– ರಾಘವೇ೦ದ್ರ ಜೋಶಿ
ಉಚಲ್ಯಾ!

ಕಳ್ಳತನವೇ ಮುಖ್ಯ ಕಸುಬಾಗಿರುವ ಅಲೆಮಾರಿ ಜನಾಂಗದ ವ್ಯಕ್ತಿಯೊಬ್ಬನ ಆತ್ಮಕತೆಯಿದು.
ಮರಾಠಿ ಆತ್ಮಕತೆಗಳ ಪೈಕಿ ‘ಉಚಲ್ಯಾ’ ತನ್ನದೇ ಆದ ಅಸ್ತಿತ್ವವೊಂದನ್ನು ನಿರ್ಮಿಸಿಕೊಂಡಿದೆ.
ಬಡತನದ ಅಸಹಾಯಕತೆ,ದೌರ್ಭಾಗ್ಯತನ ಮತ್ತು ಹಸಿವು ಹ್ಯಾಗೆ ಮನುಷ್ಯನೊಬ್ಬನನ್ನು
ಹಿಂಡಿ ಹಿಪ್ಪೆ ಮಾಡಿಬಿಡುತ್ತವೆ ಎಂಬುದನ್ನು ಯಾವುದೇ ಕ್ಲಿಷ್ಟ ಶಬ್ದಗಳ ಆಡಂಬರವಿಲ್ಲದೆ
ಅತ್ಯಂತ ನಿರ್ಲಿಪ್ತ ಭಾವದಿಂದ ಲೇಖಕ ಲಕ್ಷ್ಮಣ ಗಾಯಕ್ ವಾಡರು ಬರೆದುಕೊಂಡಿದ್ದಾರೆ.
ಈ ಕೃತಿಗೆ 1988ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಸಿಕ್ಕಿದೆ.
ಕೃತಿಯ ಪೂರ್ವಾರ್ಧದಲ್ಲಿ ಆವತ್ತಿನ ಕಾಲಘಟ್ಟಕ್ಕೆ ತಕ್ಕಂತೆ ಅವರ body language
ಮತ್ತು spoken language ಹ್ಯಾಗಿತ್ತು ಎಂಬುದನ್ನು ಯಾವ ಭಿಡೆ ಇಲ್ಲದೇ
ಬರೆದುಕೊಂಡಿರುವ ಗಾಯಕ್ ವಾಡರು,ಬದುಕಿನ ಅವೆಲ್ಲ ಕಷ್ಟಗಳು ಹ್ಯಾಗೆ ತಮ್ಮನ್ನು
ಸಮಾಜ ಸುಧಾರಕ/ಸೇವಕನನ್ನಾಗಿ ಪರಿವರ್ತಿಸಿದವು ಅಂತ ಉತ್ತರಾರ್ಧದಲ್ಲಿ
ನಿರೂಪಿಸುತ್ತ ಹೋಗುತ್ತಾರೆ.ಸುಮಾರು ವರ್ಷಗಳ ಹಿಂದೆ ಇದನ್ನು ಓದುತ್ತಿರುವಾಗ ನನ್ನನ್ನು
ಗಾಢವಾಗಿ ಕಲಕಿದ,ಕಣ್ಣನ್ನು blur ಮಾಡಿದ ಆತ್ಮಕತೆಯ ಒಂದು ತುಣುಕನ್ನು ನಿಮ್ಮೊಂದಿಗೆ
ಹಂಚಿಕೊಳ್ಳುವ ಆಸೆಯಿಂದ ಈ ನೋಟ್ ಬರೆಯುತ್ತಿದ್ದೇನೆ.
ಗಾಯಕ್ ವಾಡರು ಆಗಿನ್ನೂ ಚಿಕ್ಕ ಹುಡುಗ.ಮನೆಯಲ್ಲಿ ತುಂಬಿ ತುಳುಕುವ ದಾರಿದ್ರ್ಯ.
ಹಸಿವೆಂಬುದು ನಿತ್ಯಹರಿದ್ವರ್ಣ.ಇಂಥ ಪರಿಸ್ಥಿತಿಯಲ್ಲಿ ಆವತ್ತಿನ ಅವರ ಜೀವನಕ್ರಮ ಹ್ಯಾಗಿತ್ತು
ಅಂತ ಗಾಯಕ್ ವಾಡರ ಮಾತಿನಲ್ಲೇ ಕೇಳುವದಾದರೆ:
“ಚಿಕ್ಕವನಾಗಿದ್ದಾಗ ನಾನು ಹಂದಿಮರಿಗಾಗಿ ನನ್ನ ಗೆಳೆಯರೊಂದಿಗೆ ಜಗಳವಾಡುತ್ತಿದ್ದೆ.
ಗೆಳೆಯರು ನನ್ನ ಹಂದಿಮರಿಗಳನ್ನು ಕದ್ದು,ಸುಟ್ಟು ತಿನ್ನುತ್ತಿದ್ದರು.ಹೀಗಾಗಿ ನಾನೂ ಅವರ
ಮರಿಗಳನ್ನು ಕದಿಯುತ್ತಿದ್ದೆ.ಹಂದಿಮರಿಗಳನ್ನು ಹುಡುಕಿಕೊಂಡು ನಿತ್ಯ ಹೇಲುಗೇರಿಯಲ್ಲಿ
ನಡೆಯುತ್ತಿದ್ದೆವು.ಅಮೇಧ್ಯದ ಮಧ್ಯೆಯೇ ಕುಳಿತುಕೊಂಡು ಹಂದಿ ಸುಟ್ಟು ತಿನ್ನುತ್ತಿದ್ದೆವು.
ಬಹಿರ್ದೆಶೆಗೆ ಕುಳಿತ ಹೆಂಗಸರು ನಾವು ತಿನ್ನುವ ಹಂದಿಮಾಂಸ ನೋಡಿ ಮೂಗು
ಮುಚ್ಚಿಕೊಳ್ಳುತ್ತಿದ್ದರು.ನನಗೆ ಮಾತ್ರ ಇನ್ನೂ ತಿನ್ನಬೇಕೆನಿಸುತ್ತಿತ್ತು.ಯಾಕಂದರೆ ಮಾಂಸ
ಕೊಬ್ಬರಿಯ ಹಾಗಿರುತ್ತಿತ್ತು.ಹಾಗೆ ನೋಡಿದರೆ,ಊರ ಹೆಂಗಸರು ಅಲ್ಲಿ ಸಂಡಾಸ್
ಮಾಡುವದರಿಂದ ನಮಗೆ ಲಾಭವೇ ಇತ್ತು.ಯಾಕೆಂದರೆ ನಮ್ಮ ಹಂದಿಗಳು ಅವರ
ಮಲ ತಿಂದು ಕೊಬ್ಬಿರುತ್ತಿದ್ದವು.ಹೀಗಾಗಿ ಅವರೆಲ್ಲ ನಮ್ಮ ಮನೆ ಎದಿರು ಕುಳಿತುಕೊಂಡೇ
ಸಂಡಾಸ್ ಮಾಡಲೆಂದು ನಾವು ಹಾರೈಸುತ್ತಿದ್ದೆವು…”
ಹಾಗಂತ ಬರೆದುಕೊಳ್ಳುತ್ತಾರೆ ಲಕ್ಷ್ಮಣ ಗಾಯಕ್ ವಾಡರು.
ಹಸಿವಿನ ಪ್ರಖರತೆ ಎಷ್ಟು ಇರಿಯುತ್ತದೆ ಮತ್ತು ಎಷ್ಟು ಆಳಕ್ಕೆ ಇಳಿಯುತ್ತದೆ ನೋಡಿ.
]]>
Like this:
Like Loading...
Related
Sir, kannadadalli bandideya?
ಹೌದು, ನವಕರ್ನಾಟಕ ಪ್ರಕಾಶನದಿ೦ದ ಪ್ರಕಟವಾಗಿದೆ