ಎಂ ಆರ್ ಗಿರಿಜಾ ಪ್ರವಾಸ ಕಥನ : ಹೋಗಬೇಕೆನ್ನುವ ಆತಂಕ ಇಲ್ಲ, ಇರಬೇಕೆನ್ನುವ ಬಯಕೆ ಇಲ್ಲ

(ಇಲ್ಲಿಯವರೆಗೆ…)

ಟಕೀನ್ ಪಾರ್ಕ್ ನಿಂದ ವಾಪಸ್ ಹೋಟೆಲ್ ಹತ್ರ ಬಿಡು ಅಂತ ಡ್ರೈವರ್ ಗೆ ಹೇಳಿದೆ. ಹಿಂದಿನ ದಿನ ಅಲ್ಲೆಲ್ಲೋ ಅಥೆಂಟಿಕ್ ಭೂತಾನ್ ರೆಸ್ಟೊರೆಂಟ್ ನೋಡಿದ್ದ ನೆನಪು. ಒಂದೆರಡು ರಸ್ತೆ ಹುಡುಕೋರ್ದಲ್ಲಿ ಸಿಕ್ತು. ಅಲ್ಲಿ ಹೆಚ್ಚು ಜನವಿರಲಿಲ್ಲ.
ಬಫೆ ಊಟ ಮಾತ್ರ ಲಭ್ಯವಿತ್ತು. ಬೆಲೆಯೂ ಜಾಸ್ತಿ. ಅಧಿಕೃತ ಭೂತಾನಿಸ್ ಊಟ ಅದು. ಒಂದಿಷ್ಟು ಬೇಯಿಸಿದ ತರಕಾರಿಗಳು, ಕೆಂಪಕ್ಕಿ ಅನ್ನ ಹಾಗೂ ಅದೇ ‘ವಿಶ್ವ ಪ್ರಸಿದ್ಧ’ ಏಮಾ ದಶಿ. ಏಮಾ ದಶಿ ಬಿಟ್ರೆ ಇನ್ಯಾವುದೂ ರುಚಿಸಲಿಲ್ಲ. ಆದರೆ ವಿಪರೀತ ಖಾರ. ಹೊಟ್ಟೆ ಕೆಡಿಸಿಕೊಳ್ಳಬಾರದು ಅಂತ ಅದರಲ್ಲಿದ್ದ ಚೀಸ್ ಮಾತ್ರ ತಿಂದೆ. ಕೊಟ್ಟ ದುಡ್ಡಿಗೆ ಇದು ಭಲೇ ಮೋಸ. ಒಂದೊಳ್ಳೆ ಡೆಸೆರ್ಟ್(ಸಿಹಿ ತಿಂಡಿ) ಇಲ್ಲ. ಅದನ್ನೇ ತಿಂದು ಹೋಟೆಲ್ ರೂಂಗೆ ಬಂದು ಸ್ವಲ್ಪ ರೆಸ್ಟ್ ತಗೊಂಡೆ.
ಸಾಯಂಕಾಲ 4.30ಕ್ಕೆ ಟಿಂಪು ಮಾರುಕಟ್ಟೆಯಲ್ಲಿ ಸುತ್ತು ಹಾಕಿ ಬರೋಣ ಅಂತ ಹೋದೆ.
ಮೊದಲು ಸಿಕ್ಕಿದ್ದೇ ಒಂದು ಬುಕ್ ಶಾಪ್. ಭೂತಾನಿಗೆ ಸಂಬಂಧಪಟ್ಟ ಪುಸ್ತಕಗಳನ್ನು ನೋಡ್ತಾ ಇದ್ದೆ. ಹೋಗುವ ಮೊದಲು ಓದಬೇಕು ಅಂದ್ಕೊಂಡಿದ್ದ ಆದರೆ ಓದಲಾಗದ ಪುಸ್ತಕಗಳಾದ ‘ಮ್ಯಾರೀಡ್ ಟು ಭೂತಾನ್’ , ‘ ಬಿಯಾಂಡ್ ದ ಸ್ಕೈ ಅಂಡ್ ದ ಸ್ಕೈ’, ‘ ವಾಟ್ ಮೇಕ್ಸಸ್ ಯು ನಾಟ್ ಎ ಬುದ್ಧಿಸ್ಟ್’ ಜೊತೆಗೆ ಭೂತಾನ್ ಗೆ ಸಂಬಂಧಪಟ್ಟ ಅನೇಕ ಪುಸ್ತಕಗಳು ಹಾಗೂ ಫೋಟೋ ಜರ್ನಲಿಸಂನ ಪುಸ್ತಕಗಳಿದ್ದವು.
ಪುಸ್ತಕದ ಅಂಗಡಿಯಾಕೆ ಜೊತೆ ಹೀಗೇ ಮಾತನಾಡತಾ ಇದ್ದೆ. ಆಗ ಅಲ್ಲಿಗೆ ಬಂದ ಹುಡುಗಿ ಮಾತಿಗೆ ಸೇರಿದಳು. ಅವಳು ಮುಂಬೈನವಳೆಂದು ಪರಿಚಯ ಮಾಡಿಕೊಂಡಳು. ಮಾತಿನ ನಡುವೆ ಅವಳು ತನ್ನ ಗಂಡ ಝಾಂಗ್ ನೋಡಲು ಹೋಗಿದ್ದಾರೆ, ತಾನು ಹಿಂದಿನ ದಿನ ನೋಡಿದ್ದರಿಂದ ಬುಕ್ ಶಾಪಿಗೆ ಬಂದೆ ಎಂದಳು.
ಅದು ಐದು ಗಂಟೆಗೆ ತೆರೆಯುತ್ತದಂತೆ. ಬೆಳಿಗ್ಗೆ ನಾನು ಡ್ರೈವರ್ನ ಕೇಳಿದಾಗ ಅವನು ಆ ಝಾಂಗ್ ಆಡಳಿತದ ಬ್ಲಾಕ್ ಆಗಿರುವುದರಿಂದ ಯಾರಿಗೂ ಪ್ರವೇಶ ಇಲ್ಲ ಅಂತ ಹೇಳಿದ್ದ. ಎಲಾ ಕಳ್ಳಾ ದಾರಿ ತಪ್ಪಿಸಿದೆಯಾ ಅಂತ ಬೈಕೊಂಡು ಆಚೆ ಬಂದು ಒಂದು ಟ್ಯಾಕ್ಸಿ ಹತ್ತಿ ಝಾಂಗ್ಗೆ ಹೋದೆ. ಆಗಲೇ 5.30 ಆಗಿತ್ತು.
ಅದಾಗ ತಾನೆ ಝಾಂಗ್ ಓಪನ್ ಆಗಿತ್ತು. ಅಲ್ಲಿನ ಸೆಕ್ಯುರಿಟಿ ನಾನು ಗೈಡ್ ಜತೆ ಬರದಿದ್ದ ಕಾರಣ ನನ್ನ ವಿವರ ಬರೆದುಕೊಂಡ. ಇದು ವಿಪರೀತ ಸೆಕ್ಯುರಿಟಿ ಇರುವ ಝಾಂಗ್. ಇದು ಭೂತಾನಿನ ಪ್ರಮುಖ ಆಡಳಿತದ ಬ್ಲಾಕ್.
ಇಲ್ಲಿರುವ ಒಳಾಂಗಣ ವಿಸ್ತಾರವಾಗಿತ್ತು ಮತ್ತು ಒಳಗೆ ಹೋದರೆ ಬುದ್ಧನ ವಿಗ್ರಹ, ಗೋಡೆಗಳ ಮೇಲೆಲ್ಲಾ ಬಣ್ಣದ ಕಥಾಚಿತ್ರಗಳು, ನೈವೇದ್ಯಕ್ಕಿಟ್ಟ ತಿಂಡಿ ತೀರ್ಥಗಳು, ಹಿಟ್ಟಿನಲ್ಲಿ ಮಾಡಿದ ಬಣ್ಣಬಣ್ಣದ ಕಲಾಕೃತಿಗಳು. ಕೇವಲ ಒಂದು ಗಂಟೆ ಮಾತ್ರ ಓಪನ್ ಇರೋದ್ರಿಂದ ಜನ ಕಿಕ್ಕಿರಿದಿದ್ದರು. ಹಾಗಾಗಿ ನಾನು ಬೇಗ ಗರ್ಭಗುಡಿಯಿಂದ ಹೊರಬಂದು ಹೊರಗಿನ ಅಂಗಳದಲ್ಲಿದ್ದ ಬೇರೆ ಅಂಕಣಗಳ ಫೋಟೋ ತೆಗೆಯಲು ಹೋದೆ. ಆದರೆ ಝಾಂಗ್ ನ ಕೆಲವೇ ಭಾಗಗಳು ಮಾತ್ರ ನೋಡಲು ಲಭ್ಯವಿದ್ದವು. ಸೆಕ್ಯುರಿಟಿ ಎಲ್ಲರನ್ನು ಆಚೆ ಹೋಗಲು ಸೂಚಿಸುತ್ತಿದ್ದರು.
 
ಇಲ್ಲಿ ನನಗೇನೂ ವಿಶೇಷಾಸಕ್ತಿ ಮೂಡಲಿಲ್ಲ. ಅದಾಗಲೇ ಕತ್ತಲಾಗ್ತಾ ಇತ್ತು. ಈ ಝಾಂಗ್ ಹೊರಗಿನಿಂದಲೇ ನನಗೆ ತುಂಬಾ ಆಕರ್ಷಕವಾಗಿ ಕಾಣ್ತಿತ್ತು. ಬರುವಾಗ ಟ್ಯಾಕ್ಸಿಯನ್ನು ಬರೀ ಡ್ರಾಪ್ ಗೆ ಮಾತ್ರ ತೆಗೆದುಕೊಂಡದ್ದರಿಂದ ಈಗ ನಡೆದೇ ವಾಪಸ್ ಹೋಗಬೇಕಾಗಿತ್ತು. ಮೈನ್ ರೋಡ್ ತಲುಪಲು ಒಂದು ಕಿಮೀ ದಾರಿ. ಕಾರ್ ಪಾರ್ಕಿಂಗ್ ಹತ್ತಿರ ಬರೋರ್ದ್ರೊಳಗೆ ಬಹುತೇಕ ಕಾರ್ ಗಳು ತಮ್ಮ ಗೆಸ್ಟ್ ಗಳೊಂದಿಗೆ ಖಾಲಿಯಾಗಿದ್ದವು. ನಡೆದು ಹೊರಟೆ. ಬರುಬರುತ್ತಾ ಅಲ್ಲೊಂದು ಇಲ್ಲೊಂದು ಸರ್ಕಾರಿ ವಾಹನಗಳನ್ನು ಬಿಟ್ರೆ ನನ್ನ ಹೆಜ್ಜೆಯ ಸಪ್ಪಳ ಕೇಳುವಷ್ಟು ನೀರವತೆ. ಶಬ್ದ ಆ ಪರಿಸರದಲ್ಲಿ ಮಾಯವಾಗಿತ್ತು. ಬೇಗ ಹೋಗಿ ಬಿಡಬೇಕೆನ್ನುವ ಆತಂಕ ಇಲ್ಲ, ಇಲ್ಲೇ ಇರಬೇಕೆನ್ನುವ ಬಯಕೆ ಇಲ್ಲ, ಆತಂಕ ಇಲ್ಲ. ನಿರಮ್ಮಳ ಕ್ಷಣ ಅದು. ಆ ಹೊತ್ತಿನ ನಡಿಗೆಯೇ ಒಂದು ಧ್ಯಾನದಂತೆ ಇತ್ತು.

ಸುಮಾರು ಒಂದು ಕಿ.ಮೀ. ಆದ ಮೇಲೆ ಸಿಕ್ಕಿದ್ದು ಮೈನ್ ರೋಡ್. ಅಲ್ಲಿ ಟ್ಯಾಕ್ಸಿ ಹಿಡಿಯಲು ಬಂದವಳಿಗೆ ನಡೆದೇ ಹೋಟೆಲಿಗೆ ಹೋಗುವ ಉಮೇದು ಬಂತು. ದಾರಿಯುದ್ದಕ್ಕೂ ಕರಕುಶಲ ವಸ್ತುಗಳ ಮಳಿಗೆಗಳಿದ್ದವು. ರಸ್ತೆ ಉದ್ದಕ್ಕೂ ಹತ್ತಿರ ಹತ್ತಿರ ನೂರು ಅಂಗಡಿಗಳು. ಅವರ್ಯಾರೂ ತಮ್ಮ ಅಂಗಡಿಗೆ ಬನ್ನಿ ಬನ್ನಿ ಅಂತ ಕೂಗಿ ಕರೀತಿರಲಿಲ್ಲ. ಬಂದ್ರೆ ಬನ್ನಿ ಬಿಟ್ರೆ ಬಿಡಿ ಅನ್ನೋ ಮನೋಭಾವದಲ್ಲಿದ್ರು. ಅವರಿಗೆ ಸರ್ಕಾರದಿಂದ ಏನೋ ಸ್ವಲ್ಪ ಸಹಾಯ ಸಿಕ್ತಾ ಇರ್ಬೇಕು ಅಂದು ಕೊಂಡೆ. ಒಂದೊಂದು ಕರಕುಶಲ ಮಾಲಿನ ಬೆಲೆಯೂ ಗಗನದಲ್ಲೇ ಇತ್ತು. ಒಂದು ಪುಟ್ಟ ಮುಖವಾಡಕ್ಕೆ 2000 ರೂ. ಒಂದು ಪುಟ್ಟ ಟಂಕಾ ಪೇಂಟಿಂಗ್ 5000 ಹೀಗೆ.
ಟಿಂಪು ಮೈನ್ರೋಡಿನಲ್ಲಿ ನಡೀತಾ ಹೋಗ್ತಾ ಇದ್ರೆ ಮನಸ್ಸು ಪ್ರಫುಲ್ಲವಾಗಿತ್ತು. ಭಾರತದ ಬೇರೆ ಬೇರೆ ಕಡೆ ಒಂಟಿಯಾಗಿ ಓಡಾಡುವಾಗ ಒಂದು ವಿಜಿಲೆನ್ಸ್ ಇರತ್ತೆ, ಅದು ಈ ರಸ್ತೆಯಲ್ಲಿ ಹೋಗುವ ಒಬ್ಬ ಒಂಟಿ ಪ್ರವಾಸಿಗಳಿಗೆ ಬರಲಿಲ್ಲ ಅನ್ನೋದು ಮುಖ್ಯ. ಸದಾ ವಿಜಿಲೆಂಟ್ ಆಗಿರೋ ಮನಸ್ಸು ಪೂರ್ಣ ಅರಳುವುದಿಲ್ಲ. ಹಿಂದೆ ನೋಡೋದು ಮುಂದೆ ನೋಡೋದು. ಕಿರುಗಣ್ಣಿನ ಅಂಚಲ್ಲಿ ಯಾರಾದ್ರೂ ಪಕ್ಕ ಬರ್ತಿದಾರಾ ಅಂತ ನೋಡೋ ಪ್ರಮೇಯವೇ ಬರಲಿಲ್ಲ.
ಮುಂದೊಂದು ಅಂಗಡಿಯಲ್ಲಿ ಮೊಬೈಲ್ ಗೆ ಹಾಕೋ ಟ್ಯಾಗ್ ತಗೊಂಡೆ. ತಗೊಂಡ್ ಮೇಲೆ ಅಂಗಡಿಯವನು ಹೇಳ್ತಾನೆ ಇದು ಬಂದಿರೋದು ಭಾರತದ ಜೈಗಾಂವ್ ಎಂಬ ಹಳ್ಳಿಯಿಂದ ಅಂತ!!! ಜೈಗಾಂವ್ ಭಾರತ ಮತ್ತು ಭೂತಾನಿನ ಗಡಿಯಲ್ಲಿರೋ ಸಿಕ್ಕಿಂನ ರಾಜ್ಯದ ಊರು. ಭೂತಾನ್ ಗೆ ಬರೋ ಮುಕ್ಕಾಲು ಮೂರು ಪಾಲು ಸಾಮಾನು ಇಂಪೋರ್ಟ್ ಆಗೋದು ಇಲ್ಲಿಂದಲೇ.
ಅಕ್ಕಿ ಮತ್ತು ಇತರ ದವಸಧಾನ್ಯಗಳನ್ನು ಬೆಳೆದರೂ ಅದು ಸಾಕಾಗುವಷ್ಟು ಇಲ್ಲ. ಹಾಗಾಗಿ ಅದಕ್ಕೂ ಭಾರತದ ಮೇಲೆ ಅವಲಂಬನೆ. ನಾನಿದ್ದ ಹೋಟೆಲ್ ಮಾಲೀಕ ಕೂಡ ಹೇಳ್ತಾ ಇದ್ದ. ಅವನ ಹೋಟೆಲ್ ಗೆ ಬೇಕಾದ ಎಲ್ಲಾ ವಸ್ತುಗಳನ್ನೂ ವಾರಕ್ಕೊಮ್ಮೆ ಇಂಡಿಯಾದಿಂದ ಜೈಗಾಂವ್ ಮೂಲಕ ತರಿಸುತ್ತೇನೆ ಅಂತ. ಅಹಿಂಸೆ ಯನ್ನು ನಂಬಿದರೂ ಭೂತಾನೀಯರು ಮಾಂಸಾಹಾರಿಗಳು. ಪ್ರಾಣಿ ಹಿಂಸೆ ಇಲ್ಲಿ ನಿಷೇಧ. ಹಾಗಾಗಿ ಮಾಂಸವನ್ನು ಭಾರತದಿಂದ ಆಮದು ಮಾಡಿಕೊಳ್ಳುತ್ತದೆ. ಇದೊಂದು ತರಹ ಇಂಪೋರ್ಟೆಡ್ ಅಹಿಂಸೆ. ಇತ್ತೀಚೆಗೆ ಪ್ರಾಣಿ ದಯಾಸಂಘಗಳು, ಕದ್ದು ಮುಚ್ಚಿ ನಡೆಯುವ ಪ್ರಾಣಿಹತ್ಯೆ ಯನ್ನು ತಡೆಯಲು ಹೋರಾಟ ನಡಸುತ್ತಾ ಇವೆಯಂತೆ.
ಇಂತಹ ಭೂತಾನ್, ನಮ್ಮ ದೇಶಕ್ಕೆ ವಿದ್ಯುತ್ ಅನ್ನು ರಫ್ತು ಮಾಡುತ್ತದೆ. ಅಲ್ಲಿ ಅನೇಕ ಜಲ ವಿದ್ಯುತ್ ಸ್ಥಾವರಗಳಿವೆ. ಕೆಲವನ್ನು ಇಂಡಿಯಾ ಆರ್ಥಿಕವಾಗಿ ಬೆಂಬಲಿಸುತ್ತದೆ. ಜಲ ವಿದ್ಯುತ್ ಮತ್ತು ಪ್ರವಾಸೋದ್ಯಮ ಅವರ ಮುಖ್ಯ ಆದಾಯದ ಮೂಲಗಳು. ಪರಂಪರೆಯ ಉಳಿವು ಮತ್ತು ಪರಿಸರ ರಕ್ಷಣೆ ಅವರ ಪ್ರಮುಖ ಕಾಳಜಿ. ಪ್ರವಾಸೋದ್ಯಮವು ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಬೆಳೆಯುತ್ತಿದೆ.
ದಾರಿಯಲ್ಲಿ ಒಂದು ಟೆಕ್ಸಟೈಲ್ಸ್ ಅಂಗಡಿಗೆ ಹೋದೆ. ಅದರ ತುಂಬಾ ಕೀರಾ ಮತ್ತು ಟೇಗೋ ಬಟ್ಟೆಗಳು. ಕೆಲವು ಅಂಗಡಿಗಳಲ್ಲಿ ಒಂದು ಕಸೂತಿಯ ಕೀರಾ ಉಡುಪಿಗೆ 80 ಸಾವಿರದಿಂದ 90 ಸಾವಿರ ರೂಗಳ ತನಕ ಕೂಡ ರೇಟ್ ಇದೆ ಅಂತ ತಿಳೀತು. ಅಬ್ಬಾ ಒಂದು ಸ್ಕರ್ಟ್ ಗೆ ಇಷ್ಟು ಬೆಲೆನಾ ಅಂತ ಗಾಬರಿಯಾಯಿತು.
ಇಲ್ಲಿನ ಜನರು ತಮ್ಮ ಮಕ್ಕಳನ್ನು ಬೆನ್ನ ಮೇಲೆ ನೇತು ಹಾಕಿಕೊಂಡು ಹೋಗುವುದು ಚೆನ್ನಾಗಿತ್ತು. ಸೇಬಿನ ಕೆನ್ನೆಯ ಮಕ್ಕಳು ಮುದ್ದು ಮುದ್ದಾಗಿ ಹಿಂದೆ ಕುಳಿತಿರುತ್ತಿದ್ದವು.
ಸ್ವಲ್ಪ ಹೊತ್ತಲ್ಲಾಗಲೇ ನನ್ನ ಹೋಟೆಲ್ ಹತ್ರ ಬಂದೇ ಬಿಟ್ಟಿದ್ದೆ.

(ಮುಂದುವರಿಯುವುದು…)
 

‍ಲೇಖಕರು avadhi

May 12, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

Trackbacks/Pingbacks

  1. ಎಂ ಆರ್ ಗಿರಿಜಾ ಪ್ರವಾಸ ಕಥನ : ’ನಿಮಗೆ ಗಾಂಧಿ ಹೇಗೋ ನಮಗೆ ಶಬ್ರದುಂಗ್ ಹಾಗೆ’ « ಅವಧಿ / Avadhi - [...] ಎಂ ಆರ್ ಗಿರಿಜಾ ಪ್ರವಾಸ ಕಥನ : ’ನಿಮಗೆ ಗಾಂಧಿ ಹೇಗೋ ನಮಗೆ ಶಬ್ರದುಂಗ್ ಹಾಗೆ’ May 13, 2014 by avadhinew (ಇಲ್ಲಿಯವರೆಗೆ…) [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: