ಅಂಗೋಲಾದಲ್ಲಿನ 'ಸುರತ್ಕಲ್ ಎಕ್ಸ್ ಪ್ರೆಸ್'

ಸತತ ೫೦ ವಾರಗಳ ಕಾಲ ಮೂಡಿಬಂದ ‘ಹಾಯ್ ಅಂಗೋಲಾ’ ಅಂಕಣ ಮುಕ್ತಾಯವಾಗಿದೆ.
ಪ್ರಸಾದ್ ನಾಯ್ಕ್ ಅಂಗೋಲಾದಿಂದ ತುಂಬು ಪ್ರೀತಿಯಿಂದ ಬರೆದ ಅಂಕಣ ಇದು.
ಈಗ ಅವರು ಭಾರತಕ್ಕೆ ಮರಳುವುದರೊಂದಿಗೆ ಅಂಗೋಲಾ ಅಂಕಣವೂ ಮುಗಿತಾಯ ಕಂಡಿದೆ.
‘ಬಹುರೂಪಿ’ಯಿಂದ ಈ ತಕ್ಷಣದಲ್ಲೇ ‘ಹಾಯ್ ಅಂಗೋಲಾ ಪುಸ್ತಕ ರೂಪದಲ್ಲಿ ನಿಮ್ಮೆದುರು ನಿಲ್ಲಲಿದೆ.
ಅದನ್ನೂ ನೀವು ಈ ಅಂಕಣವನ್ನು ಸ್ವಾಗತಿಸಿದ ರೀತಿಯೇ ಬರಮಾಡಿಕೊಳ್ಳಿ
ಈ ಕೃತಿಗೆ ಬರೆದ ಪರಿಚಯ ಇಲ್ಲಿದೆ-

ಜಿ ಎನ್ ಮೋಹನ್ 
ಹೋದೆಡೆಯಲ್ಲಾ ಸಂಗ್ರಹಿಸಿದ ಬ್ರೋಚರ್, ಬರೆಯಲು ಕುಳಿತಾಗ  ಒಂದಿಷ್ಟು ಗೂಗಲ್ ಹುಡುಕಾಟ, ಇದರ ಜೊತೆಗೆ ತಿಂದದ್ದು ಉಂಡದ್ದು ಸೇರಿಸಿದರೆ ಒಂದು ಪ್ರವಾಸ ಕಥನ ಸಿದ್ಧ ಎನ್ನುವ ಕಾಲದಲ್ಲಿ ಪ್ರಸಾದ್ ನಾಯ್ಕ್ ‘ಹಾಯ್ ಅಂಗೋಲಾ’ ಹಿಡಿದು ನಿಂತಿದ್ದಾರೆ. ಒಂದು ಪ್ರವಾಸ ಕಥನ ಹೇಗಿರಬೇಕು ಎನ್ನುವುದಕ್ಕೆ ಮಾದರಿಯಾಗುವಂತೆ ಈ ಅಂಗೋಲಾ ಕಥನ ಮೂಡಿ ಬಂದಿದೆ. ದೇಶ ಅಂದರೆ ಅಮೆರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಎಂದಷ್ಟೇ ಕಾಣಿಸುತ್ತಿರುವ ಪ್ರವಾಸ ಕಥನಗಳ ಸಾಲಿನಲ್ಲಿ ಮೊಟ್ಟಮೊದಲ ಬಾರಿಗೆ ಅಂಗೋಲಾ ಸೇರಿಕೊಳ್ಳುತ್ತಿದೆ. ಕ್ಯೂಬಾ ಎಲ್ಲಿದೆ? ಎಂದು ನಾನು ಕ್ಯೂಬಾಗೆ ಹೊರಟಾಗ ಕೇಳಿದಂತೆಯೇ ಪ್ರಸಾದ್ ಗೆ ಅಂಗೋಲಾ ಎಲ್ಲಿದೆ ಎಂದು ಕೇಳಿದವರೂ ಇದ್ದಾರೆ. ಅಮೆರಿಕಾ ಯಾವುದನ್ನು ದೇಶ ಎಂದು ಭಾವಿಸಿದೆಯೋ ಅದನ್ನು ಮಾತ್ರ ದೇಶ ಎಂದು ನಂಬಿಕೊಳ್ಳುವ ಕಾಲಘಟ್ಟದಲ್ಲೇ ಇದ್ದೇವೆ. ಇದಕ್ಕೆ ಕಾರಣ ‘ಅಮೆರಿಕಾ ಕನ್ನಡಕ’ ಹಾಕಿಕೊಂಡ ಮಾಧ್ಯಮಗಳು. ಯಾವುದೇ ಎರಡು ದೇಶಗಳ ಮಧ್ಯೆ ಅಮೆರಿಕಾದ ಪತ್ರಿಕಾ ಗೋಡೆಗಳಿವೆ. ಹಾಗಾಗಿಯೇ ಅಮೆರಿಕಾದ ತಾಳಕ್ಕೆ ಕುಣಿಯುವ, ಮಣಿಯುವ ದೇಶಗಳನ್ನು ಹೊರತುಪಡಿಸಿದರೆ ಈ ಮೀಡಿಯಾ ಗೋಡೆಗಳ ಆಚೆ ಇನ್ನೊಂದು ದೇಶ ಕಾಣುವುದಿಲ್ಲ. ಹಾಗೆ ಕತ್ತಲಲ್ಲೇ ಉಳಿದುಹೋದ ದೇಶವೆಂದರೆ ಅಂಗೋಲಾ.
ಪ್ರಸಾದ್ ನಾಯ್ಕ್ ಗೆ ಅಂಗೋಲಾ ಆಯ್ಕೆಯಾಗಿರಲಿಲ್ಲ. ಒಬ್ಬ ನಿಪುಣ ಎಂಜಿನಿಯರ್ ಗೆ ಕೇಂದ್ರ ಸರ್ಕಾರದ ಜಲ ಸಂಪನ್ಮೂಲ ಇಲಾಖೆ ಕೆಲಸಮಾಡಲು ತೋರಿಸಿದ ಜಾಗ ಮಾತ್ರ ಆಗಿತ್ತು. ಆದರೆ ಪ್ರಸಾದ್ ನಾಯ್ಕ್ ಅಂಗೋಲಾದ ಆತ್ಮವನ್ನು ಹೊಕ್ಕಿರುವ ರೀತಿ ಎಲ್ಲರಿಗೂ ಬೆರಗುವೊಡೆಸುವಂತಿದೆ. ಈ ಕಾರಣಕ್ಕಾಗಿಯೇ ನನಗೆ ಪ್ರಸಾದ್ ನಾಯ್ಕ್ ಇಷ್ಟ. ಯಾವುದೋ ದೇಶ, ಯಾವುದೋ ಊರು, ಯಾವುದೋ ಭಾಷೆ ಎಂದು ಪ್ರಸಾದ್ ನಾಯ್ಕ್ ಕೊರಗುತ್ತಾ ಕೂರಲಿಲ್ಲ. ಬದಲಿಗೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಆ ದೇಶದ ಮೂಲೆ ಮೂಲೆ ಸುತ್ತಿದ್ದಾರೆ. ಭಾಷೆ ಗೊತ್ತಿಲ್ಲದೇ, ಸಂಸ್ಕೃತಿ ಗೊತ್ತಿಲ್ಲದೇ ಅಲ್ಲಿನ ಜನರೊಡನೆ ಸಂವಾದಿಸಿದ್ದಾರೆ. ಊರು ಕೇರಿ ತಿರುಗಿ ಅವರ ಸಂಸ್ಕೃತಿ ಅರಿತಿದ್ದಾರೆ. ಹುಡುಗಿಯರೊಂದಿಗೆ ಲಲ್ಲೆ ಹೊಡೆದಿದ್ದಾರೆ. ಅಂತಹ ಇನ್ನೂ ಬೆಳಕು ಕಾಣದ ದೇಶದಲ್ಲೂ ನೀರು ಉಕ್ಕಲು ತಮ್ಮ ಕೊಡುಗೆ ನೀಡಿದ್ದಾರೆ.
ಆಫ್ರಿಕಾ ಖಂಡದ ದೇಶಗಳು ನಮ್ಮ ಕಣ್ಣಳತೆಗೆ ಸಿಗದೇ ಇರಲು ಮುಖ್ಯ ಕಾರಣವೇ ಅದನ್ನು ದೇಶಗಳೇ ಅಲ್ಲ ಎನ್ನುವಂತೆ ಭೂಗೋಳದ ರಾಜಕೀಯ ಹೊಸಕಿ ಹಾಕಿರುವುದು . ‘ಅಮೇರಿಕಾದವನು / ಭೂಮಂಡಲದ ಚೆಂಡನ್ನು / ಎತ್ತ ಒದ್ದರೂ / ಗೋಲ್ ಅವನದೇ..’ ಎನ್ನುವ ಅನಿವಾರ್ಯತೆಯನ್ನು ಸೃಷ್ಟಿ ಮಾಡಲಾಗಿದೆ. ಜಗತ್ತು ಏಕ ಚಕ್ರಾಧಿಪತ್ಯಕ್ಕೆ, ಏಕ ವ್ಯಕ್ತಿ ಪ್ರಾಧಾನ್ಯತೆಗೆ ಸಿಕ್ಕು ಹೋದರೆ ಆಗುವ ಪರಿಣಾಮವೇ ಇದು. ಭೂಪಟದಲ್ಲಿ ಎಷ್ಟು ದೇಶಗಳಿವೆ ಎಂದು ಎಣಿಸಿ ಹೇಳುವವರು ಯಾರು?? ಈ ಕಾರಣಕ್ಕಾಗಿಯೇ ನಮ್ಮದೇ ಸುರತ್ಕಲ್ ನ ಹುಡುಗ ನೇರಾ ನೇರ ಕಂಡ ಬದುಕು ಮುಖ್ಯವಾಗುವುದು. ಪ್ರಸಾದ್ ನಾಯ್ಕ್ ಅವರ ಈ ಕೃತಿಗೆ ತನ್ನದೇ ಮಹತ್ವವಿದೆ. ಈ ಕೃತಿ ಒಂದು ದಯನೀಯ ಬದುಕನ್ನು ನಡೆಸುತ್ತಿರುವ ದೇಶದ ಕಥೆಯನ್ನು ಬಿಚ್ಚಿಡುತ್ತಿದೆ. ಯಾವುದೇ ಪತ್ರಿಕೆ, ಪುಸ್ತಕ, ಸರ್ಚ್ ಗಳನ್ನೂ ಅವಲಂಬಿಸದೇ ಖುದ್ದು ಕಂಡ ಬದುಕು ಸಾಮ್ರಾಜ್ಯಶಾಹಿ ಶಕ್ತಿಗಳು ಹೇಗೆ ಅನೇಕ ದೇಶಗಳನ್ನು ಉಸಿರುಕಟ್ಟಿಸಿಬಿಡುತ್ತದೆ ಎನ್ನುವುದನ್ನು ತೋರಿಸುತ್ತಿದೆ. ಅನೇಕ ದೇಶಗಳ ಬದುಕುವ ಹಕ್ಕನ್ನು ಹೊಸಕಿ ಹಾಕಿರುವ ರೀತಿಯನ್ನು ತೋರಿಸಿದೆ. ಮುಂದೆ ಜಗತ್ತಿನ ಕಥೆ ಬರೆಯುವವರಿಗೆ ಖಂಡಿತಾ ಆಧಾರವಾಗುವ ಪುಸ್ತಕಗಳಲ್ಲೊಂದು.
ನಾಲ್ಕು ಕೋಣೆಯ ಮಧ್ಯೆ ಎಂಜಿನಿಯರಿಂಗ್ ಓದಿದ ಹುಡುಗ ಅದ್ಭುತ ಬರವಣಿಗೆಯನ್ನು ತನ್ನದಾಗಿಸಿಕೊಂಡಿರುವ ರೀತಿ ಇದೆಯಲ್ಲ ಅದು ನನ್ನಲ್ಲಿ ವಿಸ್ಮಯವನ್ನುಂಟುಮಾಡಿದೆ. ಸು ರಂ ಎಕ್ಕುಂಡಿ ಅವರು ‘ಕಣಗಿಲು ಗಿಡದಲ್ಲಿ ಹುಡುಗ’  ಕವಿತೆಯಲ್ಲಿ ನಾಲ್ಕು ಗೋಡೆಯ ದಾಟಿ ಬಂಡ ಹುಡುಗ ಬದುಕನ್ನು ಅರಿಯುವ ರೀತಿ ಬಣ್ಣಿಸಿದ್ದಾರೆ. ಪ್ರಸಾದ್ ನಾಯ್ಕ್ ಖಂಡಿತಾ ಅದೇ ಕಣಗಲು ಗಿಡದ ಹುಡುಗನಂತೆಯೇ ನನಗೆ ಕಂಡಿದ್ದಾರೆ.
ಅಂಗೋಲಾದಲ್ಲಿದ್ದ ಪ್ರಸಾದ್, ಬೆಂಗಳೂರಿನ ನನ್ನ ನಡುವೆ ಬೆಸುಗೆಗೆ ವೇದಿಕೆಯಾಗಿದ್ದು ‘ಅವಧಿ’ (avadhimag.com). 50 ವಾರಗಳ ಕಾಲ ಪ್ರಸಾದ್ ಅತ್ಯಂತ ಶಿಸ್ತಿನಿಂದ, ಅತ್ಯಂತ ಪ್ರೀತಿಯಿಂದ ಅಂಗೋಲಾ ಕಥನವನ್ನು ಬರೆದಿದ್ದಾರೆ. ‘ದೂರದಲಿ ಇದ್ದವರನು ಹತ್ತಿರಕೆ ತರಬೇಕು ಎರಡು ದಂಡೆಗೂ ಉಂಟಲ್ಲ ಎರಡು ತೋಳು’ ಎನ್ನುವುದನ್ನು ಅರಿತ ಪ್ರವಾಸ ಕಥನಕಾರರು ತುಂಬಾ ತುಂಬಾ ಕಡಿಮೆ. ಪ್ರಸಾದ್ ನಾಯ್ಕ್ ಅವರ ಈ ಪ್ರವಾಸ ಕಥನದಲ್ಲಿ ಇರುವ ಮುಖ್ಯ ಕಾಳಜಿಯೇ ಆ ಪ್ರೀತಿ. ಅವರ ಕಣ್ಣೋಟ ಖಂಡಿತಾ ವಿಶಿಷ್ಟವಾದದ್ದು ಎನ್ನುವುದುನ್ನು ಈ ಕೃತಿ ಗೊತ್ತುಮಾಡಿಸುತ್ತದೆ. ಅಂಗೋಲಾದಲ್ಲಿ ಹಲವು ವರ್ಷ ಕಳೆದ ನಮ್ಮ ‘ಸುರತ್ಕಲ್ ಎಕ್ಸ್ ಪ್ರೆಸ್’ನ ಈ ಕಥನವನ್ನು ನೀವು ಓದದಿದ್ದರೆ ನಷ್ಟ ನಿಮ್ಮದೇ..

‍ಲೇಖಕರು avadhi

October 23, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: