ಇಶ್ಕಿನ ಒರತೆಗಳು
ಶ್ರೀದೇವಿ ಕೆರೆಮನೆ
ಕೆಲವು ದಿನಗಳಿಂದ ರೂಪ ಮತ್ತಿಕೆರೆ ಕಳಿಸಿದ ಸೂಫಿಂ ನ ಓದಿನಲ್ಲಿ ಮುಳುಗಿ ನನ್ನನ್ನೇ ನಾನು ಮರೆತಿರುವಾಗಲೇ ಮುನವ್ವರ ಜೋಗಿಬೆಟ್ಟು ತಮ್ಮ ಇಶ್ಕಿನ ಒರೆತಗಳು ಸಂಕಲನ ಕಳುಹಿಸಿದ್ದಾರೆ. ಇತ್ತೀಚೆಗೆ ಯಾರಾದರೂ ನನ್ನ ವಿಳಾಸ ಕೇಳಿದರೆ ಅದು ಪುಸ್ತಕ ಕಳಿಸಲು ಮಾತ್ರ ಎಂಬುದು ದೃಢವಾಗಿರುವುದರಿಂದ ಮಾತೇ ಆಡದೇ ವಿಳಾಸ ಕೊಟ್ಟುಬಿಡುವ ಅಭ್ಯಾಸ ಆಗಿದೆ. ಹಾಗೊಂದು ದಿನ ಗಡಿಬಿಡಿಯಲ್ಲಿರುವಾಗ ಬಂದ ವಿಳಾಸ ಕೊಡಿ ಅಕ್ಕ ಎಂಬ ಮೆಸೆಜ್ ಗೆ ವಿಳಾಸ ಪಾರ್ವರ್ಡ ಮಾಡಿ ಮರೆತೇ ಬಿಟ್ಟಿದ್ದೆ. ನನ್ನ ಸೂಫಿಸಂನ ಓದು ನನ್ನೆಲ್ಲ ನೆನಪಿನ ಕೋಶಗಳನ್ನು ಅತಿಕ್ರಮಿಸಿದ ಈ ಹೊತ್ತಲ್ಲಿ ಕೈಗೆ ಬಂದ ಇಶ್ಕನ ಕೆಲವು ಸಾಲುಗಳೇ ತನ್ನನ್ನು ಓದು ಎಂದು ಒತ್ತಾಯ ಹೇರಿದ್ದು ಸುಳ್ಳಲ್ಲ.
ನಿಗೂಢ ಪದಗಳಲ್ಲಿ
ಕವಿತೆ ಕಟ್ಟುತ್ತ ಮೈ ಮರೆತವನೇ ಸೂಫಿ’
ಪ್ರೀತಿ ಯುದ್ಧದಲ್ಲಿ ಉಗ್ರ ಸೆಣಸಾಟ
ಈಗ ಮೊಹಬ್ಬತ್ ಮತ್ತು ಇಷ್ಕಿನ ಈರ್ಷೆ
ಕಾದಾಟದ ಗಾಳಿ ಸೋಂಕಿದರೂ
ಇವನು ಜಯಿಸಿಯೇ ಬಿಡುತ್ತಾನೆ!
“ಪ್ರೇಮ ಕವಿತೆಗಳು ಇಷ್ಟು ಬಲಹೀನನ್ನಾಗಿ ಮಾಡಬಲ್ಲದೆಂದು ಮೊದ ಮೊದಲು ಅನ್ನಿಸಿರಲೇ ಇಲ್ಲ. ಕವಿತೆ ಬರೆದಂತೆಲ್ಲ ನಾನು ಪ್ರೇಮ ಲಯಕ್ಕೆ ತನ್ಮಯನಾಗುತ್ತಿದ್ದುದೇ ಅಧಿಕ” ಎನ್ನುತ್ತಲೇ ತನ್ನ ಮಾತನ್ನು ಪ್ರಾರಂಭಿಸಿದ ಮುನವ್ವರ ಜೋಗಿಬೆಟ್ಟು ಎನ್ನುವ ಈ ಹುಡುಗನ ಕಾವ್ಯ ಪ್ರೇಮ, ಪ್ರೇಮದ ಮೇಲಿರುವ ಪ್ರೇಮ, ಮದಿನಾದ ಮೇಲಿರುವ ಪ್ರೇಮ, ಹಬೀಬರ ಮೇಲಿರುವ ಪ್ರೇಮ ಹಾಗೂ ಈ ಎಲ್ಲವನ್ನೂ ಮೇಳೈಸಿದಂತಿರುವ ಅವನ ರೂಪಕದ ಪ್ರೇಮ ನನ್ನನ್ನು ಮೊದಲ ಓದಿಗೇ ದಿಗ್ಮೂಢಳನ್ನಾಗಿಸಿತು. ಈ ಹುಡುಗ ಅದೆಂತಹ ತೀವ್ರವಾದ ಪ್ರೇಮದ ಸಾಲುಗಳನ್ನು ಬರೆಯುತ್ತಾನೆಂದರೆ ಓದಿಯೇ ಅನುಭವಿಸಬೇಕು.
ನಾನು ಮೊಹಬ್ಬತ್ತಿನ
ತುರಿಯಾವಸ್ಥೆಗೆ ತಲುಪಿದ ತಕ್ಷಣ
ಕೆರೆಯ ನೈದಿಲೆಯಂತೆ ಪ್ರೀತಿ ಹಬ್ಬುತ್ತದೆ
ಗಾಂಜಾ ಅಫೀಮುಗಳಿಂದ ಮೈಮರೆಯುವ
ನಿಮಗಿಂತ ಹೆಚ್ಚಿನ ಉನ್ಮತ್ತು
ನನಗೆ ಇಶ್ಕಿನ ಲಹರಿ ಅಡರಿದೆ
ಎನ್ನುವ ಕವಿಯ ಮಾತಿನಲ್ಲಿ ಅದೆಂತಹ ಸತ್ಯ ಅಡಗಿದೆ. ಈ ಇಶ್ಕ್’ನ್ನು ಇದಕ್ಕಿಂತ ಹೆಚ್ಚು ವರ್ಣಿಸಲಿ ಎಂದು ಬಯಸುವುದಾದರೂ ಹೇಗೆ? ಪ್ರೀತಿಯ ಉತ್ಕಂಟತೆಯೇ ಹಾಗೆ. ಅದು ಈ ಜಗದ ಎಲ್ಲಾ ಅಮಲಿಗಿಂತಲೂ ಹೆಚ್ಚು ನಶೆಯೇರಿಸುವಂತಹುದ್ದು. ಹೀಗಾಗಿಯೇ
ಯಾವ ಜುಮುಕಿಯಲ್ಲೂ ಇಲ್ಲದ
ನಿನಾದ ಇಶ್ಕಿನಲ್ಲಿ ಅನುರಣಿಸುತ್ತದೆ.
ಕಾಲ್ಗೆಜ್ಜೆಯನ್ನೂ ನಗಣ್ಯಗೊಳಿಸಿ
ಬುರ್ದಾ ಹೃದಯ ಹೊಕ್ಕುತ್ತದೆ!
(ಬುರ್ದಾ- ಬೂಸ್ವುರಿ ಎಂಬ ಕವಿಯ ಕಾವ್ಯ)
ಎನ್ನುವ ಸಾಲುಗಳು ಎಲ್ಲಿಯೂ ಉತ್ಪ್ರೇಕ್ಷೆ ಎನಿಸಿಕೊಳ್ಳದೇ ಕವಿ ಮನದ ಪ್ರಾಂಜಲ ಸಾಲುಗಳಾಗಿಯೇ ಗೋಚರಿಸುತ್ತದೆ.
ಪ್ರೀತಿಗೆ ಸ್ಥಾನ ಕೊಡಬಹುದು
ತೀರ್ಪಿಗೆ ಸಿಗದ ಅನುರಾಗವೇ
ಇಲ್ಲಿ ಪರಮೋಚ್ಚ, ಪ್ರಥಮ
ಪ್ರೀತಿ, ಅನುರಾಗದ ಎದುರು ಮತ್ತೇನಿದೆ? ಜೀವನದಲ್ಲಿ ಪ್ರೀತಿಗೇನಿದ್ದರೂ ಮೊದಲ ಸ್ಥಾನ ಎನ್ನುವುದು ಲಾಗಾಯತ್ತಿನಿಂದಲೂ ನಡೆದುಕೊಂಡು ಬಂದ ವಿಷಯ. ಧರ್ಮ ಯಾವುದಾದರೇನು? ಭಾಷೆ ಯಾವುದಾದರೇನು? ಜಗತ್ತಿನಾದ್ಯಂತ ಇರುವುದು ಪ್ರೇಮ ಎನ್ನುವ ಧರ್ಮಕ್ಕೆ ಹೃದಯದ ಮಾತೊಂದೇ ನಿಲುಕಲು ಸಾಧ್ಯ.
ಪ್ರೀತಿ ಎಂದರೆ ಅನುಭೂತಿ
ಕಣ್ಣು ಗುಡ್ಡೆ ಪೀಕಿ
ಹಾರಿದಾಗಲೂ ತೃಪ್ತವಾಗದ
ಮರಳಲ್ಲಿ ಅಂಗಾತ ಮಲಗಿಸಿ
ಬಂಡೆಯಿರಿಸಿದಾಗಲೂ ಭಾರವಾಗದ
ಆ ಅನುರಾಗದ ತಂತುಗಳು
ಅವೇ ನನ್ನ ವ್ಯಾಲಂಟೈನ್

ಎನ್ನುವ ಕವಿಯ ಭಾವವನ್ನು ಒಮ್ಮೆ ಎದೆಗೆಳೆದುಕೊಂಡು ಆಸ್ವಾದಿಸಿದಾಗ ಮಾತ್ರ ಈ ಪ್ರೇಮದ ತೀವ್ರತೆಯನ್ನು ಅನುಭವಿಸಲು ಸಾಧ್ಯ. ಪ್ರೀತಿ ಎನ್ನುವುದು ಜಗದ ಎಲ್ಲ ನೋವುಗಳನ್ನು ತಡೆದುಕೊಳ್ಳಲು ಸಾಧ್ಯವಾಗಿಸುವ ನೋವುನಿವಾರಕ ಮಾತ್ರೆ ಇದ್ದಂತೆ. ಹೀಗಾಗಿಯೇ ನಮ್ಮ ಕಣ್ಣನ್ನು ಕಿತ್ತಿಟ್ಟರೂ, ಕಾದ ಮರಳ ಮೇಲೆ ಮಲಗಿಸಿ ಭಾರ ಹೇರಿದರೂ ತಡೆದುಕೊಳ್ಳುವ ಶಕ್ತಿ ನೀಡುತ್ತದೆ.
ಎಕ್ಕಮಲೆ ಗಿಡದಂತೆ ಮುಟ್ಟಿದಲೆಲ್ಲಾ
ಹಾಲುಕ್ಕುವ ರೀತಿ ಇಶ್ಕೇ ಉಕ್ಕುವ ಬಯಕೆ
ಪ್ರೀತಿಯ ಸರಳ ವ್ಯಾಖ್ಯಾನ ಇದು. ಉಚ್ಚರಿಸಲೂ ಆಗದ, ಅರ್ಥೈಸಲೂ ಆಗದ ಘನಂದಾರಿ ಶಬ್ಧಗಳ ಹಂಗು ಪ್ರೀತಿಗೇಕೆ ಬೇಕು? ಸರಳ, ಸಹಜ ಶಬ್ಧಗಳು ಎದೆಗೆ ನಿಲುಕಿದರೆ ಸಾಕು. ಆದರೆ ಇಲ್ಲಿ ಕವಿ ನೀಡುವ ರೂಪಕಗಳ ಬಗ್ಗೆ ಗಮನ ನೀಡಿ. ಇಡೀ ಪುಸ್ತಕದ ತುಂಬ ಇಂತಹ ರೂಪಕಗಳು ಮಿಂಚಂತೆ ಕೋರೈಸುವುದನ್ನು ಕಾಣಬಹುದು.
ಪ್ರೀತಿಯ ಕೊಡ ತುಂಬುವಾಗ
ರಾಟೆ ಉಸುರುವ
ನಿಡುಸುಯ್ಲಿನಂತೆ ಪ್ರೇಮಿಯ ಹೃದಯ
ಎನ್ನುವ ಚಮತ್ಕಾರದ ಸಾಲುಗಳನ್ನೇ ನೋಡಿ. ವಿರಹ ವೇದನೆಯಿಂದ ನಿಟ್ಟುಸಿರಿಡುವ ಪ್ರೇಮಿಯ ಹಳಹಳಿಕೆಯನ್ನು ಬಾವಿಯಿಂದ ನೀರು ಸೇದುವಾಗ ರಾಟೆ ಮಾಡುವ ಶಬ್ಧಕ್ಕೆ ಹೋಲಿಸಲಾಗಿದೆ. ಶಾಬ್ಧಿಕ ಚಮತ್ಕಾರ ಇದು. ಇಲ್ಲಿಯವರೆಗೂ ಸಿಗದ, ಹೊಸತೇ ಆದ ಉಪಮೆಗಳು ಒಂದು ಕ್ಷಣ ನಿಂತು ಮತ್ತೆ ಮತ್ತೆ ಆ ಸಾಲುಗಳನ್ನು ದಿಟ್ಟಿಸುವಂತೆ ಮಾಡುತ್ತದೆ. ಪ್ರೇಮವಿರುವಲ್ಲಿ ವಿರಹ ಇಲ್ಲದಿದ್ದಲ್ಲಿ ಏನು ಚಂದ? ಹೀಗಾಗಿ ವಿರಹವೂ ಪ್ರೇಮದ ಸಮನಾಂತರಿಯಾಗಿ ಪ್ರತಿಫಲನಗೊಳ್ಳಲೇ ಬೇಕು.
ಪ್ರೀತಿ, ಪ್ರೇಮ, ಅನುರಾಗದ ತಾಡನಕ್ಕೆ
ಎದೆಯಾಳದ ಜ್ವಾಲಾಮುಖಿ ಸಿಡಿಯಬೇಕು
ಪ್ರೇಮ ಆಸ್ಪೋಟಿಸಬೇಕು. ಅಣುವಿಗೆ ಅಣು ಘರ್ಷಿಸಿ ವಿದ್ಯುತ್ ಹುಟ್ಟಿ ಪ್ರವಹಿಸುವಂತೆ ವಿರಹದ ತಾಡನದಿಂದ ಪ್ರೀತಿಯಲ್ಲೊಂದು ಶಕ್ತಿ ಉತ್ಪಾದನೆಯಾಗಬೇಕು. ಜ್ವಾಲಾಮುಖಿಯಾಗಿ ಮೇಲುಬ್ಬುಸಕ್ಕೆ ತನ್ನನ್ನೇ ತಾನು ಒಡ್ಡಿಕೊಳ್ಳಬೇಕು. ತನ್ನೊಳಗಿನ ಲಾವಾವನ್ನು ಹೊರಚೆಲ್ಲಿ ನಿರುಮ್ಮುಳವಾಗಬೇಕು. ಎಲ್ಲ ಕಟ್ಟುಪಾಡುಗಳನ್ನು ಕಿತ್ತೆಸೆದು ಮುನ್ನುಗ್ಗಬೇಕು.
ಒರತೆಯೊಂದು ಜಿನುಗುವಾಗ
ದೂರವೆಷ್ಟೆಂದು ತಾತ್ಸಾರ ಬೇಡ
ಒಲವ ಒರತೆ ಹರಿಯಲು ಪ್ರಾರಂಭಿಸಿದಾಗ ಇದೆಷ್ಟು ದೂರ ಹರಿದೀತು ಎಂದು ಮೂಗು ಮುರಿಯುವವರೇ ಎಲ್ಲ. ಆದರೆ
ಸೋನೆಯೊಂದಿಗೆ ನದಿ ಸೇರಿದ್ದು
ಅಲ್ಪಹನಿಗಳೆಂಬ ದಿಟ
ಮರೆಮಾಚಲಾದೀತೆ?
ಸಣ್ಣದೊಂದು ಜಿನುಗುವ ಆ ಒರೆತೆಯೇ ಮುಂದೆ ನದಿಯಾಗಿ ಕಡಲು ಸೇರುವುದಿಲ್ಲವೇ? ಕಡಲು ಸೇರಬಯಸುವ ನದಿಗೆ ಆಯಾಸವೆನ್ನುವುದು ಇದೆಯೇ?
ನುಣುಚಿಕೊಳ್ಳಲು ಕಾರಣಗಳಿಗೆ
ಹುಡುಕುತ್ತಿರುವ ಪ್ರೇಮಿಯೊಬ್ಬ
ತಿರುವಿನಲ್ಲಿ ಸಾಂತ್ವನಕ್ಕಾಗಿಯೇ
ಕವಿತೆ ಕಟ್ಟುತ್ತಿರುತ್ತಾನೆ
ಇದೇ ಕವಿತೆಗೆ ಮೂಲ. ಪ್ರೇಮ- ವಿರಹದ ತಿರುವು ದಾರಿಯಲ್ಲಿ ನಿಂತ ಅಸಹಾಯಕ ಪ್ರೇಮಿಯೇ ಅತ್ಯುತ್ತಮ ಕವಿತೆ ಬರೆಯಬಲ್ಲ. ಅದ್ಭುತ ಪ್ರೇಮ ಕಾವ್ಯಗಳೆಲ್ಲವೂ ಸೃಷ್ಟಿಯಾಗಿದ್ದು ವಿರಹದ ದುರಿತದಲ್ಲೇ.
ಅವಳ ಕೋಪ, ಇವನ ಪ್ರತಿಕೋಪ
ಸ್ವಲ್ಪ ಮೌನ ಮತ್ತದೆ ರಾಗ
ಇವನು ಮೀಟುವುದಕ್ಕಾಗಿ ಕಾಯುವುದು
ಅವಳು ಶ್ರುತಿಯಾಗುವುದು!

ಅವಳು ಶ್ರುತಿಯಾದಾಗ ರಚಿತವಾಗುವ ಕಾವ್ಯಕ್ಕೆ ಪೆನ್ನು ಪೇಪರ್ ನ ಹಂಗಿಲ್ಲ. ಅದೊಂದು ಅಲೌಕಿಕ ಕಾವ್ಯ. ಅಕ್ಷರಗಳಲ್ಲಿ ಹಿಡಿದಿಡಲಾಗದ ಆಲಾಪನೆ. ಜಗತ್ತನ್ನೇ ಮರೆಯುವಂತಹ ಅಂತಹುದ್ದೊಂದು ಮಿಲನಕಾವ್ಯಕ್ಕೆ ಎಷ್ಟೆಲ್ಲ ಪೂರ್ವ ಸಿದ್ಧತೆಗಳು. ಒಮ್ಮೆ ಶ್ರುತಿಯಾದರೆ ಸಾಕು. ಹೊಮ್ಮುವ ನಾದಕ್ಕೆ ಸ್ವರ್ಗವನ್ನೂ ಪರವಶಗೊಳಿಸುವ ಶಕ್ತಿ.
ದ್ವಿಗುಣಗೊಳ್ಳುವ
ವೈರಸ್’ಗಳಿದ್ದರೆ ನನ್ನ
ಸಾಪ್ಟ್ ವೇರ್’ಗೆ ಕಳಿಸಿಬಿಡಿ
ಜೀವ ಕೋಶಗಳೇ
ಇಶ್ಕ್ ಇಮ್ಮಡಿಯಾಗುವ
ಅರ್ಬುದವಾದರು ಸರಿ;
ಅವು ನನ್ನೊಳಗಿನ ಇಶ್ಕಿನ ಕಣಗಳನ್ನು
ಹೃದಯದಲ್ಲೆಲ್ಲ ಹರಡಬೇಕು
ಅಂದರೆ ಪ್ರೇಮದ ಅರ್ಬುದವನ್ನು ತಾನಾಗಿ ಆಹ್ವಾನಿಸಿಕೊಳ್ಳುವ ಕವಿ ಪ್ರೀತಿ ಎಂಬುದು ಕ್ಯಾನ್ಸರ್ ನಂತಹ ಭೀಕರ ಕಾಯಿಲೆಯಾರಾದರೂ ಸರಿ ಪ್ರೇಮವೊಂದು ಹೃದಯದಲ್ಲಿರಲಿ ಎನ್ನುತ್ತಾರೆ.
ಇಷ್ಟೆಲ್ಲಾ ಹೇಳಿದ ಮೇಲೆ ನೀವು ಈ ಸಾಲುಗಳನ್ನು ಓದಲೇ ಬೇಕು.
ಆಶಿಖನೊಬ್ಬ ಕೂಗಿ ಹೇಳುತ್ತಿದ್ದಾನೆ
ಇದೋ ತೆಗೆದುಕೊಳ್ಳಿ
ಇನ್ನು ನನ್ನೆಲ್ಲಾ
ರಹಸ್ಯ ಕಡತಗಳಿಗೆ
‘ ಹಬೀಬ್’ ಎನ್ನುವುದೇ ಪಾಸ್ವರ್ಡ್ !
ಆಧುನಿಕ ಜಗತ್ತಿನಲ್ಲಿ ನಮ್ಮೆಲ್ಲರ ಗುಪ್ತ ವ್ಯವಹಾರಗಳ ಮಾನ ಕಾಪಾಡುತ್ತಿರುವುದು ಕೇವಲ ಒಂದು ಪಾಸ್ ವರ್ಡ್. ಹ್ಯಾಕ್ ಆಗಿ ಅಲ್ಲೋಲಕಲ್ಲೋಲ ಆಗಿಬಿಡುವ ಇಂದಿನ ಯುಗದಲ್ಲಿ ನಮ್ಮೆಲ್ಲ ಖಾತೆಗಳ ಪಾಸ್ವರ್ಡ್ ಹೇಳಿಬಿಡುವ ಧೈರ್ಯ ಯಾರಿಗಿದೆ? ಆದರೆ ಕವಿ ಆ ದಿಟ್ಟತನವನ್ನೂ ತೋರಿಸಿದ್ದಾರೆ. ಮುಂದೆ ಹುಟ್ಟುವ ಮಗುವಿಗೆ ದೇವರ ಹೆಸರಿಡಬೇಕು ಎಂದು ಬಯಸುವ ಕವಿಯ ಇಶ್ಕ ಕೇವಲ ಮದಿನಾದ ಕಡೆಗಿದೆ
ಈ ತಂಬೆಲರು ಬೀಸುವಾಗ
ಮಾದಕ ದೃವ್ಯದಂತೆ ದೀರ್ಘವಾಗಿ
ಉಸಿರೆಳೆದುಕೊಳ್ಳುವ ಅಮಲು
ಅದು ಅಮೂರ್ತ ಅನುರಾಗ
ಎನ್ನುತ್ತಲೇ ಮತ್ತೆ ಮತ್ತೆ ಪ್ರೀತಿಯ ಅಮಲಲ್ಲಿ ಮುಳುಮುಳುಗಿ ಮೇಲೇಳಲು ಬಯಸದ ಕವಿ ಇಲ್ಲಿ ಮೈಖಾನಾದ ಹೊಸ್ತಿಲಲ್ಲಿ ಎಡವಿ ಬಿದ್ದೂ ಸಾಕಿಯ ಬಳಿ ಮತ್ತಿಷ್ಟು ಮದಿರೆ ಬೇಡುತ್ತ ಗಜಲ್’ನ್ನು ಬಡಬಡಿಸುವ ಗಜಲ್’ಕಾರರಂತೆ ಗೋಚರಿಸುತ್ತಾರೆ. ಹೀಗಾಗಿ ಮೊದಲ ಸಾಲಲ್ಲಿ ಹೇಳಿದ ಸೂಫಿ ಮತ್ತೆ ಎದೆಯೊಳಗೆ ನಂದಾದೀಪ ಬೆಳಗಿದಂತಾಗುತ್ತದೆ. ಪ್ರೇಮ ಮತ್ತು ಸೌಂದರ್ಯ ಈ ಎರಡರ ತಳಹದಿಯ ಮೇಲೆ ನಿಂತಿರುವ ಸೂಫಿಸಂನ ನಿಜವಾದ ಉದ್ದೇಶ ಸಚ್ಚಿದಾನಂದ ಸ್ಥಿತಿ. ನಮ್ಮಲ್ಲಿರುವ ಅಹಂಕಾರವನ್ನು ನಮ್ಮಿಂದಲೇ ಕೊಲ್ಲಿಸಿ ನಮ್ಮನ್ನು ಪರಮಾತ್ಮನಲ್ಲಿ ನೆಲೆಸುವಂತೆ ಮಾಡುವ ಸೂಫಿ ಮತದ ಎಲ್ಲ ಲಕ್ಷಣಗಳೂ ಈ ಸಂಕಲನದಲ್ಲಿವೆ.
ಸಂಕಲನದಲ್ಲಿ ಬಹಳಷ್ಟು ಅನ್ಯಭಾಷಾ ಶಬ್ಧಗಳಿವೆ. ಆದರೆ ಮದೀನಾ ಮತ್ತು ಪರಮಾತ್ಮನ ಇಶ್ಕ್’ನಲ್ಲಿರುವ ಕವಿಗೆ ಅದಕ್ಕಿಂತ ಉತ್ತಮ ಆಯ್ಕೆಗಳಿಲ್ಲ ಎಂಬುದನ್ನು ಒಪ್ಪಲೇ ಬೇಕು. ಮೊಹಬ್ಬತ್ ಮತ್ತು ಇಶ್ಕ್’ಗೆ ತಕ್ಕುದಾದ ಪದಗಳನ್ನು ಎಲ್ಲಿಂದ ಕಡತರುವುದು? ಇತ್ತೀಚೆಗಂತೂ ಉರ್ದು ಶಬ್ಧಗಳ ಮೋಡಿಯಲ್ಲಿ ಎಲ್ಲವನ್ನೂ ಮರೆತುಬಿಡುತ್ತಿರುವ ನನಗೆ ಈ ಸಂಕಲನದ ಉರ್ದು ಶಬ್ಧಗಳಂತೂ ಮತ್ತೆ ಮತ್ತೆ ಮೊಹಬ್ಬತ್’ನಲ್ಲಿ ಕಳೆದುಹೋಗುವಂತೆ ಮಾಡಿದ್ದು ನಿಜವಾದರೂ ಕವಿ ಕನ್ನಡ ಕವಿತೆಗಳಲ್ಲಿ ಪರಭಾಷಾ ಪದಗಳ ಬಳಕೆಯನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಇಲ್ಲವಾದಲ್ಲಿ ಕನ್ನಡದ ಹೂರ್ ಮುನಿಸಿಕೊಂಡಾಳು.
ಅಂದಹಾಗೆ ನಾನು ಮಾಡಿದ್ದು ಸರಿಯೋ ತಪ್ಪೋ ಗೊತ್ತಿಲ್ಲ. ಮದೀನಾ ಎನ್ನುವುದನ್ನು ಅಪ್ಪಟ ಪ್ರಿಯತಮೆಗೆ, ಹಬೀಬರನ್ನು ಪ್ರೇಮದ ಉತ್ಕಟ ಶಿಖರಕ್ಕೆ ಹೋಲಿಸಿಕೊಳ್ಳುತ್ತ ಲೌಕಿಕವಾಗಿ ಆಸ್ವಾದಿಸಿ ಎದೆಯುಬ್ಬರ ಅನುಭವಿಸಿದ್ದೇನೆ. ತೀವ್ರ ಪ್ರೇಮದ ಸಾಲುಗಳನ್ನು ಉಣಬಡಿಸಿ ತನ್ಮೂಲಕ ಮತ್ತೊಮ್ಮೆ ಹರೆಯದ ಭಾವಗಳಿಗೆ ಸ್ಪಂದಿಸಿ ಪುಳಕಗೊಳ್ಳುವಂತೆ ಮಾಡಿದ ಮುನ್ನವ್ವರ ಜೋಗಿಬೆಟ್ಟುರವರಿಗೆ ಅಭಿನಂದನೆ ಹೇಳದೇ ಹೇಗಿರಲಿ?





ಕಣ್ಣು ಗುಡ್ಡೆ ಪೀಕಿ ಓದುವಂತೆ ಬರೆದಿದ್ದೀರಿ. ಕವಿತೆಗಳಂತೆಯೇ ನಿಮ್ಮ ಅನಿಸಿಕೆಯಲ್ಲಿಯೂ ಇಶ್ಕ್’ನ ಅಮಲು ಇದೆ.
ಇಶ್ಕ್’ನ ಜೋಶ್ ನಲ್ಲೇ ಅರಳಿದ ತುಂಬಾ ಉತ್ಕಟತೆಯ ಹಾಗೂ ಉತ್ತಮ ವಿಮರ್ಶೆ ನಿಮ್ಮದು
ಅಭಿನಂದನೆಗಳು, ವಂದನೆಗಳು
ಥ್ಯಾಂಕ್ಯೂ ಸರ್
ಧನ್ಯವಾದಗಳು ಅಕ್ಕಾ. ನಿಮ್ಮ ಆಪ್ತವಾದ ವಿಮರ್ಶೆಗೆ ನನ್ನ ಪುಸ್ತಕವನ್ನೇ ನಾ ಮತ್ತೆ ಓದಲು ಪ್ರಾರಂಭಿಸಿದ್ದೇನೆ.
ಥ್ಯಾಂಕ್ಸ್ ಕಣಪ್ಪ.. ವಿಮರ್ಶೆಗೇ ಒಂದು ಕಿರಿಟ ಕೊಟ್ಟೆ ನೀನು
ಕೆರೆಮನೆಯವರ ವಿಮರ್ಶೆ ಕವಿತೆಗಳಷ್ಟೇ ಸೊಗಸಾಗಿದೆ. (ಅವರು ಆಯ್ದುಕೊಂಡ ಕವಿತೆಗಳ ಸಾಲುಗಳ ಓದಿದಾಗ)
ಕವಿತೆ ಮತ್ತು ವಿಮರ್ಶೆ ಕನ್ನಡ ಕವಿತಾ ಸಾಹಿತ್ಯದಲ್ಲಿ ಹೊಸ ಗಾಳಿ ಬಂದಂಗಿದೆ.
ಪ್ರೇಮ ಕವಿತೆಗಳು ಇಷ್ಟು ಬಲಹೀನನ್ನಾಗಿ ಮಾಡುತ್ತದೆ ಎಂಬ ಮಾತುಗಳು ಕವಿತಾ ಸಂಕಲನವನ್ನು ಓದಲೇಬೇಕೆಂಬ ತುಡಿತವನ್ನು ಕವಿತೆ ಪ್ರೇಮಿಗಳಲ್ಲಿ ಹುಟ್ಟಿಸುತ್ತದೆ ಎಂಬುದು ನಿಜ.