ಹಿರಿಯ ನಾಗರಿಕರನ್ನು ನೆನೆಯುತ್ತ ..
– ಡಾ ಶಿವಾನಂದ ಕುಬಸದ
ಅತ್ತಾಗ ಕಣ್ಣೀರನೊರೆಸಿ, ಬಿದ್ದಾಗ ಗಾಯವ ತೊಳೆದು, ನಡೆಯಲು ಬಾರದಾದಾಗ ಕೈ ಹಿಡಿದು ನಡೆಸಿ, ತಾವು ಹಸಿದಿದ್ದರೂ ಮಕ್ಕಳಿಗೆ ಉಣಿಸಿ, ತಾವು ಹರಿದದ್ದನ್ನು ತೊಟ್ಟರೂ ಮಕ್ಕಳಿಗೆ ಹೊಸ ಬಟ್ಟೆ ಉಡಿಸಿ ಸಂಭ್ರಮಿಸಿ, ಫೀಸ್ ಕೊಡಲು ದುಡ್ಡಿಲ್ಲದಾಗ ಮೈಮೇಲಿನ ಒಡವೆ ವಸ್ತುಗಳ ಮಾರಿ, ಶಾಲೆ ಕಲಿಸಿ, ಮಕ್ಕಳು ಒಂದಿಷ್ಟೇ ಕಲಿತು ಬಂದರೂ “ನನ್ನ ಮಗ ದೊಡ್ಡ ಸಾಹೇಬನಾಗಿದ್ದಾನೆ ..” ಎಂದು ಊರ ತುಂಬ ಸಾರಿ ಸುಖಿಸಿ, ಇಂದು ಬಾಳ ಸಂಜೆಯಲ್ಲಿ ಅಲಕ್ಷಗೊಳಗಾದವರೆಷ್ಟೋ ಜನ “ಹಿರಿಯರು” ನಮ್ಮೆದುರಿಗಿದ್ದಾರೆ. ವೃದ್ಧಾಪ್ಯದಲ್ಲಿ ಯಾವುದೇ ಸಂಪಾದನೆಯಿಲ್ಲದೆ, ರೋಗಗಳ ಆರೈಕೆಗೆ ಔಷಧಿಯಿಲ್ಲದೆ, ಮಾತು ಹಂಚಿಕೊಳ್ಳಲು ಮಕ್ಕಳು ಸಿಗದೇ ಕಂಗಾಲಾಗಿದ್ದಾರೆ.
ಇಂದು “ಹಿರಿಯ ನಾಗರಿಕರ ದಿನ”. ಅಕ್ಟೋಬರ್ ಒಂದನೇ ದಿನಾಂಕನ್ನು ‘ಹಿರಿಯ ನಾಗರಿಕರ ದಿನ’ ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಹಾಗೆ ನೋಡಿದರೆ ಇಡೀ ವಿಶ್ವದಲ್ಲೆಲ್ಲ ಇದೇ ದಿನವನ್ನು ಹಿರಿಯ ನಾಗರಿಕರ ದಿನ ಎಂದು ಆಚರಿಸಲಾಗುವುದಿಲ್ಲ. ಅಥವಾ ಇದೇ ದಿನವನ್ನು ಆಚರಿಸಿದರೂ ಹಿರಿಯ ನಾಗರಿಕರಿಗೆ ಸುಖ ನೀಡುವಂಥದನ್ನು ಈ ದಿನ ಯಾರೂ ಕೊಡುವುದಿಲ್ಲ. ಸಮಾಜ, ಸರಕಾರ, ಮಕ್ಕಳು, ಮನೆಯ ಜನ ಎಲ್ಲರೂ ಮನಸ್ಸು ಮಾಡಿದರೆ ಮಾತ್ರ ಅವರ ಕೊನೆಯ ದಿನಗಳು ನೆಮ್ಮದಿಯಿಂದ ಕೂಡಿರಲು ಸಾಧ್ಯ. ಅರುವತ್ತು ತುಂಬಿದವರನ್ನೆಲ್ಲ ಹಿರಿಯ ನಾಗರಿಕರು ಎಂಬ ‘ರಿಜರ್ವೇಶನ್’ ಪಟ್ಟಿಗೆ ಸೇರಿಸಿ ಸರಕಾರ ಆಜ್ಞೆ ಹೊರಡಿಸಿ ಒಂದಿಷ್ಟು ಅನುಕೂಲಗಳ ಲಿಸ್ಟ್ ಮಾಡಿದೆಯಾದರೂ ಅದು ಎಷ್ಟರ ಮಟ್ಟಿಗೆ ಅವರ ಸಂಕಷ್ಟಗಳನ್ನು ಕಡಿಮೆ ಮಾಡುತ್ತಿದೆ, ಎಂಬುದು ಮಾತ್ರ ವಿವಾದಾತೀತವಾಗಿ ಉಳಿದಿಲ್ಲ.
ಭಾರತದಲ್ಲಿ ಸಧ್ಯದ ಅಂಕಿ ಅಂಶಗಳ ಪ್ರಕಾರ ಒಟ್ಟು ಜನಸಂಖ್ಯೆಯ 7 ಪ್ರತಿಶತ ಜನ ವೃದ್ಧಾಪ್ಯದ ಗುಂಪಿನಲ್ಲಿ ಬರುತ್ತಾರೆ. 2020ರ ವೇಳೆಗೆ ಒಟ್ಟು ಜನಸಂಖ್ಯೆಯ 10.4% ರಷ್ಟು ಜನ ಅಂದರೆ ಸುಮಾರು 142 ಮಿಲಿಯನ್ ದಷ್ಟು ಜನ 60 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಲಿದ್ದಾರೆ. ಹಾಗೆ ನೋಡಿದರೆ, ತಮ್ಮ ಅನುಭವದ ಶ್ರೀಮಂತಿಕೆಯಿಂದ, ಬದುಕನ್ನು ನಿಭಾಯಿಸುವ ಜಾಣತನದಿಂದ, ಸಮಸ್ಯೆಗಳನ್ನು ಅರಿಯುವ ಕುಶಲತೆಯಿಂದ, ತಮ್ಮ ಕುಟುಂಬ ತನ್ಮೂಲಕ ದೇಶದ ಅಭಿವೃಧ್ಧಿಗೆ ಅವರು ಬೆಲೆಕಟ್ಟಲಾಗದ ಆಸ್ತಿಯಾಗಬಲ್ಲರು. ವಿಜ್ಞಾನದಿಂದಾಗಿ ಒಂದು ಕಡೆ ಮನುಷ್ಯನ ಆಯುಸ್ಸು ಹೆಚ್ಚಾಗಿದ್ದರೂ ಇನ್ನೊದು ಕಡೆ ಅದೇ ವಿಜ್ಞಾನ ಸಾಮಾಜಿಕ, ಸಾಂಸ್ಕೃತಿಕ ಬದಲಾವಣೆಗಳನ್ನೂ ತಂದು ನಮ್ಮ ಅಂಗಳದಲ್ಲಿ ಹರಡಿಬಿಟ್ಟಿತು. ಕೂಡು ಸಂಸಾರಗಳನ್ನೆಲ್ಲ ಒಡೆದು ‘ನ್ಯುಕ್ಲಿಯರ್ ಫ್ಯಾಮಿಲಿ’ ಎಂಬ ವಿಚಿತ್ರ ಆದರೆ ಅನಿವಾರ್ಯ ಬದಲಾವಣೆಗೆ ನಾವು ಒಡ್ಡಿಕೊಂಡುಬಿಟ್ಟೆವು. ಭಾರತದ ಕೌಟುಂಬಿಕ ಶಕ್ತಿಯಾಗಿದ್ದ “ಅವಿಭಕ್ತ ಕುಟುಂಬ” ಎಂಬ ‘ಪವಿತ್ರ’ ಸಂಸ್ಥೆ ಆಧುನಿಕತೆ ಎಂಬ ಕಾಲನ ಕಾಲಲ್ಲಿ ಸಿಕ್ಕು ಒಡೆದು ಛಿದ್ರವಾಗಿಬಿಟ್ಟಿತು. ಅವಿಭಕ್ತ ಕುಟುಂಬ ಎಂಬುದರ ಜೊತೆಗೇ ‘ಡಿಫಾಲ್ಟ್’ ಆಗಿ ಬರುತ್ತಿದ್ದ ಪರಸ್ಪರ ಕಾಳಜಿ ಈಗ ಇಲ್ಲವಾಗಿಬಿಟ್ಟಿತು.
“ ಹಿರೇರು ಇರಲಾರದ ಮನಿ ಅಲ್ಲ, ಗುರು ಇರಲಾರದ ಮಠ ಅಲ್ಲ” ಇದು ನಾವು ಸಣ್ಣವರಿದ್ದಾಗ ನಮ್ಮ ಅಮ್ಮ ( ನಾವು ಆಜ್ಜಿಗೆ ‘ಅಮ್ಮ’ ಆನ್ನುತ್ತೇವೆ) ಹೇಳುತ್ತಿದ್ದ ಮಾತು. ಈ ಮಾತು ಎಂಥ ಮೌಲ್ಯಯುತವಾಗಿತ್ತು ಎಂದರೆ, ಆರು ಮಕ್ಕಳ ತಂದೆಯಾಗಿದ್ದ ನಮ್ಮಪ್ಪ ಕೂಡ ಒಂದು ರೂಪಾಯಿ ಬೇಕಾದರೆ ನಮ್ಮ ಅಮ್ಮನಿಂದಲೇ ಕೇಳಿ ಪಡೆಯಬೇಕಾಗಿತ್ತು. ಹೊಲದಲ್ಲಿ ಈ ವರ್ಷ ಏನು ಬಿತ್ತಬೇಕು, ಯಾವಾಗ ಗಳೇ ಹೂಡಬೇಕು, ಎನ್ನುವುದನ್ನು ಕೂಡ ನಿರ್ಧರಿಸುವ ಅಧಿಕಾರ ಅವಳದ್ದು ಮಾತ್ರ. ಎಂಥ ಗೌರವವಿತ್ತಾಗ, ಹಿರಿಯರಿಗೆ…!! ಆಗ ನಮ್ಮ ಹಿರಿಯರು ಬೆಲೆ ಕಟ್ಟಲಾಗದ ‘ಅಸೆಟ್’ ಆಗಿದ್ದರು . ಈಗವರು ಒಮ್ಮೆಲೇ ‘ಲೈಯಾಬಿಲಿಟಿ’ ಆಗಿಬಿಟ್ಟರಲ್ಲ…
ಇಳಿವಯಸ್ಸಿನಲ್ಲಿ ಸಾಮಾನ್ಯವಾಗಿ ಕಾಡುವ ಕೀಲುನೋವು, ಕಣ್ಣು ಮಂಜಾಗುವುದು, ಕಿವಿ ಕೇಳದಿರುವುದು, ಹಲ್ಲು ಬೀಳುವುದು, ರಕ್ತದೊತ್ತಡ, ಮಧುಮೇಹ ಮುಂತಾದ ಶಾರೀರಿಕ ರೋಗಗಳ ಜೊತೆಗೇ, ಮಕ್ಕಳಿಂದ , ಮನೆಮಂದಿಯಿಂದ ಅಲಕ್ಷ, ‘ಇವನೊಬ್ಬ ಹೊರೆಯಾದ’ ಎಂಬ ಧೋರಣೆ ಮುಂತಾದವುಗಳು ಮಾನಸಿಕ ವ್ಯಥೆಯನ್ನೂ ಜೋಡಿಸಿಕೊಟ್ಟು ‘ಹಿರಿಯರ’ ಬಾಳು ಅಸಹನೀಯವಾಗಿಸಿಬಿಡುತ್ತವೆ. ಜೊತೆಗೇ ಈ ವಯಸ್ಸಿಗೆ ಸಾಮಾನ್ಯವಾದ ‘ಸಂಗಾತಿ’ ಯ ಅಗಲಿಕೆ ಕೂಡ ಅವರ ದಿನ ನಿತ್ಯದ ಬದುಕನ್ನು ಅಪ್ರಿಯವಾಗಿಸಿಬಿಡುತ್ತದೆ. ಸುಮ್ಮನೆ ಕುಳಿತರೆ ಬೇಸರ ಏನಾದರೂ ಮಾಡಬೇಕೆಂದರೆ ‘ ನಿನಗೇಕೆ ಬೇಕು, ಸುಮ್ಮನಿರು. ನಾವಿಲ್ಲವೇ ಅದನ್ನೆಲ್ಲ ಮಾಡುವುದಕ್ಕೆ..’ ಎಂಬ ಅರ್ಥದ ಮಾತುಗಳು. ಅಕಸ್ಮಾತ್ ಏನನ್ನಾದರೂ ಮಾಡಲು ಹೋಗಿ ಬಿದ್ದರಂತೂ ಮುಗಿದೇ ಹೋಯಿತು, ಮೊದಲೇ ಆಶಕ್ತವಾದ ಮೂಳೆಗಳು ಮುರಿದು, ಆಸ್ಪತ್ರೆಯ ಪಾಲು, ದಿನಾಲೂ ಬೈಗುಳಗಳ ಸಾಲು.
ಅದಕ್ಕೇ ‘ಹಿರಿಯ ನಾಗರಿಕರ ದಿನ’ ಎನ್ನುವುದನ್ನು ನೆಪವಾಗಿಟ್ಟುಕೊಂಡು ನಾವೆಲ್ಲಾ ಅವರ ಬಗ್ಗೆ ಚಿಂತಿಸಬೇಕಾಗಿದೆ. ಅವರ ಜ್ಞಾನವನ್ನು ಅನುಭವವನ್ನು ಬಳಸಿಕೊಂಡು ನಾವೂ ಬೆಳೆಯುತ್ತ, ಅವರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಅವರ ಕೊನೆಯ ದಿನಗಳನ್ನು ಸಹ್ಯವಾಗಿಸಿ ಅವರನ್ನೂ ಸಂತೋಷಭರಿತರನ್ನಾಗಿಸಿ ಋಣ ತೀರಿಸುವ ಸದವಕಾಶವನ್ನು ಬಳಸಿಕೊಳ್ಳಬೇಕಿದೆ. ಮನೆಗಿಂತಲೂ ‘ವೃದ್ಧಾಶ್ರಮ’ಗಳೇ ಒಳ್ಳೆಯವು ಎಂದು ಅವರು ನಿರ್ಧರಿಸುವ ಮುನ್ನ, ನಾವೂ ವೃಧ್ಧರಾಗಿ ಅವರ ಚಪ್ಪಲಿಗಳನ್ನು ಮೆಟ್ಟುವ ಮುನ್ನ ಸಮಾಜ ಹಾಗೂ ಮನೆಮಂದಿ ಇದರ ಬಗ್ಗೆ ಚರ್ಚಿಸಬೇಕಿದೆ. ಯಾಕೆಂದರೆ ಮುಂದೊಂದು ದಿನ ಅವರು ಬಿಟ್ಟ ತಾಟಿನಲ್ಲಿ ನಾವೂ ಉಣ್ಣುವವರಿದ್ದೇವಲ್ಲ…!! ಸರಕಾರದ ಅವಶ್ಯಕತೆಯಿಲ್ಲದೆ ಇದನ್ನು ಸಾಧ್ಯವಾಗಿಸುವುದು ಎಲ್ಲ ಮಕ್ಕಳ ಕರ್ತವ್ಯವಾಗಬೇಕು. ಅದಕ್ಕೆ ಭಾರಿ ಬಂಡವಾಳವೇನೂ ಬೇಕಿಲ್ಲ. ಪ್ರ್ರೀತಿ ತುಂಬಿದ ಎರಡು ಮಾತುಗಳು, ಗೌರವ ತುಂಬಿದ ಒಂದು ನೋಟ ಸಾಕಾದೀತು. ತಮ್ಮದೆಲ್ಲವನ್ನೂ ನಮಗೆ ಧಾರೆಯೆರೆದ ಅವರಿಗೆ ನಮ್ಮ ದಿನದ ಒಂದೆರಡು ಕ್ಷಣಗಳನ್ನು, ನಮ್ಮ ಗಳಿಕೆಯ ಒಂದಿಷ್ಟು ಭಾಗವನ್ನು ಅರ್ಪಿಸುವುದು ಕಷ್ಟವೇನಲ್ಲ.
ಒಂದು ಬಾರಿ ಅವರೊಡನೆ ಮಾತಾಡಿ ನೋಡಿ. ಮನೆಯಲ್ಲಿದ್ದರೆ ಅವರೆದುರು ನಿಂತು, ಇಲ್ಲದಿದ್ದರೆ ನಿಮ್ಮ ಮೊಬೈಲ್ ಕರೆನ್ಸಿಯ ಒಂದು ಪರ್ಸೆಂಟ್ ನ್ನು ‘ವ್ಯಯ’ ಮಾಡಿ…..
ಅವರ ಕಣ್ಣ ಮಿಂಚು ನಮ್ಮ ಬಾಳದಾರಿಯನ್ನು ಬೆಳಗಿಸುವ ದೀಪವಾದೀತು….







Wonderful
Dear Shivu article is an eye opener by itself. Hope all (right from us to all youngsters) regard and care the senior citizens. Else we will also be neglected. We know the burden of getting neglected. Your efforts of reminding is amazing.
ಊರೊಳಗಿನ ಹಿರಿಯ ಜೀವಗಳು ನೆನಪಿಗೆ ಬಂದವು ಸರ್.
ಡಾಕ್ಟರ್ ಸರ್
ನಿಮ್ಮ ಬರಹ ಓದಿ ಕಣ್ಣು ಮಂಜಾಯಿತು. ಎಲ್ಲರೂ ಓದಿ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕಾದ, ಪ್ರಯೋಗಕ್ಕೆ ತರಬೇಕಾದ ವಿಷಯಗಳನ್ನು ನೀವು ಹೇಳಿದ್ದೀರಿ. ಈ ಕುರಿತು ಇನ್ನೂ ಎಷ್ಟೋ ಹೇಳುವುದಿದೆ ಅಲ್ಲವೇ? ಇವೆಲ್ಲಾ ಕೋಮುವಾದ, ರಾಜಕೀಯ ಇತ್ಯಾದಿಗಳನ್ನು ಮೀರಿದ ವಿಷಯಗಳು. ನಮ್ಮ ಹಲವು `ಚಿಂತಕ’ರಿಗೆ ಇವು ಕಣ್ಣಿಗೇ ಬೀಳುವುದಿಲ್ಲ.
ಕೆ.ವಿ. ತಿರುಮಲೇಶ್
ತಿರುಮಲೇಶ್ ಸರ್,ಹಾಲಿಗೇರಿ ಮತ್ತು ಅರವಿಂದರವರೆ, ಗೆಳೆಯ ನಾಗರಾಜ್ ಮೆಚ್ಚಿದ್ದಕ್ಕೆ ಧನ್ಯವಾದಗಳು ….
ತಾವು ಹೇಳಿದಂತೆ ಈ ವಿಷಯದ ಬಗ್ಗೆ ಇನ್ನಷ್ಟು ಚಿಂತನೆ ಮಾಡಬೇಕಿದೆ, ನಾವು ನೀವು ಎಲ್ಲ…
ಬರೀ ಓದಿ’ ಲೊಚ್ ಲೊಚ್-ಪಾಪ.ಎಂದು ಮರುಕ ಪಡುವ ಬದಲು ತಮ್ಮ ಮನೆಯಲ್ಲೋ,ಅಕ್ಕ ಪಕ್ಕದ ಮನೆಯಲ್ಲೋ ಇರುವವರಿಗೆ ಇಷ್ಟು ಪ್ರೀತಿ ವಿಶ್ವಾಸ ತೋರಿ ಉಪಚರಿಸೀದರೆ ಕೊಂಚ ವಾದರೂ ಸಾರ್ಥಕವಾದೀತು.
arthapurna chintane…manakaaduva baraha…
DEVA VRADDHARU AVARU.NIJAVAGI KANNU MANJADAVU.
DEVA VRADDHARU AVARU.NIJAVAGI KANNU MANJADAVU.