ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಈ ಹೊತ್ತಿಗೆ’ಯಲ್ಲಿ ಗಿರಿಜಾ ಶಾಸ್ತ್ರಿ

035fdbe3-fc4d-4d67-bf3a-d89dbe441540

ಬಿಡುಗಡೆಯಾಗುತ್ತಿರುವ ಕೃತಿಯೊಂದರ ಪ್ರಸ್ತಾವನೆ ಇಲ್ಲಿದೆ

ಕೌಶಿಕನ ಸೆರಗಿನಿಂದ ಬಿಡಿಸಿಕೊಂಡ ಅವಳು ಚನ್ನಮಲ್ಲಿಕಾರ್ಜುನನ ಬೆಳಕನ್ನು ಉಟ್ಟುಕೊಂಡಳು

Girija-Shastry

ಗಿರಿಜಾ ಶಾಸ್ತ್ರಿ

ಸೆರಗ ಬಿಡೊ ಮರುಳೇ… ಇದು ಅಕ್ಕಮಹಾದೇವಿಯ ಕುರಿತಾದ ಸಾಕ್ಷ್ಯ ಚಿತ್ರಕ್ಕೆ ಸಂಶೋಧನೆಯೊಂದನ್ನು ಮಾಡುವ ಸಂದರ್ಭದಲ್ಲಿ ಹುಟ್ಟಿಕೊಂಡ ಲೇಖನಗಳು ಮತ್ತು ಅನೇಕ ವಿಚಾರಸಂಕಿರಣಗಳಲ್ಲಿ ಮಂಡಿಸಿದ ಪ್ರಬಂಧಗಳ ಒಂದು ಸಂಕಲನ. ಅಲ್ಲದೇ ಇಲ್ಲಿ ಸೇರಿಸಿರುವ ಸಂದರ್ಶನ ಲೇಖನಗಳು ಈ ಕೃತಿಯ ಮೂಲ ಆಶಯಕ್ಕೆ ಸಂಬಂಧಿಸಿದವುಗಳೇ ಆಗಿವೆ. ಇವು ನಾನು ಸುಮಾರು ಹತ್ತು ಹದಿನೈದು ವರುಷಗಳಲ್ಲಿ ಬರೆದ ಲೇಖನಗಳಾದುದರಿಂದ ಇವುಗಳ ಗುಣ ಮಟ್ಟವೂ ಕೂಡ ನನ್ನ ಸಾಹಿತ್ಯಕ ಪಯಣಕ್ಕೆ ಅನುಗುಣವಾಗಿವೆೆ.

ಸೆರಗಬಿಡೊ ಮರುಳೇ.. ಇದು, ಅಕ್ಕ ಮಹಾದೇವಿ ಕೌಶಿಕನನ್ನು ಉದ್ದೇಶಿಸಿ ಹೇಳಿದಳೆನ್ನಲಾದ, ಅವಳದೇ ವಚನದ ಒಂದು ಸಾಲು.

ಸೆರಗು ಅಕ್ಕನಿಗೆ ಬಂಧನವಾಯಿತು. ಹೀಗಾಗಿ ಅದನ್ನು ಬಿಡಿಸಿಕೊಳ್ಳುವುದರಲ್ಲೇ ಅವಳು ಬದುಕಿನುದ್ದಕ್ಕೂ ಹೋರಾಡಬೇಕಾಯಿತು. ಕೌಶಿಕನೊಡನೆ ಸಂಬಂಧವನ್ನು ನಿರಾಕರಿಸಿದ ಅಕ್ಕ ಚನ್ನಮಲ್ಲಿಕಾರ್ಜುನನೊಡನೆ ಅದೇ ಸಂಬಂಧಕ್ಕೆ ಮೊಹರನೊತ್ತಿದಳು. ಅನಂತಕಾಲ ಅದಕ್ಕಾಗಿ ತಪಿಸಿದಳು. sareeಕೌಶಿಕನೊಡನೆ ಬಂಧನವಾದದ್ದು ಚನ್ನಮಲ್ಲಿಕಾರ್ಜುನನೊಡನೆ ಬಿಡುಗಡೆಯಾಯಿತು. ಕೌಶಿಕನ ಸೆರಗಿನಿಂದ ಬಿಡಿಸಿಕೊಂಡ ಅವಳು ಚನ್ನಮಲ್ಲಿಕಾರ್ಜುನನ ಬೆಳಕನ್ನು ಉಟ್ಟುಕೊಂಡಳು.

ಹೀಗೆ ಮಾಡುವಾಗ ಅವಳು ಲಜ್ಜೆಗೆಡಲಿಲ್ಲ. ಬದಲಾಗಿ ತನ್ನನ್ನು ತಾನೇ ಲಜ್ಜೆಗೆಟ್ಟವಳೆಂದು ಘೋಷಿಸಿಕೊಂಡಳು. ಹೀಗಾಗಿ ಯಾವುದು ಬಂಧನ? ಬಿಡುಗಡೆ ಯಾವುದು? ಹಾಗೆ ನೋಡಿದರೆ ಬಂಧನ ಮತ್ತು ಬಿಡುಗಡೆಯ ಪರಿಕಲ್ಪನೆಗೆಳೇ ಸಾಪೇಕ್ಷವಾದವುಗಳೋ ಏನೋ.

ಮನುಷ್ಯ ಸಂಬಂಧಗಳು ಸ್ಥಾಪಿತವಾಗುವುದೇ ಪಾರಸ್ಪರಿಕತೆಯ ಮೂಲಕ. ಆದರೆ ಚನ್ನಮಲ್ಲಿಕಾರ್ಜನನೊಡನೆ ಅಕ್ಕನ ಸಂಬಂಧವೆನ್ನುವುದು ಏಕಮುಖವಾದದ್ದು (one way).  ಭಕ್ತಿ ಪಂಥದ ವೈಶಿಷ್ಟ್ಯವೇ ಇದು. ಇಲ್ಲಿ ಚನ್ನಮಲ್ಲಿಕಾರ್ಜುನ ಜಡ ಸ್ವರೂಪಿ. ಅಕ್ಕನ ವಿಪ್ರಲಂಭ ಶೃಂಗಾರ ಚೇಷ್ಟೆಗಳನ್ನೆಲ್ಲಾ ಸುಮ್ಮನೇ ಸಾಕ್ಷಿರೂಪವಾಗಿ ನೋಡುತ್ತಾ, ಕೇಳಿಸಿಕೊಳ್ಳುತ್ತಾ ಕುಳಿತಿದ್ದಾನೆ.

ನೀ ಕೇಳಿದರೆ ಕೇಳು ಕೇಳದಿದ್ದರೆ ಮಾಣು..ನಾ..ಹಾಡಿದೆನಲ್ಲದೆ ಸೈರಿಸಲಾಪೆ ಎಂದು ಅಲವರಿಯುವ ಅಕ್ಕ ಚೈತನ್ಯ ಸ್ವರೂಪಿ. ಚನ್ನಮಲ್ಲಿಕಾರ್ಜುನೊಡನೆ ಅಕ್ಕನ ಪಾರಸ್ಪರಿಕತೆ ಕೇವಲ ಕಾಲ್ಪನಿಕವಾದದ್ದು. ಅವಳು ಬಯಸಿದಂತೆ ಚನ್ನಮಲ್ಲಿಕಾರ್ಜುನ ವ್ಯವಹರಿಸುತ್ತಾನೆ. ಆದುದರಿಂದಲೇ ಅವನು ಅವಳ ಇಷ್ಟ ದೈವ.

ಚನ್ನಮಲ್ಲಿಕಾರ್ಜುನನಿಗೆ ತಾನು ಬೇಕಾಗಿರುವೆನೋ ಇಲ್ಲವೋ ಮುಖ್ಯವಲ್ಲ, ಬದಲಾಗಿ ಅವನು ತನಗೆ ಬೇಕೆ ಬೇಕೆಂಬ ಹಟ. ಒಂದು ರೀತಿಯಲ್ಲಿ ಭಕ್ತಿಪಂಥದ ಕಾವ್ಯಸ್ವರೂಪ ಇಂತಹುದೇ. ವಸಂತ ದಿವಾಣಜಿಯವರು ಹೇಳಿದಂತೆ ಅವು ಕೇವಲ soliloques. ಹೀಗೆ ಹುಟ್ಟಿಕೊಳ್ಳುವ soliloques ನಮ್ಮ ಸಾಮಾಜಿಕ ವ್ಯವಸ್ಥೆಯ ಜೊತೆಗೆ ಒಂದುರೀತಿಯ ಡೈಲಕ್ಟಿಕ್ ಆದ ಸಂಬಂದವನ್ನು ಹೊಂದಿರುತ್ತವೆ ಎನ್ನವುದು ಹಳೆಯ ಮಾತು. ಇವು ಎಲ್ಲ ರೀತಿಯ ರಾಜಕಾರಣವನ್ನು (ಅದು ಪಿತೃಪ್ರಧಾನತೆಯದಾಗಬಹುದು, ಜಾತಿ ವ್ಯವಸ್ಥೆಯದ್ದಾಗಬಹುದು, ಇಲ್ಲವೇ ಪ್ರಭುತ್ವದ ಅಧಿಕಾರದ್ದಾಗಬಹುದು), ಬಯಲಿಗೆಳೆಯುತ್ತವೆ.

ಇಂತಹ ಸಾಂಸ್ಕೃತಿಕ ಯಾಜಮಾನ್ಯ ವ್ಯವಸ್ಥೆಯಲ್ಲಿ ಮನುಷ್ಯ ಸಂಬಂಧಗಳೊಡನೆ ಪಾರಸ್ಪರಿಕತೆ ಎಂಬುದು ಅಸಾಧ್ಯವಾದುದು. ಅದನ್ನು ಚಲಾವಣೆಗೆ ತರುವ ಸಮಾನತೆಯ ಕಲ್ಪನೆಯಂತೂ ಇನ್ನೂ ವಾಸ್ತವ ದೂರವಾದುದು. ಇದರ ವಿರುದ್ಧ ಭೌತಿಕ ನೆಲೆಯಲ್ಲಿ ಅನೇಕ ಚಳವಳಗಳು ನಡೆದು ಹೋಗಿದ್ದರೆ, ಅಭೌತಿಕ ನೆಲೆಯಲ್ಲಿಯೂ ನಡೆದು ಹೋಗಿವೆ. ಒಂದು ಹೊರಗಿನ ಮೂರ್ತ ಹೋರಾಟವಾದರೆ ಇನ್ನೊಂದು ಒಳಗಿನ ಅಮೂರ್ತ ಹೋರಾಟ. ಇವು ಎರಡೂ ಮೇಳೈಸಿದರೆ ಹೋರಾಟಗಳಿಗೆ ಒಂದು ಸ್ಪಷ್ಟ ದಿಕ್ಕು, ಅದಮ್ಯವಾದ ಶಕ್ತಿ ದೊರೆಯಬಹುದು. ಹೋರಾಟವೊಂದು ಅಂತರ್ಮುಖಿಯಾದಾಗ ಬಂಧನ ಮತ್ತು ಬಿಡುಗಡೆಯ ಪರಿಕಲ್ಪನೆಗಳ ವ್ಯಾಖ್ಯೆಗಳೇ ಬದಲಾಗಿಬಿಡಬಹುದು. ಅಕ್ಕ ಕೌಶಿಕನನ್ನು ನಿರಾಕರಿಸಿ ಚನ್ನಮಲ್ಲಿಕಾರ್ಜುನನ್ನು ಒಪ್ಪಿಕೊಂಡಳು. ಅವನು ‘ಅರೂಪ’ ನಾದ ಕಾರಣ ಇವಳ ಸೆರಗನ್ನು ನಿಯಂತ್ರಿಸುವ ಪ್ರಶ್ನೆಯೇ ಏಳಲಿಲ್ಲ- ಪರಿಣಮವಾಗಿ ಯಾಜಮಾನ್ಯ ಮತ್ತು ಹಿಂಸೆಯ ಒತ್ತಡವೂ.

ಆದರೆ ಲೌಕಿಕದಲ್ಲಿ ಹೀಗಾಗುವುದಿಲ್ಲ. ಸಂಬಂಧವೆಂದರೆ ಸದಾ ಕ್ರಿಯೆ ಪ್ರತಿಕ್ರಿಯೆಗಳ ಢಕ್ಕ್ಕಾ ಡಿಕ್ಕಿ. ಹೀಗಾಗಿ ಆತ್ಯಂತಿಕ ಬಿಡುಗಡೆ ಎಂಬುದೂ ಮರೀಚಿಕೆಯೇ. ಬಿಡುಗಡೆ ಎಂದುಕೊಂಡದ್ದೇ ಕಾಲಾನುಕ್ರಮದಲ್ಲಿ ಬಂಧನದ ಕೂಪವಾಗಿಬಿಡಬಹುದು. ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರಗಳೇ ಪರ್ಯಾಯಯಗಳಲ್ಲ. ಆದುದರಿಂದಲೇ ಬಿಡುಗಡೆಗಾಗಿ ಹೋರಾಟವೆಂಬುದನ್ನು ಅಖಂಡವಾದ ನೆಲೆಯಲ್ಲಿ ಗ್ರಹಿಸಬೇಕಾದ ಅಗತ್ಯವಿದೆ. ಇತ್ತೀಚಿನ ಮಹಿಳಾ ಚಳುವಳಿಗಳ ಸ್ವರೂಪವಂತೂ ಇಂತಹ ದೃಷ್ಟಿಕೋನವನ್ನು ಆತ್ಮಸಾತ್ ಮಾಡಿಕೊಳ್ಳುತ್ತಿದೆೆ.

ಈ ಲೇಖನಗಳನ್ನು ಬರೆಯುವಾಗ ನನ್ನ ಕಣ್ಣಮುಂದಿದ್ದುದು ಮೇಲಿನ ಗ್ರಹಿಕೆಗಳೇ. ಮೇಲಿನ ಆಶಯಕ್ಕೆ ಹೊಂದುವ ಹಲವು ಲೇಖನಗಳನ್ನು ಇಲ್ಲಿ ಸೇರಿಸಿದ್ದೇನೆ. ಹೀಗಾಗಿ ಇದೊಂದು ಕಲಸು ಮೇಲೋಗರ. ಒಟ್ಟು ಲೇಖನಗಳನ್ನು ಅಕ್ಕನ ಕುರಿತಾದ ಹುಡುಕಾಟ, ಮತ್ತು ಇತರ ಲೇಖನಗಳು ಎಂಬ ಎರಡು ಭಾಗಗಳನ್ನಾಗಿ ಮಾಡಿಕೊಂಡಿದ್ದೇನೆ. ಇತರ ಲೇಖನಗಳ ಜೊತೆಗೆ ಕೆಲವು ಹಿರಿಯ ಸಾಹಿಗಳ ಸಂದರ್ಶನ ಮತ್ತು ವ್ಯಕ್ತಿಚಿತ್ರಗಳನ್ನು ‘ಮುಖಾಮುಖಿ’ ಎನ್ನುವ ಉಪ ಭಾಗದಲ್ಲಿ ಸೇರಿಸಿದ್ದೇನೆ.

‍ಲೇಖಕರು Admin

8 June, 2016

2 Comments

  1. Sangeeta Kalmane

    ಅಕ್ಕನ ದಿಟ್ಟತನ ಮೆಚ್ಚಲೇ ಬೇಕು. ಸಮಾಜದಲ್ಲಿ ಅದೆಷ್ಟು ಹೆಂಗಸರು ಸಮಾಜವನ್ನು ಎದುರಿಸಲಾಗದೆ ಇಷ್ಟವಿಲ್ಲದ ಬದುಕಿಗೆ ಅಂಟಿಕೊಂಡು ಬಾಳುತ್ತಿರುವರೊ ಎಂದನಿಸುತ್ತದೆ ಅವರ ಚರಿತ್ರೆ ಓದಿದಾಗ. ನಿಮ್ಮ ಕೃತಿಗೆ ಯಶಸ್ಸು ಸಿಗಲಿ.

  2. Savitha ravishankar

    Good analysis. Great job.
    ಹೆಣ್ಣನ್ನು ಅರ್ಥೈಸಿಕೊಳ್ಳುವ ಹಾದಿಗೆ ಒಳ್ಳೆಯ ಮೆಟ್ಟಿಲು. ಇದು ವಾದವಲ್ಲ. ಮನುಷ್ಯ ಮನುಷ್ಯನನ್ನು ಉತ್ತರಿಸಿಕೊಳ್ಳುವ, ಪ್ರಶ್ನಿಸಿ ಕೊಳ್ಳುವ ಹಾದಿ. ಮನುಜನ ನಾಗುವುದು ಎಂದರೆ ಪಶುತ್ವ ದಿಂದಲೂ ದೈವತ್ವ ದಿಂದಲೂ ರಾಕ್ಷಸತ್ವದಿಂದಲೂ ಭಿನ್ನವಾಗುತ್ತ ಸಂವೇದನಾಶೀಲ ವಾಗುವುದು. ಗಾಳಿಬೀಸಿದಾಗ ಎಲೆಗಳು ಅಲಗುವವೊ, ಎಲೆ ಅಲುಗಿದಾಗ ಗಾಳಿ ಉತ್ಪತ್ತಿಯಾಗುವ ಇದು ಗೊತ್ತಿಲ್ಲ. ಹಾಗೆ ಸರಳವಾಗುವುದು. ನಿನ್ನ ಹಸಿವು ಯಾವುದೋ ಅದಕ್ಕಾಗಿ ಉಣ್ಣುವುದು ಕುಡಿಯುವುದು ಬೇಟನಾಡುವುದು. ಕ್ರಿಯೆಗಳು ಅದೇ ಆದರು ಅದನ್ನು ಅನುಭವಿಸುವ ಪಡೆಯುವ ಎಚ್ಚರ ಫಲಿತಾಂಶ ಅವರವರ ಹಸಿವಿನ ಸಾಮರ್ಥ್ಯ ದ್ದು. ಇರಲಿ . ಒಳ್ಳೆಯ ಪ್ರಯತ್ನ ಶುಭವಾಗಲಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading