ಮಂಜುಳ ಸಿ ಎಸ್
**
ಹೊರಡುವ ಮುನ್ನ
ಸಿಹಿ ನೆನಪುಗಳಿರಲಿ
ನನ್ನೊಡನೆ
ಒಂದಷ್ಟು ಘಳಿಗೆ
ಸಾಲ ನೀಡೆಂದೆ !
ಬೇಡ
ಈ ಸಿಹಿ ಘಳಿಗೆಗಳೇ
ಮುಂದೊಮ್ಮೆ
ನಿನ್ನ ಕಾಡುವ
ನೋವಿನ ಗುಳಿಗೆಗಳಾಗಿ
ಬಿಡುತ್ತವೆ
ಮಾತಲ್ಲಿ ಕಾಳಜಿಯಿತ್ತು
ಕಣ್ಣಲ್ಲಿ ನೋವಿತ್ತು
ಸರಿ
ಒಪ್ಪಿಕೊಂಡೆ!
ತಪ್ಪು ಒಪ್ಪುಗಳ
ಚರ್ಚಿಸಿ
ಮನಸ ಹಗುರ
ಮಾಡಿಕೊಳ್ಳೋಣವೆಂದು
ಬೇಡ
ತಪ್ಪು-ಒಪ್ಪುಗಳ
ಅಗೆದಷ್ಟು
ಉಳಿದಿರುವ
ಸ್ನೇಹವೂ ಕದಡೀತು
ಮಾತಲ್ಲಿ ಕಾಳಜಿ ಇತ್ತು
ಕಣ್ಣುಗಳಲ್ಲಿ ನೋವಿತ್ತು
ಸರಿ
ಒಪ್ಪಿಕೊಂಡೆ!
ಕಳುಹಿಸಿಕೊಡುವ ಮುನ್ನ
ಕೊನೆ ಬಾರಿಗೆ
ಅಪ್ಪಿಕೊಳ್ಳೋಣವೆಂದುಕೊಂಡೆ
ಬೇಡ
ಅಪ್ಪುಗೆಯ ಬೆಸುಗೆ
ನಿನಗೆ ಬಂಧನವಾದೀತು
ಮಾತಲ್ಲಿ ಕಾಳಜಿ ಇತ್ತು
ಕಣ್ಣಲ್ಲಿ ನೋವಿತ್ತು
ಸರಿ
ಒಪ್ಪಿಕೊಂಡೆ!
ಹೊಸ್ತಿಲಿನಿಂದಾಚೆ
ಹೊರಡುವಾಗ
ಕೊಂಚ ದೂರ
ಜೊತೆಯಾಗಿ
ಬರುವೆನೆಂದೆ
ಬೇಡ
ನೀನೀಗ ಬಂದರೆ ಮತ್ತೆ
ಹಿಂದಿರುಗುವುದು
ಕಷ್ಟವಾದೀತು
ಮಾತಲ್ಲಿ ಕಾಳಜಿ ಇತ್ತು
ಕಣ್ಣಲ್ಲಿ ನೋವಿತ್ತು
ಸರಿ
ಒಪ್ಪಿಕೊಂಡೆ!
ಕೊನೆಗೆ ಜೋಪಾನವೆಂದು
ಹೇಳಿ
ಒಮ್ಮೆಯೂ
ಹಿಂದಿರುಗಿ ನೋಡದಂತೆ
ಸಾಗಿದವನ
ಕಣ್ಣುಗಳಲ್ಲಿ ಹನಿಯಿತ್ತು
ಹೇಳಿ ಕೊಳ್ಳದ
ಕಾಳಜಿ ಇತ್ತು
ಮಾತುಗಳು
ಮುಗಿದಿತ್ತು
ಉಹೂಂ
ಒಪ್ಪಿಕೊಳ್ಳಲಾಗಲಿಲ್ಲ!
0 ಪ್ರತಿಕ್ರಿಯೆಗಳು