ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇವು ದುರಿತ ಕಾಲದ ಕವಿತೆಗಳು..

muralidhara upadhya hiriyadka

ಮುರಳೀಧರ ಉಪಾಧ್ಯ ಹಿರಿಯಡಕ

ಈ ವರ್ಷದ { 2016 } ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪಡೆದಿರುವ ” ಲಾವೋನ ಕನಸು ” ಕವಿ ರಾಜೇಂದ್ರ ಪ್ರಸಾದರ ನಾಲ್ಕನೆಯ ಕವನ ಸಂಕಲನ . ಈ ಸಂಕಲನದಲ್ಲಿ ಐವತ್ತು ಕವನಗಳಿವೆ .

ಈ ಸಂಕಲನದ ಮೊದಲ ಕವನ ‘ಪ್ರಾರ್ಥನೆ’ -“ಪ್ರಭುವೇ, ಎಂದೂ ಏನೂ ಕೇಳದ ನಾನು ಮಂಡಿಯೂರಿ ಬೊಗಸೆಯಷ್ಟು ಪ್ರೀತಿ ಬೇಡಿದೆ” ಎಂದು ಆರಂಭವಾಗುತ್ತದೆ . “ಏನೂ ತೋಚದೆ ಕಡೆಗೆ ಎದೆಯನ್ನೇ ನಿನಗಿತ್ತು ಶರಣಾದ ಬಳಿಕ ನಾವಿಬ್ಬರೂ ಶವವಾಗಿ ಹೋದೆವು ; ಭಕ್ತ ಸತ್ತ ಬಳಿಕ ದೇವನುಳಿಯಲಿಲ್ಲ” ಎಂಬ ಕೊನೆಯ ಸಾಲುಗಳು ಈ ಕವಿಯ ಪ್ರಬುದ್ದ ವೈಚಾರಿಕತೆಯನ್ನು ಸೂಚಿಸುತ್ತವೆ. “ಎಲ್ಲ ಎಲ್ಲವನರಿಯಬಹುದು, ಸಾವನರಿಯಬಾರದು.. ದೇವ ದಾನವ ಮಾನವರೆಲ್ಲರಿಗೆಯೂ ಸಾವು” ಎಂಬ ಅಲ್ಲಮನ ವಚನವನ್ನು ನೆನಪಿಸುವ ಸಾಲುಗಳಿವು.

rajendra prasad laoನಾಟಕಕಾರ ಸಂಸ ಬ್ರಿಟಿಷ್ ಪೋಲೀಸರು ತನ್ನನ್ನು ಬಂಧಿಸುತ್ತಾರೆ ಎಂಬ ಕಾಲ್ಪನಿಕ ಭಯದಿಂದ ಆತ್ಮಹತ್ಯೆ ಮಾಡಿಕೊಂಡರು. ಆದರೆ ‘ಲಾವೋನ ಕನಸಿ’ನ ಕವಿಯಲ್ಲಿರುವುದು “ದೆಹಲಿಯಲ್ಲಿ” ಕವನದ ಅಡಿಗರಲ್ಲಿದ್ದ ರಾಜಕೀಯದ ಕೇಡಿನ ಭಯ.
ಕವಿ ರಾಜೇಂದ್ರ ಪ್ರಸಾದ್ – “ದಿನಗಳು ಕಳೆದಂತೆ ನನಗ್ಯಾಕೋ ಇದು ದುರಿತಕಾಲ ಅಂತಲೇ ಅನಿಸುತ್ತಿದೆ. ಇಂತಹ ದುರಿತಕಾಲದಲ್ಲಿ ಹೆಚ್ಚು ಹೆಚ್ಚು ಕವಿಗಳು – ಕವಿತೆಗಳು ಹುಟ್ಟಿ ಕೊಳ್ಳಬೇಕು. ಅವು ದೇಶದಲ್ಲೆಲ್ಲಾ ಹರಡಿ ಅರಿವಿನ ಹೊಳೆಗಳಾಗಬೇಕು. ನನಗೀಗ ಜರ್ಮನಿಯ ಬ್ರೆಕ್ಟ್, ಸ್ಪೇನ್ ನ ಲೋರ್ಕಾ ನೆನಪಾಗುತ್ತಾರೆಂದರೆ ನಮ್ಮ ದೇಶದಲ್ಲಿ ಕವಿಗಳೇ ಇಲ್ಲ ಎಂದುಬಿಡುವಿರೇನೋ? ಈ ಭೀತಿಗೆ ಕಾವ್ಯ ಔಷಧವಾಗಬೇಕೆಂದು ಬಯಸುವೆ.” ಎನ್ನುತ್ತಾರೆ.

ಕಾವ್ಯದ ಚಿಕಿತ್ಸಕ ಗುಣದಲ್ಲಿ ಈ ಕವಿಗೆ ನಂಬಿಕೆ ಇದೆ . “ಉತ್ತಮ ಪ್ರಭುತ್ವ ಲೊಳಲೊಟ್ಟೆ” ಎಂದ ಪುರಂದರದಾಸರಲ್ಲಿ ವಿಷಾದವಿದೆ. “ದುರಿತಕಾಲದ ಕವಿತೆ” ಬರೆವ ರಾಜೇಂದ್ರಪ್ರಸಾದರಿಗೆ ಕೇಡಿನ ಭಯವಿದೆ . ‘ದುರಿತಕಾಲದ ದುಮ್ಮಾನಗಳು’ ಕವನ ಕವನದ ಕೊನೆಯ ಸಾಲುಗಳಿವು – “ಈ ದುರಿತ ಕಾಲದಲ್ಲಿ ಕವಿಗಳು ಮಾತನಾಡುವುದು ನಿಷಿದ್ದ”. ಆದರೆ ಕಾವ್ಯ ತನಗೆ ಆಡಗುತಾಣ ಎಂದು ಈ ಕವಿಗೆ ಗೊತ್ತು .

‘ಲಾವೋನ ಕನಸು’ ಗಳ ಕವಿ ಆಶಾವಾದಿ . ‘ಯುದ್ದಕಾಲದಿ ಸಾಂತ್ವನ ಸಾಹಿತ್ಯ’ ಈ ಸಂಕಲನದ ಪ್ರಾತಿನಿಧಿಕ ಕವನಗಳಲ್ಲೊಂದು.
“ಈ ನಲಕ್ಕೆ ರಕ್ತ ಬಿದ್ದರೆ ರಕ್ಕಸರು ಹುಟ್ಟುತ್ತಾರೆ
ಕಣ್ಣೀರು ಬಿದ್ದರೆ ಶರಣರು ಮೈತಳಿಯುತ್ತಾರೆ
ಬಿಡು ಚಿಂತೆ, ಹೆಜ್ಜೆ ಮಾತ್ರ ನಿಲ್ಲಿಸದಿರು
ದಾರಿಮಾರಿಯರು ಪಾದ ನುಂಗುವರು
ಶಾಪಕ್ಕೂ ಒಂದು ಸಾವುಂಟು
ಸಾವಿಗೂ ಒಂದು ಎಲ್ಲೆಯುಂಟು
ನಂಬು, ಇಲ್ಲಿ ಎಷ್ಟು ಕವಿತೆ ಬರೆದರೂ
ಒಂದು ಪದವೂ ಸಾಕುಮಾಡೆನಲಿಲ್ಲ
ಎಷ್ಟು ರಾಗವ ಹಾಡಿದರೂ
ಒಂದು ಸ್ವರವೂ ನೋಯಲಿಲ್ಲ
ಗೆಳೆಯ,
ಉದುರುವ ಎಲೆ ಎಂದೂ
ಬೀಸುವ ಗಾಳಿಯ ದ್ವೇಷಿಸೋಲ್ಲ! ”

ಕೆ. ಎಸ್ . ನರಸಿಂಹಸ್ವಾಮಿ ಅವರಿಗೆ ‘ಗುಣವಿರದ ಕವಿತೆ ಸಿಂಹಾಸನದಿ ಮೆರೆಯುತಿದೆ’ ಅನ್ನಿಸಿತ್ತು. ರಾಜೇಂದ್ರ ಪ್ರಸಾದರ ಕಾವ್ಯ, ಗುಣವಿರುವ, ಗುಣಪಡಿಸುವ, ರಕ್ತದಾಹದ ಸಮಾಜ ಗುಣಮುಖಿಯಾಗಬೇಕೆಂದು ಹಾರೈಸುವ ಕಾವ್ಯ.

ತನ್ನ ಕಾಲದ ದುರಿತಗಳ ಕುರಿತು ‘ಚೂರಿಯ ಕತೆ’ ಬರೆದ ಕಡೆಂಗೋಡ್ಲು ಅವರ ಹೆಸರಿನಲ್ಲಿ ನೀಡುವ ಕಾವ್ಯ ಪ್ರಶಸ್ತಿ ಪಡೆದಿರುವ ರಾಜೇಂದ್ರ ಪ್ರಸಾದರಿಗೆ ಅಭಿನಂದನೆಗಳು.

rajendra prasad

‍ಲೇಖಕರು Admin

12 August, 2016

1 Comment

  1. Sangeeta Kalmane

    ಕವಿ ಶ್ರೀ ರಾಜೇಂದ್ರ ಪ್ರಸಾದವರಿಗೆ ಅಭಿನಂದನೆಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading