ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಈ ಹೊತ್ತಿಗೆ’ಯಲ್ಲಿ ಕಾಯ್ಕಿಣಿ ಮತ್ತು ಚಾರ್ ಮಿನಾರ್

ಎನ್ ಸಂಧ್ಯಾ ರಾಣಿ

ಈ ಹೊತ್ತಿಗೆಯಲ್ಲಿ ಈ ಭಾನುವಾರ ಓದಲ್ಪಟ್ಟ, ಚರ್ಚಿಸಲ್ಪಟ್ಟ ಪುಸ್ತಕ ಜಯಂತ ಕಾಯ್ಕಿಣಿಯವರ ’ಚಾರ್ ಮಿನಾರ್’.
ತನ್ನ ಕಾವ್ಯಾತ್ಮಕ ನಿರೂಪಣೆಯಿಂದ, ಅದ್ಭುತವಾದ ರೂಪಕಗಳ ಶಕ್ತಿಯಿಂದ ಕಥೆಗಳಿಗೆ ಕವನದ ನವಿರುತನ ನೀಡಿದವರು ಜಯಂತ ಕಾಯ್ಕಿಣಿ. ಇವರ ಕಥೆಗಳಲ್ಲಿ, ಕವನಗಳಲ್ಲಿ ಮುಂಬೈ, ಗೋಕರ್ಣ, ಗಂಗೆಕೋಡಿ, ರುದ್ರಪಾದ, ಬೆಂಗಳೂರು ಎಲ್ಲವೂ ಕೇವಲ ಕಥೆ ನಡೆಯುವ ರಂಗಸ್ಥಳವಾಗದೇ ತಾವೇ ಒಂದು ಪಾತ್ರವಾಗುತ್ತವೆ.
ಎಸ್ ದಿವಾಕರ್ ಅವರು ಜಯಂತರನ್ನು ಪರಿಚಯಿಸುತ್ತಾ ಅವರ ಕಥೆಗಳು ಬೆಳೆದು ಬಂದ ದಾರಿಯನ್ನು ಗುರ್ತಿಸಿದರು.
ಚಾರ್ ಮಿನಾರ್ ಕಥಾ ಸಂಕಲನದಲ್ಲಿ ಮೊದಲ ಕಥೆ ’ಮಧು ಬಾಲ’. ಒಬ್ಬ ಡ್ಯಾನ್ಸ್ ಗರ್ಲ್ ಮಧೂ ಮತ್ತು ಸ್ಪರ್ಶಕ್ಕೆ ನಿಲುಕದ ಪರಿಮಳಗಳ ಮೂಲಕವೇ ಜಗತ್ತನ್ನು ಸ್ಪರ್ಷಿಸುವ ಏಕಾಂತ ಭಾವೆಯ ನಡುವಿನ ಸ್ಪರ್ಶಕ್ಕೆ ನಿಲುಕದ ಸಂಬಂಧದ ಕಥೆ ಮಧು ಬಾಲ. ಇಲ್ಲಿ ಮಧು ಬಾಲ ಹೇಳುತ್ತಾಳೆ, ’ಎಲ್ಲರೂ ನನ್ನನ್ನ ’ನಿನ್ನ ನಿಜವಾದ ಹೆಸರೇನು’ ಅಂತ ಕೇಳುತ್ತಾರೆ, ಯಾರಿಗೂ ತೋರಿಸದ್ದನ್ನ ನನಗೆ ಮಾತ್ರ ತೋರಿಸು ಎನ್ನುವಂತೆ …’.  ಹಾಗೆ ಯಾರಿಗೂ ಹೇಳಿಕೊಳ್ಳದ ಪರಸ್ಪರರು ಮಾತ್ರ ಹಂಚಿಕೊಂಡ ಒಂದೆರಡು ಖಾಸಗಿ ಕ್ಷಣಗಳ ಫಲಿತವೇ ಇಲ್ಲಿನ ಎಲ್ಲಾ ಕತೆಗಳು. ಇರುವಿಕೆಯ ಅರಿವಿದೆ, ಆದರೆ ಆ ಅರಿವನ್ನು ಮುಟ್ಟಿ ಬಿಟ್ಟರೆ ಅದರ ಸತ್ಯದ ಒಜ್ಜೆ ಹೊರಲಾರದೇ ಹೋದೀತೆಂಬ ಹೆದರಿಕೆಯೂ ಇದೆ. ಜಯಂತರೇ ಹೇಳುವ ಹಾಗೆ ’ಫಿಯರ್ ಆಫ಼್ ನೋಯಿಂಗ್’, ಇಲ್ಲಿ ವ್ಯಕ್ತಿ ಮುಂದೆ ಹೆಜ್ಜೆ ಇಡದಂತೆ ತಡೆಯುತ್ತದೆ.
ಹಾಗೆ ಅರಿಯದ ಮತ್ತು ಅರಿಯುವ ಕ್ಷಣದ ನಡುವಿನ ಒಂದು ಘಳಿಗೆಯಲ್ಲಿ ಹಂಚಿಕೊಳ್ಳುವ ಆಪ್ಯಾಯತೆ ಇಲ್ಲಿನ ಕಥೆಗಳ ಸ್ಥಾಯೀ ಭಾವ. ಅದು ಮಧು ಭಾಲ ಕಥೆಯಲ್ಲಿ ’ಕ್ಯಾಸೆಲ್ ರಾಕ್’ ಆಗಿ, ಅಭಂಗ ಅಭಿಸಾರದಲ್ಲಿ ಕಾರೇರ್ ಮತ್ತು ನೀಲಿ ಶಾಯಿ, ’ನೀರು’ ಕಥೆಯಲ್ಲಿ ಸ್ವತಹ ನೀರು, ಕೋಮಲ ಗಾಂಧಾರದಲ್ಲಿ ಆಡಿಶನ್ ನ ಆ ಹೆಸರುಗಳ ಮಿಥ್ಯದ ಕ್ಷಣಗಳ ಸತ್ಯ, ಮದುವೆ ಗಡಿಬಿಡಿಯಲ್ಲೂ ಹೇಮಚಂದ್ರ ನೆನಪಿಸಿಕೊಳ್ಳುವ ಹಸಿತರಕಾರಿ ಉಪ್ಪಿನಕಾಯಿ, ಬಣ್ಣದ ಬಾನುಲಿಯ ವಾಟಿಗದ ಸಕ್ಕರೆ … ಹೀಗೆ. ಆ ಆಪ್ಯಾಯ ಘಳಿಗೆಗಳು ಅವರಲ್ಲಿನ ಸಂಬಂಧವನ್ನು ಕೆನೆಗಟ್ಟಿಸುತ್ತಾ ಹೋಗುತ್ತವೆ.
ತಮ್ಮ ತಮ್ಮ ಕ್ಷಣಿಕತೆಯಲ್ಲೇ ಸಾರ್ಥಕತೆಯನ್ನು ಕಂಡುಕೊಳ್ಳುವ ಕ್ಷಣಗಳ ಇಬ್ಬನಿಯಂತೆ ಇಲ್ಲಿನ ಕಥೆಗಳು.
ಇವೆಲ್ಲವೂ ಇವೆ, ಮತ್ತು ಸಣ್ಣ ಎಳೆ ಇವೆಲ್ಲವನ್ನೂ ಬಂಧಿಸಿದೆ, ಆ ಎಳೆ ಹರಿದು ಅದನ್ನು ಕೈಗೆತ್ತಿಕೊಂಡು ನಮ್ಮದಾಗಿಸಿಕೊಂಡ ಮರುಕ್ಷಣದಿಂದ ಅವೆಲ್ಲದರ ತೂಕ ನಮ್ಮ ಕೈಗಳಲ್ಲಿ ಬೆಳೆಯುತ್ತಾ ಹೋಗುತ್ತದೆ ಎನ್ನುವ ಹೆದರಿಕೆ ಅವುಗಳನ್ನು ನಮ್ಮದಾಗಿಸಿಕೊಳ್ಳದಂತೆ ತಡೆಯುತ್ತದೆ. ’ಪ್ರಯಾಣದಲ್ಲಿ ನಾವು ಪರಸ್ಪರ ಸಹಯಾತ್ರಿಗಳಾಗಬೇಕು. ಲಗೇಜ್ ಗಳಾಗಬಾರದು…’ ಎನ್ನುವ ಮಾತು ಇಲ್ಲಿನ ಎಲ್ಲ ಪಾತ್ರಗಳ ಎದೆಯಾಳದ ಹೆದರಿಕೆ. ಹುಡುಕಾಟ ನಡೆಸುವಾಗಲೂ ಅವು ಒಂದುವೇಳೆ ಸಿಕ್ಕೇ ಬಿಟ್ಟರೆ …ಎನ್ನುವ ಸಣ್ಣ ಹೆದರಿಕೆ ಎದೆಯಲ್ಲಿದ್ದೇ ಇರುತ್ತದೆ.
ಈ ಸಂವಾದವನ್ನು ಚಂದಗಾಣಿಸಿದ್ದು ಜಯಂತ ಕಾಯ್ಕಿಣಿಯವರ ಇರುವಿಕೆ ಮತ್ತು ಸಂವಾದದಲ್ಲಿ ಪಾಲುಗೊಂಡ ಅವರ ಸಹನೆ ಮತ್ತು ಉತ್ಸಾಹ. ಕಥೆಗಳ ಹುಟ್ಟು, ಸ್ವರೂಪ, ಅವುಗಳು ಅವರಲ್ಲಿ ಬೆಳೆಯುವ ರೀತಿ … ಎಲ್ಲದರ ಬಗ್ಗೆ ಮಾತಾಡುತ್ತಾ ಹೋದರು. ಅವೂ ಕೂಡ ಜಯಂತರ ಕಥೆ-ಕವನಗಳ ಹಾಗೇ ಕಾವ್ಯಾತ್ಮಕ!

ಸಂವಾದದ ಕೆಲವು ದೃಶ್ಯಗಳು ನಿಮಗಾಗಿ :
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

‍ಲೇಖಕರು avadhi

15 April, 2013

7 Comments

  1. mahantesh

    Nice ones. I really liked Madubhala and Neeru. Missed to oppurtunity to hear JK on this.
    -Mahantesh

  2. Tejaswini Hegde

    ತುಂಬಾ ಸುಂದರ ಹಾಗೂ ಉಪಯುಕ್ತ ಸಂಜೆಯಾಗುತ್ತಿದೆ “ಈ ಹೊತ್ತಿಗೆ” 🙂 ಕಥೆಯ ಹುಟ್ಟು, ಬೆಳವಣಿಗೆ ಇವೆಲ್ಲವುಗಳ ಬಗ್ಗೆ ನನಗಿದ್ದ ಹಲವು ಸಂಶಯಗಳು ನಿನ್ನೆ ನಿವಾರಣೆಯಾದವು.
    ಕಾಯ್ಕಿಣಿ ಸರ್ ಅವರ ಸರಳತೆಯಷ್ಟೇ ಸುಂದರ ನಿರೂಪಣಾಶೈಲಿಯಿಂದ ಕೂಡಿರುವ ಕಥಾಸಂಕಲನ “ಚಾರ್‌ಮಿನಾರ್”. ಸಂಕೀರ್ಣ, ಸೂಕ್ಷ್ಮ ಸಂಬಂಧಗಳನ್ನು ಅಪ್ರತಿಮ ರೂಪಕಗಳ ಮೂಲಕ ನಿರೂಪಿಸಿದ್ದಾರೆ. ಅಭಂಗ ಅಭಿಸಾರ, ನೀರು, ಮಧುಬಾಲ ಹಾಗೂ ಒಳಾಂಗಣ ನನ್ನ ಅಚ್ಚುಮೆಚ್ಚಿನ ಕಥೆಗಳು.

  3. sunil rao

    missed it

  4. Anuradha.B.Rao

    ತುಂಬಾ ಚೆನ್ನಾಗಿತ್ತು ಕಾರ್ಯಕ್ರಮ .

  5. umasekhar

    ee hothi karyakrama tumba chennagide. modaleradu kathegalu madhubala mathu abhanga abisaratumba istavada katheayitu. jayanth avaru madhubalalanthaha hudugiyaru kashta paduva reeti novayitu. hagene abhanga abhisarara sukkshmavada geletana mathu paraspara nambike ishtavayitu.

  6. ಲಕ್ಷ್ಮೀಕಾಂತ ಇಟ್ನಾಳ

    ಸುಂದರ ಸಂವಾದದ ಸಂಜೆ, ಸಂವೇದನೆಯೊಂದಿಗೆ, ಸಂವಹನ, ಕಥಾ ಕಾಲಕ್ಷೇಪ, ಭಾಷೆಯ ಬೆಳವಣಿಗೆಗೆ ಕ್ಷಣಗಳನ್ನು ನೀಡುವುದು,,ಕಿವಿಯಾಗುವುದು ಸಂತೋಷದ ವಿಷಯ. ಸಂವಾದದ ವಿವರಗಳು ಬಹು ಆಪ್ಯಾಯ, ಎನ್ ಸಂಧ್ಯಾರಾಣಿಯವರ ನಿರೂಪಣೆ ತುಂಬ ಸರಳ, ಸುಂದರ.ಬಂಧುರ.ಧನ್ಯವಾದಗಳು.

  7. kiran desai

    ariyuvkege belaku needida samvaada. manadali bareyuva hummanasannu ukkisida kaaryakrama.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading