ಈ ಸರ್ಗ ನರ್ಕ ಅನ್ನೋವು ಒಟ್ಟು ಎಷ್ಟು ಇರಬೋದು ?

ರಾಮಜ್ಜನ ಮನಿಯಾಗಿಂದ ಚಾ ಕುಡುದು ಬಂದು ಮತ್ತೆ ಕರಿಯವ್ವನ ಗುಡಿತಾವಿರ ಕಟ್ಟಿಗೆ ಬಂದು ಕುಂಟ ರಾಮಜ್ಜ, ಬುಡೇನಜ್ಜ, ಮೈಲವ್ವ ಈ ಮೂವರೊಳಗ ಮೈಲವ್ವ ಮಾತ್ರ ತನ್ನ ಬಲ ಮುಂಗೈಯನ್ನ ತನ್ನ ಹಣಿ ಮ್ಯಾಗ ಅಡ್ಡ ಹಿಡಿದು ಮುಗುಲು ಕಡಿಗೆ ನೋಡಿ ‘ದೊಡ್ಡ ದೊಡ್ಡ ಮಾಡು ಬರಾದೇನು ಬರ್ತಾವು, ಹಾಳಾದ್ ಗಾಳಿ ಹುಯ್ದು ನಮ್ ಊರ ಮ್ಯಾಗ ಹಂಗಾ ತೇಲಿಕಂಡು ನಮ್ ಕಣ್ಣಿಗೆ ಆಸಿ ಹಚ್ಚಿ ಹೊಂಟೊಕ್ಕಾವು. ನೋಡಿದಿಲ್ಲಲೋ ಸಾಬಣ್ಣಾ ?’ ಅಂತ ಕೇಳಿದ್ಲು.

shivu poster cut low1ಮೈಲವ್ವನ ಮಾತು ಕೇಳಿದ ಬುಡೇನಜ್ಜ ‘ನನ್ ಕಣ್ಣಿಗೇನು ಪರಿ ಬಂದಾವು ಅಂತ ಮಾಡಿದ್ದೇನಬೇ. ಆ ಮುಗಿಲಾಗಿನ ಮಾಡೇನು ನಮ್ ಕೈಯಾಗಿನವೇನು ? ಪ್ರಕೃತಿಯೊಳಗ ಏನೇನ್ ಅಲ್ಲೋಲ ಕಲ್ಲೋಲ ಅಕೈತೋ ಹಂಗ ಮಾಡೂ ತೇಲಿಕೊಂಡು ಹೊಕ್ಕಾವು ನಮಿಗೇನು ಗೊತ್ತಾಕ್ಕಾವು ಅಂಥಾ ಇದ್ಯಾ ಎಲ್ಲಾ?. ಹೌದಿಲ್ಲೋ ರಾಮಣ್ಣಾ ? ಅಂತ ಅಂದ.

ಬುಡೇನಜ್ಜನ ಮಾತಿಗೆ ರಾಮಣ್ಣ ‘ಅದ್ರ ಮನಿ ಹಾಳಾಗೋಗ್ಲಿ ಸುಮ್ನಿರು ಸಾಬಣ್ಣಾ’ ಅಂತೇಳಿ ಮೈಲವ್ವನ ಕಡಿ ತಿರುಗಿ ‘ಅದ್ಯಾಕಬೇ ಮೈಲವ್ವಾ ಇದ್ದಕ್ಕಿದ್ದಂಗನಾ ಯಾಕಾ ದೇವ್ರು ದಿಂಡ್ರು, ಸರ್ಗ ನರಕ, ಅಂತ ಏನೇನೋ ದೊಡ್ಡ ದೊಡ್ಡ ಮಾತು ಮಾತಾಡಕ ಹತ್ತಿದ್ದೀ ? ಇವತ್ತೇನರಾ ನಿನಿಗ್ಯ ಅದೆಂಥಾದ್ದೋ ಗ್ಯಾನೋದಯ ಅಂತಾರಲ್ಲ, ಅದಾಗೈತೇನು ನಿನಿಗ್ಯ ?’ ಅಂತ ಕೇಳಿದ.

ರಾಮಜ್ಜನ ಮಾತು ಕೇಳಿದ ಮೈಲವ್ವ ಅದೇನಾ ಹೇಳಾನು ಅಂತ ಹೊಂಟಿದ್ಳು, ಅಷ್ಟರಾಗಾ, ಬಡಗೇರ ಮಹೇಶವ್ವ ಬಗಲಾಗ ತನ್ನ ಮೊಮ್ಮಗಳನ್ನ ಎತ್ತಿಕೊಂಡು ಕರಿಯವ್ವನ ಗುಡಿಗೆ ಹಣ್ಣು ಕಾಯಿ ಕೊಡಾನು ಅಂತ ಬಂದಿದ್ಲು. ಕಟ್ಟಿ ಮ್ಯಾಗ ಕುಂತಿದ್ದ ಈ ಮೂವರನ್ನೂ ನೋಡಿದ ಕೂಡ್ಲೆ ‘ಬೇ ಮೈಲಮ್ಮಾ ಕ್ವಾ ಈಟು ನನ್ನ ಮಮ್ಮಗಳನ್ನ ಎತ್ತಿಗಂಡು ಆಡಿಸ್ತಿರು, ನಾನು ಕರಿಯವ್ವನ ಕಾಯಿ ಒಡಿಸ್ಕಂಡು ಬರ್ತೀನಿ.’ ಅಂತಂದು ತನ್ನ ಮೊಮ್ಮಗಳನ್ನ ಮೈಲವ್ವನ ಕೈಗೆ ಕೊಟ್ಟು ಗುಡಿ ಒಳಕ ಓದ್ಲು.

ಕರಿಯವ್ವನ ಗುಡಿಯೊಳಕ ಓದ ಮಹೇಶವ್ವನ್ನಾ ನೋಡಿಕಂತ ನಮ್ ಮೈಲವ್ವ ರಾಮಜ್ಜನ ಕಡಿ ತಿರುಗಿ ‘ನೋಡಿದೇನಲೋ ರಾಮಾ, ಬಗಲಾಗಿನ ಕರಿಯವ್ವನ ನನ್ ಮಡ್ಲಿಗೆ ಹಾಕಿ ಆ ಕಲ್ ಕರಿಯವ್ವಗ ಕಾಯಿ ಒಡಸಾಕ ಹೆಂಗ ಹೊಂಟ್ಲು ನಮ್ ಮಹೇಶವ್ವ ? ಜೀವ ಇರಾ ಕರಿಯವ್ವ ನಮ್ ಜೊತಿ ಕುಂತಾಳ, ಮಿಸಕಾಡದ ಕರಿಯವ್ವನತ್ರ ಅದೇನು ಬೇಡ್ಕಂತಾಳೊ ಏನ್ಕತಿನೋ. ಜನಕ್ಕ ಬುದ್ದಿ ಇಲ್ಲ ಅಂತ ನಾನ್ಯಾಕ ಹೇಳ್ತಿನಿ ಅನ್ನಾದು ಅರ್ಥಾತೇನು ಈಗರಾ ?’ ಅಂತ ನಕ್ಕೋತ ತಾನು ಎತ್ತಿಕಂಡಿದ್ದ ಮಹೇಶವ್ವನ ಮೊಮ್ಮಗಳನ್ನ ಆಡಿಸ್ಕೋತ ತಾನೂ ಕೂಸಾದ್ಲು.

Shivu Morigere-1 (1)

‘ನಮ್ ಜನಕ್ಕ ತಲಿಯೊಳಗ ಬುದ್ದಿ ಇದ್ದಿದ್ರ ನಮ್ ಊರ್ಯಾಕ ಹಿಂಗ ಇರತ್ತಿತ್ತೇಳಾ ನಿಮೌನು, ತತ್ತಾ ಇಲ್ಲಿ ಆ ಮಗಾನಾ.’ ಅಂತ ಮೈಲವ್ವನ ಕೈಯಿಂದ  ಆ ಕೂಸನ್ನ ತಾನು ಎತ್ತಿಕೋತ ಆಡ್ಸಕತ್ತಿದ್ದ, ಅಷ್ಟ್ರೊಳಗಾ ಗುಡಿ ಒಳಾಗಿಂದ ಬಂದ ಮೈಲವ್ವ ಒಂದು ಕೊಬ್ರಿ ಬಟ್ಲಾನ ಬುಡೇನಜ್ಜನ ಕೈಗೆ ಕೊಟಗಾಂತ  ರಾಮಜ್ಜನ ಕಡಿಗೆ ತಿರುಗಿ ತತ್ತಾರಪ್ಪೋ ನನ್ನ ಮೊಮ್ಮಗಳನ್ನಾ. ಅಲ್ಲಿ ಕೊಬ್ರಿ ಕೊಟ್ಟೀನೋಡಲ್ಲಿ ಬುಡೇನಜ್ಜನ ಕೈಗೆ, ಎಲ್ಲಾರು ಅದನ್ನ ಹೊಡ್ಕೊಂಡು ತಿನ್ರಿ.’ ಅಂತೇಳಿ ತನ್ನ ಮೊಮ್ಮಗಳನ್ನ ತಗೊಂಡು ತನ್ನ ಮನಿಕಡಿಗೊಂಟ್ಳು.

ಇಷ್ಟೊತ್ತು ಸುಮ್ಮನಿದ್ದ ಬುಡೇನಜ್ಜ, ‘ಅಲ್ಲಬೇ ಮೈಲವ್ವಾ, ನಾವಂತೂ ಎಲ್ಲಾ ದೇವ್ರನ್ನೂ ನಿವಾಳಿಸ್ತೀವಿ ಬದ್ಕಿರಾಗಂಟ ಯಾರಿಗೂ ಕೆಟ್ಟದ್ದ ಮಾಡದಂಗ ಕೈಲಾದ್ರ ಒಳ್ಳೇದು ಮಾಡಾದು, ಆಗಿಲ್ಲಾಂದ್ರ ಸುಮ್ಮನ ಕುಂತು ಕಾಲ ಕಳಿಯಾದು ಅಂತ ನಾವು ಬದ್ಕೀದ್ರ  ಈ ಹಲ್ಕಟ್ಟ ರಂಗ ನಮಿಗ್ಯಾ ನರಕ ಫಿಕ್ಸ್ ಅಂತ ಹೇಳಿ ಹೊಂಟ್ನಲ್ಲಬೇ ? ಅಂದಂಗ ಖರೇವಂದ್ರು ಈ ಸ್ವರ್ಗ ನರಕ ಅದಾವಂತಿಯೇನು ?’ ಅಂತ ತನ್ನ ಹಳೇ ಅನ್ಮಾನನ ಕೇಳಿದ.

ಬುಡೇನಜ್ಜನ ಮಾತು ಕೇಳಿದ ಮೈಲವ್ವ ‘ಅಲ್ಲಲೋ ಬುಡೇನಜ್ಜಾ, ಅದೇನಾ ಬರ್ ಬರ್ತಾ ಯಾರದಾ ಕುದ್ರಿ ಇನ್ನೇನಾ ಆತಂತೆ ಅನ್ನಂಗ ನಿನ್ ತಲಿಗೂ ರಾವ್ ಬಡೀತೇನು ? ಹಂಗಾರ ಹಿಂಗ ವಿಚಾರ ಮಾಡಾನು, ಎಲ್ಲೋ ಒಂದು ಕಡಿ ಅವೆಲ್ಡು ಇರಬೋದು ಅನ್ಕಣಾನು. ಇಲ್ಲೊಂದು ಅನ್ಮಾನ ಕಾಡತೈತಿ. ಏನ್ಪಾ ಅಂದ್ರ, ಈ ಸರ್ಗ ನರ್ಕ ಅನ್ನೋವು ಒಟ್ಟು ಎಷ್ಟು ಇರಬೋದು ? ಜಾತಿಗೊಂದಾ ? ಧರ್ಮಕ್ಕೊಂದಾ ? ಏರಿಯಾವೈಜ್ ಒಂದೊಂದಾ ? ಭಾಷಿಗೊಂದೊಂದಾ ? ಎಲ್ಲಾ ಜೀವಿಗಳಿಗೊಂದೊಂದಾ ? ಅಥವಾ ಬರೀ ಮನಿಷ್ಯಾರಿಗೆ ಬ್ಯಾರೆ, ಪ್ರಾಣಿ ಪಕ್ಷಿಗಳಿಗೆ ಬ್ಯಾರೆ ಬ್ಯಾರೆ ಅದಾವಾ ? ಅಷ್ಟೂ ಸ್ವರ್ಗಕ್ಕೆಷ್ಟೆಷ್ಟು ದೇವ್ರುಗಳು ? ಅಷ್ಟೂ ನರ್ಕಕ್ಕೊಬ್ನಾ ಯಮನಾ ? ಹಿಂಗ ನಮಿಗೆ ಕಾಡಾ ಹಿಂಡುಗಟ್ಟಲೆ ಪ್ರಶ್ನಿಗಳಿಗೆ ಉತ್ರಾ ಕೊಡಾಕ ಸ್ವತಾ ದೇವ್ರು ಅನ್ನಿಸ್ಕಂಡಾವ್ರಾ ಹೆದ್ರಿ ಮಾಯ ಆಗ್ಯಾರ. ಹಂಗೇನರಾ ಬ್ಯಾರೆ ಬ್ಯಾರೆ ಧರ್ಮಕ್ಕೊಂದು ಸರ್ಗ ನರ್ಕ ಅಂತಿದ್ರ ನಾವು ಅಲ್ಲೀ ಹಿಂಗಾ ಕುಂತು ಮಾತಾಡಾಕ ಯಾರ ಪರ್ಮಿಷನ್ ತಗಬೇಕಾ ಏನ್ ಕತೀನಾ ಹೋಗಾ ಮರಾಯಾ, ಒಂದು ತಿಳಿವಲ್ದು. ಹೇ ಬುಡೇನಜ್ಜ ಸುಮ್ನ ಹುಚ್ಚರಗತಿ ಯೋಚ್ನಿ ಮಾಡಾದು ಬುಟ್ಟು ಕಣ್ ತಗದು ಜಗತ್ತು ನೋಡು. ಹೆಂಗ್ ಬದ್ಕಬೇಕಾ ಹಂಗ ಬದ್ಕು’. ಅಂತಂದ್ಲು.

ಮೈಲವ್ವನ ಮೊಳ ಉದ್ದ ಭಾಷಣ ಕೇಳಿದ ರಾಮಣ್ಣ, ‘ಹೌದ್ದಬೇ ಮೈಲವ್ವಾ. ಎಲ್ಲಿ ಕಲ್ತಿದ್ದೆಬೆ ಈ ಇದ್ಯಾನ ? ಖಂಡೆಬಟ್ಟೆ ತಿಳ್ಕಂಡಿ ಬುಡು. ಅವೆಲ್ಲಾ ಹೊಟ್ಟಿಪಾಡಿಗೆ ಮೈ ಮುರುದು ದುಡಿಯಾಕ್ಕಾಗದಿರೋರು ಕಟ್ಟಿರೋ ಗಾಳಿ ಮಹಲ್ ಗಳು ಅದಾವು ಅದ್ರ ಬಗ್ಗೆ ನಮಿಗ್ಯಾಕ ಹಾಳಾದ ಚಿಂತಿ ? ನಿನ್ ಗಂಡ, ನನ್, ಹೆಂಡ್ರು, ಬುಡೇನಜ್ಜನ ಹಳೇ ಡೌವ್ವು, ಇವ್ರೆಲ್ಲಾ ಇಲ್ಲಿಂದ ಹೊಂಟೋದ್ರಲ್ಲಾ, ಒಬ್ರನ್ನಾ ನಮಿಗೆ ಮ್ಯಾಲ ಹಿಂಗ್ ಹಿಂಗೈತ್ರಪಾ ಪರಿಸ್ಥಿತಿ ಅಂತ ನಮಿಗೇನರಾ ಇಂಟಿಮೇಷನ್ ಕೊಟ್ಟಾರೇನು ? ಇಲ್ಲ ಹೌದಿಲ್ಲು. ಹಂಗಾರ ಇಷ್ಟತ್ತೂ ನಾವು ಮಾತಾಡಿದ್ದು ಹಸಿ ಹಸಿ ಸುಳ್ಳು ಗೊತ್ತಾತಿಲ್ಲು ? ಮಾತಾಡಾಕ ಬ್ಯಾರೆ ಇಸ್ಯಾನಾ ಇಲ್ಲೇನು ನಮಿಗೆ ? ನಾವು ಮಾತಾಡ ಮಾತುಗಳನ್ನೇನು ನಮ್ ತಾಲೂಕಿಂದ ಪಾರ್ಸಲ್ ತರ್ತೀವೇನು ಬಸ್ ಸ್ಟ್ರೈಕ್ ಐತಪ್ಪಾ, ನಮ್ ಕಡಿಗಿದ್ದ ಹಳೇ ಸ್ಟಾಕ್ ಎಲ್ಲಾ ಖಾಲಿ ಆಗೈತಿ ಇನ್ನೇನು ಉಳದಿಲ್ಲ ಮಾತಾಡಕಾ ಅನ್ನಾಕ ?’ ಅಂತ ಪ್ರಶ್ನಿ ಹಾಕಿದ.

durga godರಾಮಜ್ಜನ ಮಾತು ಕೇಳಿದ ಬುಡೇನಜ್ಜ ‘ಹೌದಲ್ಲಲೇ ರಾಮಾ, ಮೂರು ದಿನ ಬಸ್ ಡಿಪೋದಾಗ ತರ್ಬಿದ್ಕ, ಗೌರ್ಮೆಂಟ್ ಗಲ್ಲಾಕ್ಕ  ಏನ್ ಕಮ್ಮೀ ಲಾಸ್ ಆಗಿರಾಕ್ಕಿಲ್ಲ ಬುಡು, ಪ್ರವೇಟ್ನಾರಂತೂ ಜನಗಳ ಬಕ್ಕಣಾನ ಹರದು ಹುರುದು ಮುಕ್ಕಿಬಿಟ್ರು ಬುಡು. ಹಂಗೂ ಹಿಂಗೂ ಹಗ್ಗ ಜಗ್ಗಾಡಿ ಒಂದು ಮಾತುಕತಿಗೆ ಬಂದದ್ದು ದೊಡ್ಡ ಸರ್ಕಸ್ ಆದಂಗಾತು ಬುಡು’ ಅಂದ. ಬುಡೇನಜ್ಜ ಮಾತು ಮುಗಿಸದ್ರೊಳಗಾ ನಡುಕ ಬಾಯಿ ಹಾಕಿದ ಮೈಲವ್ವ ‘ಅದು ಹಾಳಾಗೋಗ್ಲಿ ಬುಡು ಸಾಬಣ್ಣಾ, ಇಲ್ಲಿ ನಮ್ ಉತ್ರ ಕರ್ನಾಟಕದ ಮಂದಿ ಒಂದು ವರ್ಸದಿಂದ ಹೋರಾಡಿದ್ರೂ ‘ಕುಡಿಯಾಕ ನೀರು ಕೊಡಕ್ಕಾಗಲ್ಲ ಬಿಡ್ರಿ ಅಂತ ಕೋರ್ಟು ಸುತ್ತಿಗಿ ಕುಟ್ಟೈತಂತ ಅದಕ್ಕಾ ನಮ್ ಮಂದಿ ರೊಚ್ಚಿಗೆದ್ದು ಹೆಂಗ ಬೆಂಕಿ ಹೊತ್ತಿ ಉರಿಯಾಕತೈತಿ ನೋಡಿದಿಲ್ಲು ? ಅದನ್ನ ನೋಡತಿದ್ದಂಗನಾ ನನ್ ಹೊಟ್ಟಿ ಉರಿತೈತೋ ಯಪ್ಪಾ, ನಮ್ ರಾಜ್ಯದಿಂದ ಗೆದ್ದು ಹೋದೋರಿಗೆ ಏನೂ ಮಾತಾಡ್ದಂಗ ಯಾರಾರ ಮಾಟ ಮಾಡ್ಸಿರಬೋದೇನು ?’ ಅಂತ ಅಂದ್ಲು.

ಮೈಲವ್ವನ ಮಾತು ಕೇಳಿದ ರಾಮಜ್ಜ ‘ಒಬ್ರ ಮ್ಯಾಗ ಒಬ್ರು ಕೆಸರು ಒಗದಾಡಾದು ಬುಟ್ಟು ನಮ್ ಮಂದಿ ಖಾಲಿ ಚರಿಗಿ, ಕೊಡಪಾನಗಳಿಗೆ ನೀರು ಕೊಟ್ರ ಮುಂದಕ ನಮ್ ಎದ್ರಿಗೆ ನಿಂದ್ರಾಕ ಮಕಾ ಇರತೈತಿ. ನೀವೇನ್ ಲೆಕ್ಕಕ್ಕಿಲ್ಲ ಬಿಡ್ರಿಪಾ ನಮಗ ಅಂದ್ರ, ಔರಾ ಅನುಭವಿಸ್ತಾರ ಬುಡು ಅದು ಮಾತ್ರ ಖಾಯಂ. ಇದಾ ಟೈಮಿಗೆ ನಮ್ ಸಿಎಂ ಮಗಗಾ ಉಸಾರಿದ್ದಿಲ್ಲಂತ ಅದ್ಯಾದ ದೇಸದ ಆಸ್ಪತ್ರಿಗೆ ಅಡ್ಮಿಟ್ ಆಗ್ಯಾರಂತ. ಮತ್ ಇಂಥಾ ಟೈಂನಾಗೂ ಒಮ್ಮಿ ಹೋಗಿ ಮಾತಾಡಿಸ್ಕಂಡು ಬರ್ಲಿಲ್ಲಾಂದ್ರ ಹೆಂಗೇಳು ? ಅಂದ್ಕಂಡು ಆ ದೇಸಕ್ಕ ಹೋದ್ರ, ‘ವಲ್ಲದ ಗಂಡಂಗ ಮೊಸ್ರಲ್ಲೂ ಕಲ್ಲು’ ಅನ್ನಾ ಗಾದಿಯಂಗ ಇರಾದ ಪಕ್ಸದೋರು ‘ರಾಜ್ಯಕ್ಕಿಂತ ಮಗನಾ ಹೆಚ್ಚು ಆದ್ರೇನು ಸಿಎಂ ಸಾಹೇಬ್ರಿಗೆ ?’ ಅಂತ ಕಡ್ಡಿ ಆಡ್ಸಾಕ ನೋಡೋರೂ ಅದಾರ. ಇದೆಲ್ಲಾ ಹೋಗ್ಲಿ ಬುಡು ಅತ್ಲಾಗ,  ಇದ್ರ ಬಗ್ಗೆ ಮಾತಾಡಾಕ ಕುಂತ್ರ ಒಂದು ವಾರ ಮಾತಾಡಿದ್ರೂ ಮುಗಿಯಲ್ಲ, ಇನ್ನೊಂದು ಒಳ್ಳೇ ಸುದ್ದಿ ನೋಡಿದ್ನಬೇ ಮೈಲವ್ವ ಇವತ್ತು ಪೇಪರ್ನಾಗ, ಗೊತ್ತೇನು ನಿನಗ ?’ ಅಂತ ಮೈಲವ್ವನ ಕೇಳಿದ್ಕ ಬುಡೇನಜ್ಜ ‘ಅದೇನು ಹೇಳಿಬುಡು ಮಾರಾಯಾ.’ ಅಂದ.

‘ಈ ನಮ್ ಕೇರಳದ ರಾಜಧಾನಿ ತಿರುವನಂತಪುರಂ ಊರಾಗ 52 ವರ್ಷದ ತಾಯಿಯ ಹಳೇ ಯಜಮಾನಗ ಮತ್ತೆ ಮಗಳಾ ಸೇರಿಸ್ಯಾಳ 32 ವರ್ಸ ಆದಮ್ಯಾಗ ಸೇರಿದ್ರೂ ಈಡು ಜೋಡು ಕತಿ ಓದಬೇಕಿತ್ತಬೇ ನೀನು ಭಾಳ ಮಜಾ ಐತಿ. ಎಂತೆಂಥಾ ಮಕ್ಕಳು ಹುಟ್ಟಾಕತ್ಯಾರ ನೋಡು ಜಗತ್ತಿನ್ಯಾಗ ?’ ಅಂದ. ರಾಮಜ್ಜನ ಮಾತು ಕೇಳಿದ ಮೈಲವ್ವ ‘ಲೋ ರಾಮಾ, ಆ ಇದಿಮುಂಡಿ ಯಾರ ಹಣಿಮ್ಯಾಗ ಏನು ಬರದಾಳೋ ಯಾರಿಗ್ಗೊತ್ತು ? ಆ ಕಥಿನ ನನಿಗ್ಯಾಕಲೋ ಹೇಳಿದಿ ?’ ಅಂತ ಕೇಳತಿದ್ದಂಗನಾ ನಡುಕ ಬಾಯಿ ಹಾಕಿದ ಬುಡೇನಜ್ಜ, ‘ಮತ್ತ ನಿನಗೇನರಾ ಯಾದರಾ ಹಳೇ ಲಾಟದಾಗ ಯಾದರಾ ಬ್ಯಾಲೆನ್ಸ್ ಸ್ಟೋರಿ ಐತೇನೋ, ಅಂತ ಕೇಳ್ಯಾನ ನೋಡಬೇ. ಇದ್ರ ಹೇಳ್ಬುಡು ಅತ್ಲಾಗ ಅದೂ ಒಂದು ಆಗೋಗ್ಬಿಡ್ಲಿ.’ ಅಂದದ್ದಕ್ಕ ಮೈಲವ್ವ ‘ಅಯ್ಯಾ ನಿಮ್ಮ ಮೂರ್ನೂ ಬಿಟ್ಟೋವಾ ‘ಹುಣಸಿ ಮರ ಮುಪ್ಪಾದ್ರೂ ಹುಳಿ ಮುಪ್ಪಲ್ಲ’ ಅನ್ನಾ ಮಾತು ನೆಪ್ಪಾತೇನು ? ಸುಮ್ಮನ ಮುಚ್ಕಂಡು ನಡಿರಿನ್ನು ಮನಿಗೆ ಅಲೆ ಇಳಿ ಹೊತ್ತಾತು. ಮುಂಜಾಲೆ ಸೇರಾನಂತೆ’ ಅಂತಂದು ಎಲ್ಲರೂ ನಕ್ಕೋತ ಅಲ್ಲಿಂದ ಔರೋರ ಮನಿಗಳಿಗೆ ಹೊಂಟೋದ್ರು.

‍ಲೇಖಕರು admin

July 29, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: