ಲೆಕ್ಕಾಚಾರ ಬದಲು !!
-ಸರೋಜಿನಿ ಪಡಸಲಗಿ
ನಿರಭ್ರ ಮೊಗ ಶುಭ್ರ ನಗು
ಕಣ್ಣು ಸ್ವಚ್ಛ ದಿಟ್ಟಿ ನಿಚ್ಚಳ
ಮಾತ್ರ ಮನದ ಒಳಪದರ
ಗೂಢತೆ ಅಸ್ಪಷ್ಟ ಪೊರೆಯಂತೆ
ಕಡಲಿನಲೆಯ ಏರಿಳಿತದಂತೆ
ಅಲ್ಲಲ್ಲಿ ಸುಳಿವ ಮೆಲ್ಲ ತಂಗಾಳಿ
ಗುಲ್ಲಿಲ್ಲದ ಬಲು ಮಂದ ಸೊಲ್ಲು
ಮಾತ್ರ ಎದೆಯಂಗಳದ ಸುಳಿ
ಗುರುತು ಮರೆತ ಒರತೆಯಂತೆ
ಮೌನ ತಬ್ಬಿದ ಧರೆಯೆದೆಯಂತೆ
ಗಳಿಗೆ ಗಳಿಗೆ ಹೊಸ ನೆರಳ ಹಾಸು
ನಲಿವು ಒಲವು ನೋವು ಅಳಲು
ಮಾತ್ರ ಅಲ್ಲಿ ಉತ್ಕಟ ಗೋಜಲು
ಯಾವಾಗ ಹೇಗೆ ಎಲ್ಲೆಲ್ಲಿ ಏನೇನು
ಸುಳಿವಿರದ ಮುಗಿಲ ಅಂಗಳದಂತೆ
ಬದಲಿಲ್ಲ-ಅಯೋಮಯ ಮಾಯೆ
ನಿರಾಕಾರ ಆಳವಿರದ ಅದೇ ಆಯ
ಮಾತ್ರ ಬಹುಶಃ ಲೆಕ್ಕಾಚಾರ ಬದಲು
ಅಷ್ಟೆ ಪಾರ್ಶ್ವಗಳ ಎಣಿಕೆ ಬದುಕಿನದೊ
ಇಲ್ಲ ಈ ಬಹುರೂಪಿ ಮನಸಿನದೊ!!!






0 Comments