಕೊಲ್ಕತಾದಿಂದ ಪಾರೋಗೆ ಕೇವಲ 50 ನಿಮಿಷಗಳ ಪ್ರಯಾಣ. 30-35 ನಿಮಿಷದ ಪ್ರಯಾಣದ ನಂತರ ಶುರುವಾಯ್ತು ಹಿಮಪರ್ವತಗಳ ಸಾಲು, ಸಾಲು. ಶುಭ್ರ ನೀಲ ಆಕಾಶದ ಅಂಚಿಗೆ ಭವ್ಯವಾಗಿ ನಿಂತ ಮೌಂಟ್ ಎವರೆಸ್ಟ್. ಕಾಂಚನಗಂಗಾ ಹಾಗೂ ಜುಮೋಲಹರಿಯ ಕಣ್ಣು ಝಂ ಎನ್ನಿಸುವ ದೃಶ್ಯ ಅದು. ಮೊದಲ ಎರಡು ಪರ್ವತಗಳಾದ ಮೌಂಟ್ ಎವರೆಸ್ಟ್. ಕಾಂಚನಗಂಗಾ ಇವುಗಳ ವಿಷಯ ಬಿಡಿ, ಅದು ಎಲ್ಲರಿಗು ಗೊತ್ತಿರುವುದೇ. ನಾನು ಹೇಳೋದೇ ಬೇಡ. ಜುಮೋಲಹರಿ 7326 ಮೀಟರ್ ಎತ್ತರದ ಭೂತಾನಿನ ಪ್ರಮುಖ, ಅತಿ ದೊಡ್ಡ ಪರ್ವತ. ಇದರ ಬೇಸ್ಕ್ಯಾಂಪ್ ಟ್ರೆಕ್ಕಿಂಗ್ ಬಹು ಜನಪ್ರಿಯ. ನಮಗೆ ಕೈಲಾಸ ಹೇಗೋ ಹಾಗೆ ಜುಮೋಲಹರಿ ಭೂತಾನಿಯರಿಗೆ. ಜುಮೋಲಹರಿ ಹೆಸರಿನ ಹೋಟೆಲ್ಗಳು, ಅಂಗಡಿಗಳು ಊರ ತುಂಬ ಕಾಣಿಸುತ್ತವೆ. ವಿಮಾನದಲ್ಲಿ ಎಲ್ಲರೂ ಎದ್ದು ಇಣುಕಿ ಪರ್ವತ ಮಾಲೆಗಳನ್ನು ನೋಡಲು ಪ್ರಯತ್ನಿಸುವವರೇ! ಫೋಟೋ ತೆಗೆದಿದ್ದೇ ತೆಗೆದಿದ್ದು.
ಕೆಲವೇ ನಿಮಿಷಗಳಲ್ಲಿ ದಟ್ಟ ಹಿಮ ಹರಡಿದ್ದ ಪ್ರದೇಶ ದಾಟಿ ಪಾರೋ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿದಾಗಿತ್ತು.ಇದೊಂದು ಬಹಳ ಪುಟಾಣಿ ಏರ್ಪೋರ್ಟ್. ಭೂತಾನಿನ ನೆಲಕ್ಕೆ ಕಾಲಿಟ್ಟ ಕೂಡಲೆ ತಾಜಾ ತಂಗಾಳಿ ಸ್ವಾಗತಿಸಿತು.
ಟಿಂಪು ಭೂತಾನಿನ ರಾಜಧಾನಿಯಾದರೂ ಈ ದೇಶದ ಮುಖ್ಯ ವಿಮಾನನಿಲ್ದಾಣವಿರುವುದು ಪಾರೋದಲ್ಲಿ.ಪಾರೋದಿಂದ ಟಿಂಪುವಿಗೆ ಒಂದು ಗಂಟೆಯ ಪ್ರಯಾಣ.ದಾರಿಯುದ್ದಕ್ಕೂ ಜತೆಯಾಗುವವರು ಪಾರೋ ಮತ್ತು ಟಿಂಪು ನದಿಗಳು! ಅರ್ಧ ಹಾದಿಯ ಗುಂಟ ಪಾರೋ ಜತೆಯಾದರೆ ಇನ್ನರ್ಧ ಪಾರೋ ಜತೆಗೂಡಿದ ಟಿಂಪು. ನದಿ ಸುತ್ತಲಿನ ಭೂದೃಶ್ಯ ಕಣ್ಣಿಗೆ ತಂಪು ಉಂಟು ಮಾಡಿತು. ಒಂದು ಗಂಟೆ ಪ್ರಯಾಣ ಮಾಡಿದ್ದೇ ತಿಳಿಯುವುದಿಲ್ಲ. ನಿನ್ನೆಯಿಂದ ಪ್ರಯಾಣ ಮಾಡುತ್ತಿದ್ದರೂ ಏನೂ ಆಯಾಸ ಅನಿಸುತ್ತಿರಲಿಲ್ಲ. ಅಡ್ರಿನಲಿನ್ ಪ್ರಭಾವ ಇರಬೇಕು! ಪಾರೋ ಏರ್ಪೋರ್ಟ್ನಲ್ಲಿ ಟ್ಯಾಕ್ಸಿ ಹತ್ತುವಾಗ ಚೌಕಾಶಿ ಮಾಡಿಯೇ ಟ್ಯಾಕ್ಸಿ ಹಿಡಿದದ್ದು. ಅವರೂ ಬಾಯಿಗೆ ಬಂದ ರೇಟ್ ಹೇಳ್ತಾರೆ. 1500 ಅನ್ನು 1000ಕ್ಕೆ ಇಳಿಸಿದೆ. ಟಿಂಪುವಿನಲ್ಲಿ ಇಳಿದಾಗ 500 ರ ಎರಡು ನೋಟು ಕೊಟ್ಟೆ, ಅವನು ಮರು ಮಾತಾಡದೆ ಜೇಬಿಗಿಳಿಸಿದ. ಭೂತಾನಿನಲ್ಲಿ ಉಳಿದ ಅಷ್ಟೂ ದಿನ ಕೊಲ್ಕತಾದಲ್ಲಿ ಕಷ್ಟಪಟ್ಟು ‘ಸಂಪಾದಿಸಿದ’ ಚಿಲ್ಲರೆಯನ್ನು ಬಳಸುವ ಪ್ರಮೇಯವೇ ಬರಲಿಲ್ಲ. 500 ರೂ.ಗಳ ನೋಟು ಭೂತಾನಿನಲ್ಲಿ ಓಡಲ್ಲ ಅನ್ನೋದೂ ಒಂದು ಮಿಥ್ ಅಷ್ಟೆ.
(ಮುಂದುವರಿಯುವುದು…)

‍ಲೇಖಕರು avadhi

May 9, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

3 ಪ್ರತಿಕ್ರಿಯೆಗಳು

Trackbacks/Pingbacks

  1. ಎಂ ಆರ್ ಗಿರಿಜಾ ಪ್ರವಾಸ ಕಥನ : ಕೆಂಪಾದವೋ ಎಲ್ಲಾ ಕೆಂಪಾದವೋ.. « ಅವಧಿ / Avadhi - [...] ಎಂ ಆರ್ ಗಿರಿಜಾ ಪ್ರವಾಸ ಕಥನ : ಕೆಂಪಾದವೋ ಎಲ್ಲಾ ಕೆಂಪಾದವೋ.. May 10, 2014 by G (ಇಲ್ಲಿಯವರೆಗೆ…) [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: