ಉದಯ ಗಾಂವಕಾರ ಬರೆದ ‘ಕರೋನಾ ಚೂರ್ಗತೆಗಳು

ಉದಯ ಗಾಂವಕಾರ

ಮನುಷ್ಯತ್ವ

ವಾಹನ ಸವಾರರ ಮೇಲೆ ಬೆತ್ತ ಪ್ರಯೋಗ ಮಾಡಿ ಸುಸ್ತಾಗಿದ್ದ ಪೋಲಿಸಪ್ಪ ಡ್ಯೂಟಿ ಮುಗಿಸಿ ಮನೆಗೆ ಬಂದ.

ತನಗಾಗಿ ಅಯೋಡೆಕ್ಸ್ ತರಲು ಹೋಗಿದ್ದ ಮಗನ ಬೆನ್ನ ಮೇಲಿನ ಬಾಸುಂಡೆಗಳಿಗೆ ಅವನಮ್ಮ ಬಿಸಿನೀರು ಶಾಖ ನೀಡುತ್ತಿದ್ದಳು.

‘ಯಾವ ಬೋ..ಮಗ ಅವನು, ಮನುಷ್ಯತ್ವ ಇಲ್ಲದವನು’ ಎಂದು ಪೋಲಿಸಪ್ಪ ಅಂದದ್ದು ಟಿ.ವಿ ನಿರೂಪಕನ ಚೀರಾಟದ ನಡುವೆ ಮಗನಿಗೂ ಅಮ್ಮಗೂ ಕೇಳಿಸಲಿಲ್ಲ..

ಕೋಮು ವೈರಸ್ ಮತ್ತು ಮೀನುಪಾತ್ರೆ

ನನ್ನಮ್ಮ ಒಬ್ಬರೇ ಊರಲ್ಲಿ ಲಾಕ್ ಡೌನ್ ಆಗಿದ್ದರು. ಅಮ್ಮ ಫೋನ್ ಮಾಡಿ ಅಲ್ಲಿ ನಮ್ಮ ಜೊತೆ ಬೇರೆ ಧರ್ಮದವರು ಇದ್ದಾರಾ ಎಂದು ಆತಂಕದಿಂದ ಕೇಳುತ್ತಿದ್ದರು. ಒಂದು ನಿರ್ದಿಷ್ಟ ಧರ್ಮೀಯರ ಕುರಿತು ಅವರಿಗೆ ಭಯವಿತ್ತು. ಅವರು ಇತ್ತೀಚೆಗೆ ಟಿ.ವಿ ನೋಡುವುದು ಹೆಚ್ಚಾಗಿದೆ.

ಅವರು ಫೋನ್ನಲ್ಲಿರುವಾಗಲೇ ಯಾರೋ ಗೇಟ್ ತೆರೆದ ಸದ್ದಾಯಿತು.. ಬಂದೆ ಬಂದೆ ಎಂದು ಗೇಟ್ ಬಳಿ ಹೋದರು.

ಕುಲ್ಸಿಯಾ ಬಂದಿದ್ದಳು.. ಅಮ್ಮ ಒಬ್ಬರೇ ಇದ್ದಾರೆ ಎಂದು ಮಾತಾಡಿಸಿಕೊಂಡು ಹೋಗಲು ಬಂದಿದ್ದಳು. ಬರುವಾಗ ಮೀನು ತಂದಿದ್ದಳು.

ಅಮ್ಮ ಗಡಿಬಿಡಿಯಿಂದ ಫೋನ್ ಇಟ್ಟು ಮೀನಿಗೆ ಪಾತ್ರೆ ತರಲು ಹೋದರು.

ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ!

‘ಒಳಗೆ ಬಾಪ್ಪಾ..’

ಆತಂಕದಿಂದ ಒಳಗೆ ಬರುವಂತೆ ಆಕೆ ಒತ್ತಾಯಿಸುತ್ತಿದ್ದಳು.

‘ಈವತ್ತು ಮನೆಯಿಂದ ಹೊರಗೆ ಹೋಗ್ಲೇ ಬಾರ್ದಂತೆ..’

ಹಲ್ಲುಗಳ ಸಂದಿಯಲ್ಲಿದ್ದ ಅಡಿಕೆ ಪುಡಿಯ ಅವಶೇಷಗಳನ್ನು ಕಡ್ಡಿಯಿಂದ ಹೊರತೆಗೆಯುತ್ತಿದ್ದ ಅಪ್ಪನ ನಿರ್ಲಕ್ಷ ಆಕೆಯ ಹಠವನ್ನು ಹೆಚ್ಚಿಸಿತು. ಹೊರಗೆ ಬಂದು ಕೈ ಜಗ್ಗಿ ಒಳಗೆ ಕರೆದಳು.

ಜಪ್ಪೆನ್ನಲಿಲ್ಲ ಅಪ್ಪ.

ಒಳಹೋಗಿ ಮಗಳು ಜೋರಾಗಿ ಅಳಲಾರಂಭಿಸಿದಳು.

ಹಠಾತ್ತನೆ ದೊಡ್ಡದೊಂದು ಅನಾಹುತ ಸಂಭವಿಸಿದಂತೆ ಓಡಿಬಂದ ಅಪ್ಪ, ಮಗಳ ತಲೆ ನೇವರಿಸುತ್ತಾ ಕಳೆದೆರಡು ವರ್ಷಗಳಿಂದ ತನ್ನ ಕುಟುಂಬಕ್ಕೆ ಆಸರೆಯಾದ ತುಂಡು ಸಿಮೆಂಟು ಪೈಪನ್ನೇ ನೋಡತೊಡಗಿದ.

‘ಇನ್ನೊಂಚೂರು ದೊಡ್ಡದಿದ್ರೆ ಮೂವರೂ ಒಳಗಿರಬಹುದಿತ್ತು!’

ಬಾಲ್ಕನಿಯ ಬೆಳಕು

ಬಾಲ್ಕನಿಗೆ ಬಂದು ಚಪ್ಪಾಳೆ ತಟ್ಟಲು ಆಕೆಗೂ ಆಸೆಯಾಯ್ತು. ಆದರೆ, ಬಾಲ್ಕನಿ ಇರಲಿಲ್ಲ. ಮನಸ್ಸಿದ್ದರೆ ಕಿಟಕಿಯೆದುರು ನಿಂತಾದರೂ ಚಪ್ಪಾಳೆ ತಟ್ಟಬಹುದಿತ್ತು ಎಂದು ನೀವು ಹೇಳಬಹುದು.

ಮನೆ ಇದ್ದರಲ್ಲವೇ ಕಿಟಕಿ?

ಬಿಸಿ ಸುದ್ದಿ

ಬೆಳಗಿಂದ ಪಾರ್ಸೆಲ್ ಗಿರಾಕಿಗಳಿಗೆ ಕಾದು ಸುಸ್ತಾದ ಚಾದಂಗಡಿಯಾತ ಮನೆಯಲ್ಲಿ ಒಲೆ ಉರಿಸುವುದು ಹೇಗೆಂದು ಚಿಂತಿತನಾಗಿದ್ದ. ಇನ್ನೇನು ಬಾಗಿಲು ಮುಚ್ಚಿ ಮನೆಗೆ ತೆರಳಬೇಕೆನ್ನುವಷ್ಟರಲ್ಲಿ ಬಂದ  ಆ ಗಿರಾಕಿ ‘ಭಟ್ರೆ, ಬಿಸಿ ಏನಿದೆ?’ ಎಂದು ಕೇಳಿದ.

ಭಟ್ಟರು ನಿರ್ವಿಕಾರವಾಗಿ ಉತ್ತರಿಸಿದರು-

‘ಸದ್ಯ ನನ್ ಮಂಡೆಯೇ ಸೈ’

‍ಲೇಖಕರು Avadhi

May 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: