– ರಘೋತ್ತಮ ರ ಕೊಪ್ಪರ್

ಇದರ ಹೆಸರು ಉತ್ಸವ ರಾಕ್ ಗಾರ್ಡನ್. ಸ್ನೇಹಿತನ ಒತ್ತಾಯದಿಂದ ಒಂದು ದಿನದ ಪ್ರವಾಸಕ್ಕೆಂದು ಇಲ್ಲಿ ಬಂದೆ. ಇಲ್ಲಿ ನೋಡಿದ ಮೇಲೆ ಬಂದ್ದದ್ದು ವ್ಯರ್ಥವಾಗಲಿಲ್ಲ ಅನ್ನಿಸಿತು. ಇಲ್ಲಿ ಕಲಾ ಲೋಕವೇ ಇದೆ. 1000 ಕ್ಕೂ ಹೆಚ್ಚು ಶಿಲ್ಪಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ನಾನಂತೂ ತುಂಬಾ ಎಂಜಾಯ್ ಮಾಡಿದೆ. ಹುಬ್ಬಳ್ಳಿಯ ಕಡೆಗೆ ಇರುವ ಈ ತಾಣಕ್ಕೆ ನೀವು ಭೇಟಿ ನೀಡಿ.
ಹೇಗಿದೆ ಇದು?
ಪ್ರವೇಶ ದ್ವಾರವನ್ನು ನೋಡಿದ ಕೂಡಲೇ ಇಲ್ಲಿ ಏನೋ ವಿಶಿಷ್ಟತೆ ಇರಬೇಕು ಅನ್ನುವ ಹಾಗೆ ವಿನ್ಯಾಸಗೊಳಿಸಿದ್ದಾರೆ. ಒಳಗಡೆ ಕಾಲಿಟ್ಟ ಕೂಡಲೇ ಅಣ್ಣಾ ಅವರ ದರ್ಶನ. ಅವರು ಮಾಡಿದ ವಿಶಿಷ್ಟ ಪಾತ್ರಗಳ ಅನಾವರಣ ಇಲ್ಲಿದೆ. ಎದುರಿಗೆ ಕಾಣುವುದು ಬೇಡರ ಕಣ್ಣಪ್ಪ ಪ್ರತಿಮೆ. ಅದರ ಸುತ್ತಲೂ ತೋಟದಲ್ಲಿ ಮೇಯರ್ ಮುತ್ತಣ್ಣ, ಸನಾದಿ ಅಪ್ಪಣ್ಣ, ಸತ್ಯ ಹರಿಶ್ಚಂದ್ರ, ಹುಲಿಯ ಹಾಲಿನ ಮೇವು, ಬಹದ್ದೂರ ಗಂಡು, ಆಕಸ್ಮಿಕ, ಸಂತ ತುಕಾರಾಮ, ರಾಘವೇಂದ್ರ ಸ್ವಾಮಿ, ಕನಕದಾಸರು, ಪುರಂದರ ದಾಸರು ಇವೆಲ್ಲವು ಮನ ಮುಟ್ಟುವಂತಿವೆ.
ಇಲ್ಲೊಂದು ವಿಶಿಷ್ಟ ಕಾರಂಜಿ ಇದೆ. ಅದರ ಕೆಳಗಡೆ ಚಿಕ್ಕ ಮಗುವಿನ ವಿವಿಧ ಭಂಗಿಗಳು ಅತಾಕರ್ಷಕವಾಗಿವೆ. ಮೇಲೆ ಒಂದು ಮರವಿದ್ದು ಅಲ್ಲಿರುವ ಪಕ್ಷಿಗಳನ್ನು ನೋಡಿದಾಗ ಬದುಕಿ, ಬದುಕಲು ಬಿಡಿ ಎಂಬ ನುಡಿಗಟ್ಟು ನೆನಪಾಗುತ್ತದೆ.

ಇಲ್ಲೊಂದು ಕಲಾ ವಸ್ತುಸಂಗ್ರಹಾಲಯ ಕೂಡ ಇದೆ. ಮುತ್ತಿನಿಂದ ಅಲಂಕರಿಸಿದ ವೈವಿಧ್ಯಮಯ ಕಲಾಕೃತಿಗಳ, ಗಾಜಿನಲ್ಲಿ ಬಿಡಿಸಿದ ಸುಂದರ ಚಿತ್ತಾರಗಳ ಆಗರವೇ ಇಲ್ಲಿದೆ.
ಮದುವೆ ಮನೆ: ಇಲ್ಲಿ ನಿಜವಾಗಿ ಮದುವೆ ನಡೆಯುತ್ತದೆ. ಎಲ್ಲರೂ ಸ್ಟೇಜ್ ಮೇಲೆ ನಿಂತು ಫೋಟೊ ಕ್ಲಿಕ್ಕಿಸಿಕೊಳ್ಳಲು ಅಣಿಯಾಗಿದ್ದಾರೆ. ಅಲ್ಲಿ ಫೋಟೊ ಶಬ್ದ ಕೂಡ ಬರುತ್ತಿರುತ್ತದೆ. ಅವೆಲ್ಲ ಪ್ರತಿಮೆಗಳು ಎಂದು ತಿಳಿದ ಮೇಲೆ ಒಂದು ಸಾರಿ ನಗು ಉಕ್ಕಿ ಬರುತ್ತದೆ. ಸುತ್ತಲೂ ಕಣ್ಣಾಡಿಸಿದರೆ ಎಲ್ಲ ಧರ್ಮಗಳ ಮದುವೆ ರೀತಿ-ರಿವಾಜುಗಳ ಹತ್ತು ಹಲವು ಫೋಟೊಗಳು ಕಾಣಸಿಗುತ್ತವೆ.

ಮುಂದಿದೆ ನಮ್ಮ ಹಳ್ಳಿ ಮನೆ: ಅದೊಂದು ನಿಜವಾದ ಗ್ರಾಮ. ಅಲ್ಲಿ ಭವಿಷ್ಯ ಹೇಳುವ ಪಂಡಿತ, ಹಳ್ಳಿಯ ಗೌಡರು, ಶೆಟ್ಟರ ಅಂಗಡಿ, ಒನಕೆ ಕುಟ್ಟುತ್ತಿರುವ ಹೆಣ್ಣು ಮಕ್ಕಳು, ಶ್ಯಾನಭೋಗರು, ಕುಶಲಕಮರ್ಿಗಳು, ಅವರೆಲ್ಲ ಮಾಡುತ್ತಿರುವ ಕಲಾ ಕುಸುರಿನ ಕೆಲಸಗಳು ಹೀಗೆ ಒಳಗಡೆ ನೋಡಿದಾಗ ನಿಜಕ್ಕೂ ಯಾವುದೋ ಹಳ್ಳಿಗೆ ಬಂದು ಬಿಟ್ಟೆವಾ ಎನ್ನುವ ಭಾವ ಎಲ್ಲರಲ್ಲೂ ಮೂಡುತ್ತದೆ.
ಇಲ್ಲಿ ಉತ್ತರ ಕನರ್ಾಟಕದವರು ಯಾರೇ ಬರಲಿ, ಓಹ್! ನಮ್ಮಜ್ಜ ಹಿಂಗ ಇದ್ದ ನೋಡ ಅಂತ ಉದ್ಗರಿಸುತ್ತಾರೆ.
ಜತೆಗೆ ಪುರಾತನ ಕಸೂತಿ ಕೆಲಸಗಳಾದ ಕವದಿ ಹೊಲಿಯುವುದು, ನೂಲು ತೆಗೆಯುವುದು, ಕಂಬಾರ, ಕಮ್ಮಾರ, ರಾಟಿ ಹೊಡೆಯುವುದು ಹೀಗೆ ಅನೇಕ ದೃಶ್ಯಗಳು ನಮ್ಮನ್ನು ಮಂತ್ರಮುಗ್ದರನ್ನಾಗಿ ಮಾಡುತ್ತವೆ.
ಮೊದಲನೇಯ ಮಹಡಿಗಳತ್ತ ನೋಡಿದಾಗ ಪೇಪರ್ ಓದುತ್ತ ಕುಳಿತಿರುವ ಅಜ್ಜ, ನಮಗೆ ಕೈ ಬೀಸುತ್ತಿರುವ ಹುಡುಗಿ, ದಿಟ್ಟಿಸಿ ನೋಡುತ್ತಿರುವ ಹುಡುಗಾ; ಎಲ್ಲವು ಆಕಷರ್ಿಸುತ್ತವೆ. ಗೌಡರ ಮನೆಯತ್ತ ಸಾಗಿದಾಗ ಗೌಡರ ಆ ಧೀಟು, ಮುಂದೆ ಕುಳಿರುವ ನಾಯಿ, ಮಗ್ಗುಲ ನಿಂತಿರುವ ಸೇವಕನ ಮುಖದಲ್ಲಿರುವ ಧೈನ್ಯತಾ ಭಾವ ಇದೆಲ್ಲ ಕೃತಕವಾಗಿ ಸೃಷ್ಟಿಸಲು ಹೇಗೆ ಸಾಧ್ಯ ಎಂದು ಅನಿಸುತ್ತದೆ.
ದನದ ಮನೆ: ಆ ಮನೆಯನ್ನು ಪ್ರವೇಶಿಸುತ್ತಿದ್ದಂತೆ ದನದ ಕೊಟ್ಟಿಗೆಗೆ ಕಾಲಿಟ್ಟೆವು ಎಂದು ಭಾಸವಾಗುತ್ತದೆ. ಎಲ್ಲ ತಳಿಗಳಿ ದನಗಳು, ಎಮ್ಮೆಗಳು ಅಲ್ಲಿ ಜೀವಂತವಾಗಿವೆ ಎನಿಸುತ್ತದೆ.
ಮುಂದೆ ಸಾಗುತ್ತ ಹೋದರೆ ಇಲ್ಲಿ ಕಾಡು ಪ್ರಾಣಿಗಳ, ಗ್ರಾಮ ಸಂಸ್ಕೃತಿಯ, ಶಾಲೆಯ, ದೇವಾಲಯದ, ಗೂಳಿ ಕಾಳಗದ, ಮಕ್ಕಳ ಹಳೆಯ ಆಟಗಳ ಹೀಗೆ ಕಲೆಯ ವಿವಿಧ ಮಜಲುಗಳು ಸಾಗರವೇ ಇಲ್ಲಿ ಅನಾವರಣಗೊಂಡಿದೆ. ಎಲ್ಲ ಕಲಾ ಪ್ರತಿಮೆಗಳ ವೀಕ್ಷಣೆ ಮುಗಿದ ಮೇಲೆ ಒಂದಿಷ್ಟು ಸಮಯ ಬೋಟಿಂಗ್ ಮಾಡಿ, ತಿಂಡಿ ತಿನಿಸು ತಿನ್ನಲೂ ಇಲ್ಲಿ ಅನುಕೂಲವಿದೆ.

ವಿಶ್ವ ವಿಖ್ವಾತ ಕಲಾಕಾರರಾದ ಪೊ ಟಿ. ಬಿ. ಸೊಲಬಕ್ಕನವರ ಈ ಕಲಾಗ್ರಾಮದ ಪ್ರಮುಖ ರೂವಾರಿಗಳು. ದಾ್ನ್ಸನೂರ ಸಮೂಹ ಸಂಸ್ಥೆಗಳ ಸಹಯೋಗದಿಂದ ನಿರ್ಮಿತವಾದ ಈ ಕಲಾತೋಟ ಹಲವು ಅಂತರ ರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಇದು ಒಟ್ಟು 8 ವರ್ಲ್ಡ್ ರೆಕಾರ್ಡ್ಸ್ ಪಡೆದುಕೊಂಡಿದೆ.
ಎಲ್ಲಿದೆ ಇದು: ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗುವಾಗ (ಶಿಗ್ಗಾಂವ್ ನಿಂದ 6 ಕಿಮಿ) ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಎಡಗಡೆ, ಮತ್ತು ಹುಬ್ಬಳ್ಳಿ ಯಿಂದ ಬೆಂಗಳೂರಿಗೆ ಹೋಗುವಾಗ ಬಲಗಡೆ (ಹುಬ್ಬಳ್ಳಿಯಿಂದ 37 ಕಿಮಿ) ಇದೆ. ಇಲ್ಲಿ ಉತ್ತರ ಕ ನರ್ಾಟಕದ ರೊಟ್ಟಿ ಊಟ ಸಹ ಲಭ್ಯ. ಬೇಕರಿ ತಿನಿಸು, ಐಸ್ ಕ್ರೀಂ, ಪಾನೀಯ ಕೂಡ ಸಿಗುತ್ತದೆ. ಎಲ್ಲ ನೋಡಿದ ಮೇಲೆ ಬೋಟಿಂಗ್ ಮಾಡಿದರೆ ಮನಸ್ಸು ಫುಲ್ ಖುಶ್. ಹೆಚ್ಚಿನ ಮಾಹಿತಿಗಾಗಿ ಅವರ ಜಾಲತಾಣ ಗೂಗಲಿಸಿ.






0 Comments