ಎಂ ಆರ್ ಗಿರಿಜಾ ಪ್ರವಾಸ ಕಥನ : ಶ್ವಾನಗಳ ಜೊತೆ ನನ್ನ ಟ್ರೆಕ್ಕಿಂಗ್ ಕಥೆ!

(ಇಲ್ಲಿಯವರೆಗೆ…)

ಭೂತಾನ್ ಎಂದೊಡನೆ ಕಣ್ಮುಂದೆ ಬರುವುದು ಕ್ಲಿಫ್ ತುದಿಯಲ್ಲಿ ಕಟ್ಟಿರುವ ತಕ್ಸ್ಂಗ್ ಮೊನೆಸ್ಟರಿ. ಪಾರೋದಲ್ಲಿರುವ ಈ ಮೊನೆಸ್ಟರಿ ಭೂತಾನಿನ ಪ್ರತೀಕ. ಭೂತಾನಿನ ಹೆಸರಿನೊಡನೆ ತಳುಕುಹಾಕಿಕೊಂಡಿರುವ ಅದನ್ನು ಟೈಗರ್ಸ್ ನೆಸ್ಟ್ ಎಂತಲೂ ಕರೆಯುತ್ತಾರೆ. ಸಮುದ್ರ ಮಟ್ಟದಿಂದ 3120 ಮೀಟರ್ ಎತ್ತರದಲ್ಲಿರುವ ಈ ಬೌದ್ಧವಿಹಾರ ಭೂತಾನಿನ ಜನರ ಪಾಲಿಗೆ ಪೂಜನೀಯ ಸ್ಥಳ. ನನ್ನ ಇಡೀ ಪ್ರವಾಸದಲ್ಲಿ ಕಾಯತಾ ಇದ್ದದ್ದು ಈ ದಿನಕ್ಕಾಗಿ.
2-3 ಗಂಟೆಗಳ ಕಡಿದಾದ ಹಾದಿಯಲ್ಲಿ ಸಾಗಿದರೆ ಮೊನೆಸ್ಟರಿ ತೆರೆದುಕೊಳ್ಳುತ್ತದೆ. ಬಿಸಿಲು ಏರಿದ ಮೇಲೆ ಹತ್ತೋದು ಕಷ್ಟ ಅಂತ ಬೇಗನೆ ಟ್ರೆಕ್ಕಿಂಗ್ ಶುರು ಮಾಡೋದು ಅಂತ ಅಂದ್ಕೊಂಡು ಬೆಳಿಗ್ಗೆ 6ಕ್ಕೇ ಒಂದು ಟ್ಯಾಕ್ಸಿ ಗೊತ್ತು ಮಾಡಿಕೊಂಡೆ. ಬೆಳಿಗ್ಗೆ ಬೇಗ ಏಳುವುದು ನನ್ನ ಪಾಲಿಗೆ ಅಷ್ಟು ಸುಲಭ ಅಲ್ಲ. ಐದು ಗಂಟೆಗೆ ಏಳಬೇಕಲ್ಲ ಅಂತ ಎರಡೆರಡು ಅಲಾರಂ ಇಟ್ಟು ಮಲಗಿದ್ದೆ. ಯಥಾಪ್ರಕಾರ ಮತ್ತೆ ಕಾತರಕ್ಕೆ ನಿದ್ದೆ ಬರಲಿಲ್ಲ. ಮೂರುವರೆಗೇ ಎಚ್ಚರ ಆಯ್ತು.
ಕನಸೊಡೆದೆದ್ದೆ ಇನ್ನೆಲ್ಲಿಯ ನಿದ್ದೆ . . . .(ಕುವೆಂಪು). ನೆನಪಾಯ್ತು.
ಮತ್ತೆ ಮಲಗಿದರೆ ಎಚ್ಚರ ಆಗುತ್ತೋ ಇಲ್ಲವೋ ಅಂತ ಮಲಗೋ ಪ್ರಯತ್ನ ಮಾಡಲಿಲ್ಲ. ಏನಾದರೂ ಓದೋಣ ಅಂದ್ರೆ ರೂಮಿನಲ್ಲಿದ್ದ ದೀಪದ ಬೆಳಕು ತೀರಾ ಮಂದವಾಗಿತ್ತು. ಇತ್ತೀಚೆಗೆ ಎಲ್ಲಾ ಹೋಟೆಲುಗಳಲ್ಲೂ ಎನಜರ್ಿ ಸೇವಿಂಗ್ ದೃಷ್ಟಿಯಿಂದ ಮಂದವಾಗಿರೋ ಬಾರ್ ತರಹ ಕಾಣೋ ಲೈಟ್ಗಳನ್ನು ಹಾಕಿಬಿಡ್ತಾರೆ. ಈ ಹೋಟೆಲಿನಲ್ಲಿ ವೈ-ಫೈ ಸಂಪರ್ಕ ಕೇವಲ ರಿಸೆಪ್ಷನ್ ಲಾಬಿಯಲ್ಲಿ ಮಾತ್ರ ಲಭ್ಯ. ರೂಮಿನಲ್ಲಿ ವೈ-ಫೈ ಇಲ್ಲ. ನನ್ನ ರೂಂ ರಿಸೆಪ್ಷನ್ ನ ಹತ್ರ ಇದೆ ಅಂತಲೋ ಏನೋ ನೋಡಿದರೆ ನನ್ನ ಫೋನು ಇಂಟರ್ನೆಟ್ಗೆ ಕನೆಕ್ಟ್ ಆಗಿತ್ತು. ನಾನು ಅಂತರ್ಜಾಲದ ಲೋಕದಲ್ಲಿ ಮುಳುಗಿಬಿಟ್ಟೆ. ಮತ್ತೆ ಭೂತಾನಿನ ಲೋಕದ ಜೊತೆ ಕನೆಕ್ಟ್ ಆಗಿ ಇಂಟರ್ನೆಟ್ನಿಂದ ಬಿಡಿಸಿಕೊಂಡು ಹೊರಡಲು ಸಿದ್ಧವಾಗಲು ನೋಡುವಾಗ ಸಮಯ ಮುಂಜಾನೆ 5.30. ಇಂಟರ್ನೆಟ್ ವಿಸರ್ಜನೆಯೇ ಇಷ್ಟು ಕಷ್ಟ ಅಂದ ಮೇಲೆ ಬುದ್ಧ ಹೇಳುವ ಮೋಹಗಳ ವಿಸರ್ಜನೆ ಅದೆಷ್ಟು ಕಷ್ಟ ಅಂದುಕೊಳ್ಳುತ್ತಾ ಲಗುಬಗೆಯಿಂದ ರೆಡಿಯಾಗಿ ಆಚೆ ಬಂದೆ.
ಹೋಟೆಲಿನವರು ಸ್ಯಾಂಡ್ವಿಚ್ ಮತ್ತು ಒಂದಷ್ಟು ಹಣ್ಣುಗಳನ್ನು ನನಗೋಸ್ಕರ ಪ್ಯಾಕ್ ಮಾಡಿದ್ದರು. ಟ್ಯಾಕ್ಸಿ ಬಂದು ನಿಂತಿತ್ತು. ಇನ್ನೂ ಆಗ ತಾನೆ ಬೆಳಕಾಗ್ತಿತ್ತು. 10-15 ಕಿ.ಮೀ ದೂರದ ತಕ್ಸ್ಂಗ್ ಮೊನೆಸ್ಟರಿಯ ಟ್ರೆಕ್ ಶುರು ಆಗೋ ಜಾಗ ತಲಪಿದಾಗ 6.30.

ಬೇರೆ ಯಾವ ವಾಹನವೂ ಇರಲಿಲ್ಲ. ನಾನೇ ಆ ದಿನದ ಮೊದಲ ಪ್ರವಾಸಿ ಅಂದ ಡ್ರೈವರ್. ಬೇರೆಯವರು ಬರೋದ್ರೊಳಗೆ ನಾನು ಬೇಗ ಬೇಗಹತ್ತಿ ಎಲ್ಲಾ ನೋಡಿ ಕೆಳಗೆ ಇಳಿಯುವಾಗ ಉಳಿದವರು ನನ್ನ ಕಡೆ ನೋಡಿ ಓಹ್! ಆಗ್ಲೆ ಇಳಿತಿದಿರಾ, ಇನ್ನೆಷ್ಟು ದೂರ ಅಂತ ಪ್ರಶ್ನೆ ಕೇಳುವಾಗ ಜಂಭದ ಕೋಳಿ ತರ ಬರಬಹುದು ಅಂತ ಲೆಕ್ಕಾಚಾರದ ಹುಮ್ಮಸ್ಸಿನಲ್ಲಿ ಕಾರ್ ಇಳಿಯೋಕೆ ನೋಡಿದರೆ , ಒಂದು ಇಪ್ಪತ್ತು ಇಪ್ಪತ್ತೈದು ನಾಯಿಗಳು ಕಾರಿನ ಸುತ್ತ ಮುತ್ತಿಗೆ ಹಾಕಿವೆ. ಇಳಿಯೋದು ಹ್ಯಾಗೆ? ನಾಯಿ ಅಂದರೆ ನಾನು ಮೊದಲೇ ಮೈಲುದ್ದ ದೂರ ಹಾರಿ ಹೆದರಿ ನಡುಗುತ್ತೇನೆ. ಕುವೆಂಪು, ತೇಜಸ್ವಿ, ಕಾನನ್ ಡಾಯಲ್ ಕತೆ ಕಾದಂಬರಿಗಳಲ್ಲಿ ನಾಯಿ ಬಗ್ಗೆ ಓದೋದು ಒಂದು ಸುಖ. ಆದರೆ ನೇರವಾಗಿ ನಾಯಿಗಳ ಸೈನ್ಯನೇ ನೋಡೋದು ಅಂದರೆ ಏನು ಹುಡುಗಾಟನಾ? ಇಲ್ಲಿ ನೋಡಿದರೆ ಈ ಪಾಟಿ ನಾಯಿಗಳು ನಿಂತಿವೆ. ಕಂಗಾಲಾಗಿ ಹೋದೆ. ಎರಡು ನಿಮಿಷದ ಹಿಂದಿದ್ದ ಉತ್ಸಾಹ ಎಲ್ಲಾ ಝರ್ರನೆ ಇಳಿದು ಪಾತಾಳ ಸೇರಿತ್ತು.
ಡ್ರೈವರ್ಗೆ ಜೊತೆಲಿ ಒಂದು ಸ್ವಲ್ಪ ದೂರ ಬರಲು ಕೇಳಿಕೊಂಡೆ. ಅವನಿಗೆ ಮತ್ತೊಂದು ಪಿಕ್ಅಪ್ ಇದ್ದದ್ದರಿಂದ ಅವನು ಹೊರಡಬೇಕಿತ್ತು.ನಾಯಿಗಳನ್ನೇನೋ ಓಡಿಸಿದ ನಂತರ, ಅವನು ತಕ್ಷಣ ಹುಡುಕಿಕೊಂಡು ಬಂದು ಒಂದು ಕೋಲು ಕೊಟ್ಟು ‘ ಇಳೀರಿ’ ಅಂತ ಬಾಗಿಲು ತೆಗೆದ. ಇಳಿದು ಬಾಗಿಲು ತೆಗೆದು ಒಂದು ಹೆಜ್ಜೆ ಇನ್ನೂ ಇಟ್ಟಿಲ್ಲಾ ನಾಯಿಗ್ಯಾಂಗ್ ಮತ್ತೆ ಮುತ್ತಿಕೊಂಡವು. ನಾನು ಕಿರುಚಿ ಓಡೋದು, ಅವನು ಹೆದರಬೇಡಿ ಅಂತ ಅವುಗಳನ್ನು ಓಡಿಸೋದು, ನಾನು ಪುನಃ ಕಿರಿಚೋದು………ಇವತ್ತು ಮತ್ತೆ ಬೆಂಗಳೂರಿಗಿರಲಿ ತಕ್ಸಂಗ್ಗೆ ಜೀವಂತ ಮುಟ್ಟುತ್ತಿನೋ ಇಲ್ಲವೋ ಅಂತ ಅನುಮಾನ ಶುರು ಆಯ್ತು. ಈ ನಾಯಿಗಳಿಗೆ ಆಹಾರ ಆಗೋದು ಖಂಡಿತ ಅನಿಸಿತು.ಅಯ್ಯೋ ಇಷ್ಟು ಚೆಂದವಾಗಿ ಸಾಗಿದ್ದ ಟ್ರಿಪ್ ಹೀಗೆ ದುರಂತದಲ್ಲಿ ಮುಗಿತ್ತಲ್ಲಾ ದೇವರೇ ಅಂತ ದೇವರನ್ನು ಬೈದೆ.ಈಗ ಯೋಚಿಸಿದರೆ ನಗು ಬರುತ್ತೆ.ಆದ್ರೆ ನಾನು ದಯನೀಯ ಸ್ಥಿತಿಯಲ್ಲಿದ್ದೆ.
ಅವೋ ಒಂದೊಂದು ಇಷ್ಟಗಲ ಬಾಯಿ ತೆಗೆದು ನನ್ನನ್ನಲ್ಲ ತಮ್ಮ ಜೊತೆ ನಾಯಿಗಳನ್ನೇ ಕಚ್ಚುತ್ತಾ ಇದ್ವು. ಆಮೇಲೆ ಯಾರೋ ಹೇಳಿದ್ರು ಅದು ನಾಯಿಗಳು ಮುದ್ದಾಡೋ ರೀತಿ ಅಂತ. ನನ್ನನ್ನು ಹೀಗೆನಾಯಿಪಾಲು ಮಾಡಿಹೋಗ ಬೇಡಪ್ಪಾ ಅಂತ ಡ್ರೈವರ್ನ ಬೇಡಿಕೊಂಡೆ. ಅವನು ತುತರ್ಾಗಿ ಹೋಗ ಬೇಕಿದ್ದರೂ ನನ್ನ ಮೇಲೆ ಕರುಣೆ ತೋರಿಸಿ ಅಲ್ಲೇ ಇದ್ದ. ಈ ನಾಟಕೀಯ ಪರಿಸ್ಥಿತಿಯಲ್ಲಿ ಕೈಯಲ್ಲಿ ಜಪಮಾಲೆ ಹಿಡಿದಿರುವ ಹಿರಿಯರೊಬ್ಬರು ಬಂದರು. ಸದ್ಯ ನನ್ನಿಂದ ಬಿಡುಗಡೆ ಪಡೀಬಹುದು ಅಂತ ಡ್ರೈವರ್ ಅವರ ಜೊತೆಲಿ ಝಾಂಗ್ಕಾ ಭಾಷೆಯಲ್ಲಿ ಮಾತನಾಡಿದ(ಅದು ಅಲ್ಲಿಯ ಭಾಷೆ). ‘ಅವರ ಜೊತೆ ಹೋಗಿ, ಕೆಫೆ ತನಕ ಬರ್ತಾರೆ’ ಅಂತ ಜೊತೆ ಮಾಡಿಕೊಟ್ಟು ಹೊರಟ.
ಕೆಲವು ನಾಯಿಗಳು ವಾಪಸ್ ಹೊರಟ ಡ್ರೈವರ್ನನ್ನು ಹಿಂಬಾಲಿಸಿ ಸುಮ್ಮನಾದವು. ಉಳಿದವನ್ನು ಈ ಹಿರಿಯರು ಓಡಿಸಿ ಎನೂ ಆಗಲ್ಲ ಅಂತ ಸನ್ನೆ ಮಾಡಿ ಬನ್ನಿ ಅಂತ ಕರೆದರು. ಅವರು ಹಿಂದಿ ಮಾತಾಡ್ತಾ ಇದ್ದರು. ಬೆಟ್ಟದ ಅರ್ಧ ದಾರಿಯಲ್ಲಿರುವ ಕೆಫೆಯಲ್ಲಿ ಕೆಲಸ ಮಾಡ್ತಾರಂತೆ. ಮತ್ತೆರಡು ಹೆಜ್ಜೆ ಇಡುವುದರಲ್ಲಿ ಐದು ನಾಯಿಗಳು ಬಿಡದೇನೆ ಬಂದವು.ನಾನು ತಂತಿ ಮೇಲೆ ನಡೆಯೋಳ ತರಹ ನಡೀತಿದ್ದೆ. ಯಾವಾಗ ಯಾವ ನಾಯಿ ಏನು ತೊಂದರೆ ಮಾಡತ್ತೋ ಅಂತ. ನಾವು ಕಾಡಿನ ದಾರಿಯಲ್ಲಿ ನಡೀತಿದ್ವಿ, ಹಿಂದಿನಿಂದ ಸೂಂಯ್ ಅಂತ ಓಡಿ ಬರೋ ನಾಯಿಯ ವೇಗಕ್ಕೆ ಹೆದರಿ ಎಲ್ಲಿ ಪಕ್ಕದ ಇಳಿಜಾರಲ್ಲಿ ಬೀಳ್ತೀನೋ ಅಂತ ನಿಧಾನಕ್ಕೆ ನಡೀತಿದ್ದೆ.

ನಾನು ಪ್ರಾಣಿ ಪ್ರೇಮಿ ಅಲ್ಲ, ನಾಯಿ, ಬೆಕ್ಕು ಯಾವುದರ ಭಾಷೆಯೂ ನನಗೆ ಅರ್ಥ ಆಗೋಲ್ಲ. ಅವ್ಯಾವೂ ನನಗೆ ಆಗಿ ಬರೋಲ್ಲ. ನನ್ನ ಟ್ರೆಕ್ಕಿಂಗ್ ಸಂತೋಷ ಹಾಳು ಮಾಡ್ತಾ ಇರೋ ಇವು ಮೊನೆಸ್ಟರಿ ತಲುಪೋ ತನಕವೂ ಬೆನ್ನು ಬಿಡುತ್ತವೋ ಇಲ್ಲವೋ ಅಂತ ಅನುಮಾನವಾಯ್ತು. ಆ ಹಿರಿಯರೂ ನಿಧಾನಕ್ಕೆ ನಡೀತಾ ಇದ್ದರು. ಅವರು ದಿನವೂ ಇದನ್ನು ಹತ್ತುತ್ತಾರಂತೆ. ಸ್ವಲ್ಪ ದೂರ ನಡೆಯೋದ್ರಲ್ಲಿ ಈ ನಾಯಿಗಳು ಮೂರಕ್ಕೆ ಇಳಿದಿದ್ದವು. ಅಲ್ಲೆಲ್ಲೋ ಕಾಡಿನೊಳಗೆ ಹೋಗುತ್ತಿದ್ದ ಅವು ಇನ್ನೆರಡು ನಿಮಿಷದಲ್ಲಿ ಓಡಿ ಬಂದು ಕಾಲುದಾರಿಯಲ್ಲಿ ನಮ್ಮೊಡನೆ ಜೊತೆಯಾಗ್ತಾ ಇದ್ವು. ಸ್ವಲ್ಪ ದೂರ ಕ್ರಮಿಸೋದರಲ್ಲಿ ಹಿರಿಯರು ಸ್ವಲ್ಪ ಹಿಂದುಳಿದಿದ್ದರು. ಇಬ್ಬರು ಪ್ರವಾಸಿಗರು ಮಾತ್ರ ನನ್ನನ್ನು ದಾಟಿ ಮುಂದೆ ಹೋದರು. ಅವರ ಜೊತೆ ಅವರ ಗೈಡ್ ಕೂಡ ಇದ್ದ. ಹೀಗೆ ಒಂದು ಗಂಟೆ ಉಸ್ಸಪ್ಪಾ ಅಂತ ನಡೆಯುವಷ್ಟರಲ್ಲಿ ಕೆಫೆಟೇರಿಯಾ ಪಾಯಿಂಟ್ ಬಂತು.
ಇದೇ ಮೊದಲ ವ್ಯೂ ಪಾಯಿಂಟ್. ಪೂರ್ತಿ ಟ್ರೆಕ್ ಮಾಡೋಕೆ ಆಗದವರು ಇಲ್ಲಿ ತನಕ ಬಂದು ಈ ವ್ಯೂ ಪಾಯಿಂಟ್ನಲ್ಲಿ ತಕ್ಸ್ಂಗ್ನ್ನು ದಣಿವಾಗುವಷ್ಟು ಕಾಲ ನೋಡಿ ಮರಳುತ್ತಾರೆ. ಈಗಿನ್ನೂ ಮಂಜು ಮುಸುಕಿ ಏನೂ ಕಾಣ್ತಾ ಇರಲಿಲ್ಲ. ನನ್ನ ಮುಂದೆ ಹಾದು ಹೋದ ಜೋಡಿ ಅಲ್ಲಿ ಕಾಫಿ ಕುಡಿತಾ ಕೂತಿದ್ರು. ಆ ಹುಡುಗಿ ನಾಯಿಗಳನ್ನು ಮುದ್ದು ಮಾಡ್ತಿದ್ಲು. ನನ್ನನ್ನು ನೋಡಿ ಆ ನಾಯಿಗಳ ಬಗ್ಗೆ ಸಚ್ ಏ ಸ್ವೀಟ್ ಫೆಲೋಸ್ ಅಂದ್ಲು! ನಾನು ನನ್ನ ಪಾಲಿಗಲ್ಲ ತಾಯಿ ಅಂದೆ. ಎಷ್ಟು ಫ್ರೆಂಡ್ಲಿ ಇದಾವೆ ಈ ಗುಂಡಣ್ಣನನ್ನು ನೋಡು ಎಷ್ಟು ಮುದ್ದು ಅಂತೆಲ್ಲ ಅವುಗಳ ಗುಣಗಾನ ಮಾಡಿದ್ಲು. ಅವರ ಜೊತೆ ಇನ್ನೊಬ್ಬ ಬಂದು ಸೇರಿಕೊಂಡ. ನಾವು ಪರಿಚಯ ಮಾಡಿಕೊಂಡ್ವಿ. ಅವರು ಪೋಲಾಂಡ್ನವರು,ಯು.ಎಸ್.ನಲ್ಲಿ ಕೆಲಸ ಮಾಡ್ತಾರೆ. ಅಣ್ಣ,ತಮ್ಮ, ಹಾಗೂ ತಮ್ಮನ ಗರ್ಲ್ ಫ್ರೆಂಡ್ ಇವಳು. ನಾನು ಕಾಫಿ, ಟೀ ಕುಡಿಯದೇ ಇರೋಳಾಗಿರುವುದರಿಂದ ನಾಯಿಗಳೆಲ್ಲಾ ಅವರ ಸುತ್ತ ಘೇರಾಯಿಸಿದ್ದಿದರಿಂದ ಇವುಗಳ ಕಾಟ ಇಲ್ಲದೆ ಒಬ್ಬಳೆ ನಡೆಯಬಹುದು ಅಂತ ಅವರಿಗೆ ಬೈ ಹೇಳಿ ಆಮೇಲೆ ಸಿಗೋಣ ಎಂದು ನಾನು ಟೆಕ್ಕಿಂಗ್ ಮುಂದುವರಿಸಿದೆ. ಹೊರಡೋಕೆ ಮುಂಚೆ ಅವಳು ನನಗೆ ಕಿವಿಮಾತಾಗಿ- ನಾವು ಹೆದರಿದ್ದೀವಿ ಅಂತ ತೊರಿಸಿಕೊಂಡ್ರೆ ನಾಯಿಗಳಿಗೆ ಅದು ಗೊತ್ತಾಗಿ ಇನ್ನಷ್ಟು ಹೆದರಿಸುತ್ತವೆ. ಧೈರ್ಯವಾಗಿದ್ದರೆ ಅವು ನಮಗೆ ಏನೂ ಮಾಡಲ್ಲ ಎಂದಳು.

ಅದು ಹೇಗೋ, ಒಂದು ನಾಯಿ ಮತ್ತೆ ನನ್ನನ್ನು ಹಿಂಬಾಲಿಸಿತು. ಭುಸುಭುಸು ಅಂತ ವಿಚಿತ್ರವಾಗಿ ಸದ್ದು ಮಾಡ್ತಾ ಹಿಂದೆ ಹಿಂದೆ ಬರ್ತಿತ್ತು. ಅದೇನು ಅಂತ ಅರ್ಥ ಆಗ್ಲಿಲ್ಲ. ಅದರಿಂದ ಏನು ವಿಪತ್ತು ಕಾದಿದೆಯೋ ಅಥವಾ ನನ್ನ ಭಂಟನಾಗಿ ಇವನು ಬರುತ್ತಿದಾನೋ ತಿಳಿಲಿಲ್ಲ. ಒಂದಷ್ಟು ದೂರ ಹೋದ ಮೇಲೆ, ಬ್ಯಾಗ್ನಲ್ಲಿರೋ ಸ್ಯಾಂಡ್ವಿಚ್ ತಿಂದು ಅವನಿಗೂ ಕೊಡೋಣ ಅಂತ ತೆಗೆದರೆ ಬಾಯಿ ತೆಗೆದು ನನ್ನ ಕಾಲ ಬುಡಕ್ಕೆ ಬಂದು ನಿಲ್ಲುತ್ತಿದ್ದ. ಒಂದು ತುಂಡು ಮುರಿದು ಅಷ್ಟು ದೂರ ಎಸೆದು ನಾನಿನ್ನು ತಿಂದಿಲ್ಲ ಮತ್ತೆ ಕಾಲಬಳಿ. ಮತ್ತೊಂದು ತುಣುಕು ಎಸೆಯೋದ್ರಲ್ಲಿ ಅದೆಲ್ಲಿದ್ವೋ. ಇನ್ನೆರಡು ನಾಯಿಗಳು ಭುಸುಭುಸು ಅಂತ ನಿಂತಿದ್ವು. ಒಂದೆರಡು ಸಲ ಹೀಗೆ ಎಸೆಯೋಷ್ಟರಲ್ಲಿ ನನ್ನ ಕಾಲ ಬುಡಕ್ಕೆ ಅವೆಲ್ಲಾ ಬಂದು ನಿಂತ್ವು. ಸ್ಯಾಂಡ್ವಿಚ್ ಖಾಲಿಯಾದ ಮೇಲೆ ನನ್ನ ಮೇಲೆ ಹರಿ ಹಾಯ್ತಾವೆ ಅಂತ ಖಾತ್ರಿ ಆಯ್ತು. ಮೊದಲು ನನ್ನ ಬ್ಯಾಗ್ ನೇತು ಹಾಕಿಕೊಂಡು ಇರೋಬರೋ ಸ್ಯಾಂಡ್ವಿಚ್ನೆಲ್ಲಾ ಒಂದೆರಡು ದಿಕ್ಕಿಗೆ ಎಸೆದು ಹೊರಟುಬಿಟ್ಟೆ. ಆದರೆ ಅವು ಬಿಡದೆ ಮತ್ತೆ ಹಿಂಬಾಲಿಸಿದವು. ಪೋಲಾಂಡ್ ಟೀಂ ಜೊತೆಯಾದ್ರೆ ಕಡೇ ಪಕ್ಷ ನಾಯಿ ಕಾಟದಿಂದ ಮುಕ್ತಿಯಾದರೂ ಸಿಗುತ್ತೆ ಅಂತ ಸ್ವಲ್ಪ ನಿಧಾನವಾಗಿ ನಡೆದೆ.ಅಷ್ಟರಲ್ಲಿ ಏರು ಹಾದಿ ಮುಗಿದು ಸ್ವಲ್ಪ ಸಮತಟ್ಟಾದ ದಾರಿ ಸಿಗ್ತು. ಹಿಂದಿನಿಂದ ಪೋಲಾಂಡ್ ಟೀಂನ ದನಿ ಕೇಳಿಸ್ತು. ಮುಂದಿನ ದಾರಿಗೆ ಪೋಲಾಂಡ್ ಟೀಂನವರು ಜೊತೆಯಾದರು.
(ಮುಂದುವರಿಯುವುದು…)
 

‍ಲೇಖಕರು avadhi

May 19, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

Trackbacks/Pingbacks

  1. ಎಂ ಆರ್ ಗಿರಿಜಾ ಪ್ರವಾಸ ಕಥನ : ‘ಪೋಲಾಂಡ್ ಹುಡುಗಿಯ ಧ್ಯಾನ ಮುಗಿಯಲೆಂದು ಕಾಯುತ್ತಾ…’ « ಅವಧಿ / Avadhi - [...] ಎಂ ಆರ್ ಗಿರಿಜಾ ಪ್ರವಾಸ ಕಥನ : ‘ಪೋಲಾಂಡ್ ಹುಡುಗಿಯ ಧ್ಯಾನ ಮುಗಿಯಲೆಂದು ಕಾಯುತ್ತಾ…’ May 20, 2014 by avadhinew (ಇಲ್ಲಿಯವರೆಗೆ…) [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: