ಉಡುಪಿ ಜಿಲ್ಲಾಸ್ಪತ್ರೆ ಮತ್ತು ಸಿದ್ರಾಮಯ್ಯ ಎಂಬ ಅರಸು

raja ramರಾಜಾರಾಂ ತಲ್ಲೂರು

ದೇವರಾಜ ಅರಸು ಮುಖ್ಯಮಂತ್ರಿ ಆಗಿ ಮೊದಲ ಬಾರಿಗೆ ಹುಟ್ಟೂರಿಗೆ ಹೋದಾಗ ಅಲ್ಲಿ ಸಂಭ್ರಮದ ಸನ್ಮಾನ ಆದ ಬಳಿಕ ಊಟ ಮಾಡಿ ಊರ ಜನರೊಂದಿಗೆ ಬೆರೆತು ಲೋಕಾಭಿರಾಮ ಮಾತನಾಡುತ್ತಿದ್ದರು.

“ಊರಿನ ಮಲ್ಲಾಚಾರಿಯವರ ಮಗಳು ಕಮಲಿಗೂ ಅರಸರನ್ನು ಮಾತಾಡಿಸಬೇಕೆಂದು ಆಸೆ. “ ಸ್ವಾಮಿ, ನಮ್ಮೂರ್ ಬಾವಿ ಎಲ್ಲ ಭಾಳ ಆಳ. ಪಾತಾಳದಿಂದ ನೀರ್ ಸೇದ್ಧಂಗೆ ಆಯ್ತದೆ. ನೀವು ಮನ್ಸ್ ಮಾಡಿ ನಮ್ಮೂರ್ಗೆ ನಲ್ಲಿ ಹಾಕಿಸ್ಕೊಡಿ.” ಅಂದಳು. ಅರಸರು ಒಂದು ಕ್ಷಣ ಅವಳನ್ನು ನೋಡಿ “ಅಲ್ಲಾ ಕಣಮ್ಮ, ನಾನೇನಾದ್ರೂ ನಿನ್ಮಾತ್ ಕೇಳಿ ನಲ್ಲಿ ಹಾಕಿಸ್ದೆ ಅಂತಾ ಇಟ್ಕೋ. ಬಾವಿಗಳೆಲ್ಲಾ ಹುಳ ಬಿದ್ದು ಹಾಳಾಗೋದಿಲ್ವಾ? ಅದಕ್ಕಿಂತಾ ಹೆಚ್ಚಾಗಿ ನೀರಿಲ್ಲದೇ ಇರೋ ಹಳ್ಳಿ ಎಷ್ಟಿವೆ? ಕೆಲವು ಕಡೆಯಂತೂ ನೀರಿಗಾಗಿ ಮೈಲಿಗಟ್ಟಲೆ ನಡೀಬೇಕಾಗತ್ತೆ. ನೀರಿಲ್ಲದೇ ಇರೋರನ್ನ ಮೊದಲು ನೋಡಲೋ ಅಥವಾ ನಿಮ್ಮನ್ನೋ? ಒಳ್ಳೆ ವ್ಯಾಯಾಮ ಆಗತ್ತೆ ಬಾವಿಯಿಂದ ನೀರೆಳೆದ್ರೆ” ಎಂದರು. ಅವರು ಬದುಕಿರುವರೆಗೂ ಅವರೂರಿಗೆ ನಲ್ಲಿ ಬರಲಿಲ್ಲ. ಸತ್ತ ನಂತರವೇ ಬಂದದ್ದು. ಅವರು ಹೇಳಿದ ಮಾತು ನಿಜ. ನಮ್ಮ ಊರಿನ ಹಲವು ಬಾವಿಗಳಿಗೆ ಹುಳ ಬಿದ್ದಿದೆ.”

ಕರ್ನಾಟಕದ ಅರಸು”(ಸಂ: ಎಚ್ ಎ ವೆಂಕಟೇಶ್) ಪುಸ್ತಕದಲ್ಲಿ ಜಗದೀಶರಾಜ ಅರಸು ಅವರ ಲೇಖನದ ಪುಟ್ಟಭಾಗ ಇದು.

avadhi-column-tallur-verti- low res- cropಮುಖ್ಯಮಂತ್ರಿಯೊಬ್ಬರಿಗೆ ಇಂತಹ ನಿಷ್ಠುರವಾದಿ ವ್ಯಕ್ತಿತ್ವ ಮತ್ತು ರಾಜ್ಯದ ಪರಿಸ್ಥಿತಿಯ ಬಗ್ಗೆ ಸಮಗ್ರ ನೋಟ ಇರುವುದು ಅಗತ್ಯ. ತನ್ನದು ಕೂಡ ದೇವರಾಜ ಅರಸರ ಹಾದಿ ಎಂದು ನಂಬಿ ಹೊರಟಿರುವ ಕರ್ನಾಟಕದ ಹಾಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಇದನ್ನೇನೂ ಹೊಸದಾಗಿ ಹೇಳಿಕೊಡಬೇಕಾಗಿಲ್ಲ. ಆದರೆ, ಮೊನ್ನೆ ಅವರು ಉಡುಪಿಯ ಜಿಲ್ಲಾಸ್ಪತ್ರೆಯನ್ನು ಖಾಸಗಿಯವರಿಗೆ ವಹಿಸಿಕೊಡುವ ನಿರ್ಧಾರ ಪ್ರಕಟಿಸಿದ್ದು ಮಾತ್ರ ಕರಾವಳಿಗೆ ಬಹಳ ಶಾಕಿಂಗ್ ಸುದ್ದಿ.

ಸಾಮಾನ್ಯವಾಗಿ ಸರ್ಕಾರಗಳ ಬಳಿ ಇಂತಹ ನಿರ್ಧಾರ ಕೈಗೊಳ್ಳುವಾಗ ಒಂದು ಲಾಜಿಕ್ ಇರುತ್ತದೆ. ಉದಾಹರಣೆಗೆ ಮಕ್ಕಳು ಬರುತ್ತಿಲ್ಲವೆಂದು  ಸರ್ಕಾರಿ ಶಾಲೆಗಳನ್ನು ಮುಚ್ಚುವ ವಿವಾದಾಸ್ಪದ ನಿರ್ಧಾರ. ಆದರೆ, ಉಡುಪಿಯಲ್ಲಿ ಜಿಲ್ಲಾಸ್ಪತ್ರೆಯನ್ನು ಖಾಸಗಿಗೆ ಕೊಡುವ ನಿರ್ಧಾರದಲ್ಲಿ ಇಂತಹ ಯಾವುದೇ ಲಾಜಿಕ್ ಕಾಣುತ್ತಿಲ್ಲ.

ಆರೋಗ್ಯ ಸೇವೆಗಳ ಮಟ್ಟಿಗೆ, ಹೆಚ್ಚಿನಂಶ ಕರಾವಳಿ ಜಿಲ್ಲೆಗಳು ರಾಜ್ಯದಲ್ಲೇ ಅತ್ಯುತ್ತಮ ಸೌಕರ್ಯಗಳನ್ನು ಹೊಂದಿರುವ ಜಿಲ್ಲೆಗಳು. ಇಲ್ಲಿನ ಸರ್ಕಾರಿ ಸವಲತ್ತುಗಳಿಗೂ ಕೂಡ ಸರ್ಕಾರಕ್ಕಿರುವಷ್ಟು ನಿರ್ಲಕ್ಷ ಸಾರ್ವಜನಿಕರಿಗಿಲ್ಲ.

ಜಿಲ್ಲಾಸ್ಪತ್ರೆ ಆದ ಬಳಿಕ 124 ಹಾಸಿಗೆಗಳಿರುವ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ 14-15 ಸಾಲಿನಲ್ಲಿ ಸುಮಾರು 13,000 ಒಳರೋಗಿಗಳು ಮತ್ತು 1,82,342  ಹೊರ ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. 1474 ದೊಡ್ಡ ಮತ್ತು 1099 ಸಾಮಾನ್ಯ ಶಸ್ತ್ರಕ್ರಿಯೆಗಳು ನಡೆದಿವೆ, 3189 ಹೆರಿಗೆಗಳು ಸಂಭವಿಸಿವೆ. ಅಂದರೆ, ಈ ಆಸ್ಪತ್ರೆಯನ್ನು ಸದ್ಯ ಇರುವ ಸ್ಥಿತಿಯಲ್ಲೇ ಬಳಸಿಕೊಳ್ಳುವಲ್ಲಿ ಸಾರ್ವಜನಿಕರು ಹಿಂದೆ ಬಿದ್ದಿಲ್ಲ.

ಆದರೆ, ಸರ್ಕಾರದ ಕಡೆಯಿಂದ ಇಂತಹದೇ ಸ್ಪಂದನ ಇದೆ ಎನ್ನುವಂತಿಲ್ಲ. ಯಾಕೆಂದರೆ, 40 ದಾದಿಯರಿರಬೇಕಾದಲ್ಲಿ ಕೇವಲ 18 ಮಂದಿ ದಾದಿಯರಿದ್ದಾರೆ  148 ಮಂದಿ ಡಿ ಗ್ರೂಪ್ ಸಹಾಯಕ ಸಿಬ್ಬಂದಿ ಇರಬೇಕಾದಲ್ಲಿ  ಕೇವಲ 12 ಮಂದಿ +20 ಮಂದಿ ಗುತ್ತಿಗೆ ಡಿ ಗ್ರೂಪ್ ನೌಕರರಿದ್ದಾರೆ. ನಾಲ್ವರು ಫಿಸಿಷಿಯನ್ನರಿರಬೇಕಾದಲ್ಲಿ ಇಬ್ಬರು,  3 ಸರ್ಜನ್ ಗಳಿರಬೇಕಾದಲ್ಲಿ ಒಬ್ಬರು, 2 ಮೂಳೆ ತಜ್ಞರಿರಬೇಕಾದಲ್ಲಿ ಒಬ್ಬರು, 4 ಮಕ್ಕಳ ತಜ್ಞರಿರಬೇಕಾದಲ್ಲಿ ಒಬ್ಬರು, 2  ಕಣ್ಣಿನ ತಜ್ಞರಿರಬೇಕಾದಲ್ಲಿ ಒಬ್ಬರು ಇದ್ದಾರೆ. 25 ತುರ್ತುಚಿಕಿತ್ಸಾ ವೈದ್ಯರಿರಬೇಕಾದಲ್ಲಿ ಒಬ್ಬರೂ ಇಲ್ಲ!

health2ಜನ ಬರುತ್ತಿರುವಲ್ಲಿ ಸವಲತ್ತುಗಳನ್ನು ನೀಡಿ ಪ್ರೋತ್ಸಾಹಿಸಬೇಕಾದ ಸರ್ಕಾರದ ಬಾಯಿಯಲ್ಲಿ ಏಕಾಏಕಿ ಖಾಸಗೀಕರಣದ ಮಾತು ಬಂದಿರುವುದು ಶಾಕಿಂಗ್! ಇಲ್ಲಿ ಖಾಸಗಿಯವರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ  ನಿರ್ಮಿಸಿಕೊಡಲಿದ್ದಾರಂತೆ. ತಮಾಷೆಯೆಂದರೆ, ಜಿಲ್ಲಾಸ್ಪತ್ರೆಯಿಂದ ಕೇವಲ ಒಂದು ಕಿಲೋಮೀಟರ್ ಒಳಗಡೆ ಮಣಿಪಾಲ ಬಳಗದ ಟಿ. ಎಂ. ಎ. ಪೈ ಆಸ್ಪತ್ರೆ ಇದ್ದು, ಅಲ್ಲಿ ಎಲ್ಲ ಸೂಪರ್ ಸ್ಪೆಷಾಲಿಟಿಗಳೂ ಈಗಾಗಲೇ ಲಭ್ಯವಿವೆ ಮತ್ತು ಐದೇ ಕಿಲೋಮೀಟರ್ ಅಂತರದೊಳಗೆ ಮಣಿಪಾಲ ಕೆ. ಎಂ. ಸಿ. ವೈದ್ಯಕೀಯ ಕಾಲೇಜು ಆಸ್ಪತ್ರೆಯೇ ಇದೆ. ಉಡುಪಿ ನಗರದೊಳಗೇ ಮತ್ತೆರಡು ಮೂರು ಸುಸಜ್ಜಿತ ಆಸ್ಪತ್ರೆಗಳಿವೆ.

ವಾಸ್ತವ ಹೀಗಿರುವಾಗ, ಉಡುಪಿ ಜಿಲ್ಲೆಯಲ್ಲಿ ಟರ್ಷರಿ ಕೇರ್ ಸಮೀಪದಲ್ಲಿ ಲಭ್ಯವಿಲ್ಲದ ಬೈಂದೂರಿನ ಕುಗ್ರಾಮಗಳಲ್ಲೋ, ಹಾಲಾಡಿಯಂತಹಾ ತೀರಾ ಗ್ರಾಮೀಣ ಪ್ರದೇಶದಲ್ಲೋ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ಖಾಸಗಿಯವರನ್ನು ಒತ್ತಾಯಿಸುವುದು ಬಿಟ್ಟು, ಉಡುಪಿ ನಗರದ ನಟ್ಟನಡುವೆ ಮತ್ತೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ಹೊರಡುವುದರ ಹಿಂದಿನ ಲಾಜಿಕ್ ಅರಗಿಸಿಕೊಳ್ಳುವುದು ಕಷ್ಟ.

ಅನಧಿಕೃತ ಮೂಲಗಳ ಮಾಹಿತಿಯ ಪ್ರಕಾರ ಖಾಸಗಿಯವರು ಈಗಿರುವ ಸರ್ಕಾರಿ ಆಸ್ಪತ್ರೆ ಕಟ್ಟಡದ ಜಾಗದಲ್ಲಿ ಹೊಸ ಕಟ್ಟಡ ನಿರ್ಮಿಸಿಕೊಟ್ಟು, ಸರ್ಕಾರಿ ಆಸ್ಪತ್ರೆಗೆ ಸೇರಿದ ನೂರಾರು ಕೋಟಿ ಬೆಲೆಬಾಳುವ ಆಯಕಟ್ಟಿನ ಜಾಗದ ಭೂಮಿಯನ್ನು ದೀರ್ಘಕಾಲಿಕ ಲೀಸ್ ಮೇಲೆ ಖಾಸಗಿ ಆಸ್ಪತ್ರೆ ಕಟ್ಟಲು ಬಿಟ್ಟುಕೊಡಲಾಗುತ್ತದೆಯಂತೆ.

ಇದು ಸತ್ಯವೆಂದಾದರೆ, ನಮ್ಮೂರ ಸರ್ಕಾರಿ ಆಸ್ಪತ್ರೆಗಳು ದೇವರಾಜ ಅರಸರ ಹುಟ್ಟೂರಿನ ಬಾವಿಗಳಂತೆ “ಹುಳ ಬಿದ್ದು ಹಾಳಾಗುವುದು” ಖಂಡಿತಾ!

‍ಲೇಖಕರು admin

August 29, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: