ಇಳಿವಯಸ್ಸಿಗೆ ಬಣ್ಣಗಾರ…

ಮಣ್ಣಪಳ್ಳಎಂಬ ಹೆಸರೇ ಇಂದು ಮಣಿಪಾಲವಾಗಿದೆ.

ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ.

ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ.

ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ ಸುಷ್ಮಿತಾ ‘ಮಣ್ಣಪಳ್ಳದ ಮೂಕಿಚಿತ್ರ’ದಲ್ಲಿ ಈ ಊರಿನ ಯಾರೂ ಕಾಣದ ಚಿತ್ರಗಳನ್ನು ಕಟ್ಟಿ ಕೊಡಲಿದ್ದಾರೆ.

ಇಲ್ಲಿಗೆ ಆಸ್ಪತ್ರೆಯ ನೆಪಕ್ಕೆ ಬರುವ ನನ್ನಜ್ಜಿ ವಾಪಸ್ಸು ಊರಿಗೆ ಹೋದ ಮೇಲೆ ಮಣಿಪಾಲವನ್ನು ವರ್ಣಿಸುವುದನ್ನು ನೋಡಬೇಕು. “ಅಲ್ಲಿ ಗಂಡು ಹೆಣ್ಣುಗಳೆಂಬ ಭೇದವೇ ಇಲ್ಲ. ಎಲ್ಲರೂ ಒಂದೇ ಗತ್ತಲ್ಲಿ ರಾತ್ರಿ ಹಗಲೆನ್ನದೆ ಊರು ಸುತ್ತುತ್ತಾರೆ. ರಾತ್ರಿಯೇ ಬೆಳಗಿಕಿಂತ ಜೋರು.” ಎಂಬುದೆಲ್ಲ ಅವರ ವಿವರಣೆ. ಅದರ ಜೊತೆಗೆ “ನೀನು ಹುಟ್ಟುವಾಗ ಮಣಿಪಾಲದಲ್ಲಿ ಎಂತ ಇದ್ದಿತ್ತು? ಖಾಲಿ ಗುಡ್ಡ, ಎರಡು ಆಸ್ಪತ್ರೆ. ಆದರೆ ನಿನ್ನ ಕಾಲಕ್ಕೆ ನೋಡು, ಬುಡದಲ್ಲಿ ನಿಂತು ತಲೆ ಎತ್ತಿದರೆ ತುದಿ ಕಾಣದಷ್ಟು ಎತ್ತರದ ಕಟ್ಟಡಗಳಾಗಿಬಿಟ್ಟಿವೆ. ಯಬ್ಬಾ!” ಎಂದು ಒಂದೇ ಉಸಿರಲ್ಲಿ ಹೇಳುತ್ತಾರೆ.

ಅವರು ಹೇಳುವ ಮಾತಲ್ಲಿ ಯಾವ ಹೆಚ್ಚುಗಾರಿಕೆಯೂ ಇಲ್ಲ. ಮಣಿಪಾಲದಲ್ಲಿ ಮಾಳಿಗೆ ಮಾಳಿಗೆಗಳ ಅಪಾರ್ಟ್ಮೆಂಟ್ಗಳು, ಶಾಲಾ ಕಟ್ಟಡಗಳು, ಶಾಪಿಂಗ್ ಮಾಲ್ ಗಳು, ಹೀಗೆ ಒಂದಿಷ್ಟೂ ಸಂದೂ ಇಲ್ಲದಂತೆ ಕಟ್ಟಡಗಳ ಸಂತೆಯೇ ಬಂದು ನಿಂತಿವೆ. ಅಷ್ಟು ರಾಕ್ಷಸಗಾತ್ರ ಕಟ್ಟಡಗಳನ್ನು ನಂಬಿಕೊಂಡು ಇನ್ನೊಂದಿಷ್ಟು ಉದ್ಯೋಗಗಳು ಮತ್ತು ದಿನಗೂಲಿ ಬದುಕುಗಳು ವಿಸ್ತಾರಗೊಳ್ಳುತ್ತಿವೆ. ಇಲ್ಲಿ ಕಟ್ಟಡಗಳು ಬಂದು ನಿಂತರೆ ಸಾಕೆ? ಅವುಗಳ ಸೊಬಗಿಗೆ ತಕ್ಕುದಾದ ನೆಲ ಹಾಸು, ಒಳಾವರಣ ವಿನ್ಯಾಸ, ಸುಣ್ಣ ಬಣ್ಣ, ಮತ್ತೆ ಈ ಉದ್ಯೋಗಗಳಿಗೆ ಹೊಂದಿಕೊಂಡು ಜೀವನ. ಈ ನಗರೀಕರಣದ ಒಳಗೆ ಬೆಳೆಯುವ ಜೀವನ ಸರಪಳಿಗೆ ತುದಿಯೇ ಇಲ್ಲ.

ನಾನು ಇಲ್ಲಿ ವಿದ್ಯಾರ್ಥಿಯಾಗಿದ್ದಾಗ ನಮ್ಮ ಲೈಬ್ರರಿಯ ಸ್ಟಾಫ್ ಹರೀಶಣ್ಣ ನಿವೃತ್ತಿ ಆದ ಬಳಿಕ ಪೇಂಟಿಂಗ್ ಕಾಂಟ್ರಾಕ್ಟ್ ಹಿಡಿಯುವ ಇರಾದೆಯನ್ನು ವ್ಯಕ್ತಪಡಿಸುತ್ತಾ, ಮಣಿಪಾಲದಲ್ಲಿ ಸುಣ್ಣ ಬಣ್ಣಕ್ಕೆ ಇರುವ ಬೇಡಿಕೆ ಮತ್ತು ಅದಕ್ಕೆ ಸುಲಭವಾಗಿ ಒದಗುವ ಕೂಲಿ ಕಾರ್ಮಿಕರ ಬಗ್ಗೆ ಮಾತನಾಡುತ್ತಿದ್ದರು. ಆಗೆಲ್ಲ ಆ ವಿಷಯದ ಬಗ್ಗೆ ಜಾಸ್ತಿ ಯೋಚಿಸದ ನಾನು ಮೊನ್ನೆ ನಮ್ಮ ಆಫೀಸ್ ನಲ್ಲಿ ಪೇಂಟಿಂಗ್ ಬ್ರಷ್ ಹಿಡಿದು ಹಿಂದಕ್ಕೂ ಮುಂದಕ್ಕೂ ತಿಕ್ಕುತ್ತಿದ್ದ ಭೋಜ ಮತ್ತು ಅವನೊಂದಿಗಿದ್ದ ಅತೀ ಹಿರಿಯನೊಬ್ಬನನ್ನು ನೋಡಿದಾಗಿಂದ ಇದರ ಬಗ್ಗೆ ಯೋಚನೆ ಮಾಡಲು ಆರಂಭಿಸಿದ್ದು.

ಕಾಲ ಕಾಲಕ್ಕೆ ಸುಣ್ಣ ಬಣ್ಣ ಬಡಿಯದೇ ಹೋದರೆ ಹೊಸತನದ ಅನುಭವ ಆಗೋದಾದರೂ ಹೇಗೆ? ಒದ್ದೆ ಗೋಡೆಗೆ ಬಣ್ಣ ಹತ್ತುವುದಿಲ್ಲ ಅನ್ನುವ ಒಂದು ಕಾರಣಕ್ಕೆ ಮಳೆಗಾಲ ಒಂದನ್ನು ಬಿಟ್ಟರೆ ಉಳಿದ ತಿಂಗಳು ದುಡಿಮೆಗಂತೂ ಮೋಸವಿಲ್ಲ. ಅದಕ್ಕೆ ಅನೇಕರು ಕೂಲಿ ಕೆಲಸವನ್ನು ಆಯ್ದುಕೊಳ್ಳುವಾಗ ಪೇಂಟಿಂಗ್ ಆದರೆ ಆದೀತು ಅಂತ ಪಟ್ಟು ಹಿಡಿದು ಕೂರುತ್ತಾರೆ.

ಇನ್ನೂ ಪ್ರವೇಶವಾಗದ ಖಾಲಿ ಕಟ್ಟಡಗಳೋ, ಇಲ್ಲ ಅಪರೂಪಕ್ಕೊಮ್ಮೆ ಸಜ್ಜುಗೊಳ್ಳುವ ತುಂಬಿದ ಕಟ್ಟಡಗಳೋ, ಒಂದೇ ಉಮ್ಮೇದಿನಿಂದ ಮೇಲಕ್ಕೂ ಕೆಳಕ್ಕೂ, ಹಿಂದಕ್ಕೂ ಮುಂದಕ್ಕೂ ಬಣ್ಣ ಕೊಡುತ್ತ ಅದನ್ನೇ ದುಡಿಮೆಯಾಗಿಸಿಕೊಂಡವರು ಹಲವರಿದ್ದಾರೆ. ಆರಂಭದಲ್ಲಿ ಬಣ್ಣಗಾರಿಕೆಯ ಶಾಸ್ತ್ರ ಗೊತ್ತಿಲ್ಲದೆಯೂ, ದಿನ ಕಳೆದಂತೆ ಕಲಿತು ನಿಷ್ಣಾತರಾದವರಲ್ಲಿ ಊರಿನವರು, ಪರವೂರಿಗರಿಬ್ಬರೂ ಸಮ ಪಾಲಿಗರು.

ಕೋವಿಡ್ ಕಾಲದಲ್ಲಿ ಸ್ತಬ್ಧವಾಗಿದ್ದ ಮಣಿಪಾಲದಲ್ಲಿ ಈಗ ಎಲ್ಲರೂ ಮುಂಚಿನ ದಿನಚರಿಗೆ ಹೊರಳಿಕೊಳ್ಳಲು ಸಿದ್ಧವಾಗಿದ್ದಾರೆ. ವಿದ್ಯಾರ್ಥಿಗಳೂ ಒಬ್ಬೊಬ್ಬರಾಗಿ ಇಲ್ಲಿಗೆ ಬರತೊಡಗಿದ್ದಾರೆ. ಅದರ ಸಲುವಾಗಿ ಊರೂ ಕೂಡ ಸುಣ್ಣ ಬಣ್ಣ ಬಳಿದು ಎಲ್ಲರನ್ನು ಸ್ವಾಗತಿಸೋಕೆ ಸಿದ್ಧವಾಗುತ್ತಿದೆ. ಅದಕ್ಕೇನೆ ಸದ್ಯ ಬಣ್ಣಗಾರಿಕೆಗೆ ತಯಾರಾಗುವ ದಿನಗೂಲಿಯವರಿಗೆ ಬೇಡಿಕೆ.

ಇದೇ ಗಡಿಬಿಡಿಯಲ್ಲಿ ಸುಮಾರು ಐವತ್ತರ ಆಸುಪಾಸಿನ ಭೋಜ ಮತ್ತು ಅವನ ಜೊತೆಗೆ ಸ್ವಲ್ಪ ಜಾಸ್ತಿಯೇ ವಯಸ್ಸಾದಂತೆ ಕಂಡ ಹಿರಿಯ ಇಬ್ಬರು ನಮ್ಮ ಬಿಲ್ಡಿಂಗ್ ನ ಒಳ ಗೋಡೆಗಳಿಗೆ ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ಮಕ್ಕಳು, ಮೇಷ್ಟ್ರು, ಉಳಿದವರೆಲ್ಲ ಅತ್ತಿಂದಿತ್ತ ಓಡಾಡುತ್ತಿದ್ದರೂ, ತಮಗೆ ಯಾವುದೇ ಸಂಬಂಧವೇ ಇಲ್ಲ ಎನ್ನುವಂತೆ ಕೆಲಸದಲ್ಲಿ ಮಗ್ನವಾಗಿದ್ದರು.

ಅವರು ಬ್ರಷ್ ಹಿಡಿದು ಎಳೆಯುತ್ತಿದ್ದ ರೇಖೆಗಳನ್ನು ನೋಡಿದರೆ ಎಲ್ಲೋ ಕೆಲ ದಿನಗಳ ಈಚೆಗಷ್ಟೇ ಕೆಲಸ ಕಲಿತವರು ಎಂಬುದು ಪ್ರಯಾಸವಿಲ್ಲದೆ ಗೊತ್ತಾಗಿ ಬಿಡುತ್ತಿತ್ತು. ಭೋಜ ಹೇಗೋ ಧೈರ್ಯ ಮಾಡಿ ಏಣಿ ಮೇಲೆ ಹತ್ತಿ ಮೇಲ್ಮುಖದ ಪೇಂಟಿಂಗ್ ಮುಗಿಸುತ್ತಿದ್ದರೆ, ಹಿರಿಯ ಅರ್ಧದಿಂದ ಕೆಳಗಿನದ್ದು ಮಾತ್ರ ತನ್ನ ಪಾಲು ಎಂಬಂತೆ, ಬಾಗಿದ ಬೆನ್ನನ್ನು ಇನ್ನಷ್ಟು ಬಾಗಿಸಿ ಬ್ರಷ್ ಆಡಿಸುತ್ತಿದ್ದ.

ಬಣ್ಣ ನೆಲಕ್ಕೆ ತಾಗದಂತೆ ಪೇಪರ್ ಹಾಸುವುದು, ಏಣಿ ಆಚಿನಿಂದ ಈಚೆ ಎತ್ತಿಡುವುದು, ಬಣ್ಣವನ್ನು ಬೆರಸಿ ಹದಕ್ಕೆ ತರುವುದು, ಬ್ರಷ್ ತೊಳೆದು ತರುವುದು ಎಲ್ಲವೂ ಹಿರಿಯನ ಕೆಲಸ ಆದರೆ, ಎಟುಕದ ಜಾಗಗಳಿಗೆಲ್ಲ ಏಣಿ ಇಟ್ಟು ಸರ್ಕಸ್ ಮಾಡಿ ಬಣ್ಣ ಬಳಿಯುವ ಕೆಲಸವೆಲ್ಲ ಭೋಜನದ್ದು. ಹೀಗೆ ಒಬ್ಬರಿಗೊಬ್ಬರು ಸಾಥ್ ಕೊಡುತ್ತಾ, ಬೆಳಗ್ಗಿನಿಂದ ಸಂಜೆವರೆಗೂ ಒಂದಿಷ್ಟೂ ಉದಾಸೀನ ಮಾಡದೇ ಕಾಲೇಜಿನ ಗೋಡೆಯನ್ನು ತುಂಬುವುದರಲ್ಲೇ ಇದ್ದರು.

ಮೊದಲಿನ ಹಳದಿ ಗೋಡೆಯ ಮೇಲೆ ನೀಲಿ ಕೂರಿಸುವ ಸಾಹಸಕ್ಕೆ ಕೂತಿದ್ದರಿಂದಲೋ ಏನೋ ಒಂದೆರಡು ಕೋಟ್ ಗೆಲ್ಲ ಸಮಕಟ್ಟಾದ ಸ್ಥಿತಿ ಬರುತ್ತಲೇ ಇರಲಿಲ್ಲ. ಶಕ್ತಿಯಡಗಿದ ರಟ್ಟೆಯನ್ನು ಆ ಮಹಾ ಗೋಡೆಯ ತುಂಬೆಲ್ಲ ಇಬ್ಬರೂ ಆಡಿಸುವಾಗ ಅಲ್ಲಿದ್ದ ಎಲ್ಲರಿಗೂ ‘ಅಯ್ಯೋ ಪಾಪವೇ’ ಅನ್ನಿಸುತ್ತಿತ್ತು. ಆದರೆ ಇಬ್ಬರು ಹಠ ಹಿಡಿದವರಂತೆ ಎರಡೇ ದಿನದಲ್ಲಿ ಇದ್ದ ನಾಲ್ಕು ಗೋಡೆಗಳನ್ನು ಮುಗಿಸಿಯೇ ಸಿದ್ದ ಎಂದು ಕೂತಿದ್ದರು.

“ಅಲ್ಲ ಆ ಸೂಪರ್ವೈಸರ್ ಗೆ ಹೇಳಿದೆ, ಗೋಡೆನ ಒಂದು ಸಾರಿ ಕೀಸಿ ಲೆವೆಲ್ ಮಾಡಿದ್ರೆ ಹಳೆ ಪೈಂಟ್ ನ  ಒಂದು ಲೇಯರ್ ಹೋಗಿ ನಮಗೆ ಪೈಂಟ್ ಮಾಡೋದು ಸುಲಭ ಆಗುತ್ತೆ ಅಂತ. ಅವ ಮಾತ್ರ ಎಲ್ಲಿ ಕೇಳುತ್ತಾನೆ? ಎರಡೆರಡು ಕೆಲಸ ಎಂತಕೆ? ಒಂದು ಕೋಟ್ ಹೊಡೆದರೆ ಸಾಕು ಅಂತ ಹೋದ.” ಎಂದು ತಮ್ಮ ತಮ್ಮಲ್ಲೇ ಬೈದು ಆಡಿಕೊಳ್ಳುತ್ತಿದ್ದರು. ಅಲ್ಲೇ ಮೆಟ್ಟಿಲಿಳಿದು ಬರುತ್ತಿದ್ದ ನಾನು ಇಬ್ಬರನ್ನು ನೋಡಿ ಊಟಕ್ಕೆ ಹೋಗುವುದಿಲ್ಲವಾ ಅಂದದ್ದಕ್ಕೆ, “ಬುತ್ತಿ ತಂದಿದ್ದೇವೆ” ಅಂತ ಹೇಳಿ ವಾಪಸ್ಸು ತಮ್ಮ ಕೆಲಸದ ಕುರಿತ ಚರ್ಚೆಗೆ ಮರಳಿದರು.

ಯೂನಿವರ್ಸಿಟಿಯ ಒಳಗೆ ದಿನಗೂಲಿ ಕೆಲಸಗಾರರನ್ನು ನೇಮಿಸಿಕೊಳ್ಳಲು ಒಂದು ಜೋಡಿಸಂಸ್ಥೆ ಹಾಗೂ ಅದರ ಮೂಲಕ ನೇಮಕಾತಿಯ ದಾರಿಗಳಿವೆ. ಇವರದ್ದೇನು ಇಲ್ಲಿ ಖಾಯಂ ಕೆಲಸವೇನು ಅಲ್ಲ. ಕೆಲಸ ಇದ್ದಾಗ ಸೂಪರ್ ವೈಸರ್ ನಿಂದ ಕರೆ ಬರುತ್ತದೆ. ಇವರು ಕೆಲಸಕ್ಕೆ ತಯಾರಾಗುತ್ತಾರೆ. ಇಲ್ಲಿಂದ ಕರೆ ಇಲ್ಲದೆ ಹೋದರೆ ಬೇರೆ ಎಲ್ಲಾದರೂ ದಿನಗೂಲಿ ಕೆಲಸ ಸಿಕ್ಕೀತು ಎಂದು ಅಲೆದಾಡುವವರೇ. ಹೀಗೆ ಸಿಕ್ಕಿದ ಕೆಲಸಕ್ಕೆಲ್ಲ ಒಗ್ಗಿ ಹೋಗಿರುವ ಕೈಗಳು ಬಣ್ಣಗಾರಿಕೆಯಲ್ಲಿ ನಿಷ್ಣಾತರಾಗದೆ ಇದ್ದದ್ದರಲ್ಲಿ ಏನು ವಿಶೇಷತೆ ಇಲ್ಲ.

ಆ ಹದಿನೈದಡಿ ಅಗಲದ ಗೋಡೆಗೆ ಐದಡಿ ಅಗಲದ ಇಬ್ಬರು ಅಡ್ಡಡ್ಡ ಬಿದ್ದು ಬಣ್ಣ ಬಳಿಯುತ್ತಿದ್ದದ್ದು ಅಲ್ಲಿ ಓಡಾಡುತ್ತಿದ್ದ ಯಾರಿಗೂ ಹೊಸದಾಗಿ ಕಾಣುತ್ತಿರಲಿಲ್ಲ. ಇಲ್ಲಿ ಎಲ್ಲವೂ ಸಾಮಾನ್ಯ. ಹಾಗೆಯೇ ಬಡತನವಿದ್ದರೆ ಇಳಿವಯಸ್ಸಲ್ಲಿಯೂ ವಯಸ್ಸಿನ ಪರಿವೆ ಇಲ್ಲದೆ ದುಡಿಯುವುದೂ ಸಾಮಾನ್ಯ.

ಅವಿರತವಾಗಿ ಬೆಳಗ್ಗಿನಿಂದ ಸಂಜೆವರೆಗೆ ಯಾವ ಮೂಲೆಯಿಂದ ಶುರು ಮಾಡಿ ಯಾವ ಮೂಲೆಗೆ ಮುಟ್ಟುವುದು ಎಂಬ ಲೆಕ್ಕಾಚಾರವಿಲ್ಲದೆ ನಾಲ್ಕು ಗೋಡೆಗಳನ್ನು ಮುಗಿಸಿ ಹೊರಟವರನ್ನು ತಡೆದು. ದೂರದ ಊರಾ? ಎಂದೇ. “ಅಲ್ಲಪ್ಪ! ಹೊರಳಿದರೆ ಮನೆ ತಲುಪುವಷ್ಟು ಹತ್ತಿರದವರು” ಎಂದು ಹಿರಿಯ ಬೊಜ್ಜು ಬಾಯಿ ಬಿಟ್ಟು ನಕ್ಕ. ಅಷ್ಟೂ ಗೋಡೆಗಳಿಗೆ ಬಣ್ಣ ಕೊಟ್ಟವರಿಗೆ ಜಗತ್ತಿನ ಬಣ್ಣಗಾರಿಕೆ ಗೊತ್ತಿಲ್ಲದೇ ಇದ್ದದ್ದು ಮಾತ್ರ ಕಣ್ಣಲ್ಲಿ ಹೊಳೆಯುತ್ತಿತ್ತು.

December 1, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಗೀತಾ ಎನ್ ಸ್ವಾಮಿ

    ಒಳ್ಳೆಯ ಬರಹ ಸುಷ್ಮಿತಾ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: