ಇಂದು ಆಗಸ್ಟ್ ೨೬, ಎಲ್ಲರಿಗೂ ಅಮ್ಮನಾದ ಮದರ್ ಥೆರೇಸಾ ಹುಟ್ಟಿದ ಹಬ್ಬ. ಅವರ ನೆನಪಿನಲ್ಲಿ ಪ್ರಜ್ಞಾ ಮತ್ತೀಹಳ್ಳಿ ಬರೆದ ಈ ಲೇಖನ
**
ಹಾಲು ವಾಸನೆಯ ಒದ್ದೆ ಸೆರಗು
ಪ್ರಜ್ಞಾ ಮತ್ತೀಹಳ್ಳಿ

ದೂರದ ಹಳ್ಳಿಗೆ ಮದುವೆಯಾಗಿ ಹೋಗಿರುವ ಗಂಡನ ಕಸಿನ್ ಫೋನು ಮಾಡಿದ್ದಳು. ಅವಳೀಗ ಎರಡನೆಯ ಬಾರಿ ಗರ್ಭಿಣಿ. ಚಿಕ್ಕವಳಿದ್ದಾಗಲೇ ತಾಯಿ ಸತ್ತ ಹುಡುಗಿ. ಹೇಗಿದ್ದೀಯಾ ಎಂದು ಕಕ್ಕುಲಾತಿಯಿಂದ ಕೇಳಿದೆ. ಬಿಕ್ಕತೊಡಗಿದಳು. ಸುಸ್ತು,ಸಂಕಟ,ಏನೇನೋ ತಿನ್ನುವ ಬಯಕೆ, ಮುಂದಿರುವ ಹೆರಿಗೆಯ ಭಯ ತೋಡಿಕೊಂಡಳು. ಅವಳ ತೌರಿನಲ್ಲಿರುವ ಅಣ್ಣ ಅತ್ತಿಗೆಯರನ್ನು ದೂರಿಕೊಂಡಳು. ಅವಳ ಅತ್ತಿಗೆಗೆ ಮದುವೆಯಾಗಿ ಹತ್ತು ವರ್ಶ ಕಳೆದರೂ ಮಕ್ಕಳಿಲ್ಲ. ಡಾಕ್ಟರು, ಚಿಕಿತ್ಸೆ, ಜ್ಯೋತಿಷ್ಯ, ಪೂಜೆ, ವೃತ ಎಲ್ಲ ಮುಗಿಸಿ ಗರ್ಭದಲ್ಲೇ ಜಾಗವಿಲ್ಲವೆಂದಿದ್ದಾರೆ. ಅದನ್ನೇ ಮನೋಬೇನೆ ಮಾಡಿಕೊಂಡು ಕೊರಗುತ್ತಿದ್ದಾಳೆ. ಸ್ವಂತಕ್ಕೆ ಅಂತ ಮಕ್ಕಳಾದರೆ ಒಂದೊ, ಎರಡೋ ಆಗಬಹುದು. ಅವುಗಳ ಸೇವೆ ಮಾಡುತ್ತ ಇಹ ಸಂಸಾರದಲ್ಲಿ ಮುಳುಗಿ ಒದ್ದಾಡುವುದಕ್ಕಿಂತ ನೀನು ಪಾಠ ಮಾಡುವ ಶಾಲೆಯ ಮಕ್ಕಳನ್ನೆ ನಿನ್ನವು ಎಂದು ಪ್ರೀತಿಸು ಎಂದು ಸಂತೈಸಲು ಹೋದರೆ ಎರಡು ಮಕ್ಕಳ ತಾಯಿಯಾದ ಮೇಲೆ ಇಂತಹ ಉಪದೇಶ ಕೊಡುವುದು ಸುಲಭ. ಗರ್ಭದಲ್ಲಿ ಜಾಗವಿಲ್ಲದವರ ನೋವು ನಿಮಗೆಲ್ಲಿ ತಿಳಿಯಬೇಕು ಎಂದು ಅಳುತ್ತ ಎದ್ದು ಹೋಗುತ್ತಾಳೆ. ತಾಯಿಯಿಲ್ಲದ ನಾದಿನಿಯ ಬಾಣಂತನ ಮಾಡಿ ತಾಯಿಯಾಗು ಎಂದು ಹೇಳಹೊರಟ ಮಾತುಗಳು ಗಂಟಲಿಂದಾಚೆ ಹೊರ ಬಾರದೇ ಉಳಿಯುತ್ತದೆ.
ಆಂಟಿ ಆಂಟಿ ಎನ್ನುತ್ತ ಪಕ್ಕದ ಮನೆ ಹುಡುಗಿ ಓಡಿ ಬಂದಳು. ಅವಳು ಹೊಂ ಸೈನ್ಸ ಕೊನೆ ವರ್ಷ. ನನ್ನ ಗೆಳತಿಗೆ ಹುಶಾರಿಲ್ಲ. ಅವಳು ಹಾಸ್ಟೆಲನಲ್ಲಿ ಇರ್ತಾಳೆ. ನಾಲ್ಕು ತಿಂಗಳ ಹಿಂದೆ ಒವರಿಯಲ್ಲಿ ಸಿಸ್ಟ ಬೆಳೆದು ಊರಲ್ಲೇ ಆಪರೆಶನ ಆಗಿತ್ತು. ಈಗ ತುಂಬಾ ಹೊಟ್ಟೆ ನೋವಂತೆ. ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದಾರೆ. ಆ ಡಾಕ್ಟರು ನಿಮಗೆ ಪರಿಚಯ ಇದಾರೆ. ಒಂದು ಸಲ ಬನ್ನಿ ಆಂಟಿ ಎಂದಳು. ಬಾ ಅಂತ ಹೊರಟೆ. ದಾರಿಯುದ್ದಕ್ಕೂ ಗೆಳತಿಯ ಬಗ್ಗೆ ಹೇಳತೊಡಗಿದಳು. ಅವಳು ಬಾಳ ವಿಚಿತ್ರ ಇದಾಳೆ. ಒಂದು ದಿನ ನಗ್ತಾ ಇರ್ತಾಳೆ, ಒಂದು ದಿನ ಮಾತೇ ಆಡೊಲ್ಲ. ಮನೆ ವಿಷಯ ಯಾರ ಹತ್ರಾನೂ ಬಾಯಿ ಬಿಡೊಲ್ಲ. ಅವಳ ಅಕ್ಕ ಅಣ್ಣ ಬೇರೆ ರಾಜ್ಯದಲ್ಲಿ ಓದುತ್ತಾ ಇದಾರೆ. ಅವರ ಅಮ್ಮನ ಹತ್ರ ಮಾತೇ ಆಡೊಲ್ಲ. ಅವಳ ಆಪರೇಶನ ಆದಾಗಲೂ ಅಮ್ಮ ಬಂದಿಲ್ವಂತೆ. ಅಪ್ಪ ಆಗೀಗ ಬರ್ತಾರೆ. ಇವಳ ಕೈ ಹಿಡಕೊಂಡು ಅಳ್ತಾರೆ . ವಯಸ್ಸಾದ ಅಜ್ಜಿ ಇವರನ್ನು ಸಾಕಿದಾರೆ. ಅವರಂದ್ರೆ ಇವಳಿಗೆ ಪ್ರಾಣ. ಆಸ್ಪತ್ರೆ ಬಂದರೂ ಇವಳ ಕತೆ ಮುಗಿದಿರಲಿಲ್ಲ. ಮಹಡಿ ಹತ್ತುವಾಗಲೇ ಕಿರುಚಾಟ ಕೇಳುತ್ತಾ ಇತ್ತು. ಕೈಗೆ ಚುಚ್ಚಿರುವ ಸಲೈನು ಕೀಳಲೆತ್ನಿಸುತ್ತಿದ್ದಳು ತೆಳ್ಳಗೆ ಬೆಳ್ಳಗೆ ಉದ್ದಕ್ಕೆ ಇದ್ದ ಚೆಂದನೆಯ ಹುಡುಗಿ. ಬಾಡಿಬಿದ್ದ ಪಾರಿಜಾತದ ಹಾಗೆ ಕಂಡಳು.
ಅವಳ ಸುತ್ತ ಯಾವ್ಯಾವುದೊ ಊರಿಂದ ಕಲಿಯಲು ಬಂದ ಹಾಸ್ಟೆಲ್ ಹುಡುಗಿಯರು. ಅವಳ ಅಪ್ಪನಿಗೆ ಫೋನು ಹಚ್ಚಿದರು. ನಾಳೆ ಬೆಳಿಗ್ಗೆ ಬಂದು ಮುಟ್ಟುತ್ತೇನೆ ಅನ್ನುತ್ತಾ ಇದ್ದ. ಮತ್ತೊಂದು ಫೋನಲ್ಲಿ ಹುಡುಗಿ ಅಳುತ್ತಾ ಹೇಳುತ್ತಿದ್ದಳು. ಅಜ್ಜಿ ನಂಗೆ ತುಂಬಾ ನೋವಾಗ್ತಿದೆ. ಏನೂ ತಿನ್ನಕೆ ಕೊಡ್ತಿಲ್ಲ. ನೀ ಬಂದು ಕರಕೊಂಡು ಹೋಗು. ಅವಳ ಹತ್ತಿರ ಹೋಗಿ ತಲೆ ಸವರಿ ಸಂತೈಸಲೆತ್ನಿಸಿದೆ. ಎಡತೋಳಿನ ಮೇಲೆ ಅಜ್ಜಿ ಅಂತ ಟ್ಯಾಟೂ ಕಾಣಿಸಿತು. ಚೂರು ನೀರು ಕುಡಿ ಅಂತ ಕುಡಿಸಿದ್ದೇ ತಡ ಹುಡುಗಿ ಗೊಳ್ಳನೆ ವಾಂತಿ ಮಾಡಿಕೊಂಡಿತು. ಥಟ್ಟನೆ ಒಬ್ಬ ಹುಡುಗಿ ಮಂಚದ ಕೆಳಗಿನ ಪ್ಯಾನು ಹಿಡಿದಳು. ಒಬ್ಬಾಕೆ ಟಿಶ್ಯೂ ತಂದು ಬಾಯಿ ಒರೆಸಿದಳು. ಒಬ್ಬಳು ತಲೆಸವರುತ್ತ ಯಾಕೆ ಅಪ್ಪಿ ಎನ್ನುತ್ತ ಎದೆಗೆ ಅಪ್ಪಿಕೊಂಡಳು. ಕಣ್ಣು ಕರಗಿದಂತಾಗಿ ಡಾಕ್ಟರ್ ಹುಡುಕುತ್ತ ಹೊರ ಬಂದೆ. ಅವರು ಬರಲು ಸಂಜೆ ಏಳಾಗುತ್ತದೆ ಎಂದರು. ಹತ್ತಿರವಿದ್ದ ಮನೆಗೆ ಹೋದೆ. ಸಂಗೀತ ಕ್ಲಾಸಿಗೆ ಹೋಗಿದ್ದಾರೆ ಅಂದರು. ಸದಾ ಕಾಲ ನೋವು, ಯಾತನೆಯ ಪ್ರಪಂಚದಲ್ಲಿರುವ ವೈದ್ಯರಿಗೆ ಪುನರ್ಜೀವನಕ್ಕೆ ಸಂಗೀತ ಮದ್ದಿನಂತೆ ಅನ್ನಿಸಿತು. ತೀರಾ ಅಲ್ಲಿಗೂ ನುಗ್ಗಲು ಮುಜುಗರವಾಗಿ ರಸ್ತೆಯಲ್ಲೇ ನಿಂತೆ. ಎದುರಿನ ಪಾರ್ವತಿಗುಡಿಯ ಪೌಳಿಯ ತುಂಬಾ ಹೆಂಗಸರು ತುಂಬಿಕೊಂಡು ಶ್ರಾವಣದ ದೇವಿ ಪೂಜೆಯ ಕೊನೆಯ ಹಾಡು ಹೇಳುತ್ತಿದ್ದರು. ಶಂಕರಾಚಾರ್ಯ ವಿರಚಿತ ದೇವ್ಯಪರಾಧ ಕ್ಷಮಾಪಣ ಸ್ತೋತ್ರ. ಕುಪುತ್ರೋ ಜಾಯೇತ್ ತತ್ ಕ್ವಚಿತಪಿ ಕುಮಾತಾ ನ ಭವತಿ ಕೆಟ್ಟ ಮಕ್ಕಳು ಹುಟ್ಟಬಹುದಂತೆ ಆದರೆ ಕೆಟ್ಟ ತಾಯಿ ಹುಟ್ಟಲಾರಳಂತೆ. ಹಾಗೊಮ್ಮೆ ಯಾವಳಾದರೂ ಕೆಟ್ಟದಾಗಿ ನಡೆದುಕೊಂಡರೆ ಅವಳು ತಾಯಿಯೇ ಅಲ್ಲ ಅಂತ ಅರ್ಥ. ಅಂದರೆ ಅವಳಲ್ಲಿ ತಾಯ್ತನ ಜಾಗೃತವಾಗಿಲ್ಲ ಅಂತ ಅರ್ಥ.

ಯುಗೋಸ್ಲೊವಿಯಾದಲ್ಲಿ ಹುಟ್ಟಿದ ಎಗ್ನೆಸ ಗೋನ್ಸಾ ಬೋಜಾಕ್ಸಿಯಾ ಎಂಬ ಹೆಣ್ಣು ಮಗಳು ಡಾರ್ಜಲಿಂಗನ ಟೊರೊಂಟೊ ಕಾನ್ವೆಂಟಿನಲ್ಲಿ ಭೂಗೋಳದ ಅಧ್ಯಾಪಕಿಯಾಗಿದ್ದವಳು ಜನರ ಸೇವೆ ಮಾಡುವ ಹುಚ್ಚಿಗೆ ಬಿದ್ದು ಕಲಿಸುವುದು ಬಿಟ್ಟು ನರ್ಸ ಆಗಿದ್ದು ಹಾಗೂ ಬಡವರ, ದೀನರ, ಅನಾಥರ ಸೇವೆ ಮಾಡುತ್ತ, ಮಾಡುತ್ತ ಕಲ್ಕತ್ತೆಯ ಬೀದಿಗಳಲ್ಲಿ ಕುಷ್ಟ ರೋಗಿಗಳಿಗೆ, ತೊಟ್ಟಿಯ ತಿರಸ್ಕೃತ ಕಂದಗಳಿಗೆ ಅಮ್ಮನಾಗಿ ಇಡೀ ಜಗತ್ತಿಗೇ ಮದರ್ ಆದ ಕತೆಗೆ ಈಗ ಅರವತ್ತೈದು ವರ್ಷವಾಗುತ್ತಿದೆ. ಹೌದು ಮದರ್ ತೆರೆಸಾ 1950ರಲ್ಲಿ ಮಿಷನರಿಸ್ ಆಫ ಚಾರಿಟೀಸ್ ಸ್ಥಾಪಿಸಿದರು. ಮಣ್ಣಿನ ಗೋಡೆಯ ಗುಡಿಸಲಿನಲ್ಲಿ ಅವರು ಸ್ಥಾಪಿಸಿದ ಈ ಸಂಸ್ಥೆ ಬೃಹದಾಕಾರವಾಗಿ ಬೆಳೆಯಿತು. ರೋಗಿಗಳಿಗೆ ಅನಾಥರಿಗೆ ಅಮ್ಮನಾಗಿ ಮಮತೆಯುಣ್ಣಿಸಿದ ಈ ವಾತ್ಸಲ್ಯಮೂರ್ತಿಗೆ 1962ರಲ್ಲಿ ರಾಮನ್ ಮೆಗಾಸ್ಸೆ, 1979ರಲ್ಲಿ ನೊಬೆಲ್, 1980ರಲ್ಲಿ ಭಾರತರತ್ನ ಬಂದವು. ಅವರ ನಿಷ್ಕಾಮ ತಾಯ್ತನವನ್ನು ಇಡೀ ಪ್ರಪಂಚ ಹಾಡಿ ಹೊಗಳಿತು. ಅವರು 1910ರ ಅಗಷ್ಟ 26ರಂದು ಮೆಸಡೊನಿಯಾದಲ್ಲಿ ಜನಿಸಿದ್ದರು. ಆದರೆ ಅದ್ಯಾವ ಕಾಯಕದ ಮೋಹನ ಮುರುಳಿ ಅವರನ್ನು ಭಾರತಕ್ಕೆ ಕರೆಯಿತೋ ಎನೋ ನೌಕೆಯನ್ನೇರಿ ಭಾರತಕ್ಕೆ ಬಂದರು. ಪಾಟ್ನಾದಲ್ಲಿ ನರ್ಸ ತರಬೇತಿ ಪಡೆದು ಭಾರತೀಯ ಪೌರರಾದರು.
ಯಾರು ಮಾತಾ ಎಂದರೆ? ಗುಡಿಯ ನೀಲಾಂಜನದ ಬೆಳಕಲ್ಲಿ ಲಕಲಕ ನಗುತಿರುವ ಶಿಲಾ ಮೂರ್ತಿಯಾ? ಹೂ ಮುಡಿದು ಬಳೆ ತೊಟ್ಟು ಹಾಡು ಹೇಳುತ್ತಿರುವವರಾ? ಹೊಟ್ಟೆ ಹೊತ್ತು ಓಪಿಡಿಯಲ್ಲಿ ಕೂತ ಬಸುರಿಯರಾ? ಸಲೈನು ಚುಚ್ಚಿಕೊಂಡವಳನ್ನು ನೋಡಲು ಬರಲಾಗದಂತೆ ಠೂ ಬಿಟ್ಟ ಹಠಮಾರಿಯಾ? ಅಥವಾ ವಾಂತಿ ಒರೆಸಿ ತಬ್ಬಿಕೊಂಡ ಗೆಳತಿಯಾ? ಇಷ್ಟಕ್ಕೂ ಅಮ್ಮನಾಗಲು ಗರ್ಭದಲ್ಲಿ ಜಾಗ ಬೇಕಾ? ಎದೆಯಲ್ಲಿ ಹಾಲು ಬೇಕಾ? ಎಲ್ಲ ಕೆಟ್ಟ ಮಕ್ಕಳ ಕೆಟ್ಟತನ ಹೋಗುವಂತೆ ಅವರ ಅಮ್ಮಂದಿರು ಗಟ್ಟಿಯಾಗಿ ಅವುಚಿಕೊಂಡರೆ ಆದೀತಾ? ರಕ್ತದೊಂದಿಗೆ ರೋಗವು ಹಾಲಿನೊಂದಿಗೆ ಕಸುವು ಹರಿದು ಬರುವಂತೆ ಅಮ್ಮನ ವಾತ್ಸಲ್ಯ ಪ್ರಪಂಚದ ಕೊಳಕು ತಿದ್ದೀತಾ? ಕಪ್ಪನೆಯ ಹಿಂಡುಹಿಂಡು ಮೋಡವನ್ನು ಹಿಡಿದು ಹಿಡಿದು ತುಂಬಿಕೊಳ್ಳುತ್ತಿರುವ ಮುಗಿಲ ಒಡಲನ್ನೊಮ್ಮೆ ನೋಡಿದೆ. ಕೂ ಎಂದು ಕೂಗುತ್ತ ದಡಬಡ ಸದ್ದಿನ ರೈಲು ಬಂದು ಹತ್ತಿರದ ಸ್ಟೆಶನ್ನಿನಲ್ಲಿ ನಿಂತಿತು. ಯಾವಾಗಲೂ ಓಡುತ್ತಲೇ ಇರುವ ಇಂಜಿನ್ನಿಗೂ ಅಮ್ಮ ಬೇಕಾ? ಹಳಿಯುದ್ದ ಕಾಲು ಚಾಚಿ ಎಣ್ಣೆ ನೀವಬೇಕಾ? ಸಿಳ್ಳು ಹೊಡೆದು ಸುಸ್ತಾದ ಗಂಟಲು ಹಸಿಯಾಗುವಂತೆ ಹಾಲೂಡಬೇಕಾ? ಎಲ್ಲಾ ಅಪನಂಬಿಕೆಯ ಗಾಯಗಳ ಮಾಯಿಸುವಂತಹ ಹಾಲು ಬೆಳದಿಂಗಳು ಉಕ್ಕುತ್ತದೆಯೇನೋ ಎಂದು ಇಣುಕಿದೆ. ಸಣ್ಣ ಸಣ್ಣ ಹನಿಗಳು ಬಿದ್ದು ಕಣ್ಣ ತೊಳೆಯತೊಡಗಿದವು.






Nice article, ಇಷ್ಟವಾಯಿತು.
Nice article,
Very Good article.. Good insights on a good Occasion..