ಈ ಊರಲ್ಲಿ ಲಂಚದ ಚೌಕಾಶಿ ಸ್ಟೈಲೇ ಬೇರೆ..!!

2016 ಫೆಬ್ರವರಿಗೆ ಸಿಕ್ಕ ಲೆಕ್ಕದಂತೆ 100 ಕ್ಕೆ 76 ಚಿಲ್ಲರೆ ಅಂಕ. ಆಫ್ರಿಕಾದಲ್ಲಿ ಒಂಭತ್ತನೇ ಅತೀ ಅಪಾಯಕಾರಿ ಮಹಾನಗರಿ. ಇದು ನುಂಬಿಯೋ ಜಾಲತಾಣವು ಲುವಾಂಡಾಕ್ಕೆ ಕೊಟ್ಟ ಕ್ರೈಂ ಇಂಡೆಕ್ಸ್ ಅಂಕ.

ಅಪರಾಧವೆಂಬುದು ಅಂಗೋಲಾ ರಾಜಧಾನಿಯಾದ ಲುವಾಂಡಾದಲ್ಲಷ್ಟೇ ಅಲ್ಲ. ಕಾಲಾಂತರದಲ್ಲಿ ಅದು ಕ್ರಮೇಣ ದೇಶದ ನರನಾಡಿಗಳಲ್ಲೆಲ್ಲಾ ತುಂಬಿಹೋಗಿದೆ. ಲುವಾಂಡಾದಲ್ಲಾಗುವ ಒಂದಿಷ್ಟು ಪ್ರಕರಣಗಳು ವರದಿಯಾಗುತ್ತವೆ ಎನ್ನುವುದನ್ನು ಬಿಟ್ಟರೆ ಲುವಾಂಡಾ, ಬೆಂಗೇಲಾಗಳಂತಹ ಶಹರಗಳಾಗಲೀ, ವೀಜ್, ಕಿಟೇಷ್ ಗಳಂತ ಹಳ್ಳಿಗಳಾಗಲೀ ತೀರಾ ಭಿನ್ನವೇನೂ ಇಲ್ಲ.

ಅಸಲಿಗೆ ಅಪರಾಧ ಎನ್ನುವುದು ಇಲ್ಲಿಯ ಸುರಕ್ಷಾ ಇಲಾಖೆಗಳಲ್ಲೇ ಗುಪ್ತಗಾಮಿನಿಯಂತೆ ಸೇರಿಹೋಗಿದೆ. ಅಂಗೋಲಾಕ್ಕೆ ನೀವು ಬರುವುದಾದರೆ ಅಷ್ಟು ಸುಲಭದಲ್ಲಿ ನಿಮಗೆ ವೀಸಾ ದಕ್ಕುವುದಿಲ್ಲ. ಏರ್-ಪೋರ್ಟುಗಳಲ್ಲಿ ಇಮಿಗ್ರೇಷನ್ ವಿಭಾಗದ ಪೋಲೀಸ್ ಅಧಿಕಾರಿಗಳು ಕಾರಣವೇ ಇಲ್ಲದೆ ನಿಮ್ಮಿಂದ ಹಣವನ್ನು ಕೀಳಬಲ್ಲರು. ನೀವು ಹೆಚ್ಚು ವಾದ ಮಾಡಲು ಹೋದರೆ ಅಥವಾ ಕಿತ್ತಾಟಕ್ಕಿಳಿದರೆ ನಿಮ್ಮ ಪ್ರಯಾಣದ ಉತ್ಸಾಹಕ್ಕೆ ಇವರುಗಳು ನಿರ್ದಾಕ್ಷಿಣ್ಯವಾಗಿ ತಣ್ಣೀರೆರಚಬಲ್ಲರು.

ಲುವಾಂಡಾ ಏರ್-ಪೋರ್ಟಿನಲ್ಲಿ ನಡೆಯುವ ಇಂಥಾ ಲಂಚದ ವ್ಯವಹಾರಗಳು ಅದೆಷ್ಟು ಜನಜನಿತವೆಂದರೆ ಜಾಗತಿಕ ಮಟ್ಟದ ಶಕ್ತಿಗಳು ಅಂಗೋಲಾದ ಸರಕಾರವನ್ನು ನೇರವಾಗಿ ಈ ಬಗ್ಗೆ ಟೀಕಿಸಿವೆ. ದುರಾಡಳಿತ ಮತ್ತು ಮಿತಿಮೀರಿದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ನಿಮ್ಮ ಸರಕಾರವು ವಿಫಲವಾಗಿದೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿವೆ. ಸದ್ಯ ಅಂಗೋಲಾ ಏರ್-ಪೋರ್ಟುಗಳಲ್ಲಿ ಅದ್ಯಾವುದೇ ಆಗಮನ-ನಿರ್ಗಮನಗಳಿರಲಿ, ಯಾವ ಹಂತದಲ್ಲಾದರೂ ಪೋಲೀಸಪ್ಪನೊಬ್ಬ ಬಂದು ಲಂಚ ಹೇಳುವುದು ಖಚಿತ ಎಂಬಂತಾಗಿದೆ. ಹೀಗಾಗಿ ನನ್ನಂಥವರು ಕೊಂಚ ಹೆಚ್ಚೇ ನಗದನ್ನು ಜೇಬಿನಲ್ಲಿಟ್ಟುಕೊಂಡು ಏರ್-ಪೋರ್ಟುಗಳಿಗೆ ಹೊರಡುತ್ತೇವೆ. ಯಾವುದಕ್ಕೂ ಇರಲಿ ಎಂದು!

ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಪ್ರಯಾಣಗಳನ್ನು ಮಾಡುವ ಪ್ರಯಾಣಿಕರಿಂದ ಡಾಲರುಗಳಲ್ಲಿ ದಕ್ಷಿಣೆಯನ್ನು ಕೇಳುತ್ತಾರೆ ಈ ಅಧಿಕಾರಿಗಳು. ಡಾಲರುಗಳಿಲ್ಲ ಎಂದಾದರೆ ಸಾಕಷ್ಟು ದೊಡ್ಡ ಮೊತ್ತದ ಕ್ವಾಂಝಾಗಳ ಬೇಡಿಕೆಯನ್ನೇ ಇಡಲಾಗುತ್ತದೆ. ನಾನು ಪ್ರತೀಬಾರಿ ಪ್ರಯಾಣಿಸುವಾಗಲೂ ನಾನೊಬ್ಬ ಬಡವ ಮಾರಾಯ್ರೇ ಎಂಬ ಅಮಾಯಕ ಮುಖಭಾವವನ್ನು ಇವರೆದುರು ಪ್ರದರ್ಶಿಸುತ್ತೇನೆ. ನನ್ನ ಹರಕುಮುರುಕು ಪೋರ್ಚುಗೀಸ್ ಭಾಷೆಯಲ್ಲಿ ”ನನ್ನಲ್ಲಿರುವುದು ಇಷ್ಟೇ. ಬೇಕಿದ್ದರೆ ತಗೊಳ್ಳಿ” ಎನ್ನುತ್ತೇನೆ. ನಂತರ ಅಲ್ಲೊಂದು ಚೌಕಾಶಿಯಾಗಿ ”ಇಷ್ಟನ್ನಾದರೂ ನೀವು ಕೊಡಲೇಬೇಕು” ಎಂದು ಆ ಅಧಿಕಾರಿಯು ನನಗೆ ಆದೇಶಿಸುತ್ತಾನೆ. ಕೊನೆಗೂ ನಾನೇ ಸೋಲಬೇಕಾಗುತ್ತದೆ. ವಿಪರ್ಯಾಸವೆಂದರೆ ರಸೀದಿ, ದಾಖಲೆ ಇತ್ಯಾದಿ ಯಾವುದೇ ಪ್ರಮಾಣಪತ್ರವಿಲ್ಲದೆ ಪೀಕಲಾಗುವ ಈ ಮೊತ್ತವು ನೇರವಾಗಿ ಅಧಿಕಾರಿಯ ಮತ್ತು ಅವರ ತಂಡದ ಜೇಬನ್ನು ಸೇರುತ್ತದೆ ಎನ್ನುವುದು ಸತ್ಯ. ಹೀಗೆ ಪ್ರಯಾಣಿಕರು ಕಾರಣವೇ ಇಲ್ಲದೆ ಲುವಾಂಡಾದ ಏರ್-ಪೋರ್ಟಿನಲ್ಲಿ ವಿನಾಕಾರಣ ನಷ್ಟ ಮಾಡಿಕೊಳ್ಳುತ್ತಾರೆ. ಅಂಥಾ ಅಧಿಕಾರಿಗಳು ನಿಮಗೆ ಸಿಕ್ಕಿಲ್ಲವೆಂದರೆ ನಿಮ್ಮ ದಿನವು ನಿಜಕ್ಕೂ ಶುಭದಿನವೇ.

ಇನ್ನು ಈ ಚೌಕಾಶಿ ನಡೆಯುವ ಕೋಣೆಯೂ ಕೂಡ ವಿಚಿತ್ರವಾಗಿದ್ದು ಅಂಗೋಲಾಕ್ಕೆ ಹೊಸದಾಗಿ ಬರುವ ಪ್ರಯಾಣಿಕರಲ್ಲಿ ದಿಗಿಲನ್ನುಂಟುಮಾಡಿದರೆ ಸಂಶಯವಿಲ್ಲ. ಪ್ರಯಾಣಿಕನನ್ನು ಚಿಕ್ಕ ಕೋಣೆಯೊಳಕ್ಕೆ ಏಕಾಂಗಿಯಾಗಿ ಕರೆದುಕೊಂಡುಹೋಗುವ ಪೋಲೀಸ್ ಅಧಿಕಾರಿ ಕೂಡಲೇ ಬಾಗಿಲನ್ನು ಮುಚ್ಚಿಬಿಡುತ್ತಾನೆ. ಪುಟ್ಟ ಡಬ್ಬದಂತಹ ಆ ಕೋಣೆಯಲ್ಲಿ ಹವೆಯಾಡಲು ಒಂದು ಕಿಟಕಿಯೂ ಇಲ್ಲ ಎಂದು ಶೀಘ್ರದಲ್ಲೇ ಪ್ರಯಾಣಿಕನಿಗೆ ಗೊತ್ತಾಗುತ್ತದೆ. ನಂತರ ಸಿನೆಮಾಗಳಲ್ಲಿ ಪೋಲೀಸ್ ತನಿಖೆಗಳನ್ನು ತೋರಿಸುವಂತೆ ಮೇಜಿನ ಎರಡು ಬದಿಯಲ್ಲಿ ಕುಳಿತು ಮಾತುಕತೆಯ ಆರಂಭವಾಗುತ್ತದೆ. ಇವುಗಳನ್ನೆಲ್ಲಾ ಮೊದಲೇ ಕಂಡಿರುವ ನನ್ನಂತಹ ಅನುಭವಿ ಪ್ರಯಾಣಿಕರು ಪೋಲೀಸರ ಜೊತೆ ಮೊಂಡುವಾದಕ್ಕಿಳಿಯದೆ ನಿಮಿಷಗಳೊಳಗಾಗಿಯೇ ಡೀಲ್ ಕುದುರಿಸಿ ಆದಷ್ಟು ಬೇಗ ಅಲ್ಲಿಂದ ಹೊರಬೀಳುತ್ತೇವೆ. ಇಂಥಾ ಜಾಗಗಳಲ್ಲಿ ಹೆಚ್ಚು ಸಮಯವನ್ನು ಕಳೆದಷ್ಟು ಸಮಸ್ಯೆಗಳೂ ಹೆಚ್ಚು. ಅಂದಹಾಗೆ ಡೀಲ್ ಕುದುರಿಸಬೇಕಾಗಿರುವುದು ನಮ್ಮ ಅನಿವಾರ್ಯತೆಯೇ ಹೊರತು ಆಯ್ಕೆಯಲ್ಲ ಎಂಬುದು ನೆನಪಿರಲಿ.

ಹೀಗೆ ಚೆಕ್ ಪೋಸ್ಟ್, ಠಾಣೆ, ವಿಮಾನ ನಿಲ್ದಾಣ, ಇಮಿಗ್ರೇಷನ್ ಹೀಗೆ ಎಲ್ಲೆಲ್ಲೂ ಲಂಚಕ್ಕಾಗಿಯೇ ಕಾದು ಕುಳಿತಿರುವ ಪೋಲೀಸರು ಅಂಗೋಲಾದಲ್ಲಿರುವ ಜನಸಾಮಾನ್ಯರನ್ನು ಬಾಣಲೆಯಿಂದ ಬೆಂಕಿಗೆ ದೂಡಿದ್ದಾರೆ ಎನ್ನುವುದು ಸತ್ಯ. ಹೀಗಾಗಿ ಅಂಗೋಲಾದ ಓಣಿಗಳಲ್ಲಿ ಹತ್ತು ಮಣ್ಣಿನ ಮನೆಗಳ ನಡುವೆ ಒಂದು ಗಾರೆ ಮಾಡಿರುವ, ಸುಣ್ಣಬಣ್ಣ ಬಳಿದ ಮನೆಯೊಂದು ನಿಮಗೆ ಕಾಣಸಿಕ್ಕರೆ ಅದು ಪೋಲೀಸರದ್ದೇ ಎಂದು ಖಾತ್ರಿ. ತನ್ನದು ಜುಜುಬಿ ಸಂಬಳ ಯಾವಾಗಲೂ ಗೊಣಗುವ ಪೋಲೀಸ್ ಅಧಿಕಾರಿ ಹೀಗೆ ಅಡ್ಡದಾರಿಗಿಳಿದು ಕಾಸು ಸಂಪಾದಿಸಿರುತ್ತಾನೆ. ಒಮ್ಮೆ ಹೀಗಾಯ್ತು. ನೀರಾವರಿ ಯೋಜನೆಯೊಂದರ ಬಗೆಗಿನ ಅಧ್ಯಯನಕ್ಕಾಗಿ ಜನಾಭಿಪ್ರಾಯವನ್ನು ಸಂಗ್ರಹಿಸಲು ಮನೆಮನೆಗೆ ತೆರಳುತ್ತಿದ್ದ ನಾನು ಹಲವು ಜನರನ್ನು ಭೇಟಿಯಾಗುತ್ತಿದ್ದೆ.

ಸಾಮಾನ್ಯವಾಗಿ ಎಲ್ಲಾ ಮುಖಗಳನ್ನು ನೆನಪಿನಲ್ಲಿಡುವುದು ಕಷ್ಟವಾದರೂ ಭಿನ್ನ ಎಂದೆನಿಸುವ ಒಂದಿಬ್ಬರು ಹೇಗೋ ಮನದಲ್ಲಿ ಉಳಿದುಹೋಗುವುದು ಸಹಜ. ಹೀಗೆ ಪೋಲೀಸ್ ಅಧಿಕಾರಿಯೊಬ್ಬರ ನಡುವೆ ನಾನು ನಡೆಸಿದ್ದ ಸಂವಾದವೊಂದು ನನಗೆ ನೆನಪಿತ್ತು. ಆತ ತನ್ನನ್ನು ತಾನು ಪ್ರಸ್ತುತಪಡಿಸಿದ ರೀತಿ ಮತ್ತು ಸುಸಂಸ್ಕøತನಂತೆ ಮಾತನಾಡುತ್ತಿದ್ದ ಪರಿಯು ನನ್ನನ್ನು ಆಕರ್ಷಿಸಿತ್ತು. ಅಲ್ಲದೆ ಯೋಜನೆಗೆ ಸಂಬಂಧಪಟ್ಟಂತೆ ಉಳಿದವರಿಗಿಂತ ಹೆಚ್ಚಿನ ಸ್ವಾರಸ್ಯಕರ ಮಾಹಿತಿಗಳನ್ನೂ ಕೂಡ ಈತ ನನಗೆ ಕೊಟ್ಟಿದ್ದ. ಮುಂದೆ ಇದೇ ಬೈರೋ (ಗ್ರಾಮ)ದಲ್ಲಿ ಇತರ ಮನೆಗಳಿಗೆ ನಾನು ಭೇಟಿ ಕೊಟ್ಟರೆ ಅಲ್ಲೂ ಈತ ಕಾಣಿಸಿಕೊಳ್ಳಬೇಕೇ? ನೀವು ಇಲ್ಲೇನು ಮಾಡುತ್ತಿದ್ದೀರಿ ಎಂಬ ನನ್ನ ಪ್ರಶ್ನೆಗೆ ಇದು ನನ್ನದೇ ಮನೆ ಎಂದು ಉತ್ತರಿಸಿದ್ದ ಆತ. ಮೇಲಾಗಿ ಆತ ತನ್ನ ನಾಲ್ಕನೇ ಮನೆಯನ್ನು ಬೈರೋದ ಮತ್ತೊಂದು ಭಾಗದಲ್ಲಿ ಕಟ್ಟಿಸುತ್ತಿದ್ದಾನೆ ಎಂಬ ಖಚಿತ ವರ್ತಮಾನವು ನನಗೆ ನನ್ನ ಪರಿಚಿತರೊಬ್ಬರಿಂದ ದೊರಕಿತ್ತು. ಅಂಗೋಲಾದಲ್ಲಿರುವ ಆರಕ್ಷಕರ ಧಿಮಾಕು ಅಂಥದ್ದು.

*********

ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಭಾಗಗಳಾದ ಬಸ್ಸು ಮತ್ತು ಟ್ಯಾಕ್ಸಿಗಳಲ್ಲಿ ವಿದೇಶೀಯರು ಓಡಾಡುವುದು ಇಲ್ಲವೇ ಇಲ್ಲವೆಂಬಷ್ಟು ಕಮ್ಮಿ. ಅತ್ತಿತ್ತ ಓಡಾಡುತ್ತಿರುವ ‘ಕಂದೊಂಗೈರು’ ಎಂಬ ಹೆಸರಿನ ನೀಲಿ-ಬಿಳಿ ಬಣ್ಣದ ಟ್ಯಾಕ್ಸಿಗಳು ಹೊರಗಿನಿಂದ ನೋಡಲು ಚೆನ್ನಾಗಿದ್ದರೂ ಒಳಭಾಗದಲ್ಲಿ ಕಳಪೆಯಾಗಿರುತ್ತವೆ. ಆದರೆ ಭಾರತೀಯ ಶಹರಗಳಲ್ಲಿ ಜನರನ್ನು ಉಪ್ಪಿನಕಾಯಿ ಹಾಕುವಂತೆ ಈ ಲೋಹದ ಡಬ್ಬದೊಳಗೆ ಪ್ರಯಾಣಿಕರನ್ನು ತೂರಿಸುವುದಿಲ್ಲ ಎಂಬ ಸಂಗತಿ ಮಾತ್ರ ಸಮಾಧಾನಕರವಾದದ್ದು. ನನ್ನನ್ನೂ ಸೇರಿದಂತೆ ಅಂಗೋಲಾದಲ್ಲಿ ನೆಲೆಸಿರುವ ಬಹುತೇಕ ವಿದೇಶೀಯರು ಖಾಸಗಿ ಕಾರು ಮತ್ತು ಚಾಲಕರನ್ನು ಹೊಂದಿರುತ್ತಾರೆಯೇ ವಿನಹ ಬಸ್ಸು, ಟ್ಯಾಕ್ಸಿಗಳ ಗೋಜಿಗೆ ಮರೆತೂ ಹೋಗಲಾರರು. ಹಾಗೆ ಒಂದು ಪಕ್ಷ ಹೋಗಬೇಕಾಗಿ ಬಂದರೂ ತಮ್ಮೊಂದಿಗೆ ಪೋರ್ಚುಗೀಸ್ ಭಾಷೆಯನ್ನು ಬಲ್ಲ, ಸ್ಥಳೀಯ ಪರಿಸರಗಳ ಬಗ್ಗೆ ಕೊಂಚವಾದರೂ ಜ್ಞಾನವಿರುವ ಒಬ್ಬ ಬಂಟನನ್ನು ಜೊತೆಯಲ್ಲಿ ಕರೆದುಕೊಂಡೇ ಹೋಗುವುದು ಇಲ್ಲಿಯ ಸಾಮಾನ್ಯ ಜಾಣನಡೆಗಳಲ್ಲೊಂದು.

ಇನ್ನು ಎಲೆಕ್ಟ್ರಾನಿಕ್ಸ್ ವಸ್ತುಗಳ ಬಗ್ಗೆ ಅಂಗೋಲನ್ನರಿಗಿರುವ ಆಕರ್ಷಣೆ ಮತ್ತು ಕೊರತೆಯು ಇವುಗಳನ್ನು ಹೇಗಾದರೂ ಮಾಡಿ ಸಂಪಾದಿಸಲೇಬೇಕೆಂಬ ಅಪಾಯಕಾರಿ ಹಟವನ್ನೂ ಕೆಲ ಧೂರ್ತರಲ್ಲಿ ತಂದಿಟ್ಟಿದೆ. ಹೀಗಾಗಿ ಇಂಥಾ ವಸ್ತುಗಳಿಗಾಗಿಯೇ ಕನ್ನ ಹಾಕುವವರು ಬಹುತೇಕ ಎಲ್ಲೆಲ್ಲೂ ಕಾಣಸಿಗುತ್ತಾರೆ. ಇಲ್ಲಿ ತೀರಾ ದುಬಾರಿಯಾಗಿರುವ ಎಲೆಕ್ಟ್ರಾನಿಕ್ಸ್ ವಸ್ತುಗಳು ಅಂಗೋಲನ್ನರಿಗೆ ಇನ್ನೂ ವಿಲಾಸಿ ವಸ್ತುಗಳೇ ಆಗಿವೆ. ಉದಾಹರಣೆಗೆ ಭಾರತದಲ್ಲಿ ಲಭ್ಯವಿರುವ ಸುಮಾರು ಹದಿನೈದು ಸಾವಿರ ರೂಪಾಯಿಗಳ ಮೌಲ್ಯದ ಒಂದು ಸ್ಮಾರ್ಟ್‍ಫೋನ್ ಅಂಗೋಲಾದಲ್ಲಿ 200,000 ಕ್ವಾಂಝಾಗಳಲ್ಲಿ ಬಿಕರಿಯಾಗುತ್ತದೆ.

200,000 ಕ್ವಾಂಝಾ ಎಂದರೆ ಅದು ಸುಮಾರು 1200 ಡಾಲರುಗಳಿಗೆ ಸಮ. ಸದ್ಯದ ಡಾಲರ್ ವಿನಿಮಯ ದರವನ್ನು ಪರಿಗಣಿಸಿದರೆ 1200 ಡಾಲರ್ ಮೊತ್ತವು ಸುಮಾರು 78,000 ರೂಪಾಯಿಗಳಿಗೆ ಸಮನಾಗುತ್ತದೆ. ಇನ್ನು ರಿಪೇರಿಯ ಆಯ್ಕೆಗಳು ಅಂಗೋಲಾದಲ್ಲಿ ಇಲ್ಲದಿರುವುದರಿಂದ ಸಣ್ಣ ರೇಡಿಯೋ, ಮಿಕ್ಸರ್ ಗಳಿಂದ ಹಿಡಿದು ದೊಡ್ಡ ಪ್ಲಾಸ್ಮಾ ಟಿ.ವಿ.ಗಳವರೆಗೂ ಎಲೆಕ್ಟ್ರಾನಿಕ್ಸ್ ಸಾಧನಗಳಲ್ಲಿ ಚಿಕ್ಕದೊಂದು ಸಮಸ್ಯೆ ಕಾಣಿಸಿಕೊಂಡರೂ ಅದನ್ನು ತಿಪ್ಪೆಗೆಸೆಯುವುದನ್ನು ಬಿಟ್ಟು ಬೇರೆ ಆಯ್ಕೆಗಳಿಲ್ಲ. ಹೀಗಾಗಿ ದುಬಾರಿ ಎಲೆಕ್ಟ್ರಾನಿಕ್ಸ್ ಸಾಧನಗಳು ವಿಲಾಸಿ ವಸ್ತುಗಳ ಪಟ್ಟಿಗೆ ಸೇರಿ ಹಲವು ಕಳ್ಳತನ, ಸುಲಿಗೆ, ದಾಳಿಗಳಿಗೆ ಮುಖ್ಯ ಕಾರಣವೆನಿಸಿದೆ. ಹಣವನ್ನು ಬಿಟ್ಟರೆ ಅಂಗೋಲಾದ ಅಪರಾಧಿಗಳು ಹೊಂಚುಹಾಕುವುದು ಎಲೆಕ್ಟ್ರಾನಿಕ್ಸ್ ಸಾಧನಗಳಿಗಾಗಿಯೇ ಎಂಬುದು ಇಲ್ಲಿ ಎಲ್ಲರಿಗೂ ಗೊತ್ತಿರುವ ಸಂಗತಿ.

ನಾನು ಆರು ವರ್ಷಗಳಿಂದ ಬಲು ಜತನದಿಂದ ಉಪಯೋಗಿಸುತ್ತಿದ್ದ ಸ್ಮಾರ್ಟ್‍ಫೋನೊಂದು ಏಕಾಏಕಿ ಮಾತನಾಡುವುದನ್ನು ನಿಲ್ಲಿಸಿದಾಗ ರಿಪೇರಿಗೆಂದು ನನಗೆ ಲುವಾಂಡಾದ ದಾರಿಯನ್ನು ತೋರಿಸಲಾಯಿತು. ಲುವಾಂಡಾ ಮಹಾನಗರಿಯಲ್ಲಿ ಕಂಪೆನಿಯ ಸರ್ವೀಸ್ ಸೆಂಟರ್ ಏನಾದರೂ ಇರಬಹುದೇ ಎಂದರೆ ಅಲ್ಲೂ ನನಗೆ ಕಾದಿದ್ದು ನಿರಾಶೆ. ಇನ್ನು ವೀಜ್ ನಲ್ಲಿರುವ ಎಲೆಕ್ಟ್ರಾನಿಕ್ಸ್ ಅಂಗಡಿಗಳ ಮಾಲಕರು ನನಗೆ ಶಿಫಾರಸ್ಸು ಮಾಡಿದ್ದ ಸ್ಥಳವನ್ನು ನೋಡಿದರೆ ನಾನು ಮೂರ್ಛೆ ಹೋಗುವುದಷ್ಟೇ ಬಾಕಿ. ಮಾರುಕಟ್ಟೆಯ ಮೂಲೆಯೊಂದರಲ್ಲಿ ನಾಲ್ಕೈದು ಸ್ಟೂಲುಗಳನ್ನಿಟ್ಟುಕೊಂಡು ಕೆಲ ತರುಣರು ಅಲ್ಲಿ ಮೊಬೈಲ್, ಲ್ಯಾಪ್ ಟ್ಯಾಪ್ ಇತರ ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ರಿಪೇರಿ ಮಾಡುವುದರಲ್ಲಿ ವ್ಯಸ್ತರಾಗಿದ್ದರು.

ಇನ್ನು ಸುತ್ತಮುತ್ತಲೂ ಇದ್ದ ಚಿಕ್ಕಪುಟ್ಟ ರೆಸ್ಟೊರೆಂಟುಗಳಿಂದ ತೂರಾಡಿ ಹೊರಬರುತ್ತಿದ್ದ ಕುಡುಕರು, ಸಿಕ್ಕಸಿಕ್ಕವರನ್ನು ಗೋಳುಹೊಯ್ದುಕೊಳ್ಳುತ್ತಾ ತಮಾಷೆ ನೋಡುತ್ತಿರುವ, ನಶೆಯಲ್ಲಿ ಮುಳುಗಿರುವ ಪಡ್ಡೆ ಹುಡುಗರು, ಈ ಜನಜಂಗುಳಿಯ ನಡುವಿನಲ್ಲೂ ಕಿವಿಯ ತಮಟೆಯು ಹರಿದುಹೋಗುವಷ್ಟು ದೊಡ್ಡದಾಗಿ ಧ್ವನಿವರ್ಧಕಗಳಿಂದ ಕರ್ಕಶ ಸಂಗೀತವನ್ನು ಹಾಕಿ ಯದ್ವಾತದ್ವಾ ಕುಣಿಯುತ್ತಿರುವ ಜನರು… ಹೀಗೆ ಎಲ್ಲಾ ರೀತಿಯಲ್ಲೂ ವಿಲಕ್ಷಣ ಪ್ರದೇಶವಾಗಿತ್ತದು. ದುಭಾಷಿಯೊಂದಿಗೆ ಬಂದಿದ್ದರೂ ನಾನು ಅಂಗೋಲಾದ ಅಪಾಯಕಾರಿ ಪ್ರದೇಶವೊಂದಕ್ಕೆ ಕಾಲಿರಿಸಿದ್ದೇನೆ ಎಂಬುದನ್ನು ಅರಿಯಲು ನನಗೆ ಹೆಚ್ಚಿನ ಸಮಯವೇನೂ ತಗುಲಲಿಲ್ಲ.

ಆದರೆ ಅಚ್ಚರಿಗಳು ಅಲ್ಲಿಗೇ ಕೊನೆಯಾಗಲಿಲ್ಲ. ನಿಮ್ಮ ಮೊಬೈಲನ್ನು ರಿಪೇರಿ ಮಾಡುತ್ತೇನೆ ಎಂದು ನನ್ನನ್ನು ಎರಡು ತಾಸು ಬಿಸಿಲಿನಲ್ಲಿ ಕೂರಿಸಿದ್ದ ತರುಣನೊಬ್ಬ ಕೊನೆಗೂ ತನ್ನಿಂದಾಗುವುದಿಲ್ಲವೆಂದು ಕೈಯೆತ್ತಿದ್ದ. ಈ ಮಧ್ಯದಲ್ಲೇ ಎಲ್ಲಿಂದಲೋ ಮತ್ತೊಬ್ಬ ಬಂದು ”ಇವನೇನು ಮಾಡೋದು ಮಣ್ಣಾಂಗಟ್ಟಿ? ಇದನ್ನು ನಾನು ರಿಪೇರಿ ಮಾಡುತ್ತೇನೆ” ಎಂದು ಗೊಣಗಿ ಹೇಳದೆಕೇಳದೆ ಮೊಬೈಲನ್ನು ಎತ್ತಿಕೊಂಡು ಹೋದ. ಹೀಗೆ ಏಕಾಏಕಿ ಬಂದು ವಕ್ಕರಿಸಿದ ಸ್ಪರ್ಧಿಯಿಂದ ಇಲ್ಲಿ ಆಗಲೇ ಕೆಲಸ ಮಾಡುತ್ತಿದ್ದವನಿಗೆ ರೇಗಿಹೋಯಿತು. ಇಬ್ಬರೂ ಈಗ ತಮ್ಮ ತಮ್ಮ ಕೆಲಸಗಳನ್ನು ಬಿಟ್ಟು ಶರಂಪರ ಕಿತ್ತಾಡತೊಡಗಿದರು. ಒಬ್ಬನ ಕೈಯಲ್ಲಿ ನನ್ನ ಫೋನಿನ ಬ್ಯಾಟರಿಯಿದ್ದರೆ ಇನ್ನೊಬ್ಬನ ಕೈಯಲ್ಲಿ ಉಳಿದ ಬಿಡಿಭಾಗಗಳಿದ್ದವು. ಮೊದಲೇ ಹುಚ್ಚರ ಸಂತೆಯಂತಿದ್ದ ಆ ಪ್ರದೇಶದ ಜನರಿಗೆ ಇದೊಂದು ಹೊಸ ತಮಾಷೆಯಾಗಿಬಿಟ್ಟು ಮುಷ್ಟಿಯುದ್ಧ ನೋಡಲು ಜನಜಂಗುಳಿಯೇ ಸೇರತೊಡಗಿತು.

ಕೊನೆಗೂ ಇಬ್ಬರನ್ನೂ ಸಮಾಧಾನಪಡಿಸಿ ಮೊಬೈಲನ್ನು ಇದ್ದ ಸ್ಥಿತಿಯಲ್ಲೇ ಮರಳಿ ಪಡೆಯುವಷ್ಟರಲ್ಲಿ ನನ್ನ ಮತ್ತು ದುಭಾಷಿಯ ತ್ರಾಣವೆಲ್ಲಾ ಉಡುಗಿಹೋಗಿತ್ತು. ಇನ್ನೆಂದೂ ಈ ಕಡೆ ತಲೆಹಾಕಲಾರೆ ಎಂಬ ಶಪಥದೊಂದಿಗೆ ನಾನು ಆದಷ್ಟು ಬೇಗ ಅಲ್ಲಿಂದ ಕಾಲ್ಕಿತ್ತೆ. ನಮ್ಮ ಮಜ್ದಾ ಕಾರು ಏದುಸಿರು ಬಿಡುತ್ತಾ ಹೇಗೋ ಆ ಅಪಾಯಕಾರಿ ಪ್ರದೇಶದಿಂದ ಹೊರಬಂದಿತು. ಮುಂದೆ ಆ ಮೊಬೈಲಿಗೆ ಮರುಜೀವ ಸಿಕ್ಕಿದ್ದು ಭಾರತಕ್ಕೆ ಮರಳಿದ ನಂತರವೇ. ”ಬಳಸಿದ ನಂತರ ಏನಾದರೂ ಸಮಸ್ಯೆಗಳು ಬಂದರೆ ಎಸೆಯೋದಷ್ಟೇ. ರಿಪೇರಿಯೆಂಬುದು ಇಲ್ಲಿಲ್ಲ”, ಎಂದು ವೀಜ್ ನಲ್ಲಿ ಅಚಾನಕ್ಕಾಗಿ ಸಿಕ್ಕಿದ ಗುಜರಾತಿ ವ್ಯಾಪಾರಿಗಳೊಬ್ಬರು ನನಗೆ ಇತ್ತೀಚೆಗೆ ಹೇಳಿದಾಗ ಈ ಘಟನೆಯನ್ನೇ ನಾನು ನೆನಪಿಸಿದೆ. ”ನಿಮ್ಮ ಎಲೆಕ್ಟ್ರಾನಿಕ್ಸ್ ಸಾಧನಗಳು ಸರಿಯಾಗದಿದ್ದರೂ ಓಕೇನೆ. ಆದರೆ ಅಂಥಾ ಜಾಗಗಳಿಗೆಲ್ಲಾ ಹೋಗಬೇಡಿ. ಗಂಭೀರ ಅಪರಾಧಗಳು ನಿತ್ಯವೂ ನಡೆಯುವ ಜಾಗಗಳು ಅವು”, ಎಂದು ನನಗೆ ಸಲಹೆಯನ್ನು ಕೊಟ್ಟಿದ್ದರು ಆತ.

ಆಫ್ರಿಕಾದ ಅತ್ಯಂತ ಅಪಾಯಕಾರಿ ನಗರಗಳ ಪಟ್ಟಿಗೆ ಲುವಾಂಡಾವೂ ಕೂಡ ಸೇರಿಕೊಂಡಾಗಿದೆ. ಅಮೆರಿಕವೂ ಸೇರಿದಂತೆ ಹಲವು ದೇಶಗಳ ರಾಯಭಾರಿ ಕಛೇರಿಗಳು ರಾಜಧಾನಿಯಲ್ಲಿರುವ ಇಂಥಾ ಅಪಾಯಕಾರಿ ತಾಣಗಳ ಬಗ್ಗೆ ತನ್ನ ದೇಶದ ನಾಗರಿಕರಿಗೆ ಮುನ್ನೆಚ್ಚರಿಕೆಯನ್ನು ಕೊಟ್ಟಿವೆ. ಹೆಸರಿಗೆ ತಕ್ಕಂತೆ ಹಾವಿನಂತಿರುವ “ಸರ್ಪಂಟೈನ್” ರಸ್ತೆ, ಸೆಂಬೆಝಾಂದಾ, ರೋಶ್ ಪಿಂಟೋ ಕೊಳಚೆ ಪ್ರದೇಶ ಮತ್ತು ಸ್ಥಳೀಯ ಮಾರುಕಟ್ಟೆಗಳು ಅಪರಾಧಗಳಿಂದಲೇ ಕುಖ್ಯಾತಿಯನ್ನು ಪಡೆದಿರುವ ಲುವಾಂಡಾದ ಕೆಲ ಭಾಗಗಳು.

ಸೂರ್ಯಾಸ್ತದ ನಂತರ ಲುವಾಂಡಾದ ಹೆಚ್ಚಿನ ಬೀದಿಗಳು ಅಪರಾಧಿಗಳ ಅಡ್ಡಾ ಆಗಿಬಿಟ್ಟರೆ ನೈಟ್-ಕ್ಲಬ್ಬುಗಳಂತಹ ಜಾಗಗಳಲ್ಲಿ ಅತ್ಯಾಚಾರ, ಕೊಲೆಗಳಂತಹ ಪೈಶಾಚಿಕ ಅಪರಾಧಗಳು ಘಟಿಸುತ್ತವೆ ಎಂದು ಅಂಕಿಅಂಶಗಳೇ ಹೇಳುತ್ತವೆ. ಡ್ರೈವ್ ಮಾಡುವ ಸಂದರ್ಭಗಳಲ್ಲಿ ಆಗಂತುಕರಿಗೆ ಲಿಫ್ಟ್ ಕೊಡುವುದು, ಜನಜಂಗುಳಿಯಿರುವ ಪ್ರದೇಶದಲ್ಲಿ ನಗದು ವಿನಿಮಯಗಳಲ್ಲಿ ತೊಡಗಿರುವುದು, ಟ್ರಾಫಿಕ್ ನಲ್ಲಿ ಸಿಲುಕಿರುವಾಗ ವಾಹನದ ಗಾಜುಗಳನ್ನು ತೆರೆದಿಟ್ಟಿರುವುದು, (ವಿದೇಶೀಯರು) ಒಬ್ಬಂಟಿಯಾಗಿ ಬೀದಿಗಳಲ್ಲಿ ಸುತ್ತಾಡುವುದು ಇತ್ಯಾದಿಗಳು ಅಪಾಯಕ್ಕೆ ಆಹ್ವಾನವನ್ನೇ ಕೊಟ್ಟಂತೆ. ಇನ್ನು ವಿದೇಶೀಯರ ಅಪಹರಣ ಯತ್ನ ಪ್ರಕರಣಗಳೂ ಕೂಡ ಲುವಾಂಡಾದ ಹಲವು ಭಾಗಗಳಲ್ಲಿ ಕಂಡುಬಂದಿರುವುದು ಅಂಗೋಲಾಕ್ಕೆ ಹೊಸದಾಗಿ ಬರುವ ವಿದೇಶೀಯರನ್ನು ಮತ್ತಷ್ಟು ಜಾಗರೂಕರನ್ನಾಗಿಸಿದೆ.

ಆಫ್ರಿಕಾದ ಇತರ ದೇಶಗಳಂತೆಯೇ ಲುವಾಂಡಾದಲ್ಲಾಗುವ ಅಪರಾಧಗಳ ಮಟ್ಟವನ್ನು ಪರಿಗಣಿಸಿರುವ OSAC (Overseas Security Advisory Council / OSAC) ಲುವಾಂಡಾವನ್ನು ಅಪರಾಧಗಳ ಆಧಾರದಲ್ಲಿ ತನ್ನ ‘Critical’ (ಗಂಭೀರ) ನಗರಗಳ ಪಟ್ಟಿಗೆ ಸೇರಿಸಿದೆ. ಅಂಗೋಲಾ ಎಂದರೆ ಲುವಾಂಡಾವಷ್ಟೇ ಅಲ್ಲ ಎಂಬುದು ಸತ್ಯ. ಜೊತೆಗೇ ಲುವಾಂಡಾವೆಂದರೆ ಅಪರಾಧ ಮಾತ್ರ ಎಂಬುದೂ ಕೂಡ ಸತ್ಯಕ್ಕೆ ದೂರವಾದ ಮಾತು. ಹಾಗೆಂದು ಅಂಗೋಲಾದಾದ್ಯಂತ ಆಗುತ್ತಿರುವ ಗಂಭೀರ ಅಪರಾಧಗಳನ್ನು, ವಿಲಕ್ಷಣ ಭಯದ ವಾತಾವರಣವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಹಾಗೆಯೇ ಪೋಲೀಸರ ನಿರ್ಲಕ್ಷ್ಯ, ನಿಷ್ಕ್ರಿಯತೆ ಮತ್ತು ಲಂಚಕೋರತನಗಳನ್ನೂ ಕೂಡ.

ಅಂಗೋಲಾ ತನ್ನ ವೀಸಾ ಪ್ರಕ್ರಿಯೆಯನ್ನು ಅದೆಷ್ಟು ಸಂಕೀರ್ಣಗೊಳಿಸಿದೆಯೆಂದರೆ ಯಾರೂ ತಮ್ಮತ್ತ ಬರುವುದೇ ಬೇಡ ಎಂಬ ಯೋಜನೆಯನ್ನು ಹಾಕಿರುವಂತಿದೆ ಅಂಗೋಲನ್ ಸರಕಾರ. ಇಂದು ಅಂಗೋಲಾ ಜಗತ್ತನ್ನು ತನ್ನತ್ತ ಕೊಂಚ ಸೆಳೆದಿದ್ದರೆ ಅದು ತನ್ನೊಡಲಿನಲ್ಲಿ ಹಿಡಿದಿಟ್ಟುಕೊಂಡಿರುವ ತೈಲದ ಕಾರಣದಿಂದ ಮಾತ್ರ. ಹೀಗಿರುವಾಗ ದಿನಗಳೆದಂತೆ ಹೆಚ್ಚುತ್ತಿರುವ ಅಪರಾಧಗಳು ಬೆರಳೆಣಿಕೆಯ ವಿದೇಶಿ ಹೂಡಿಕೆದಾರರನ್ನೂ ನಿರಾಶೆಗೀಡುಮಾಡಿದರೆ ಆಗಲಿರುವ ದೀರ್ಘಾವಧಿ ನಷ್ಟಗಳು ಅಂಗೋಲಾಕ್ಕೆ ದುಬಾರಿಯಾಗಿ ಪರಿಣಮಿಸಲಿರುವುದನ್ನು ಯಾರೂ ತಪ್ಪಿಸಲಾರರು.

ಅದೇನೇ ಇರಲಿ. ಸ್ವತಃ ಕವಿಯೂ, ಅಂಗೋಲಾದ ಪ್ರಥಮ ರಾಷ್ಟ್ರಪತಿಯೂ ಆಗಿದ್ದ ಡಾ. ಆಗಸ್ಟಿನೋ ನೇಟೋರ ಕನಸಿನ ಅಂಗೋಲಾ ಇದಲ್ಲ ಎಂಬುದನ್ನು ನಾನು ಖಡಾಖಂಡಿತವಾಗಿ ಹೇಳಬಲ್ಲೆ. ದೇಶಕ್ಕೆ ದಕ್ಕಿರುವ ಹೊಸ ಮುಂದಾಳತ್ವವಾದರೂ ಪರಿಸ್ಥಿತಿಯನ್ನು ಕೊಂಚ ಸಹನೀಯಗೊಳಿಸಲಿ ಎಂಬ ನಿರೀಕ್ಷೆ ನನ್ನದು.

**********

‍ಲೇಖಕರು Avadhi GK

February 6, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Lalitha siddabasavayya

    ಪ್ರಸಾದ್ ಅವರೆ , ಈ ಮಾಲಿಕೆಯ ಎಲ್ಲ ಲೇಖನಗಳನ್ನು ಕಾಯ್ದು ಓದಿದ್ದೇನೆ. ಇಂದಿನ ಈ ಲೇಖನ ನೆನೆದರೇ ನಡುಕ ಬರುವಂತಿದೆ. ನಮ್ಮಂತಹ ಮನುಷ್ಯ ಜೀವಗಳೇ ಅಲ್ಲೂ ವಾಸಿಸುತ್ತಿರುವುದು. ಹೇಗಾದರೂ ಈ ಭೂನರಕದಿಂದ ಅವರು ಹೊರಬಂದಾರೇ ?
    ಅಂಗೋಲಾಕ್ಕೆ ಒಬ್ಬ ಪ್ರತ್ಯೇಕ ದೈವಖಾತೆ ತೆರೆಯಬೇಕು ಮೇಲೋಕದಲ್ಲಿ ! ಕನಿಷ್ಠ ಒಂದಿಪ್ಪತ್ತಾದರೂ ಅವತಾರಗಳೆತ್ತಿ ಬರುವ ವ್ಯವಸ್ಥೆ ಯಾಗಬೇಕು.

    ಪ್ರತಿಕ್ರಿಯೆ
    • Prasad

      ತುಂಬಾ ಸತ್ಯವಾದ ಮಾತು ಲಲಿತಾರವರೇ… ಅಂಗೋಲಾ ಸಾಗಬೇಕಾದ ದೂರವು ನಿಜಕ್ಕೂ ಬಹಳಷ್ಟಿದೆ…

      ಪ್ರತಿಕ್ರಿಯೆ
  2. Krishna

    Many people go and post experiences in USA, UK, France etc. But Angola.. Very few people get to go. So it is very unique article. Enjoyed every bit of it.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: