ಎಂ ಆರ್ ಗಿರಿಜಾ ಪ್ರವಾಸ ಕಥನ : ಮತ್ತೆ ಪುನಾಖಾ ಉತ್ಸವ – ವರ್ಣ ಸಂಭ್ರಮ

(ಇಲ್ಲಿಯವರೆಗೆ…)

ಆ ದಿನ ಬೆಳಿಗ್ಗೆ ಬೇಗ 6 ಕ್ಕೇ ಎದ್ದು, ಕುಮ್ಸುಮ್ ಯುಲ್ಲೇ ನ್ಯಾಮ್ಗಲ್ ಗೆ ಹೋದೆ. ಇದಕ್ಕೆ ತಲುಪಲು ಸುಮಾರು 45-60 ನಿಮಿಷ ನಡೆಯಬೇಕು. ಹಿಂದಿನ ರಾಣಿ ಕಟ್ಟಿಸಿರುವ ಈ ದೇವಾಲಯ ಭೂತಾನಿನ ವಾಸ್ತುಶಿಲ್ಪ ಕ್ಕೆ ಒಳ್ಳೆಯ ಉದಾಹರಣೆ.ಇದನ್ನು ಕಟ್ಟಲು ಯಾವುದೇ ಇಂಜಿನಿಯರ್ ನ ನೆರವು ಪಡೆಯದೆ ಅವರ ಕುಶಲಕರ್ಮಿಗಳಿಂದಲೇ ನಿರ್ಮಾಣವಾದ ಕಟ್ಟಡ ಇದು.
ಇದನ್ನು ನೋಡೋದಕ್ಕಿಂತ, ಇಲ್ಲಿಗೆ ತಲುಪಲು ಇರುವ ಟ್ರೆಕ್ಕಿಂಗ್ ನನಗೆ ಮೊದಲ ಆಕರ್ಷಣೆ ಯಾಗಿತ್ತು. ಇದಕ್ಕೆ ತಲುಪಲೂ ಭತ್ತದ ಗದ್ದೆಗಳ ಮೂಲಕವೇ ಹೋಗಬೇಕು. ಆಮೇಲೆ ಏರು ಹಾದಿಯ ಬೆಟ್ಟ. ನಾನು 30 ನಿಮಿಷದಲ್ಲಿ ಅದನ್ನು ಕ್ರಮಿಸಿದೆ. ಇಲ್ಲಿರುವ ದೇವ ದೇವತೆಗಳು ಭಯಂಕರ ರೂಪದವರು. ನಮ್ಮ ಕಾಳಿ, ಮಾರಮ್ಮ ನಂತಹ ದೇವತೆಯರು.ಇದು ತಂತ್ರಕ್ಕೆ ಸಂಬಂಧಪಟ್ಟ ದೇವಾಲಯ ಅಂತ ಚೆನ್ನಾಗಿ ತಿಳಿಯುತ್ತದೆ. 4 ಮಹಡಿಯ ಈ ಕಟ್ಟಡದ ತಾರಸಿಯಿಂದ ಕಾಣುವ ಪುನಾಖಾ ಕಣಿವೆಯ ದೃಶ್ಯ ಮನೋಹರ. ನಡೆದದ್ದೂ ಸಾರ್ಥಕ.
ಅಲ್ಲಿಂದ ಇಳಿದು ಬಂದಾಗ ಇನ್ನು 8 ಗಂಟೆ. ಅಲ್ಲಿಯ ಹಳ್ಳಿಗರೆಲ್ಲಾ ಅಂದವಾಗಿ ಸಿಂಗರಿಸಿಕೊಂಡು ಹೋಗ್ತಾ ಇದ್ದರು. ಅನುಮಾನವೇ ಇಲ್ಲ. ಅವರು ಹೋಗುತ್ತಾ ಇರೋದು ತ್ಸೆಚುಗೇ ಅಂತ ತಿಳಿಯುತ್ತಿತ್ತು. ಝಾಂಗ್ ಗೆ ಬಂದಾಗ 8.30. ಆಗಲೇ ಜನ ಚಾಪೆ ಹಾಸಿಕೊಂಡು ಬೇಕಾದವರಿಗೆ ಜಾಗ ರಿಸರ್ವ್ ಮಾಡಿಕೊಂಡು ಕಾಯ್ತಾ ಇದ್ದರು. ನಾನು ಮುಂದೆ ಹೋಗಿ ಅಲ್ಲಿದ್ದ ಪೋಲಿಸ್ ಹತ್ರ ಕೇಳಿಕೊಂಡು ಹಾಗೆ ನೆಲದ ಮೇಲೆ ಕೂತೆ.
ಸಂಸಾರಸಮೇತರಾಗಿ, ಎಲೆ ಅಡಿಕೆ, ತಿಂಡಿ, ಟೀ ಗಳ ದೊಡ್ಡ ದೊಡ್ಡ ಬ್ಯಾಗುಗಳೊಂದಿಗೆ ಬರ್ತಾ ಇದ್ದರು. ಇಂತಹ ಬ್ಯಾಗುಗಳು ನಾವು ಚಿಕ್ಕವರಿದ್ದಾಗ ಎಲ್ಲರ ಮನೆಯಲ್ಲೂ ಇರ್ತಿತ್ತು. ನಾವು ವೈರ್ ಬ್ಯಾಗ್ ಅಂತಹ ಕರೆಯುತ್ತಿದ್ವಿ. ನಮ್ಮ ಊರಲ್ಲಿ ನಾಟಕ ಆಡಿಸುವಾಗ ಹೀಗೆ ಚಾಪೆ ತಗೊಂಡು ಹೋಗತಾ ಇದ್ದದ್ದೂ ನೆನಪಿಗೆ ಬಂತು. ಇವೆಲ್ಲಾ ಬೆಂಗಳೂರಲ್ಲಿ ಯಾಕೆ ನೆನಪಾಗಲ್ಲವೋ ಕಾಣೆ. ಅವರ ಸಡಗರ ನೋಡಿದರೆ ಇವತ್ತೇ ಮೊದಲು ಇಂಥಾ ಕಾರ್ಯಕ್ರಮ ನೋಡೋಕೆ ಬಂದಿದ್ದಾರೆನೋ ಅನ್ನಿಸೋ ಹಾಗಿತ್ತು.
ಇದು ಪ್ರತಿವರ್ಷ ನಡೆಯೋ ಉತ್ಸವ. ಅದೇ ನೃತ್ಯ ವನ್ನೇ ಪ್ರತಿವರ್ಷವೂ ಬಂದು ನೋಡಿರೋದು ಗ್ಯಾರಂಟಿ. ಅದು ಹೇಗೆ ಉತ್ಸಾಹ ಉಳಿಸಿಕೊಳ್ತಾರೋ ಅಂತ ನೋಡುತ್ತಾ ಕುಳಿತಿದ್ದೆ. ಬಣ್ಣಗಳ ಜಾತ್ರೆ ಅದು.ಪುಟ್ಟ ಮಕ್ಕಳಿಂದ ದೊಡ್ಡವರ ತನಕ ರಂಗು ರಂಗಿನ ಬಟ್ಟೆಗಳು… .. ಎಷ್ಟು ವರ್ಣ ವೈವಿಧ್ಯ!!!!
 
ಪ್ರವಾಸಿಗಳ ಸಂಖ್ಯೆ ಹೆಚ್ಚಿತ್ತು. ಇದು ಛಾಯಾಚಿತ್ರಗಾರರಿಗೆ ಹಬ್ಬ. ಜೇಕೆಂಪೋ ರವರು ಬಂದ ಮೇಲೆ ಜೋಕರ್ ಗಳು ಬಂದು ಜನರನ್ನು ರಂಜಿಸಿದರು. ಇವರು ಇಡೀ ದಿನ ಸ್ಟೇಜ್ ಮೇಲೆ ಇರುತ್ತಾರೆ. ಗಂಭೀರ ಪಾತ್ರಧಾರಿಗಳನ್ನು ವಿಚಲಿತರನ್ನಾಗಿ ಮಾಡುವುದೇ ಅವರ ಕೆಲಸ.

ಯುವತಿಯರು ಭೂತಾನಿನ ಸಾಂಪ್ರದಾಯಿಕ ನೃತ್ಯವನ್ನು ಮಾಡಿದ ಮೇಲೆ ಮುಖವಾಡದ ನೃತ್ಯ ಒಂದಾದ ಮೇಲೊಂದು. ಅದನ್ನು ತನ್ಮಯತೆಯಿಂದ ನೋಡೋ ಜನ ನನಗೆ ಕ್ಯೂಟ್ ಅನ್ನಿಸ್ತಾ ಇದ್ದರು.

ನಾನು ನ್ಯಾಮ್ಗಲ್ ನಿಂದ ಭತ್ತದ ಗದ್ದೆಯ ಮೂಲಕ ಬರುವಾಗ ಒಬ್ಬಳು ಪುಟ್ಟ ಹುಡುಗಿಯ ಫೋಟೋ ತೆಗೆದಿದ್ದೆ. ಅದೇ 3-4 ವರ್ಷದ ಮಗು ನೋಡಿದರೆ ನನ್ನ ಪಕ್ಕಾನೇ ಕುಳಿತಿದಾಳೆ. ಅವಳಿಗೆ ನನ್ನ ಕ್ಯಾಮೆರದಿಂದ ಅವಳ ಚಿತ್ರನೇ ತೋರಿಸಿದೆ. ಓಹ್!! ಅವಳ ಕಣ್ಣು ನೋಡ್ಬೇಕಾಗಿತ್ತು… ಪರಮಾಶ್ಚರ್ಯ!!! ಅಮ್ಮ ನ ಹತ್ತಿರ ಓಡಿ ಹೋದಳು. That was beautiful!!!!
ಸಾಕಾಗುವಷ್ಟು ಹೊತ್ತು ನೋಡುತ್ತಾ ಕುಳಿತಿದ್ದು ಬಂದೆ.
ಅಲ್ಲಿಂದ ಪಾರೋ ಗೆ ದಾಚುಲಾ ಪಾಸ್ ನ ಮೂಲಕ 4 ಗಂಟೆಗಳ ದಾರಿ. ಇಲ್ಲಿಂದ ಹಿಮಾಲಯದ ಒಳ್ಳೆಯ ದೃಶ್ಯನೋಡಲು ಸಿಗುತ್ತಂತೆ. ಆದರೆ, ಮೋಡ ಇದ್ದುದರಿಂದ ನನಗೆ ಏನೂ ಕಾಣಲಿಲ್ಲ. ದಾರಿಯುದ್ದಕ್ಕೂ ಅನೇಕ ಬಗೆಯ ಹೂ ಗಳು ಅರಳಿ ನಿಂತಿದ್ದವು.

ಭೂತಾನಿನಲ್ಲಿ, ನಾನು ಪದೇ ಪದೇ ಕೇಳಿದ ಅವರ ಮಂತ್ರ – ‘ಇರುವುದರಲ್ಲಿ ಸಂತೋಷವಾಗಿರು.ಇರುವುದಕ್ಕಿಂತ ಹೆಚ್ಚಿಗೆ ಏನನ್ನೂ ಬಯಸಬೇಡ. ಏಕೆಂದರೆ ಬಯಕೆಗೆ ಕೊನೆಯೆಂಬುದಿಲ್ಲ’. ಇದನ್ನು, ಡೈವರ್, ಹೋಟೆಲ್ ಸಿಬ್ಬಂದಿಗಳು,ಅಂಗಡಿ ಮಾಲೀಕ,ಹೋಟೆಲ್ ನ ಮಾಲೀಕ ಎಲ್ಲರ ಬಾಯಲ್ಲೂ ಕೇಳಿದೆ. ಇದೇ ಅವರ Gross National Happiness Index (GNHI)ನ ಆಧಾರ. ಬುದ್ಧನ ದಾರಿಯಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನ. 1974 ರಲ್ಲಿ ಆರಂಭಿಸಿದ GNHI ಹೊಗಳಿಕೆ, ತೆಗಳಿಕೆಗಳೆರಡನ್ನೂ ಕಂಡಿದೆ. ಇದರ 4 ಸ್ತಂಭಗಳು – ಸಂತುಲಿತ ಬೆಳವಣಿಗೆ, ಸಾಂಸ್ಕುತಿಕ ಮೌಲ್ಯಗಳಿಗೆ ಒತ್ತು, ಉತ್ತಮ ಆಡಳಿತ ಮತ್ತು ಪರಿಸರ ರಕ್ಷಣೆ. ಇವೆಲ್ಲವುಗಳ ಆಧಾರದ ಮೇಲೆ ಜನರ ಸರ್ವೇ ಮಾಡಿGNHI ಅಳೆಯುತ್ತಾರಂತೆ.
ಪಾರೋ ತಲುಪೋದ್ರಲ್ಲಿ ಹಸಿವೋ ಹಸಿವು. ಮೊದಲು ಊಟ. ರೆಸ್ಟೋರೆಂಟ್ ನಲ್ಲಿ ಹುಡುಗಿಯರೇ ಬಂದು ಸರ್ವ್ ಮಾಡಿದರು. ಇದೂ ಅಷ್ಟೇ. ಸರ್ವೇ ಸಾಮಾನ್ಯ. ನಾನು ಇದ್ದ ಹೋಟೆಲ್ಗಳಲ್ಲೆಲ್ಲಾ ಹೆಣ್ಣು ಮಕ್ಕಳದೇ ರಾಜ್ಯ. Housekeeping ಇರಲಿ, ಸರ್ವ್ ಮಾಡೋದಿರಲಿ ಎಲ್ಲಾ ಹೆಣ್ಣುಮಕ್ಕಳೇ. ಅಂಗಡಿಗಳಲ್ಲೂ ಅಷ್ಟೇ. ಗಲ್ಲಾ ಪೆಟ್ಟಿಗೆ ಮೇಲೂ ಅವರೆ.ಸಹಾಯಕ್ಕೂ ಅವರೇ. ಪುನಾಖಾ ದ ನಾನಿದ್ದ ಹೋಟೆಲ್ ನಲ್ಲಂತೂ ಹುಡುಗರನ್ನೇ ಕಾಣಲಿಲ್ಲ. ಕುತೂಹಲ ತಡೆಯೋಕೆ ಆಗದೆ, ಆ ಹೋಟೆಲ್ ನ ಯಜಮಾನತಿಯನ್ನು ಕೇಳಿಯೇ ಬಿಟ್ಟೆ. ಅವಳು ಅಡಿಗೆ ಹಾಗು ಲಾಂಡ್ರಿ ಕೆಲಸಗಳಿಗೆ ಇದಾರೆ ಅಂದಳು. ಹೆಣ್ಣುಮಕ್ಕಳು ಕೆಲಸದಲ್ಲಿ ಅಚ್ಚುಕಟ್ಟು ಇರುವುದರಿಂದ ಅವರನ್ನು ಕ್ಲೈಂಟ್ ಫೇಸಿಂಗ್ ಕೆಲಸಕ್ಕೆ ಹಾಕುತ್ತೀವಿ ಅಂದಳು.

ಊಟ ಮುಗಿದು ಕಿಟಕಿಯ ಮೂಲಕ ಪಾರೋ ನದಿಯನ್ನು ನೋಡುತ್ತಾ ಬಿಸಿನೀರು ಕುಡೀತಾ ಇರುವಾಗ ಹೊಳೆಯಿತು.ಬೆಂಗಳೂರಿನಿಂದ ಹೊರಟಾಗ ವಿಪರೀತ ಶೀತ ಇತ್ತು. ವಟರ್ಿಗೋ ಅಂತ ಕರೆಯುವ ತಲೆಸುತ್ತು ಬೇರೆ. ಅದರಿಂದ ಈ ಟ್ರಿಪ್ ನ ಕ್ಯಾನ್ಸಲ್ ಮಾಡೋ ಯೋಚನೆ ಕೂಡ ಇತ್ತು. ಇಲ್ಲಿಗೆ ಬಂದ ಮೇಲೆ ಎರಡೂ ಮಂಗಮಾಯ. ಅದು ಅಡ್ರಿನಲಿನ ಪ್ರಭಾವನೋ ಇಲ್ಲಿಯ ನೀರು,ಗಾಳಿಯ ಕೊಡುಗೆನೋ ಗೊತ್ತಿಲ್ಲ. ಇನ್ನೊಂದು ಗ್ಲಾಸು ಬಿಸಿನೀರು ಕುಡಿದು ಚೇತೋಹಾರಿಯಾದ ಗಾಳಿಯನ್ನು ಧೀರ್ಘವಾಗಿ ಮೂಗಿಗೆ ಎಳೆದುಕೊಂಡೆ.
(ಮುಂದುವರಿಯುವುದು…)
 

‍ಲೇಖಕರು avadhi

May 18, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

Trackbacks/Pingbacks

  1. ಎಂ ಆರ್ ಗಿರಿಜಾ ಪ್ರವಾಸ ಕಥನ : ಶ್ವಾನಗಳ ಜೊತೆ ನನ್ನ ಟ್ರೆಕ್ಕಿಂಗ್ ಕಥೆ! « ಅವಧಿ / Avadhi - [...] ಎಂ ಆರ್ ಗಿರಿಜಾ ಪ್ರವಾಸ ಕಥನ : ಶ್ವಾನಗಳ ಜೊತೆ ನನ್ನ ಟ್ರೆಕ್ಕಿಂಗ್ ಕಥೆ! May 19, 2014 by avadhinew (ಇಲ್ಲಿಯವರೆಗೆ…) [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: