ಈಗ ಕಳಚಿಕೊಳ್ಳಲೇನಿದೆ? ವಿಷಾದದ ನಗೆ ನಕ್ಕಳು ದ್ರೌಪದಿ

ನೀನಿಲ್ಲದ ಸ್ವರ್ಗ ನನಗೆ ಬೇಡ

“ನಾಳೆ ಹೊರಡುವ ತಯಾರಿಗಳೆಲ್ಲವೂ ನಡೆದಿದೆಯಲ್ಲವೆ ದೇವಿ?” ಹೀಗೊಂದು ಪ್ರಶ್ನೆಯನ್ನು ಬಾಗಿಲಿನಲ್ಲಿ ನಿಂತೇ ಕೇಳಿ, ಅದೇನೋ ಮಹತ್ಕಾರ್ಯವಿರುವಂತೆ ನಿರ್ಗಮಿಸಿದ್ದಾನೆ ಧರ್ಮರಾಜ. ಉತ್ತರವನ್ನು ಬಯಸದ ಇಂತಹ ಪ್ರಶ್ನೆಗಳನ್ನು ಕೇಳಿ, ಕೇಳಿ ಆಕೆಗೆ ಇತ್ತೀಚೆಗೆ ರೂಢಿಯಾಗಿಹೋಗಿದೆ. ಅಷ್ಟಕ್ಕೂ ನಾಳಿನ ಪ್ರಯಾಣಕ್ಕೆ ತಯಾರಿ ಮಾಡಿಕೊಳ್ಳುವಂಥದ್ದೇನಿದೆ? ಎಲ್ಲ ಮುಗಿದು ಹೊರಡುವ ಗಳಿಗೆ ಕೂಡಿಸಿಕೊಳ್ಳುವುದೇನೂ ಇಲ್ಲ. ನಿಜ, ತಯಾರಿ ಬೇಕಿದೆ, ಕಳಚಿಕೊಳ್ಳಲು…..

ಕಳಚಿಕೊಳ್ಳುವುದು ಎಂದು ನೆನಪಾದೊಡನೆ ಅವಳ ಮನದಲ್ಲೆಲ್ಲಾ ಶೂನ್ಯಭಾವ ತುಂಬಿಹೋಯಿತು. ಏನಿದೆ ನನಗೆ ಕಳಚಿಕೊಳ್ಳಲು? ಎಲ್ಲವೂ ಒಡಲೊಳಗೆ ತುಂಬುವ ಮೊದಲೇ ಖಾಲಿಯಾಗಿಹೋಗಿವೆ. ಯಾವುದನ್ನು ನಾನು ತುಂಬಿಕೊಂಡಿರುವೆ? ಒಂದು ಅಖಂಡ ಪ್ರೀತಿಯನ್ನು ನನ್ನೊಳಗೆ ಕಾಪಿಟ್ಟುಕೊಳ್ಳುವ ಬಯಕೆ ಚಿಗುರೊಡೆಯುವ ಮುನ್ನವೇ ಕಮರಿಹೋಯಿತು. ಪಾರ್ಥನನ್ನು ಪತಿಯಾಗಿ ಪಡೆದ ಹೆಮ್ಮೆ ಪಾಂಡವರೈವರ ಪತ್ನಿಯಾಗುವ ನಿಯಮದೊಂದಿಗೆ ಮುರುಟಿಕೊಂಡಿತು. ಸಾಮ್ರಾಜ್ಞಿಯಾಗುವ ಕನಸು ಧರ್ಮಜನ ಜೂಜಿನಲ್ಲಿ ಕೊನೆಕೊಂಡಿತು. ಪುಟ್ಟ ಮಕ್ಕಳನ್ನು ಎತ್ತಿ ಆಡಿಸುವ ಸುಖ ವನವಾಸದಲ್ಲಿ ಮರೆಯಾಯಿತು. ಬೆಳೆದ ಮಕ್ಕಳ ಅಭ್ಯುದಯವನ್ನು ನೋಡುವ ಭಾಗ್ಯವೂ ಅಶ್ವತ್ಥಾಮನಿಂದಾಗಿ ನಾಶವಾಯಿತು. ಮತ್ತೆ ಈ ಸಾಮ್ರಾಜ್ಯ? ಇದು ಎಂದಿಗೂ ನನ್ನದು ಅನಿಸಲೇ ಇಲ್ಲ. “ಧರ್ಮಜನಿಗೆ ಅನ್ಯಪತ್ನಿಯರಿಲ್ಲ. ನೀನೇ ಅವನೊಂದಿಗೆ ಪಟ್ಟವೇರಬೇಕು.” ಅತ್ತೆಯ ಕೊನೆಯ ಆಸೆಗೆ ಅಸ್ತು ಎನ್ನಲೇಬೇಕಿತ್ತು. ಅದೂ ಆಗಿಹೋಯಿತು. ಈಗ ಕಳಚಿಕೊಳ್ಳಲೇನಿದೆ? ವಿಷಾದದ ನಗೆ ನಕ್ಕಳು ದ್ರೌಪದಿ.

ನಾಳೆ ಮಹಾಪ್ರಸ್ಥಾನ, ಅಂದರೆ ಜೀವಂತವಾಗಿ ಸ್ವರ್ಗಾರೋಹಣ ಮಾಡುವ ಪಯಣ. ಈ ಧರ್ಮರಾಜನಿಗೆ ಮೊದಲಿನಿಂದಲೂ ಇಂಥದ್ದೇ ತೆವಲು. ತಾನು ಧರ್ಮಾತ್ಮ, ತಾನು ವೈರಾಗ್ಯ ಮೂರುತಿ ಎಂದೆಲ್ಲ ಜನರೆದುರಿಗೆ ತನ್ನನ್ನು ಪ್ರತಿಷ್ಠಾಪಿಸಿಕೊಳ್ಳುವ ಹುಚ್ಚು ಬಯಕೆ. ಎಲ್ಲ ಥೇಟ್ ಆ ಮಂತ್ರಿ ವಿದುರನದೇ ಪಡಿಯಚ್ಚು. ತಾನಿವನನ್ನು ವಿದುರನೊಂದಿಗೆ ಬೆಳೆಯಲು ಬಿಟ್ಟದ್ದೇ ತಪ್ಪಾಯ್ತು ಎಂದು ಅತ್ತೆ ಕುಂತಿದೇವಿ ಅದೆಷ್ಟು ಬಾರಿ ಅಲವತ್ತುಕೊಂಡಿದ್ದರೋ ತಿಳಿಯದು.

ದ್ರೌಪದಿ ಏನೊಂದೂ ತಯಾರಿ ನಡೆಸದೇ ಹಾಸಿಗೆಗೆ ಜಾರಿದಳು. ನಾಳೆಯ ಪ್ರಸ್ಥಾನದೊಂದಿಗೆ ಬದುಕೊಂದು ಅಂತ್ಯವನ್ನು ಕಾಣುತ್ತದೆಯೆಂದು ನಿರುಮ್ಮಳವಾಗಿ ಕಣ್ಮುಚ್ಚಿದಳೇನೋ ಸತ್ಯ. ಆದರೆ ಅವಳ ಮನಸ್ಸು ಮಾತ್ರ ಮಹಾಪ್ರಸ್ಥಾನದ ವಿರುದ್ಧ ದಿಕ್ಕಿನಲ್ಲಿ ಮರುಪ್ರಯಾಣಕ್ಕೆ ಹೊರಟಿತ್ತು. ಅದು ಅವಳ ಬದುಕಿನ ಪ್ರಸ್ಥಾನವಾಗಿತ್ತು.

ಈ ಪ್ರಸ್ಥಾನ..
ಮುಕ್ತಿ ಪಥವಲ್ಲ, ಸತ್ಯದಾ ನಡಿಗೆ
ಈ ಮರುಪ್ರಯಾಣ
ಬರಿಯ ಮಾತಲ್ಲ, ಹೃದಯ ಭಾಷೆಯನು
ಅರಿವ ಅರಿವಿನಾ ಯಾನ
ಮಿಥ್ಯೆ ಸರಿಸಿ, ಸತ್ಯವನು ಅರಸುವಾ
ನಿಜದ ಈ ಪ್ರಯಾಣ
ಸಾರ್ಥ ಬದುಕಿನಾ, ಸೂತ್ರ ಅರಿಯುವಾ
ನವ ಅನ್ವೇಷಣ ಯಾನ
ಮನಕೆ ಮುಸುಕಿದಾ, ತೆರೆಯ ಸರಿಸುವ
ನಿಜದ ಈ ಪ್ರಯಾಣ
ಮನವ ಅರಿಯುವಾ, ಮನುಜನಾಗುವ
ಮನುಕುಲದ ಮಹಾಯಾನ
ಇದು..
ನಿಜದಭಿಯಾನ..ಈ ಪ್ರಸ್ಥಾನ..
ಪರದ ಪದವನು, ಇಹದಿ ಹೊಂದುವಾ
ನವಮನ್ವಂತರ ಗಾನ..

“ಅಗೋ, ಅಲ್ಲಿ ದೂರದಲ್ಲಿ ಕುಳಿತಿದ್ದಾನೆ ನೋಡು. ಅವನೇ ಕೃಷ್ಣ. ನಿನಗೇನು ಕೇಳಲಿಕ್ಕಿದೆಯೋ ಅವನನ್ನೇ ಕೇಳಿಕೊ.” ಸಖಿಯರು ಅವಳನ್ನು ಅಲ್ಲಿಯೇ ಬಿಟ್ಟು ತೆರಳಿದ್ದರು. ನಾನು ಸರಭರನೆ ನಡೆಯುತ್ತಾ ಕೃಷ್ಣನ ಬಳಿಗೆ ಬಂದಿದ್ದೆ. ಅವನೋ ನನ್ನನ್ನೇ ಕಾಯುತ್ತಿರುವವನಂತೆ ಪರಿಚಿತ ನಗುವನ್ನು ಬೀರಿ, ಕೈ ಹಿಡಿದು ಸ್ವಾಗತಿಸಿದ್ದ. ಅವನ ಒಂದೇ ಒಂದು ಸ್ಪರ್ಶಕ್ಕೆ ಅದೆಂಥಹ ಭರವಸೆಯ ಬಿಸುಪಿತ್ತು. ನಾನು ಮದುವೆಯಾದರೆ ಇವನನ್ನೆ ಎಂದು ಆ ಕ್ಷಣದಲ್ಲಯೇ ನಿರ್ಧರಿಸಿಯಾಗಿತ್ತು. ಕಾಟಾಚಾರಕ್ಕೆ ಅದೂ, ಇದೂ ಮಾತನಾಡಿಯಾಯಿತು. ಮನಸ್ಸು ಮಾತ್ರ ಬೇರೆಯೇ ಲೆಕ್ಕಾಚಾರದಲ್ಲಿ ಮುಳುಗಿತ್ತು. ಅಪ್ಪನಿಗೆ ವಿಷಯ ತಿಳಿಸುವ ಮೊದಲು ಇವನನ್ನೇ ಕೇಳುವುದೊಳಿತು ಎನಿಸಿತು. ರಾಜಕುಮಾರಿಯರಿಗಿರುವ ಹುಸಿಲಜ್ಜೆಯನ್ನು ಎಂದೋ ಮೀರಿಯಾಗಿತ್ತು. ನೇರವಾಗಿ ಅವನನ್ನೇ ಕೇಳಿದ್ದೆ, “ನನ್ನನ್ನು ಮದುವೆಯಾಗುತ್ತೀಯೇನು?” ಅವನು ನನ್ನ ಪ್ರಶ್ನೆಗೆ ನಕ್ಕುಬಿಟ್ಟಿದ್ದ. “ಖಂಡಿತ ಸಾಧ್ಯವಿಲ್ಲ.” ನನಗಿದು ಅನಿರೀಕ್ಷಿತವಾಗಿತ್ತು. ವಾದಕ್ಕೆ ನಿಂತಿದ್ದೆ, “ಯಾಕೆ ಸಾಧ್ಯವಿಲ್ಲ?” ಅವನು ಅಷ್ಟೇ ಶಾಂತವಾಗಿ ಉತ್ತರಿಸಿದ್ದ. “ಈ ಪ್ರಶ್ನೆಗೆ ನಿನ್ನ ತಂದೆ ಮಾತ್ರ ಉತ್ತರಿಸಬಲ್ಲರು.” ಮಾತು ಒಗಟಿನಂತಿತ್ತು. ನಾನು ದಾಪುಗಾಲು ಹಾಕುತ್ತಾ ತಂದೆಯಿರುವಲ್ಲಿಗೆ ನಡೆದಿದ್ದೆ.

ಪ್ರೀತಿಗಾಗಿ ಮಕ್ಕಳನ್ನು ಹಡೆಯುತ್ತಾರೆ ಎಂದುಕೊಂಡಿದ್ದೆ. ಆದರೆ ದ್ವೇಷಕ್ಕಾಗಿ ಮಕ್ಕಳನ್ನು ಪಡೆದ ಕಥೆಯನ್ನು ತಂದೆ ನನಗೆ ಹೇಳಿದರು. ಮಗನಂತೆಯೇ ನನ್ನನ್ನು ಬೆಳೆಸಿದ್ದಾರೆಂಬ ಹೆಮ್ಮೆ ಆ ದಿನದಿಂದ ಸ್ವಾರ್ಥವಾಗಿ ಕಾಣತೊಡಗಿತು. ತಂದೆಯೆಂದರು, “ಮಗಳೇ, ಆ ಗೋವಳನಿಗೆ ಮನಸೋಲಬೇಡ, ದ್ರೋಣನನ್ನು ಸೋಲಿಸುವ ಬಿಲ್ಗಾರನಲ್ಲ ಅವನು. ಅಸಲಿಗೆ ಅವನಿಗೆ ಶಸ್ತ್ರಾಸ್ತ್ರಗಳ ವಿದ್ಯೆಯ ಉಪದೇಶವೇ ಆಗಿರಲಿಲ್ಲ. ತೀರ ಇತ್ತೀಚೆಗೆ ಅವನು ಕ್ಪತ್ರಿಯನೆಂದು ಸಾಬೀತಾದ ಮೇಲೆ ಅವನಜ್ಜ ಉಗ್ರಸೇನ ಸಾಂದೀಪನಿ ಗುರುಗಳಿಂದ ವಿದ್ಯೆಯ ಉಪದೇಶ ಕೊಡಿಸಿದ್ದಾರೆ. ಅವನು ನನ್ನ ಪ್ರತಿಜ್ಞೆಯನ್ನು ಎಂದಿಗೂ ಈಡೇರಿಸಲಾರ.” ನಾನು ತಂದೆಯ ಪ್ರತಿಜ್ಞೆಯ ಪಣವಾಗಿದ್ದ ಸತ್ಯವನ್ನು ಕೃಷ್ಣ ನನ್ನೆದುರು ತೆರೆದಿಟ್ಟ ಪರಿಯಿದು.

ನನಗೀಗ ಎಲ್ಲವೂ ಅರ್ಥವಾಗತೊಡಗಿತ್ತು, ಸತ್ಯ ಎಷ್ಟೊಂದು ಕಠಿಣವಾಗಿತ್ತು! ತಂದೆ ತನ್ನ ಮಗಳು ಮಗನಿಗೆ ಸಮಾನವೆಂಬ ಹೆಮ್ಮೆಯಿಂದಲ್ಲ ನನಗೆ ಬಿಲ್ವಿದ್ಯೆಯನ್ನು ಕಲಿಸಿದ್ದು. ಶೂರನನ್ನು ಕೈಹಿಡಿಯಲು ಅದೊಂದು ಪೂರ್ವತಯಾರಿಯಾಗಿತ್ತಷ್ಟೆ ಅದು. ಅಥವಾ ಎಲ್ಲಿಯಾದರೂ ಸಮಯ ಬಂದರೆ ನನ್ನಿಂದಲೇ ತಮ್ಮ ಪ್ರತಿಜ್ಞೆಯನ್ನು ಈಡೇರಿಸಿಕೊಳ್ಳುವ ಮಹದಾಸೆಯೂ ಇದ್ದೀತು. ಅದಕ್ಕೇ ಇರಬೇಕು, ಅಪ್ಪನಿಗೆ ಅಸಹಾಯನಾದ ದೊಡ್ಡಣ್ಣನೆಂದರೆ ಅದೆಷ್ಟು ಅಸಹನೆ? ಯಾಕಾದರೂ ಹುಟ್ಟಿದನೋ ಎಂಬಷ್ಟು ತಾತ್ಸಾರ! ನನ್ನ ಮನಸ್ಸೀಗ ಗೊಂದಲದ ಗೂಡಾಗಿತ್ತು. ಓಡೋಡಿ ಕೃಷ್ಣನಲ್ಲಿಗೆ ಹೋದೆ. ಅವನು ಮತ್ತದೇ ಶಾಂತ ನಗೆ ನಕ್ಕ. ನನ್ನ ಸಹನೆಯ ಮಿತಿ ಮೀರಿತ್ತು. ಅವನ ಭುಜಹಿಡಿದು ಅಲ್ಲಾಡಿಸಿ ಕೇಳಿದೆ, “ಹೇಳು, ನಿನಗೆ ನಾನು ಏನೂ ಅಲ್ಲವೆ?” ಕೋಪದಿಂದ ಅದುರುತ್ತಿರುವ ನನ್ನ ತಲೆಯನ್ನು ಅದೆಷ್ಟು ಪ್ರೀತಿಯಿಂದ ನೇವರಿಸಿ ನುಡಿದ, “ಕೃಷ್ಣೆ, ನೀನು ನನ್ನ ಪ್ರಾಣ” ಜಗತ್ತು ಹೇಳುತ್ತದೆ ಕೃಷ್ಣ ‘ಮಮ ಪ್ರಾಣಾಯ ಪಾಂಡವ’ ಎಂದು ನುಡಿದನೆಂದು. ಸತ್ಯ ನಮ್ಮಿಬ್ಬರೆದೆಯಲ್ಲಿ ಶಾಸನವಾಗಿದೆ.

ಪ್ರೀತಿಯೆಂದು ಹುಟ್ಟಿದ್ದು ಒಮ್ಮೆ ಮಾತ್ರ. ಮತ್ತೆಲ್ಲವೂ ಯೋಜಿತವಾಗಿ ನಡೆದವು ಬದುಕಿನಲ್ಲಿ. ನಾನು ಯಾರೋ ನಡೆಸುವ ಪಗಡೆಯ ದಾಳವಾಗಿಬಿಟ್ಟೆ. ಎಷ್ಟೊಂದು ಕೈಗಳು ನಡೆಸಿದವು ನನ್ನನ್ನು. ಅತ್ತೆ ಕುಂತಿಯಲ್ಲಿ ಅತ್ತು ಕೇಳಿದ್ದೆ ಅಂದು. ಐವರ ಪತ್ನಿಯಾಗಿಸಿದ ಸಂದಿಗ್ದತೆಯ ಬಗ್ಗೆ. ಅವರೂ ಕಣ್ಣೀರಾಗಿ ತನ್ನ ಬದುಕಿನ ಬೇಗೆಯನ್ನು ನನ್ನೆದುರು ಎಳೆಎಳೆಯಾಗಿ ತೆರೆದಿಟ್ಟಿದ್ದರು. ಸಾವಿರ ಹೆಣ್ಣುಗಳನ್ನು ಭೋಗಿಸಿ ನಪುಂಸಕನಾದ ಗಂಡನ ದುರ್ಭರ ಬದುಕು ಅವರನ್ನು ಕಲ್ಲಾಗಿಸಿತ್ತು. ಐವರನ್ನೂ ಒಗ್ಗೂಡಿಸುವ ದಾರವಾಗಿ ಅವರು ನನ್ನನ್ನು ನೋಡಿದ್ದರು. “ನಿನಗೆ ಆ ಶಕ್ತಿಯಿದೆ. ನಿನಗೆ ಅಂತಲ್ಲ, ಎಲ್ಲ ಹೆಣ್ಣುಗಳಿಗೂ ಇದೆ ದ್ರೌಪದಿ. ಆದರೆ ತಾನೇ ವಿಜಯಿಯೆಂಬ ಗಂಡಿನ ಹುಸಿ ಉನ್ಮಾದವನ್ನು ಹೆಣ್ಣು ಸುಮ್ಮನೆ ನಕ್ಕು ಆನಂದಿಸುತ್ತಾಳೆ ಅಷ್ಟೆ. ನಿನ್ನಿಂದ ಮಾತ್ರವೇ ಪಾಂಡವರ ಉದ್ಧಾರ ಸಾಧ್ಯ. ಅದನ್ನು ಸಾಧಿಸುತ್ತೇನೆಂದು ಮಾತುಕೊಡು” ಎಂದರು. ಅಲ್ಲಿಗೆ ಒಂದು ಗಂಟು ನನ್ನ ಸುತ್ತಲೂ ಬಿಗಿಗೊಂಡಿತ್ತು.

ಕೆಲವೊಮ್ಮೆ ನನ್ನ ಅಪ್ಪನ ದಡ್ಡತನದ ಬಗ್ಗೆ ನನಗೇ ನಗು ಬರುವುದುಂಟು. ದ್ರೋಣನನ್ನು ಸೋಲಿಸಲು ಅವನ ಶಿಷ್ಯನನ್ನೇ ಅಳಿಯನೆಂದು ಸ್ವೀಕರಿಸಿದ ಅವನ ವರಸೆಯೇ ನನಗೆ ಅರ್ಥವಾಗದು. ಎಲ್ಲವೂ ಹರಿಯ ಮಹಿಮೆ. ನನಗೋ ಹರಿಯೊಂದಿಗೆ ಇರುವೆನೆಂಬ ತಾತ್ಕಾಲಿಕ ಸಂತಸ. ಮದುವೆ ಮಾಡಿಕೊಟ್ಟ ಅಪ್ಪ ಕಾದದ್ದು ಅದೆಷ್ಟು ವರ್ಷ? ಮಹಾಭಾರತ ಯುದ್ಧವಾಗುವವರೆಗೂ ಬರಿಯ ಕಾಯುವಿಕೆಯೇ ಆಯಿತು. ಅಂತೂ ಅಪ್ಪನ ಆಸೆಯಂತೆ ಪಾರ್ಥನ ಕೈಯ್ಯಿಂದಲೇ ದ್ರೋಣರು ಸತ್ತರು. ಆದರೆ ಅದನ್ನು ನೋಡಲು ಅಪ್ಪ ಜೀವಂತ ಇರಲೇ ಇಲ್ಲ. ಅಪ್ಪ ಅಣ್ಣಂದಿರ ನೆನಪಾದೊಡನೇ ದ್ರೌಪದಿ ಹನಿಗಣ್ಣಾಗಿ ಮಗ್ಗುಲು ಬದಲಾಯಿಸಿದಳು. ಮತ್ತೆ ನಾಳೆಯ ಪಯಣದ ನೆನಪಾಯಿತು. ಕಣ್ಮುಚ್ಚಿ ನಿದ್ರಿಸುವ ಪ್ರಯತ್ನ ಮಾಡಿದಳು.

ಮುಂಜಾನೆಯೇ ಪ್ರಯಾಣಕ್ಕೆ ಎಲ್ಲವೂ ಸಜ್ಜುಗೊಂಡಿತ್ತು. ಉತ್ತರೆಯ ಮಗುವನ್ನು ಪಟ್ಟದಲ್ಲಿ ಕೂರಿಸಿ ರಾಜನೆಂದು ಸಾರಲಾಗಿತ್ತು. ಪ್ರಜಾಜನರೆಲ್ಲ ಸೇರಿ ವಿದಾಯದ ಕಣ್ಣೀರು ಸುರಿಸಿದ್ದರು. ಅದಕುತ್ತರವೆಂಬಂತೆ ಧರ್ಮರಾಜ ತಾವೆಲ್ಲರೂ ಪಾಲಿಸುತ್ತಿರುವ ರಾಜಧರ್ಮದ ಬಗ್ಗೆ ತುಸು ಹೆಚ್ಚೇ ಮಾತನಾಡಿದ್ದ. ಮಾಮೂಲಿಯಂತೆ ನಾಲ್ವರೂ ತಲೆಬಗ್ಗಿಸಿ ಕುಳಿತು ಅಣ್ಣನ ಮಾತಿಗೆ ತಲೆದೂಗಿದ್ದರು. ಅವರು ಕುಳಿತ ಭಂಗಿಯನ್ನು ಕಂಡಾಗ ದ್ರೌಪದಿಗೆ ಬೇಡವೆಂದರೂ ಆ ದಿನದ ನೆನಪಾಗಿತ್ತು.

ದುಃಶ್ಯಾಸನ ನನ್ನ ಮುಡಿಗೆ ಕೈಯ್ಯಿಟ್ಟು ಎಳೆದಾಗ ಅಂಥ ಅವಮಾನವೇನೂ ಆಗಿರಲಿಲ್ಲ. ಸಭೆಯಲ್ಲಿ ಹೇಗೂ ನನ್ನ ಗಂಡಂದಿರಿದ್ದಾರೆ, ಈ ದುಷ್ಟನಿಗೊಂದು ಗತಿಕಾಣಿಸುತ್ತಾರೆಂದು ಎಷ್ಟು ಧೈರ್ಯದಲ್ಲಿದ್ದೆ ನಾನು. ಆದರೆ ನಡೆದದ್ದು ಎಲ್ಲವೂ ವ್ಯತಿರಿಕ್ತವೇ ಆಗಿತ್ತು. ಹೀಗೆ ಅಣ್ಣನ ಆಣತಿಗೆ ಕಾಯುತ್ತಾ, ತಲೆಬಗ್ಗಿಸಿ ಕುಳಿತಿದ್ದರು ನಾಲ್ವರೂ. ನಿಜಕ್ಕೂ ನನ್ನ ಮನಸ್ಸು ಕಲ್ಲಾಗಿ ಹೋಗಿತ್ತು. ಅತ್ತೆಗೆ ಮಾತು ಕೊಟ್ಟಿಲ್ಲದಿದ್ದರೆ ಅಂದೇ ಪಾಂಚಾಲಕ್ಕೆ ಮರಳಿಬಿಡುತ್ತಿದ್ದೆನೋ ಏನೋ? ಯಾರನ್ನು ಏನೆಂದು ಕೇಳುವುದು? ಧರ್ಮಸೂಕ್ಷ್ಮದ ಮಾತುಗಳನ್ನಾಡಿ ತಾತ ಭೀಷ್ಮ, ಮಂತ್ರಿ ವಿದುರನ ಗಮನ ಸೆಳೆಯುವ ತಂತ್ರ ಮಾಡಿದೆ. ಅವರೂ ಆ ದುರ್ಯೋಧನನ ಯಂತ್ರವಾಗಿದ್ದರೆಂಬ ಸತ್ಯದ ಅರಿವಾಯಿತಷ್ಟೆ. ಹೇಡಿ ದುಃಶ್ಯಾಸನ! ಸೀರೆಯನ್ನು ಹಿಡಿದು ಎಳೆಯತೊಡಗಿದ. ತಲೆತಗ್ಗಿಸಿ ಕುಳಿತವರನ್ನು ನೋಡಲಾಗದೇ ತಲೆಯೆತ್ತಿ ನೋಡಿದರೆ ನಗುವ ಕೃಷ್ಣ ಕಾಣಿಸಿದ. ಮನಸ್ಸಿಗೊಂದು ಭರವಸೆ ಸಿಕ್ಕಿತು. ಸೆರಗು ಜಾರದಂತೆ ಗಟ್ಟಿಯಾಗಿ ಹಿಡಿದು ನಿಂತೆ. ಸಲೀಸಾಗಿ ಸೀರೆಯೆಳೆಯುತ್ತಿದ್ದ ದುಷ್ಟ ಜಾರಿ ಬಿದ್ದ. ಇಡೀ ಸಭೆ ಗೊಳ್ಳನೆ ನಕ್ಕಿತು. ಅವಮಾನಗೊಂಡು ಶಪಿಸುತ್ತಾ ಒಳಗೋಡಿ ಹೋದ. ಕೃಷ್ಣ ಮತ್ತೆ ನುಡಿದಂತಾಯ್ತು, ‘ನೀನು ನನ್ನ ಪ್ರಾಣ’

ಈಗ ಪ್ರಯಾಣ ಆರಂಭಗೊಂಡಿದೆ. ಧರ್ಮರಾಯ ನಮ್ಮ ಪಯಣದ ನಿಯಮಗಳನ್ನು ಹೇಳುತ್ತಿದ್ದಾನೆ. ಮುಂದೆ ಹಿರಿಯರು, ಹಿಂದೆ ಕಿರಿಯರು, ಕೊನೆಯಲ್ಲಿ ನಾನು. ಯಾರೊಬ್ಬರೂ ಎಂದಿಗೂ ಹಿಂದಿರುಗಿ ನೋಡುವಂತಿಲ್ಲ. ಯಾರೇ ಬಿದ್ದರೂ ಎತ್ತುವಂತಿಲ್ಲ. ಅದು ಅವರ ಪ್ರಾರಬ್ದಕರ್ಮವೆಂದು ಮುಂದೆ ಸಾಗುತ್ತಿರಬೇಕು ಅಷ್ಟೆ. ಶುರುವಾಯಿತು ನಮ್ಮ ಪಯಣ. ಪ್ರಯಾಣಕ್ಕೆ ಅನವಶ್ಯಕ ಮಾತುಗಳು ನಿಷಿದ್ಧ. ಮಾತಿಲ್ಲದಿದ್ದಾಗ ಮನಸ್ಸು ಮಾತಾಗುತ್ತದೆ.

ಸಾಮಾನ್ಯ ಪಾಡೇ ಎಷ್ಟು ಒಳ್ಳೆಯದು. ವೃದ್ಧರಾದರೆ ಮನೆಯಲ್ಲಿ ಮಲಗಿ ಸಾಯುತ್ತಾರೆ. ಮಕ್ಕಳು, ಬಂಧುಗಳು ಅವರ ಕಾರ್ಯಗಳನ್ನು ಮಾಡುತ್ತಾರೆ. ಆದರೆ ಈ ರಾಜರದು ಎಲ್ಲವೂ ವಿಪರೀತ ನಡೆಗಳೇ. ವಾನಪ್ರಸ್ಥವೆಂದು ಕಾಡಿಗೆ ಹೊರಡುವುದು, ಅಲ್ಲಿ ಪ್ರಾಣಿಗಳ ಬಾಯಿಗೋ, ಕಾಳ್ಗಿಚ್ಚಿನ ಬೆಂಕಿಗೋ ಬಿದ್ದು ಪ್ರಾಣ ಬಿಡುವುದು ಸುದ್ಧಿ ತಿಳಿದ ನಂತರ ಅವರ ಪ್ರತಿಕೃತಿಗಳನ್ನಿಟ್ಟು ಅರಮನೆಯಲ್ಲಿ ಮತ್ತೆ ಕ್ರಿಯಾವಿಧಿಗಳನ್ನು ನಡೆಸುವುದು…. ಕುಂತಿ, ವಿದುರ, ಗಾಂಧಾರಿ, ದೃತರಾಷ್ಟ್ರರು ಕಾಳ್ಗಿಚ್ಚಿನಲ್ಲಿ ಬೆಂದುಹೋದ ನೆನಪಾಯಿತು ಅವಳಿಗೆ. ಯೋಚಿಸುತ್ತಿರುವಂತೆ ದ್ರೌಪದಿಗೆ ಮತ್ತೇನೋ ಹೊಳೆಯಿತು. ಓಹೋ! ಇದಕ್ಕೇ ಇರಬೇಕು, ಧರ್ಮರಾಜ ಜೀವಂತವಾಗಿ ಸ್ವರ್ಗಾರೋಹಣಕ್ಕೆ ಮನಮಾಡಿರುವುದು. ಸತ್ತರೆ ಕ್ರಿಯಾವಿಧಿ ನಡೆಸಲೂ ಸಂತಾನವಿಲ್ಲದ ನತದೃಷ್ಟರು ನಾವಾದೆವೆಂದು ಪ್ರಜೆಗಳೆಲ್ಲ ತಿಳಿಯದಿರಲೆಂಬುದು ಇವನ ಹುನ್ನಾರವಿದ್ದೀತು!

ಒಂದಲ್ಲ, ಎರಡಲ್ಲ, ಐದು ಮಕ್ಕಳನ್ನು ಹಡೆದಿದ್ದೆ. ವರ್ಷಕ್ಕೊಂದರಂತೆ ತಪತಪನೆ ಮಡಿಲು ತುಂಬಿದ ಮಕ್ಕಳನ್ನು ನೋಡಿ ಅತ್ತೆಗೆ ಅದೆಂತಹ ಸಂತೋಷ. ನನ್ನನ್ನು ತವರಿಗೂ ಹೋಗಲು ಬಿಡದೇ ತಾನೇ ನಿಂತು ಆರೈಕೆ ಮಾಡಿದ್ದಳು. ಹೆತ್ತರೆ ಸಾಕೇನು? ಮಕ್ಕಳಿಗೆ ಶಿಕ್ಷಣವನ್ನೂ ನಿಡಬೇಕಲ್ಲವೆ? ಸರಿಯಾಗಿ ಅವರೆಲ್ಲರೂ ಮಾತು ಕಲಿಯುವ ಹೊತ್ತಿಗೆ ನಾವೆಲ್ಲರೂ ವನವಾಸಕ್ಕೆ ಹೊರಟಾಗಿತ್ತು. ನಾನು ಐವರನ್ನೂ ಎದೆಗವಚಿಕೊಂಡೇ ಹೊರಟಿದ್ದೆ. ಅತ್ತೆ ತಡೆದಳು. ಕಾಡಿನ ದಾರಿ ಕಠಿಣವೆಂದಲ್ಲ, ತನ್ನ ಮಕ್ಕಳೆಲ್ಲಯಾದರೂ ದಾರಿ ತಪ್ಪಬಹುದೆಂದು. ಹಿಡಿಂಬಿಯ ಮೋಹಕ್ಕೆ ಸಿಲುಕಿದ ಭೀಮನ ಕಥೆ ಹೇಳಿದರು ಅತ್ತೆ. ನಾನು ಆಗ ನಿಜಕ್ಕೂ ಅತ್ತೆ. ಮಕ್ಕಳನ್ನು ತವರಿಗೆ ಕಳುಹಿಸಿ ಗಂಡಂದಿರ ದಾರಿ ಹಿಡಿದೆ.

ಅಜ್ಜನ ಮನೆಯನ್ನೇ ನೋಡದೇ ಬೆಳೆದ ಮಕ್ಕಳವು. ಅಪರಿಚಿತ ಪರಿಸರದಲ್ಲಿ ಅದೆಷ್ಟು ನೊಂದುಕೊಂಡವೋ ಬಲ್ಲವರ್ಯಾರು? ವಿದ್ಯೆ ಕಲಿತರೇನೋ ನಿಜ. ಏನು ಕಲಿತರು, ಎಷ್ಟು ಕಲಿತರು ಯಾರೊಬ್ಬರೂ ತಲೆಕೆಡಿಸಿಕೊಳ್ಳಲಿಲ್ಲ. ಒಬ್ಬನಿಗೆ ಧರ್ಮದ ಚಿಂತೆ, ಇನ್ನೊಬ್ಬನಿಗೆ ಹೊಟ್ಟೆಯದ್ದೇ ಚಿಂತೆ, ಮತ್ತೊಬ್ಬನಿಗೆ ವೀರಪುತ್ರನದೊಬ್ಬನದೇ ಚಿಂತೆಯಾದರೆ ಇನ್ನಿಬ್ಬರು ಅವರೇ ಮಗುವಿನಂತಿರುವ ಮುಗ್ಧರು. ಕಾಲ ಹೀಗೆ ಸರಿದುಹೋಗಿತ್ತು. ಹದಿನೈದು ವರ್ಷಗಳ ನಂತರ ಮಕ್ಕಳನ್ನು ಕರೆತರಲು ನಾನೇ ಪಾಂಚಾಲಕ್ಕೆ ಹೋಗಿದ್ದೆ. ಮಕ್ಕಳಿಗೆ ನನ್ನ ಗುರುತೇ ಹತ್ತಲಿಲ್ಲ. ಉಕ್ಕಿಬರುವ ಅಳುವನ್ನು ಹತ್ತಿಕ್ಕುತ್ತಾ ಒಬ್ಬೊಬ್ಬರನ್ನೇ ತಲೆನೇವರಿಸಿ ಮುತ್ತಿಕ್ಕಿದ್ದೆ. ಮತ್ತೆ ಅವರೆಲ್ಲರೂ ನನ್ನ ಕಾಲಿಗೆರಗಿದರು.

ಮುತ್ತಿನಂತಹ ಮಕ್ಕಳು! ಒಂದು ತಂಟೆಯಿಲ್ಲ, ತಕರಾರಿಲ್ಲ, ಜಗಳವಿಲ್ಲ, ಸುಳ್ಳುಪೊಳ್ಳುಗಳಿಲ್ಲ, ಜಂಭವಿಲ್ಲ…ಇವೆಲ್ಲದದರ ಜೊತೆಗೆ ಆತ್ಮವಿಶ್ವಾಸದ ಸೆಲೆಯೂ ಅವರಲ್ಲಿ ಬತ್ತಿಹೋಗಿತ್ತು. ನನ್ನೊಳಗಿನ ತಾಯಿ ಜಾಗೃತಳಾದಳು. ಗಂಡಂದಿರೆಲ್ಲ ಯುದ್ಧಕಾರ್ಯದಲ್ಲಿ ಮಗ್ನರಾದರೆ ನಾನು ಮಕ್ಕಳ ಪಾಲನೆ, ಪೋಷಣೆಯಲ್ಲಿ ಮುಳುಗಿಹೋದೆ. ಎಷ್ಟು ಪ್ರೀತಿ ತೋರಿಸಿದರು ನನ್ನ ಮೇಲೆ. ನಾನೇ ಮುಂದೆ ನಿಂತು ಅವರಿಗೆ ಬಿಲ್ವಿದ್ಯೆಯನ್ನು ಹೇಳಿಕೊಡುತ್ತಿದ್ದೆ. ಕೈತುತ್ತನ್ನಿಟ್ಟು ಲಾಲಿಸುತ್ತಿದ್ದೆ. ಅಷ್ಟುದ್ದ ಬೆಳೆದ ಮಕ್ಕಳು ತಮ್ಮ ವಯಸ್ಸನ್ನೇ ಮರೆತು ನನ್ನ ಹಾಸಿಗೆಯಲ್ಲೇ ಮಲಗಿಬಿಡುತ್ತಿದ್ದರು. ಅಮ್ಮನ ಹಸಿವು ಅವರಲ್ಲಿ ಅಷ್ಟು ತೀವ್ರವಾಗಿತ್ತು. ಅತಿಯಾದರೆ…  ಅದೇ ಅವರ ಪ್ರಾಣಕ್ಕೆ ಕುತ್ತಾಗಿ ಬಂತು. ಪಾಪಿ, ಅಶ್ವತ್ಥಾಮ! ಪಾಂಡವರೆಂದು ಬಗೆದು ಅವರೆಲ್ಲರ ತಲೆಯನ್ನು ಕತ್ತರಿಸಿದ. ನನ್ನ ಕಣ್ಣೀರ ಕಡಲು ಅಂದು ಬತ್ತಿಹೋಗಿತ್ತು. ಇವರೆಲ್ಲರ ಗಮನ ಅಂದು ಕೇವಲ ಉತ್ತರೆಯ ಗರ್ಭದ ಮೇಲಿತ್ತು!

“ದ್ರೌಪದೀ, ನಿನಗೆ ಆಯಾಸವಾಗುತ್ತಿದೆಯೆ?” ಧರ್ಮಜನ ಧ್ವನಿ ದೂರದಿಂದ ತೇಲಿಬಂದಿತ್ತು. ತಕ್ಷಣವೇ ಭೀಮನೆಂದಿದ್ದ, “ಅಣ್ಣಾ, ನಾನವಳನ್ನು ಎತ್ತಿಕೊಳ್ಳಲೆ?” ಧರ್ಮಜ ಅದನ್ನು ಧರ್ಮದ ವಿವರಣೆ ನೀಡಿ ನಿರಾಕರಿಸಿದ. ದ್ರೌಪದಿಗೆ ಕಣ್ತುಂಬಿ ಬಂತು. ಬದುಕಿನ ಬಂಜರು ಭೂಮಿಯಲ್ಲಿ ಎಲ್ಲಾದರೂ ನೀರ ಪಸೆಯೆಂಬುದಿದ್ದರೆ ಅದು ಇವನೊಬ್ಬನೆ. ಧರ್ಮ ಅಧರ್ಮಗಳ ನಡುವಿನ ಗೋಡೆಯನ್ನು ಕೆಡವಿ ಅದೆಷ್ಟು ಬಾರಿ ನನ್ನನ್ನು ರಕ್ಷಿಸಿಲ್ಲ? ದುಶ್ಯಾಸನನ ಕರುಳಮಾಲೆಯನ್ನು ನನ್ನ ಮುಡಿಗೇರಿಸಿದ ಆ ಕ್ಷಣದಲ್ಲಿ ನಾನು ನನ್ನ ಮದುವೆಯನ್ನು ಗೌರವಿಸಿದ್ದೆ. ಇವನಿಲ್ಲವೆಂದರೆ ಬದುಕು ಇನ್ನಷ್ಟು ನೀರಸವಾಗಿ ಮುಗಿದುಹೋಗುತ್ತಿತ್ತು. ಭೀಮನನ್ನೊಮ್ಮೆ ಮುದ್ದಿಸುವ ಆಸೆಯಾಯಿತು. ಧರ್ಮ ಅದಕ್ಕೂ ತಡೆಗೋಡೆ ಹಾಕಿತು.

ಅವನ ಕೊಳಲಗಾನಕ್ಕೆ ಮನಸೋತರು ಎಲ್ಲ ಹುಡುಗಿಯರು ಎನ್ನುತ್ತಾರೆ. ನಾನೇನೂ ಅವನ ಕೊಳಲಗಾನ ಕೇಳಿಲ್ಲ. ಆದರ ಅವನ ಮನಸ್ಸು ಮಾತ್ರ ಅದೆಷ್ಟು ಕೋಮಲ. ಮಾತನಾಡದೆಯೂ ಮನದೊಳಗನ್ನು ಅರಿಯುವ ಅವನ ಜಾಣ್ಮೆ ಎಲ್ಲ ಗಂಡಸರಲ್ಲಿದ್ದರೆ ಎಷ್ಟು ಚೆನ್ನಿತ್ತು? ಹೆಣ್ಣಿಗೆ ಕಷ್ಟಗಳ ಸರಮಾಲೆಯೇ ಇರುತ್ತಿರಲಿಲ್ಲ. ವನವಾಸದಲ್ಲಿ ಅದೆಷ್ಟು ಅಡುಗೆ ಮಾಡಬೇಕಿತ್ತು. ಕಂಡವರನ್ನೆಲ್ಲ ಊಟಕ್ಕೆ ಕರೆಯುವ ಚಾಳಿ ಈ ಧರ್ಮರಾಜನಿಗೆ. ಕಟ್ಟೆಗೇನೂ ತೊಂದರೆಯಿರಲಿಲ್ಲ. ಭೀಮ ಒಮ್ಮೆ ಹೊತ್ತುತಂದರೆ ವಾರಗಳಿಗೆ ಸಾಕಾಗುತ್ತಿತ್ತು. ಪಾತ್ರೆಯದ್ದೇ ಕೊರತೆ. ಆರು ಜನರಿಗಾಗುವ ಪಾತ್ರೆಯಲ್ಲಿ ಹದಿನಾರು ಜನರಿಗೆ ಎಷ್ಟು ಸಲವೆಂದು ಬೇಯಿಸುವುದು? ಇಡೀ ದಿನ ನನಗೆ ಅದೇ ಕೆಲಸವಾಗುತ್ತಿತ್ತು. ಒಮ್ಮೆ ಕೃಷ್ಣ ನಮ್ಮ ಭೇಟಿಗೆಂದು ಬಂದ. ಅವನು ಬಂದಾಗಲೆಲ್ಲ ನಾವಿಬ್ಬರೂ ಹುಲ್ಲುಹಾಸಿನ ಮೇಲೆ ಕುಳಿತು ತಾಸುಗಟ್ಟಲೆ ಹರಟುವುದು ಸಾಮಾನ್ಯವಾಗಿತ್ತು.

ಆದರೆ ಈಗ ಸಮಯವೇ ಇರಲಿಲ್ಲ. ಅತಿಥಿಗಳಿಗೆಲ್ಲ ಅಡುಗೆ ಬೇಯಿಸುವುದರಲ್ಲೇ ನನ್ನ ಸಮಯವೆಲ್ಲ ಕಳೆದುಹೋಗಿತ್ತು. ತಡರಾತ್ರಿ ಮಲಗಿದ ನಾನು ಮರುದಿನ ಎದ್ದು ನೋಡಿದರೆ ಕೃಷ್ಣನಿರಲಿಲ್ಲ. ಒಂದೂ ಮಾತನಾಡದೇ ಹೋದ ಅವನ ಬಗ್ಗೆ ಎಷ್ಟು ಸಿಟ್ಟು ಬಂದಿತ್ತು. ಸ್ನಾನ, ಪೂಜೆಗಳನ್ನೆಲ್ಲ ಮುಗಿಸಿ, ಅಡುಗೆ ಕೆಲಸಕ್ಕೆ ಹೊರಡುವ ಹೊತ್ತಿಗೆ ಕೃಷ್ಣ ಪ್ರತ್ಯಕ್ಷನಾಗಿದ್ದ. ಅವನ ಕೈಯಲ್ಲಿ ಇಷ್ಟೆತ್ತರದ ಪಾತ್ರೆಗಳಿದ್ದವು. “ಒಲೆಯೂ ದೊಡ್ಡದಿದೆ, ಕಟ್ಟಿಗೆ ಬೇಕಾದಷ್ಟಿದೆ, ಒಡಲುಗಳೂ ಬಹಳಷ್ಟಿವೆ. ಮತ್ತೆ ಪಾತ್ರೆಗಳೇಕೆ ಚಿಕ್ಕವು? ನೋಡು, ಇವು ಅಕ್ಷಯ ಪಾತ್ರೆಗಳು. ಇವುಗಳಲ್ಲಿ ಅಡುಗೆ ಮಾಡಿಟ್ಟರೆ ಮುಗಿಯುವುದೇ ಇಲ್ಲ.” ಎಂದು ನಗುತ್ತಾ ತಾನೇ ಪಾತ್ರೆಗಳನ್ನು ಒಲೆಯ ಮೇಲಿಟ್ಟು ಅಡುಗೆ ಮಾಡಲು ಸಹಕರಿಸಿದ್ದ. ಅಕ್ಷಯ ಪಾತ್ರೆಗಳು ಬಂದ ಮೇಲೆ ನಾನೂ ಕೊಂಚ ಬಿಡುವಾಗಿದ್ದೆ. ಎಷ್ಟು ಸಣ್ಣ ವಿಷಯ! ಆದರೆ ಎಷ್ಟು ಮುಖ್ಯ ವಿಷಯ! ಇವುಗಳೆಲ್ಲ ಅವನಿಗೆ ಹೇಗೆ ತಿಳಿಯುವವೋ ಕಾಣೆ?

ಯಾರೊಬ್ಬರೂ ತಿರುಗಿ ನೋಡದೇ ಅಣ್ಣನ ಹಿಂದೆ ಏಕತಾನವಾಗಿ ನಡೆಯುತ್ತಿದ್ದಾರೆ. ನನಗೇನೋ ನನ್ನನ್ನು ಒಂದು ಕಪ್ಪು ನೆರಳು ಹಿಂಬಾಲಿಸುತಿರುವಂತೆ ಅನಿಸುತಿದೆ. ಮೊದಮೊದಲು ನನ್ನ ಭ್ರಮೆಯಿರಬಹುದು ಅಂದುಕೊಂಡೆ. ಆದರೀಗ ಅದು ನಿಜವೇನೋ ಅನಿಸುತ್ತಿದೆ. ನಾನು ಅಲ್ಲಿಯೇ ಕೊಂಚ ನಿಂತೆ. ಮನಸ್ಸು ನನ್ನ ಮಾತನ್ನು ಕೇಳುತ್ತಿರಲಿಲ್ಲ. ಹಿಂದಿರುಗಿ ನೋಡಲೇಬೇಕೆಂದು ಹಠ ಹಿಡಿಯುತ್ತಿತ್ತು. ನಾನು ತಿರುಗಿದೆ. ಅಲ್ಲಿ ನಿಜಕ್ಕೂ ಕಪ್ಪು ನೆರಳಿತ್ತು, ಮತ್ತದು ನವಿಲುಗರಿಯನ್ನು ಹೋಲುತ್ತಿತ್ತು! ನನಗೆ ಎಲ್ಲವೂ ನೆನಪಾಗಿತ್ತು.

ವರ್ಷದ ಹಿಂದೆಯಷ್ಟೇ ಕೃಷ್ಣ ಮರೆಯಾಗಿದ್ದಾನೆ. ಜಗವೆಲ್ಲ ಅವನನ್ನು ದೇವನೆಂದು ಕರೆಯುತ್ತದೆ. ಆದರ ಅವನು ಅಪ್ಪಟ ಮನುಷ್ಯನಂತೆ ಸತ್ತು ಮಲಗಿದ್ದಾನೆ. ಅವನ ಮರಣವಾರ್ತೆ ಕೇಳಿದಾಗಿನಿಂದಲೂ ನನಗೆ ಸಾವಿನ ಭಯ ದೂರಾಗಿದೆ. ಸಾವು ಅಪ್ಯಾಯಮಾನವಾಗಿ ಕಾಣುತ್ತಿದೆ. ಅದೇ ನಿರಾಳತೆಯಿಂದಲ್ಲವೆ ನಾನು ಕೊನೆಯ ಪ್ರಯಾಣಕ್ಕೆ ಹೊರಟದ್ದು? ಆದರೆ ಜೀವಂತವಾಗಿ ಸ್ವರ್ಗವೇರುವ ಧರ್ಮಜನ ಆಸೆಯೊಂದಿಗೆ ನನ್ನ ಸಾವನ್ನು ಬೆಸೆದುಕೊಂಡು ಹೆಜ್ಜೆ ಹಾಕುತಿದ್ದೇನೆ. ನನ್ನ ಕೃಷ್ಣ ನನ್ನನ್ನು ಕರೆಯುತ್ತಿದ್ದಾನೆ. ಮಣ್ಣ ಮೋಹ ಅವನಿಗೆ. ಹಾಗಾಗಿ ಮಣ್ಣಲ್ಲಿ ಮಣ್ಣಾಗಿ ಮಾನವನಾಗಿದ್ದಾನೆ. ನಾನು ಹುಚ್ಚು ಹುಡುಗಿ, ಯಾರದೋ ಆಸೆಗೆ ಸ್ವರ್ಗವೇರಲು ಹೋಗುತ್ತಿದ್ದೇನೆ. ಕಪ್ಪುನೆರಳು ನನಗೆ ನೆರಳಾಯಿತು. ನಾನು ನೆರಳಿನಲ್ಲಿ ಕುಳಿತೆ. ನೆರಳನ್ನು ನೇವರಿಸಿದೆ. ಅದೇ ಭರವಸೆಯ ಮುಗುಳುನಗು ಕಣ್ಮುಂದೆ ಹಾದುಹೋಯಿತು. ಅದೇ ನೆರಳಲ್ಲಿ ತಲೆಯಿಟ್ಟು ಮಲಗಿದೆ, ಪಿಸುಮಾತಲ್ಲಿ ನುಡಿದೆ, “ನೀನಿಲ್ಲದ ಸ್ವರ್ಗ ನನಗೆ ಬೇಡ, ಇಲ್ಲೇ ಹಾಯಾಗಿದೆ.” ನರೆಳು ನಿಧಾನವಾಗಿ ನನ್ನನ್ನು ಆವರಿಸಿತು.

ಬದುಕಿನ ಎಲ್ಲ ಬಂಧಗಳನ್ನೂ ಹೆಸರಿಸಲಾಗದು. ನಮ್ಮ ವ್ಯಾಖ್ಯಾನವನ್ನು ಮೀರುವ ಶಕ್ತಿ ಸಂಬಂಧಗಳಿಗಿವೆಯೆಂದೇ ಅವು ಇನ್ನೂ ನಿಗೂಢವಾಗಿವೆ.

‍ಲೇಖಕರು avadhi

November 9, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

13 ಪ್ರತಿಕ್ರಿಯೆಗಳು

  1. Sarojini Padasalgi

    ತುಂಬಾ ಚೆಂದದ ಬರಹ ಸುಧಾ ಅವರೇ.ಹೆಣ್ಣಿನ ಮನದ ಒಳಗನ್ನು ಸರಳವಾಗಿ ತೆರೆದಿಡುವ ಬರಹ.ಎಲ್ಲಿಯೋ ಒಂದು ಒಳತೋಟಿ, ಬಿಡಿಸಲಾಗದ ಒಗಟು ಇರುತ್ತದೆ ಯೋ ಏನೋ!! ಹೆಸರಿಸಲಾಗದ ಬಂಧಗಳ ಗಂಟು ನಂಟು. ಮೀರಿಹುದು ಆದರೆ ಬಂಧ ಹೆಸರು ಅರ್ಥಗಳ ಬಂಧನ!

    ಪ್ರತಿಕ್ರಿಯೆ
  2. Ahalya Ballal

    ಆಹ್……”ವ್ಯಾಖ್ಯಾನವನ್ನು ಮೀರುವ” ವಿಚಾರವೇ!
    Good one, Sudha. Enjoyed reading it.

    ಪ್ರತಿಕ್ರಿಯೆ
  3. Amba

    ಅರ್ಥಪೂರ್ಣ ಬರವಣಿಗೆ ಸುಧಾ ಅವರದು, ಸಂಬಂಧಗಳ ನಂಟು – ಆ ಬಂಧನ, ಅದೇಷ್ಟು ಅಪ್ಯಾಯಮಾನ.

    ಪ್ರತಿಕ್ರಿಯೆ
    • Sudha Hegde

      ಓಹ್! ನಿಮ್ಮ ಪ್ರತಿಕ್ರಿಯೆಯೇ ಸ್ಪೋರ್ತಿ

      ಪ್ರತಿಕ್ರಿಯೆ
  4. SUDHA SHIVARAMA HEGDE

    ಧನ್ಯವಾದಗಳು ಪ್ರತಿಕ್ರಿಯೆಗಾಗಿ

    ಪ್ರತಿಕ್ರಿಯೆ
  5. Sandhya

    ಮೇಡಂ ಇಷ್ಟು ಬೇಗ ಮುಗಿಯಿತ ಅನ್ನಿಸಿತ್ತು, ಚೆಂದನೆಯ ಬರಹ, ಕೊನೆಯ ಸಾಲು ಬಹಳ ಯೋಚನೆಗೆ ಹಚ್ಚಿತು ಹಾಗೂ ಯಾವತ್ತೂ ಜೊತೆಗಿರುವ ಸಾಲುಗಳಾದವು, ಧನ್ಯವಾದ

    ಪ್ರತಿಕ್ರಿಯೆ
  6. Nagaraj Kale

    Really a beautiful one mam,the way you have narrated the role of Draupadi and Krishna are really awesome.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: