ಎಂ ಆರ್ ಗಿರಿಜಾ ಪ್ರವಾಸ ಕಥನ : ಅವಧೂತ ತಾಂತ್ರಿಕ ದ್ರುಪ ಕಿಲೆ ಮತ್ತು ಶಿಶ್ನಾರಾಧನೆ

(ಇಲ್ಲಿಯವರೆಗೆ…)

ಹಿಮಾಲಯದ ಭಾಗ ತಂತ್ರಗಳಿಗೆ, ದೊಡ್ಡ ತಂತ್ರ ಸಾಧಕರಿಗೆ ಪ್ರಸಿದ್ಧ. ಹುಚ್ಚು ಅವಧೂತ ಅಂತ ಕರೆಸಿಕೊಳ್ಳೊ ದ್ರುಪ ಕಿಲೇ ಭೂತಾನಿಯರ ಪ್ರಮುಖ ಯೋಗಿ. ಬೌದ್ಧ ಧರ್ಮದಲ್ಲಿ ಹೀನಯಾನ, ಮಹಾಯಾನಕ್ಕಿಂತ ಪ್ರಖರವಾದ್ದು ವಜ್ರಯಾನ. ತಾಂತ್ರಿಕ ಬೌದ್ಧ ಧರ್ಮವನ್ನು ತನ್ನದೇ ರೀತಿಯಲ್ಲಿ ಬೋಧಿಸಿದ ಇವನ ಬಗ್ಗೆ ಮಾತನಾಡುವಾಗ ಜನರ ತುಟಿಯ ಮೇಲೆ ತೆಳು ನಗೆ ಹಾದು ಮಾಯವಾಗದಿದ್ದರೆ ಕೇಳಿ.
ಅವನ ಬಗ್ಗೆ ಇರುವ ಕಥೆಗಳೇ ಅಂಥವು. ತಂತ್ರದ ಹಲವು ಅಂಥಗಳಲ್ಲಿ ಇವನು ಸಾಗಿದ್ದ ಪಥದಲ್ಲಿ ಮಹಾಮುದ್ರೆ ಉನ್ನತ ಸ್ಥಿತಿ. ಆದರೆ ಇವನ ಬಗೆಯ ತಾಂತ್ರಿಕ ಸಾಧನೆಗಳಗಿಂತಹ ಜನಪ್ರಿಯ ಕತೆಗಳೇ ಇಂದಿಗೂ ಚಾಲ್ತಿಯಲ್ಲಿವೆ. ಇವನ ಬಗ್ಗೆ ಕೇಳುವಾಗ ಓಶೋವಿನ ವ್ಯಕ್ತಿತ್ವ ನೆನಪಾಗುತ್ತದೆ.
ಕೆಲವು ಗುರುಗಳು ಕೇವಲ ಕಟ್ಟುತ್ತಾರೆ. ಅಲ್ಲಮನಂತಹ ಹಳೆಯ ಯೋಗಿ ಹಾಗು ನೀಷೆ ಅಂತಹವರು ಕಟ್ಟಿದ್ದಕ್ಕಿಂತ ಕೆಡವಿದ್ದೇ ಜಾಸ್ತಿ. ಆದರೆ ಇವರಿಬ್ಬರು ಇವೆರಡನ್ನೂ ಒಟ್ಟಿಗೇ ಮಾಡುತ್ತಾ ಹೋದವರು.
ಮದ್ಯ ಮಾನಿನಿಯಾರೊಡನೆ ಸಂಗಾತ ಮಾಡುತ್ತಿದ್ದ ಈತ ಬೇಟೆಗಾರ ಕೂಡ.ಹಾಗಾಗಿ ಚಿತ್ರಗಳಲ್ಲಿ ಒಂದು ಕೈ ಕಿವಿಗೆ ತಾಕಿದ್ದು ಕೇಳಿಸಿಕೊಳ್ಳುವ ಭಂಗಿಯಲ್ಲಿರುತ್ತದೆ. ನಾಗರೀಕರಿಗೆ ಲಂಪಟತನ ಎಂದು ತೋರಬಹುದಾದ ತನ್ನ ನಡವಳಿಕೆಗಳಿಂದ ಆತ ವಿವಾದದ ಹೆಸರಾಗಿದ್ದ.
ಡಾಚುಲಾ ಪಾಸ್ನಲ್ಲಿದ್ದ ರಾಕ್ಷಸಿಯನ್ನು ತನ್ನ ಶಿಶ್ನದಿಂದ ಹೊಡೆದು ಬುದ್ಧಿ ಕಲಿಸಿದನೆಂದು ಪ್ರತೀತಿ.ಇವನ ಸುತ್ತ ವರ್ಣರಂಜಿತ ಕತೆಗಳೋ ಕತೆಗಳು.ಹೀಗೆ ಶತ್ರು ಸಂಹಾರಕ್ಕೆ ಈತನ ಶಿಶ್ನವನ್ನು ಬಳಸಿದಾಗಿನಂದ ಅದನ್ನು ವಿವೇಕದ ಉರಿಯುವ ಮಿಂಚು (The flaming thunderbolt of wisdom) ಎಂದು ಕರೆಯುತ್ತಾರೆ. ಈತನಿಗೆ ಅನೇಕ ಅತೀಂದ್ರಿಯ ಶಕ್ತಿಗಳು ಇದ್ದವು ಅಂತಾರೆ.
ಬೂಟಾಟಿಕೆ, ಸ್ವಾರ್ಥ ಮತ್ತು ದುರಾಸೆಯಿಂದ ತುಂಬಿದ ಜಗತ್ತಿಗೆ ಬುದ್ಧಿ ಕಲಿಸಲು ಬೇಕಂತಲೇ ಅಡ್ಡಾದಿಡ್ಡಿಯಾಗಿದ್ದ ನಡವಳಿಕೆಗಳನ್ನು ಅನೇಕ ತಾಂತ್ರಿಕರಂತೆ ಇವನೂ ರೂಢಿಸಿಕೊಂಡಿದ್ದ. ಇವನು ಸದಾ ಹಾಡುತ್ತಾ, ಕುಣಿಯುತ್ತಾ, ಹೆಂಡ ಕುಡಿಯುತ್ತಾ, ಕನ್ಯತ್ವ ಹರಣ ಮಾಡ್ತಾ ಇದ್ದ ಅಂತಾರೆ. ಕೆಲವು ಟೀ ಹನಿಗಳನ್ನು ಊರಿಗೇ ಹಂಚೋ ಅಷ್ಟು ಮಾಡುವ ಅಕ್ಷಯ ಅತಿಮಾನುಷ ಶಕ್ತಿ, ಸತ್ತವರನ್ನು ಬದುಕಿಸಿದ ಅನೇಕ ಪ್ರಕರಣಗಳೂ ಇವೆ. ಅದ್ಭುತ ಕವಿ ಹಾಗು ಹಾಡುಗಾರನಾಗಿದ್ದ ಈತನ ಹಾಡುಗಳು ಇಂದಿಗೂ ಭೂತಾನಿನಲ್ಲಿ ಪ್ರಚಲಿತವಿವೆ. ಸಂಭೋಗದಿಂದ ಸಮಾಧಿಯವರೆಗೆ ಎಂದು ನಂಬಿ ನಡೆದವ ಈತ. ಈತನ ಪಾಲಿಗೆ ಕಾಮ ಬೃಹತ್ ಆದ ಯಾವುದೋ ತತ್ವಕ್ಕೆ ಸೇತುವೆ.ಈತನ ಆಶೀರ್ವಾದ ಕಾಮದ ರೂಪದಲ್ಲಿರುತ್ತಿತ್ತಂತೆ. ಯಾರಿಗಾದರೂ ಖಾಯಿಲೆಯಾದರೆ ಅದನ್ನು ಸೆಕ್ಸ್ ಮೂಲಕ ಗುಣಪಡಿಸುತ್ತಿದ್ದ. ಅವನ ಬಗ್ಗೆ ಹಲವಾರು ಕತೆಗಳು ಭೂತಾನಿನ ಗಾಳಿಯಲ್ಲಿ ಸೇರಿ ಹೋಗಿವೆ.
ಒಂದೆರಡು ಕತೆಗಳು ಹೀಗಿವೆ. ಅವನ ಅಮ್ಮ ಬಹಳ ದುರಹಂಕಾರದ ಮೊಟ್ಟೆ. ಅವಳಿಗೆ ಖಾಯಿಲೆ ಬಂದಾಗ ಇದೇ ಅದನ್ನು ಮುರಿಯಲು ತಕ್ಕ ಸಮಯ ಎಂದು ಅವಳನ್ನು ಪುಸಲಾಯಿಸಿ, ಅವಳೊಂದಿಗೆ ಮಲಗಿ, ಖಾಯಿಲೆ ಗುಣಪಡಿಸಿದನಂತೆ. ಜೊತೆಗೆ ಅದನ್ನು ಲೋಕಕ್ಕೆ ಸಾರಿದನಂತೆ. ಆತನ ತಾಯಿ ನಾಚಿಕೆಯಿಂದ ತಲೆ ಎತ್ತಲಿಲ್ಲ. ಇನ್ನೊಮ್ಮೆ ಯಾವುದೋ ಮುಖ್ಯ ಸ್ತೂಪವನ್ನು ಪೂಜಿಸುವ ಬದಲು ಒಂದು ಹೆಣ್ಣನ್ನು ಪೂಜಿಸಿದನಂತೆ. ಹೆಣ್ಣಿಗೆ ಮಾತೃವಿವೇಕದ ಗುಣವಿದೆ ಅಂದನಂತೆ. ಜನಕ್ಕೆ ಇವನ ನಡವಳಿಕೆಯಿಂದ ಶಾಕ್ ಗೆ ಒಳಗಾಗುತ್ತಿದ್ದರು. ಅವನ ಬೋಧನೆ ತೀವ್ರವಾಗಿರುತ್ತಿತ್ತು.

ಪುನಾಖಾದಲ್ಲಿರುವ ಚೀಮೀ ಲಾಖಾಂಗ್ ಇವನ ನೆನೆಪಿಗೆ ಕಟ್ಟಿರುವ ದೇವಾಲಯ. ಪುನಾಖಾದಲ್ಲಿರುವ ಇದನ್ನು ತಲುಪಲು 15-20 ನಿಮಿಷ ಭತ್ತದ ಗದ್ದೆಯ ಬದುವಿನ ಮೇಲೆ ನಡೆಯಬೇಕು. ನಾನು ಹೋದಾಗ ಸಂಜೆಯಾಗುತ್ತಾ ಇತ್ತು. ತಣ್ಣನೆಯ ಗಾಳಿ. ಸುತ್ತ ಮುತ್ತ ಹಸಿರು. ಗಾಳಿಗೆ ಪತರುಗುಟ್ಟುವ ಪ್ರೇಯರ್ ಫ್ಲಾಗ್ಗಳು…ಕೆಲಸ ಮಾಡುವ ರೈತರು… .ನಡೆಯಲು ಹಬ್ಬ. ಅಲ್ಲಿಗೆ ತಲುಪಲು ಲೊಬೆಸ ಅನ್ನೋ ಹಳ್ಳಿಯ ಮೂಲಕ ಹೋಗಬೇಕು. ಭೂತಾನಿನ ಹಳ್ಳಿಯಗಳೆಲ್ಲಾ 10-12 ಮನೆಯ ಗುಂಪುಗಳು. ಕೆಲವೇ ಮೀಟರ್ ಗಳಲ್ಲಿ ಸಿಗುವ ಮತ್ತೊಂದು ಅಂತಹ ಸಂಕೀರ್ಣವನ್ನು ಇನ್ನೊಂದು ಹಳ್ಳಿಯ ಹೆಸರಿನಲ್ಲಿ ಕರೀತಾರೆ.

ನಡೆಯಲು ಶುರು ಮಾಡಲು ಮೊದಲು ಗಮನ ಸೆಳೆಯುವುದು ಅಲ್ಲಿರುವ ಮನೆಗಳ ಮೇಲೆಲ್ಲಾ ಇರೋ ಶಿಶ್ನದ ಚಿತ್ರಗಳು. ದ್ರುಪ ಕಿಲೇ ಯಾವಾಗ ತನ್ನ ಅಸ್ತ್ರದಿಂದ ಶತ್ರು ನಾಶಮಾಡಿದನೋ ಆಗಿನಿಂದ ಶಿಶ್ನಾರಾಧನೆ ಭೂತಾನಿನ ಸಂಸ್ಕ್ರುತಿಯ ಒಂದು ಭಾಗ. ಕೆಟ್ಟಶಕ್ತಿಗಳನ್ನು ದೂರ ಇಡೋಕೆ ಎಲ್ಲಾ ಮನೆ, ಅಂಗಡಿಗಳ ಮೇಲೂ ಶಿಶ್ನದ ಚಿತ್ರ ಬರೀತಾರಂತೆ.

ಕೆಲವೊಂದು ಕಡೆ ನಮ್ಮ ಕಡೆ ತೋರಣ ಕಟ್ಟೋ ಜಾಗದಲ್ಲಿ ಮರದ ಶಿಶ್ನವನ್ನು ತೂಗು ಹಾಕಿದ್ದರು. ಅಲ್ಲಿದ್ದ ಒಂದು ಅಂಗಡಿಯ ಹೆಸರೇ ಫಾಲಸ್ ಹ್ಯಾಂಡಿಕ್ರಾಫ್ಟ್. ಅಲ್ಲಿನ ಅಂಗಡಿಗಳಲ್ಲಿ, ಹತ್ತಾರು ಗಾತ್ರ,ಹತ್ತಾರು ಬಣ್ಣಗಳ, ಮರದ, ಲೊಹದ ಶಿಶ್ನಗಳು ಲಭ್ಯ. ಪೇಂಟಿಂಗ್ ನಲ್ಲಿ ಕೆಲವನ್ನು ನಗೆ ಮೊಗದಲ್ಲಿ ಚಿತ್ರಿಸಿದ್ದರೆ, ಕೆಲವು ಕೆಲವನ್ನು ಕೋಪಗೊಂಡಿರುವಂತಯೂ ಚಿತ್ರಿಸಿರುತ್ತಾರೆ.

ಪಾರೋ ಮಾರ್ಕೆಟ್ಟಿನ ಒಂದು ಅಂಗಡಿಯಲ್ಲಿ ಪುಟ್ಟ ಪುಟ್ಟ ಶಿಶ್ನದ ಕೀ ಬಂಚ್ ಗಳು, ಪೆಂಡೆಂಟ್ ಗಳೂ ಇದ್ದವು.

 
ಮನೆ ಗೃಹಪ್ರವೇಶ ಮಾಡುವ ಮೊದಲು ಒಂದು ಮರದ ಶಿಶ್ನವನ್ನು ನೆಲಕ್ಕೆ ಬಾಗಿಲ ಬಾಗಿಲ ಹತ್ತಿರ ಹುಗಿದು ಒಳಗೆ ಹೋಗುತ್ತಾರಂತೆ ಅಂತ ಒಂದು ಬುಕ್ ನಲ್ಲಿ ಓದಿದೆ. ನಾವು ಬಾಗಿಲಿಗೆ ಲೋಹವನ್ನು ಬಡಿಯುವುದು ನೆನಪಿಗೆ ಬಂತು. ಈ ಚಿತ್ರಗಳನ್ನು ನೋಡಿ ಮೊದಮೊದಲು ಸ್ವಲ್ಪ ಮುಜುಗರ ಆದರೂ ಚೀಮೀ ಲಖಾಂಗ್ ತಲುಪೋರ್ದಲ್ಲಿ ಅದಕ್ಕೆ ಹೊಂದಿಕೊಂಡು ಬಿಟ್ಟಿರ್ತೀವಿ.
ಡಾಚುಲಾ ಪಾಸ್ ನ ರಾಕ್ಷಸಿಯನ್ನು ಒಳ್ಳೆಯವಳನ್ನಾಗಿ ಬದಲಾಯಿಸಿದ ಅಂತ ಒಂದು ಕತೆ ಇದ್ದರೆ ಮತ್ತೊಂದು, ಆ ರಾಕ್ಷಸಿ ನಾಯಿಯ ರೂಪ ಧರಿಸಿ ಈಗಿನ ಚೀಮೀ ಲಾಖಾಂಗ್ ಜಾಗಕ್ಕೆ ಬಂದಿತಂತೆ. ಅದು ಅಡಗಿ ಕುಳಿತಿದ್ದ ಜಾಗದ ಮೇಲೆ ಸ್ತೂಪ ನಿರ್ಮಿಸಿ ಆ ರಾಕ್ಷಸಿಯನ್ನು ಸಂಹರಿಸಿದನಂತೆ. ಹಾಗಾಗಿ ನಾಯಿಯಿಲ್ಲದ ದೇವಾಲಯ ಅಂದರೆ ಚೀಮೀ ಲಾಖಾಂಗ್ ಎಂದು ಕರೆಯುತ್ತಾರೆ.
ದಾರಿಯುದ್ದಕ್ಕೂ ಸುಮ್ಮನೇ ಬಂದ ನನ್ನ ಗೈಡ್ ಕಡೆಗೆ ಲಖಾಂಗ್ ತಲುಪಿದ ಮೇಲೆ ದ್ರುಪ ಕಿಲೇ ಬಗ್ಗೆ ಬಾಯಿಬಿಟ್ಟ. ಹೇಳಲೋ ಬೇಡವೋ ಅನ್ನೋ ಮುಜುಗರ ಮೊದಮೊದಲಿಗೆ ಕಾಣ್ತಾ ಇತ್ತು. ಆಮೇಲೆ ಕತೆಯ ಹುಕ್ಕಿಗೆ ಬಂದು ಸಹಜವಾಗಿ ಮಾತನಾಡ್ತಾ ಹೋದ. ಈ ಮೊನೆಸ್ಟರಿಯನ್ನು ದ್ರುಪ ಕಿಲೆಯ ಸೋದರ ಸಂಬಂಧಿ ಕಟ್ಟಿಸಿದನಂತೆ. ಮುಖ್ಯ ದೇವಾಲಯದ ಪಕ್ಕ ಮತ್ತಷ್ಟು ಕಟ್ಟಡ ಕಟ್ಟುತ್ತಾ ಇದ್ದರು. ಒಳಗೆ ದ್ರುಪ ಕಿಲೆಯ ವಿಗ್ರಹ ಇದೆ. ಒಂದು ಕೈ ಕಿವಿಗೆ ಇಟ್ಟು ಆಲಿಸುವ ಹಾಗೆ ಇರುವ ದ್ರುಪಕಿಲೆ ನೋಡಲು ಸುಂದರ ಕೂಡ. ಅವನು ಉಪಯೋಗಿಸುತ್ತಿದ್ದ ಎನ್ನುವ ಬಿಲ್ಲು, ಮರದ ಶಿಶ್ನ, ಮದ್ಯ ತುಂಬಿಸುವ ಮರದ ದಾನಿ ಇವುಗಳಿಂದ ಬಂದವರಿಗೆ ಆಶೀರ್ವಾದ ಮಾಡುತ್ತಾರೆ. ಈ ದೇವಾಲಯ ಫಲವತ್ತತೆಯ ದೇವಾಲಯ ಅಂತ ಪ್ರಸಿದ್ಧವಾಗಿದೆ. ಮಕ್ಕಳಾಗದವರು ಇಲ್ಲಿ ಬಂದು ಆಶೀರ್ವಾದ ತೆಗೆದುಕೊಂಡರೆ ಮಕ್ಕಳಾಗುತ್ತದಂತೆ.
ಇದೆಲ್ಲಾ ನೋಡಿ ಬರುವಾಗ, ನಮ್ಮಲ್ಲಿರುವ ಯೋನಿ ಪೂಜೆ, ಲಜ್ಜಾಗೌರಿ, ಕುಮಾರಿ ಪೂಜೆ ಎಲ್ಲಾ ನೆನಪಾದವು. ಹಾಗೇ, ಪರಮಹಂಸ, ತ್ರೈಲಿಂಗಸ್ವಾಮಿ, ಕುಂಭಮೇಳಗಳಲ್ಲಿ ಕಾಣಿಸುವ ನಾಗಾ ಸಾಧುಗಳು ಇವರ ಚಿತ್ರಗಳು ಕಣ್ಣ ಮುಂದೆ ಸುಳಿದು ಹೋದವು. ತಂತ್ರದ laboratory ಯನ್ನು ಪ್ರವೇಶಿಸಲು ಮಾನಸಿಕ ಧೈರ್ಯ ಹಾಗು ಪ್ರಭುದ್ಧ ಮನಸ್ಸು ಬೇಕು. There is much to be explored and understood ಅಂತ ಯೋಚಿಸುತ್ತಾ ಬಂದೆ.
(ಮುಂದುವರಿಯುವುದು…)

‍ಲೇಖಕರು avadhi

May 14, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. vageesha JM

    ಕೆಲವೊಂದುಅಚರಣೆಗಳು ಎಷ್ಟೊಂದು ವಿಚಿತ್ರ ಮತ್ತು ಅ ಸಂಸ್ಕ್ರುತಿಯ ಭಾಗಗಳಾಗಿರುತ್ತವೆ.. intersting

    ಪ್ರತಿಕ್ರಿಯೆ
  2. Manjunatha Ajjampura

    Very good. Fine.
    Please put chapter numbers for continuation purpose.

    ಪ್ರತಿಕ್ರಿಯೆ

Trackbacks/Pingbacks

  1. ಎಂ ಆರ್ ಗಿರಿಜಾ ಅವರ ಪ್ರವಾಸ ಕಥನ : ಅವಸರವೂ ಸಾವಧಾನದ ಬೆನ್ನೇರಿ… « ಅವಧಿ / Avadhi - [...] ಎಂ ಆರ್ ಗಿರಿಜಾ ಅವರ ಪ್ರವಾಸ ಕಥನ : ಅವಸರವೂ ಸಾವಧಾನದ ಬೆನ್ನೇರಿ… May 15, 2014 by avadhinew (ಇಲ್ಲಿಯವರೆಗೆ…) [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: