
ಪುರೂರವ
ಆನೆಯನ್ನು ನೋಡಲು ಕೆಲವು ಕುರುಡರನ್ನು ಕರೆದುಕೊಂಡು ಹೋಗಲಾಯಿತು. ಅದರಲ್ಲಿ ಒಬ್ಬ ಆನೆಯ ಕಾಲು ಮುಟ್ಟಿ ಆನೆ ಕಂಬದಂತಿದೆ ಅಂತ ಮತ್ತೊಬ್ಬ ಕಿವಿಯನ್ನು ಮುಟ್ಟಿ ಇಲ್ಲ ಆನೆ ಬೀಸಣಿಕೆಯಂತಿದೆ ಅಂದ ಮಗದೊಬ್ಬ ಸೊಂಡಿಲನ್ನು ಮುಟ್ಟಿ ಇಲ್ಲ ಇಲ್ಲ ಆನೆ ಹಾವಿನಂತೆ ಇರೋದು ಅಂದ. ಈ ಕಥೆಯು ನೆನ್ನೆ ಕುಂವೀ’ಯವರ ಹೇಳಿಕೆ ನಂತರದ ವಿದ್ಯಾಮಾನಕ್ಕೆ ಹಿಡಿದ ಕನ್ನಡಿಯಂತಿದೆ.
ಅಷ್ಟಕ್ಕೂ ಅವರು ಹೇಳಿದ ಸಂದರ್ಭವಾವುದು, ಪ್ರೊ. ವಡ್ಡೇರ್ ಅವರು ಕುಂವೀ’ಗೆ ಜ಼್ನಾನಪೀಠ ಸಿಕಬೇಕಾಗಿತ್ತು ಅಂದರು ಅದಕ್ಕೆ ಕುಂವೀ ಉತ್ತರಿಸಿದ್ದು ಏನೆಂದು ತಾವೆಲ್ಲ ಕೇಳಿರುತ್ತೀರಿ. ಸಾಹಿತ್ಯ ಓದಿಕೊಂಡವರನ್ನು ಬಿಡಿ ಖಾಲಿ ಸ್ಲೇಟಿನಂತಿರುವ ಮಕ್ಕಳನ್ನೇ ಕೇಳಿ ನೋಡಿ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಕೆಲವು ಹೆಸರು ಹೇಳಲು ಅದು ಹೇಳುವುದೇ ಜ಼್ನಾನಪೀಠ ಪ್ರಶಸ್ತಿ ಪಡೆದವರ ಹೆಸರುಗಳನ್ನು ಮಾತ್ರ.
ಬೇರೆ ಮಕ್ಕಳೇಕೆ ನನಗೇ ಹೈಸ್ಕೂಲಿನವರೆಗೂ ಅವರನ್ನು ಬಿಟ್ಟರೆ ಬೇರೆ ಸಾಹಿತಿಗಳ ಬಗ್ಗೆ ಅಪ್ಪಿ ತಪ್ಪಿಯೂ ಗೊತ್ತಿರಲಿಲ್ಲ. ಬೇರೆ ಸಾಹಿತಿಯ ಬಗ್ಗೆ ನನಗೆ ಮೊದಲು ಗೊತ್ತಾಗಿದ್ದೇ ನನ್ನ ಕನ್ನಡ ಮೇಷ್ಟ್ರಾದ ವಿರೂಪಾಕ್ಷಯ್ಯನವರ ಮನೆಯಲ್ಲಿ ಎಸ್. ಎಲ್ ಭೈರಪ್ಪನವರ ಧರ್ಮಶ್ರೀ ಕಾದಂಬರಿ ನೋಡಿದ ಮೇಲೆ. ನಾನಾಗ ಅದನ್ನು ಓದಲು ಕೇಳಿದ್ದೆ ಅದಕ್ಕವರು ಪರೀಕ್ಷೆ ಹತ್ತಿರವಿದೆ ಓದ್ಕೋ ಹೋಗು ಅಂತ ಪ್ರೀತಿಯಿಂದ ಗದರಿಸಿದರೂ ಅವರಿಗೇ ಗೊತ್ತಾಗದೆ ಅದನ್ನು ತೆಗೆದುಕೊಂಡು ಹೋಗಿ ಎರಡು ದಿನಗಳ ನಂತರ ಓದಿ ವಾಪಸ್ಸು ಕೊಟ್ಟು ಕ್ಷಮೆ ಕೇಳಿದ್ದೆ ಅದಕ್ಕೆ ಮೇಷ್ಟ್ರು ನಕ್ಕು ಹೋಗೋ ಮೊದಲು ಪರೀಕ್ಷೆ ಮುಗಿಸು ಅಮೇಲೆ ಇನ್ನು ಬೇರೆ ಪುಸ್ತಕ ಕೊಡ್ತೀನಿ ಅಂತ ಹೇಳಿ ಆನಂತರ ಭೈರಪ್ಪನವರ ಜಲಪಾತ, ಮತದಾನ ಮತ್ತು ತೇಜಸ್ವಿಯವರ ಚಿದಂಬರ ರಹಸ್ಯ ಕೊಟ್ಟಿದ್ದರು. ನನ್ನ ಕನ್ನಡ ಸಾಹಿತ್ಯದ ಬಗೆಗಿನ ಪುಸ್ತಕ ಪ್ರೀತಿ ಆನಂತರ ಬೆಳೆದಿದ್ದು ಈ ರೀತಿ.

ಆದರೆ ಈಗಿನ ಮಕ್ಕಳಿಗೆ ಈ ರೀತಿ ಸಾಹಿತಿಗಳ ಬಗ್ಗೆ, ಸಾಹಿತ್ಯದ ಬಗ್ಗೆ ಅರಿವು ಮೂಡಿಸುವ ಕೆಲಸ ಆಗುತ್ತಿದೆಯೇ ಎಂದು ನೋಡಿದರೆ ಸಿಗುತ್ತಿರುವ ಉತ್ತರ ಶೂನ್ಯ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎನ್ನುವಂತೆ ಚಿಕ್ಕ ಮಕ್ಕಳಿಗೆ ಸಾಹಿತ್ಯದ ಅರಿವು ಮೂಡಿಸುವ ಕೆಲಸವಾಗದಿದ್ದರೆ ಮುಂದೆ ಬೆಳೆದ ಮೇಲೆ ನಿಜಕ್ಕೂ ಅವರು ಸಾಹಿತ್ಯದ ಬಗೆಗಿನ ಒಲವು ಬೆಳೆಸಿಕೊಳ್ಳಬಲ್ಲರೇ? ಈಗಿನ ಮಕ್ಕಳಿಗೆ ಕನ್ನಡ ಸಾಹಿತ್ಯವೆಂದರೆ ಬರೀ ಜ಼್ನಾನಪೀಠಿಗಳು ಮಾತ್ರ ಎನ್ನುವಂತೆ ತೋರಿಸಲಾಗುತ್ತಿದೆ. ಇದು ಸರ್ಕಾರದ ತಪ್ಪೋ, ಶಿಕ್ಷಕರ ಅರಿವಿನ ಕೊರತೆಯೋ ಒಟ್ಟಿನಲ್ಲಿ ಮಕ್ಕಳಿಗೆ ಬೇರೆ ಬೇರೆ ವಿಷಯಗಳ ಬಗೆಗಿನ ಸೌಕರ್ಯಗಳು ಸಿಗುವಷ್ಟು ಕನ್ನಡ ಸಾಹಿತ್ಯದ ಬಗೆಗಿನ ಸೌಕರ್ಯಗಳು ಒಟ್ಟಿನಲ್ಲಿ ಸಿಗುತ್ತಿಲ್ಲ.
ನಿಜಕ್ಕೂ ಕನ್ನಡ ಸಾಹಿತ್ಯವೆಂದರೆ ಜ಼್ನಾನಪೀಠ ಪ್ರಶಸ್ತಿ ಪಡೆದವರು ಮಾತ್ರವೇ? ಅವರನ್ನು ಬಿಟ್ಟರೆ ಉಳಿದವರು ಕನ್ನಡ ಸಾಹಿತ್ಯಕ್ಕೆ ನೀಡಿರುವ ಸೇವೆ ಗೌಣವೇ? ಕನ್ನಡ ಸಾಹಿತ್ಯ ಇವರನ್ನು ಹೊರತುಪಡಿಸಿಯೂ ತುಂಬಾ ವಿಶಾಲವಾಗಿದೆ ಎಂದಾದರೆ ಉಳಿದ ಸಾಹಿತಿಗಳನ್ನು ಕನ್ನಡ ಸಾಹಿತ್ಯ ಲೋಕದ ಮುಖ್ಯ ಭೂಮಿಕೆಯಲ್ಲಿ ಪರಿಚಯಿಸುವ ಕೆಲಸವೇಕೆ ಆಗುತ್ತಿಲ್ಲ ಎಂಬ ಪ್ರಶ್ನೆಗಳು ಕೊನೆಯಲ್ಲಿ ಪ್ರಶ್ನೆಗಳಾಗಿಯೇ ಉಳಿದುಬಿಡುತ್ತವೆ.
ಇಂತಹ ಪ್ರಶ್ನೆಗಳು ಎದುರಿಗಿದ್ದಾಗ ಅದೇ ಜ಼್ನಾನಪೀಠದ ಬಗ್ಗೆ ಸಣ್ಣ ಅಸಹನೆ ಮೂಡುವುದು ಸಹಜವೇ ಹಾಗೂ ಅಂತಹ ಪ್ರಶಸ್ತಿ ಪಡೆದವರ ಅರ್ಹತೆಗಳ ಬಗ್ಗೆ ಮನಸ್ಸು ಬೇಡವೆಂದರೂ ಒಮ್ಮೊಮ್ಮೆ ಯೋಚಿಸಲು ಶುರುವಿಕ್ಕಿಕೊಳ್ಳುತ್ತದೆ. ಅಂದಹಾಗೆ ಕುಂವೀ ಪ್ರಮುಖವಾಗಿ ತಕರಾರು ಎತ್ತಿರುವುದು ಅನಂತ ಮೂರ್ತಿ ಮತ್ತು ಗಿರೀಶ ಕಾರ್ನಾಡರ ಅರ್ಹತೆಯ ಬಗ್ಗೆ ಅವರಿಬ್ಬರೂ ಕನ್ನಡ ಸಾಹಿತ್ಯಕ್ಕೆ ಕೊಟ್ಟ ಕೆಲ ಕೃತಿಗಳ ಬಗ್ಗೆ ಎರಡು ಮಾತಿಲ್ಲ ಆದರೆ ಸಾಹಿತ್ಯ ಕೃಷಿಯು ಉಳಿದವರ ಸಾಧನೆಗೆ ಹೋಲಿಸಿದರೆ ನಿಜಕ್ಕೂ ಸರಿ ಸಮನಾದದ್ದೇ ಎಂದರೆ ಸಿಗುವ ಉತ್ತರ ಶೂನ್ಯ. ಜ಼್ನಾನಪೀಠವು ಅನುವಾದ ಮಾಡಲ್ಪಟ್ಟ ಸಾಹಿತ್ಯ ಕೃತಿಗಳಿಗೆ ಸಿಗಬಲ್ಲ ಪ್ರಶಸ್ತಿಯಷ್ಟೇ ಅದರ ಆಯ್ಕೆ ಸಮಿತಿಯಲ್ಲೂ ಕೂಡ ಕನ್ನಡ ಭಾಷೆ, ಸಂಸ್ಕೃತಿಯ ಸೊಗಡಿನ ಪರಿಚಯವಿರುವರಾರೂ ಇರುವುದಿಲ್ಲ. ಹೀಗೆ ಕನ್ನಡದ ಪರಿಚಯವಿಲ್ಲದವರೇ ಕನ್ನಡ ಕೃತಿಯನ್ನು ಪ್ರಶಸ್ತಿಗೆ ಆರಿಸಿದರೇ ಅವರ ಆಯ್ಕೆಯಲ್ಲಿ ನಿಜಕ್ಕೂ ನ್ಯಾಯವಿರಬಲ್ಲುದೇ ಊಹೂಂ ಖಂಡಿತ ಇರಲಾರದು. ಅವರ ಆಯ್ಕೆಯಲ್ಲಿ ನ್ಯಾಯವಿದೆ ಎಂದಾದರೆ ಇಂದು ಅನಂತ ಮೂರ್ತಿ ಮತ್ತು ಗಿರೀಶ ಕಾರ್ನಾಡರ ಜಾಗದಲ್ಲಿ ಅರ್ಹತೆಯಿರುವ ಕನ್ನಡದ ಬೇರೆಯೇ ಸಾಹಿತಿಗಳಿರುತ್ತಿದ್ದರು.
ಕುಂವೀಯವರ ಮತ್ತೊಂದು ತಕರಾರು ಈರ್ವರು ಮಾಡಿರಬಹುದಾದ ಲಾಬಿಯ ಬಗ್ಗೆ, ಅವರಿಗೆ ಪ್ರಶಸ್ತಿ ಬಂದಾಗ ಪ್ರಶಸ್ತಿ ಬಂದ ಸಂಭ್ರಮಕ್ಕಿಂತ ಹೆಚ್ಚಾಗಿ ಕನ್ನಡ ಸಾಹಿತ್ಯದ ಓಣಿ ಓಣಿಯಲ್ಲೂ ಸುದ್ದಿ ಮಾಡಿದ್ದು ಅವರು ಮಾಡಿರಬಹುದಾದ ಲಾಬಿಯ ಗುಸುಗುಸು. ಅಷ್ಟಕ್ಕೂ ಹೊಲಸಿದ್ದರೇ ತಾನೆ ವಾಸನೆ. ಕೆಲ ವರ್ಷಗಳ ಹಿಂದೆ ಬೂಕರ್ ಪ್ರಶಸ್ತಿಗಾಗಿ ಲಾಬಿ ನಡೆಸಲಾಗಿಯೇ ತಿಂಗಳುಗಟ್ಟಲೆ ವಿದೇಶದಲ್ಲಿ ನೆಲೆಸಿದ್ದನ್ನು ಹೆಚ್ಚೂ ಕಮ್ಮಿ ಎಲ್ಲ ಪತ್ರಿಕೆಗಳೂ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ವರದಿ ಮಾಡಿದ್ದವು ಇದು ಸಾಮಾನ್ಯ ಜನರಿಗೆ ತಿಳಿಯದಂತೆ ರಹಸ್ಯವಾಗೇನು ಇಂದು ಉಳಿದಿಲ್ಲ. ಬಹಳಷ್ಟು ಜನ ತಮ್ಮೊಳಗೇ ಇಟ್ಟುಕೊಂಡಿರಬಹುದಾದ ಬೇಗುದಿಯನ್ನು ಕುಂವೀ ಒಳಗಿಟ್ಟುಕೊಳ್ಳದೇ ಬಹಿರಂಗವಾಗೇ ಹೇಳಿದ್ದಾರೆ ಇದು ಕುಂವೀ ಶೈಲಿ.
ಕುಂವೀಯವರ ಇನ್ನೊಂದು ವಿಶೇಷತೆಯೆಂದರೆ ಅವರಿಗೆ ಜನ ಸಾಮಾನ್ಯರೊಡನೆ ಮಾತಾಡುವಂತೆಯೇ ಸಭೆ ಸಮಾರಂಭಗಳಲ್ಲೂ ಮಾತಾಡುತ್ತಾರೆ ಅವರು ಉಳಿದವರಂತೆ ಭಾಶಣಕ್ಕಾಗಿಯೇ ವಿಶೇಷ ಸಿದ್ಧತೆಯನ್ನೇನೂ ಮಾಡಿಕೊಂಡಿರುವುದಿಲ್ಲ ಹೀಗಾಗಿ ಅವರ ಭಾಷಣಗಳು ಹೆಚ್ಚು ನೈಜತೆಯಿಂದ ಕೂಡಿರುತ್ತವೆ ಇದು ಅವರನ್ನು ಹತ್ತಿರದಿಂದ ನೋಡಿದವರೆಲ್ಲರಿಗೂ ಗೊತ್ತಿರುವ ವಿಚಾರ. ಇಂತಿಪ್ಪ ಕುಂವೀ’ಯವರ ಮಾತಿನಲ್ಲಿ ಕೆಲವರು ಹೊಟ್ಟೆ ಕಿಚ್ಚನ್ನು ಹುಡುಕುತ್ತಿದ್ದರೆ, ಇನ್ನು ಕೆಲವರು ಎಡ ಪಂಥೀಯ ಅಥವಾ ಬಲ ಪಂಥೀಯತೆಯ ವಿಚಾರಗಳನ್ನು ಅವರಲ್ಲಿ ಆರೋಪಿಸುತ್ತಿದ್ದಾರೆ. ನನಗೆ ತಿಳಿದಂತೆ ಅವರು ಎಡ ಪಂಥೀಯರೂ ಅಲ್ಲ ಅಂತೆಯೇ ಬಲ ಪಂಥೀಯರೂ ಅಲ್ಲ ಯಾಕೆಂದರೆ ಯಾವುದೂ ಈಗ ಹುಳುಕಿಲ್ಲದೆ ಉಳಿದಿಲ್ಲ. ಉದಾಹರಣೆಗೆ ಹೇಳಬೇಕೆಂದರೆ ಅನಂತಮೂರ್ತಿಯವರು ಕರ್ನಾಟಕದಲ್ಲಿ ಹೆಚ್ಚಾಗುತ್ತಿರುವ ಅರಾಜಕತೆ ಕೊನೆಯಾಗಲು ಕಾಂಗ್ರೆಸ್ ಅನ್ನು ಬೆಂಬಲಿಸಿದರು ಅಂತೆಯೇ ಸಾಮಾನ್ಯ ಜನರು ಕೂಡ ಸಿದ್ಧರಾಮಯ್ಯನವರನ್ನು ಆಶಾಕಿರಣದಂತೆ ಕಂಡಿದ್ದರು ಆದರೆ ಆನಂತರ ನಿಷ್ಕ್ರಿಯತೆಯ ಪ್ರತಿರೂಪದಂತೆ ಬದಲಾಗಿರುವ ಮುಖ್ಯಮಂತ್ರಿಗಳನ್ನು ಇದೇ ಅನಂತಮೂರ್ತಿಯವರು “ಸಿದ್ಧರಾಮಯ್ಯನವರಿಂದ ಭ್ರಮನಿರಸನವಾಗಿದೆ” ಎಂಬ ಹೇಳಿಕೆಯನ್ನು ಇತ್ತೀಚೆಗೆ ಕೊಟ್ಟಿದ್ದರು. ಪಂಥ ಯಾವುದಾದರೇನು ಜೊಳ್ಳು ತೂರಿ ಗಟ್ಟಿ ವಿಚಾರಗಳನ್ನು ಮಾತ್ರ ಎಲ್ಲರಿಂದಲೂ ಪಡೆಯುವಷ್ಟು ಕುಂವೀ ಸಜ್ಜನರೆನ್ನುವುದರಲ್ಲಿ ಎರಡು ಮಾತಿಲ್ಲ. ಅವರು ಹೇಳಿದ್ದರಲ್ಲಿ ಏನಾದರೂ ಹುಳುಕು ಕಂಡರೆ ಅದರ ಬಗ್ಗೆ ಆರೋಗ್ಯಕರವಾದ ಚರ್ಚೆಗಳಾಗಬೇಕೆ ವಿನಹ ನಿಂದೆಯಲ್ಲ ಅದರಲ್ಲೂ ಅನ್ನಿಸಿದ್ದನ್ನು ಧೈರ್ಯವಾಗಿ ಹೇಳುವ ಛಾತಿ ಸಧ್ಯದ ಪರಿಸ್ಥಿತಿಯಲ್ಲಿರುವುದು ಕುಂವೀ’ಯಂತಹ ಕೆಲವೇ ಬೆರಳೆಣೆಕೆಯ ಜನರಲ್ಲಿ.
ಕೊನೆಯದಾಗಿ ಹೇಳಬೇಕೆಂದರೆ ಕುಂವೀ ಬರೆಯಲು ಶುರು ಮಾಡಿದ್ದು ಯಾವುದೇ ವಿಶ್ವವಿದ್ಯಾಲಯವು ಕೊಟ್ಟ ಅಕಾಡೆಮಿಕ್ ಶಿಕ್ಷಣದಿಂದಲ್ಲ, ಬದುಕು ಕಲಿಸಿದ ಕಲಿಸುತ್ತಿರುವ ಶಿಕ್ಷಣದಿಂದ. ಅವರು ಹೇಳಿದ ಮಾತಿನ ಕೆಲವೇ ಶಬ್ದಗಳನ್ನು ಹಿಡಿದು ಜಗ್ಗಾಡದೆ ಅದರ ಹಿಂದಿರುವ ಸಾಹಿತ್ಯದ ಬಗೆಗಿನ ಕಳಕಳಿ ಹಾಗೂ ಪ್ರಸಕ್ತ ಮತ್ತು ಮುಂದಿನ ಪೀಳಿಗೆಯ ಲೇಖಕರ ಬಗೆಗಿನ ಕಾಳಜಿಯ ದೃಷ್ಠಿಕೋನದಿಂದ ನೋಡುವಂತಾದರೆ ಹಳದಿ ಕಣ್ಣುಗಳಿಗೆ ಕಾಮಾಲೆ ಬಿಟ್ಟೀತು.





Well supporting write-up. Controversies will always be there in democratic st up. It has clearly pointed out the views of many. Late until my higher primary, I didn’t know anything about any of the so-called Jnanapeethies. The authors who initiated me to read were Galaganatha, N. Narasimhayya, ANKru, Tarasu, Bhairappa and a wide array others. I agree with KUMVEE fully. I would to some extent accept the rather satiric view that the Jnanpeethies are those who have Jnana in their peetha! I agree that only a Kannada writers have their works translated to English. There are many others who need to come into English. Alas, very few translators would venture to such works.
ಕುಂ.ವೀ.ಯವರ ಮಾತಿನ ಬಗ್ಗೆ ಎರಡು ಮಾತೇ ಇಲ್ಲ. ಒಳ್ಳೆಯ, ಸಮತೂಕದ ಲೇಖನ ಇದಾಗಿದೆ.
ಕುಂ.ವಿ.ಯವರ ಬಗ್ಗೆ ಗೌರವ ಹೆಚ್ಚಾಯಿತು.
ಮಾನ್ಯರೆ,
ಸದ್ಯಕ್ಕೆ ತಂತ್ರಜ್ಞಾನ ತುಂಬಾ ಬೆಳಿದಿದೆ ಈ ಲೇಖನವಾಗಲಿ ಕುಂ.ವಿ. ಯವರ ಹೇಳಿಕೆಯಾಗಲಿ ನಮ್ಮ ಚಿಕ್ಕ ಮಕ್ಕಳಿಗೂ ಗೊತ್ತಿದೆ. ಆದರೆ ಮಕ್ಕಳು ಸದ್ಯ ಗೊಂದಲದಲ್ಲಿದ್ದಾರೆ. ಏಕೆಂದರೆ ಇಲ್ಲಿಯವರೆಗೂ ಜ್ಞಾನಪೀಠ ಪಡೆದವರು ಹಾಗೂ ಅವರ ಸಾಹಿತ್ಯ ಉತ್ತಮ ಹಾಗೂ ಉನ್ನತ ಮಟ್ಟ ಎಂದು ಬೋಧಿಸಿ ಇದೀಗ ಜ್ಞಾನಪೀಠ ಹಾಗೆ ಹೀಗೆ ಎಂದು ಹೇಳಿದರೆ ಯಾರದು ಕೇಳಬೇಕು ಎನ್ನುವ ಗೊಂದಲಕ್ಕೆ ನಮ್ಮ ಮಕ್ಕಳನ್ನು ಈ ಹಿರಿಯ ಸಾಹಿತಿಗಳು ಹಾಕಿದಂತು ನಿಜ ಜ್ಞಾನಪೀಠ ದೊಡ್ಡ ಪ್ರಶಸ್ತಿ ಅಂದವರು ಹಿರಿಯರೆ ಇದೀಗ ದಡ್ಡ ಪ್ರಶಸ್ತಿ ಅನ್ನುತ್ತಿರುವರು ಹಿರಿಯರೆ ಇಲ್ಲಿ ಬೆಳಿಯುತ್ತಿರುವ ಯುವಕರು ಹಾಗೂ ಮಕ್ಕಳು ಯಾರ ಮಾತನ್ನು ನಂಬಬೇಕು ಎನ್ನುವ ಗೊಂದಲಕ್ಕೀಡು ಮಾಡಿರುವ ಸಾಹಿತಿಗಳು ಸರಿಯಾದ ರೀತಿಯಲ್ಲಿ ವರ್ತಿಸಿದರೆ ಮಾತ್ರ ಸಾದ್ಯ ನನಗೇನೊ ಇದೆಲ್ಲ ಬರಿ ಪ್ರಚಾರಕ್ಕಾಗಿ ಬಳಸಿಕೊಳ್ಳವುದು ಅನಿಸುತ್ತಿದೆ. ಕಾರ್ನಾಡರ ಕಥೆಗಳನ್ನು ಅಷ್ಟು ದೊಡ್ಡದಾಗಿ ಸಿನಿಮಾ ಮಾಡಿ ಇಡಿ ದೇಶದ ಅದೆಷ್ಟೊ ಭಾಷೆಗಳಿಗೆ ಬಾಷಾಂತರಿಸಿ ಶ್ರೇಷ್ಠ ಸಾಹಿತ್ಯವೆಂದು ಇದೀಗ ಅವರು ಅರ್ಹರಲ್ಲವೆಂದರೆ ಯಾವ ನ್ಯಾಯ ಸಂದರ್ಭ ಯಾವುದೆ ಇರಬಹುದು ಈ ಮಾತು ಜ್ಞಾನಪೀಠ ಘೋಷಣೆಯಾದಾಗ ಹೇಳಬೇಕಿತ್ತು ಅಂದ್ರೆ ಸರಿಯಾಗುತ್ತಿತ್ತು.
ನಮ್ಮ ದೇಶ ಹಾಗೂ ರಾಜ್ಯ ನಮ್ಮ ಯುವಜನತೆ ಹಾಗೂ ಮಕ್ಕಳಿಗೆ ಅಕ್ಷರಸ ಬದುಕಿನ ಹಾದಿ ತಪ್ಪಿಸುತ್ತಿದೆ. ಯಾವುದೆ ಒಂದು ವಿಷಯದಲ್ಲಿಯೂ ಏಕತೆಯಿಲ್ಲ ಎಲ್ಲಾ ಕಡೆ ಜಾತಿ,ಧರ್ಮ,ವ್ಯಕ್ತಿ ಗಳ ಮೇಲೆಯೆ ಅಳೆಯಲಾಗುತ್ತಿದೆ. ಹೀಗಾಗಿ ನಮ್ಮ ಮಕ್ಕಳು ಹಾಗೂ ಯುವಜನತೆ ಹಾದಿ ತಪ್ಪುತ್ತಿರುವುದು ಸತ್ಯವಾದ ಮಾತು. ಮೊದಲು ಈ ಹಿರಿಯ ರಾಜಕಾರಣಿಗಳು ಸಾಹಿತಿಗಳು ಸುಧಾರಿಸಲಿ ಅನಿಸುತ್ತದೆ. ಒಬ್ಬನು ಹಿಂದೂ ಧರ್ಮ ಶ್ರೇಷ್ಠವೆಂದರೆ ಇನ್ನೊಬ್ಬ ಕನಿಷ್ಠ ಅಂತಾನೆ ಒಬ್ಬ ಜ್ಞಾನಪೀಠ ಶ್ರೇಷ್ಠವೆಂದರೆ ಇನ್ನೊಬ್ಬ ಕನಿಷ್ಠ ಅಂತಾನೆ ಎಲ್ಲವು ಗೊಂದಲ ಸೃಷ್ಠಿಸುವ ಕೆಲಸ ಅದಕ್ಕೆ ಹೇಳಿದ್ದು ದೊಡ್ಡವರೆಲ್ಲ ಜಾಣರಲ್ಲ ಅಂತಾ
I know Kumvi for last 25 to 30 years. As far as possible he tries to live to his words. long back once he said, he is happy to have the job of school teacher, rather to become university Professor. Even today he is happily living with the tribal childerns in a remote village of A.P.State. Whatever statement he has expressed from public platform recently are definitely not to gain propaganda to get any awards or prizes. I fully agree with pururava.