ಹೆಣ್ಣೆಂದರೇನೆ ಸಹನೆ…ಈಗ ಸಹನೆಯ ಕಟ್ಟೆ ಹೊಡೆದಿದೆ…ಯಾರಲ್ಲಿ ಹೇಳಲಿ ನಮ್ಮ ಕೂಗನ್ನ…
-ಸುಜಾತಾ ವಿಶ್ವನಾಥ್
ನಮ್ಮ ಭಾರತೀಯ ನಾರಿಯರು ಅದೆಷ್ಟೋ ಮಂದಿ ಅಡುಗೆ ಮನೆಯಲ್ಲಿ ತಮ್ಮ ಜೀವನವನ್ನು ಕಳೆದು ಬಿಡುತ್ತಿದ್ದಾರೆ. ಮನೆಯವರ ಆರೋಗ್ಯ, ಊಟ ತಿಂಡಿ ಹೀಗೆ ಮನೆಮಂದಿಗೆಲ್ಲ ಸಹಾಯ ಹಸ್ತ ನೀಡುತ್ತಾ, ಅದರಲ್ಲಿಯೇ ತಮ್ಮ ಖುಷಿಯನ್ನು ಕಾಣುವ ಎಷ್ಟೋ ಹೆಣ್ಣುಮಕ್ಕಳು ಈಗ ಅಡುಗೆ ಮನೆಯ ಸಹವಾಸವೇ ಬೇಡಪ್ಪ ಎಂಬ ಪರಿಸ್ಥಿತಿಗೆ ತಲುಪಿದ್ದಾರೆ. ಆಹಾರ ಪದಾರ್ಥಗಳ ಬೆಲೆಯ ಏರಿಕೆ, ತರಕಾರಿ, ಹಣ್ಣು, ಹಾಲು ಹೀಗೆ ದಿನ ಬಳಕೆಯ ಮೂಲ ವಸ್ತುಗಳ ಬೆಲೆ ಗಗನಕ್ಕೇರಿದ ಕಾರಣ, ನಮ್ಮ ಮಹಿಳೆಯರೆಲ್ಲ ನಮ್ಮ ಸರಕಾರದ ಈ ವ್ಯವಸ್ಥೆಯ ಬಗ್ಗೆ ಅಸಮಾಧಾನ ತೋರುತ್ತಿದ್ದಾರೆ. ಅಲ್ಲದೆ ಬಸ್ಸು ದರ ಏರಿಕೆ, ವಿದ್ಯುತ್ ಬೆಲೆ ಏರಿಕೆ, ಈ ಎಲ್ಲವು ನಮ್ಮ ಹೆಣ್ಣು ಮಕ್ಕಳನ್ನು ಉಸಿರುಗಟ್ಟಿಸಿಬಿಟ್ಟಿವೆೆ.
ಎಲ್ಲಾ ಪದಾರ್ಥಗಳ ಬೆಲೆಗಳು ಏರಿಕೆಯಾಗಿರುವಾಗ, ಆ ಆಲೋಚನೆಯಲ್ಲಿ ಮುಳುಗಿದ್ದ ಮಹಿಳೆಯರು ತರಕಾರಿ ತರಲೆಂದು ಮಾರುಕಟ್ಟೆಗೆ ಹೋಗಲು ಬಸ್ಸು ಹತ್ತಿ, ಎಂದಿನಂತೆ ನಿಗದಿತ ಹಣ ಕೊಟ್ಟು ಟಿಕೇಟ್ ಕೇಳಿದಾಗ, ಕಂಡಕ್ಟರ್ ಇನ್ನೂ 4 ರೂ.ಗಳನ್ನು ಹೆಚ್ಚಾಗಿ ಕೊಡಿ ಎಂದಾಗ, ಅಂದು ಬಸ್ಸು ದರ ಏರಿಕೆಯಾದ ವಿಷವನ್ನೇ ಮರೆತ ಇವರುಗಳು, ಪಾಪ ಆ ಬಡಪಾಯಿ ಕಂಡಕ್ಟರ್ ಮೇಲೆ ಒಮ್ಮೆಲೆ ಸಿಡಿದು ಬಿದ್ದರು. ಅಮ್ಮ ಇದಕ್ಕೂ ನಮಗೂ ಸಂಬಂಧವಿಲ್ಲ ನಿಮ್ಮಂತೆ ನಾನು ಸಹ, ಬೆಲೆ ಏರಿಕೆ ಮಾಡಿರುವುದರಲ್ಲಿ ನಮ್ಮ ಕೈವಾಡವಿಲ್ಲಮ್ಮ. ನೀವು ಮತ ಹಾಕಿದ ನಿಮ್ಮದೆ ಸರಕಾರದ ವ್ಯವಸ್ಥೆ ಇದು. ಎಂದಾಗ ಆ ಮಹಿಳೆಯರೆಲ್ಲ ಅವರವರಲ್ಲಿಯೇ ಕದನಕ್ಕೆ ಸಜ್ಜಾದರು. ನಾನು ಮತ ಹಾಕಲು ಬರುವುದಿಲ್ಲವೆಂದರೆ ನೀನೇ ಕರೆದುಕೊಂಡು ಹೋಗಿ ಮತ ಹಾಕುವಂತೆ ಮಾಡಿದೆ ಈಗ ನೋಡು, ಇದನ್ನು ನೀನು ಕೇಳುವೆಯಾ, ನೀನು ಈ ಬಸ್ಸು ದರದ ಏರಿಕೆಯನ್ನು ಇಳಿಸುವೆ ಎಂದು, ಆ ಗುಂಪಿನಲ್ಲಿ ಸ್ವಲ್ಪ ಓದಿ ಮಹಿಳೆಯಂತಿದ್ದ ಒಬ್ಬ ಸ್ತ್ರೀ ಮೇಲೆ ಎಲ್ಲರೂ ಗುಡುಗಿದರು. ಇವರ ಈ ಸಿಡಿಲು ಗುಡುಗಿನ ಹಬ್ಬರಕ್ಕೆ ಆ ಮಹಿಳೆ ನಿರುತ್ತರಳಾಗಿ ಮೌನಕ್ಕೆ ಶರಣಾದಳು. ಅದಕ್ಕೆ ನಾನು ಇವರ ಮಾತನ್ನೂ ಸಹ ನೀರಾಕರಿಸಿ ಮತ ಚಲಾಯಿಸಲಿಲ್ಲ, ಯಾರಿಗೆ ಮತ ಹಾಕಿದರೇನು? ನಮ್ಮ ಕಷ್ಟಗಳನ್ನು ನೀಗಿಸುವ ಜನ ನಾಯಕರಿಲ್ಲವೇ ಇಲ್ಲ. ಚುನಾವಣೆ ಮುಗಿದು 4 ದಿನಗಳಾಗಿಲ್ಲ ಆಗಲೇ ಹೀಗೆ ಬಸ್ಸು, ಮತ್ತು ವಿದ್ಯುತ್ ದರಗಳನ್ನು ಏರಿಕೆ ಮಾಡಿದರೆ ನಾವೆಲ್ಲ ಹೊಟ್ಟೆಗೆ ಏನು ತಿನ್ನಬೇಕು? ಎಂಬ ಆಕ್ರೋಶವನ್ನು ಸರಕಾರದ ಮೇಲೆ ತೋರಿಸುತ್ತಾ, ಸರಕಾರಕ್ಕೂ ಜನ ನಾಯಕರಿಗೂ ಶಾಪ ಹಾಕುತ್ತಾ, ಗೊಣಗುತ್ತಲೇ ಬಸ್ಸು ಟಿಕೇಟ್ಗಳನ್ನು ಪಡೆದರು ಆ ಮಹಿಳೆಯರು.
ಗಂಡಸರೇನು ಅವರಿಗೆ ಬರುವ ಸಂಬಳ ನಮ್ಮ ಕೈಗೆ ಕೊಟ್ಟು ಅವರ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳುತ್ತಾರೆ. ಮಕ್ಕಳ ಊಟ, ತಿಂಡಿ, ಮನೆಯ ಹಿರಿಯರ ಔಷಧಿಗಳ ಖರ್ಚನ್ನು ನಾವು ಯಾರಲ್ಲಿ ಹೇಳಿಕೊಳ್ಳಲಿ? ಸಮಯಕ್ಕೆ ನಮ್ಮನ್ನು ತಾನೆ ಮಕ್ಕಳು ಹಿರಿಯರು ಕೆಳೋದು, ಪತಿ ಕೊಟ್ಟ ಸಂಬಳದಲ್ಲಿಯೇ ಮನೆಗೆ ಬೇಕಾದ ಆಹಾರ ಪದಾರ್ಥ, ವಿದ್ಯುತ್ ಬಿಲ್ಲ್, ಕೇಬಲ್ ಬಿಲ್ಲ್, ಹಾಲು, ಹಣ್ಣು, ತರಕಾರಿ, ಔಷಧಿ, ಮಧ್ಯದಲ್ಲಿ ಮಕ್ಕಳಿಗೆ ಉಷಾರಿಲ್ಲವೆಂದರೆ ಹೀಗೆ ಎಲ್ಲಾ ಜವಾಬ್ದಾರಿಗಳು ನಮ್ಮ ಮೇಲೆಯೇ ಬಿಳುತ್ತವೆ. ಗಂಡನನ್ನು ಕೇಳಿದರೆ, ನೋಡಮ್ಮ ನನಗೆ ಬಂದ ಸಂಬಳವನ್ನೆಲ್ಲ ನಿನ್ನ ಕೈಗೆ ಕೊಟ್ಟಿರುವೆ, ನನ್ನ ಬಳಿ ಬೇರೆ ಯಾವ ಹಣವೂ ಇಲ್ಲ, ಅದಕ್ಕೆ ನಾನೇನು ಮಾಡಲಿ, ನೀನೆ ಹೇಗೋ ನಿಭಾಹಿಸು ಎಂಬ ಸಿಡುಕುತನದ ಉತ್ತರ ರೆಡಿಯಾಗಿರುತ್ತದೆ. ಗಂಡನಾದವನು ಹೀಗೆ ಕೈಚೆಲ್ಲಿ ಕುಳಿತರೆ, ಹೆಣ್ಣಾದ ನಾವು ಏನು ಮಾಡಬೇಕು ಎಂಬ, ಅಲ್ಪ ಯೋಚನೆಯೋ ಅವರಲ್ಲಿ ಇರುವುದಿಲ್ಲ. ಎಂಬ ಕೋಪ ಒಂದು ಕಡೆ ಅವರಲ್ಲಿ ಮನೆ ಮಾಡಿತ್ತು. ಎಲ್ಲರ ಹಸಿದ ಹೊಟ್ಟೆ ತುಂಬಿಸುವ ಜವಾಬ್ದಾರಿ ನಮ್ಮ ಮೇಲೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಯಾರ ಬಳಿ ಕೇಳಬೇಕು? ಹೇಗೆ ನಿಭಾಯಿಸಬೇಕು? ಎಂಬ ಆಕ್ರೋಶದ ಮಾತುಗಳು ಆ ಗುಂಪಿನಲ್ಲಿ ಬರುತ್ತಲಿದ್ದವು. ಆಗಲೇ ನೋಡಿ ನಮ್ ಹೆಣ್ಣುುಕ್ಕಳಿಗೆ ಈ ಹೆಣ್ಣು ಜನ್ಮ ಬೇಡಪ್ಪ ಬೇಡ, ಆಕಸ್ಮಾತ್ ಹೆಣ್ಣಾಗಿ ಜನಿಸಿದರೂ ಯಾವುದಾದರೂ ಶ್ರೀಮಂತರ ಮನೆಯ ಮಗಳಾಗಬೇಕು, ಯಾವುದಕ್ಕೂ ಯೋಚನೆ ಇಲ್ಲದೆ ಬದುಕು ಸಾಗಿಸುವಂತಹ ಮನೆಗಳಲ್ಲಿ ಹುಟ್ಟಬೇಕು. ಇಲ್ಲವಾದರೆ ಈ ಹೆಣ್ಣು ಜನ್ಮ ಬೆಡವೇ ಬೇಡವೆಂಬ ಕೊರಗು ಅವಳಲ್ಲಿ ಉದ್ಬವಿಸುವುದು ಸಹಜ.
ಅಂದು ನಾನು ಸಹ ಆ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದೆ. ಇವರ ಈ ಎಲ್ಲಾ ಮಾತುಗಳನ್ನು ಕೇಳುತ್ತಿದ್ದ ನನಗೆ ಖಂಡಿತ ಹೆಣ್ಣುಮಕ್ಕಳು ಎಷ್ಟು ಕಷ್ಟ ಪಡುತ್ತೇವೆ, ಆದರೂ ಗಂಡನಾದವನು ಒಮ್ಮೋಮ್ಮೆ ಅವನ ಮನಸ್ಸಿಗೆ ಬಂದ ಹಾಗೆ ಮಾತನಾಡಿ ಬಿಡುತ್ತಾನೆ. ಅವಳಿಗಿರುವ ಶಕ್ತಿ, ಆಧಾರ ಆ ಗಂಡನೆಂಬ ಅರಿವೂ ಅವನಿಗೆ ಇರುವುದಿಲ್ಲವೇ? ಅಲ್ಲಿರುವ ಎಲ್ಲಾ ಮಹಿಳೆಯರಿಗೂ ತನ್ನ ಗಂಡ ಹಾಗೂ ಈ ಸರಕಾರದ ಮೇಲೆ ಅತಿಯಾದ ಕೋಪ ಬಂದಿತ್ತು. ಎಂಬುದು ನನಗೆ ಅರ್ಥವಾಗಿತ್ತು. ಅಷ್ಟೇ ಅಲ್ಲದೆ ಮತ್ತೆ ಶುರುವಾಯಿತು ನಮ್ಮ ಮಹಿಳೆಯರ ಕಷ್ಟಗಳ ಸರಮಾಲೆಗಳು. ಅವರು ಒಂದೊಂದನ್ನು ಬಿಚ್ಚಿಡುತ್ತಾ ಹೋಗುತ್ತಿದ್ದರೆ ನನಗೂ ಈ ವ್ಯವಸ್ಥೆಯ ಮೇಲೆ ಆಕ್ರೋಶ ಉಕ್ಕಿ ಬರುತ್ತಿತ್ತು.

ಚಿತ್ರಕೃಪೆ : ಜುಭಾನಿ
ಅಯ್ಯೋ ಇಷ್ಟೇ ಅಲ್ಲ ಇಲ್ಲಿ ಕೇಳಿ, ಈಗ ಈ ಗ್ಯಾಸ್ನೊರು ಆನ್ಲೈನ್ ಬುಕ್ಕಿಂಗ್ ಅಂತ ಶುರುಮಾಡಿದ್ದಾರೆ. ಅದನ್ನು ಜಾರಿಗೆ ತಂದ ಹೊಸದರಲ್ಲಿ ನಮಗೂ ಬಹಳ ಖುಷಿ ಇತ್ತು. ಕಾರಣ ನಾವು ನಮ್ಮ ಮೊಬೈಲ್ ನಿಂದ ಬುಕ್ಕಿಂಗ್ ಮಾಡಬಹುದಿತ್ತು. ಒಂದೇ ಬಾರಿಗೆ ಬುಕ್ಕ್ ಆಗಿಬಿಡುತ್ತಿತ್ತು. ಆದರೆ ಈಗೀಗ ಎಷ್ಟು ಬಾರಿ ಬುಕ್ಕ್ ಮಾಡಿದರೂ, ಆ ಕಡೆಯಿಂದ ಹಿತವಾದ ಧ್ವನಿ ಕೇಳುತ್ತೆ ನೋಡು, ಆ ಧನಿ ಕೇಳುತ್ತಿದ್ದರೆ ಕೋಪ ಉಕ್ಕಿ ಬರುತ್ತೆ ಗೊತ್ತ. ಎಂದು ಒಬ್ಬರು ಹೇಳಿದರೆ, ಅಯ್ಯೋ ಯಾಕರ್ರಿ ಅಷ್ಟೊಂದು ಕೋಪ ಎಂಬ ಪ್ರಶ್ನೆ ಇನ್ನೋಬ್ಬ ಮಹಿಳೆಯಿಂದ ಕೇಳಿಬಂತು. ಇನ್ನೇರ್ರೀ ಮತ್ತೆ ನೀವು ಕೊಟ್ಟ ಮಾಹಿತಿ ಸರಿಯಾಗಿಲ್ಲ, ದಯವಿಟ್ಟು ಮತ್ತೊಮ್ಮೆ ಪ್ರಯತ್ತಿಸಿ, ನಿಮ್ಮ ಮಾಹಿತಿಯನ್ನು ಸರಿಯಾಗಿ ನೀಡಬೇಕು ಇಲ್ಲವಾದರೆ ನಿಮ್ಮ ಸಿಲಿಂಡರ್ ಬುಕ್ಕ್ ಆಗುವುದಿಲ್ಲ, ನಮ್ಮ ಈ ಆನ್ಲೈನ್ ಸೇವೆಯನ್ನು ಬಳಸಿದ್ದಕ್ಕೆ ನಿಮಗೆ ಧನ್ಯವಾದಗಳು ಎಂದು ಹೇಳಿದ ಕೊಡಲೆ ಪೊನ್ ಕಟ್ಟ್ ಆಗುತ್ತೆರ್ರೀ, ಅದಕ್ಕೆ ತುಂಬಾ ಕೋಪ ಬರುತ್ತೆ. ಅದಕ್ಕೆ ನಮ್ಮ ಕರನ್ಸಿ ಕೊಡ ಖಾಲಿಯಾಗಿರುತ್ತೆ ಎಂದು ಕೋಪದಿಂದಲೇ ನುಡಿದರು ಒಬ್ಬ ಮಹಿಳೆ. ಹೌದಪ್ಪ ಈಗ ಹೀಗೆ ಆಗುತ್ತಿದೆ ನಾವೂ ಸಹ ಪ್ರತಿ ಬಾರಿಯೂ ಹತ್ತು ಹದಿನೈದು ಸಾರಿ ಬುಕ್ಕ್ ಮಾಡಬೇಕು, ಆದರೆ ಅದಕ್ಕೆ ನಮ್ಮ ಮೊಬೈಲ್ ನಲ್ಲಿದ್ದ ಕರೆನ್ಸಿಯೂ ಖಾಲಿಯಾಗಿರುತ್ತೆ. ಯಾಕೆ ಹೀಗೆ ಆಗುತ್ತಿದೆ ಎಂಬ ಚಚರ್ೆ ನಡೆಯುತ್ತಲಿತ್ತು. ಅದರಲ್ಲಿದ್ದ ಒಬ್ಬ ವಿದ್ಯಾವಂತ ಮಹಿಳೆ ಹೇಳಿದ್ದು ಹೀಗೆ… ನೋಡಿ ಈಗ ಈ ಗ್ಯಾಸ್ ಕಂಪನಿಗಳು ಮತ್ತು ನಮ್ಮ ಮೊಬೈಲ್ಗೆ ಬಳಸುವ ಸಿಮ್ ಕಂಪನಿಗಳು, ಇವರಿಬ್ಬರೂ ಎಲ್ಲೋ ಒಟ್ಟಾಗಿ ಈ ರೀತಿ ಮಾಡುತ್ತಿರಬಹುದು. ಎಂಬ ಅನುಮಾನ ನನ್ನಲ್ಲಿ ಬಹಳ ದಿನಗಳಿಂದಲೂ ಕಾಡುತ್ತಿದೆ ಎಂದರು.
ಅದು ಹೇಗೆ ಹೇಳುತ್ತೀರ, ಅವರಿಗೂ ಇವರಿಗೂ ಹೇಗರ್ರೀ ಸಂಬಂಧ, ಅದೆಲ್ಲ ಸುಳ್ಳು ಎಂದು ಆ ಗುಂಪಿನಲ್ಲಿದ್ದ ಒಂದಿಬ್ಬರು ಮಹಿಳೆಯರು ಉತ್ತರ ಕೊಟ್ಟರು. ಆಗ ಆ ಮಹಿಳೆ ಹೇಳಿದ್ದು ಹೀಗೆ, ಈಗ ನಮ್ಮ ಸಮಾಜದಲ್ಲಿ ಎಲ್ಲರೂ ಗ್ಯಾಸ್ ಮೊರೆ ಹೋಗಿದ್ದೇವೆ ಗ್ಯಾಸ್ ಬಳಸದೇ ಇರುವವರೇ ಇಲ್ಲ. ಅದೆಷ್ಟು ಗ್ರಾಹಕರ ಇರಬೇಕು ನೀವೆ ಲೆಕ್ಕಹಾಕಿ ನೋಡಿ, ಈ ಸಿಮ್ ಕಂಪನಿಗಳಿಗೆ ಒಬ್ಬರಿಂದ ಏನಿಲ್ಲವೆಂದರೂ, ಒಮ್ಮೆ ಗ್ಯಾಸ್ ಬುಕ್ಕ್ ಮಾಡಲು 15 ರಿಂದ 25 ರೂ.ಗಳ ವರೆಗೂ ಕರನ್ಸಿ ಖಾಲಿಯಾಗಿರುತ್ತೆ, ಆ ಹಣ ಯಾರಗೆ ಸೇರುತ್ತೆ ಆ ಸಿಮ್ ಕಂಪನಿಯವರಿಗೆ ತಾನೆ. ಏನಿಲ್ಲವೆಂದರೂ ಲಕ್ಷ ಲಕ್ಷ ಹಣ ನಮ್ಮಿಂದ ಲೂಟಿ ಮಾಡುತ್ತಿದ್ದಾರೆ. ಎಂದು ಹೇಳಿದಾಗ ಆ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ಎಲ್ಲರ ಗಮನವೂ ಈ ಚಚರ್ೆಯ ಮೇಲೆ ಬಂತು. ಹೌದು ಖಂಡಿತ ನಿಜವಿರಬೇಕು ಇದರಲ್ಲಿ ಈ ಸಿಮ್ ಕಂಪನಿಯವರಿಂದ, ಗ್ಯಾಸ್ ಕಂಪನಿಯವರು ಇಂತಿಷ್ಟು ಎಂದು ಕಮೀಷನ್ ಪಡೆಯುತ್ತಿರಬಹುದು, ಗ್ಯಾಸ್ ಬುಕ್ಕಾಗಿಲ್ಲ ಎಂದು ಗ್ಯಾಸ್ ಕಂಪನಿಯ ಹತ್ತಿರ ಹೋಗಿ ಕೇಳಿದರೆ, ಅದಕ್ಕೂ ನಮಗೂ ಏನೊ ಸಂಬಂಧವಿಲ್ಲ, ನೀವೆ ಕರೆ ಮಾಡಿ ವಿಚಾರಿಸಿ ಎಂದು ಹೇಳಿಬಿಡುತ್ತಾರೆ. ಎಂದು ಆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಾರ್ವಜನಿಕರೆಲ್ಲ ಗುಸುಗುಸು ಮಾತಾಡುತ್ತಿದ್ದರು.
ಈಗಿನ ಯಾಂತ್ರಿಕ ಜೀವನದಲ್ಲಿ, ಜನ ಎಲ್ಲ ಸೌಲಭ್ಯಗಳೂ ಮನೆಬಾಗಿಲಿಗೆ ಬರಬೇಕೆಂಬ ದಾವಂತದಲ್ಲಿ, ತಮಗಾಗುತ್ತಿರುವ ಅನ್ಯಾದ ವಿರುದ್ಧ ಧನಿ ಎತ್ತುವುದಿಲ್ಲ. ಇಲ್ಲಿ ಈ ಸಾಮಾನ್ಯ ಮಹಿಳೆಯರಿಗೆ ಉದ್ಬವಿಸಿದ ಈ ಪ್ರಶ್ನೆ ಸಮಾಜದಲ್ಲಿ ಉನ್ನತ ಉದ್ದೆಗಳಲ್ಲಿ ಇರುವವರಲ್ಲಿ, ವಿದ್ಯಾವಂತರಲ್ಲಿ, ವಿಚಾರವಾದಿಗಳಲ್ಲಿ ಏಕೆ ಇಲ್ಲ. ಒಂದು ಲಕ್ಷ ಗ್ಯಾಸ್ ಗ್ರಾಹಕರಿದ್ದರೆ, ಅವರಿಂದ ಈ ಸಿಮ್ ಕಂಪನಿಯವರು ಅದೆಷ್ಟು ಹಣ ಪಡೆಯುತ್ತಿರಬಹುದು ಅಲ್ಲವೇ? ಸುಮಾರು 6 ಲಕ್ಷದಿಂದ 7 ಲಕ್ಷದವರೆಗೂ, ಇದು ಕೇವಲ ಅಂದಾಜು ಮಾತ್ರ. ಗ್ಯಾಸ್ ಬಳಸುವ ಗ್ರಾಹಕರು ಕೇವಲ ಒಂದು ಲಕ್ಷವಲ್ಲ, ನೆನೆದರೆ ಎಂಥಾ ಹಗಲು ದರೋಡ ನಮ್ಮ ಗ್ರಾಹಕನಿಂದ ಈ ಸಿಮ್ ಕಂಪನಿಯವರು ಮಾಡುತ್ತಿದ್ದಾರೆ, ಎಂಬ ಪ್ರಶ್ನೆ ಮೂಡುತ್ತದೆ. ಇದಕ್ಕೆ ಸಾಮಾನ್ಯ ಸಾರ್ವಜನಿಕ ಎಲ್ಲಿ ದೂರು ನೀಡಬೇಕು, ಇದಕ್ಕೆ ಕಂಜ್ಯೂಮರ್ ಕೋಟರ್್ ಇಲ್ಲವೇ, ಇದ್ದರೆ ಯಾವ ರೀತಿಯಲ್ಲಿ ದೂರನ್ನು ದಾಖಲಿಸಬೇಕು ಎಂಬ ಮಾಹಿತಿಯನ್ನು ನಮಗೆ ನೀಡುವವರ್ಯಾರು? ಎಂಬ ನೂರೆಂಟ ಪ್ರಶ್ನೆಗಳೂ ನನಗೂ ಮೂಡಿದವು ಯಾವುದಕ್ಕೂ ಉತ್ತರ ಸಿಗಲಿಲ್ಲ. ಇದಕ್ಕೆ ಸಂಬಂಧ ಪಟ್ಟವರೂ ಈ ಮಾಹಿತಿಯನ್ನು ನಮ್ಮ ಸಾರ್ವಜನಿಕರಿಗೆ ನೀಡಿದರೆ ಉತ್ತಮ ಎಂಬ ಅಭಿಪ್ರಾಯ ನನ್ನದು.
ಅಷ್ಟರಲ್ಲಿಯೇ ಈ ಬಿಸಿಬಿಸಿ ಚರ್ಚೆಗಳಿಗೆಲ್ಲಾ ನಾಂದಿ ಹಾಡಿ, ನಮ್ಮ ಮಹಿಳಾಮಣಿಗೆಲ್ಲ ಮಾರುಕಟ್ಟೆಯಲ್ಲಿ ಬಸ್ಸನ್ನು ಇಳಿದು, ತಮ್ಮ ಆಲೋಚನೆಗಳನ್ನೆಲ್ಲ ಬಿಟ್ಟು ಅಯ್ಯೋ ಇನ್ನೂ ತರಕಾರಿ, ಹಣ್ಣಿನ ಬೆಲೆ ಯಾವ ಮಟ್ಟಕ್ಕೆ ಏರಿದೆಯೋ ಬನ್ನಿ ಹೋಗೋಣವೆಂದು ಹೊರಟರು. ನಾನು ಅವರನ್ನೇ ದಿಟ್ಟಿಸುತ್ತಾ ನೋಡುತ್ತಿದ್ದೆ. ಎಷ್ಟೊಂದ ವಿಚಾರಗಳು ಈ ಎಲ್ಲಕ್ಕೂ ಪರಿಹಾರ ಸಿಗಬೇಕು. ಹೀಗೆ ದಿನಾಲು ನಾವು ಪ್ರಯಾಣಿಸುವ ವಾಹನಗಳಲ್ಲಿ, ಈ ರೀತಿಯ ಹತ್ತು ಹಲವು ವಿಚಾರಗಳ ಕುರಿತು ಚಚರ್ೆಗಳು ನಡೆಯುತ್ತಲಿರುತ್ತವೆ, ಆದರೆ ಯಾವುದಕ್ಕೂ ಸರಿಯಾದ ಪರಿಹಾರವಂತೂ ಸಿಗದು. ಇದು ಕೇವಲ ಹೆಣ್ಣೊಬ್ಬಳ ನೋವಲ್ಲಿ ಈ ಸಮಾಜದಲ್ಲಿರುವ ಪುರುಷ ಮಹಿಳೆಯರೆಲ್ಲರ ನೋವು ಕೊಡ. ಮಹಿಳೆಯರು ತನ್ನ ಗಂಡನನ್ನು ಬೈದರೆ ಆ ಗಂಡ ಯಾರನ್ನು ಬೈಯಬೇಕು. ಈ ಸಮಾಜದಲ್ಲಿರುವ ವ್ಯವಸ್ಥೆಯನ್ನೋ? ನಮ್ಮ ಸರಕಾರದಲ್ಲಿ ಗೆದ್ದು ಗದ್ದುಗೆ ಏರಿರುವ ನಾಯಕರನ್ನೋ? ತಿಳಿಯದೆ ಅವನಿಗೆ ಬೇಗ ಸಿಗುವುದು ತನ್ನ ಮಡದಿ ಮಾತ್ರ, ಆದ್ದರಿಂದ ಆಕೆಯ ಮೇಲೆ ಇವನು ತನ್ನ ಆಕ್ರೋಶ ತೋರಿಸುತ್ತಾನೆ. ಆದರೆ, ಈ ಅಮಾಯಕ ಹೆಣ್ಣುಮಕ್ಕಳು ಯಾರ ಮೇಲೆ ತಮ್ಮ ಅಸಹಾಯಕತೆಯನ್ನು ತೋರುವರು ಹೇಳಿ, ಖಂಡಿತ ಈ ಮಹಿಳೆಯರ ಮಾತಿನಲ್ಲಿ ಎಷ್ಟು ಸತ್ಯವಿದೆಯಲ್ಲವೇ? ಎಲ್ಲರೂ ವಿಚಾರ ಮಾಡಬೇಕಾದ ವಿಷಯವೇ ಸರಿ.
ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಈ ಬಗ್ಗೆ ಗಮನ ಹರಿಸಿ ನಮ್ಮ ಸಾರ್ವಜನಿಕರಿಗೆ ಆಗುತ್ತಿರುವ ಅನ್ಯಾಯಕ್ಕೆ ನ್ಯಾಯ ದೊರಕಿಸಿ ಕೊಡಬೇಕು. ಈ ಆನ್ಲೈನ್ ಗ್ಯಾಸ್ ಬುಕ್ಕಿಂಗ್ನಲ್ಲಿ ಆಗುತ್ತಿರುವ ಲೋಪ ದೋಷಗಳನ್ನು ಸರಿ ಪಡಿಸಿ ನಮ್ಮ ಗ್ರಾಹಕರ ಹಿತ ರಕ್ಷಣೆ ಕಾಪಾಡಬೇಕು. ಇದು ಲೋಪದೋಷವೇನಲ್ಲ, ನಮ್ಮ ಗ್ರಾಹಕನಿಂದ ಹಗಲು ದರೋಡ ಮಾಡುತ್ತಿರುವ ನಮ್ಮ ಸಿಮ್ ಕಂಪನಿಗಳ ವಿರುದ್ಧ ದೂರು ದಾಖಲಿಸಿ, ಗ್ರಾಹನಿಗೆ ನ್ಯಾಯ ಸಿಗುವಂತೆ ಮಾಡಬೇಕಾಗಿದೆ. ಚುನಾವಣೆ ಮುಗಿದ ಬೆನ್ನಲ್ಲೆ ಈ ರೀತಿ ಎಲ್ಲಾ ಬೆಲೆಗಳನ್ನೂ ಏರಿಕೆ ಮಾಡಿ, ನಮ್ಮ ಸರಕಾರ ಜನ ಕೋಪದ ಕೆಂಗಣ್ಣಿಗೆ ತುತ್ತಾಗಿದೆ. ಮತ ಹಾಕಿ ಮತ ಹಾಕಿ ಎಂದು ಹಗಲು ರಾತ್ರಿ ನಮ್ಮ ಮನೆಬಾಗಿಲಿಗೆ ಅಲೆದರು, ಮತ ಹಾಕಿದ ಮೂರು ನಾಲ್ಕು ದಿನಗಳಲ್ಲಿಯೇ ಈ ರೀತಿ ಬೆಲೆ ಏರಿಕೆ ಮಾಡಿರುವುದು ಮಾತ್ರ ಸರಿಯಲ್ಲ. ಸಾರ್ವಜನಿಕರಿಗಿ ಹೀಗೆ ಶಾಕ್ ಮೇಲೆ ಶಾಕ್ ಕೊಡಬಾರದಿತ್ತು. ಮತ ಹಾಕಿದ ಜನರ ಹಿತ ಕಾಪಾಡಬೇಕಿತ್ತು. ಹೀಗೆ ಮತದಾರರರಿಗೆ ದ್ರೋಹ ಮಾಡಬಾರದಿತ್ತು. ಸಾರ್ವಜನಿಕರ ಹಿತ ಕಾಪಾಡಿ ಜನರಿಗೆ ನೆಮ್ಮದಿಯ ಜೀವನದ ದಾರಿಯನ್ನು ಮಾಡಿ ಕೊಡಬೇಕಾದ್ದು ನಮ್ಮ ಜನ ನಾಯಕರ ಕರ್ತವ್ಯ. ಆಗಲೇ ಉತ್ತಮ ಸಮಾಜದ ನಿಮಾರ್ಣ ಸಾಧ್ಯ.






0 Comments