ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉಳುವವನೇ ಹೊಲ ಬಿಟ್ಟು ಓಡಯ್ಯಾ…

– ಬಿ.ರಾಜಶೇಖರಮೂರ್ತಿ


ಸ್ವಾತಂತ್ರ್ಯ ಚಳುವಳಿಯ ಜೊತೆ ಜೊತೆಯಲ್ಲಿಯೇ ಆರಂಭವಾದ ‘ಉಳುವವನೇ ಹೊಲದೊಡೆಯ’ ಎಂಬ ಬೇಡಿಕೆಯೂ ಸ್ವಾತಂತ್ರ್ಯಾನಂತರದಲ್ಲಿ ಈಡೇರಿಸುವಂತಹ ಪರಿಸ್ಥಿತಿ ಉಂಟಾಗಿತ್ತು. ಹೀಗಾಗಿಯೇ 1950ರಿಂದ ದೇಶದ ಅನ್ನದಾತರಿಗೆ ಭೂಮಿಯನ್ನು ನೀಡುವುದು ಕೂಡ ಸರ್ಕಾರಗಳ ಜವಬ್ದಾರಿಯಾಗಿತ್ತು. ನಮ್ಮ ರಾಜ್ಯದಲ್ಲಿ 1970-80ರಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ಸರ್ಕಾರಿ ಭೂಮಿಯನ್ನು ನೀಡುವ ರಾಜಕೀಯ ಇಚ್ಛಾಶಕ್ತಿಯೂ ಇತ್ತು. ಆದರೆ ಈಗ ಆಧಿಕಾರದಲ್ಲಿರುವ ಕಾಂಗ್ರೇಸ್ ಸರ್ಕಾರಗಳು ಭೂಹೀನರಿಗೆ ಭೂಮಿಯನ್ನು ನೀಡುವ ಬದಲಿಗೆ ಬಗರ್ ಹುಕುಂ, ಅರಣ್ಯ ಭೂಮಿ ಸಾಗುವಳಿದಾರರನ್ನು ಒಕ್ಕಲೆಬ್ಬಿಸುತ್ತಿದೆ.
ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ರಾಜ್ಯ ಸರ್ಕಾರ ಸರ್ಕಾರಿ ಭೂಮಿಯನ್ನು ಪತ್ತೆಮಾಡಿ ಭೂ ಬ್ಯಾಂಕ್ ಸ್ಥಾಪಿಸಿ ಖಾಸಗಿ ಕಂಪನಿಗಳಿಗೆ, ರಿಯಲ್ ಎಸ್ಟೇಟ್ದಾರರಿಗೆ ಹರಾಜಿನಲ್ಲಿ ಮಾರಾಟ ಮಾಡಲು ಮುಂದಾಗಿತ್ತು. ಹೀಗಾಗಿ ಸರ್ಕಾರಿ ಭೂ ಅಕ್ರಮಣಕಾರರನ್ನು ಪತ್ತೆಮಾಡಲು ಡಾ.ಬಾಲಸುಬ್ರಮಣ್ಯಂ ಸಮಿತಿಯನ್ನು ರಚಿಸಿತ್ತು. ಡಾ. ಬಾಲಸುಬ್ರಮಣ್ಯಂ ಸಮಿತಿ ಹಲವಾರು ಅಕ್ರಮಣಕಾರರನ್ನು ಗುರುತಿಸುವ ಜೊತೆಗೆ 12 ಲಕ್ಷ ಜನ ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಿದ್ದಾರೆಂದು ವರದಿ ನೀಡಿತು. ಈ ವರದಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಭೂಮಿ, ಬಂಜರು ಭೂಮಿ, ಗೋಮಾಳ, ಅಮೃತ್ ಮಹಲ್ ಕಾವಲು, ಗುಂಡು ತೋಪು, ಇತ್ಯಾದಿ ಹೆಸರಿನಲ್ಲಿ ಬಡ ರೈತರು, ದಲಿತ-ಹಿಂದುಳಿದವರು, ಸಣ್ಣ ರೈತರು, ಮತ್ತು ಕೃಷಿ ಕೂಲಿಕಾರ ಸಾಗುವಳಿದಾರರು ಸೇರಿದಂತೆ ಈ ಎಲ್ಲಾರೂ 12ಲಕ್ಷ ಜನರಲ್ಲಿ ಸೇರಿದ್ದಾರೆ. ಈ ಎಲ್ಲಾರಿಂದಲ್ಲೂ ಭೂಮಿಯನ್ನು ಸ್ವಾಧೀನಪಡಿಸಬೇಕೆಂದು, ರಿಟ್ ಫಿಟೀಷನ್ ಸಂಖ್ಯೆ 11500ರ ಅಡಿಯಲ್ಲಿ ‘ನಮ್ಮ ಬೆಂಗಳೂರು ಪೌಂಡೇಷನ್’ ಮತ್ತು ರಿಟ್ ಫಿಟೀಷನ್ ಸಂಖ್ಯೆ 11511ರ ಅಡಿಯಲ್ಲಿ ‘ಸಾಮಾಜಿಕ ಪರಿವರ್ತನಾ ಸಮಿತಿ’ಯ ಎಸ್.ಆರ್.ಹೀರೇಮಠ್ರವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಹೈಕೊರ್ಟ್  ಈಗಿನ ಕಾಂಗ್ರೇಸ್ ರಾಜ್ಯ ಸರ್ಕಾರಕ್ಕೆ ಅದೇಶ ನೀಡಿ ಎಲ್ಲಾ ಭೂ ಅಕ್ರಮಣಕಾರರಿಂದ ಭೂಸ್ವಾಧೀನ ಪಡಿಸಿಕೊಳ್ಳಬೇಕೆಂದು ತಾಕೀತು ಮಾಡಿದೆ. ಹೀಗಾಗಿ ರಾಜ್ಯ ಸರ್ಕಾರ ರಾಜ್ಯದಲ್ಲಿರುವ ಎಲ್ಲಾ ಒತ್ತುವರಿದಾರರನ್ನು ತೆರವುಗೊಳಿಸುತ್ತೇವೆಂದು ಹೈಕೋರ್ಟ್ ಗೆಗೆ ಅಫಿಡೇವಿಟ್ ಸಲ್ಲಿಸಿದೆ. ಜೊತೆಗೆ ರಾಜ್ಯದೆಲ್ಲೆಡೆ ಬಗರ್ ಹುಕುಂ ಮತ್ತು ಅರಣ್ಯ ಭೂಮಿ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಮುಂದಾಗಿದೆ.
ಇದೇ ಸಂದರ್ಭದಲ್ಲಿ ಕಳೆದ ಮೂರು-ನಾಲ್ಕು ವಾರಗಳಿಂದ ಬೆಂಗಳೂರಿನ ಟೌನ್ಹಾಲ್ ಬಳಿ ಎಚ್.ಎಸ್.ದೊರೆಸ್ವಾಮಿ ಮತ್ತು ಎ.ಟಿ.ರಾಮಸ್ವಾಮಿಯವರ ನೇತೃತ್ವದಲ್ಲಿ ಬೆರಳೆಣಿಕೆಯಷ್ಟು ಜನರು ಸೇರಿ ಭೂ ಆಕ್ರಮಣಕಾರರಿಂದ ಭೂಮಿಯನ್ನು ತೆರವುಗೊಳಿಸಬೇಕೆಂದು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿಯವರು ತಿಂಗಳಿನಿಂದಲ್ಲೂ ಹೋರಾಟ ಮಾಡುತ್ತಿದ್ದರೂ ರಾಜ್ಯ ಸರ್ಕಾರ ಗಮನ ಹರಿಸುತ್ತಿಲ್ಲವೆಂದು ಕೆಲ ಹಿರಿಯ ರಾಜಕಾರಣಿಗಳು ಮತ್ತು ಮಾಧ್ಯಮಗಳು ಕೂಗಿಕೊಂಡಿವೆ. ಕೆಲ ಪ್ರಗತಿಪರರು ಮತ್ತು ಕಾಳಜಿಯುಳ್ಳ ಕೆಲವರು ಧರಣಿಯಲ್ಲಿ ಕುಂತು ಬಂದಿರುವರೂ ಇದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಭೂಸ್ವಾಧೀನವನ್ನು ತ್ವರಿತಗೊಳಿಸುತ್ತೇವೆಂದು ಹೇಳುತ್ತಿದೆ. ಆದರೆ ವಾಸ್ತವ ಸ್ಥಿತಿ ಬೇರೆಯೇ ಇದೆ.
ಭೂಗಳ್ಳರು ಯಾರು? ಬಗರ್ ಹುಕುಂ ಸಾಗುವಳಿದಾರರು ಯಾರು? ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಭೂಮಿಯನ್ನು ಲಪಾಟಯಿಸಿರುವವರು ಯಾರು? ರಾಜಕೀಯ ಆಧಿಕಾರ ಮತ್ತು ರಾಜಕೀಯ ಪ್ರಭಾವವಿರುವ ವ್ಯಕ್ತಿಗಳೇ? ಇಂತಹ ವ್ಯಕ್ತಿಗಳನ್ನು ಮಾತಾಡಿಸಿ ‘ನೀವು ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಹೊಂದಿದ್ದೀರಿ’ ಎಂದು ಅಧಿಕಾರ ಚಲಾಯಿಸುವ ದಿಟ್ಟತನವನ್ನು ರಾಜ್ಯ ಸರ್ಕಾರ ಹೊಂದಿದೆಯೇ? ಬದಲಿಗೆ ಹಲವಾರು ವರ್ಷಗಳಿಂದ ಜೀವನಾಧಾರಕ್ಕಾಗಿ ಬಗರ್ ಹುಕುಂ ಸಾಗುವಳಿದಾರರಾಗಿ ವ್ಯವಸಾಯ ಮಾಡುವ ಬಡ ರೈತರನ್ನು ಕೂಡ ಭೂಗಳ್ಳರೇ ಎಂಬಂತೆ, ಈ ಹಿಂದೆ ಇದ್ದ ಬಿಜೆಪಿಯ ರಾಜ್ಯ ಸಕರ್ಾರ 2006ರಲ್ಲಿ ಭೂಗಳ್ಳರು ಮತ್ತು ಬಗರ್ ಹುಕುಂ ಸಾಗುವಳಿದಾರರು ಒಂದೇ ಎಂಬ ಕಾನೂನನ್ನು ವಿಧಾನಸಭೆಯಲ್ಲಿ ಅಂಗೀಕರಿಸಿತು. ಈಗ ಈ ಕಾನೂನಿಗೆ ರಾಷ್ಟ್ರಪತಿಗ ಅಂಗೀಕಾರವೂ ಸಿಕ್ಕಿದೆ. ಈ ಕಾನೂನು ರಾಜ್ಯದಲ್ಲಿ ಜಾರಿಯಾದರೆ ಡಾ. ಬಾಲಸುಬ್ರಮಣ್ಯಂ ವರದಿ ಪ್ರಕಾರ 12 ಲಕ್ಷದಲ್ಲಿ ಬಹುತೇಕ ಅಂದರೆ ಶೇ. 90ರಷ್ಟಿರುವ ಬಗರ್ ಹುಕುಂ ಸಾಗುವಳಿದಾರರ ಮೇಲೆ ಕ್ರಿಮಿನಲ್ ಮೊಕದ್ದಮ್ಮೆಗಳನ್ನು ಹೂಡಿ ಜೈಲಿಗೂ ಹಾಕಬಹುದು. ಇಂತಹ ಬಡ ರೈತ ವಿರೋಧಿ ಕಾನೂನನ್ನು ಮರು ಪರಿಶೀಲಿಸಲು ಹೀಗಿನ ಕಾಂಗ್ರೇಸ್ ರಾಜ್ಯ ಸಕರ್ಾರ ಮುಂದಾಗದೇ ಇಂತಹ ಕಾನೂನು ಜಾರಿಯಾಗಲಿ ಎಂದು ಕಾಯುತ್ತಿದೆ. ಇಂತಹ ಸಂದರ್ಭದಲ್ಲೂ ಬಡ ಬಗರ್ ಹುಕುಂ ಸಾಗುವಳಿದಾರರು ನಮೂನೆ 50 ಮತ್ತು 53ರಡಿಯಲ್ಲಿ ಸಾಗುವಳಿ ಚೀಟಿಗಾಗಿ ಅರ್ಜಿ ಹಾಕಿದ್ದಾರೆ. ಇವರ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಅರ್ಜಿದಾರರಿಗೆ ಭೂ ಮಂಜೂರಾತಿ ಚೀಟಿ ನೀಡುವ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸದ ಈ ಹಿಂದಿನ ಬಿಜೆಪಿ, ಜೆ.ಡಿ.ಎಸ್ ಹಾಗೂ ಕಾಂಗ್ರೇಸ್ ಸರ್ಕಾರಗಳು ನೆಪ ಮಾತ್ರಕ್ಕೆ ಭೂ ಮಂಜೂರಾತಿ ಸಮಿತಿಗಳನ್ನು ರಚಿಸಿ ನಾಟಕವಾಡಿದವು.
ಈ ನಾಟಕ ಕಂಪನಿಗಳು (ಸಮಿತಿಗಳು) ಒಂದಾದರೂ ಸಮರ್ಪಕವಾಗಿ ಸಭೆ ಸೇರಲಿಲ್ಲ. ಜೊತೆಗೆ ಭೂಮಿ ಹಂಚುವ ಬದಲಿಗೆ ರಾಸುಗಳಿಗೆ ಭೂಮಿಯನ್ನು ಮೀಸಲಿಡಬೇಕೆಂಬುದನ್ನು ಮುಂದುಮಾಡಿ ಕರ್ನಾಟಕ ಕಾನೂನು ಕಲಂ 95(7) ಕಾನೂನಿನ ಅಡಿಯಲ್ಲಿ ಎಲ್ಲಾ ಅರ್ಜಿಗಳನ್ನು ತಿರಸ್ಕಾರ ಮಾಡಿವೆ. ಹೀಗಾಗಿ ಬಗರ್ ಹುಕುಂ ಸಾಗುವಳಿದಾರರು ಅನ್ಯ ಮಾರ್ಗವಿಲ್ಲದೆ ಹೋರಾಟಕ್ಕಿಳಿಯಲಾರಂಭಿಸಿದ್ದಾರೆ. ಇದರ ಗಂಭೀರತೆಯನ್ನು ಅರಿತ ಸಿದ್ದರಾಮಯ್ಯನವರ ಬಾಯಿ ಮಾತಿನಲ್ಲಿ ಮಾತ್ರ ಬಡ ಬಗರ್ ಹುಕುಂ ಸಾಗುವಳಿದಾರರ ಪರವಿದ್ದೇವೆಂದು ಹೇಳುತ್ತಿದ್ದಾರೆ. ಇದೇ ಕಾಂಗ್ರೇಸ್ ಮತ್ತು ಬಿಜೆಪಿ ಮತ್ತು ಜೆಡಿ(ಎಸ್) ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ. ಉದಾ: ಯಡಿಯ್ಯೂರಪ್ಪನವರು ವಿರೋಧ ಪಕ್ಷಲಿದ್ದಾಗ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಿಂದ ಬಗರ್ ಹುಕುಂ ರೈತರನ್ನು ಬೆಂಗಳೂರಿಗೆ ಕರೆತಂದಿದ್ದರು. ಮುಖ್ಯಮಂತ್ರಿಯಾದ ಮೇಲೆ ಬಗರ್ ಹುಕುಂ ರೈತರ ವಿರೋಧಿ ನೀತಿಗಳ ನಿಲುವನ್ನು ತಾಳಿದರು. ಈಗಿನ ಕಾಂಗ್ರೇಸ್ ಸರ್ಕಾರವೂ ಕೂಡ ಬಿಜೆಪಿಯ ಹಾದಿಯನ್ನೇ ತುಳಿಯುತ್ತಿದೆ.
ಇನ್ನೂ ರಾಜಧಾನಿ ಬೆಂಗಳೂರು, ನಗರ ಪಾಲಿಕೆಗಳು ಮತ್ತು ನಗರ ಸಭೆ ಮುಂತಾದೆಡೆ 5 ರಿಂದ 18 ಕೀ.ಮೀ. ಒಳಗಿನ ವ್ಯಾಪ್ತಿಯ ಸಾಗುವಳಿದಾರರು ಹಾಗೂ ವಸತಿದಾರರಿಗೆ ಹಕ್ಕು ಪತ್ರಗಳು ಸಿಗದಂತೆ ಕಾನೂನುಗಳನ್ನು ರೂಪಿಸಲಾಗಿದೆ. ಇದು ಜಾರಿಯಾದಲ್ಲಿ ರಾಜ್ಯ ಎಲ್ಲಾ ಜಿಲ್ಲೆಗಳ ಮತ್ತು ನಗರ ಪಟ್ಟಣಗಳಲ್ಲಿರುವ ಹಲವಾರು ವರ್ಷಗಳಿಂದ ವಾಸವಾಗಿರುವ ಜನರನ್ನು ಹಕ್ಕು ಪತ್ರ ಇಲ್ಲವೆಂಬತೆ ಒಕ್ಕಲೆಬ್ಬಿಸಲಾಗುತ್ತಿದೆ. ಹೀಗಾಲೇ ಎಲ್ಲಾ ಜಿಲ್ಲೆಗಳಲ್ಲಿ ತಾಹಶೀಲ್ದಾರ್ ಕಛೇರಿಗಳಿಂದ ಬಡ ಜನರ ಮೇಲೆ ಜಾಗ ಬಿಟ್ಟು ಹೊರಹೋಗಬೇಕೆಂದು ಬೆದರಿಕೆಗಳನ್ನು ಒಡ್ಡಲಾಗುತ್ತಿದೆ. ಇಲ್ಲವೇ ಲಕ್ಷಾಂತರ ಹಣವನ್ನು ತೆತ್ತಬೇಕಾಗುವಂತಹ ಪರಿಸ್ಥಿತಿಯನ್ನು ಉಂಟುಮಾಡಲಾಗುತ್ತಿದೆ. ಇನ್ನೊಂದು ಅತ್ಯಂತ ಗಂಭೀರ ಸಮಸ್ಯೆ ಎಂದರೆ ಹೆಚ್ಚುತ್ತಿರುವ ನಿವೇಶನ ಮತ್ತು ವಸತಿ ಸಮಸ್ಯೆ. ಇದು ಇಡೀ ರಾಜ್ಯದ ಸಮಸ್ಯೆ ಆಗಿದ್ದು ಈ ಬಗ್ಗೆ ಆಳುವ ಸಕರ್ಾರಗಳಿಗೆ ಪರಿಜ್ಞಾನವೇ ಇಲ್ಲವಾಗಿದೆ. ವಸತಿ ಸಮಸ್ಯೆಳ ಪರಿಹಾರಕ್ಕೆ ವೈಜ್ಞಾನಿಕ ಯೋಜನೆಗಳಿಲ್ಲ. ಮೊದಲಿಗೆ ಕಾಳಜಿಯೇ ಇಲ್ಲ. ಬೆಳೆಯುತ್ತಿರುವ ಬಡ ಕುಟುಂಬಗಳಿಗೆ ಹೊಸ ನಿವೇಶನ ಮತ್ತು ವಸತಿಯ ಸಮಸ್ಯೆ ತಲೆದೂರಿದೆ. ರಾಜ್ಯದ ಯಾವ ಜಿಲ್ಲೆ ಅಥವಾ ತಾಲ್ಲೂಕು ಮತ್ತು ಹೋಬಳಿ ಪಟ್ಟಣ ಪಂಚಾಯಿತಿಗಳಿಗೆ ಹೋದರೂ ನಿವೇಶನ ಮತ್ತು ವಸತಿ ಸಮಸ್ಯೆಗಳಿಂದ ಜನತೆ ಬಳಲುತ್ತಿದೆ. ದುಬಾರಿ ಬೆಲೆ ಯಾಗುತ್ತಿರುವ ಭೂಮಿಯನ್ನು ಖರೀದಿಸಿ ನಿವೇಶನ ರಹಿತರಿಗೆ ಉಚಿತ ಮತ್ತು ರಿಯಾಯಿತಿ ದರದಲ್ಲಿ ನಿವೇಶನ ನೀಡುವ ಬದಲಿಗೆ ವಾಣಿಜ್ಯ ಸಂಸ್ಥೆಗಳಂತೆ ಅಭಿವೃದ್ಧಿ ಪ್ರಾಧಿಕಾರಗಳು, ಗೃಹ ಮಂಡಳಿ ಮತ್ತು ಸರ್ಕಾರಿ ಇಲಾಖೆಗಳು ವರ್ತಿಸುತ್ತಿವೆ.
ಈ ರೀತಿಯಲ್ಲಿ ಉಲ್ಬಣಗೊಳ್ಳುತ್ತಿರುವ ಭೂ ಸಮಸ್ಯೆಗಳನ್ನು ಕಾಂಗ್ರೇಸ್ ಸರ್ಕಾರ ಬಗೆಹರಿಸುವ ಬದಲಿಗೆ ಸಮಸ್ಯೆಯನ್ನು ಇನ್ನಷ್ಟು ಜಠಿಲಗೊಳಿಸಲು ಮುಂದಾಗಿದೆ. ಸಿದ್ದರಾಮಯ್ಯನವರು ನ್ಯಾಯಕೊಡುತ್ತಾರೆಂದು ನಂಬಿದ್ದ ಬಡ ರೈತರಿಗೆ ಕಾಂಗ್ರೇಸ್ ಸರ್ಕಾರ ‘ಉಳುವವನೇ ಹೊಲ ಬಿಟ್ಟು ಓಡಯ್ಯಾ..’ ಎಂಬಂತೆ ಒಕ್ಕಲೆಬ್ಬಿಸುತ್ತಿದೆ. ಲಕ್ಷಾಂತರ ಬಡ ಕುಟುಂಬಗಳಿಗೆ ಆಸರೆಯಾಗಿರುವ ಬಗರ್ ಹುಕುಂ ಸಾಗುವಳಿದಾರರು, ಮನೆ ನಿವೇಶನರಹಿತರು ಒಂದಾಗಿ ಪ್ರಜಾಸತ್ತಾತ್ಮಕವಾಗಿ ಹೋರಾಟಕ್ಕಿಳಿಯುವ ಸಂದರ್ಭ ಅನಿವಾರ್ಯವಾಗಿ ಒದಗಿ ಬರುತ್ತಿದೆ. ಹೀಗಾಗಿ ಗಂಭೀರಗೊಳ್ಳುತ್ತಿರುವ ಭೂ ಸಮಸ್ಯೆಯನ್ನು ರಾಜ್ಯ ಸರ್ಕಾರ ಅರಿತು ಬಗೆಹರಿಸಲು ಮುಂದಾಗಬೇಕಾಗಿದೆ. ಇಲ್ಲವಾದಲ್ಲಿ ಪರಿಸ್ಥಿತಿಯನ್ನೆದುರಿಸಬೇಕಾಗುತ್ತದೆ.

‍ಲೇಖಕರು G

21 October, 2014

1 Comment

  1. Anil Talikoti

    ನಿವೇಶನ ಮತ್ತು ವಸತಿಯ ಸಮಸ್ಯೆಯನ್ನು ಗಂಭೀರವಾಗಿ ಚಿಂತಿಸುವ ಲೇಖನ ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading