ಕವಿ ಮತ್ತು ಕವಿತೆ
ಲಕ್ಷ್ಮಣ್ ವಿ.ಎ
ನನ್ನ ನೆಚ್ಚಿನ ಕವಿ ತಿರುಮಲೇಶ್ ಅವರಿಗೆ ಪ್ರಕಾಶಕರು ಒಂದು ಸಲ ಅವರದೇ ಕವನ ಸಂಕಲನಕ್ಕೆ ಮುನ್ನುಡಿ ಬರೆದು ಕೊಡಲು ವಿನಂತಿಸಿಕೊಳ್ಳುತ್ತಾರೆ. ಕಾರಣವಿಷ್ಟೆ. ಸುಮಾರು ಐದುನೂರು ಪುಟಗಳ ಆ ಸಂಕಲನಕ್ಕೆ ಅವರು ಬರೆದಿದ್ದು ಕೇವಲ ನಾಲ್ಕು ಸಾಲಿನ ಮುನ್ನುಡಿ. ಆಗ ಕವಿ ತುಂಬ ಗೊಂದಲಕ್ಕೆ ತಳಮಳಕ್ಕೆ ಈಡಾಗುತ್ತಾರೆ. ಆಗ ಅವರು ಬರೆಯುತ್ತ “ಕವಿತೆ ಬರೆಯುವುದೇ ಒಂದು ಲಜ್ಜೆಯ ಕೆಲಸ , ಇನ್ನು ಅದರ ಕುರಿತಾಗಿ ಬರೆಯುವುದು ?
ಅಷ್ಟಕ್ಕೂ ಆದರ್ಶ ಕವಿತೆಯೊಂದಿದೆಯಾ ?
ಒಬ್ಬ ಕವಿ ಒಂದೇ ಕವಿತೆಯನ್ನು ಹಲವು ರೀತಿಗಳಲ್ಲಿ ಬರೆಯುತ್ತಾನೆಯೇ ಅಥವಾ ಒಂದೊಂದು ಕವಿತೆಯೂ ಬೇರೆ ಬೇರೆ ಎನ್ನಬಹುದೆ ? ಬರೆಯುತ್ತಾ ಕವಿ ಬೆಳೆಯುತ್ತಾನೆಯೇ ಅಥವಾ ಕೇವಲ ಬದಲಾಗುತ್ತಾನೆಯೆ ? ಇದ್ದ ಹಾಗೆ ಇರುತ್ತಾನೆಯೇ? ಒಬ್ಬೊಬ್ಬನ ಶೈಲಿ ಎಂದರೇನು? ಇಂಥ ಅಕೆಡೆಮಿಕ್ ವಿಷಯಗಳ ಕುರಿತು ಕವಿ ನಿಜಕ್ಕೂ ಯೋಚಿಸುತ್ತಾನೆ ಎನ್ನುವಂತಿಲ್ಲ ಯೋಚಿಸಬೇಕಾಗಿಯೂ ಇಲ್ಲ ಬಹುಶಃ ಯೋಚಿಸಿದರೆ ಅದಕ್ಕೆ ತೊಡಕೇ ಜಾಸ್ತಿ. ಕವಿತೆ ಸಹಜವಾಗಿ ಮೂಡಿ ಬರಬೇಕು ಎನ್ನುತ್ತಾನೆ ಕೀಟ್ಸ್. ಸಹಜವಾಗಿ ಅಂದರೆ? ಕಲೆಯಲ್ಲಿ ಸಹಜ ಎಂಬುದೊಂದಿದೆಯೆ ?
ಸಾಹಿತ್ಯ ಲೇಖಕನಿಂದ ಓದುಗನಿಗೆ ದಾಟಿ ಸಾಕಷ್ಟು ಸಮಯವಾಯಿತು. ಓದುಗ ಯಾವುದನ್ನು ಇಷ್ಟ ಪಡುತ್ತಾನೆಯೋ ಅದೇ ಒಳ್ಳೆಯ ಕವಿತೆ. ಓದುಗ ಹೇಗೆ ಅರ್ಥವಿಸುತ್ತಾನೆಯೋ ಅದೇ ಅದರ ಅರ್ಥ.-ಎಂಬ ಮುಂತಾದ ವಾದವಿದೆ , ಇದೂ ಅರ್ಧ ಸತ್ಯವೆ . ಯಾಕೆಂದರೆ ಹೀಗೆ ಅಂದುಕೊಳ್ಳುತ್ತಾ ನಾವು ಆದರ್ಶ ಕವಿತೆಯನ್ನು ಬಿಟ್ಟು ಆದರ್ಶ ವಾಚಕನ ಕಲ್ಪನೆ ಮಾಡುತ್ತೇವೆ. ಕವಿತೆ ಅರ್ಥವಾಗುವ ಮೊದಲೇ ಓದುಗನನ್ನು ತಲುಪಬೇಕೆನ್ನುತ್ತಾನೆ ಎಲಿಯೆಟ್. ಇದೂ ಒಂದು ಒಗಟೇ ಸರಿ ಆದರೆ ನಮಗೆ ಇಷ್ಟವಾಗುವ ಒಗಟು.”
ನೀವು ಫೇಸ್ ಬುಕ್ ಬಂದ ಮೇಲೆ ಕವಿಗಳ ಕಾಟ ಜಾಸ್ತಿಯಾಯಿತೆಂದರೆ ನಾನು ಅದಕ್ಕೆ ಖುಷಿ ಪಡುತ್ತೇನೆ. ಈ ಮೂಲಕವಾದರೂ ತಪ್ಪೋ ಒಪ್ಪೋ ಒಂದು ಭಾಷೆ ಜೀವಂತವಾಗಿರುತ್ತದೆ. ಒಂದು ಭಾಷೆ ಜೀವಂತವಾಗಿರುತ್ತದೆಂದರೆ ಈ ಕವಿಗಳ ಕಾಟ ಇನ್ನೂ ಜಾಸ್ತಿಯಾಗಲಿ ಎಂದು ಹಾರೈಸುವೆ.
ಮುಖ್ಯವಾಗಿ ಈ ಯವ ಕವಿಗಳಿಗೆ ಬೇಕಾಗಿರುವುದು ಮಾರ್ಗದರ್ಶನ . ಮುಂಚೆ ವಿಶ್ವವಿದ್ಯಾನಿಲಯಗಳು ಇಂತಹ ಕಾವ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸ ಮಾಡುತ್ತಿದ್ದವು. ಈಗ ಫೇಸ್ ಬುಕ್ ಮಾಡಬೇಕಿದೆ.





0 Comments