ಇವತ್ತೂ ರಾತ್ರಿ ಐದೂವರೆ ಕೋಟಿ ಖಾಲಿ ಹೊಟ್ಟೆಗಳು!

ಪರಾಕ್ರಮ ಕಂಠೀರವ…! ಬಲ್ಲಿರೇನಯ್ಯ…!!

ಇಂಡಿಯಾಕ್ಕೆ ಸ್ವಾತಂತ್ರ್ಯ ಬಂದ 70 ವರ್ಷಗಳ ಬಳಿಕ ಈವತ್ತು  ನಮ್ಮಲ್ಲಿ 110 ಮಂದಿ ಬಿಲಿಯಾಧಿಪತಿಗಳೂ, 2,36,000 ಮಿಲಿಯಾಧಿಪತಿಗಳೂ ಇದ್ದಾರೆ. ಆದರೆ ಅದೇ  ಭಾರತದಲ್ಲಿ 25ಕೋಟಿ ಮಂದಿ ದಿನಕ್ಕೆ 150 ರೂಪಾಯಿಗಳಿಗಿಂತಲೂ ಕಡಿಮೆ ಇರುವ ತಮ್ಮ ಆದಾಯದಲ್ಲಿ 70% ಭಾಗವನ್ನು ಹೊಟ್ಟೆ ತುಂಬಿಸಿಕೊಳ್ಳುವುದಕ್ಕಾಗಿಯೇ ವ್ಯಯಿಸಿ,  ಮತ್ತೂ ಅರೆಹೊಟ್ಟೆ ಅಥವಾ ಖಾಲಿಹೊಟ್ಟೆಯಲ್ಲೇ ಮಲಗಲು ಹೋಗುತ್ತಿದ್ದಾರೆ.

ಬಡವರು ಮತ್ತು ಸಿರಿವಂತರ ನಡುವಿನ ಅಂತರ ಭಾರತದಲ್ಲಿ ಎಷ್ಟು ತಾರಕಕ್ಕೆ ಹೋಗಿದೆಯೆಂದರೆ, ಆಕ್ಸ್ ಫಾಮ್ ಸಂಸ್ಥೆ ಇದೇ ಜುಲೈ ತಿಂಗಳಿನಲ್ಲಿ ಬಿಡುಗಡೆ ಮಾಡಿರುವ ವಿಶ್ಲೇಷಣಾ ವರದಿಯ ಪ್ರಕಾರ ಜಗತ್ತಿನ 152 ದೇಶಗಳ ಪಟ್ಟಿಯಲ್ಲಿ ಅಸಮಾನತೆಗೆ ಸಂಬಂಧಿಸಿದಂತೆ, ಭಾರತದ್ದು ಬಡ 132ನೇ ಸ್ಥಾನ!

ಈ ವರದಿಯು, ಮೊದಲ 13 ಸ್ಥಾನಗಳಲ್ಲಿರುವ ದೇಶಗಳು ಹೇಗೆ ತಮ್ಮಲ್ಲಿನ ಬಡವರ-ಸಿರಿವಂತರ ನಡುವಿನ ಅಂತರ ತಗ್ಗಿಸಿಕೊಂಡಿವೆ ಎಂಬ ಬಗ್ಗೆ ಒಂದು ಒಳನೋಟವನ್ನು ಒದಗಿಸುತ್ತದೆ. ಅದು ಮೂರು ಕಾರಣಗಳನ್ನು ಸರ್ಕಾರದ ನೀತಿಗಳಲ್ಲಿ ಗುರುತಿಸುತ್ತದೆ. ಅವು ಯಾವುವೆಂದರೆ:

೧. ಸರ್ಕಾರ ಸಾರ್ವಜನಿಕ ಸೇವೆಗಳಲ್ಲಿ ತನ್ನ ಪಾತ್ರವನ್ನು ಹೆಚ್ಚಿಸಿಕೊಳ್ಳುವುದು

೨. ಪ್ರಗತಿಶೀಲವಾದ ತೆರಿಗೆ ವ್ಯವಸ್ಥೆ

೩. ದುಡಿಯುವವರ ಹಕ್ಕುಗಳ ರಕ್ಷಣೆ

ಈ ಮೂರೂ ಅಂಶಗಳು ಸಾಮಾಜಿಕ ಸಮಾನತೆ ತರುವಲ್ಲಿ ಬಹಳ ನಿರ್ಣಾಯಕ. ಆದರೆ, ಭಾರತದಲ್ಲಿ ಸರ್ಕಾರವೇ ಮುಂದೆನಿಂತು, ಎಲ್ಲದರಲ್ಲೂ ವಿದೇಶಿ ಹೂಡಿಕೆ ಮತ್ತು ಖಾಸಗೀಕರಣಕ್ಕೆ ಒತ್ತು ನೀಡತೊಡಗಿದೆ. ತೆರಿಗೆ ವ್ಯವಸ್ಥೆಯನ್ನು ತೆರಿಗೆ ಬಲೆ ಹಿಗ್ಗಿಸುವ ಮತ್ತು ಸಬ್ಸಿಡಿಗಳನ್ನು ತಗ್ಗಿಸುವ ಹೆಸರಲ್ಲಿ ADBಯಂತಹ ಜಾಗತಿಕ ಶಕ್ತಿಗಳ ಕೈಗೆ ಕೊಡಲಾಗಿದೆ ಮತ್ತು ಕಾರ್ಮಿಕರ-ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದಂತೆ ಇನ್ನೂ ಪಾಳೇಗಾರಿಕೆ ವ್ಯವಸ್ಥೆಯೇ ಚಾಲ್ತಿಯಲ್ಲಿದೆ. ಹೀಗಿರುವಾಗ ನಾವು 132ನೇ ಸ್ಥಾನದಲ್ಲಿರುವುದು ಆಶ್ಚರ್ಯದ ಸಂಗತಿಯೇನಲ್ಲ.

ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳನ್ನು ಕೊಂದು, ಮೆಗಾ ಉದ್ಯಮಗಳಿಗೆ ಸಕಲ ಸವಲತ್ತುಗಳನ್ನು ಕೊಡುವುದು, ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವ್ರದ್ಧಿಯ ಜಾಗದಲ್ಲಿ ನಗರಗಳಿಗೆ ವಲಸೆ ಪ್ರೋತ್ಸಾಹಿಸುವ ಸ್ಮಾರ್ಟ್ ಸಿಟಿಗಳ ರಚನೆ ಹಾಗೂ ಕ್ರಷಿಗೆ ಸರಕಾರ ಮಾಡುವ ವೆಚ್ಚಗಳನ್ನು ಕಡಿತಗೊಳಿಸಿ ಕಾರ್ಪೋರೇಟ್ ಕ್ರಷಿಗೆ ಪ್ರೋತ್ಸಾಹ ಕೊಡುವುದು ಸರಕಾರದ ಅಭಿವ್ರದ್ಧಿಯ ಮೂಲ ಧ್ಯೇಯ ಆದಾಗ ಸಹಜವಾಗಿಯೇ ಅಸಮಾನತೆ ಹೆಚ್ಚುತ್ತದೆ.

ಸರ್ಕಾರ GDPಯ 3.1 ಶೇಕಡಾ ಭಾಗವನ್ನು ಶಿಕ್ಷಣಕ್ಕೂ, 1.5 ಶೇಕಡಾ ಭಾಗವನ್ನು ಆರೋಗ್ಯ ಸೇವೆಗಳಿಗೂ ಖರ್ಚು ಮಾಡುತ್ತಿದೆ. ಈ ಖರ್ಚಿನಲ್ಲಿ ಸೋರಿಹೋಗುವ ಪಾಲೆಲ್ಲ ಹೋದಮೇಲೆ ಸರ್ಕಾರಿ ಶಿಕ್ಷಣಕ್ಕೆ ಉಳಿಯುವ  ದುಡ್ಡಿನಲ್ಲಿ ಗುಣಮಟ್ಟದ ಶಿಕ್ಷಣ ಸಿಗುವುದು ಸಾಧ್ಯವೇ ಇಲ್ಲ. ಇನ್ನು ಆರೋಗ್ಯ ಕ್ಷೇತ್ರದಲ್ಲಂತೂ ಜನ ದುಬಾರಿಯಾದ ಖಾಸಗಿಯನ್ನೇ ನಂಬಬೇಕಾಗಿರುವ ಪರಿಸ್ಥಿತಿ ಉಂಟಾಗಿರುವುದರಿಂದ ಪ್ರತೀ ಅನಾರೋಗ್ಯ ಕೂಡ ದೇಶದಲ್ಲಿ ಬಡವರ ಸಂಖ್ಯೆಯನ್ನು ಹೆಚ್ಚು ಮಾಡುತ್ತಿದೆ. ಆರೋಗ್ಯಕ್ಕಾಗಿ ಒಬ್ಬ ಭಾರತೀಯ ತನ್ನ ಕಿಸೆಯಿಂದ ವ್ಯಯಿಸುವ ಹಣ ಜಗತ್ತಿನ ಬೇರೆ (ಮುಂದುವರಿದ) ದೇಶಗಳಿಗೆ ಹೋಲಿಸಿದರೆ ತೀರಾ ಹೆಚ್ಚು ಎಂದು ಅಂಕಿ-ಸಂಖ್ಯೆಗಳು ತೋರಿಸುತ್ತವೆ.

ತಪ್ಪಿದ್ದೆಲ್ಲಿ?

ಮಧ್ಯಮ ವರ್ಗದ ಗಾತ್ರವನ್ನು ಹಿಗ್ಗಿಸುವ ಮೂಲಕ ಅಸಮಾನತೆಯನ್ನು ತಗ್ಗಿಸಿಕೊಳ್ಳುವಲ್ಲಿ ಪ್ರಜೆಗಳಾಗಿ ನಾವೆಲ್ಲಿ ತಪ್ಪಿದ್ದೇವೆ ಎಂದು ಅರಸಿದರೆ ನಮಗೆ ಸಿಗುವ ಕಾರಣಗಳು ಮೂರು. ಅವು:

೧. ಉದ್ಯೋಗ ರಹಿತ ಬೆಳವಣಿಗೆ

೨. ತಗ್ಗುತಿರುವ ಕ್ರಷಿ ಆದಾಯ

೩. ಸಾಮಾಜಿಕ ತಾರತಮ್ಯ.

1980ರ ಬಳಿಕ ಕುಟುಂಬದ ಆದಾಯದ ಪ್ರಮಾಣ ಪ್ರಗತಿ ಕಂಡಿದೆಯಾದರೂ, ಸೇವಾ ಕ್ಷೇತ್ರದಲ್ಲಿ ಅಸಹಜ ಬೆಳವಣಿಗೆಗಳಿಂದಾಗಿ ಶ್ರಮಕ್ಷೇತ್ರ ಹಿಂದುಳಿದಿದೆ. ದೇಶದ GDPಯ 50% ಗೆ ಕಾರಣವಾಗುವ ಸೇವಾ ಕ್ಷೇತ್ರ ಉದ್ಯೋಗ ಒದಗಿಸುವುದು ಬರೇ ಮೂರನೇ ಒಂದು ಭಾಗಕ್ಕೆ. ಅದೇ ವೇಳೆ, ದೇಶದ 50% ಗ್ರಾಮೀಣ, ಕ್ರಷಿ ಕುಟುಂಬಗಳು ದಿನವಿಡೀ ಗದ್ದೆಗಳಲ್ಲಿ ದುಡಿದರೆ ಬರುವುದು GDPಯ ಐದನೇ ಒಂದು ಭಾಗ ಮಾತ್ರ! ಹಾಗಾಗಿ ಇವತ್ತಿಗೂ ಹಸಿವಿನ ರಾಜಧಾನಿ ಹಳ್ಳಿಯೇ.

ಅರ್ಧಕ್ಕರ್ಧ ಮಂದಿ ಭೂರಹಿತ ಕ್ರಷಿ ಕಾರ್ಮಿಕರೋ ಅಥವಾ ಸಣ್ಣ ಹಿಡುವಳಿದಾರರೋ ಆಗಿರುವ ಭಾರತದಲ್ಲಿ 1990ರ ಬಳಿಕದ ಆರ್ಥಿಕ ನೀತಿಗಳು ಕ್ರಷಿಯನ್ನು ತೀರಾ ಕಡೆಗಣಿಸಿದ್ದು, ಈವತ್ತು ಕ್ರಷಿ ಬಡರೈತನಿಗೆ ದುಡಿಮೆಯಾಗಿ ಉಳಿದಿಲ್ಲ. ಅದು ಬರೇ ನಷ್ಟದ ಬಾಬ್ತು!

ಆಧುನಿಕ ಭಾರತದ ದೇವಸ್ಥಾನಗಳೆಂದು ಭಾರತ ಘೋಷಿಸಿಕೊಂಡ ಅಣೆಕಟ್ಟುಗಳು, ಕೈಗಾರಿಕೆಗಳು ಕೊನೆಗೂ ತಮ್ಮ ನೆಲೆಗಾಗಿ ಹೊರದೂಡಿದ್ದು ತಳಸಮುದಾಯಗಳನ್ನು. ಇಂದಿಗೂ ಭೂರಹಿತರೋ, ವಲಸೆ ಕಾರ್ಮಿಕರೋ ಆಗಿರುವ ಈ ಸಮುದಾಯಗಳು, ಅಲ್ಲಿನ ಮಹಿಳೆಯರು ಖಾಯಂ ಆಗಿ ಅಸಹಜವಾಗಿ ಕಡಿಮೆ ತೂಕ, ಹಸಿವೆ,  ಅನಕ್ಷರತೆ, ಪೌಷ್ಟಿಕಾಂಶಗಳ ಕೊರತೆಯಲ್ಲಿ ಬಳಲುತ್ತಿರುವವರು. ಈವತ್ತಿಗೂ ಭಾರತದಲ್ಲಿ 30% ಶಿಶುಗಳು ಅಸಹಜವಾಗಿ ಕಡಿಮೆ ತೂಕದೊಂದಿಗೆ ಜನಿಸುತ್ತಿದ್ದಾರೆ.

ಈ ಜಾಗಗಳಲ್ಲಿ ಸರಕಾರ ತನ್ನ ತಪ್ಪುಗಳನ್ನು ಸರಿಪಡಿಸುವ ಕೆಲಸ ಮಾಡಬೇಕಿದ್ದರೆ, ಅದು ಈಗಿರುವ ತನ್ನ ನಿಲುವಿನಿಂದ ಸಂಪೂರ್ಣ ಯು ಟರ್ನ್ ಹೊಡೆಯಬೇಕಿದೆ. ದುರದ್ರಷ್ಟವಶಾತ್, ಈಗ ಅವರಿಗೆ ಉಣ್ಣುವ ಆಹಾರ, ಉಡುವ ಬಟ್ಟೆ, ತೆರುವ ತೆರಿಗೆ, ಬರುವ ದುಡ್ಡುಗಳ ಮೇಲಷ್ಟೇ ಕಣ್ಣು ಹಾಗು ವಿಶ್ವಗುರು ಆಗುವುದೊಂದೇ ಗುರಿ!

 

‍ಲೇಖಕರು avadhi

September 4, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

  1. Vijendra

    Saiddantika neleye irada rajakaranigalu,vastavada arive irada sarvajnanthadu IAS adhikaarigalu,endu horatakke beedige barada helikegalige seemithavaada intellectuals matthu elledikinthalu migilaagi mathavannu dharmakke,jathige meesaliduva and hanakke maarikolluva matadararu..desha abhivruddi maralugàdina marichikeye sari

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: