ಇಲ್ಲಿ ದೇವಸ್ಥಾನವಿದೆ. ಮುಸ್ಲಿಂರಿಗೆ ಹಾಗೂ ಎಸ್ಸಿಗಳಿಗೆ ಮನೆ ಕೊಡೋದಿಲ್ಲ..

ನಾಲ್ಕು ವರ್ಷಗಳ ಹಿಂದಿನ ಮಾತು. ನನ್ನದೇ ಅನುಕೂಲದ ದೃಷ್ಟಿಯಿಂದ ಕೌನ್ಸಿಲಿಂಗ್  ಮುಖಾಂತರ ಕಾರವಾರಕ್ಕೆ ವರ್ಗ ಮಾಡಿಸಿಕೊಂಡಿದ್ದೆ.  ಆದರೆ ವರ್ಗಾವಣೆ ಆಗಿದ್ದು ಜುಲೈ ತಿಂಗಳ ಕೊನೆಯ ವಾರದಲ್ಲಿ. ಎಲ್ಲವೂ ಸಾಂಗವಾಗಿ ನಡೆಯುವ ಕಾಲದಲ್ಲಿ ನಾನು ಕಾರವಾರದ ಬೀದಿ ಬೀದಿಯಲ್ಲಿ ಮನೆ ಹುಡುಕಲಾರಂಬಿಸಿದ್ದೆ.

ಬಾಡಿಗೆ ಮನೆ ಹುಡುಕುವುದೇನು ಸುಲಭದ ಮಾತು ಅಂದುಕೊಂಡಿದ್ದೀರಾ? ಬಲ್ಲವರೇ ಬಲ್ಲರು ಈ ಮನೆ ಹುಡುಕುವ ಸಂಕಷ್ಟವನ್ನು.

ಸುಮ್ಮನೆ ಕುಳಿತು ನೋಡುವವರಿಗೇನು ಗೊತ್ತು ಅದರ ಕಷ್ಟ? ಮನೆ ಇಷ್ಟವಾದರೆ ಅದರ ಬಾಡಿಗೆ ಹೊಂದುವುದಿಲ್ಲ. ಬಾಡಿಗೆ ಹೊಂದಿತು ಎಂದು ಮನೆ ನೋಡಹೋದರೆ ಒಳಗೆ ಕಾಲಿಡಲೇ ಸಾಧ್ಯವಿಲ್ಲ ಹಾಗೆ ಗಂವ್ ಎನ್ನುತ್ತಿರುತ್ತದೆ. ಇನ್ನು ಬ್ರೋಕರ್ ಗಳಿಗೇನಾದರೂ ಸುಳಿವು ಕೊಟ್ಟೆವೋ  ನಮ್ಮ ಜುಟ್ಟನ್ನು ಅವರ ಕೈಗೊಪ್ಪಿಸಿದಂತೆಯೇ ಲೆಕ್ಕ. ಅವರು ಆಡಿಸಿದಂತೆ ಆಡಬೇಕು,

ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಕರೆದರೂ ಮನೆ ನೋಡಲು ಹೋಗಬೇಕು, ಮಧ್ಯರಾತ್ರಿ ಬಂದು ‘“ಮನೆ ಓನರ್ ಬಂದಿದ್ದಾರೆ, ನಾಳೆ ಬೆಳಿಗ್ಗೆ ಹೊರಡ್ತಾರೆ’ ಅಂದರೆ ಆ ಹೊತ್ತಿನಲ್ಲೂ ಮನೆ ನೋಡಬೇಕು. ಖಾಸಗಿ ಬದುಕು ಎಂಬುದೇ ಮೂರಾಬಟ್ಟೆ ಮಾಡಿಬಿಡುವ ಬ್ರೋಕರ್ ಗಳ ಕಥೆ ಓದಿ ನೋಡಿಯೇ ಸಾಕಾಗಿತ್ತು.

ಇನ್ನು ಅವರು ತೋರಿಸುವ ಮನೆಗಳೋ ಆ ದೇವರಿಗೇ  ಪ್ರೀತಿ.  ಒಳ್ಳೆಯ ಎರಡು ಬೆಡ್ ರೂಂ, ಚಂದದ ಹಾಲ್, ಅಡುಗೆ ಮನೆ, ಡೈನಿಂಗ್ ಹಾಲ್ ಎಲ್ಲ ಇರುವ ಮನೆಯನ್ನು ತೋರಿಸಿದರೆ ಅದರ ಬಾಡಿಗೆ ಗಗನದೆತ್ತರಕ್ಕಿರುತ್ತದೆ. ಅನುಕೂಲಕರವಾದ  ರೇಟ್ ನಲ್ಲಿ ಮನೆ ನೋಡಲು ಹೊರಟರೆ ಕೋಳಿ ಗೂಡಿನಂತಹ ಮನೆಯನ್ನು ತೋರಿಸುವ ಬ್ರೋಕರ್ ಗಳ ಕಾಟವೇ ಬೇಡ ಎಂದು ಮೊದಲೇ ನಿರ್ಧರಿಸಿದ್ದೆವು.

ಹೀಗಾಗಿ ಈ ಎಲ್ಲಾ ಸಂಕಷ್ಟವೇ ಬೇಡ ಎಂದು ಒಂದಿಬ್ಬರು ಆತ್ಮೀಯರ ಬಳಿ ಮಾತ್ರ ಹೇಳಿದ್ದೆವು. ಕೆಲವು ಕಡೆ ಮನೆ ನೋಡಿದ್ದು ಇಷ್ಟ ಆಗಲಿಲ್ಲ. ಕೆಲವೆಡೆ ಇಷ್ಟ ಆದಲ್ಲಿ  ಪಾರ್ಕಿಂಗ್ ಸಮಸ್ಯೆ. ‘ನಮ್ಮದೂ ಕಾರಿದೆ. ಹೀಗಾಗಿ ನಿಮ್ಮ ಕಾರನ್ನು ಕಂಪೌಂಡ್ ಹೊರಗೇ ನಿಲ್ಲಿಸಬೇಕು.’ ಮನೆ ಓನರ್ ಗಳ ಬಾಯಿಂದ ಬರುವುದೇ ತಡ, ಪ್ರವೀರ ಆ ಮನೆ ಬೇಡವೇ ಬೇಡ ಎಂದು ತೀರ್ಮಾನ ತೆಗೆದುಕೊಂಡಾಗಿರುತ್ತಿತ್ತು.

ಯಾರನ್ನಾದರೂ ಹೊರಗಿಟ್ಟೇನು ಕಾರನ್ನಲ್ಲ ಎಂಬ ಗಂಡಸರ ಮಾಮೂಲಿ ತೀರ್ಮಾನ ಇದು. ಹೀಗಾಗಿ  “ಕಡೇರ್ ಸಾಂಗ್ತಾ” ಎನ್ನುತ್ತ ಬಂದ ಮನೆಗಳ ಬಗ್ಗೆ ಮತ್ತೆ ಮಾತನಾಡುವಂತೆಯೇ ಇರಲಿಲ್ಲ.

ಇದಕ್ಕೆಲ್ಲ ಕಾರಣ ನಾವು ಹೋದ ಸಮಯ. ಸುಮಾರು ಮೇ ತಿಂಗಳಲ್ಲಿಯೇ ಮನೆ ವ್ಯವಹಾರಗಳೆಲ್ಲ ಮುಗಿದು ಬಿಟ್ಟಿರುತ್ತದೆ. ಇನ್ನು ಉಳಿದಿರುವುದು ಆರಿಸಿ ಬಿಟ್ಟ ಮನೆಗಳೇ  ಎಂದು ತಿಳಿದ ಮೇಲೆ ತೀರಾ ನಿರಾಶೆ ಕಾಡತೊಡಗಿತ್ತು. ಕಾರವಾರದಿಂದ ಸ್ವಲ್ಪ ದೂರ ನನ್ನ ಸ್ಕೂಲ್ ಸಮೀಪವಾದರೂ ಚಿಂತೆಯಿಲ್ಲ ಎಂದು ಆ ಕಡೆ ಹುಡುಕಲು ತೀರ್ಮಾನಿಸಿದ್ದೆವು.

‘ಸದಾಶಿವಗಡಕ್ಕೆ ಬಂದಿದ್ದೇವೆ’ ಎಂದ ಕೂಡಲೇ ಶ್ರೀಧರ ನಾಯಕರು ತಮ್ಮ ಗಾಡಿ ತೆಗೆದುಕೊಂಡು ಬಂದೇ ಬಿಟ್ಟರು. ಇದ್ದುದರಲ್ಲೇ ಒಂದಿಷ್ಟು ಅನುಕೂಲ ಎನ್ನುವ ಸ್ಥಳದಲ್ಲಿ ಮನೆ ತೋರಿಸಿದರು. ಒಂದೇ ಬೆಡ್ ರೂಂ. ಆದರೂ ಮನೆ ಹುಡುಕಿ ಹುಡುಕಿ ಸಾಕಾಗಿದ್ದರಿಂದ ಪರವಾಗಿಲ್ಲ ಅಡ್ಜೆಸ್ಟ್ ಮಾಡಿಕೊಳ್ಳೋಣ’ ಎಂಬ ತೀರ್ಮಾನಕ್ಕೆ  ಬರುವಷ್ಟರಲ್ಲಿ ಆ ಮನೆಯ ಯಜಮಾನತಿ “ತುಮ್ಹಗೆಲೆ ಕಾಸ್ಟ್ ಕಸ್ಲೆ?” (ನಿಮ್ಮ ಜಾತಿ ಯಾವುದು?) ಎಂದು ಪ್ರಶ್ನಿಸಿದ್ದರು.

ನಾನು ಕಕ್ಕಾಬಿಕ್ಕಿಯಾಗಿದ್ದೆ. ನನ್ನ ಗೊಂದಲ ಅರಿತವರಂತೆ “ಹಂಗಾ ದೇವಾಳ ಘರ್ ಅಸಾ. ಮುಸ್ಲಿಮಾಕ, ಎಸ್ಸಿಕ ಘರಾ ದಿವಚ್ ನಾ” (ಇಲ್ಲಿ ದೇವಸ್ಥಾನವಿದೆ. ಮುಸ್ಲಿಂರಿಗೆ ಹಾಗೂ ಎಸ್ಸಿಗಳಿಗೆ ಮನೆ ಕೊಡೋದಿಲ್ಲ) ಎಂದಿದ್ದರು. ಸಿಕ್ಕಿದ ಮನೆಯೂ ತಪ್ಪಿ ಹೋಗಿ ಬಿಡುತ್ತದೆಯೋ ಎಂಬ ಗಡಿಬಿಡಿಯಲ್ಲಿ ಇವರು “ನಾ…ನಾ… ನಾಡ್ಗೀರಾಚೆ” ಎಂದಿದ್ದರು. ಆಕೆಯ ಮುಖದಲ್ಲಿ ಸಮಾಧಾನ. ಅಂಕೋಲಾಚೆ ನೈ? ಬರೆ…” ಎಂದು ಒಪ್ಪಿಕೊಂಡರು.

ಆದರೆ ನಾನೋ ತೀರಾ ಅಸಮಧಾನಗೊಂಡಿದ್ದೆ. ನಮ್ಮ ಮನೆಗೆ ಯಾವಾಗಂದರೆ ಆವಾಗ ಸ್ನೇಹಿತರು  ಬರುತ್ತಲೇ ಇರುತ್ತಾರೆ. ಅವರೆಲ್ಲರ ಜಾತಿ, ಧರ್ಮ ನನಗೆ ಗೊತ್ತಿರುವುದಿಲ್ಲ. ಈ ಮನೆಗೆ ಬಂದ ನಂತರ ಅವರ ಜಾತಿ ಕೇಳಬೇಕಾ? ಸಾಧ್ಯವೇ ಇಲ್ಲ.” ಎಂದು ನಿರಾಕರಿಸಿ ಬಿಟ್ಟಿದ್ದೆ.

ಯಾಕೋ ಇದೆಲ್ಲ ಪ್ರಸಂಗಗಳು ‘ಅಂತಃಸತ್ವ’ ಕಥಾ ಸಂಕಲನದ ‘ಬಾಡಿಗೆ ಮನೆ ಅವಾಂತರ’ ಎಂಬ ಕಥೆ ಓದುವಾಗ  ಪದೇಪದೇ ನೆನಪಾಯಿತು. ಓಡಿಶಾದ ಪ್ರಸಿದ್ಧ ಕಥೆಗಾರ್ತಿ ಸುಸ್ಮಿತಾ ಭಾಗಚಿಯವರ ಕಥೆಗಳನ್ನು ಪ್ರೀತಿಯ ಲೇಖಕಿ ಮಾಧವಿ ಎಸ್ ಭಂಡಾರಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ಮಾಧವಿ ಭಂಡಾರಿಯವರ ಮಾತು ಕೇಳುವುದೆಂದರೆ ಅದೊಂದು ರೀತಿಯಲ್ಲಿ ಸವಿ ಜೇನು ಸವಿದಂತೆ. ತುಂಬು ಪ್ರೀತಿಯಲ್ಲಿ ಅದ್ದಿ ತೆಗೆದಂತಹ ಆತ್ಮೀಯತೆ. ನನ್ನ ಲೇಖನಗಳಿಗೆ, ಕವಿತೆಗಳಿಗೆ ಅವರು ನೀಡುವ ಪ್ರತಿಕ್ರಿಯೆಗಳೂ ಹಾಗೇ. ಎಷ್ಟೊಂದು ಪ್ರೀತಿಯಿಂದ  ತುಂಬಿಕೊಂಡಿರುತ್ತದೆಯೆಂದರೆ ನನಗೆ ಸುಮ್ಮನೆ ಅದನ್ನು ಓದುತ್ತಲೇ ಇರಬೇಕು ಎನ್ನಿಸುವಷ್ಟು.

ಚಿಕ್ಕವಳಿದ್ದಾಗ, ಸುಮಾರು ಕಾಲೇಜು ಮೆಟ್ಟಿಲು ಹತ್ತುವವರೆಗೂ ನಾನು ಮಾಧವಿ ಭಂಡಾರಿ ಎಂದರೆ ನಮ್ಮ ಜಿಲ್ಲೆಯ ಪ್ರಸಿದ್ಧ ಬಂಡಾಯ ಕವಿ ಆರ್ ವಿ ಭಂಡಾರಿಯವರ ಮಗಳು ಮಾಧವಿ ಅಕ್ಕ ಅಂತಲೇ ತಿಳಿದು ಕೊಂಡಿದ್ದೆ. ಒಂದು ದಿನ ಮಾಧವಿ ಅಕ್ಕ “ಅದು ನಾನಲ್ಲ ಮಾರಾಯ್ತಿ. ಅವರು ಮಂಗಳೂರಿನವರು.” ಎನ್ನುವವರೆಗೂ. ನಂತರ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚಾಗಿ ಭಾಗವಹಿಸಲು ಪ್ರಾರಂಬಿಸಿದ ಮೇಲೆ ಮಂಗಳೂರಿನ ಮಾಧವಿ ಭಂಡಾರಿಯವರ ವಾತ್ಸಲ್ಯವನ್ನು ಸವಿಯುವ ಅವಕಾಶವೂ ಒದಗಿ ಬಂತು.

ಹಾಗೆ ನೋಡಿದರೆ ಅನುವಾದ ಸಾಹಿತ್ಯವನ್ನು ನಾನು ಬಹಳಷ್ಟು ಓದುತ್ತೇನೆ. ಆಯಾ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ. ಅಲ್ಲಿನ ಪ್ರಾದೇಶಿಕತೆಯನ್ನು ತಿಳಿಯುವುದಕ್ಕೆ . ಆದರೆ ಈ ‘ಅಂತಃಸತ್ವ’ವನ್ನು ಮಾತ್ರ ನಾನು ಸ್ನೇಹಿತರಿಂದ ಹಠ ಹಿಡಿದು ನನಗೆ ಬೇಕು ಎಂದು ತೆಗೆದುಕೊಂಡಿದ್ದು ಕೇವಲ ಮಾಧವಿ ಭಂಡಾರಿಯವರ ಮೇಲಿನ ಪ್ರೀತಿಯಿಂದ. ಅಂತೂ ಆ ಪುಸ್ತಕವನ್ನುಹಠ ಹಿಡಿದು ತರಿಸಿಕೊಂಡಿದ್ದಕ್ಕೂ ವ್ಯರ್ಥ ಆಗಿಲ್ಲ ಎಂದು  ಖುಷಿಯಾಗಿದ್ದಂತೂ ಸುಳ್ಳಲ್ಲ.

ಹೀಗಾಗಿಯೇ ಈ ವಾರ ನಿಮಗೆ ರೆಕಮಂಡ್ ಮಾಡುತ್ತಿರುವ ಪುಸ್ತಕ ಓಡಿಶಾ ಕಥೆಗಾರ್ತಿ ಸುಸ್ಮಿತಾ ಭಾಗಚಿಯವರು ಬರೆದ, ಮಾಧವಿ ಭಂಡಾರಿಯವರು ಅನುವಾದ ಮಾಡಿರುವ ‘ಅಂತಃಸತ್ವ’.

ಇಡೀ ಕಥಾ ಸಂಕಲನದಲ್ಲಿ ಒಟ್ಟು ಹದಿಮೂರು ಕಥೆಗಳಿವೆ. ಒಂದು ಕಥಾ ಸಂಕಲನವನ್ನು ಓದಿದರೆ ಆ ಸಂಕಲನದಲ್ಲಿ ಹದಿಮೂರು ಕಥೆಗಳಿದ್ದರೆ ಎಲ್ಲೋ ಮೂರರಿಂದ ನಾಲ್ಕು ಕಥೆಗಳು ಅತ್ಯುತ್ತಮವಾಗಿರುತ್ತವೆ. ಒಂದೋ ಎರಡೋ ಕಥೆಗಳು ಪರವಾಗಿಲ್ಲ ಎನ್ನಿಸಿಕೊಳ್ಳುತ್ತವೆ, ನಂತರ ಉಳಿದೆಲ್ಲ ಕಥೆಗಳೂ ಪುಟ ಭರ್ತಿಗೆ ಎಂಬುದು ತಿಳಿಯದ ವಿಷಯವೇನಲ್ಲ.

ಆದರೆ ಈ ಸಂಕಲನದ ಹದಿಮೂರು ಕಥೆಗಳಲ್ಲಿ ಸುಮಾರು ಹತ್ತು ಕಥೆಗಳು ಉತ್ತಮ ಎನ್ನಿಸಿಕೊಂಡರೆ ಉಳಿದ ಮೂರು ಕಥೆಗಳು ಪರವಾಗಿಲ್ಲ ಎಂಬಂಥವು ಇರುವುದನ್ನು ನೋಡಿದರೆ ನನಗೇ ಆಶ್ಚರ್ಯ.  ಇಲ್ಲಿನ ಬಹುತೇಕ ಕಥೆಗಳು ಹಠಾತ್ ತಿರುವು ತೆಗೆದುಕೊಂಡು ಕ್ಲೈಮಾಕ್ಸನ್ನು ನಾವು ಊಹಿಸದ ರೀತಿಯಲ್ಲಿ ತಿರುಗಿಸಿ ಬಿಡುತ್ತದೆ.

ಇಡೀ ಸಂಕಲನದಲ್ಲಿ ನನಗೆ ತುಂಬಾ ಇಷ್ಟವಾದ ಕಥೆ  ಎಂದು ಯಾವುದೇ ಒಂದು ಕಥೆಯನ್ನು ಹೆಸರಿಸುವಂತಿಲ್ಲ. ಬಹಳಷ್ಟು ಕಥೆಗಳು ತಮ್ಮ ಅನಿರೀಕ್ಷಿತ ತಿರುವಿನಿಂದಾಗಿಯೇ ಮನಸ್ಸಿನಲ್ಲಿ ಉಳಿದು ಬಿಡುತ್ತದೆ.

‘ನೆರಳಿನಾಚೆಯ ಮನುಷ್ಯ’ ಎಂಬ ಕತೆಯನ್ನೇ ತೆಗೆದುಕೊಳ್ಳಿ. ಅಪ್ಪಟ ಮಹಿಳಾಪರವಾದ ಕಥೆಯಾಗಿ ಮನಸ್ಸಿನಲ್ಲಿ ಬಹುಕಾಲ ಉಳಿದು ಬಿಡುತ್ತದೆ. ಈ ಕಥೆಯನ್ನು ಹಿಂದೊಮ್ಮೆ ಚಿಕ್ಕವಳಿರುವಾಗ ಎಲ್ಲೋ ಓದಿದ ನೆನಪು. ಬಹುಶಃ ಈ ಕಥೆಯನ್ನು ಓದಿದಾಗಲೇ ನಾನು ನಮ್ಮ ಕೆರೆಕೋಣದ ಮಾಧವಿ ಅಕ್ಕ ಅನುವಾದಿಸಿದ ಕಥೆ ಎಂದು ತಪ್ಪು ತಿಳಿದಿದ್ದೆ ಎಂಬ ಮಸುಕು ನೆನಪು.

ಆದರೂ ಕಥೆ ಮಾತ್ರ ನನಗೆ ತುಂಬಾ ಚೆನ್ನಾಗಿ ನೆನಪಿದೆ. ಪಾತ್ರಗಳ ಹೆಸರುಗಳು ನೆನಪಿಲ್ಲದೇ ಇದ್ದರೂ ಕಥೆಯ ಹೂರಣವಂತೂ ಮನಸ್ಸಿನ ಆಳದಲ್ಲಿ ಎಲ್ಲೋ ಇತ್ತು.   ತನ್ನ ಮಗ ಉದ್ಯೋಗ್ಥ ಹೆಂಡತಿಯ ಜೊತೆ ಹೇಗೆ ಸಂಸಾರ ನಡೆಸಿಕೊಂಡಿದ್ದಾನೋ ಎಂದು ಆತಂಕ ಪಡುವ ತಾಯಿ ಸೌಧಾಮಿನಿಗೆ ಸೊಸೆಯ ಹಕ್ಕನ್ನು ಕಿತ್ತು ಕೊಳ್ಳುವುದು ಕೂಡ ಸಾಧ್ಯವಿಲ್ಲದ ಮಾತು. ಆದರೂ ಸೊಸೆ ಬೇರೆ ಕೆಲಸದಲ್ಲಿರುವಾಗ ಮನೆಯಲ್ಲಿ ಮಗ ಚಹಾ ಮಾಡುವುದು, ಅಡುಗೆ ಮಾಡುವುದು ಎಲ್ಲವೂ ಒಂದಿಷ್ಟು ಕಸಿವಿಸಿ ಹುಟ್ಟಿಸುವ ವಿಚಾರವೇ. ಹಾಗೆಂದು ಆಕೆ ಸಂಪ್ರದಾಯವಾದಿಯಲ್ಲ. ಹೊರಗೆ ದುಡಿಯುವ ಸೊಸೆಗೆ ಮಗ ಮನೆಗೆಲಸದಲ್ಲಿ, ಅಡುಗೆ ಮಾಡುವುದರಲ್ಲಿ ಸಹಕರಿಸಿದರೆ ಅಕ್ಷಮ್ಯ ಎಂದು ತಿಳಿಯುವ  ಗೊಡ್ಡು ಸಂಪ್ರದಾಯಸ್ಥಳಲ್ಲ. ಸೊಸೆಗೆ ಸ್ವಾತಂತ್ರ್ಯ ಕೊಡಬೇಕು ಎಂಬುದು ಅರಿವಿದ್ದರೂ ಅದರಿಂದ ಮಗನ ಸಂಸಾರ ಹಾಳಾದೀತು ಎಂಬ ಭಯ.

ಯಾಕೆಂದರೆ ಆಕೆ ಜಗತ್ತನ್ನು ಕಂಡವಳು. ಗಂಡ ಹೆಂಡಿರ ನಡುವೆ ಅಹಂ ಎನ್ನುವುದು ನುಸುಳಿ ಬಿಟ್ಟರೆ ಆ ಸಂಸಾರದ ಗತಿ ಹಳ್ಳ ಹಿಡಿಯುತ್ತದೆ ಎನ್ನುವುದನ್ನು ಕಣ್ಣೆದುರಿಗೇ ಕಂಡ ಹಲವಾರು ಘಟನೆಗಳ ಮೂಲಕ ಅನುಭವಿಸಿದವಳು. ಸೊಸೆಗೆ ಕೆಲಸ ಬಿಡು ಎನ್ನಬೇಕು. ಆದರೆ ಹೇಳುವುದಾದರೂ ಹೇಗೆ? ಹೆಣ್ಣನ್ನು ಮನೆಯಿಂದ ಹೊರ ಹೋಗಬೇಡ ಎಂದು ತಡೆಯುವ ಯಾವ ಹಕ್ಕಿದೆ? ಆದರೂ ಸೊಸೆ ತನ್ನ ಕೆಲಸದ ಕಡೆ, ತನ್ನ ಮಕ್ಕಳ ಕಡೆ  ಹೆಚ್ಚಿನ ಗಮನ ಕೊಟ್ಟು ಗಂಡನನ್ನು ನಿರ್ಲಕ್ಷಿಸುತ್ತಾಳೆಯೇ? ಹಾಗೆ ತೋರುವ ನಿರ್ಲಕ್ಷ ವಿಚ್ಛೇದನಕ್ಕೆ ಕಾರಣವಾಗುತ್ತದೆಯೇ ಎಂಬ ಭಯದಲ್ಲಿಯೇ ಇರುವಾಗ ಒಂದು ದಿನ ಹಠಾತ್ತಾಗಿ ಮಗ ಮತ್ತು ಸೊಸೆಯ ಮುನಿಸು ಕಂಡು ಹೌಹಾರುತ್ತಾಳೆ.

ಸೊಸೆಗೆ ಒಂದು ತಿಂಗಳ ಟ್ರೈನಿಂಗ್ ಗೆ ಹೋಗಬೇಕಾಗಿರುವುದು, ಮಗ ಮುನಿಸಿಕೊಂಡಿದ್ದು, ಸೊಸೆ ಕಂಡೂ ಕಾಣದ ಹಾಗೆ ಕಣ್ಣೀರು ಒರೆಸಿಕೊಳ್ಳುವುದನ್ನು ನೋಡುತ್ತ, “ಒಂದು ತಿಂಗಳು ತಾನೆ? ಹೊಂದಾಣಿಕೆ ಮಾಡಿಕೊ, ನಾನು ಊರಿಗೆ ಹೋಗದೇ ಇಲ್ಲಿಯೇ ಇರುತ್ತೇನೆ ಎನ್ನುತ್ತಾಳೆ. ಖುಷಿಯಾದ ಮಗ ಹೆಂಡತಿಯ ಕಡೆ ತಿರುಗಿ, “ವಯಸ್ಸಾದ ಅಮ್ಮನಿಗೆ ಅರ್ಥವಾಗುತ್ತದೆ. ನಿನಗೆ ಆಗುವುದಿಲ್ಲವಲ್ಲ ಎಂದು ತಾನಿಲ್ಲದಿದ್ದರೆ ಮನೆ ನಡೆಯುವುದೇ ಇಲ್ಲ ಎಂದು ಗೋಳಾಡುತ್ತ ಕೆಲಸ ಬಿಡುವ ಮಾತನಾಡುತ್ತಿದ್ದ ಹೆಂಡತಿಯನ್ನು ಛೇಡಿಸುತ್ತಾನೆ.  ಅಮ್ಮ ಮಗನ ಉದಾರತೆಗೆ ಕಂಗಾಲಾದರೂ ಖುಷಿಗೊಳ್ಳುತ್ತಾಳೆ.

ಕೆಲವೊಮ್ಮೆ ನಮಗೆ ಮನಸ್ಸಿಲ್ಲದಿದ್ದರೂ ಅನಿರೀಕ್ಷಿತ ಜವಾಬ್ಧಾರಿಗಳು ನಮ್ಮ ಹೆಗಲೇರಿ ಬಿಡುತ್ತವೆ. ಮತ್ತು ಇಷ್ಟವಿಲ್ಲದೆಯೇ ಆ ಕೆಲಸವನ್ನು ನಿಭಾಯಿಸಲೇ ಬೇಕಾಗುತ್ತದೆ. ಯಾವ್ಯಾವುದೋ ಕೆಲಸದ ನಿಮಿತ್ತ ಊರು ಬಿಟ್ಟು ಮತ್ತೊಂದು ಊರಿಗೆ ಹೋದಾಗಲೆಲ್ಲ ನನಗೆ ಇಂತಹ ಸಂದಿಗ್ಧ ಕಾಡುವುದಿದೆ.

ಆ ಊರಲ್ಲಿರುವ ನಮ್ಮ ಆತ್ಮೀಯರಿಗೆ, ಸಂಬಂಧಿಗಳಿಗೆ ನಾವು ಬಂದಿರುವ ವಿಷಯ ತಿಳಿಸ ಬೇಕೋ ಬೇಡವೋ…. ಈ ತಾಕಲಾಟ ನನ್ನನ್ನು ಸದಾ ಕಾಡುತ್ತದೆ. ಸದಾ ಸಂಪರ್ಕದಲ್ಲಿರುವ ಕೆಲವರನ್ನು ಜಬರ್ದಸ್ತಿನಿಂದ ನಮ್ಮೊಡನೆ ಕರೆಯಬಹುದು. ಆದರೆ ನಿರಂತರ  ಸಂಪರ್ಕದಲ್ಲಿ ಇರದಿದ್ದರೂ  ತುಂಬಾ ಆತ್ಮೀಯರಾಗಿರುವಂಥಹ ಕೆಲವರಿಗೆ ಅವರಿರುವ ಊರಿಗೆ ಹೋದ ವಿಷಯ ತಿಳಿಸುವುದೆಂದರೆ ನನಗೆ ಜೀವ ಬಾಯಿಗೆ ಬಂದ ಹಾಗಾಗುತ್ತದೆ. ನಾನು ಬಂದಿದ್ದೇನೆಂದರೆ ಅವರೇನೋ ಎಲ್ಲಾ ಕೆಲಸ ಬಿಟ್ಟು ಅಲ್ಲಿಗೆ ಬರಬಹುದು. ಆದರೆ ಅವರ  ಅನಿವಾರ್ಯತೆಗಳು ಏನಿರುತ್ತವೆಯೋ.. ಯಾರಿಗೆ ಗೊತ್ತು ? ತ

ಮ್ಮೂರಿಗೆ ಬಂದರೂ ಭೇಟಿ ಆಗಲಿಲ್ಲ ಎಂದು ನಾನೇನಾದರೂ ಬೇಸರಿಸಬಹುದು ಎಂಬ ಕಾರಣಕ್ಕೆ ಅವರು ತಮ್ಮ ಅರ್ಜೆಂಟ್ ಕೆಲಸವನ್ನೆಲ್ಲ ಬಿಟ್ಟು ಬರುವ ಹಾಗಾದರೆ ಎಂಬ ಅಳುಕೂ ಕಾಡುತ್ತದೆ. ಅವರವರ ಸಂಸಾರ ಕೆಲಸದ ಒತ್ತಡಗಳು, ಅವರ ಕಮಿಟ್ ಮೆಂಟ್ ಗಳು, ಅವರ ಅನಿವಾರ್ಯತೆಗಳು ನಮಗೆ ಅರ್ಥವಾಗುವುದಿಲ್ಲ. ಅಂತಹ ಸಮಯದಲ್ಲಿ ನಾವು ಮಧ್ಯೆ ಪ್ರವೇಶಿಸಿ ಅವರ ಬದುಕಿನ ಸರಾಗದ ದಿನವನ್ನು ಏರುಪೇರು ಮಾಡುವುದು ಎಷ್ಟು ಸರಿ ಎಂಬ ಕಳವಳ ನನಗೆ.

ಹೀಗಾಗಿ ಹೋಗಬೇಕಾದ ಸ್ಥಳಕ್ಕೆ ಮುಗುಮ್ಮಾಗಿ ಹೋಗಿ ನನ್ನ ಕೆಲಸ ಮುಗಿಸಿಕೊಂಡು ಬರುವುದೇ ಹೆಚ್ಚು. ಆದರೆ ನಂತರ ನಾವು ಬಂದು ಹೋದ ವಿಷಯ  ತಿಳಿದರೆ, “ಒಂದು ಮಾತೂ ಹೇಳೋಕಾಗಲಿಲ್ವ?” ಎಂದು ಬೇಸರಿಸುವವರೂ ಇರುವುದರಿಂದ ಚಿಕ್ಕದೊಂದು ಸೂಚನೆ ನೀಡಿ ಸುಮ್ಮನಾಗುವ ಪರಿಪಾಠವನ್ನು ಇತ್ತೀಚೆಗೆ ರೂಢಿಸಿಕೊಂಡು ಬಿಟ್ಟಿದ್ದೇನೆ.

‘ಅತಿಥಿ’ ಕಥೆಯನ್ನೇ ಉದಾಹರಣೆಯಾಗಿ ತೆಗೆದು ಕೊಳ್ಳಿ. ಶಂಕರ ಎಂಬ ಬೋಲೆನಾಥ ಯಾರು ಏನು ಹೇಳಿದರೂ ಮಾಡಿಕೊಡುವ ಪರೋಪಕಾರಿ. ಇಂಥವರೊಬ್ಬರು ಇದ್ದಾರೆಂದರೆ ಸುತ್ತಮುತ್ತಲಿನವರಿಗೆ ಯಾವ್ಯಾವುದೋ ಸಂಕಷ್ಟ ಧುತ್ತನೆ ಎದುರು ನಿಲ್ಲೋದು ಸಹಜವೇ.  ಆದರೆ ಎಂದೂ ಸಹಾಯ ಕೇಳದ ಆಫೀಸಿನ ಸ್ನೇಹಿತರೊಬ್ಬರು ತಮ್ಮ ಅನಿವಾರ್ಯತೆಯ ಸಂದರ್ಭದಲ್ಲಿ ತಮ್ಮ ಸಂಬಂಧಿಯೊಬ್ಬರನ್ನು ಮನೆಯಲ್ಲಿಟ್ಟುಕೊಳ್ಳು ವಿನಂತಿಸುತ್ತಾರೆ. ಆಗದು ಎನ್ನಲಾಗದೇ ಶಂಕರ ಮನೆಗೆ ಕರೆದುಕೊಂಡು ಬರುತ್ತಾನೆ.

ಮನೆಗೆ ಅತಿಥಿಗಳು ಬರುತ್ತಾರೆಂದರೆ ಧಿಂ ರಂಗ ಎಂದು ಹಾಯಾಗಿರುವ ಗಂಡಸರಿಗೆ ಏನೂ ಅನ್ನಿಸುವುದಿಲ್ಲ. ಆದರೆ ಮನೆ ಶಿಸ್ತಿನಿಂದ ಇಲ್ಲವೆಂದರೆ ಕಳವಳಗೊಳ್ಳುವುದು ಹೆಂಗಸರೇ. ಬಂದ ಅತಿಥಿಗಳಿಗೆ ಮನೆ ಹೊಂದಿಕೆ ಆಗಬಹುದೇ? ಅವರಿಗೆ ಮಾಡಬೇಕಾದ ಅಡುಗೆ ಏನು? ನಮ್ಮ ಮನೆಯ ಅಡುಗೆ ಅವರಿಗೆ ಒಗ್ಗಬಹುದೇ? ಮನೆಯ ವಾತಾವರಣಕ್ಕೆ ಹೊಂದಿಕೊಳ್ಳ ಬಹುದೇ? ಎಂದೆಲ್ಲ ಚಿಂತಿಸಬೇಕಾಗುತ್ತದೆ. ಅದರಲ್ಲೂ ಮನೆಯಲ್ಲಿ ಚಿಕ್ಕ ಮಕ್ಕಳಿದ್ದರಂತೂ ಆವಸ್ಥೆ ಸಾಕಪ್ಪಾ ಸಾಕು. ಇಡಿ ಮನೆಯನ್ನೇ ಚೆಲ್ಲಾಪಿಲ್ಲಿಯಾಗಿಸಿ ಹೆಜ್ಜೆ ಇಟ್ಟಲ್ಲೆಲ್ಲ ಆಟದ ಸಾಮಾನುಗಳನ್ನು ಹರಡಿ, ಪುಸ್ತಕಗಳೆಲ್ಲ ಅಂಗಿ ಕಳಚಿ ಬಿದ್ದು ಒದ್ದಾಡುತ್ತಿರುವ ಸಂದರ್ಭದಲ್ಲಿ ಮನೆಗೆ ಅತಿಥಿಗಳು ಬಂದರೆ ಮುಖ ಮುಚ್ಚಿಕೊಳ್ಳಬೇಕೆನ್ನಿಸುವುದು ಹೆಂಗಸರಿಗೆ ಮಾತ್ರ.

ಹೀಗಾಗಿಯೇ ಶಂಕರನ ಹೆಂಡತಿ ಗಂಡ ಹೇಳದೇ ಕೇಳದೇ ಅಚಾನಕ್ ಆಗಿ ಅಪರಿಚಿತನೊಬ್ಬನನ್ನು ಕರೆದುಕೊಂಡು ಬಂದಾಗ ಕಂಗಾಲಾಗುತ್ತಾಳೆ. ಇಷ್ಟಾದರೂ ವಾರದ ಮಟ್ಟಿಗೆ ಎಂದು ಮಕ್ಕಳ ಕೋಣೆಯನ್ನು ಇದ್ದುದರಲ್ಲೇ ಒಪ್ಪವಾಗಿಸುತ್ತಾಳೆ. ಆದರೆ ಕಥೆಯ ಕ್ಲೈಮಾಕ್ಸ್ ಇಲ್ಲಿಯೇ ಪ್ರಾರಂಭವಾಗುತ್ತದೆ. ಪ್ರತಿ ರಾತ್ರಿ ಇಂಜೆಕ್ಷನ್ ತೆಗೆದುಕೊಂಡು ಮಲಗುವುದನ್ನು ಮಕ್ಕಳಿಂದ ಕೇಳಿ ಶಂಕರ ಮತ್ತವನ ಹೆಂಡತಿ ಆಘಾತಕ್ಕೊಳಗಾಗುತ್ತಾರೆ. ಡ್ರಗ್ಸ್ ಇಂಜೆಕ್ಷನ್ ತೆಗೆದುಕೊಳ್ಳುವವನ ಬಳಿ ಮಕ್ಕಳನ್ನು ಬಿಡುವುದು ಹೇಗೆ ಎನ್ನುತ್ತಲೇ ಇನ್ನಾತ ಇರುವುದು ಒಂದೇ ದಿನ ಎಂದು ಆಕೆ ಸೈರಿಸಿಕೊಳ್ಳುತ್ತಾಳೆ. ಮಕ್ಕಳ ಮನಸ್ಸಿನಲ್ಲಿ ಕಹಿ ಭಾವನೆ ಉಳಿಯ ಕೂಡದು ಎಂದು ಆ ಅತಿಥಿಯೊಡನೆ ಹೊಟೆಲ್ ಗೂ ಹೊರಡಲು ಮಕ್ಕಳ ಜೊತೆ ಸಿದ್ಧವಾಗುತ್ತಾಳೆ. ಅಲ್ಲಿಯೂ ಆತ ನಿಗದಿತ ಸಮಯಕ್ಕೆ ಎದ್ದು ಹೊರಟಾಗ ಮಕ್ಕಳು ಇಂಜೆಕ್ಷನ್ ಗಾ? ಎಂದು ಪ್ರಶ್ನಿಸುತ್ತಾರೆ.

ಅಲ್ಲಿಯವರೆಗೂ ಸುಮ್ಮನಿದ್ದ ಆಕೆ ಹೀಗೆ ಡ್ರಗ್ಸ್ ಎಡಿಕ್ಟ್ ಆಗಿರುವುದನ್ನು ಆಕ್ರೋಶದಿಂದ ಪ್ರಶ್ನಿಸುತ್ತಾಳೆ.  ಆತ ಮಾತ್ರ ಮುಂಬೈನಲ್ಲಿ ಡಯಾಬಿಟಿಕ್ ರೋಗಿಗೆ ಪ್ರತಿದಿನ ಇಂಜೆಕ್ಷನ್ ಕೊಡುವುದಕ್ಕೆ ಯಾರೂ ಸಿಕ್ಕುವುದಿಲ್ಲ. ಹೀಗಾಗಿ ನಾನೇ ರೂಢಿ ಮಾಡಿಕೊಂಡೆ ಎನ್ನುತ್ತ ರೆಸ್ಟ್ ರೂಂ ಕಡೆ ಹೊರಡುತ್ತಾನೆ. ಇದೆಲ್ಲ ಕಥೆ ಅಗೋಚರ ತಿರುವುಗಳ ಮುಖಾಂತರ ಕೊನೆಗೆ ತಲುಪುವಾಗ್ ಓಹ್… ಎಂಬ ಉದ್ಘಾರವೊಂದು ಖಂಡಿತವಾಗಿಯೂ ಎಲ್ಲ ಸಹೃದಯರ ಬಾಯಿಂದಲೂ ಹೊರ ಬೀಳುವುದು ಖಂಡಿತ.

ಆದರೆ ನನ್ನನ್ನು ಸೆಳೆದದ್ದು ಮಾತ್ರ ಕಥೆಯ ಕಟ್ಟ ಕಡೆಯ ವಾಕ್ಯ. “ಎಡಗೈ ತೋರು ಬೆರಳ ನಟಿಕೆ ಮುರಿಯುತ್ತ ಅಪರ್ಣ ಗಂಡನ ಕಡೆ ನೋಡಿದಳು.” ತೋರು ಬೆರಳಿನ ನಟಿಕೆ ಮುರಿಯುವ ಆ ಚಿತ್ರ ನನ್ನ ಕಣ್ಣಿಗೆ ಹೇಗೆ ಕಟ್ಟಿತೆಂದರೆ ಅದನ್ನು ಅದನ್ನು ಕನ್ನಡಿಯ ಎದುರು ನಿಂತು ನಾನೇ ಮಾಡುತ್ತಿದ್ದೇನೆ ಎಂಬಂತೆ.

ನನ್ನದೇನಾದರೂ ತಪ್ಪಿದ್ದರೆ, ಮನದೊಳಗಿನ ಮಾತನ್ನು ಹೇಳಲಾಗದೇ ಒದ್ದಾಡುತ್ತಿದ್ದರೆ, ನನ್ನದೇನಾರೂ ಬೇಡಿಕೆಯಿದ್ದರೆ ಇದೆಲ್ಲಕ್ಕಿಂತ ಹೆಚ್ಚಾಗಿ ನನ್ನದೇನೂ ತಪ್ಪಿಲ್ಲದೇ ಇದ್ದರೂ ಬೈಯ್ಯಿಸಿಕೊಳ್ಳುತ್ತ ಸಮಜಾಯಿಶಿಯಾಗಲಿ, ಎದುರುತ್ತರವನ್ನಾಗಲಿ ಕೊಡುವ ಯಾವ ಅವಕಾಶವೂ ನನ್ನ ಪಾಲಿಗೆ ಇಲ್ಲ ಎಂದಾದಾಗ ನಾನು ನನ್ನ ಬಲಗೈ ತೋರು ಬೆರಳಿನ ಉಗುರನ್ನು ಕಚ್ಚುತ್ತಿದ್ದೇನೆ ಎಂಬಂತೆ ಹಲ್ಲಿನೆಡೆಯೆಲ್ಲಿ ಹಿಡಿದುಕೊಳ್ಳುತ್ತೇನಾದರೂ ಉಗುರನ್ನು ಕಚ್ಚುವುದಿಲ್ಲ.  ಹೀಗಾಗಿ ಆ ವಾಕ್ಯ ನನ್ನ ಪಾಲಿಗೆ ಜಗತ್ತಿನ ಎಲ್ಲಾ ಹೆಣ್ಣಿನ ಲೋಕವನ್ನು ಅನಾವರಣಗೊಳಿಸಿಬಿಟ್ಟಿತು.

ಇದರ ಜೊತೆ ಜೊತೆಯಲ್ಲಿಯೇ ‘ಮತ್ತೊಮ್ಮೆ ಕೇಳಲಾಗದ್ದು’ ಎಂಬ ಕಥೆಯೂ ಕೇವಲ ಶಬ್ಧಗಳಲ್ಲಿಯೇ ಹೆಣ್ಣಿನ ತುಮುಲವನ್ನು ಸಿನೇಮಾದಂತೆ ಕಣ್ಣೆದುರು ದೃಶ್ಯವನ್ನಾಗಿಸುವ ಸಾಮರ್ಥ್ಯ ಹೊಂದಿದ ಕಥೆ. ತಾವು ಅಮೇರಿಕಾಕ್ಕೆ ಹೋದಾಗ ಒಂದೇ ಒಂದು ಫೋನ್ ಕರೆಗೆ ಸಹಾಯ ಮಾಡಿದ ಗೆಳತಿಯ ಮಾವನ ಮಗ, ಒಂದು ಸಹಾಯ ಕೇಳಿದಾಗ  ಕವಿತಾ ತಡಬಡಾಯಿಸಿ ಹೋಗಿದ್ದಳು.

ಆತ ಕೇಳಿದ್ದೇನೂ ಹೆಚ್ಚಲ್ಲ. ಆತನಿಗೆ ಅನಿವಾರ್ಯವಾಗಿ ಎರಡು ತಿಂಗಳು ಬೇರೆ ದೇಶಕ್ಕೆ ಹೋಗಬೇಕಾಗಿರುವುದರಿಂದ  ವಾರಕ್ಕೆ ಎರಡು ಸಲ ಓಲ್ಡ್ ಏಜ್ ಹೋಂ ನಲ್ಲಿರುವ ಅಪ್ಪನ ಬಳಿ ಹೋಗಿ ಒಂದೆರಡು ತಾಸು ಮಾತನಾಡಿ ಬರುವುದು ಅಷ್ಟೆ. ಅದಕ್ಕೆ ಬೇಕಾದ ವಾಹನದ ವ್ಯವಸ್ಥೆಯನ್ನೂ ಆತನೇ ಮಾಡುತ್ತೇನೆಂದರೂ ಕವಿತಾಳಿಗೆ ಇದೊಂದು ದೊಡ್ಡ  ಜವಾಬ್ಧಾರಿ ಎಂಬುದೇ ಮನಸ್ಸಿನಲ್ಲಿ.

ಗಂಡನಾದರೂ ಬೇಡ ಎನ್ನಲಿ ಎಂದರೆ ಗಂಡನೂ ಕೂಡ ಆತ ಮಾಡಿದ ಸಹಾಯಕ್ಕೆ ಇದೊಂದು ಋಣ ತೀರಿಸುವ ಅವಕಾಶ ಎಂದಾಗ ಅನಿವಾರ್ಯವಾಗಿ ಒಪ್ಪಿಕೊಂಡವಳಾದರೂ ಆ ವಯಸ್ಸಾದ ತಂದೆಯನ್ನು ತೀರಾ ಆತ್ಮೀಯವಾಗಿ ಕಾಣಲು, ತನ್ನೆಲ್ಲ ಒಳಕುದಿಯನ್ನು ಹಂಚಿಕೊಳ್ಳಲು ಕವಿತಾಳಿಗೆ ಸಾಧ್ಯವಾಗಿತ್ತು.

ಆದರೆ ಮುಂದಿನ ಸಲ ಒಂದು ದುಬಾರಿ ಹೊಟೆಲ್ ನಲ್ಲಿ ಊಟ ಮಾಡೋಣ ಎಂದ ಮಾತು ಮಾತ್ರ ಕವಿತಾಳಿಗೆ ಸದಾ ಕೊರೆಯುತ್ತಲೇ ಉಳಿದು ಹೋಗುವುದು, ಮತ್ತು ಹಾಗೆ ದುಬಾರಿ ಹೊಟೇಲ್ ನಲ್ಲಿ ಊಟ ಮಾಡಲಾಗದ ತಮ್ಮ ಆರ್ಥಿಕ ಮುಗ್ಗಟ್ಟು, ಮತ್ತು ತಾನು ಆ ಹಿರಿಯರಿಗೆ ಊಟ ಕೊಡಿಸಲಾಗಲಿಲ್ಲ ಎಂಬ ಕೀಳರಿಮೆ ಕವಿತಾ ಅವರಿಗೆ ಫೋನ್ ಮಾಡುವುದನ್ನೂ ಪ್ರತಿಬಂಧಿಸಿದಂತೆ ಆಗಿಬಿಟ್ಟಿತ್ತು.

ನಂತರದ ವರ್ಷಗಳಲ್ಲಿ ಜೀವನದಲ್ಲಿ ಎಲ್ಲವೂ ಒಂದು ಹಂತಕ್ಕೆ ಬಂತು ಎಂದುಕೊಳ್ಳುವ ಸಮಯದಲ್ಲೂ ಆ ಹಿರಿಯರಿಗೆ ಕೊಟ್ಟ ಮಾತನ್ನು  ಉಳಿಸಿಕೊಳ್ಳಲಾಗದ ಹಿಂಜರಿಕೆಯಲ್ಲಿ ಆ ಹಿರಿಯರ ಮಗನಿಗೆ ಫೋನಾಯಿಸಿ ಅಪ್ಪನ ಬಗ್ಗೆ ತಿಳಿಯೋಣ ಎಂದರೂ ಮತ್ತೆ ಸಹಾಯ ಕೇಳಲೆಂದೇ ಫೋನ್ ಮಾಡಿದ್ದು ಎಂದು ತಿಳಿದು ಕೊಂಡರೆ ಎಂಬ ಅಳುಕು. ಅಷ್ಟಾಗಿಯೂ ಓಲ್ಡ್ ಏಜ್ ಹೋಂ ಗೆ ಫೋನ್ ಮಾಡುತ್ತಾಳಾದರೂ ಎಲ್ಲಾದರೂ ಆ ಹೆಸರಿನ ವ್ಯಕ್ತಿ ಇಲ್ಲಿ ಇಲ್ಲ ಎಂದು ಬಿಟ್ಟರೆ ಎಂಬ ಭಯಕ್ಕೆ ಮಾತೇ ಹೊರಡದೇ ಕರೆ ಕಟ್ ಮಾಡುತ್ತಾಳೆ.

ನೆನಪುಗಳಲ್ಲಷ್ಟೇ ಬದುಕಲು ತೀರ್ಮಾನಿಸುವ ಕವಿತಾಳ ಮನಸ್ಸು ನಿಮ್ಮ ಜೊತೆ ತುಂಬಾ ಮಾತಾಡ್ತಾನೆ ಇರಬೇಕು ಅನ್ನಿಸುತ್ತದೆ. ಎಂದು ಗೋಗರೆದಂತೆ ಹೇಳುವ ಸ್ನೇಹಿತೆ ಸುಜಾತಾಳ ಮಾತಿಗೆ ಮತ್ತೆ ಮತ್ತೆ ಸ್ಪಂದಿಸಲಾಗದ ನನ್ನಂತಹ ಹತ್ತಾರು ಸ್ತ್ರೀಯರ ಮನಸ್ಸೂ ಆಗಿದೆ.

‘ನಿಷಿದ್ಧ ನಿವಾಸ’ ಎಂಬ ಕಥೆ  ನಮಗೆ ಏನೆಲ್ಲವನ್ನು ಹೇಳಲು ಸಾಧ್ಯವೋ ಅದನ್ನೆಲ್ಲ ಹೇಳುತ್ತದೆ. ಅನಾಥ ಮಗುವಿನ ಭಾವನೆಯ ಬಗ್ಗೆ ಹೇಳುತ್ತಲೇ, ಆಕೆಯನ್ನು ದೂರೀಕರಿಸುವ ಸಂಬಂಧಿಕರ ಒರಟು ವರ್ತನೆಯನ್ನೂ ಬಿಂಬಿಸುತ್ತದೆ. ಅಲ್ಲಿ ಇಲ್ಲಿ ಕಾಲ್ಚೆಂಡಿನಂತೆ ತಳ್ಳಲ್ಪಡುವ ಮಗು ಬದುಕಿನಲ್ಲಿ ಭರವಸೆಯನ್ನೇ ಕಳೆದುಕೊಂಡಿರುವ ಸಂದರ್ಭದಲ್ಲಿ ತಾಯಿಯ ಗೆಳತಿಯೊಬ್ಬಳು ತನ್ನ ಐದು ಮಕ್ಕಳೊಡನೆ ಪ್ರೀತಿಯಿಂದ ಸಾಕುವುದನ್ನೂ ಕಾಣುತ್ತೇವೆ.

ಅದೇ ತಾಯಿ ಇವಳು ಗಂಡನನ್ನು ಕಳೆದುಕೊಂಡು ಪ್ರೀತಿಯ ಅಪ್ಪುಗೆ ಬಯಸಿ ಬಂದಾಗ ಮಗಳ ಮದುವೆ  ಶಾಸ್ತ್ರದ ಹೆಸರಿನಲ್ಲಿ ಮಾನವೀಯತೆಯೇ ಮರೆತಂತೆ ಮಾತನಾಡುವುದನ್ನೂ ಓದುತ್ತೇವೆ. ಆದರೆ ಮದುಮಗಳಾಗ ಬೇಕಿದ್ದವಳೇ ಕುಸಿದು ಬಿದ್ದವಳನ್ನು ಎತ್ತಿ ಸಂತೈಸಿ ತನ್ನ ತೋಳತೆಕ್ಕೆಯಲ್ಲಿ ಆಸರೆ ನೀಡಿ ಮಾನವೀಯತೆ ಮೆರೆಯುವುದನ್ನು ಓದಿ ಕಣ್ಣು ಮನಸ್ಸನ್ನು ಒದ್ದೆಯಾಗಿಸಿಕೊಳ್ಳಬಹುದು.

‘ಒಳದನಿ’ ಎಂಬ ಕಥೆಯಲ್ಲಂತೂ ವಯಸ್ಸಾದ ತಾಯಿಯೊಬ್ಬಳು ಮನೆಯ ಪಕ್ಕದಲ್ಲಿ ಕೇಳುವ ಬಾಂಗ್ ನ್ನು ಗೀತಾಪಠಣ ಎಂದು ಹೇಳಿ  ಪರವಶತೆಯನ್ನುಂಟುಮಾಡುತ್ತಾಳೆ. ನಂತರ  ಅದು ಮಸೀದಿಯಿಂದ ಬರುತ್ತಿರುವ ಬಾಂಗ್ ಎಂಬ ವಿಷಯ ಗೊತ್ತಾದರೂ ಆ ಮುಲ್ಲಾನಿಗೆ ದೇವರ ದರ್ಶನ ಆಗ್ತಿರಬಹುದು. ಆದಷ್ಟು ಭಕ್ತಿಯಿಂದ ಪೂಜಿಸ್ತಾರೆ ಎಂದು ಹೇಳಿ ಮಸೀದಿ ಪಕ್ಕದಲ್ಲಿ ಮನೆ ಮಾಡಿದ್ದಕ್ಕೆ ಅಮ್ಮ ಎಲ್ಲಿ ಮನೆ ಬಿಟ್ಟು ಹೋಗಿ ಬಿಡ್ತಾಳೋ ಎಂದು ಆತಂಕದಲ್ಲಿದ್ದ ಮಗನಿಗೆ ಅಚ್ಚರಿ ನೀಡುತ್ತಾಳೆ. ಮಾನವೀಯತೆ ಎಂದರೆ ಇದೇ. ನಿಜವಾದ ಧರ್ಮ ಇರುವುದು ಇಲ್ಲಿಯೇ ಎಂಬಂತೆ ಭಾಸವಾಗುತ್ತದೆ. ಎಲ್ಲರೂ ಇದೇ ಮನೋಭಾವನೆ ಹೊಂದಿದರೆ ಎಷ್ಟೊಂದು ಚಂದ ಎಂದು ಖುಷಿ ಪಡುವಂತೆ ಆಗುತ್ತದೆ.

ಸನಾತನ್ ಎಂಬ ಕಾವಲುಗಾರ  ಎಲ್ಲವನ್ನೂ ಕಳೆದುಕೊಂಡು ಮುಪ್ಪಾನು ಮುದುಕನಾದ ಮೇಲೆಯೂ  ದುಬೈಗೆ ಹೋಗುವ  ಆಸೆಯನ್ನು  ಜೀವಂತವಾಗಿರಿಸಿಕೊಂಡ ಜೀವನ್ಮುಖಿ ಕಥೆಯನ್ನು ಹೇಳುವ ಸೋಲಿಲ್ಲದ ಸರದಾರ, ಜೀವನ ಪ್ರೀತಿಯನ್ನು ಹೇಳಿದರೆ ಭಾರತೀಯ ಸಮಸ್ಕೃತಿಗೆ ತೀರಾ ವಿರುದ್ಧವಾಗಿ ತನ್ನಿಂದ ದೂರವಾಗಿ ಬಾಯ್ ಪ್ರೆಂಡ್ ನೊಂದಿಗೆ ಇರುವ ಮಗಳು  ಬಸಿರಾಗಿ ಡೆಲಿವರಿಗೆ ಬರುತ್ತೇನೆಂದರೆ ಮಗಳ ಜೀವನದ ಬಗ್ಗೆಯಾಗಲಿ, ಅವಳ ಭವಿಷ್ಯದ ಬಗ್ಗೆಯಾಗಲಿ, ಮದುವೆಯಾಗದೇ ತಾಯಿ ಆಗುತ್ತಿರುವ ಮಗಳ ಸ್ಥಿತಿಯ ಬಗ್ಗೆಯಾಗಲಿ ಯೋಚಿಸದೇ ಕೇವಲ ತನ್ನ ವೈಯಕ್ತಿಕ ಸ್ವಾತಂತ್ರ್ಯ ಹಾಳಾಗುತ್ತದೆ ಎಂದು ಚಿಂತಿಸುವ ತಾಯಿಯ ಕಥೆ ಇರುವ “ಅಲ್ಲೊಂದು ತೀರ ಇಲ್ಲೊಂದು ತೆರೆ ಎಂಬ ಕತೆ ನಮ್ಮನ್ನು ಸೆಳೆಯದೇ ಬಿಡುವುದಿಲ್ಲ.

ನವಿರಾದ ಭಾಷೆ, ಚಂದದ ನಿರೂಪಣೆಯೊಂದಿಗೆ ಇಡೀ ಪುಸ್ತಕ ಎಲ್ಲಿಯೂ ಬೋರ್ ಹೊಡೆಸದೇ ಓದಿಸಿಕೊಳ್ಳುತ್ತದೆ. ಅದಕ್ಕೆ ಸಮನಾಗಿ ಕಥೆಯೊಳಗಿನ ಸಂವೇದನೆಗಳು, ಹಠಾತ್ ತಿರುವುಗಳು, ಅರಿವೇ ಆಗದೇ ಕ್ಲೈಮಾಕ್ಸ್ ನತ್ತ ಕೊಂಡೊಯ್ಯುವ ಕತೆಗಳು ಈ ಪುಸ್ತಕವನ್ನು ಮತ್ತೆ ಮತ್ತೆ ಓದುವಂತೆ ಮಾಡುತ್ತದೆ.

ತನಗೆ ಓಡಿಶಾ ಭಾಷೆ ಬರುವುದಿಲ್ಲ ಎನ್ನುತ್ತಲೇ ಇಷ್ಟು ಚಂದದ ಅನುವಾದ ಮಾಡಿರುವ  ಮಾಧವಿ ಭಂಡಾರಿಯವರಿಗೆ ಅಭಿನಂದನೆ ಸಲ್ಲಿಸಲೇ ಬೇಕು.

‍ಲೇಖಕರು avadhi

June 17, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

11 ಪ್ರತಿಕ್ರಿಯೆಗಳು

  1. K. Nallathambi

    ಬಹಳ ಸೂಕ್ಷ್ಮವಾದ ವಿಮರ್ಶೆ……. ಅವರ ಪುಸ್ತಕ ಎಲ್ಲಿ ಸಿಗುತ್ತೆ. ತಿಳಿಸಿ.

    ಪ್ರತಿಕ್ರಿಯೆ
  2. ಪುಷ್ಪಾ ನಾಯ್ಕ ಅಂಕೋಲ

    ಅಂತ:ಸತ್ವದ ಆಂತರಿಕ ನೋಟದ ತಿರುಳನ್ನು ಉಣಬಡಿಸಿದ್ದೀರಿ ಮನೆ ಹುಡುಕಾಟದ ಪೇಚಾಟದ ಸತ್ಯ ಅನುಭವಗಳು ಜನಸಾಮಾನ್ಯರ ವಾಸ್ತವ ಕೂಡ ಆಗಿದೆ ವಾಸ್ತವ ನೆಲೆಗಟ್ಟಿನ ಆಧಾರದ ನಿಮ್ಮ ಅಂಕಣ ನನ್ನು ತುಂಬಾ ಇಷ್ಟ ಪಡುತ್ತೇನೆ ಧನ್ಯವಾದಗಳು ನಿಮಗೆ

    ಪ್ರತಿಕ್ರಿಯೆ
  3. ರಾಜು ಪಾಲನಕರ ಕಾರವಾರ

    ಶ್ರೀದೇವಿ ಮೇಡಂ…. ಹೇ ವಾರಚೇ ಅವಧಿ ಭೀತ್ತರಿ ತುಮ್ಗೆಲೇ ಶ್ರೀದೇವಿ ರೆಕಮಂಡ್ಸ್ ಲೇಖನ‌ ಖೂಬ್ ಬರೆ ಆಸ್ಸಾ.. ಆನ್ನಿ ತುಮ್ಮಿ ಬರಿಲಲೇ ಖರೇ ಆಸ್ಸಾ….ತುಮ್ಕಾ ಅಭಿನಂದನ್

    ಪ್ರತಿಕ್ರಿಯೆ
  4. ಸುಜಾತ ಲಕ್ಷೀಪುರ

    ಅಂತಃಸತ್ವ ಎಂಬ ಮಾಧವಿ ಭಂಡಾರಿ ಅವರ ಅನುವಾದಿತ ಕಥಾಸಂಕಲನ ಕುರಿತ ಈ ಲೇಖನ ವಿಶೇಷ ಅನುಭವ ನೀಡಿದೆ.ಶ್ರೀ ಅವರು ಆ ಕಥೆಗಳ ಅಂತಃಸತ್ವವನ್ನು ತಮ್ಮ ವಿಶಿಷ್ಟ ಬಗೆಯ ಶೈಲಿಯಲ್ಲಿ ತಮ್ಮ ಜೀವನ ಅನುಭವದ ಹಿನ್ನೆಲೆಯಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ. ಕಥೆಗಳಲ್ಲಿ ಇರುವ ವಿಶೇಷತೆಯನ್ನು ಗ್ರಹಿಸುವ, ಮಾನವೀಯ ಮೌಲ್ಯಗಳ ಜತೆಗೆ ಕಾಣುವ ಮತ್ತು ಕಟ್ಟುವ ಅವರ ಅವರದೇ ಆದ ಶೈಲಿಗೆ ಸಲಾಮ್ ಮಾಡುತ್ತೇನೆ.. ಲೇಖನ ಓದಿದ ಖುಷಿ ಮನ ತುಂಬಿದೆ. ಬರವಣಿಗೆ ಬೆರಗು ಮೂಡಿಸಿದೆ. ಥ್ಯಾಂಕ್ಸ್ ಶ್ರೀ ದೇವಿ.

    ಪ್ರತಿಕ್ರಿಯೆ
  5. ಮಂಜುಳಾ ಹುಲ್ಲಹಳ್ಳಿ

    ನಿಮ್ಮ ಅಗಾಧ ಓದುವಿಕೆಯ ಶಕ್ತಿ ಮತ್ತು ಓದಿನ ಸಾರವನ್ನು ಪರಿಪಕ್ವವಾಗಿ ಬರೆಹರೂಪಕ್ಕಿಳಿಸುವ ಅಪೂರ್ವ ಪ್ರತಿಭೆ ಎರಡಕ್ಕೂ ಹೃದಯಪೂರ್ವಕ ಅಭಿನಂದನೆಗಳು ಶ್ರೀದೇವಿ. ಕನ್ನಡ ವಿಮರ್ಶಾಲೋಕಕ್ಕೆ ಹೊಸ ಆಯಾಮ ಕಟ್ಟಿಕೊಡುತ್ತಿರುವಿರಿ!

    ಪ್ರತಿಕ್ರಿಯೆ
  6. JAGADEESH

    ಬಾಡಿಗೆ ಮನೆಗಾಗಿ ಸುತ್ತಾಡುವಾಗ ಆಗುವ ಅನುಭವಗಳು ವಿಶಿಷ್ಟವಾದವು‌. ಸಮಾನತೆ ಎಂದು ಬೊಬ್ಬೆ ಇಡುವವ ನಿಜ ಬಣ್ಣ ಬಯಲಾಗುತ್ತದೆ.. ಶ್ರೀ ದೇವಿ ಮೆಡಮ್ ಅಂಕಣ ಸುಪರ್ಬ

    ಪ್ರತಿಕ್ರಿಯೆ
  7. ಮಂಜುಳಾ ಹುಲ್ಲಹಳ್ಳಿ

    ನಿಮ್ಮ ಅಗಾಧ ಓದುವಿಕೆಯ ಶಕ್ತಿ ಮತ್ತು ಓದಿನ ಸಾರವನ್ನು ಪರಿಪಕ್ವವಾಗಿ ಬರೆಹರೂಪಕ್ಕಿಳಿಸುವ ಅಪೂರ್ವ ಪ್ರತಿಭೆ ಎರಡಕ್ಕೂ ಹೃದಯಪೂರ್ವಕ ಅಭಿನಂದನೆಗಳು. ಕನ್ನಡ ವಿಮರ್ಶಾಲೋಕಕ್ಕೆ ಹೊಸ ಆಯಾಮ ಕಟ್ಟಿಕೊಡುತ್ತಿರುವಿರಿ!

    ಪ್ರತಿಕ್ರಿಯೆ
  8. Deepthi bhadravathi

    ತುಂಬಾ ಚಂದ ಗ್ರಹಿಸಿದ್ದೀರಿ ಶ್ರೀ… ಪುಸ್ತಕ ಓದಲೇಬೇಕೆನ್ನುವ ಹೂಕಿ ಎದ್ದಿದೆ….

    ಪ್ರತಿಕ್ರಿಯೆ
  9. JAYASHRI ABBIGERI

    ತಮ್ಮ ಬರವಣಿಗೆಯ ಶೈಲಿ ಮನಸೂರೆಗೊಂಡಿದೆ
    ಓದುವ ಹಸಿವು ಹೆಚ್ಚಿಸುತ್ತಿದೆ
    ಪೃಇಚಯಿಸಿದ
    ಪುಸ್ತಕ ಓದಲೇಬೇಕೆನ್ನುವ ಕುತೂಹಲ
    ಮೂಡಿಸುತ್ತದೆ
    ಅಭಿನಂದನೆಗಳು ಶ್ರೀ ಅವರೆ

    ಅವಧಿ ಪತ್ರಿಕೆ ಬಳಗಕ್ಕೆ ವಿಶೇಷ ಧನ್ಯವಾದಗಳು
    ಇಂಥ ಉತ್ತಮ ಅಂಕಣ ಬರಹ
    ಓದುಗರಿಗೆ ಉಣ ಬಡಿಸುತ್ತಿರುವುದಕ್ಕೆ

    ಪ್ರತಿಕ್ರಿಯೆ
  10. ತಮ್ಮಣ್ಣ ಬೀಗಾರ

    ಸೂಕ್ಷ್ಮ ಅವಲೋಕನದೊಂದಿಗೆ ಪರಿಚಯಿಸಿದ್ದೀರಿ.ಪುಸ್ತಕ ಓದಬೇಕೆನಿಸುತ್ತದೆ.ಇಬ್ಬರಿಗೂ ಅಭಿನಂದನೆಗಳು.

    ಪ್ರತಿಕ್ರಿಯೆ
  11. ಡಿ ಎಮ್.ನದಾಫ್ .ಅಫಜಲಪುರ.

    ಪುಸ್ತಕ ಪರಿಚಯವನ್ನು ಹೀಗೂ ಬರೆಯಬಹುದು ಎಂದು ಅಚ್ಚರಿಯಾಯಿತು.ಸ್ವಾನುಭವದ ನಿರೂಪಣೆ ಮೂಲಕ ಸಾಹಿತ್ಯವಿಮರ್ಶೆ……….ಅದ್ಭುತ!!!!!!!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: