ಈ ಸೈಬೀರಿಯನ್‌ ಹಕ್ಕಿಗಳಿಗ್ಯಾಕೆ ಕುರುಕಲು ತಿಂಡಿ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮೆರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ದೂರದಲ್ಲೇ ನಿಂತು ಸುಮ್ಮನೆ ನೋಡುತ್ತಿದ್ದೆ. ಅಲ್ಲೇ ಗಂಗೆಯ ತೀರದುದ್ದಕ್ಕೂ ಹಾರಾಡಿಕೊಂಡಿದ್ದ ಗುಂಪು ಗುಂಪು ಸೈಬೀರಿಯನ್‌ ಸೀಗಲ್‌ಗಳು ಒಮ್ಮೆ ದೂರಾಗಿ, ಮತ್ತೆ ಅಷ್ಟೇ ವೇಗದಲ್ಲಿ ಹಾರಿ ಬಂದು ತೀರದಲ್ಲಿ ಕೂತುಬಿಡುತ್ತಿದ್ದವು. ಅಷ್ಟರಲ್ಲಿ, ಆ ಫೋಟೋಗ್ರಾಫರು ಬಲಗೈಲಿ ಕ್ಯಾಮರಾ ಹಿಡಿದು, ಅದೇನೋ ಕರಿದ ತಿಂಡಿಯನ್ನು ಎಡಗೈಲಿ ಹಿಡಿದು ಅಲ್ಲೇ ಕೂತಿದ್ದ ಹಕ್ಕಿಯತ್ತ ಕೈಚಾಚಿ ಕೂತ. ಕೈಯಲ್ಲಿದ್ದ ತಿಂಡಿ ಕಂಡಿದ್ದೇ ತಡ, ಹಕ್ಕಿ ಹತ್ತಿರ ಹತ್ತಿರ ಬಂತು. ಕಣ್ಮುಚ್ಚಿ ತೆರೆಯುವಷ್ಟರಲ್ಲಿ ನಿಸ್ಸಂಕೋಚದಿಂದ ಆತ ಕೊಟ್ಟ ತಿಂಡಿಯನ್ನು ಕೊಕ್ಕಿನಲ್ಲಿ ಕಚ್ಚಿ ಬಂದಷ್ಟೇ ವೇಗವಾಗಿ ಹಾರಿತು.

ಈ ಕ್ರಿಯೆಯ ಜೊತೆಜೊತೆಗೇ, ಇನ್ನೊಂದು ಕೈಲಿದ್ದ ಕ್ಯಾಮರಾ ಚಕಚಕನೆ ಹಲವಾರು ಸಾರಿ ಕ್ಲಿಕ್ಕಾಯಿತು. ಅಂದುಕೊಂಡಂತೆ ಫೋಟೋ ಬಂದಿದಿಯಾ ಎಂದಾತ ಪರೀಕ್ಷಿಸಿಕೊಂಡ. ಬರಲಿಲ್ಲ ಅನಿಸಿತೋ ಏನೋ, ಮತ್ತೆ ಅದೇ ರಿಪೀಟ್.‌ ಇನ್ನೊಂದು ಹಕ್ಕಿ ಬಂತು, ಬಾಯಿಗೆ ಸಿಕ್ಕಿದ್ದು ಕಚ್ಚಿಕೊಂಡು ಹಾರಿತು. ಬಹುಶಃ ಈ ಬಾರಿ ಆತನಿಗೆ ಬೇಕಾದಂತೆ ಫೋಟೋ ಬಂದಿದೆ, ಖುಷಿಯಾಗಿ ಕ್ಯಾಮರಾ ನೇತಾಡಿಸುತ್ತಾ ಅಲ್ಲಿಂದ ಹೊರಟುಬಿಟ್ಟ.

ಹೊಂಬಣ್ಣದಲ್ಲಿ ಗಂಗೆಯನ್ನು ನೋಡಬೇಕು ಎಂದು ಚಳಿಯಲ್ಲೂ ಬೇಗ ಎದ್ದು ಕ್ಯಾಮರಾ ನೇತಾಕಿಕೊಂಡು ನಾನು ಬೆಳ್ಳಂಬೆಳಗ್ಗೆ ಗಸ್ತು ತಿರುಗುತ್ತಿದ್ದಾಗ ಈ ಹಕ್ಕಿಗಳೂ, ಇಡೀ ಗಂಗೆಯೂ, ಮುಂಜಾವಿನ ಮಂಜೂ, ಶಾಲು ಹೊದ್ದ ಮನುಷ್ಯರೂ, ಕೆಲಸವಿಲ್ಲದೆ ತೀರಕ್ಕೆ ಆತುಕೊಂಡು ಇನ್ನೂ ಮಲಗಿದ್ದ ದೋಣಿಗಳೂ ಎಲ್ಲವೂ ಏಕಕಾಲಕ್ಕೆ ಬೆಳ್ಳಗೆ ಮಾರ್ಪಾಡಾಗಿ ಒಂದು ವಿಚಿತ್ರ ಜಗತ್ತನ್ನೇ ಸೃಷ್ಟಿ ಮಾಡಿಬಿಟ್ಟಿದ್ದವು.

ವಾರಣಾಸಿಯ ಗಂಗೆ ಬೆಳಗಿನ ಹೊಂಬಣ್ಣದಲ್ಲಿ ಸಿಗದಿದ್ದರೇನಂತೆ, ಚಳಿಗಾಲದಲ್ಲಿ ಹೀಗೆ ಕಾಣುವ ಸೊಗಸೂ ಬೇರೆಯೇ, ಈ ಹಕ್ಕಿಗಳ ಕಲರವದ ಜೊತೆಗೆ ಅಂದುಕೊಳ್ಳುತ್ತಾ, ಘಾಟಿನ ಮೆಟ್ಟಿಲುಗಳಲ್ಲಿ ತ್ರಿಶೂಲ ಊರಿ ಜಪಮಾಲೆ ಎಣಿಸುತ್ತಾ ಕೂತವರನ್ನು ಆ ಬೆಳ್ಳಗಿನ ಮಂಜಿನ ಹಿನ್ನೆಲೆಯಲ್ಲಿ ಅಸ್ಪಷ್ಟವಾಗಿ ಕಾಣುತ್ತಾ ವಾರಣಾಸಿ ಎಂಬ ಜಗತ್ತು ಆ ಬೆಳಗಿನಲ್ಲೂ ಇನ್ನೂ ನಿಗೂಢವಾಗಿ ತೆರೆದುಕೊಳ್ಳತೊಡಗಿತ್ತು.

ಕಳೆದ ಎರಡೂ ಬೆಳಗುಗಳನ್ನೂ ಹೆಚ್ಚು ಕಡಿಮೆ ಹೀಗೆಯೇ ಕಳೆದಿದ್ದ ನಾನು ಈಗ ಮೂರನೇ ಬೆಳಗಿನಲ್ಲಿ ಆ ಕಡೆಯಿಂದ ಮಣಿಕರ್ಣಿಕಾವರೆಗೂ, ಈ ಕಡೆಯಿಂದ ಹರಿಶ್ಚಂದ್ರ ಘಾಟಿನವರೆಗೂ ನಡೆದಿದ್ದೆ. ದಾರಿಯುದ್ದಕ್ಕೂ, ಈ ಹಕ್ಕಿಗಳಿಗೆ ಹಾಕಿರೆಂದು ಅದೇನೋ ಕುರುಕಲು ಪ್ಯಾಕೆಟ್ಟು ತೋರಿಸುತ್ತಾ, ʻಬರೀ ಹತ್ತು ರುಪಾಯಿ, ತೆಗೊಳ್ಳಿ, ದೋಣಿ ಪ್ರಯಾಣ ಮಾಡಿದರೆ, ಮಸ್ತಾಗಿರೋ ಹಕ್ಕಿ ಫೋಟೋ ತೆಗೀಬಹುದು, ಬನ್ನಿ ದೋಣಿ ಹತ್ತಿ, ಕೇವಲ ೨೦೦ʼ ಎಂದು ಕತ್ತಲ್ಲಿ ನೇತಾಡುತ್ತಿದ್ದ ಕ್ಯಾಮರಾ ನೋಡಿಯೇ ಪೀಠಿಕೆ ಹಾಕುವ ಮಂದಿ ಸಾಲುಸಾಲಾಗಿ ಸಿಕ್ಕಿದ್ದರು. ಇದೇ ಅನುಭವ ತಿಂಗಳ ಹಿಂದೆ ದ್ವಾರಕಾದಲ್ಲೂ ಆಗಿತ್ತು. ವರ್ಷದ ಹಿಂದೆ ದೆಹಲಿಯ ಯಮುನಾ ಘಾಟಿನಲ್ಲೂ ಇದೇ ಕಥೆ.

ಯಮುನಾ ಘಾಟಿನಲ್ಲಿ ಈ ವಲಸಿಗ ಹಕ್ಕಿಗಳ ಫೋಟೋ ತೆಗೆಯಬೇಕಲ್ಲ ಎಂದು ಒಂದು ಸಂಜೆ ಹೋದವಳಿಗೆ ಅಲ್ಲಿ ಕಂಡಿದ್ದೇ ಬೇರೆ. ನೀರಿಗಿಳಿವವರೆಲ್ಲ ಕೈಯಲ್ಲಿ ಕಡ್ಲೆಹಿಟ್ಟಿನ ಕರಿದ ತಿನಿಸಿನ ಪ್ಯಾಕೆಟ್ಟನ್ನು ಕೈಯಲ್ಲಿ ಹಿಡಿದೇ ದೋಣಿ ಹತ್ತುತ್ತಾರೆ. ಈ ತಿಂಡಿ ಪೊಟ್ಟಣದ ಆಸೆಗಾಗಿ ಅಷ್ಟೂ ಹಕ್ಕಿಗಳ ದಂಡು ಆಗಸದಲ್ಲಿ ಕಲರವ ಎಬ್ಬಿಸುತ್ತಾ ದೋಣಿಯ ಹಿಂದೆ ಹಾರಿ ಬರುತ್ತವೆ. ಹಾರಿ ಬರುವ ಈ ದಂಡು ದಂಡು ಹಕ್ಕಿಗಳ ಫೋಟೋ ಕ್ಲಿಕ್ಕಿಸಲು ಸರ್ಕಸ್ಸು ನಡೆಯುತ್ತದೆ. ಇಲ್ಲಿಗೆ ಬರುವವರ ನಾಡಿ ಮಿಡಿತ ಅಲ್ಲಿರುವವರಿಗೆ ಗೊತ್ತು.

ಕ್ಯಾಮರಾ ಹೆಗಲಲ್ಲಿ ಕಂಡ ಕೂಡಲೇ, ʻಬೆಳಿಗ್ಗೆ ಬಂದ್ರೆ ಸೂರ್ಯೋದಯದ ಹಿನ್ನೆಲೆಯೊಂದಿಗೆ ಹಕ್ಕಿಗಳ ಫೋಟೋ ಮಸ್ತಾಗಿ ಬರುತ್ತೆ ನೋಡಿ. ಹಕ್ಕಿ ಹತ್ತಿರ ಬರಿಸೋದು ನಮಗೆ ಬಿಡಿ. ನೀವು ನಮ್ಮ ಜೊತೆ ಬಂದ್ರೆ ನಿಮ್ಗೆ ಅದ್ಭುತ ಹಕ್ಕಿ ಪಟ ಸಿಗೋ ಹಾಗೆ ಮಾಡೋದು ನಮ್ಮ ಜವಾಬ್ದಾರಿ ನೋಡಿ ಎಂದು ನಾವಿನ್ನೂ ಮಾತಾಡೋ ಮೊದಲೇ ಅವರೇ ಎಲ್ಲ ಹೇಳಿ ಬಿಡುತ್ತಾರೆ. ಆಗಲೇ, ಫೋಟೋಗ್ರಫಿ ಫೋರಂಗಳಲ್ಲಿ ಅಪ್ಲೋಡಾಗುತ್ತಿದ್ದ ಯಮುನಾ ಘಾಟಿನ ಇಂಥ ಫೋಟೋಗಳ ಹಿಂದಿನ ಸಮಾಚಾರ ಅರಿವಿಗೆ ಬಂದಿದ್ದು. ʻಬೇಡ, ಬಿಡಿ ಇನ್ನೊಮ್ಮೆ ಬರುತ್ತೇನೆʼ ಎಂದು, ಅಲ್ಲೇ ತೀರದಲ್ಲಿ ಕೂತು, ಉಳಿದವರ ಕೆಲಸ ನೋಡಿಕೊಂಡು ಅವರು ಆಹಾರ ಎಸೆಯುವಾಗ ಮುತ್ತಿಕೊಂಡ ಹಕ್ಕಿಗಳನ್ನು, ದೋಣಿ ನಡೆಸುವವರ ಕಿಸೆ ತುಂಬಿದ್ದನ್ನೂ ನೋಡಿ, ಒಂದೆರಡು ಚಿತ್ರ ಒಳಗಿಳಿಸಿಕೊಂಡು ಸುಮ್ಮನೆ ಮರಳಿದ್ದೆ.

ಇದು ಕೇವಲ ವಾರಣಾಸಿಯದೋ, ಯಮುನಾ ಘಾಟಿನದೋ ಮಾತ್ರ ಕಥೆಯಲ್ಲ. ಭಾರತವೂ ಸೇರಿದಂತೆ ಎಲ್ಲ ದೇಶಗಳಲ್ಲೂ ಸೀಗಲ್‌ಗಳ ಕಥೆ ಇದೇ. ತಿಂಗಳ ಹಿಂದೆ ದ್ವಾರಕಾದಲ್ಲೂ ದಂಡು ದಂಡು ಸೀಗಲ್‌ಗಳ ಇದೇ ಅಭ್ಯಾಸ ನೋಡಿದೆ. ಈ ಕಡೆ ಕಚ್‌ಗೆ ಬಂದರೆ ಇನ್ನೂ ತರಹೇವಾರಿ ವಲಸಿಗ ಹಕ್ಕಿಗಳಿದ್ದರೂ, ಅವಾದರೋ ಮನುಷ್ಯರಿಂದ ದೂರವಿದ್ದುಕೊಂಡು ಬದುಕುತ್ತಿದ್ದವು. ಇವು ಹಾಗಲ್ಲ. ಮನುಷ್ಯರ ತಲೆ ಮೇಲೆಯೇ ಹಾರಾಡುತ್ತಿರುತ್ತವೆ.

ಸಂಗಮ/ಘಾಟ್‌ಗಳಲ್ಲಿ ಇವಕ್ಕೆಲ್ಲ ಮನುಷ್ಯರ ಜೊತೆಗಿನ ಸಾಹಚರ್ಯ ಅದೆಷ್ಟು ಅಭ್ಯಾಸವಾಗಿ ಬಿಟ್ಟಿದೆಯೆಂದರೆ, ದೋಣಿ ಹತ್ತುವ ಯಾರನ್ನೂ ಬಿಡುವುದೇ ಇಲ್ಲ. ದೋಣಿಯ ಹಿಂದೆಯೇ ಅವುಗಳ ಪಯಣವೂ ಶುರು. ದೋಣಿ ಹತ್ತುವ ಅಷ್ಟೂ ಜನರು ಹಿಂದೆ ಮುಂದೆ ಯೋಚಿಸದೆ ಹತ್ರುಪಾಯಿ ಕೊಟ್ಟು ಒಂದು ಪೊಟ್ಟಣ ಕಟ್ಟಿಕೊಂಡು ದೋಣಿಯೇರುತ್ತಾರೆ. ಗಂಗೆಯುದ್ದಕ್ಕೂ ತಮ್ಮ ಹಿಂದೆ ಬರುವ ಈ ವಲಸಿಗ ಹಕ್ಕಿಗಳಿಗೆ ಮುಷ್ಟಿ ಮುಷ್ಟಿ ಆಹಾರ ನೀರಿಗೆಸೆದು ಬಿಡುತ್ತಾರೆ. ಮೀನು ಬೇಟೆಗಿಳಿಯಬೇಕಾದ ಹಕ್ಕಿಗಳು ದೋಣಿಯೇರುವ ಮಂದಿಯ ಬೆನ್ನು ಬಿದ್ದು ಈ ತೀರದಿಂದ ಆ ತೀರಕ್ಕೂ ಆ ತೀರದಿಂದ ಈ ತೀರಕ್ಕೂ ಗಲಭೆಯೆಬ್ಬಿಸಿ ಹಾರುತ್ತಲೇ ಇರುವುದು ಮಾತ್ರ ವಿಪರ್ಯಾಸ.

ಸಂಗಮದಲ್ಲಿ ಮುಳುಕ ಹಾಕಿ, ಪಾಪಗಳನ್ನು ತೊಳೆದುಕೊಂಡು, ಪುನೀತರಾಗಿ, ಒಂದು ರೌಂಡು ನದಿಯಲ್ಲಿ ದೋಣಿಯಲ್ಲಿ ವಿಹರಿಸಿ ಮನಸ್ಸು ಪ್ರಫುಲ್ಲಗೊಳಿಸಿಕೊಂಡು ಮನೆಗೆ ಮರಳುವ ಇವರಿಗೆ ತಮ್ಮದೇ ದೋಣಿಯಲ್ಲಿ ಹಾರಿ ಬಂದು ಕೂರುವ ಈ ಹಕ್ಕಿಗಳ ಬಗ್ಗೆ ಕುತೂಹಲ, ಬಿಟ್ಟಿ ಮನರಂಜನೆ. ʻಹಕ್ಕಿಗಳಿಗೆ ಪಾಪ, ಹೊಟ್ಟೆಗಿಲ್ಲವೋʼ ಎಂಬಂತೆ ಆಹಾರ ಕೊಡಲು ಹೊರಟು ಅವುಗಳಿಗೆ ಅದೇ ಈಗ ಹಲವು ವರ್ಷಗಳಿಂದ ಅಭ್ಯಾಸವಾಗಿ ಹೋಗಿದೆ. ಈ ಕರಿದ ತಿಂಡಿಯೂ ಅಲ್ಲದೆ, ಅಂಗಡಿಗಳಲ್ಲಿ ಪ್ಯಾಕೆಟ್ಟುಗಳಲ್ಲಿ ಸಿಗುವ ನಾನಾ ನಮೂನೆಯ ಕರುಂಕುರುಂಗಳೆಲ್ಲವೂ ಇವುಗಳ ಫೇವರಿಟ್‌ ಆಹಾರ. ಬಿಟ್ಟಿ ಆಹಾರ ಸಿಗೋವಾಗ ಮೀನು ಹಿಡಿಯುವ ವೃಥಾ ಶ್ರಮ ಯಾರಿಗೆ ಬೇಕು!

ಚಳಿಗಾಲ ಬರುತ್ತಿದ್ದಂತೆ ಆರು ಸಾವಿರ ಮೈಲು ಹಾರಿ ಬರುವ ಈ ವಲಸಿಗ ಹಕ್ಕಿಗಳಿಗೆ ಇದೇ ಅಭ್ಯಾಸವಾಗಿಬಿಟ್ಟಿದೆ. ಸೈಬೀರಿಯಾದ ಕ್ಲಿಷ್ಟಕರ ಚಳಿ ವಾತಾವರಣಕ್ಕೆ ಹೊಂದಿಕೊಳ್ಳಲು ಆಗದೆ, ಆಹಾರ ಹಾಗೂ ಸಂತಾನೋತ್ಪತ್ತಿಗಾಗಿ ದಿನಗಟ್ಟಲೆ ಹಾರಿ ಬರುವ ಈ ಹಕ್ಕಿಗಳು, ಕರೆಕ್ಟಾಗಿ ಇಂಥದ್ದೇ ದಿನ ಅದೇ ಹೊತ್ತಿಗೆ ಅದೇ ಜಾಗದಲ್ಲಿ ವರ್ಷಂಪ್ರತಿ ಹಾಜರಾಗಿಬಿಡುವುದು ನಿಜಕ್ಕೂ ಪಕ್ಷಿಪ್ರಪಂಚದ ಅಚ್ಚರಿಯೇ. ಇದು ಇಂದು ನಿನ್ನೆಯ ಕಥೆಯಲ್ಲ. ಹಲವಾರು ವರ್ಷಗಳಿಂದ ಈ ಹಕ್ಕಿಗಳು ಕ್ಯಾಲೆಂಡರು, ಮ್ಯಾಪಿನ ಹಂಗಿಲ್ಲದೆ, ಕರೆಕ್ಟಾಗಿ ಒಂದೇ ಸಮಯಕ್ಕೆ ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ವಲಸೆ ಬರುತ್ತವೆ.

ಆದರೆ, ಇಂತಹ ಕರಿದ ತಿಂಡಿಗಳನ್ನೆಲ್ಲ ನಾವು ಅವುಗಳಿಗೆ ಕೊಡುತ್ತಾ ಕೊಡುತ್ತಾ ಎಂಥ ದೊಡ್ಡ ತಪ್ಪು ಕೆಲಸ ಮಾಡುತ್ತೇವೆಂದು ನಾವು ಒಮ್ಮೆಯಾದರೂ ಯೋಚಿಸಿದ್ದೇವಾ? ಇದರ ಮುಂದಿನ ಪರಿಣಾಮಗಳೇನಾಗುತ್ತದೆಂಬ ಚಿಂತೆಯೂ ನಮಗಿಲ್ಲ. ಮೀನು, ಹುಳ/ಕೀಟಗಳನ್ನು ತಿಂದು ಬದುಕುವ ಈ ಹಕ್ಕಿಗಳ ಆಹಾರ ಶೈಲಿಯೇ ಹೀಗೆ ನಿಧಾನವಾಗಿ ಬದಲಾಗುತ್ತಾ ಹೋದರೆ, ಕೇವಲ ಕೆಲವು ತಿಂಗಳುಗಳ ಚಳಿಗಾಲಕ್ಕಾಗಿ ಸಾವಿರಾರು ಕಿಮೀ ಹಾರಿ ಬರುವ ಹಾಗೂ ಮತ್ತೆ ಅದೇ ಜಾಗಕ್ಕೆ ಹಾರಿ ಹೋಗುವ ಈ ಹಕ್ಕಿಗಳಲ್ಲಿ ಮೊದಲಿನ ದೇಹಕ್ಷಮತೆ ಉಳಿದೀತೇ?

ಈ ಬದಲಾದ ಆಹಾರಕ್ರಮ ರೆಕ್ಕೆಗಳಿಗೆ ಇದು ಬಲ ಕೊಟ್ಟೀತೇ? ಹಕ್ಕಿಗಳ ವಿಚಾರ ಬಿಡೋಣ, ಆಹಾರವನ್ನು ರುಚಿಯಾಗಿ ಮಾಡಿಕೊಳ್ಳುವ, ಥರಹೇವಾರಿ ಪ್ರಯೋಗಗಳನ್ನು ಮಾಡಿರುವ, ನಾನಾ ಆಹಾರಕ್ರಮಗಳ ಪ್ರಯೋಗಗಳಿಗೆ ಒಡ್ಡಿರುವ ಮನುಷ್ಯನ ಮೇಲೆಯೇ ಜಂಕ್‌ ಅನ್ನೋದು ಕನಿಷ್ಟ ವರ್ಷಗಳಲ್ಲೇ ಎಂತೆಂಥಾ ಪರಿಣಾಮಗಳನ್ನು ಬೀರಿದೆ ಎಂಬುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ಇನ್ನು ಕೇವಲ ಮೀನು, ಕೀಟಗಳಷ್ಟನ್ನಷ್ಟೇ ಆಹಾರವಾಗಿಸಿಕೊಂಡ ಹಕ್ಕಿಗಳ ಗತಿಯೇನಾಗಬೇಕು! ಮುಂದೂ ಈ ವಲಸೆ ಎನ್ನುವ ಸರಪಳಿ ಹೀಗೇ ಮುಂದುವರಿದೀತೇ?

ಒಂದಿಷ್ಟು ಮಂದಿ ದೋಣಿಯಲ್ಲಿ ಕೂತರು, ಏನೋ ತಿಂದರು, ತಿಂದ ಉಳಿದ ಕಸವೆಲ್ಲ ದೋಣಿಯಲ್ಲೇ! ದಿನದಂತ್ಯದಲ್ಲಿ ಅಂಬಿಗ ದೋಣಿಯೊಳಗನ್ನೆಲ್ಲ ಅದೇ ನದಿಯಲ್ಲಿ ತೇಲುತ್ತಾ ತನ್ನ ದೋಣಿ  ಗುಡಿಸಿ ಕಸವನ್ನೆಲ್ಲ ತೆಗೆದು ನೀರಿಗೆ ಹಾಕಿ ಕೈತೊಳೆದುಕೊಳ್ಳುತ್ತಾನೆ. ತನ್ನ ದೋಣಿ ಕ್ಲೀನಾಯಿತಲ್ಲ, ಸಾಕು. ನೆಮ್ಮದಿ. ಆಹಾರ ವಸ್ತುಗಳ ಪರಿಮಳ ಹೊತ್ತ ಪ್ಲಾಸ್ಟಿಕ್‌ ಚೀಲಗಳಿಗೆ ಬಾಯಿ ಹಾಕುವ ಈ ಹಕ್ಕಿಗಳ ಹೊಟ್ಟೆಯೊಳಗೆ ಪ್ಲಾಸ್ಟಿಕ್‌ ಕೂಡಾ ಇಳಿಯುತ್ತದೆ! ಇಂಥ ಆಹಾರವೇ ತಿಂದೂ ತಿಂದೂ, ಸುಲಭದಲ್ಲಿ ದಕ್ಕುವ ಆಹಾರಕ್ಕಾಗಿ, ಹಕ್ಕಿಗಳೂ ವ್ಯಗ್ರರಾಗಿ ಆಹಾರ ಎಸೆಯದಿದ್ದರೂ, ದೋಣಿಗಳ ಹಿಂದೆ ಎಡೆಬಿಡದೆ ಹಾರುವುದನ್ನು ನೋಡಿದರೆ, ಈ ಕ್ರಮ ಅವುಗಳನ್ನೂ ಎಂಥಾ ಅವಸ್ಥೆಗೆ ದೂಡಿವೆ ಎಂದು ಊಹಿಸಿಕೊಳ್ಳಬಹುದು.

ಇಲ್ಲಿ ಸೀಗಲ್‌ ಎಂಬ ಪಕ್ಷಿ ಕೇವಲ ಉದಾಹರಣೆಯಷ್ಟೆ. ಎಷ್ಟೋ ಬಾರಿ, ಕಾಡುಪ್ರಾಣಿಗಳಿಗೆ ಆಹಾರ ನೀಡಬೇಡಿ ಎಂಬಿತ್ಯಾದಿ ಬೋರ್ಡುಗಳನ್ನು ಅಭಯಾರಣ್ಯದ ಮಧ್ಯದ ಹಾದಿಯಲ್ಲೆಲ್ಲೋ ಕಂಡರೂ ದಾರಿ ಮಧ್ಯೆ ನೋಡುತ್ತಾ ನಿಂತ ಕೋತಿಗಳಿಗೋ, ಸಿಂಗಳೀಕಗಳಿಗೋ ಆಹಾರ ಹಾಕುವುದನ್ನು ಕಾಣಬಹುದು. ಕಾಡುಗಳೂ ಈಗ ಮೊದಲಿನಂತಿಲ್ಲದ ಕಾರಣ, ಅವುಗಳಿಗೆ ಆಹಾರ ಸಿಗುವುದು ಕಡಿಮೆಯಾಗಿದೆ, ಹಾಗಾಗಿ ಆಹಾರ ನೀಡುವುದು ಮಾನವೀಯ ಲಕ್ಷಣ ಎಂಬ ವಾದ ಮಾಡುವ ಮಂದಿ ಇದ್ದರೂ, ಸುಲಭವಾಗಿ ಸಿಗುವ ಆಹಾರದಿಂದಾಗಿ ಪ್ರಾಣಿ ಪಕ್ಷಿಗಳ ಒಂದು ವರ್ಗವೇ ಇಂದು ತಮ್ಮ ಕೆಲಸವನ್ನೇ ಬಿಟ್ಟು ವೃಥಾ ಶ್ರಮವಿಲ್ಲದೆ ದಕ್ಕುವ ಆಹಾರಕ್ಕೇ ಕಾಯುತ್ತಾ ಕೂರುವಂಥ ಮನಸ್ಥಿತಿಯನ್ನು ನಾವೇ ನಿರ್ಮಾಣ ಮಾಡಿದ್ದೇವೆ ಎಂಬುದೂ ಸತ್ಯವೇ.

ಇದನ್ನು ಹೇಳುತ್ತಾ ಹೇಳುತ್ತಾ ಇತ್ತೀಚೆಗೆ ನಡೆದ ಘಟನೆಯೊಂದು ನೆನಪಾಯಿತು. ಈ ಬೃಂದಾವನವೆಂಬ ಕೃಷ್ಣ ರಾಧೆಯರ ನಗರಿಯಲ್ಲಿ ಈಗ ವಾನರರದ್ದೇ ಸಾಮ್ರಾಜ್ಯ. ಮುಖದಲ್ಲಿ ಕನ್ನಡಕ ಹಾಕಿಕೊಂಡೋ, ಕೈಯಲ್ಲಿ ಆರಾಮವಾಗಿ ಮೊಬೈಲ್‌ ಹಿಡಿದುಕೊಂಡೋ ನೀವು ರಸ್ತೆಗಿಳಿದರೆ ಕಥೆ ಮುಗೀತು ಅಂತ ಅರ್ಥ. ನಿಮ್ಮ ಈ ಎಲ್ಲ ನಡವಳಿಕೆಗಳನ್ನು ಗಮನಿಸುತ್ತಿರುವ ವಾನರ ಸಾಮ್ರಾಜ್ಯವೇ ಅಲ್ಲಿದೆ. ಕಣ್ಣು ಮುಚ್ಚಿ ತೆಗೆಯೋದರೊಳಗೆ ನಿಮ್ಮ ವಸ್ತು ಮಾಯ.

ನೀವು ಚಾಪೆ ಕೆಳಗೆ ನುಸುಳಿದ್ರೆ ರಂಗೋಲಿ ಕೆಳಗೆ ನುಸುಳೋದು ಅವಕ್ಕೆ ಗೊತ್ತು. ಹೀಗೆ ಎಗರಿಸಿದ ಕನ್ನಡಕವನ್ನೋ, ಫೋನನ್ನೋ ಎತ್ತಿಕೊಂಡು ಮಂಗ ಎತ್ತರದಲ್ಲಿ ಕೂತು ಬಿಡುತ್ತದೆ. ಅಯ್ಯೋ ನನ್ನ ಫೋನು ಎಂದು ಗೋಳೋ ಎಂದು ಅತ್ತರೆ, ಆಗಲೇ ಇದರ ಅಸಲಿಯತ್ತು ಬಯಲಾಗುತ್ತದೆ. ಅಂಗಡಿಯಲ್ಲೊಂದು ಜ್ಯೂಸಿನ ಪ್ಯಾಕೆಟ್ಟು ಕೊಟ್ಟರೆ ಸಾಕು ನಿಮ್ಮ ವಸ್ತು ನಿಮ್ಮೆಡೆ ಎಸೆದು, ಜ್ಯೂಸು ಎತ್ತಿಕೊಂಡು ಓಡಿಬಿಡುತ್ತದೆ. ಹೀಗೆ ಕೋತಿಗೆ ಜ್ಯೂಸಿನ ಆಮಿಷ ತೋರಿಸಲುವುದು ಎಲ್ಲರಿಂದ ಸಾಧ್ಯವಿಲ್ಲ. ಅದಕ್ಕೂ ಅಲ್ಲಿ ಜನರಿದ್ದಾರೆ!

ಕೋತಿಗಳ ಜ್ಯೂಸು ಕುಡಿಯುವ ತಂತ್ರ ಇದಾದರೂ, ಫೋನೋ ಕನ್ನಡಕವೋ ಅದು ಎಸೆದ ರಭಸಕ್ಕೆ ಒಡೆಯದೆ ನಿಮ್ಮ ಕೈ ಸೇರಿದ್ದರೆ ಪುಣ್ಯ. ಇಲ್ಲವಾದಲ್ಲಿ ಜ್ಯೂಸೂ ಹೋಯಿತು, ಜ್ಯೂಸಿನ ಮೂಲಕ ಕನ್ನಡಕ/ಫೋನು ವಾಪಾಸು ಕೊಡಿಸಿದವನ ಕಿಸೆಗೆ ಹಾಕಿದ ದುಡ್ಡೂ ಹೋಯಿತು, ಜೊತೆಗೆ ಫೋನೂ ಹೋಯಿತು, ಅಷ್ಟೇ ಕಥೆ! ಮಂಗನೆದುರು ಮಂಗನಾಗುವುದೆಂದರೆ ಇದು. ಒಟ್ಟಾರೆ, ತಾನೇ ಮಾಡಿಕೊಳ್ಳುತ್ತಿರುವ ಎಡವಟ್ಟುಗಳಿಂದ ಮಾನವನೇ ಮುಂದೆ ಮಂಗ ಆಗುತ್ತಾನೆ ಬಿಡಿ. ಸಂಶಯವೇ ಇಲ್ಲ.

ಹಾಂ ಅಂದಹಾಗೆ, ಸೀಗಲ್‌ಗಳಿಗೆ ಆಹಾರ ಹಾಕಿದರೆ, ಪೊಲೀಸರು ಕಂಡರೆ ಬೈತಾರೆ ನೋಡಿ ಎಂದು ಅಂಬಿಗ ಪಯಣಿಗನೊಬ್ಬನಿಗೆ ಹೇಳುವುದನ್ನೂ ನೋಡಿದೆ. ಅಲ್ಲಿದ್ದ ಮೂರೂ ದಿನ, ಸೀಗಲ್‌ಗಳು ಮಾತ್ರ ಹೊಟ್ಟೆ ತುಂಬಿಸಿಕೊಂಡದ್ದು ನೋಡಿದೆವಷ್ಟೇ ಹೊರತು ಯಾರೊಬ್ಬನೂ ಬೈಗಳು ತಿಂದಿದ್ದು ನಾ ನೋಡಲಿಲ್ಲ!

‍ಲೇಖಕರು ರಾಧಿಕ ವಿಟ್ಲ

March 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: