ಈಶಾನ್ಯದೂರಿಗನ ಕಣ್ಗಾವಲು…

‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ.

ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ.

ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ.

ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ ಸುಷ್ಮಿತಾ ‘ಮಣ್ಣಪಳ್ಳದ ಮೂಕಿಚಿತ್ರ’ದಲ್ಲಿ ಈ ಊರಿನ ಯಾರೂ ಕಾಣದ ಚಿತ್ರಗಳನ್ನು ಕಟ್ಟಿ ಕೊಡಲಿದ್ದಾರೆ.

ಮಣಿಪಾಲದ ವಿಸ್ತಾರ ರಕ್ಷಣೆಯ ಜವಾಬ್ದಾರಿಯನ್ನೂ ಅತಿಯಾಗಿಯೇ ವಿಸ್ತರಿಸಿದೆ. ಇಲ್ಲಿ ನೂರಾರು ಸೆಕ್ಯೂರಿಟಿ ಗಾರ್ಡ್ಸ್ ಸಾವಿರಾರು ವಿದ್ಯಾರ್ಥಿಗಳನ್ನ ಹತ್ತಾರು ಶಿಕ್ಷಣ ಸಂಸ್ಥೆಗಳನ್ನ ಕಾಯುವ ಜವಾಬ್ದಾರಿಯನ್ನ ಹೊತ್ತಿದ್ದಾರೆ. ಅವರಲ್ಲಿ ಈಶಾನ್ಯ ರಾಜ್ಯಗಳ ಯುವಕರ ಸಂಖ್ಯೆಯೇ ಬಹು ದೊಡ್ಡದು. ತಮ್ಮ ಪಾಳಿಯನ್ನು ಕಣ್ಣುಮುಚ್ಚದೆ ಮಾಡುವ ಇವರ ಕಣ್ಣುಗಳದ್ದೂ ಕತೆ ಇದೆ. ಇದೂ ಮಣ್ಣಪಳ್ಳದ ಮೂಕಿಚಿತ್ರದ ಭಾಗವೇ.

ಈಶಾನ್ಯ ನಾಡಿನವರ ಕಣ್ಣುಗಳು ದೇಶದ ಉದ್ದಗಲಕ್ಕೂ ಬಹಳಷ್ಟು ರೀತಿಯ ಚರ್ಚೆಗಳನ್ನು ಚಾಲ್ತಿಯಲ್ಲಿಟ್ಟಿವೆ. ಆದರೆ ಯಾವ ಪೂರ್ವಾಗ್ರಹಗಳು ಅಥವಾ ಚರ್ಚೆಗಳು ನನ್ನನ್ನ ತಟ್ಟದೆಯೇ, ಅವು ಬದುಕಿನ ಸಂಕೀರ್ಣತೆಯಲ್ಲಿ ಸಿಲುಕಿರುವ, ಮಾತಿಲ್ಲದೆಯೂ ಮಾತಾಡಲು ಕಲಿತಿರುವ, ಜಾಗ್ರತ ಸ್ಥಿತಿಯಲ್ಲೂ ಬೇರೆಲ್ಲೋ ಕಳೆದಿರುವ ಕಣ್ಣುಗಳಾಗಿ ಮಾತ್ರ ಕಂಡಿವೆ.

ಅದಕ್ಕೆ ಕಾರಣ ಮಣಿಪಾಲದ ಮೂಲೆಮೂಲೆಯಲ್ಲೂ ಇವೇ ಕಣ್ಣುಗಳು ಅದೆಷ್ಟೋ ಜನರನ್ನು ಕಾಯುತ್ತ, ನನ್ನಂತವರನ್ನ ಕಾಡುತ್ತ ಉಳಿದು ಬಿಟ್ಟಿವೆ.

ಈಶಾನ್ಯ ರಾಜ್ಯಗಳಾದ ಮಣಿಪುರ, ಮೇಘಾಲಯ, ತ್ರಿಪುರ, ನಾಗಾಲ್ಯಾಂಡ್ , ಅಸ್ಸಾಂನ ಪುಟ್ಟ ಹಳ್ಳಿಗಳ ಹುಡುಗರು ಅಲ್ಲಿನ  ನೂರಾರು ಬೇಗೆ, ಜವಾಬ್ದಾರಿಗಳು, ಅರ್ಧಂಬರ್ದ ಶಿಕ್ಷಣ, ತುಂಡು ಹಿಂದಿಯನ್ನು ಇಟ್ಟುಕೊಂಡು ಈ ಊರಿನ ಬಾಗಿಲಲ್ಲಿ ಇದಿರಾಗುತ್ತಾರೆ.

ಇಲ್ಲಿನ ಶಹರ ಬೆಳೆದಂತೆಲ್ಲ ಇಲ್ಲಿ ಕಾಯುವುದೂ ಕಾಯಕವಾಗಿದೆ. ಈ ಕಾಯಕವೇ ತಮ್ಮ ತಮ್ಮ ಮನೆಯ ಸುತ್ತಲೇ ಬೇಲಿ ಕಟ್ಟಿಕೊಳ್ಳಲಾಗದ ಈ ಹುಡುಗರನ್ನ ಇಲ್ಲಿನ ಬಾಗಿಲುಗಳಿಗೆ ಕರೆಸಿಕೊಂಡಿದೆ.

ಪ್ರತಿದಿನವೂ ಕೂತೋ, ನಿಂತೋ, ಇಲ್ಲ ನಗುವಿನಲ್ಲೋ ಇದಿರುಗೊಳ್ಳುವ ಇವೇ ನೋಟಗಳನ್ನ ದಾಟಿ ದಿನಚರಿಯನ್ನು ಆರಂಭಿಸುವ ನಾನು ಅತ್ಯಂತ ಕುತೂಹಲಿತಳಾದದ್ದು ‘ನಿತಾಯ್ ಸಗ್ಮಾ’ ಬಗ್ಗೆ ಮಾತ್ರ.

ಬರಿ ಮೌನದಲ್ಲೇ ಇಡೀ ದಿನವನ್ನು ಮುಗಿಸಬಲ್ಲ, ನನ್ನೆಲ್ಲ ಮಾತಿನ ವರಸೆಗಳನ್ನ ಸೋಲಿಸಿ, ಮಾತನಾಡುವುದು ತನ್ನ ಕೆಲಸದ ಪಟ್ಟಿಯಲ್ಲಿ ಇಲ್ಲವೇ ಇಲ್ಲ ಎಂಬಂತೆ ವರ್ತಿಸಬಲ್ಲ ಇನ್ನೊಬ್ಬರನ್ನ ಕಂಡಿಲ್ಲ.

ಅವನ ಕಥೆಗಳ ತುಂಡುಗಳನ್ನ ಅವನೂರಿನವರಿಂದ, ಒಟ್ಟಿಗೆ ಇರುವವರಿಂದ ಆರಿಸಿದ್ದೇ ಹೊರತು, ಇಡಿಯಾಗಿ ಅವನ ಬಾಯಲ್ಲಿ ಯಾವತ್ತೂ ಕೇಳಿಯೇ ಇಲ್ಲ.

ಐದು ವರ್ಷಗಳ ಹಿಂದೆ ಊರು ಬಿಟ್ಟವನು ಆಮೇಲೆ ಮೂರು ಸಾರಿ ಮಾತ್ರ ಹೆಂಡತಿ- ಮಗುವನ್ನು ನೋಡಿ ಬಂದಿದ್ದನಂತೆ!

ಅದಕ್ಕೆ ಕಾರಣವೋ ಎಂಬಂತೆ ಇಡೀ ವರ್ಷಕ್ಕೆ ಸಂಬಳ ರಹಿತವಾಗಿ ಸಿಗುವ ೨೫ ದಿನಗಳ ರಜೆಯಲ್ಲಿ ರೈಲಿನಲ್ಲಿಯೇ ಹತ್ತು ದಿನ ಕಳೆಯುವುದು ಮತ್ತೆ ಉಳಿದ ಬೆರಳೆಣಿಕೆ ದಿನಗಳಲ್ಲಿ ಅರೆಹೊಟ್ಟೆಯಲ್ಲೇ ವಾಪಸ್ಸಾಗೋದನ್ನ ಅಲ್ಲಿನವರೆಲ್ಲರೂ ನೆನೆ ನೆನೆದು ಹೇಳುವುದನ್ನ ಕೇಳಿದ್ದೇನೆ.

ಆದರೆ ಒಂದೆರೆಡು ಬಾರಿ ಮೊಬೈಲ್ ವಾಲ್ ಪೇಪರ್ ನಲ್ಲಿ ಕಂಡ ಅವನ ಮಗಳ ಫೋಟೋ ಅವನೂ ಎಲ್ಲರಂತೆಯೇ ಊರನ್ನ ನೆನಸುತ್ತಾನೆಂಬುದಕ್ಕೆ ಸಾಕ್ಷಿ ಹೇಳಿತ್ತು ಅಷ್ಟೇ.

ಅವನ ಅಭ್ಯಾಸಗಳೇ ಅತಿ ವಿಚಿತ್ರ. ಎಂತ ವಿಶೇಷ ಸಂದರ್ಭದ ಊಟ, ಉಪಹಾರ, ಸಿಹಿ ಇದ್ದರೂ, ಬೆಳಗ್ಗೆ ಎಂಟರಿಂದ ರಾತ್ರಿ ಆರರ ಪಾಳಿಯೋ, ಇಲ್ಲ ರಾತ್ರಿಯಿಡಿಯ ಪಾಳಿಯೋ ತಾನೇ ಮಾಡಿತರುವ ಡಬ್ಬಿಯ ಒಂದು ಊಟದಲ್ಲೇ ಮುಗಿಸುತ್ತಾನೆ.

ಆದರೆ ವಾರದ ರಜೆಯ ದಿನ ಮಾತ್ರ ಪೆರಂಪಳ್ಳಿಯ ತುದಿಯವರೆಗೂ ಸೈಕಲ್ ತುಳಿದು ತರುವ ಹಂದಿ ಮಾಂಸ ಅವನಿಗೆ ಬಾರಿ ಇಷ್ಟ ಅನ್ನೋದನ್ನ ಮತ್ತೆ  ಅಸ್ಸಾಂನ ಅವನೂರಿನಲ್ಲಿ ಸಾಕಷ್ಟು ಭತ್ತ ಬೆಳೆಯುತ್ತಾರೆ, ಅವನ ಕುಟುಂಬಕ್ಕಾಗುವಷ್ಟು ತರಕಾರಿಗಳನ್ನ ಅವನಮ್ಮ ಮನೆಯಂಗಳದಲ್ಲೇ ಹಾಕಿದ್ದಾಳೆ ಅನ್ನೋನದನ್ನೂ ಅವನೂರಿನ ಬಿವಾಸ್ ಹೇಳಿದ್ದು.

ಸಂಸ್ಥೆಗಳ ಎದುರು ಹೋಗಿ ಬರುವವರ ಮೇಲೆ ದೃಷ್ಟಿ ಇಡುತ್ತಾ, ಯಾರು ಇಲ್ಲದ ಹೊತ್ತಲ್ಲಿಯೂ ಬಾಗಿಲು ಕಾಯುತ್ತ, ಮೇಲಿನವರ  ಕಟ್ಟಳೆಗಳನ್ನ ಪಾಲಿಸುತ್ತ ಒಂದೇ ಬಗೆಯ ತೊಡುಗೆಯಲ್ಲಿ ಇವರು ಕಳೆದು ಹೋಗಿದ್ದಾರೆ ಅಥವಾ ಗುರುತಿಸಿಕೊಂಡಿದ್ದಾರೆ. ಸಾವಿರಾರೂ ವಿದ್ಯಾರ್ಥಿಗಳ ಸಭೆಯಲ್ಲೂ ಎಲ್ಲರ ಮತ್ತು ಎಲ್ಲದರ ಮೇಲಿನ ನಿಗಾ ಜಾರದಷ್ಟು ನಿಪುಣರೂ ಆಗಿದ್ದಾರೆ.

ಶಿಸ್ತಿನ ಸೆಕ್ಯೂರಿಟಿ ಗಾರ್ಡ್ ನ ಸಮವಸ್ತ್ರ, ನೀಟಾಗಿ ಶೇವ್ ಮಾಡಿದ ಮುಖ, ಹೆಚ್ಚು ಅಥವಾ ಕಡಿಮೆ ಆಗದಂತೆ ಮುಗಿಸುವ ದಿನದ ಕೆಲಸ ಇವೆಲ್ಲವೂ ನಿತಾಯ್ ಗೆ ಈ ಗಳಿಗೆಯ ಅವಶ್ಯಕತೆಗಳಷ್ಟೇ. ಅವೆಲ್ಲವನ್ನೂ ಮೀರಿ ಅಥವಾ ಇವೆಲ್ಲವನ್ನೂ ಮೀರುವ ಆಲೋಚನೆಗಳು ಅವನ ಮಾತನ್ನ ಹಿಡಿದಿಟ್ಟಿರಬಹುದು. ಮುಂದೆ ಯಾವುದೋ ಒಂದು ದಿನ ಅವನು ಎಲ್ಲರಂತೆ ಅಷ್ಟನ್ನೂ ಮಾತಾಡಲಿಕ್ಕೆ ಹೊರಟರೆ ನಿಲ್ಲಿಸಲಿಕ್ಕೂ ಮರೆಯಬಹುದು.

ಅತೀ ಅಪರೂಪಕ್ಕೆ ನನ್ನ ಕೈಯಲ್ಲಿ ಪುಸ್ತಕಗಳನ್ನ ಕಂಡರೆ ನಿತಾಯ್ ನ ಕಣ್ಣುಗಳು ಶೀರ್ಷಿಕೆ ಓದಲು ಹೆಣಕಾಡುವುದನ್ನ ಕಂಡಿದ್ದೇನೆ. ಅಂತಹ ಒಂದು ದಿನ ಮೂಡು ಸಂಜೆಯ ಹೊತ್ತಲ್ಲಿ ‘ಕಬ್ ತಕ್ ಪಡೆ ಹೊ ಆಪ್’? ಅಂತ ಕೇಳಿದ್ದಕ್ಕೆ ‘ದಸ್’ ಅನ್ನೋ ಪದವನ್ನ ಹೊರಹಾಕಿ ‘ಓದುವ ಆಸೆ ಏನೋ ಇತ್ತು ಆದರೆ ಹತ್ತಕ್ಕಿಂತ ಮುಂದೆ ಶಾಲೆ ಕಂಡಿಲ್ಲ’ ಎಂಬ ತುಣುಕನ್ನ ಮಾರನೇ ದಿನ ಜೋಡಿಸಿದ್ದ.

ಯಾವುದೋ ದಾರಿಯಲ್ಲಿ ಹೋಗಬೇಕಿದ್ದವನು ಮಣಿಪಾಲದಲ್ಲಿ ಅಲೆಯುತ್ತಿದ್ದಾನೆನೋ ಅಂತನ್ನಿಸಿತು. ಅವನನ್ನು ಕಂಡ ಐದು ತಿಂಗಳಲ್ಲಿ ಸತತ ಪ್ರಯತ್ನದ ಹೊರತಾಗಿಯೂ ನಾಲ್ಕೈದು ಮಾತುಗಳನ್ನ ಕೇಳಿಸಿಕೊಂಡಿರಬಹುದು ಅಷ್ಟೇ.

ಅವನ ರಾಜ್ಯದ, ಅವನೂರಿನ, ಅವನನ್ನೇ ಹೋಲುವ ನೂರಾರು ಮಂದಿಗಿಂತ ನಿತಾಯ್ ನ ಕೆಲಸ, ಬದುಕು ಮತ್ತು ಕಾರಣಗಳು ಭಿನ್ನ ಇರಲಿಕ್ಕಿಲ್ಲ ಆದರೆ ಎಲ್ಲವನ್ನೂ ಮಾತಲ್ಲಿ ಆಡಿ ಕಳೆದು ಹಗುರಾಗುವ ಅವರೆಲ್ಲರ ನಡುವಿನಲ್ಲಿ ಅವನ ಮೌನಕ್ಕೆ ಅಹಂ, ದುಃಖ, ಸಂತೃಪ್ತಿ ಇವ್ಯಾವುದರ ಬಣ್ಣವೂ ಇಲ್ಲ.

ಮಾತಾಡುವ ಕಣ್ಣುಗಳಲ್ಲಿ ಮಾತ್ರ ಕತೆ ಹುಡುಕುತ್ತಿದ್ದವಳಿಗೆ ಮಾತನಾಡದ ಕಣ್ಣುಗಳ ಕತೆ ಕೇಳುವುದನ್ನು ಇವನೇ ಅಭ್ಯಾಸ ಮಾಡಿಸಿದ್ದು.

ಒಂದಿಡೀ ವಾರದ ಹಗಲು, ಅದರ ಮುಂದಿನ ವಾರದ ರಾತ್ರಿಗಳಲ್ಲೂ ಅದೇ ಬಾಗಿಲ ಮುಂದೆ ಏನನ್ನೂ ಆಡದೆ ಕಳೆದು ಹೋಗುವ ಅವನ ಕಣ್ಣುಗಳು ಅರಬ್ ನ ಶಹರಗಳತ್ತ ನೆಟ್ಟಿವೆ ಎಂಬುದನ್ನೂ ಕೂಡ ಬಿವಾಸ್ ನೇ ಹೇಳಿದ್ದು.

August 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. ರೇಣುಕಾ ರಮಾನಂದ

    ನಿತಾಯ್‌ನಂತಹುದೇ ಅದೆಷ್ಟೋ ಈಶಾನ್ಯ ದವರ ಕಥೆ..ಸೊಗಸಾಗಿದೆ ಬರಹ

    ಪ್ರತಿಕ್ರಿಯೆ
  2. Ahalya Ballal

    ಮಾತಾಡುವ ಕಣ್ಣುಗಳಲ್ಲಿ ಮಾತ್ರ ಕತೆ ಹುಡುಕುತ್ತಿದ್ದವಳಿಗೆ ಮಾತನಾಡದ ಕಣ್ಣುಗಳ ಕತೆ ಕೇಳುವುದನ್ನು ಇವನೇ ಅಭ್ಯಾಸ ಮಾಡಿಸಿದ್ದು.

    ದೃಷ್ಟಿಕೋನ ಇಷ್ತವಾಯ್ತು. ಅಂಕಣಕ್ಕಾಗಿ ಅಭಿನಂದನೆಗಳು!

    ಪ್ರತಿಕ್ರಿಯೆ
  3. ಪ್ರಕಾಶ್ ಕೆ

    ತುಂಬಾ ಚೆನ್ನಾಗಿದೆ ನಿಮ್ಮ ಬರಹ. ಮಣಿಪಾಲ ಒಂದರ್ಥದಲ್ಲಿ ‘ ಊರು ಬಿಟ್ಟವರ’ ಊರು…. ಕಲಿಯಲು, ಕಲಿಸಲು, ಕಾಯಲು ಹೀಗೆ ಹಲವಾರು ಕಾಯಕ ಮಾಡಲು ಬಂದವರು ಇಲ್ಲಿ ಇದ್ದಾರೆ. ಇಂತಹ ಮಣಿಪಾಲ ಎಂಬ ಲೋಕದ ತುಣುಕುಗಳನ್ನು ನಮ್ಮೊಂದಿಗೆ ಹಂಚಿಕೊಂಡದ್ದಕ್ಕಾಗಿ ಧನ್ಯವಾದಗಳು.

    ಪ್ರತಿಕ್ರಿಯೆ
  4. Vijeth Krishna

    ಕಣ್ಣು, ಮೌನ ಹಾಗೂ ಅವುಗಳು ಹೇಳುವ ಸಾವಿರ ಕಥೆಗಳು.
    ಯಾವ ಕಣ್ಣುಗಳಿಗೆ ದೇಶದೆಲ್ಲೆಡೆ ಅಪಹಾಸ್ಯಕ್ಕೆ ಒಳಗಾಗುತ್ತಾರೋ , ಅದೇ ಕಣ್ಣುಗಳಿಗೆ ನಮ್ಮಿಂದ ಹೆಚ್ಚಿರುವ ಕನಸುಗಳು ಮತ್ತು ದುಃಖವನ್ನು ಎಳೆ ಎಳೆಯಾಗಿ ಕಾಣಿಸಿದ್ದಕ್ಕೆ ಥ್ಯಾಂಕ್ಸ್ ಸುಷ್ಮಿತಾ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: