ಸರ್ವಾಂಚಿ ಆಯಿ ಆಮಚಿ ಮುಂಬಯಿ

ರಾಜೀವ ನಾರಾಯಣ ನಾಯಕ
ಈ ಮಾಯಾನಗರಿಯಲ್ಲಿ ಕನಸು ಮತ್ತು ವಾಸ್ತವಗಳು ಸದಾ ಮುಖಾಮುಖಿಯಾಗಿರುತ್ತವೆ; ಕಹಾನಿ ಮತ್ತು ಹಕೀಕತ್ತುಗಳೂ ಕೂಡ! ಇಲ್ಲಿ ಪ್ರತಿಯೊಬ್ಬರೂ ಕತೆ ಕಟ್ಟಿಕೊಂಡೇ ಬಂದಿರುತ್ತಾರೆ. ಅಥವಾ ಬಂದ ಮೇಲೆ ಕಥಾವಸ್ತು ಆಗುತ್ತಾರೆ. ಯಾವುದೇ ಒಂದು ಸಾಮಾನ್ಯ ಫುಟಪಾತಿನಲ್ಲಿ ನಡೆದರೂ ಥರಾವರಿ ಕಹಾನಿಗಳನ್ನು ದಾಟಾಡಬೇಕಾಗುತ್ತದೆ. ನಾಲ್ಕು ಗೋಡೆಗಳ ನಡುವಿನ ಕಟ್ಟುಕತೆಗಳಿಗಿಂತ ಫುಟಪಾತುಗಳಲ್ಲಿ ಜರಗುವ ಸಂಗತಿಗಳು ಕಲ್ಪನೆಯನ್ನೂ ಮೀರಿರುತ್ತವೆ. ಇಲ್ಲಿಯ ಭಾಗದೌಡ್ ಜಿಂದಗಿಯಲ್ಲಿ ಪಂಚೇಂದ್ರಿಯಗಳು ಮನುಷ್ಯರನ್ನು ಮತಲಬಿಗಳನ್ನಾಗಿಸಿದರೂ ಕೆಲವು ಕಥಾಸನ್ನಿವೇಶಗಳು ಭಾವಲೋಕದಲ್ಲಿ ಸೂಕ್ಷ್ಮ ಗೀರುಗಳನ್ನೆಳೆದು ಅಂತ:ಕರಣದ ಸೆಲೆಯನ್ನು ಜೀವಂತವಾಗಿಡುತ್ತವೆ. ಕಿಟಕಿ ತೆರೆದರೆ ಇನ್ನೊಂದು ದೈತ್ಯ ಇಮಾರತೇ ಎದುರಾಗುವ ಕೋಣೆಯಲ್ಲಿ ಬದುಕಿನ ದರ್ಶನ ಸಾಧ್ಯವೇ? ಕತೆಗಳಿಗೆ ಅಪ್ಪಟ ವಾಸ್ತವದ ನೆಲಗಟ್ಟು ಪ್ರಾಪ್ತವಾಗಬೇಕಾದರೆ ಫುಟಪಾತಿಗಿಳಿಯಲೇಬೇಕು ಎಂಬ ನಂಬಿಕೆಯಲ್ಲಿ ಈ ಕತೆಗಾರನು ಕತೆಗಳನ್ನರಸಿ ತಿರುಗುವನು!
*
ಬಿಹಾರದ ಯಾವುದೋ ಹಳ್ಳಿಯವನಾದ ಹನ್ನೆರಡು ವರ್ಷದ ಬಾಲಕ ಮುನೀರ್ ಮುಂಜಾನೆ ಏಳಲು ಈಗ ಕೋಳಿ ಕೂಗುವುದಕ್ಕಾಗಿ ಕಾಯುವುದಿಲ್ಲ. ಫುಟಪಾತಿನಲ್ಲಿ ಮಲಗಿರುವ ಅವನಿಗೆ ನಸುಕೊಡೆಯುವ ಮೊದಲೇ ದಡಬಡಿಸುವ ಬೂಟುಕಾಲುಗಳ ಕಂಪನದಿಂದ ಬೆಳಗಾಗುತ್ತಿರುವುದು ತಿಳಿಯುತ್ತದೆ. ಈಗ ಅವನು ಏಳಲೇಬೇಕು. ಎದ್ದು ಇಸ್ಮಾಯಿಲ್ ಭಯ್ಯಾಗೆ ಕೆಲಸದಲ್ಲಿ ಮದತ್ ಮಾಡಬೇಕು. ಸಬ್ಜಿ ಕಾಟನಾ, ಬರ್ತನ್ ಧೋನಾ, ಪಾನಿ ಲಾನಾ ವಗೈರೆ. ಎರಡು ಬಿಲ್ಡಿಂಗುಗಳ ನಡುವಿನ ಕಿರಿದಾದ ಜಾಗದಲ್ಲಿ ಇಸ್ಮಾಯಿಲ್ ಗರಂಗರಂ ವಡಾ ಪಾವ್ ಮತ್ತು ಮಿಸಳ್ ಪಾವ್ ತಯಾರಿ ನಡೆಸಿದ್ದಾನೆ.
ಇಸ್ಮಾಯಿಲನದೂ ಒಂದು ಕತೆಯೇ! ಗಢಚೋಲಿ ಕಡೆಯವನಾದ ಅವನು ಮುಂಬೈಗೆ ಬರದಿದ್ದರೆ ಕತೆಯಾಗುತ್ತಿರಲಿಲ್ಲವೋ ಏನೋ. ನಾಲ್ಕು ವರ್ಷದವನಿದ್ದಾಗ ಅಂಬೇಡ್ಕರರ ಮಹಾಪರಿನಿರ್ವಾಣ ಮೇಳಕ್ಕೆ ಹೊರಟಿದ್ದ ಜನರೊಂದಿಗೆ ತಾನೂ ಮುಂಬೈಗೆ ಬಂದಿದ್ದ. ಶಿವಾಜಿ ಪಾರ್ಕಿನಲ್ಲಿ ಸೇರಿದ್ದ ಜನಸಾಗರದ ಗಚ್ಚಾಗಿಚ್ಚಿಯಲ್ಲಿ ಅದು ಹೇಗೋ ಅಪ್ಪನಿಂದ ತಪ್ಪಿಸಿಕೊಂಡನು. ಅತ್ತು ಅತ್ತು ದಾದರ್ ಸ್ಟೇಶನ್ನಿನ ಫ್ಲಾಟಪಾರ್ಮಿನಲ್ಲಿ ನಿದ್ದೆ ಹೋಗಿದ್ದ ಅವನನ್ನು ಯಾವನೋ ಎತ್ತಿಕೊಂಡು ಹೋಗಿ ಭಾವುಕಾ ಧಕ್ಕಾದ ಅಡ್ಡೆಯಲ್ಲಿ ಆಶ್ರಯ ನೀಡಿದ್ದನು. ಆ ಆಶ್ರಯದಾತನು ಅವನನ್ನು ಮರಳಿ ಕಳಿಸುವ ಪ್ರಯತ್ನ ಮಾಡಲಿಲ್ಲ. ”ಬೇಟಾ, ತೂ ಘೂಮ್ ಹುವಾ ನಹೀ. ಗರೀಬಿಕೇ ವಾಸ್ತೇ ತೇರೆ ಬಾಪ್ ಚೋಡ್ಕೇ ಗಯಾ ಹೈ’’ ಎಂದು ಹಳೆಯದೆಲ್ಲ ಮರೆತು ಹೋಗುವಂತೆ ಕೈಗೆ ಬರೆ ಹಾಕಿದ್ದ. ಇಸ್ಮಾಯಿಲ್ ಎಂಬ ಹೊಸ ಹೆಸರಿನೊಂದಿಗೆ ತನ್ನ ದಂಧೆಗೆ ಮದತ್ ಮಾಡಲು ಸಾಕಿಕೊಂಡಿದ್ದ. ಇಸ್ಮಾಯಿಲನಿಗೆ ಹನ್ನೆರಡು ವರ್ಷ ಆದಾಗ ಒಂದು ನಡುರಾತ್ರಿ ಆ ”ಆಶ್ರಯದಾತನನ್ನು” ಬೇರೆ ಗ್ಯಾಂಗನವರು ಕೊಚ್ಚಿ ಹಾಕಿದರು. ಇಸ್ಮಾಯಿಲ್ ಅಲ್ಲಿಂದ ಓಡಿ ಹಾಜಿಅಲಿ, ಖಾವು ಗಲ್ಲಿ, ಧಾರಾವಿ ಪ್ರದೇಶಗಳಲ್ಲಿ ಅನಾಮಿಕನಾಗಿ ತಿರುಗಿದ. ಎರಡನೆ ಬಾರಿಗೆ ಅವನು ತಬ್ಬಲಿಯಾಗಿದ್ದ. ಆದರೆ ಅಷ್ಟರಲ್ಲಿ ಮುಂಬೈ ಅವನಿಗೆ ಬದುಕುವುದನ್ನು ಕಲಿಸಿತ್ತು. ಶುರುವಿನಲ್ಲಿ ಏನೇನೋ ಮಾಡಿಕೊಂಡಿದ್ದವನು ಈಗ ವಡಾಪಾವ್ ದಂಧೆ ಶುರುಮಾಡಿದ್ದಾನೆ. ಮುನೀರನಂಥ ಬೇವಾರಿಸ್ ಹುಡುಗರಿಗೂ ಆಸರೆಯಾಗಿದ್ದಾನೆ.
ರಕ್ತದ ಮಡುವಿನಲ್ಲಿ ಆಶ್ರಯದಾತನನ್ನು ಕಂಡ ಆಘಾತದ ಕ್ಷಣದಲ್ಲಿ ಇಸ್ಮಾಯಿಲನಿಗೆ ತನ್ನ ಹಳೆಯ ಹೆಸರು ತುಕಾರಾಮ್ ತೋತ್ರೆ ಎಂಬುದು ನೆನಪಾಗಿತ್ತು. ಆದರೆ ತಂದೆ ತಾಯಿಯ ಹೆಸರಾಗಲೀ ಯಾವ ಊರು ಎನ್ನುವುದಾಗಲೀ ನೆನಪಾಗಲಿಲ್ಲ. ಹೀಗಾಗಿ ಮುಂಬಯಿಯಲ್ಲಿ ಬದುಕುಳಿಯುವುದು ಅನಿವಾರ್ಯವಾಯಿತು. ಪ್ರತಿವರ್ಷವೂ ಮಹಾಪರಿನಿರ್ವಾಣ ದಿನದಂದು ಶಿವಾಜಿ ಪಾರ್ಕಿನಲ್ಲಿ ಸಾವಿರಾರು ಜನರಿಗೆ ವಡಾಪಾವ್ ಹಂಚುತ್ತಾನೆ. ಆ ದಿನ ಮರಾಠಿಯಲ್ಲಿ “ಮಿ ತುಕಾರಾಮ್ ತೋತ್ರೆ’’ ಎಂದು ಬರೆದುಕೊಂಡ ಟಿ ಶರ್ಟ್ ಧರಿಸುತ್ತಾನೆ. ನೆರೆದ ಲಕ್ಷಾಂತರ ಜನರಲ್ಲಿ ತನ್ನ ಆಯಿಬಾಬಾ ಕೂಡ ಇರಬಹುದಾದ ಚೋಟಿಸಿ ಆಶಾ ಅವನಲ್ಲಿನ್ನೂ ಜೀವಂತವಾಗಿದೆ. ಇಸ್ಮಾಯಿಲನನ್ನು ಕತೆಯಾಗಿಸಬೇಕು ಎಂದುಕೊಳ್ಳುತ್ತಿರುವಾಗಲೇ ನನ್ನ ಕತೆ ಕೂಡ ಬರಿ ಎನ್ನುವಂತೆ ಮುನೀರ್ ಸುಮ್ಮನೇ ಮುಗಳುನಗುತ್ತಾ ಸುಳಿದಾಡುತ್ತಾನೆ. ಇಸ್ಮಾಯಿಲ್ ಮುನೀರನನ್ನು ತೋರಿಸುತ್ತಾ “ಸಾಬ್, ಅಬ್ ತಕ್ ಕಾ ಕಹಾನಿ ಮೇರೆ ಹಾತ್ ಪೆ ನಹೀ ಥಾ. ಲೇಕಿನ್ ಆಗೇ ಕಾ ಕಹಾನಿ ಹಮ್ ಖುದ್ ಲಿಖೇಂಗೇ. ಯೇ ಬಚ್ಚೆ ಈವನಿಂಗ್ ಸ್ಕೂಲ್ ಮೆ ಪಡಾಯಿ ಕರ ರಹೇ ಹೈ…ಯೇ ಸಬ್ ಕಹಾನಿಸೇ ನಿಕಲ್ಕೇ ಹಕೀಕತ್ ಬನೇಗಾ” ಎಂದ. ಕತೆಗಾರ ಹೆಮ್ಮೆಯಿಂದ ಇಸ್ಮಾಯಿಲನಿಗೆ ಸೆಲ್ಯೂಟ್ ಹೊಡೆದು ಮುನ್ನಡೆದ.
*
ಕಾರ್ಪರೇಟ್ ಆಫೀಸುಗಳು, ಬ್ಯಾಂಕುಗಳು, ಖಾಸಗಿ ಸಂಸ್ಥೆಗಳೇ ಇರುವ ಬಳ್ಳಾರ್ಡ್ ಎಸ್ಟೇಟ್ ಏರಿಯಾದಲ್ಲಿಯ ರಸ್ತೆಗಳು ಲಂಚ್ ಬ್ರೇಕಿನಲ್ಲಿ ವರ್ಣರಂಜಿತವಾಗಿರುತ್ತವೆ. ಹಲವು ಅಂತಸ್ತುಗಳ ಮೇಲೆ ತೂಗುವ ಆಫೀಸುಗಳ ಒಳಒತ್ತಡಗಳನ್ನು ಕಳಚಿಟ್ಟು ರಸ್ತೆಗಳ ಮೇಲೆ ನಡೆದು ಹಕ್ಕಿಗಳಂತೆ ಹಗುರಾಗುತ್ತಾರೆ. ಸುಮ್ಮನೇ ಒಂದು ರೌಂಡು ಹಾಕಿ ಚನ್ನಾ, ಭೇಲಪುರಿ, ಬಾಳೆಹಣ್ಣು ತಿಂದು, ಚಾಸ್ ಅಥವಾ ಜ್ಯೂಸ್ ಕುಡಿದು ಹೋಗುತ್ತಾರೆ. ರಸ್ತೆ ಭಾಜುಗಿರುವ ಕರೆಂಟ್ ಕಂಬದ ಕೆಳಗೆ ಬುಟ್ಟಿಯಲ್ಲಿ ಬಾಳೆಹಣ್ಣುಗಳನ್ನು ಸುಂದರವಾಗಿ ಜೋಡಿಸಿಟ್ಟುಕೊಂಡ ಆಕೆಗೆ ಎಲ್ಲರೂ “ಕೇಳಾ ಮಾಂಶಿ” ಎನ್ನುತ್ತಾರೆ. ಹಣೆಗೆ ದೊಡ್ಡ ಕುಂಕುಮ ಇಡುವ ಮರಾಠಿ ಹೆಣ್ಣು. ಹಿಂದಿಯಲ್ಲಿ ಮಾತಾಡಿದರೂ ಮರಾಠಿಯಲ್ಲೇ ಉತ್ತರಿಸುತ್ತಾಳೆ. ಅವಳಿಂದಾಗಿ ಬೇರೆ ಭಾಷೆಯವರು ಕೂಡ ಹರುಕುಮುರುಕು ಮರಾಠಿ ಕಲಿಯುವಂತಾಗಿದೆ. ಗಂಡ ದುಡಿದದ್ದೆಲ್ಲಾ ದಾರು ಕುಡಿಯಲು ಖರ್ಚು ಮಾಡುವುದರಿಂದ ಕಾಲೇಜಿನಲ್ಲಿರುವ ಮಗಳ ವಿದ್ಯಾಭ್ಯಾಸಕ್ಕಾಗಿ ಕಾಸು ಕೂಡಿಸಲು ಅವಳು ಬಾಳೆಹಣ್ಣು ಮಾರುತ್ತಾಳೆ.
ಮಾಣಗಾಂವ್ ಕಡೆಯ ಹಳ್ಳಿಯ ಹೆಂಗಸಾದ ಅವಳ ಖೋಟಾ ಅಲ್ಲದ ಪ್ರೀತಿಯ ಮಾತು ಎಲ್ಲರನ್ನೂ ಒಂದು ಆಪ್ತತೀರಕ್ಕೆ ಕರೆಯುತ್ತದೆ. ಆ ದಾರಿಯಲ್ಲಿ ಹಾದುಹೋಗುವ ಆಫೀಸರುಗಳು, ಕುರಿಯರ್ ಹುಡುಗರಂತಹ ಚಿಕ್ಕ ಬದುಕಿನವರು-ಎಲ್ಲರೂ ಬಾಯ್ತುಂಬಾ ”ಮಾಂಶಿ” ಎಂದು ಕರೆದು ತಮ್ಮ ಕರುಳಬಳ್ಳಿಗೆ ಸಂಬಂಧವೊಂದು ಸೋಂಕಿದ ಭಾವದಲ್ಲಿ ಮುಂದಕ್ಕೆ ಹೋಗುತ್ತಾರೆ. ಎಲ್ಲರೂ ತಿಂದೆಸೆದ ಸಿಪ್ಪೆಗಳನ್ನು ದೂರ ಕಸದಡಬ್ಬಿಗೆ ಹಾಕಿ ”ಸ್ವಚ್ಚ ಭಾರತ, ಸ್ವಚ್ಚ ಮುಂಬೈ’’ಗೆ ತನ್ನ ಕೊಡುಗೆ ನೀಡುತ್ತಾಳೆ…ಈ ಮಾಂಶಿಯ ಬಳಿ ಅದೆಷ್ಟೋ ಕತೆಗಳಿರಬಹುದು! ಆದರೆ ಎಲ್ಲರ ಹೊಟ್ಟೆ ತಂಪು ಮಾಡುವ ಮಾಂಶಿಯನ್ನು ಬಿರುಬಿಸಿಲಲ್ಲಿ ಕುಳ್ಳಿಸಿ ಕತೆ ಕೇಳುವುದು ತರವೇ? ಮೊದಲು ನೆರಳಿಗೆ ನಿಲ್ಲಿಸಬಹುದಾದ ದೊಡ್ಡ ಕೊಡೆ ಹುಡುಕಿ ತರಬೇಕು, ನಂತರವೇ ಎಲ್ಲ ಕತೆ ಕೇಳಬೇಕು; ಹತ್ತನೇ ಮಹಡಿಯಿಂದ ಕೆಳಗಿಳಿದು ಬಂದು ಮಾಂಶಿ ಜೊತೆ ಮನ್ ಕಿ ಬಾತ್ ಹೇಳಿಹೋಗುವ ಮಿನಿಸ್ಕರ್ಟಿನ ಆ ಖೂಬ್ ಸೂರತ್ ಹುಡುಗಿಯದೂ!
*
ಸುಂದರ ಸಾಲುಗಳಲ್ಲಿ ಹಲವು ಸ್ತರಗಳಲ್ಲಿ ಜೋಡಿಸಿಟ್ಟ ಮೂಸಂಬಿ ಹಣ್ಣುಗಳು. ಅದಕ್ಕೊಂದು ಬಿಳಿ ಹೂವಿನ ಮಾಲೆ. ಸ್ವಚ್ಚವಾಗಿ ತೊಳೆದಿಟ್ಟ ಜ್ಯೂಸ್ ಹಿಂಡುವ ಕೈ ಮಶೀನು. ಉತ್ತರ ಪ್ರದೇಶದ ಯಾವುದೋ ಗಾಂವ್ ನಲ್ಲಿ ಹತ್ತಾರು ಎಕರೆ ಹೊಲಗದ್ದೆಯಿರುವ ನಡು ವಯಸ್ಸು ದಾಟಿದ ಅಣ್ಣ ತಮ್ಮರಿಬ್ಬರು ಬದುಕಿಗೆ ಆಯ್ದುಕೊಂಡದ್ದು ಮುಂಬಯಿಯನ್ನು. ಊರಲ್ಲಿ ಬಾರೀಶ್ ಇಯಿಲ್ಲದಿದ್ದರೆ ಫಸಲ್ ಇಲ್ಲ. ಫಸಲ್ ಚೆನ್ನಾಗಾದರೆ ಭಾವ್ ಇಲ್ಲ. ಎಷ್ಟೋ ವರ್ಷದ ಸಾಲ ತೀರಿಸಲು ಸಾಧ್ಯವಾಗಲಿಲ್ಲ. ಜಿಂದಗಿ ಮುಶ್ಕಿಲ್ ಆಯಿತು. ಮಕ್ಕಳು ಬಂಬಯ್ಯಾ ಹೋಗುತ್ತೇವೆ ಎಂದಾಗ ಹೊಸತಾಗಿ ಶಾದಿ ಮಾಡಿಕೊಂಡ ಅವರನ್ನು ಕಳುಹಿಸಲು ಮನಸಾಗದೇ ತಾವೇ ಬಂದಿದ್ದಾರೆ. ಹಣ್ಣುಗಳ ಜ್ಯೂಸ್ ತೆಗೆದು ಅದಕ್ಕೆ ಮಸಾಲೆ ಹಾಕಿ ಕುಡಿಯಲು ನೀಡುವಾಗ ಒಂಥರಾ ಶಿಸ್ತು ಮತ್ತು ವಿನಮ್ರತೆ. ಹಾಗಾಗಿಯೇ ಎಲ್ಲರಿಗೂ ಪ್ರೀತಿಯ ಕಾಕಾ ಆಗಿದ್ದಾರೆ. ಮುಂಬಯಿಯ ಹತ್ತು ಬೈ ಹತ್ತು ಅಡಿ ಫುಟಪಾತು ಹತ್ತಾರು ಎಕೆರೆ ಹೊಲವಿರುವ ಈ ರೈತರನ್ನೂ ಅವರ ಕುಟುಂಬವನ್ನೂ ಆತ್ಮಹತ್ಯೆಯಿಂದ ಬಚಾವು ಮಾಡಿದೆ, ಕತೆಯಾಗುವುದರಿಂದಲೂ!
*
ಮಾಸಿದ ಅಂಗಿ ಮತ್ತು ಪ್ಯಾಂಟು. ಕೆದರಿದ ಕೂದಲು. ವಾರಗಟ್ಟಲೆ ಸ್ನಾನ ಮಾಡದಿರುವ ಎಲ್ಲ ಲಕ್ಷಣಗಳಿವೆ. ಬಾಹ್ಯಸ್ವರೂಪದಲ್ಲಿ ಮಲಯಾಳಿಯಂತೆ ಕಾಣಿಸುತ್ತಾನೆ. ಕೈಯಲ್ಲಿ ಡ್ರಾವಿಂಗ್ ಶೀಟು ಪೆನ್ಸಿಲ್ಲುಗಳನ್ನು ಹಿಡಿದು ಹುಚ್ಚನಂತೆ ಅಡ್ಡಾಡುತ್ತಿರುತ್ತಾನೆ. ಕಣ್ಣುಗಳಲ್ಲಿ ಮಾತ್ರ ಅದೇನೋ ಹೊಳಪು. ಬೇರೆ ಕಡೆ ಈ ವೇಷದ ವ್ಯಕ್ತಿಯನ್ನು ಕಂಡರೆ ಹಚಾಹಚಾ ಎನ್ನುತ್ತಿದ್ದರೇನೋ! ಆದರೆ ಈತ ಸುಳಿದಾಡುತ್ತಿರುವುದು ಮುಂಬಯಿಯ ಪ್ರಸಿದ್ಧ ಜಹಾಂಗೀರ ಆರ್ಟ್ ಗ್ಯಾಲರಿ ಮುಂದೆ. ಕಲಾವಿದರದು ಒಂದು ರೀತಿಯ ಹುಚ್ಚುಲೋಕ ಎನ್ನುವುದು ಅಲ್ಲಿ ಸ್ವೀಕೃತ ಭಾವ. ಇದೇ ಕಾಲಾಘೋಡಾ ಏರಿಯಾದಲ್ಲಿ ಪ್ರಸಿದ್ಧ ಕಲಾವಿದ ಎಮ್. ಎಫ್. ಹುಸೇನ್ ಬರಿಗಾಲಲ್ಲಿ ಅರೆ ಹುಚ್ಚನಂತೆ ಅಡ್ಡಾಡುತ್ತಿದ್ದುದನ್ನು ಈ ಕತೆಗಾರನೂ ಕಂಡಿದ್ದಾನೆ! ಪಿಕಾಸೋ ಪ್ರವಾಸಿಗರನ್ನು ಎದುರು ಕುಳ್ಳಿಸಿಕೊಂಡು ಹೂಬೆಹೂಬ್ ಭಾವಚಿತ್ರ ಬಿಡಿಸಿಕೊಡುತ್ತಾನೆ. ಕಲೆ ಮೂರ್ತ ರೂಪ ತಾಳಿದಾಗ ಅವನ ಅಸ್ತವ್ಯಸ್ತ ಬಾಹ್ಯರೂಪದೊಳಗೆ ಅದ್ಭುತ ಕಲಾವಿದನೊಬ್ಬ ಹೊರಬರಲು ಚಡಪಡಿಸುತ್ತಿರುವುದು ಅರಿವಾಗುತ್ತದೆ. ಚಿತ್ರ ಬರೆಸಿಕೊಂಡವರು ಕೊಟ್ಟಷ್ಟರಲ್ಲಿ ಅವನ ಹಸಿವು ನೀಗುತ್ತದೆ. ಕೆಲವೊಮ್ಮೆ ಅಮೂರ್ತ, ಅರ್ಧಂಬರ್ದ, ಕುರೂಪವೆನಿಸುವ ಚಿತ್ರಗಳನ್ನು ಗೀಚಿ ಎದುರು ಕೂತವರಿಂದ ಛಿ ಥೂ ಎನ್ನಿಸಿಕೊಳ್ಳುತ್ತಾನೆ.
ಕಾಲಾಘೋಡಾ ಏರಿಯಾ ಈ ಕತೆಗಾರನಿಗೂ ನೆಚ್ಚಿನ ತಾಣವಾದ್ದರಿಂದ ಜಹಾಂಗೀರ್ ಆರ್ಟ್ ಗ್ಯಾಲರಿಯ ಹೊರಗಿನ ಮೆಟ್ಟಿಲ ಮೇಲೆ ಇಬ್ಬರೂ ಮಾತಿಲ್ಲದೇ ಅದೆಷ್ಟೋ ಸಂಜೆಗಳನ್ನು ಕಳೆದಿದ್ದು ಇದೆ. ವಿಫಲ ಪ್ರೇಮದ ಹಿನ್ನಲೆ ಕಲ್ಪಿಸಿ ಇವನ ಬಗ್ಗೆ ಒಳ್ಳೆ ಮಸಾಲೆ ಕತೆ ಬರೆಯಬಹುದು ಅನಿಸುತ್ತದೆ. ಆದರೆ ಇಂದಿನ ಹುಡುಕಾಟವೇ ಕಟುವಾಸ್ತವದ ಕತೆಗಳು! ಮಾತನ್ನೇ ಆಡಲು ಮನಸ್ಸಿಲ್ಲದಿರುವಂತಹ ಈತನನ್ನು ಅರಿಯುವುದು ಹೇಗೆ? ಈತನ ಅಬಸ್ಟ್ರ್ಯಾಕ್ ಚಿತ್ರಗಳನ್ನು ನೋಡುವಾಗ ಇವನ ಅಮೂರ್ತ ಚಿತ್ತದಲ್ಲಿಯ ತಳಮಳಗಳು ಈ ಕತೆಗಾರನದೂ ಆಗಿರಬಹುದು ಎನಿಸುತ್ತದೆ. ವಾಸ್ತವ ವಿವರಗಳಲ್ಲಿ ಬದುಕಿನ ಆಂತರ್ಯವನ್ನು ಹುಡುಕಾಡುವ ಕತೆಗಾರ ಮತ್ತು ಅಂತರಂಗದ ಅಪೂರ್ಣತೆಯನ್ನು ರೇಖೆಗಳಲ್ಲಿ ಬಹಿರಂಗಗೊಳಿಸುವ ಪಿಕಾಸೋ ಇಂದೂ ಪರಸ್ಪರ ದಿಟ್ಟಿಸುತ್ತ ಕೂತಿದ್ದಾರೆ. ಕಲೆ ಮತ್ತು ಕತೆಗಳು ಬಿಂಬರೂಪದಲ್ಲಿ ಆವಿಯಾಗುತ್ತಿರುವಂತೆ ಅನಿಸಿ ಕತೆಗಾರನು ಸೋತು ದೃಷ್ಟಿಯನ್ನು ಬೇರೆಡೆ ತಿರುಗಿಸುತ್ತಾನೆ! ಆಗಲೇ ಆಧುನಿಕ ಫ್ಯಾಶನ್ನಿನಲ್ಲಿ ಆಕರ್ಷಕವಾಗಿ ಕಾಣುತ್ತಿದ್ದ ಆ ಮಹಿಳೆ ಕಂಡದ್ದು .
ರಿದಂ ಹೌಸ್ ಎದುರು ಸದ್ದಿಲ್ಲದೇ ನಿಂತ ಐಶರಾಮಿ ಕಾರಿನಿಂದ ಇಳಿದ ಅವಳು ಪಕ್ಕದ ಫುಟಪಾತಿನಲ್ಲಿ ನಡೆದು ಅರಳಿ ಮರದ ಕೆಳಗೆ ಬಂದಳು. ಅಲ್ಲಿ ಅವಳಿಗಾಗಿಯೇ ಕಾದಂತಿದ್ದ ಜ್ಯೋತಿಷಿಯಂತೆ ತಾಂತ್ರಿಕನಂತೆ ಕಾಣುವ ವ್ಯಕ್ತಿಯೊಂದಿಗೆ ಸರಬರದಲ್ಲಿ ಅದೇನೋ ಮಾತುಕತೆ ನಡೆದು ಆ ವ್ಯಕ್ತಿ ಕೈಯಲ್ಲಿಟ್ಟದ್ದನ್ನು ಹಣೆಗೊತ್ತಿಕೊಂಡು ಆಕೆ ಮತ್ತೆ ಕಾರಿನತ್ತ ನಡೆದಳು. ಇದೆಲ್ಲವೂ ಕತೆಗಾರನಿಗೆ ಒಂದು ಸಿನಿಮಾ ಶೂಟಿಂಗ್ ನಂತೆ ಕಂಡಿತು. ಕಾರು-ಬಂಗಲೆಯ ಭವ್ಯ ಬದುಕಿನ ಯಾವ ಒತ್ತಡಗಳು ಫುಟಪಾತಿನಲ್ಲಿ ಪರಿಹಾರಗಳನ್ನು ಹುಡುಕುತ್ತಿರಬಹುದು? ತಾಂತ್ರಿಕನಂತೆ ಕಾಣುವ ಆ ವ್ಯಕ್ತಿಯೂ ಬಂದ ಕಾರ್ಯ ಮುಗಿಯಿತು ಎಂಬಂತೆ ಟ್ಯಾಕ್ಸಿ ಹಿಡಿದು ಇನ್ನೊಂದು ದಿಕ್ಕಿನಲ್ಲಿ ಹೊರಟುಹೋದನು. ಇಡೀ ಸನ್ನಿವೇಶವನ್ನು ಭಾಷೆಯ ಮೂಲಕ ಅರ್ಥೈಸಲು ಕತೆಗಾರನಿಗೆ ಸಾಧ್ಯವಾಗದೇ ಆತನ ಕಲ್ಪನೆಯು ಕುದಿಯಲು ಶುರುವಾದ್ದರಿಂದ ಅವುಗಳಿಂದ ತಪ್ಪಿಸಿಕೊಳ್ಳಲು ಅಲ್ಲಿಂದ ಓಡಿದನು.
*
ವಿಟಿ ಸ್ಟೇಶನ್ನಿಗೆ ಬಂದಾಗ ಆ ರಾತ್ರಿಯಲ್ಲೂ ಪ್ಲಾಟಫಾರ್ಮ್ ನಲ್ಲಿ ಅಷ್ಟೊಂದು ಜನರನ್ನು ನೋಡಿ ಏನೋ ಗಡಬಡ್ ಆಗಿರುವುದು ಖಾತ್ರಿಯಾಯಿತು. ಹಾರ್ಬರ್ ಲೈನಿನ ಮಾಂಖುರ್ಡ್ ಸ್ಟೇಶನ್ನಿನ ಬಳಿ ಕುಚ್ ಲಫಡಾ ಆಗಿದೆಯಂತೆ. ಠೀಕ್ ಆಗಲು ಏಕ್ ದೋ ಗಂಟಾ ಬೇಕಂತೆ. ಕತೆಗಾರನಿಗೆ ಆ ಭೀಡ್ ನಲ್ಲಿ ನೂರಾರು ಕತೆಗಳು ನಿಟ್ಟುಸಿರು ಬಿಡುತ್ತಿರುವಂತೆ ಅನಿಸುತ್ತದೆ. ಯಾಕೋ ಕತೆಗಳಿಂದ ಹೈರಾಣಾದವನಂತೆ ಅಜಾದ್ ಮೈದಾನ ಕಡೆ ಹೋಗಿ ಫ್ಯಾಶನ್ ಸ್ಟ್ರೀಟಿನ ಪಕ್ಕ ನಡೆಯುತ್ತಾನೆ. ತಡರಾತ್ರಿ ವರೆಗೂ ಝಗಮಗಿಸುವ ಬೆಳಕಿನಲ್ಲಿ ಕನಸಿನ ಲೋಕವನ್ನೇ ಸೃಷ್ಟಿಸಿದ್ದ ಫ್ಯಾಶನ್ ಸ್ಟ್ರೀಟ್ ಕತ್ತಲಲ್ಲಿ ಕುರೂಪಿಯಾಗಿ ಮಲಗಿದೆ. ಈಗ ಕನಸು ಕಾಣುವುದು ಅಲ್ಲಿ ಕೆಲಸಕ್ಕಿದ್ದ ಕಿಶೋರರ ಸರದಿ.
ಅಲ್ಲಿಂದ ನಡೆದು ಓವಲ್ ಗ್ರೌಂಡನ್ನು ಸುತ್ತು ಹಾಕಿದ. ನಟ್ಟನಡುವೆ ಬಂದು ಕೂತು ಹಾಗೇ ಒರಗುವನು. ಹಗಲಿಗೆ ಕ್ರಿಕೆಟ್ಟು ಫುಟಬಾಲು ಆಡುವಾಗ ನೂರಾರು ಮಕ್ಕಳಿಂದ ತುಳಿಸಿಕೊಂಡ ಈ ಮೈದಾನವು ಈಗ ದಣಿವಾರಿಸಿಕೊಳ್ಳುತ್ತಿದೆ. ಮೈದಾನದ ಸುತ್ತಲೂ ತಾಳೆಮರಗಳ ಸಾಲು. ಅದರಾಚೆ ರಸ್ತೆ ದೀಪಗಳ ಸಾಲು. ಅದಕ್ಕೂ ಆಚೆ ಬಹುಮಹಡಿಗಳ ಚೌಕಾರದ ಗಾಜಿನ ಕಿಟಕಿಗಳು ಒಂದೊಂದಾಗಿ ಬೆಳಕು ನುಂಗಿಕೊಂಡು ಕತ್ತಲೆಯನ್ನು ಒಳಗೆಳೆದುಕೊಳ್ಳುತ್ತಿವೆ. ರಸ್ತೆಗಳೂ ಫುಟಪಾತುಗಳೂ ವಿರಮಿಸಿಕೊಳ್ಳುವ ತಯಾರಿ ನಡೆಸಿವೆ. ಫುಟಪಾತುಗಳ ಮೇಲೆ ನಿದ್ದೆಹೋದವರ ಹೃದಯ ಬಡಿತಗಳೂ, ಮನದ ಮಿಡಿತಗಳೂ ನೆಲದ ಕಂಪನದ ರೂಪದಲ್ಲಿ ಕತೆಗಾರನಿಗೆ ಗ್ರಹೀತವಾಗುತ್ತಿದೆ…ತಲೆದಾಟಿ ಹೋಗುವ ಸಾವಿರಾರು ಬೂಟುಗಾಲುಗಳ ನಡುವೆ ಮುನೀರನ ಮುಗುಳುನಗು ಇನ್ನೂ ಜಾಗರಣೆಯಲ್ಲಿರಬಹುದು.
ಕುಲುಕಾಡುವ ಕತ್ತಲಲ್ಲಿ ಕೇಳಾ ಮಾಂಶಿ ಗಂಡನನ್ನು ಅರಸುತ್ತಿರಬಹುದು. ತನ್ನ ಬರಡುಬಿದ್ದ ಹೊಲದಲ್ಲಿ ಗೋಧಿ ಬೆಳೆಯಲು ಮುಲುಕ್ ವಾಪಾಸಾಗುವ ಕನಸಿಗೆ ಕಾಕಾ ಜ್ಯೂಸು ಕುಡಿಸುತ್ತಿರಬಹುದು…ಓ ಮುಂಬಯಿ! ನಿನ್ನ ಒಡಲು ಅದೆಷ್ಟು ದೊಡ್ಡದು! ಯಾರನ್ನೂ ನೀನು ದೂರ ತಳ್ಳುವುದಿಲ್ಲ. ಮಾನವಂತರೂ ಮವ್ವಾಲಿಗಳೂ ಕೇಡಿಗಳೂ ಒಡನಾಡಿಗಳೂ ಯಾರನ್ನೂ! ಅನಾಥರೂ ನಿನ್ನಲ್ಲಿ ತಬ್ಬಲಿಗಳಲ್ಲ. ವ್ರತ ಮಾಡುವವರನ್ನು ಬಿಟ್ಟರೆ ಯಾರೂ ಉಪವಾಸ ಮಲಗುವುದಿಲ್ಲ. ಸೂರಿಲ್ಲದವರಿಗೆ ಫುಟಪಾತುಗಳನ್ನೇ ಸೆರಗಂತೆ ಹಾಸಿ ಸಹಸ್ರಾರು ಜನರಿಗೆ ಆಸರೆ ನೀಡುವ ನೀನು ಮಹಾತಾಯಿ. ಸಕಲರನ್ನೂ ಕನಸಿನ ತೊಟ್ಟಿಲಲ್ಲಿ ತೂಗುವ ಮಹಾಮಾಯಿ.
ಎದೆಭಾರ ಹೆಚ್ಚಾಗಿ ಕತೆಗಾರ ಎದ್ದು ನೋಟಬುಕ್ ಹೊರತೆಗೆದ. ಕಂಡ ಕಟುವಾಸ್ತವ ಚಿತ್ರಗಳೆಲ್ಲವೂ ಆ ಕ್ಷಣದ ಭಾವದ್ರವ್ಯವಾಗಿ ಹನಿಸಿದಂತೆ ’’ಸರ್ವಾಂಚಿ ಆಯಿ ಆಮ್ಚಿ ಮುಂಬಯಿ ” ಎಂದು ಬರೆದ. ಮನಸು ಚೂರು ಹಗುರಾಯ್ತಾದರೂ ಪೂರ್ತಿ ಸಮಾಧಾನ ಆಗಲಿಲ್ಲ. ಮಂದ ಬೆಳಕಲ್ಲೂ ಹೊಳೆಯುತ್ತಿದ್ದ ಈ ಸಾಲಿನಲ್ಲಿ ವಾಸ್ತವವೆಷ್ಟು ಕಲ್ಪನೆಯೆಷ್ಟು? ಹಕೀಕತ್ತನ್ನು ಹಕೀಕತ್ ಆಗಿ ದಾಖಲಿಸುವ ಭಾಷೆ ಯಾವುದು? ಉತ್ಕಟ ಭಾವದ ಅಭಿವ್ಯಕ್ತಿಯಲ್ಲಿ ಭಾಷೆ ತಾನು ಒಲಿದಂತೆ ನುಡಿಯುವುದೇ? ವಾಸ್ತವದ ಕಥಾಬಳ್ಳಿಗೂ ಚಿಗುರಲು ರೂಪಕದ ಚಪ್ಪರ ಅನಿವಾರ್ಯವೆ?…ವಿಚಾರಗಳು ದಣಿವು ತರಿಸುತ್ತಿವೆ ಎನಿಸಿ ಕತೆಗಾರ ಮತ್ತೆ ನೆಲಕ್ಕೆ ಒರಗಿದ. ಮೇಲೆ ಅನಂತ ಆಕಾಶ; ಚಲ್ಲಾಪಿಲ್ಲಿಯಾಗಿರುವ ಚುಕ್ಕಿಗಳನ್ನು ನೆಲಕ್ಕುದುರದಂತೆ ತಬ್ಬಿ ಹಿಡಿದಿದೆ. ಆಕಾಶದಲ್ಲೂ ಫುಟಪಾತುಗಳಿರಬಹುದು; ಅವ್ಯಕ್ತ ಸಂವೇದನೆಗಳೂ, ಅಪೂರ್ಣ ಕತೆಗಳೂ!
ಕತೆಗಾರನ ಕಣ್ಣುಗಳಲ್ಲಿ ತಾರೆಗಳು ಮಿಸುಕಾಡುತ್ತಿರುವಂತೆ ಕಂಡವು. ಬಹುಶ: ಪಿಕಾಸೋನ ಬಣ್ಣದ ಕುಂಚಗಳು ಆಕಾಶಕ್ಕೆ ನೆಗೆದು ನಕ್ಷತ್ರಗಳಿಗೆ ಮಿಂಚು ಹಚ್ಚುತ್ತಿರಬಹುದು!





thumba chennagide Sir………..
dhanyavad Paramesh bai…