ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉದ್ಘಾಟನೆಗೆ ಬಿಲ್ ಗೇಟ್ಸ್ ಯಾಕಾಗಬಾರದು??

ಯಾವುದೇ ಅಬಿಪ್ರಾಯಕ್ಕೆ,ನೋಟಕ್ಕೆ, ಗ್ರಹಿಕೆಗೆ ಹಿನ್ನೆಲೆ-ಮುನ್ನೆಲೆ ಎಂಬ ಆಯಾಮಗಳಿವೆ. ಹಿನ್ನೆಲೆ ಯಾವುದು, ಮುನ್ನೆಲೆ ಯಾವುದು ಎಂಬುದನ್ನು ಸಂದರ್ಭ, ಉದ್ದೇಶ ಮತ್ತು ಗ್ರಹಿಸುವವರ ದೃಷ್ಟಿಕೋನಗಳು ನಿರ್ಧರಿಸುತ್ತವೆ. ಇವನ್ನು ಗಮನಿಸದಿದ್ದರೆ ಎಲ್ಲವೂ ಎಲ್ಲದಕ್ಕೂ ಸಂಬಂಧಿಸಿರುವುದರಿಂದ ಯಾವುದನ್ನೂ ಸರಿ-ತಪ್ಪುಗಳ ಚೌಕಟ್ಟಿನಲ್ಲಿ ನಿರ್ಣಯಿಸುವುದು ಅಸಾಧ್ಯವಾಗುತ್ತದೆ.

ಚರಿತ್ರಕಾರರ ಸಮ್ಮೇಳನವನ್ನು ಆ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ಕೊಟ್ಟಿರುವರುವ ಚರಿತ್ರಕಾರನ/ಳ,ವಿಜ್ಞಾನಿಗಳ ಸಮ್ಮೇಳನವನ್ನು ವಿಜ್ಞಾನಿಯ, ಕನ್ನಡಭಾಷಿಕರ ಸಮ್ಮೇಳನವನ್ನು ಕನ್ನಡಭಾಷೆಯಲ್ಲಿ ಗಣನೀಯ ಸಾಧನೆ ಮಾಡಿರುವವರ ಮುಂದಾಳತ್ವದಲ್ಲಿ ನಡೆಸಬೇಕೆನ್ನುವ ಅಪೇಕ್ಷೆಯ ಹಿಂದೆ ಇಂಥ ಗ್ರಹಿಕೆ ಇದೆ. ಇದನ್ನು ಲಕ್ಷಿಸದೆ ಎಲ್ಲಿಂದ ಎಲ್ಲಿಗೆ ಬೇಕಾದರೂ ಸಂಬಂಧ ತೋರಿಸುವಂಥ ಪ್ರಮೇಯಗಳನ್ನು ಮಂಡಿಸುವುದು ಹೆಡ್ಡರು ಅಥವಾ ಸಮಯಸಾಧಕರು ಮಾತ್ರ ಮಾಡಬಹುದಾದ ಕೆಲಸ.

ನಾರಾಯಣ ಮೂರ್ತಿಯವರು ಕನ್ನಡಭಾಷಿಕರನ್ನು ವಿಶ್ವಕನ್ನಡ (ಇದು ಜಗದ್ಗುರು ಪದದಲ್ಲಿನ ಜಗತ್ ಎಂಬ ಅರ್ಥದಂತೆ ಅಲ್ಲ ಎಂದಾದರೆ)ಸಮ್ಮೇಳನದಲ್ಲಿ ಪ್ರತಿನಿಧಿಸುವಂಥ ಕೊಡುಗೆ ನೀಡಿರುವುದಾದರೆ ಅವರೂ ಆಗಲಿ. ಆದರೆ ಇನ್ಫೋಸಿಸ್ ಬೆಳೆಸಿ ಗಳಿಸಿದ ಸ್ವಂತ ಸಂಪತ್ತನ್ನು ಕನ್ನಡಭಾಷಿಕರ ಸಂಪತ್ತಿಗೆ ಕೊಟ್ಟ ಕೊಡುಗೆಯೆಂದು ಭಾವಿಸುವುದಾದರೆ ಅವರೇ ಸಮ್ಮೇಳನಾಧ್ಯಕ್ಷರಾಗಲಿ ಎಂದು ಆಗ್ರಹಿಸುವುದರಲ್ಲಿ ಅರ್ಥವಿಲ್ಲ. ಏಕೆಂದರೆ ಅವರನ್ನು ಈ ಭೂಮಿಗೆ ತಂದ ಅವರ ತಾಯಿ-ತಂದೆಯರು ಈ ಗೌರವಕ್ಕೆ ಹೆಚ್ಚು ಯೋಗ್ಯರು. ಅವರಲ್ಲಿ ಯಾರಾದರೂ ಅಥವಾ ಇಬ್ಬರೂ, ಅಥವಾ ಅವರ ಬೆನ್ನಿಗೆ ನಿಂತು ಅವರ ಈ ಮಟ್ಟದ ‘ಸಾಧನೆ’ಗೆ ಕಾರಣೀಭೂತರಾಗಿರಬಹುದಾದ ಅವರ ಶ್ರೀಮತಿಯವರೋ ಆಗಬಹುದಲ್ಲ?

ಇದು ಅಷ್ಟೊಂದು ವಿಶ್ವಾತ್ಮಕವಲ್ಲ ಎಂದೆನಿಸಿದರೆ ನಾರಾಯಣಮೂರ್ತಿಯವರ ಸಾಧನೆ-ಸಂಪತ್ತಿನ ಗಳಿಕೆಗೆ ಸಾಧನ ಒದಗಿಸಿರುವ ಬಿಲ್ಗೇಟ್ ಯಾಕೆ ಕನ್ನಡ ಭಾಷಿಕರ ವಿಶ್ವ ಸಮ್ಮೇಳನವನ್ನು ಉದ್ಘಾಟಿಸಬಾರದು? ಇದು ವ್ಯಂಗ್ಯ ಅಥವಾ ಕುಚೋದ್ಯದ ಮಾತಲ್ಲ. ಸಂದರ್ಭ-ಉದ್ದೇಶ-ದೃಷ್ಟಿಕೋನಗಳನ್ನು ಮರೆತು , ಹಿನ್ನೆಲೆ-ಮುನ್ನೆಲೆಗಳ ಅರಿವಿಲ್ಲದೆ ಮಂಡಿಸುವ ಮುಗ್ಧ ಅಥವಾ ಧೂರ್ತ ವಾದಗಳ ತಾರ್ಕಿಕ ಆಯಾಮಗಳ ಒಂದು ಉದಾಹರಣೆ ಅಷ್ಟೆ.

ನಮ್ಮ ಭಾಷಿಕರ ಆಳವಾದ ಕಾಳಜಿಗಳ ಹಿನ್ನೆಲೆಯಲ್ಲಿ ವಿಶ್ವಕನ್ನಡ ಸಮ್ಮೇಳನದ ಅರ್ಥಪೂರ್ಣತೆಯನ್ನು ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಪರಿಶೀಲಿಸಿದರೆ ಇಂಥ ಚರ್ಚೆಯಿಂದ ಎಲ್ಲರಿಗೂ ಅನುಕೂಲವಾಗಬಹುದೆಂದು ನನ್ನ ಭಾವನೆ

ವಿ ಎನ್ ಲಕ್ಷ್ಮೀನಾರಾಯಣ

++

ಓಬಿರಾಯನ ಕಾಲದ ನಾಲ್ಕು ಕವಿತೆ, ಆರು ಕಥೆ ಬರೆದ ಲೇಖಕನಿಂದ ವಿಕ ಸಮ್ಮೇಳನ ಉದ್ಘಾಟನೆ ಮಾಡಿಸಬೇಕೇ? ಎಂದು ಜೋಗಿ ಕೇಳುವ ಮೂಲಕ ಸಾಹಿತ್ಯವನ್ನು ತೂಕಕ್ಕೆ ಹಾಕಿದ್ದಾರೆ. ಬರಗೂರು ಅವರು ನಾರಾಯಣಮೂರ್ತಿ ಉದ್ಘಾಟನೆಗೆ ಸಲ್ಲದು ಎಂದಿದ್ದಾರೆ. ಸಾಹಿತಿಗಳೇ ಆಗಬೇಕು ಎಂದು ಎಲ್ಲೂ ಹೇಳಿಲ್ಲ. ನಾರಾಯಣ ಮೂರ್ತಿ ಪರ ಓಟು ಹಾಕುವ ಅಧಿಕಾರ ಜೋಗಿಗೆ ಇದೆ. ಅದಕ್ಕಾಗಿ ಪ್ರಶ್ನೆ ಮಾಡಿದವರನ್ನು ಗಲ್ಲಿಗೆ ಹಾಕುವ ಅಧಿಕಾರ ಅವರಿಗೆ ಇಲ್ಲ. ಅವರ ಭಾಷೆ ತೀರಾ ಉಡಾಫೆಯಿಂದ ಕೂಡಿದೆ.

– ಪರಶುರಾಮ ಕಲಾಲ್

++

 

ಮಾನ್ಯರೇ ಚರ್ಚೆಯ ವಿಷಯಕ್ಕೆ ಇಂತಹ ವಿಷಯಗಳನ್ನು ಎತ್ತಿ ಪ್ರಚೋದಿಸುವ ಬದಲು . ಇಂತಹ ಸಮ್ಮೇಳನಗಳಲ್ಲಿ ಹೊಸದಾಗಿ ಏನೇನೆಲ್ಲ ಮಾಡಬಹುದು ಎಂಬ ಆಸಕ್ತರ ವಿಚಾರಗಳನ್ನು ಸಂಗ್ರಹಿಸಿ ಅದನ್ನು ಸಂಬಂದ ಪಟ್ಟವರಿಗೆ ತಿಳಿಯಪಡಿಸಿ ತನ್ಮೂಲಕ ಕೆಲವಾದರೂ ಉತ್ತಮ ಕೆಲಸವನ್ನು ಮಾಡುವ ಪ್ರಯತ್ನವನ್ನು ಮಾಡುವುದನ್ನು ಬಿಟ್ಟು .ನಾರಾಯಣಪ್ಪ ಯಾಕೆ , ರಾಮಪ್ಪ ಯಾರು ಅವರ ಹಿರಿಮೆ ಗರಿಮೆಗಳನ್ನು ಚರ್ಚಿಸುತ್ತ ಹೋದರೆ ಅದಕ್ಕೆ ಕೊನೆ ಎಂಬುದೇ ಇರುವುದಿಲ್ಲ

ಸದ್ಯಕ್ಕೆ ಈ ಸಮ್ಮೇಳನಗಳು ಸಾದಿಸುವುದಾದರು ಏನು ಅನ್ನೋದೇ ಒಂದು ದೊಡ್ಡ ಪ್ರಶ್ನೆ ಯಾಗಿದೆ . ನನಗೆ ತಿಳಿದ ಹಾಗೆ ಯಾವ ಹೊಸ ಹೊಸ ಕಾರ್ಯಕ್ರಮಗಳೂ ಇರುವುದಿಲ್ಲ. ಸಮ್ಮೇಳನದ ಹೆಸರಲ್ಲಿ ದುಡ್ಡು ಬಾಚುವ ಮಂದಿಯಷ್ಟೇ ಜಾಸ್ತಿ ಕಣ್ಣಿಗೆ ಕಾಣಿಸುವುದು. ಕನ್ನಡ ಸಮ್ಮೇಳನದ ಹೆಸರಿನಲ್ಲಿ ಎಲ್ಲಾ ಶಾಲಾ ಕಾಲೇಜು ಗಳಲ್ಲಿ ಪ್ರಬಂದ,ಕಥೆ,ಕವನ ಸ್ಪರ್ದೆ ಏರ್ಪಡಿಸಲಿ ಹೊಸ ಹೊಸ ಯುವ ಬರಹಗಾರರನ್ನು ವೇದಿಕೆಗೆ ಪರಿಚಯಿಸಲಿ.

ಕನ್ನಡ ಮಾದ್ಯಮದಲ್ಲಿ ಓದುವರನ್ನು , ಓದಿ ಸಾದನೆಗೈದವರನ್ನು ಗುರುತಿಸಿ ಪ್ರೋತ್ಸಾಹಿಸಲಿ .. ಹೀಗೆ ಹೊಸ ಏಳ್ಗೆಯ ಕಡೆ ಮುಖ ಮಾಡುವುದ ಬಿಟ್ಟು ಅದೇ ಕುತರ್ಕ ವಿವಾದಗಳು ,ಅದೇ ಜನಪ್ರಿಯ ಸಾಹಿತಿಗಳನ್ನು ಕರೆಯಿಸುವುದು , ಅದೇ ನಗೆ ಪಾಟಲು!! ಕಾರ್ಯಕ್ರಮಗಳು . ಯಾವುದರಲ್ಲೂ ಹೊಸತನವಿಲ್ಲ , ಹೊಸ ಪ್ರಯತ್ನಗಳಿಲ್ಲ. ಪ್ರತಿ ಸಮ್ಮೇಳನಕ್ಕೂ ಹೊಸ ವಿವಾದ ,ಪ್ರಯೋಜನಕ್ಕೆ ಬಾರದ ಚರ್ಚೆಗಳು ಇತ್ಯಾದಿ ಇತ್ಯಾದಿ ..ಅಷ್ಟೇ . ಇಂತಹ ಸಭೆ ಸಮಾರಂಭಗಳು ಬೇಜಾರು ತಂದಿವೆ .ಬರೀ ಬೂಟಾಟಿಕೆ ಮಂದಿ , ಹಿಂದೆ ಬೆನ್ನು ಇರಿಯುವವರು ಮುಂದೆ ಹಲ್ಲು ಕಿಸಿಯುವವರು . ಇದಕ್ಕೆಲ್ಲ ಪರಿಹಾರವೇ ಇಲ್ಲವೇ ಅಂತ ಅನ್ನಿಸ್ಬಿಡುತ್ತೆ. ಅದರ ಜೊತೆ ಇಂತಹ ಚರ್ಚೆಗಳೂ ಅರ್ಥ ಹೀನವೆನಿಸಿಕೊಳ್ಳುತ್ತದೆ

-ವೇದ

++

ರಾಮಚಂದ್ರನ್ ಸರ್, ತುಂಬಾ ಸರಿಯಾದ ರೀತಿಯಲ್ಲಿ ಚರ್ಚೆಯ ದಾರಿಯನ್ನು ಎಳೆದು ನಿಲ್ಲಿಸಿದ್ದೀರಿ. ಭಾಷೆಯ ಬಗ್ಗೆ ಬುಸಿನೆಸ್  ಜನರ ದೃಷ್ಟಿಕೋನ ಭಯ ಹುಟ್ಟಿಸುವಂತಿದೆ. ಪ್ರಶ್ನೆ ಏನು ಎಂಬುದೇ  ಬಹುಜನರಿಗೆ ಅರ್ಥವಾಗದೆ ಮಾತು ಎಲ್ಲೆಲ್ಲೋ ಹೋಗಿಬಿಡುತ್ತದೆ. ಸಾಹಿತಿಗಳು ತಮಗೆ ತಿಳಿದಿಲ್ಲದ ವಿಷಯದಲ್ಲಿ ಮಾತನಾಡುವುದು ಎಷ್ಟು ಅಭಾಸವೋ ಸಾಹಿತ್ಯದ ಅರಿವಿಲ್ಲದ ಬುಸಿನೆಸ್ಮನ್ ಗಳು, ತಂತ್ರಜ್ಞರು ಕತೆ ಕವಿತೆಯ ಬಗ್ಗೆ ಹೆಚ್ಚು ತಿಳಿದುಕೊಳ್ಳದೆ ಹಗುರವಾಗಿ ವಿಮರ್ಶೆ ಮಾದಲೆತ್ನಿಸುವುದು ಅಷ್ಟೇ ಅಭಾಸದ್ದು. ವೈಯಕ್ತಿಕ ನಿಂದನೆಯನ್ನು ಸಾಮಾನ್ಯವಾಗಿ ಸಾಹಿತಿಗಳು ಮಾಡಲು ಸಂಕೋಚ ಪಡುತ್ತಾರೆ. ಕೊಂಚ ಸೂಕ್ಷ್ಮಘ್ನತೆ ಇಲ್ಲಿ ಅಗತ್ಯ ಎನಿಸುತ್ತದೆ.

ಸುಧಾ ಚಿದಾನಂದಗೌಡ.

 

‍ಲೇಖಕರು G

5 March, 2011

4 Comments

  1. vibha

    ರಾಮಚಂದ್ರ ಸರ್

    ನೀವು ಆರಂಭಿಸಿದ ಈ ಚಚರ್ೆ ಅರ್ಥಪೂರ್ಣ ಇಂದು ಸಮಾಜವನ್ನು ಸೂಕ್ಷ್ಮವಾಗಿ ಗಮನಿಸುವ ಮತ್ತು ಆರೋಗ್ಯಪೂರ್ಣವಾದ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮನಸ್ಮ್ಸಗಳ ಕೊರತೆಯೇನೋ ತಿಳಿಯದು, ವಿಶ್ವಕನ್ನಡ ಸಮ್ಮೇಳನವು ರಾಜಕೀಯ ಮಸಲತ್ತುಗಳ ಕೂಟದಂತೆ ಬಾಸವಾಗುತ್ತಿದೆ. ಕುವೆಂಪು ಕಾರಂತರ ಸಮ್ಮುಖದಲ್ಲಿ ನಡೆದ ಸಮ್ಮೇಳನವು ಅಂದು ಕನ್ನಡದ ಉಳಿವು ಅಸ್ತಿತ್ವಕ್ಕಾಗಿ ನಡೆದ ಜಾಗೃತಿ ಸಮ್ಮೇಳನವಾಗಿತ್ತು. ಇಂದು ಕೇವಲ 25 ವರ್ಷಗಳಲ್ಲಿ ಕನ್ನಡ ಕನರ್ಾಟಕ ಹಲವಾರು ಜಟಿಲ ಸಮಸ್ಯಗಳನ್ನು ಎದುರಿಸುತ್ತಿದ್ದು ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಇಡೀ ಕನ್ನಡದ ಜನ ಒಂದಾಗುತ್ತಿಲ್ಲವೆಂಬುದು ಖೇದಕರ.
    ಚಿದಾನಂದಮೂತರ್ಿಯವರಿಗೆ ಪ್ರಶಸ್ತಿ ನೀಡಲು ಒಗ್ಗಟ್ಟಾದ ಜನ ಇಂದು ಚಂಪಾರವರಿಗೆ ಪಂಪ ಪ್ರಶಸ್ತ ಅಥವಾ ವಿಶ್ವಕನ್ನಡ ಸಮ್ಮೇಳನದ ಬಗ್ಗೆ ಮಾತನಾಡುವುದಿಲ್ಲ ಏಕೆ ? ಬಹುಶಃ ಇಂದು ಕನ್ನಡ ಕನರ್ಾಟಕ ಎಂಬುದು ಒಕ್ಕಲಿಗ ಲಿಂಗಾುತ ಬ್ರಾಹಣ ದಲಿತ ಎಂಬಂತೆ ಅಥವಾ ಸಕರ್ಾರಿ ಪರ ವಿರೋಧಿ ಅಂತಹ ಗುಂಪುಗಳಿಂದ ತುಂಬಿ ಹೋಗಿದೆಯೋ ತಿಳಿಯುತ್ತಿಲ್ಲ. ಸಮ್ಮೇಳನ ಏಕೆ ? ಯಾರಿಗಾಗಿ ? ಕನ್ನಡದ ಯಾವ ಯಾವ ಚಚರ್ೆಗಳ ಜರೂರತ್ತುಗಳಿವೆ. ಆ ಜರೂರತ್ತುಗಳನ್ನು ಕೂಡಲೇ ಸಮ್ಮೇಳನದ ವೇದಿಕೆಯ ಮೇಲೆ ಅನುಷ್ಠಾನಕ್ಕೆ ತರುವಂಥ ಇಚ್ಛಾಶಕ್ತಿುದೆಯೇ ಕನ್ನಡಿಗರಿಗೇ ? ಹೀಗೆ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡುವವರು ಯಾರು

  2. Divakar N

    ಇಲ್ಲಿ ಜೋಗಿಯವರು ಎತ್ತಿರುವ ಪ್ರಶ್ನೆಗಳೇ ಅಪ್ರಸ್ತುತ ಮತ್ತು ಅಸ್ವಾಭಾವಿಕ. ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಬ್ಲಾಗುಗಳಲ್ಲಿ ಯಾವುದೇ ವಿಚಾರ ಚರ್ಚೆಗೊಳಗಾದರೂ ಕೇಂದ್ರ ವಿಷಯವನ್ನು ಬದಿಗಿಟ್ಟು ವ್ಯಕ್ತಿಗತ ಟೀಕೆ ಮಾಡುವುದು ಚಾಳಿಯಾಗಿದೆ. ಅವಧಿಗೂ ಇದೇ ಅಂಟು ಜಾಢ್ಯ ತಗುಲಿದೆ. ಜೋಗಿ ಅವರ ಲೇಖನ ಈ ಚಾಳಿಯ ದ್ಯೋತಕವಷ್ಟೆ. ಹೀಗೆ ಮಾಡುವ ಮೂಲಕ ಮೂಲ ವಿಷಯವನ್ನೇ ಬದಿಗೆ ತಳ್ಳುವುದೂ ಒಂದು ತಂತ್ರಗಾರಿಕೆಯೇನೋ ? ಬರಗೂರರ ಸಾಹಿತ್ಯ ಶೂನ್ಯವಾದರೂ ಅವರು ಎತ್ತಿರುವ ಪ್ರಶ್ನೆ ಮತ್ತು ಅವರ ಪ್ರತಿರೋಧ ಸಮರ್ಥನೀಯವಲ್ಲವೇ ? ಅಥವಾ ಯಾವುದೇ ಒಂದು ಸಾಂಸ್ಕೃತಿಕ ಪ್ರಶ್ನೆ ಎದುರಾದಾಗ ಪ್ರತಿರೋಧ, ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ಇಂತಿಷ್ಟೇ ಪ್ರಮಾಣದ ಸಾಹಿತ್ಯ ರಚನೆ ಮಾಡಿರಬೇಕು ಎಂಬ ನಿಯಮವೇನಾದರೂ ಇದೆಯೇ ? ಇಲ್ಲಿ ಉದ್ಭವಿಸುವುದು ಕರ್ನಾಟಕದ ಸಮಸ್ತ ಜನತೆಯ ಅಸ್ಮಿತೆ ಮತ್ತು ಅಸ್ತಿತ್ವದ ಪ್ರಶ್ನೆ.ನಾರಾಯಣ ಮೂರ್ತಿ ವಿಶ್ವಮಾನ್ಯರೇ ಇರಬಹುದು. ಆದರೆ ಕನ್ನಡ ಸಮ್ಮೇಳನ ಉದ್ಘಾಟಿಸಲು ಅರ್ಹರೇ ? ಇದು ಮೂರ್ತ ಪ್ರಶ್ನೆ.ಮತ್ತೆಲ್ಲವೂ ಗೌಣ. ಅನಗತ್ಯವೂ ಹೌದು. ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯದ ಸಮಸ್ಯೆಗಳಿಗೆ ಕಿಂಚಿತ್ತೂ ಸ್ಪಂದಿಸದ ಓರ್ವ ಬಂಡವಾಳಶಾಹಿ ಉದ್ಯಮಿಗೆ ಸಾಹಿತ್ಯ-ಭಾಷಾ ಸಮ್ಮೇಳನದ ಉದ್ಘಾಟನೆಗೆ ಆಹ್ವಾನಿಸುವುದು ಆಳ್ವಿಕರಿಗೆ ಸಮರ್ಥನೀಯವೆನಿಸಬಹುದು, ಆದರೆ ಜನಸಾಮಾನ್ಯರಿಗಲ್ಲ. ನಾ ದಿವಾಕರ

  3. ranganatha marakini

    World Classical Tamil Conferance was inaugurated by President Pratiba Pattil in Coimbattur in June last year. any takers?
    rmark

  4. Anand G

    ವಿಶ್ವ ಕನ್ನಡ ಸಮ್ಮೇಳನ ಬೆಳಗಾವಿಯಲ್ಲಿ ಇನ್ನೇನು ಶುರುವಾಗಲಿದೆ. ಇದನ್ನು ಯಾರು ಉದ್ಘಾಟನೆ ಮಾಡಬೇಕು ಅನ್ನೋ ವಿಷಯದಲ್ಲೇ ಕರ್ನಾಟಕದ ಜನರು ಕಳೆದು ಹೋಗಿದ್ದಾರೇನೋ ಅನ್ನಿಸುವಂತೆ ಚರ್ಚೆಗಳು ನಡೀತಾ ಇವೆ. ಇದೇ ಸಂದರ್ಭದಲ್ಲಿ ವಿಶ್ವ ಕನ್ನಡ ಸಮ್ಮೇಳನ, ಕನ್ನಡಿಗರು ವಿಶ್ವದ ಮುಂದುವರೆದ ನಾಡುಗಳ ಸಮಸಮನಾಗಿ ನಿಲ್ಲುವಂತಾಗಲು ಬೇಕಿರುವ ವಿಷಯಗಳ ಬಗ್ಗೆ ಚರ್ಚೆ ನಡೆಸುವಂತಾಗಲೀ.
    http://thatskannada.oneindia.in/literature/sammelana/belgaum/2011/0307-the-purpose-behind-kannada-sammelanas-aid0038.html

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading