ಪ್ರಭಾಕರ ಗೌರಿಬಿದನೂರು
ಫೋಟೋಗ್ರಾಫರ್ : ನನ್ನ ವೈಫು
ಬಾಲ್ಯದಲ್ಲಿ ನಮ್ಮ ಹಳ್ಳಿಯಲ್ಲಿ ಬಣ್ಣ ಬಣ್ಣದ ಬುಗುರಿಗಳು ಸಿಗುತ್ತಿರಲಿಲ್ಲ
ಅಕ್ಕ ಪಕ್ಕ ಊರುಗಳಲ್ಲಿ ಸಿಕ್ಕರೂ ಅದಕ್ಕೆ ಬೇಕಾದ ಹಣ ನಮ್ಮಲ್ಲಿ ಇರುತ್ತಿರಲಿಲ್ಲ
ಅದಕ್ಕಾಗಿ ಹಳ್ಳಿಯಲ್ಲಿಯೇ ಇದ್ದ ಬಡಗಿಯನ್ನು ಕೇಳಿ, ಅದಕ್ಕೊಂದು ಸೂಕ್ತವಾದ ಮರದ ತುಂಡು ಕೊಟ್ಟು ಮಾಡಿಸಿಕೊಳ್ಳಬೇಕಿತ್ತು.
ಬೇಸಿಗೆ ಬಂದರೆ ಸಾಕು ಗೋಲಿ, ಬುಗುರಿ, ಚಿನ್ನಿ ದಾಂಡು ಇಂತಹ ಆಟಗಳು ಆಡುತ್ತಿದ್ದ ನಮಗೆ ಊಟದ ಪರಿವೇ ಇರುತ್ತಿರಲಿಲ್ಲ.
ಜೇಬು ತುಂಬ ಗೋಲಿಗಳನ್ನು ತುಂಬಿಕೊಂಡು ಓಡಾಡುತ್ತಿದ್ದರೆ ಅವು ಮಾಡುತ್ತಿದ್ದ ಶಬ್ದ ಮತ್ತು ಹಿಂದೆ ಮುಂದೆ ಓಡಿಬರುತ್ತಿದ್ದ ಓರಗೆಯ ಗೆಳೆಯರು ಗೋಲಿಯನ್ನು ಸಾಲ ಕೇಳುತ್ತಿದ್ದರು.
ಇಡೀ ದಿನ ಬಿಸಿಲಲ್ಲಿ ಹೀಗೆ ಸುತ್ತಿಕೊಂಡು ಓಡಾಡುತ್ತಿದ್ದರೆ ಊಟದ ಪರಿವೇ ಇಲ್ಲ.
ಅಮ್ಮ ಬಂದು ಸುಪ್ರಭಾತ ಹಾಕಿದಾಗಲೇ ಮನೆಯ ಕಡೆ ಗಮನ.
ಹೈಸ್ಕೂಲು, ಕಾಲೇಜು ತಲುಪಿಕೊಳ್ಳುವ ಹೊತ್ತಿಗೆ ಕ್ರಿಕೆಟ್ ಜ್ವರ ಜಾಸ್ತಿಯಾಗಿ ಈ ಎಲ್ಲ ಆಟಗಳಿಗೆ ಪರ್ಯಾಯವಾಗಿ ಆವರಿಸಿಕೊಂಡುಬಿಟ್ಟಿತ್ತು.
ಈಗಲೂ ಮಕ್ಕಳು ಬುಗುರಿ ಆಡಿಸುತ್ತಿದ್ದರೆ ಅವರಿಂದ ಕಸಿದುಕೊಂಡು ಆಡಿಸುವ ಆಸೆ.
ಇತ್ತೀಚೆಗೆ ಹಳ್ಳಿಯೊಂದಕ್ಕೆ ಹೋದಾಗ ಸಿಕ್ಕ ಅವಕಾಶ ಇದು,
ಕೆಲವೇ ನಿಮಿಷಗಳು ಮಕ್ಕಳ ಜೊತೆ ಆಟವಾಡಿದರೂ ಬಾಲ್ಯದ ಅನೇಕ ನೆನಪುಗಳು ಮರುಕಳಿಸಿದ್ದಂತೂ ಸುಳ್ಳಲ್ಲ!






0 Comments